ಇಂಡಿಯನ್ ಎಕ್ಸ್ಪ್ರೆಸ್ಸ್ ಪತ್ರಿಕೆ ಸೈನ್ಯದ ಬಗ್ಗೆ ವರದಿಯೊಂದನ್ನು ಪ್ರಕಟಿಸಿ ಕೋಲಾಹಲವನ್ನು ಸೃಷ್ಟಿಸಿದೆ. ಈ ವರ್ಷದ ಜನವರಿ ೧೬-೧೭ ರ ರಾತ್ರಿ ಭೂಸೇನೆಯ ಎರಡು ಪ್ರಮುಖ ತುಕಡಿಗಳು ದೇಶದ ರಾಜಧಾನಿಯ ಪರಿಸರಕ್ಕೆ ರಕ್ಷಣಾ ಇಲಾಖೆಯ ಅನುಮತಿಯಿಲ್ಲದೆ ಬಂದಿದ್ದು ಏಕೆ? ಸೈನ್ಯದ ಈ ಕ್ರಮ ಸರಕಾರದ ಉನ್ನತ ಸ್ತರದಲ್ಲಿ ಕಂಪನವನ್ನೇಕೆ ತಂದಿತು, ಪ್ರವಾಸದಲ್ಲಿದ್ದ ರಕ್ಷಣಾ ಕಾರ್ಯದರ್ಶಿಯನ್ನು ಮಲೇಷ್ಯಾದಿಂದ ಏಕಾಯೇಕಿ ಹಿಂದಕ್ಕೆ ಕರೆಸಿ ಕೊಂಡಿದ್ದು ಏಕೆ, ಎನ್ನುವ ಹಲವು ಪ್ರಶ್ನೆ ಸಂಶಯಗಳಿಗೆ ಅನುವು ಮಾಡಿ ಕೊಟ್ಟಿದೆ. ಪತ್ರಿಕೆಯ ಈ ವರದಿ ನೋಡಿ ಪ್ರಧಾನಿ, ರಕ್ಷಣಾ ಸಚಿವರು ಸೈನ್ಯದ ಬಗ್ಗೆ ಭರವಸೆಯ ಮಾತುಗಳನ್ನು ಹೇಳಿದ್ದಾರೆಯೇ ಹೊರತು ಪತ್ರಿಕೆ ಎತ್ತಿದ ಪ್ರಶ್ನೆಗಳಿಗೆ ಉತ್ತರ ಕೊಟ್ಟಿಲ್ಲ. ಭಾರತ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಅಚಲ ವಿಶ್ವಾಸ ಇರಿಸಿ ಕೊಂಡಿರುವ ದೇಶ. ನಮ್ಮ ವ್ಯವಸ್ಥೆಯಲ್ಲಿ ಅದ್ಯಾವ ಕುಂದು ಕೊರತೆಗಳೇ ಇರಲಿ ಇಲ್ಲಿ ಪ್ರಜೆಯೇ ಪ್ರಭು. ಜನರಿಂದ ಚುನಾಯಿತನಾದ ಮಂತ್ರಿ ಎಂಥ ಹುಂಬನೇ ಆದರೂ ಅವನ ಆದೇಶದ ಅಡಿ ಅಧಿಕಾರಿಶಾಹಿ ಕೆಲಸ ಮಾಡಬೇಕು. ನಮ್ಮ ಸೈನ್ಯದ ಮಹಾ ದಂಡನಾಯಕ ಜನರಲ್ V.K.Singh ರಿಗೂ ಸರಕಾರಕ್ಕೂ ವೈಮನಸ್ಸಿರುವುದು ಎಲ್ಲರಿಗೂ ತಿಳಿದದ್ದೇ. ನಿವೃತ್ತಿಯಾಗುವ ವಯಸ್ಸಿನ ಕುರಿತು ಶುರುವಾದ ತಗಾದೆ ಸೈನ್ಯದಲ್ಲಿ ಭ್ರಷ್ಟಾಚಾರ ಇರುವ ವಿಷಯದವರೆಗೆ ಮುಂದುವರೆಯಿತು. ಸೈನ್ಯಾಧಿಕಾರಿ ರಿಪೋರ್ಟ್ ಕೊಡಬೇಕಿರುವುದು ರಕ್ಷಣಾ ಸಚಿವರಿಗೆ. ಸಿಂಗ್ ಈ ಕೆಲಸ ಮಾಡದೇ ನೇರವಾಗಿ ಪ್ರಧಾನಿಗೆ ಪತ್ರ ಬರೆದು protocol ಉಲ್ಲಂಘಿಸಿದರು. ಅವರು