ಕುರಿಗಳು ಸಾರ್, ಕುರಿಗಳಲ್ಲಾ ಸಾರ್

ಪ್ರಾಣಿಗಳಿಗೆ ಹಿಂಸೆ ಆದಾಗ ಪ್ರಾಣಿ ದಯಾ ಸಂಘಕ್ಕೆ ಕರೆ ಕೊಡೋದು ವಾಡಿಕೆ. ಬಂದ್ ಗಾಗಿ ಕರೆ ಅಲ್ಲ, ಬಂದು ಪ್ರಾಣಿಯನ್ನು ಉಳಿಸಿ ಅಂತ ಹೇಳೋಕೆ ಕರೆ. ಜಟಕಾ ಗಾಡಿಯ ಮಾಲೀಕ ಬಳಲಿದ, ಹಸಿದ, ನಿತ್ರಾಣವಿಲ್ಲದೆ ಒಲ್ಲೆ ಎಂದರೂ ಬಿಡದೆ ಬಾರು ಕೋಲಿನಿಂದ ಬಾರಿಸಿ ತನ್ನ ಗಾಡಿಯಲ್ಲಿರುವ ಪೋಸ್ಟ್ ಮಾರ್ಟಂ ದಾರಿ ಹಿಡಿದ ಹೆಣ ವನ್ನು ಅದು ಸೇರಬೇಕಾದ ಸ್ಥಳ ತಲುಪಿಸಲು ಕುದುರೆಗೆ ಕೊಡುವ ಹಿಂಸೆ ನೋಡಿ, ನೋಡಲಾರದೆ ಪ್ರಾಣಿ ದಯಾ ಸಂಘಕ್ಕೆ ಬುಲಾವ್ ಕೊಡೋದು.  ಹೌದು ಪ್ರಾಣಿಗಳಿಗೆ ದಯೆ ತೋರಿಸಬೇಕಾದ್ದೆ. ಆದರೆ ಈ ಬುಲಾವ್ ಬರೀ ಕುದುರೆ ಕತ್ತೆ ನಾಯಿಗಳಿಗೆ ಮಾತ್ರ ಏಕೆ, ಕೋಳಿ ಕುರಿಗಳಿಗೂ ಏಕಿಲ್ಲ ಅವೂ ಪ್ರಾಣಿಗಳೇ ಅಲ್ಲವೇ ಎಂದು ಕೆಲವರ ಸಂಶಯ. ಒಬ್ಬರ ಸಂಶಯಕ್ಕೆ ಪಾರ್ಶ್ವ ಉತ್ತರವಾಗಿ ಮತೊಬ್ಬರು ಹೇಳಿದರು, ಕುರಿ ಏನೋ ಪ್ರಾಣಿಯೇ, ಆದರೆ ಕೋಳಿ ಪ್ರಾಣಿಯಲ್ಲ, ಅದು ಪಕ್ಷಿ ಎಂದು. ಪ್ರಾಣಿಯೋ , ಪಕ್ಷಿಯೋ ಪ್ರಾಣವಂತೂ ಇದೆಯಲ್ರೀ ಅಂತೀರಾ? ಸೊಳ್ಳೆಗೂ ಇದೆ ಪ್ರಾಣ, ಹಾಗೆಯೇ ತಿಗಣೆಗೂ ಸಹ, ಅಲ್ವರ? ಸೊಳ್ಳೆಯನ್ನು ಕೊಲ್ಲಲು ಈಗ ಚೀನೀ ತಂತ್ರಜ್ಞಾನ ಉಪಯೋಗಿಸುತ್ತಿಲ್ಲವೇ ನಾವು. ಟೆನ್ನಿಸ್ ಬೆಡಗಿ ಸಾನಿಯಾ ಥರ ಎಲೆಕ್ಟ್ರೋನಿಕ್ ಬ್ಯಾಟ್ ಹಿಡಿದು ಚಟ ಚಟ, ಚಟ, ಚಟಾ ಅಂತ ಅಟ್ಟಾಡಿಸಿಕೊಂಡು ಸುಡುತ್ತಿಲ್ಲವೇ ಸೊಳ್ಳೆ ಗಳನ್ನು?  ನಮ್ಮ ಕಿವಿಗಳ ಸುತ್ತಾ ಹಾರುತ್ತಾ, ತಪ್ಪಿಸಿಕೊಳ್ಳುತ್ತಾ, ಒಂದು ರೀತಿಯ ಅಣಕದ ಶಬ್ದ ಮಾಡಿ ನಂತರ ನಮ್ಮ ರಕ್ತ ಹೀರುವ  ಸೊಳ್ಳೆಗಳನ್ನು ಹಾಗೆ ಬಿಡಿ ಅಂತೀರಾ ಎಂದು ಕೇಳಬೇಡಿ. back hand, fore hand, ಹೀಗೆ ನಾನಾ ರೀತಿ ರಾಕೆಟ್ ತಿರುಗಿಸಿ ಫ್ರೈ ಮಾಡಿ ಸೊಳ್ಳೆಗಳನ್ನು.   ಹಾಗಾದರೆ ಈ ಮೇಲಿನ ಪುರಾಣ ಯಾಕೆ? ಕುರಿ, ಕೋಳಿ, ಪ್ರಾಣಿ ದಯೆ, ಬ್ಲಾ, ಬ್ಲಾ, ಬ್ಲಾ ಎಂದಿರಾ?

