ಮಾಧ್ಯಮಗಳು ನಂಬಲನರ್ಹ

ಚಾರ್ಲ್ಸ್ ಶೋಭರಾಜ್ ಅಂತಾರಾಷ್ಟ್ರೀಯ ಕುಖ್ಯಾತಿಯ ಕ್ರಿಮಿನಲ್. ಸರಣಿ ಕೊಲೆಗಾರ, serial killer. ಹಲವಾರು ಹೆಣ್ಣು ಮಕ್ಕಳನ್ನು ಕೊಲೆಗೈದಿದ್ದ ಈತನನ್ನು ಬಿಕಿನಿ ಕಿಲ್ಲರ್ ಎಂದೂ ಕರೆಯುತ್ತಾರೆ. ಈತ ಪೂಲೀಸರಿಗೆ ಲಂಚ್ ಕೊಟ್ಟೋ ಚಳ್ಳೆ ಹಣ್ಣು ತಿನ್ನಿಸಿಯೋ ತಪ್ಪಿಸಿಕೊಳ್ಳುತ್ತಿದ್ದ. ಒಮ್ಮೆ ಯಾರೋ ಒಬ್ಬ ಭಾರತೀಯ ಪೊಲೀಸರು ಇವನ ಹಿಂದೆ ಬಿದ್ದಿದ್ದಾರೆ ಎಂದು  ಪ್ರಸ್ತಾಪಿಸಿದಾಗ ಶೋಭ ರಾಜ್, ಓಹ್, ಭಾರತೀಯ ಪೊಲೀಸರು ೫ ರೂಪಾಯಿ ಪೊಲೀಸರು, ಐದು ರೂಪಾಯಿಯ ನೋಟನ್ನು ಕೊಟ್ಟರೆ ಬಿಟ್ಟು ಬಿಡುತ್ತಾರೆ ಎಂದು ಗಹ ಗಹಿಸಿ ನಕ್ಕಿದ್ದ. ಕೊನೆಗೆ ಇವನಿಗೆ ಮುಳುವಾಗಿದ್ದು ಒಬ್ಬ ಒಬ್ಬ ದಕ್ಷ ಭಾರತೀಯ ಪೊಲೀಸ್ ಅಧಿಕಾರಿ. ಚಾಣಕ್ಷ  ಪೊಲೀಸ್ ಅಧಿಕಾರಿ  “ಮಧುಕರ್ ಜೆನ್ಡೇ” ೧೯೯೬ ರಲ್ಲಿ ಅತ್ಯದ್ಭುತವಾದ ಕಾರ್ಯಾಚರಣೆ ಯೊಂದರಲ್ಲಿ ಚಾರ್ಲ್ಸ್ ನನ್ನು ಅರೆಸ್ಟ್ ಮಾಡಿದ್ದರು.

ಇವನ ದಸ್ತಗಿರಿಯೊಂದಿಗೆ ಭಾರತೀಯ ಪೊಲೀಸರು ಐದು ರೂಪಾಯಿ ಪೊಲೀಸರಲ್ಲ ಎಂದು ಸುಂದರವಾಗಿ ಸಾಬೀತಾಯಿತು. ಪೊಲೀಸ್ ಇಲಾಖೆಯ ವೃತ್ತಿಪರತೆ ವಿಜ್ರಂಭಿಸಿತು.

ವಿಜಯ್ ಮಲ್ಯ ರವರ ಕಿಂಗ್ ಫಿಶರ್ ಆರ್ಥಿಕ ಸಂಕಟ ದಲ್ಲಿರುವ ವೈಮಾನಿಕ  ಸಂಸ್ಥೆ. ಉತ್ತರ ಭಾರತದ ಮೋಸಗಾರ, ವಂಚಕ ಉದ್ಯಮಿಗಳಲ್ಲಿ ರಕ್ತಗತವಾಗಿರುವ ಕಪಟತನ, ಸರಕಾರೀ  ವ್ಯವಸ್ಥೆಯನ್ನ ಸಲೀಸಾಗಿ ಜೇಬಿಗಿಳಿಸಿ ಕೊಳ್ಳುವ ಕಂತ್ರಿ ಗುಣ ಈ ಕನ್ನಡಿಗ ಉದ್ಯಮಿಯಲ್ಲಿ ಇಲ್ಲ. ಇವರ ಹಣಕಾಸು ತೊಂದರೆಗಳಿಗೆ ರೆಕ್ಕೆ ಪುಕ್ಕ ಕೊಟ್ಟಿದ್ದು ಮಾತ್ರವಲ್ಲದೆ ವರ್ಣರಂಜಿತವಾಗಿ ಪ್ರಕಟಿಸಿ ತೀಟೆ ತೀರಿಸಿ ಕೊಂಡವು ಪತ್ರಿಕೆಗಳು. ಬಹುಶಃ ಕೆಲವು ಉದ್ಯಮಿಗಳ ಹಾಗೆ ದಕ್ಷಿಣೆ ಬಿಸಾಕುವ ಗುಣ ಮಲ್ಯರಲ್ಲಿಲ್ಲದ್ದರಿಂದಲೋ ಏನೋ ಇವರ ಬೆನ್ನು ಹತ್ತಿದವು. ತಮ್ಮನ್ನು ಗುರಿಯಾಗಿಸಿ ನಡೆಯುತ್ತಿರವ witch hunting ಗೆ ಬೇಸತ್ತ ಮಲ್ಯ ಕೊನೆಗೆ ಉದುರಿಸಿದರು ನನಗೂ ನಿಮಗೂ ತಿಳಿದಿದ್ದ ನುಡಿ ಮುತ್ತುಗಳನ್ನು; indian media has no credibility. ಭಾರತೀಯ ಮಾಧ್ಯಮಗಳು “ನಂಬಲರ್ಹ ಎಂದು.  ನಂಬಲನರ್ಹ ಅಥವಾ ಯೋಗ್ಯತೆಗೆಟ್ಟ  ಮಾಧ್ಯಮಗಳು ಎಂದರೂ ಸರಿಯೇ.