ಬರೆದ ಪತ್ರ ಸೋರಿಕೆ ಆಗಿ ಮತ್ತೊಂದು ಅನಾಹುತ ಕ್ಕೆ ಎಡೆಯಾಯಿಯಿತು. ಪತ್ರವನ್ನ ಯಾರು ಸೋರಿಸಿದರು ಎನ್ನುವ ಬಗ್ಗೆ ಯಾರಿಗೂ ಗೊತ್ತಿಲ್ಲ. ಈ ಘಟನೆಗಳ ಬೆನ್ನಲ್ಲೇ ಸೈನ್ಯದ ತುಕಡಿಯ ರಾಜಧಾನಿ ಭೇಟಿ. ಸೈನ್ಯ ಸರಕಾರದ ಮಧ್ಯೆಯ ಜಟಾಪಟಿ ದೇಶಕ್ಕೆ ಒಳ್ಳೆಯದಲ್ಲ. ಕೋಲಾ ಹಲಕ್ಕೆ ಕಾರಣವಾದ ಹಲವು ಜಟಾಪಟಿಗಳನ್ನು ದೇಶ ಕಂಡಾಗಿದೆ. ಇಂದಿರಾ ಗಾಂಧೀ – ಅಲಹಾ ಬಾದ್ ನ್ಯಾಯಾಲಯದ ನಡುವಿನ ಜಗಳ, ರಾಜೀವ್ ಗಾಂಧಿ – ಜೆಲ್ ಸಿಂಗರ ನಡುವಿನ ಕದನ, ಕೇಂದ್ರ ಸರಕಾರ – ಶೇಷನ್ ನಡುವಿನ ಗಲಾಟೆಗಳನ್ನು ಕಂಡ ದೇಶಕ್ಕೆ ಸೈನ್ಯ ಮತ್ತು ಸರಕಾರದ ನಡುವಿನ ಇರುಸು ಮುರುಸು ಹೊಸತಾಗಿ ಕಾಣುತ್ತಿದೆ. ಏಕೆಂದರೆ ನಮ್ಮ ದೃಷ್ಟಿಯಲ್ಲಿ ಸೇನೆ ಎಂದಿಗೂ ದೇಶಕ್ಕೂ, ಸರಕಾರಕ್ಕೂ ವಿಧೇಯವಾಗಿದ್ದ ಸಂಸ್ಥೆ. ಏಕಾ ಏಕಿ ಈ ತೆರನಾದ ಸಮಸ್ಯೆ ಬರಲು ಕಾರಣ ವೇನು, ನಿಜವಾಗಿಯೂ ನಡೆಯುತ್ತಿರುವುದು ಏನು ಎಂದು ತಿಳಿಯುವ ಹಕ್ಕು ದೇಶಕ್ಕಿದೆ. ಕೂಡಲೇ ಪ್ರಧಾನಿ, ರಕ್ಷಣಾ ಸಚಿವರು ಸಂಶಯ ನಿವಾರಣೆಯ ಕಡೆ ಗಮನ ಹರಿಸುವುದು ಒಳ್ಳೆಯದು.
ಇಂದಿರಾ
ನೀವೂ ಸ್ವಲ್ಪ ನಕ್ಕು ಹಗುರವಾಗಿ
ಲಿಬ್ಯಾದ ಅಧ್ಯಕ್ಷ ಮುಅಮ್ಮರ್ ಗದ್ದಾಫಿ ವಿರುದ್ಧ ಜನಾಂದೋಲನ ದಿನಗಳೆದಂತೆ ವಿಕೋಪಕ್ಕೆ ಹೋಗುತ್ತಿದೆ. ಜನ ಸಾಯುತ್ತಿದ್ದಾರೆ, ಗದ್ದಾಫಿ ತನ್ನ ಹಿಂದಿನ ಪೊಗರು ಬಿಡದೆ ಲಿಬಿಯನ್ನರನ್ನು ಇಲಿ, ಜಿರಲೆಗಳಿಗೆ ಹೋಲಿಸಿ ಅವರನ್ನು (ಅವುಗಳನ್ನ) ನಿರ್ನಾಮ ಮಾಡುತ್ತೇನೆ, ಇಡೀ ದೇಶವನ್ನೇ ಸುಟ್ಟು ಹಾಕುತ್ತೇನೆ ಎಂದು ಬೆದರಿಕೆ ನೀಡುತ್ತಿದ್ದಾನೆ. ಈ ಬೆದರಿಕೆ ನೀಡುವಾಗ ತಾನೂ ಅದೇ ದೇಶದಲ್ಲೇ ಹುಟ್ಟಿದವ ಎನ್ನುವ ಸಾಮಾನ್ಯ ಪ್ರಜ್ಞೆಯೂ ಅವನಿಂದ ವಿದಾಯ ಪಡೆದು ಕೊಂಡಿದೆ.