ಈಗ ಪ್ರಾಣಿ ಹಿಂಸೆ ವಿಷಯ ಬಂದಾಗ ಕೆಲವರು by choice ಅಥವಾ by taste ಕಾರಣ ಆರಿಸಿಕೊಂಡ ಆಹಾರ ಪದ್ಧತಿಗೆ ಕೊನೆ ಹಾಡಿ ಕುರಿ ಕೋಳಿ ಭಕ್ಷ್ಯ ಮಾಡುವ ಪರಿಪಾಠಕ್ಕೆ ನಾಂದಿ ಹಾಡಬೇಕು. ನಮ್ಮ ದೇಶದಲ್ಲಿ ಕುರಿ ಕೋಳಿ ಹಂದಿ ಮುಂತಾದುವುಗಳ ಹಿಂಸೆಗೆ ನಾಂದಿ ಹಾಡಿದರೆ ವಿಎಟ್ನಾಮ್, ಚೈನಾ, ಮುಂತಾದ ದೇಶಗಳಲ್ಲಿ ನಾಯಿ, ಜಿರಲೆ ಇವುಗಳ ಹತ್ಯೆಗೂ ಹಾಡಬೇಕು ಇತಿಶ್ರೀ. ಅಯ್ಯೋ ನಾಯ್ ತಿಂತಾರಾ ಚೈನಾದಲ್ಲಿ ಎಂದು ಮೂಗೆಳೆಯಬೇಡಿ. ಆರ್ಥಿಕ ಸಂಕಷ್ಟ ಜನರನ್ನು ಬಡಿದು ಕುರಿ ಕೋಳಿ, ಹಂದಿ ದುಬಾರಿ ಯಾದಾಗ ನಾಯಿಗಳು “ಮೆನ್ಯು ಪಟ್ಟಿ”- menu-  ಗೆ ಬಡ್ತಿ ಪಡೆದು ಕೊಳ್ಳುತ್ತವೆ ಕೆಲವು ದೇಶಗಳಲ್ಲಿ. ಕುರಿ ಕೋಳಿ ಹತ್ಯೆ ಕುರಿತ ಚರ್ಚೆಯಲ್ಲಿ ಓದುಗರೊಬ್ಬರು ಕೇಳಿದರು, “ಪ್ರಾಣ ಇರುವುದೆಲ್ಲ ಪ್ರಾಣಿಗಳೇ ….. ಜಗದೀಶ್ ಚಂದ್ರಬೋಸರು ತೋರಿಸಿದ್ದಾರೆ ಸಸ್ಯಗಳೀಗೂ ಪ್ರಾಣವಿದೆ ಹಾಗೂ ಅವೂ ಉಸಿರಾಡುತ್ತವೆ ಎಂದು. ಹಾಗಾಗಿ ಪ್ರಾಣಿ ದಯಾಸಂಘದವರು ಪ್ರಾಣವಿರುವ ಎಲ್ಲವನ್ನೂ ರಕ್ಷಿಸಲು ಮುಂದಾಗಬೇಕು ಎನ್ನುವುದು ನನ್ನ ಕೋರಿಕೆ!!!!!” ಓಹ್, ಇದೆಂಥಾ ಬಾಂಬ್ ಅಪ್ಪಾ! ಹಾಗಾದರೆ ನಾವು ತಿನ್ನೋದೇನನ್ನು? ನನಗೆ ಗೊತ್ತಿಲ್ಲ. ಆದರೆ ಅದುನ್ ತಿನ್ನೋದ್ ಬ್ಯಾನ್ ಮಾಡಿ, ಇದುನ್ ತಿನ್ನೋದನ್ ಬ್ಯಾನ್ ಮಾಡಿ ಎನ್ನುವವರಿಗೆ ಮತ್ತೊಂದು ಉತ್ತರ ಹೀಗೆ..

