ಕರ್ನಾಟಕದಲ್ಲಿ ಚುನಾವಣೆಯ ಜ್ವರ ಇಳಿದು, ಮತಗಣನೆಯ ಚಳಿ ಶುರುವಾಗಲಿದೆ. ಆಪ್ತ ಮಿತ್ರನೊಬ್ಬನಿಗೆ ಕುಶಲ ವಿಚಾರಿಸಲು ಫೋನಾಯಿಸಿದಾಗ ಊಟ ಈಗತಾನೆ ಆಯ್ತಪಾ, ವೋಟ್ ಹಾಕೋಕೆ ಹೋಗ್ಬೇಕು ಎಂದು ಚುನಾವಣೆಯ ಮೂಡ್ ಗೆ ತಂದ ಸಂಭಾಷಣೆಯನ್ನು. ಚಿಕ್ಕಂದಿನಿಂದಲೂ ನನಗೆ ರಾಜಕೀಯದ ಹುಚ್ಚು. ಅಪ್ಪ ಪಕ್ಕಾ ಕಾಂಗ್ರೆಸ್ಸಿಗರಾದರೆ ನಾನು ಜನತಾ ಪಕ್ಷ. ಆಗ ಇದ್ದಿದ್ದು ಒಂದೇ ಜನತಾ ಪಕ್ಷ. ಈಗ ಭಾರತೀಯ ಜನತಾ ಪಕ್ಷ, ಕರ್ನಾಟಕ ಜನತಾ ಪಕ್ಷ, ‘ಸೆಕ್ಯೂಲರ್’ ಜನತಾ ಪಕ್ಷ, ಬೈನಾಕ್ಯುಲರ್ ಜನತಾ ಪಕ್ಷ…ಹೀಗೆ ತರಾವರಿ ಪಕ್ಷಗಳು. ಜನರ ಸೇವೆ ಗಾಗಿಯೇ ತಮ್ಮ ಬಾಳನ್ನು ಮುಡಿಪಾಗಿಸಿಕೊಂಡ ಪಕ್ಷಗಳು.
ಚುನಾವಣೆಯ ಬಗ್ಗೆ ಮಾತನ್ನು ಮುಂದುವರೆಸಿದಾಗ ತಿಳಿಯಿತು ಇದು ನನ್ನ ಕಾಲದ ಚುನಾವಣೆಯಲ್ಲ, ಈಗಿನ ಚುನಾವಣೆ ಹೈ ಟೆಕ್ ಚುನಾವಣೆ, ಧ್ವನಿ ವರ್ಧಕ ಉಪಯೋಗಿಸುವಂತಿಲ್ಲವಂತೆ, ಭಿತ್ತಿ ಪತ್ರ ಅಂಟಿಸ ಬಾರದಂತೆ, ಮನಸ್ಸಿಗೆ ತೋಚಿದಂತೆ ಪಾಂಪ್ಲೆಟ್ ಮುದ್ರಿಸಬಾರದಂತೆ, ಮೆರವಣಿಗೆ ಕೂಡದಂತೆ, ಘೋಷಣೆ ಬೇಡವಂತೆ……ಥತ್ತೇರಿ, ಇದೆಂಥಾ ಚುನಾವಣೆ ಎಂದು ಅನ್ನಿಸಿತು. ನನ್ನ ಜಮಾನದ ಚುನಾವಣೆಯೇ ಚೆಂದ. ರಂಗು ರಂಗಿನ ಬ್ಯಾಡ್ಜು, ಅಭ್ಯರ್ಥಿಗಳಿಂದ ಊಟ, ತಿಂಡಿ ವ್ಯವಸ್ಥೆ, ಬೀರು ಬ್ರಾಂದಿ, ಪ್ರಾಸಬದ್ದ ಘೋಷಣೆಗಳು, ಜನತಾ ಪಕ್ಷ ಎತ್ತು ಭಿಕ್ಷ, ಕಾಂಗ್ರೆಸ್ ಪಕ್ಷ ಎತ್ತು ಭಿಕ್ಷ, ಭಾರತ್ ಮಾತಾ ಕೀ ಜೈ, ಎಂದು ಗಂಟಲು ಹರಿದು ಕೊಳ್ಳುವಂತೆ ಕೂಗುತ್ತಿದ್ದದ್ದು, ಅಯ್ಯೋ ಇದೆಲ್ಲಾ ಇಲ್ವೆ ಇಲ್ವಲ್ಲೋ ಎಂದಾಗ ಅವನು, ಅದೇನೂ ಇಲ್ಲ ಕಣೋ ಈಗ, ಹೆಣ ನೋಡಲು ಹೋಗೋ ಥರಾ ಮೌನವಾಗಿ ವೋಟಿಂಗ್ ಮೆಶೀನ್ ಹತ್ರ ನಿಂತು, ಯಾವುದಾದರೂ ಒಂದು ಬಟನ್ ಚುಚ್ಚಿ ಹೊರಬರೋದು ಅಷ್ಟೇ ಎಂದ. ಮೊದಲು ಮತಗಟ್ಟೆ ಬಳಿಯೂ ಕಾರ್ಯಕರ್ತರು. ದೂರದಿಂದ ಹಲ್ಲು ಗಿಂಜುತ್ತಾ, ಕೈಸನ್ನೆಯಿಂದ ತಮ್ಮ ಪಕ್ಷದ ಗುರುತನ್ನು ಜನರಿಗೆ ತೋರಿಸಿ ಎದುರು ಪಕ್ಷದವರ ಕೈಯಲ್ಲಿ ಉಗಿಸಿ ಕೊಂಡು ಹೆ ಹೇ ಎಂದು ಪೆಚ್ಚು ನಗು ನಗೋದು…
ಹೋಯ್ತಾ ಆ ಕಾಲ? ಮಾತಿನ ಮಧ್ಯೆ, ರಾಮನಗರದ ಹತ್ತಿರ ಮಚ್ಚು ತೋರಿಸಿ ವೋಟ್ ಮಾಡಲು ಒಂದು ಪಕ್ಷದವರು ಬೆದರಿಕೆ ಹಾಕುತ್ತಿರುವುದನ್ನು ಟೀವೀ ಲಿ ತೋರಿಸ್ತಾ ಇದ್ದಾರೆ ನೋಡು ಎಂದಾಗ, ಒಹ್, ಸಧ್ಯ ಈ ಸಂಸ್ಕಾರವನ್ನು ನಮ್ಮ ಜನ ಇನ್ನೂ ಜೋಪಾನವಾಗಿ ಇಟ್ಟುಕೊಂಡಿದ್ದಾರೆ ಎಂದು ಸಮಾಧಾನ ಪಡುತ್ತಾ ಮಿತ್ರನಿಗೆ ವಿದಾಯ ಹೇಳಿದೆ.