೧೯೬೯ ರ ಕ್ರಾಂತಿಯಲ್ಲಿ ಅಧಿಕಾರದ ಗದ್ದುಗೆಗೆ ಏರಿದ ಕೇವಲ ೨೭ ರ ಪ್ರಾಯದ ಸೇನಾ ಕ್ಯಾಪ್ಟನ್ ಗದ್ದಾಫಿಗೂ, ಇಂದಿನ ಗದ್ದಾಫಿಗೂ ಅಜಗಜಾಂತರ ವ್ಯತ್ಯಾಸ. ಸರ್ವಾಧಿಕಾರಿಗಳೇ ಹೀಗೆ ಏನೋ? ತಾವು ಹಿಡಿದ ಅಧಿಕಾರ ಸ್ವಲ್ಪ ಹೆಚ್ಚು ಕಾಲ ನಿಂತರೂ ಮದ್ಯದ ಬಟ್ಟಲನ್ನು ಬಿಡದ ಮದ್ಯ ವ್ಯಸನಿಯಂತೆ ಆಡಲು ತೊಡಗುತ್ತಾರೆ. ಅಧಿಕಾರದ ಅಮಲಿಗೂ, ಮಧ್ಯದ ಅಮಲಿಗೂ ದೊಡ್ಡ ವ್ಯತ್ಯಾಸವೇನೂ ಕಾಣದು. ೧೯೭೭ ರ ತುರ್ತು ಪರಿಸ್ಥಿತಿ ವೇಳೆಯ ಇಂದಿರಾ ಗಾಂಧೀ ಮತ್ತು ಆಕೆಯ ಮಗ ಸಂಜಯ್ ಗಾಂಧೀಯವರುಗಳ ಸರ್ವಾಧಿಕಾರ ಮಾತ್ರ ನಮಗೆ ಗೊತ್ತು. ಚರಿತ್ರೆಯ ಆ ಒಂದು ಕಹಿ ಪಾಠ ಒಂದು ನೆನಪು ಮಾತ್ರ.
ಸರ್ವಾಧಿಕಾರಿಗಳ ಕೈಗೆ ಸರ್ವ ಅಧಿಕಾರಗಳೂ ಪ್ರಾಪ್ತವಾದಾಗ ಇಂದ್ರಿಯಗಳು ಕಾಲಿಗೆ ಬುದ್ಧಿ ಹೇಳುತ್ತವೆ. ವಿಶೇಷವಾಗಿ ಕಿವುಡುತನ ಆವರಿಸಿ ಕೊಳ್ಳುತ್ತದೆ. ಜನರ ನಾಡಿಮಿತ ಕೇಳುವುದಿಲ್ಲ. ತುನೀಸಿಯಾದ, ಈಜಿಪ್ಟ್ನ ಅಧ್ಯಕ್ಷರುಗಳಿಗೆ ಆಗಿದ್ದು ಇದೇ. ದೀರ್ಘಕಾಲ ಆಡಳಿತ ನಡೆಸುತ್ತಾ ತಮಗೆ ಬೇಕಾದ ಹೊಗಳು ಭಟ್ಟರನ್ನು ತಮ್ಮ ಸುತ್ತಾ ಹೆಣೆದು ಕೊಂಡು ರಾಜ್ಯದ ಜನರನ್ನು ಮರೆತರು. ಒಂದು ಸುದಿನ ಜನರ ಬಂಡಾಯಕ್ಕೆ ಬೆಲೆ ತೆತ್ತರು.
ಸರ್ವಾಧಿಕಾರಿಗಳು delusional ಆಗಿ ಬಿಡುತ್ತಾರಂತೆ ಸುದೀರ್ಘ ಕುರ್ಚಿ ವಾಸದ ಕಾರಣ. ಈ delusion ಬಗ್ಗೆ ಒಂದು ಸುಂದರ ಕಾರ್ಟೂನ್ ಕಾಣಲು ಸಿಕ್ಕಿತು ವೆಬ್ ತಾಣವೊಂದರಲ್ಲಿ. ಈ ಕಾರ್ಟೂನ್ ನೋಡಿ ಹೊಟ್ಟೆ ಹುಣ್ಣಾಗುವಂತೆ ನಕ್ಕೆ ನಾನು. ನಿಮಗೂ ಆ ಅನುಭವ ಆಗಲೇ ಬೇಕಿಂದಿಲ್ಲ ಆದರೆ ತುಟಿಯಂಚಿನಲ್ಲಿ ಮುಗುಳ್ನಗು ವನ್ನಾದರೂ elicit ಮಾಡಿಯೇ ತೀರುತ್ತದೆ ಈ ವ್ಯಂಗ್ಯ ಚಿತ್ರ. ಆಸ್ವಾದಿಸಿ.