“ಅನುಕೂಲ ಶಾಸ್ತ್ರ” ದ proponent ಗಳಿಗೆ ತಮ್ಮದೇ ಆದ ತರ್ಕಗಳಿರುತ್ತವೆ, ಆ ತರ್ಕಗಳಿಗೆ ವಿವೇಚನೆ ಅಥವಾ reasoning ಕೆಲಸಕ್ಕೆ ಬಾರದ ಸಂಗತಿಗಳು, ಹಾಗೆಯೇ “ಅನುಕೂಲ ಶಾಸ್ತ್ರ” thrive ಆಗೋದು ನಂಬರ್ ಗೇಂ ನಲ್ಲಿ. ಸಂಖ್ಯೆ ಹೆಚ್ಚಿದ್ದರೆ ಅವರು ಹೇಳಿದ್ದೇ ಸರಿ, ಈ ವಿಷಯದಲ್ಲಿ ಮಾತ್ರ ಇವರುಗಳು truly democratic.
ತುರೇ ಮಣೆ ಕಯ್ಯಿಂದ ನಿರ್ದಯವಾಗಿ ತುರಿಸಿಕೊಳ್ಳುವ ತೆಂಗಿನಕಾಯಿ ಮತ್ತು ಹರಿಯುವ ಚಾಕುವಿನ ಅಡಿ ದಯನೀಯವಾಗಿ ನಲುಗುವ ಈರುಳ್ಳಿ ಬಗ್ಗೆ ಇವರುಗಳಿಗೆ ಕನಿಕರ ಭಾವ ತೋರಿದಾಗ ಅವುಗಳನ್ನು ಒಳಗೊಂಡ ತಿನಿಸಿಗೂ ಬರುತ್ತದೆ ಸಂಚಕಾರ.

ಈಗ ಚರ್ಚೆ ಪರಿಸಮಾಪ್ತಿ. ನಡೀರಿ ಮಿಲ್ಟ್ರಿ ಹೋಟೆಲ್ ಕಡೆ.  ಚೀನಿಯರು ನಮ್ಮ menu ಮೇಲೆ ಇನ್ನೂ ಧಾಳಿ ಮಾಡಿಲ್ಲ ತಾನೇ? ಇಲ್ದಿದ್ರೆ, ನಾಯ್, ಜಿರಲೆ….ಅಯ್ಯೋ….

ಶುದ್ಧತೆಗೇಕೆ ಅಸಡ್ಡೆ?

ಶುಚಿತ್ವಕ್ಕೂ ಭಾರತೀಯರಿಗೂ ಇರುವ ಸಂಬಂಧ ಅಷ್ಟಕ್ಕಷ್ಟೇ. ಒಂದು ದೇಶ ಎಷ್ಟು ಶುಚಿ ಎಂದು ನೋಡಬೇಕಾದರೆ ದೊಡ್ಡ ಸಂಶೋಧನೆಯನ್ನು ಕೈಗೊಳ್ಳುವ ಅಗತ್ಯವಿಲ್ಲ; ಆ ದೇಶದ ಹಣ, (ನಮ್ಮ ನೋಟುಗಳನ್ನು ನೋಡಿದ್ದೀರ? ಎಹ್ಸ್ತು ಕೊಳಕಾಗಿವೆ ಎಂದರೆ ಅವನ್ನು ಮುಟ್ಟಿದ ನಂತರ ಸಾಧಾರಣ ಸಾಬೂನಿನಿಂದಲೂ ಶುಚಿತ್ವ ಸಾಧಿಸಲು ಸಾಧ್ಯವಿಲ್ಲ. ಪ್ರಪಂಚದಲ್ಲಿರುವ ಎಲ್ಲ ರೀತಿಯ ರೋಗಾಣುಗಳು ನಮ್ಮ ನೋಟುಗಳ ಮೇಲಿರುತ್ತವೆ.) ಮತ್ತು ಅಲ್ಲಿನ ರಸ್ತೆ ಬೀದಿಗಳು ಸಾಕು ಎಷ್ಟು ಶುಚಿ ಆ ದೇಶ ಎಂದು ಸಾರಲು. ಶ್ರದ್ಧೆಯಿಂದ ಜನರನ್ನು ಸಾರ್ವಜನಿಕ ಸ್ಥಳಗಳಲ್ಲಿ ಗಮನಿಸಿ. ಒಬ್ಬ ಮೂಗು ತುರಿಸುವುದೋ ಅಥವಾ ಮೂಗಿನೊಳಕ್ಕೆ ಸಾಕಷ್ಟು ಆಳವಾಗಿ ಬೆರಳನ್ನು ತೂರಿಸಿ theory of relativity ಬಗ್ಗೆ ಚಿಂತಿಸುತ್ತಿದ್ದರೆ ಮತ್ತೊಬ್ಬ ತನ್ನ ಕುಂಡೆ ತುರಿಸಿಕೊಳ್ಳುತ್ತಿರುತ್ತಾನೆ.

 

ಐಶ್ವರ್ಯ ರೈ ಮದುವೆಗೆಂದು ಉತ್ತರಪ್ರದೇಶದ ಊರೊಂದರಲ್ಲಿ ಭಾರೀ ಪ್ರಮಾಣದಲ್ಲಿ ಲಡ್ಡು ತಯಾರಿ ಮಾಡುತ್ತಿದ್ದರು. ಅದರಲ್ಲಿ ಲಾಡೂ ಅಥವಾ ಲಡ್ಡು ಮಾಡುತ್ತಿದ್ದವ ತನ್ನ ‘ ಎಡಗೈಯ್ಯಿಂದ ‘ ಅತ್ಯಂತ ಉತ್ಸಾಹದಿಂದ ಕ್ಯಾಮೆರಾದ ಕಣ್ಣಿಗೆ ಚೆನ್ನಾಗಿ ಕಾಣುವಂತೆ ಉಂಡೆ ಮಾಡುತ್ತಿದ್ದದ್ದು ನೋಡಿ ಎರಡು ದಿನ ಊಟ ಮಾಡಲಾಗಲಿಲ್ಲ ಮಾತ್ರವಲ್ಲ ಎಂದಾದರೂ ಒಂದು ದಿನ ನಾಲಗೆ ಚಪಲಕ್ಕೆ ಬಿದ್ದು ಲಡ್ಡು ತಿನ್ನುವ ಆಸೆಯೂ ಅಂದೇ ಹಾರಿ ಹೋಯಿತು.

ಶುಚಿತ್ವ ಕಾಪಾಡಲು ಹಣ ಸಂಪತ್ತೇನೂ ಖರ್ಚಾಗುವುದಿಲ್ಲ. ಅದೊಂದು simple, natural trait. ಮನೆಗಳಲ್ಲೇ ಅದರ ತರಬೇತಿ ಸಿಗದೇ ಇದ್ದಾರೆ ಬೀದಿಯಲ್ಲಿ sikkeete? ಸುಮ್ಮ ಸುಮ್ಮನೆ ಹೋಗುವಾಗ ರಸ್ತೆ ಮೇಲೆ ಉಗುಳುವುದು, ಮಾತನಾಡುವಾಗ ಕೆರೆದುಕೂಳುವುದು ರಕ್ತಗತವಾಗಿಬಿಟ್ಟಿದೆ ಜನರಲ್ಲಿ. ನಮ್ಮ ಶುಚಿತ್ವದ ಪರಿ ನೋಡಿ ಪಾಶ್ಚಾತ್ಯರು ಅತಿ ಕಟ್ಟೆಚ್ಚರದಿಂದ ನಮ್ಮ ದೇಶದ ಪ್ರವಾಸ ಕೈಗೊಳ್ಳುತ್ತಾರೆ. ಸ್ವಲ್ಪ ಆಹಾರದಲ್ಲಿ ಎಡವಟ್ಟಾಗಿ ಒಂದು ಸಲಕ್ಕಿಂತ ಹೆಚ್ಚು ಶೌಚಾಲಯದ ಭೇಟಿ ಆದರಂತೂ ಅದಕ್ಕೆ delhi belly ಎಂದು ಹೇಳಿ ಲೇವಡಿ ಮಾಡುತ್ತಾರೆ. ಇದ್ದಕ್ಕಿದ್ದಂತೆ ಈ ಅಸಹ್ಯ ಹುಟ್ಟಿಸುವ ಚಟ ಅಥವಾ ನಡವಳಿಕೆ ಬಗ್ಗೆ ಬರೆದದ್ದೇಕೆಂದರೆ ಇಂದಿನ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯಲ್ಲಿ ಒಂದು ವರದಿ ಪ್ರಕಟವಾಯಿತು. Only 44% Indians have clean hands ಶೀರ್ಷಿಕೆಯಡಿ ಯಾವಯಾವ ದೇಶದ ಜನ ಎಷ್ಟು ಶುಚಿತ್ವ ಉಳ್ಳವರು ಎಂದು ಪ್ರಕಟವಾಗಿತ್ತು. ಡೆಟ್ಟಾಲ್ ಸಂಸ್ಥೆ ಈ ಸಮೀಕ್ಷೆ ನಡೆಸಿ ನಮ್ಮ ಮಾನ ಮಾರುಕಟ್ಟೆಯಲ್ಲಿ ಹರಾಜಿಗೆ ಹಾಕಿತು. ಶೌಚಾಲಯಕ್ಕೆ ಹೋದ ನಂತರ ಕೇವಲ ೨೭ % ಭಾರತೀಯರು ಕೈ ತೊಳೆಯುತ್ತಾರಂತೆ. ಕೈ ಶುದ್ಧವಾಗಿಟ್ಟುಕೊಳ್ಳುವುದು ಆರೋಗ್ಯಕರ ಎಂದು ಶೇಕಡಾ ೯೦ ಕೆನಡಾ ದೇಶದವರು ನಂಬಿದರೆ ಶೇಕಡಾ ೪೪ ಭಾರತೀಯರು ಇದಕ್ಕೆ ಹೂಂಗುಟ್ಟಿದರು. 

ಮೂತ್ರ  ವಿಸರ್ಜನೆ ಮಾಡಿ ಎಷ್ಟು ಜನ ಜನನಾಂಗವನ್ನು ಶುದ್ಧಿ ಮಾಡಿಕೊಳ್ಳುತ್ತಾರೆ ಎಂದು dettol ಸಂಸ್ಥೆ ನಮ್ಮನ್ನು  ಕೇಳಿದ್ದಿದ್ದರೆ ದೊಡ್ಡ  ಅನಾಹುತವೇ ಆಗುತ್ತಿತ್ತೇನೋ?

ಮನೋರಂಜನೆ ಮತ್ತು ಮಕ್ಕಳು

” ವಿದ್ಯುಚ್ಛಕ್ತಿ ತಡೆಯಿಲ್ಲದೆ ಸರಬರಾಜಿದ್ದರೆ ಜನ ತಡ ರಾತ್ರಿವರೆಗೂ ಟೀ ವೀ ನೋಡಿ ಮಲಗಿಬಿಡುವುದರಿಂದ ಮಕ್ಕಳನ್ನು ಉತ್ಪಾದಿಸಲು ಅವಕಾಶ ಸಿಗದು ಎಂದು ನಮ್ಮ ಸನ್ಮಾನ್ಯ ಕೇಂದ್ರ ಆರೋಗ್ಯ ಮಂತ್ರಿ ಗುಲಾಂ ನಬಿ ಆಜಾದ್ ಭಾರತದ ಜನ ಸಂಖ್ಯೆ ತಡೆಯಲು ತಮ್ಮದೇ ಆದ ಸುವರ್ಣ ಸೂತ್ರ ಬೋಧಿಸಿದರು. ಇದು ಎಷ್ಟು ಯಶಸ್ವಿ ಸೂತ್ರವೋ ಏನೋ ಕಾಲವೇ ಹೇಳಬೇಕು.

ನನ್ನ  ಪ್ರಕಾರ ಜನಸಂಖ್ಯೆ ವೃಧ್ಧಿಗೂ ಮನೋರಂಜನೆಗೂ ಯಾವುದೇ ಸಂಬಂಧವಿಲ್ಲ. ಲೈಂಗಿಕ ಕ್ರಿಯೆ ನಡೆಸುವವನಿಗೆ ಕರೆಂಟ್ ಇದ್ದರೂ ಬಿಟ್ಟರೂ ಕಾಮ ಕೇಳಿಗೆ ಯಾವ ಅಡಚಣೆಯೂ ಬರದು. ಉದಾಹರಣೆಗೆ ಒಬ್ಬ ಶ್ರಮಜೀವಿ ತನ್ನ ಕೆಲಸ ಮುಗಿಸಿ ದಣಿದು ಮನೆಗೆ  ಬಂದಾಗ ಅವನಿಗೆ ಬೇಕಿದ್ದರೆ ಲೈಂಗಿಕ ಕ್ರಿಯೆ ನಡೆಸಿಯೇ ತೀರುತ್ತಾನೆ. ಇನ್ನು ಅವನಿಗೆ ಪೂರಕ ಮನೋರಂಜನೆಯನ್ನು ಕೊಟ್ಟು ನೋಡಿ. ಕೆಲಸ ಮುಗಿಸಿ ದಣಿದು ಬಂದು ಒಂದಿಷ್ಟು ವಿಶ್ರಮಿಸಿ ಟೀವೀ ನೋಡುತ್ತಾನೆ. ಟೀವೀಯಲ್ಲಿ ತೋರಿಸುವುದಾದರೂ ಏನನ್ನು? ಬಿಪಾಶಾಳ ಮೈಮಾಟವನ್ನೂ, ನಿಹಾ ಧುಪಿಯಾಳ ಅಂಗಸೌಷ್ಟವವನ್ನೂ ಅಲ್ಲವೇ? ಇದನ್ನು ನೋಡಿದ ನಮ್ಮ ಉಪ್ಪು ಹುಳಿ ತಿಂದ ಶ್ರಮ ಜೀವಿ ಇನ್ನ್ನಷ್ಟು ಉದ್ರೇಕಗೊಂಡು ರತಿ ಕ್ರೀಡೆಯಲ್ಲಿ ತೊಡಗಿಸಿಕೊಳ್ಳದೆ ಇರುತ್ತಾನೆಯೇ? ಎಲ್ಲಾ ರೀತಿಯ ಮನೋರಂಜನೆಯನ್ನು ನೀಡಿದ ಮತ್ತು ಪಡೆದ ಮಾಜಿ ಮಂತ್ರಿ ಮಹೋದಯರಾದ ಲಾಲೂ ಪ್ರಸಾದ್ ಅವರಿಗೆ ಎಷ್ಟು ಮಕ್ಕಳೆಂದು ಪ್ರತ್ಯೇಕವಾಗಿ ಹೇಳಬೇಕಿಲ್ಲವಷ್ಟೇ? 

ಜನಸಂಖ್ಯೆ ಅ ನಿಯಂತ್ರಣಕ್ಕೆ ಬೇಕಿರುವುದು ಅತ್ಯಂತ  ಪ್ರಭಾವೀ ಮತ್ತು ಜ ಕ್ರಿಯಾತ್ಮಕ ಅಭಿಯಾನ. ಮಕ್ಕಳ ಸಂಖ್ಯೆ ನಿರ್ಧರಿಸುವುದು ಗಂಡಾದರೆ  ಆಗುವ  ಅಭಾಸ ಜನಸಂಖ್ಯೆಯ ಹೆಚ್ಚಳ.  ಉತ್ತರ ಭಾರತದ ಹಳ್ಳಿಯೊಂದರಲ್ಲಿ ಮಹಿಳೆಯೊಬ್ಬರು ಮಕ್ಕಳ ಸಂಖ್ಯೆ ನಿರ್ಧರಿಸುವುದು ಗಂಡಾದ್ದರಿಂದ ನಾವು ಅಸಹಾಯಕರೆಂದು ಆಂಗ್ಲ ಪತ್ರಿಕೆಯ ವರದಿಗಾರ್ತಿಗೆ ತಿಳಿಸಿದಳು.  ಆರೋಗ್ಯ ಮಂತ್ರಿಗಳ ಸೂತ್ರದ ಬಗ್ಗೆ ಕೇಳಿದಾಗ “ಓರ್ವ ಗಂಡು ಮತ್ತು ಚಂಡಮಾರುತ ಮೇಲೆರಗುವ ಮೊದಲು ಮುನ್ಸೂಚನೆಗಳನ್ನೇನೂ ಕೊಡುವುದಿಲ್ಲ” ಎಂದು ಹಾಸ್ಯ ಚಟಾಕಿ ಹಾರಿಸಿದಳು. ನಮ್ಮ ಕಾಲದಲ್ಲಿ ಪ್ರತಿಯೊಬ್ಬರಿಗೂ 13 ಮಕ್ಕಳಿದ್ದು ಈಗ ಕುಟಂಬ ಯೋಜನೆ ಪ್ರಭಾವದಿಂದ ನಾಲ್ಕರಿಂದ ಆರಕ್ಕೆ ಇಳಿದಿದೆ  ಎಂದು ವಯಸ್ಸಾದ ಮಹಿಳೆಯೊಬ್ಬರು ಹೇಳಿದರು. ಈ ವರದಿಗಳನ್ನು ನೋಡಿದಾಗ  ನಮಗನ್ನಿಸುವುದು ಮಕ್ಕಳ ಸಂಖ್ಯೆ ನಿರ್ಧರಿಸುವುದರಲ್ಲಿ ಗಂಡಿನ ಪಾತ್ರವೂ ಮತ್ತು ಹೆಣ್ಣುಮಕ್ಕಳಲ್ಲಿ ಶಿಕ್ಷಣದ ಕೊರತೆಯೂ ಇರುವುದು.

ಇನ್ನು ಕೆಲವೊಂದು ಸ್ವಾರಸ್ಯಕರವಾದ ಅಂಕಿ ಅಂಶಗಳತ್ತ ದೃಷ್ಟಿ ಹರಿಸೋಣ.
೧. ಭಾರತದಲ್ಲಿ ಜನಸಂಖ್ಯೆ ವಿಪರೀತ ಹೆಚ್ಚುತ್ತಿದೆ.
ತಪ್ಪು. ನಿಜವೆಂದರೆ ೧೯೮೧ ರಿಂದ ಜನಸಂಖ್ಯೆ ಇಳಿಯುತ್ತಿದೆ.

೨. ಜನಸಂಖ್ಯೆ ಅವಿದ್ಯಾವಂತರಲ್ಲೂ ಮತ್ತು ಗ್ರಾಮೀಣರಲ್ಲೂ ಹೆಚ್ಚಳ ಕಾಣುತ್ತಿದೆ.
ಇಲ್ಲ. ಗ್ರಾಮೀಣ ಜನರಲ್ಲೂ ಮತ್ತು ನಗರ ವಾಸಿಗಳಲ್ಲೂ ೭೦ ರ ದಶಕಕ್ಕೆ ಹೋಲಿಸಿದಾಗ ಜನಸಂಖ್ಯೆ  ಶೇಕಡಾ ೪೪ ರಷ್ಟು ಇಳಿತ ಕಂಡಿದೆ.

೩. ಜನಸಂಖ್ಯೆ ಆಹಾರ ಉತ್ಪಾದನೆಯನ್ನು ಹಿಂದಕ್ಕೆ ಹಾಕಿದೆ.
ಇಲ್ಲ. ಆಹಾರ ಉತ್ಪಾದನೆ ೧೯೪೭ ರ ನಂತರ ನಾಲ್ಕು ಪಟ್ಟು ಹೆಚ್ಚಿದ್ದು ಅದೇ ಸಮಯ ಜನಸಂಖ್ಯೆ ಮೂರು ಪಟ್ಟು ಹೆಚ್ಚಿದೆ.

೪. ದೊಡ್ಡ ಜನಸಂಖ್ಯೆ ಬಡತನಕ್ಕೆ ಕಾರಣ.
ತಪ್ಪು. ಬಾಂಗ್ಲಾದೇಶ ೧೯೭೫ ರಿಂದ ೧೯೯೮ ರವರೆಗೆ ಜನಸಂಖ್ಯೆಯನ್ನು ಯಶಸ್ವಿಯಾಗಿ ನಿಗ್ರಹಿಸಿದ್ದು ಇನ್ನೂ ಬಡ ರಾಷ್ಟ್ರವಾಗಿಯೇ ಉಳಿದಿದೆ.