ಪತ್ರಕರ್ತರ ಮೇಲಿನ ವಿಶ್ವಾಸ ಕ್ರಮೇಣ ಜನರಲ್ಲಿ ಕಡಿಮೆಯಾಗುತ್ತಿದೆ ಎಂದು ಅಧ್ಯಯನಗಳು ಹೇಳುತ್ತಿವೆ. ೧೯೮೦ ರ ಕ್ಕಿಂತ ಮೊದಲಿದ್ದ  ಪತ್ರಕರ್ತರ ಮೇಲಿನ ವಿಶ್ವಾಸ ಈಗ ಇಲ್ಲ. ಈಗ ಮಾಧ್ಯಮಗಳು ಸರಕಾರೀ ಯಂತ್ರಗಳ, ರಾಜಕಾರಣಿಗಳ ‘ಸ್ಟೆನೋ ಗ್ರಾಫರ್’ ಗಳಾಗಿ ಮಾರ್ಪಟ್ಟಿದ್ದಾರೆ. ರಾಜಕಾರಣಿ ಅಥವಾ ಅಧಿಕಾರಿಗಳು ಹೇಳಿದ್ದು ಸರಿಯೇ ಎಂದು ತನಿಖೆ ನಡೆಸಿ ವರದಿ ಮಾಡುವ ವ್ಯವಧಾನ, ವೃತ್ತಿಪರತೆ  ಇವರಿಗಿಲ್ಲ. ಯಾವ ಆಮಿಷಕ್ಕಾಗಿ ಪತ್ರಕರ್ತನಿಗಿರಬೇಕಾದ ಗುಣಗಳನ್ನ ಇವರು ಬಲಿ ಕೊಟ್ಟಿದ್ದಾರೆ ಎನ್ನುವುದು ಜನರಿಗೆ ಗೊತ್ತಿಲ್ಲ. ಕೆಲವು ಪತ್ರಕರ್ತರು ತಮ್ಮ ರಾಜಕೀಯ ಅಜೆಂಡಾ ಗಳಿಗೆ ಹೊಂದುವ ವರದಿ ಪ್ರಕಟಿಸಿ ಪತ್ರಕರ್ತ ಹುದ್ದೆಗೆ ಕಳಂಕ ತರುವ, ಆ ಹುದ್ದೆಯ ಘನತೆ ಕುಗ್ಗಿಸುವ ಕೆಲಸ ಮಾಡುತ್ತಿರುವುದೂ ಸಹ ಜನ ಗಮನಿಸುತ್ತಿದ್ದಾರೆ.      ಒಂದು ಪತ್ರಿಕೆ ಬರೆದ ವರದಿಗಳ ಕಾರಣ ಕರ್ನಾಟಕದ ಒಂದು ಪಟ್ಟಣ  ಸಂಪೂರ್ಣ ಬಂದ್ ಅನ್ನೂ ಆಚರಿಸಿತಂತೆ. ಹಿಂದೆಂದೂ  ಇದನ್ನು ಹೋಲುವ ಘಟನೆ ಕರ್ನಾಟಕದಲ್ಲಿ ನಡೆದ ಬಗ್ಗೆ ನನಗೆ ನೆನಪಿಲ್ಲ. unprecedented ಎನ್ನಬಹುದುನಮ್ಮ ನಾಡಿನಲ್ಲಿ ಪತ್ರಿಕೋದ್ಯಮ ಈ ಮಟ್ಟಕ್ಕೆ ಬಂದು ನಿಂತಿದೆ ಇಂದು.

ಒಬ್ಬ ಪತ್ರಕರ್ತ ಎನ್ನಿಸಿ ಕೊಳ್ಳಲು ನಾಲ್ಕು ವಾಕ್ಯಗಳನ್ನು ಹೆಣೆಯುವ ಕಲೆ ರೂಢಿಸಿ ಕೊಂಡರೆ ಸಾಲದು, ಕನಿಷ್ಠ ಓದು ಬರಹದ ವಿದ್ಯೆ ಮಾತ್ರ ಸಾಲದು. ಪಕ್ಷ ಅಥವಾ ಸಿದ್ಧಾಂತ ನಿಷ್ಠೆ ತೋರಿಸುವ ‘ಪಟ್ಟೆ’ಗಳು ಸಹ ಇರಕೂಡದು   ಪತ್ರಕರ್ತನಲ್ಲಿ. ಬದಲಿಗೆ   ವೃತ್ತಿ ಪರತೆಯ ಗುಣಗಳು ಇರಬೇಕು, libel and libel law ಇವುಗಳ ಜ್ಞಾನವೂ ಇರಬೇಕು. ಓಹ್, ಇದು ಒಂದು ಬಹು ದೊಡ್ಡ ಬೇಡಿಕೆಯಾಗಿ ತೋರಬಹುದೇನೋ ಪತ್ರಕರ್ತರ ವೇಷ ತೊಟ್ಟ ಜನರಿಗೆ.

ತಮ್ಮ ಬಗೆಗಿನ ವಿಜಯ್ ಮಲ್ಯರವರ ಲೆಕ್ಕಾಚಾರ ತಪ್ಪು ಎಂದು ಜನರಿಗೆ ಮನವರಿಕೆ ಮಾಡುವ ಕೆಲಸ ಈ ಪತ್ರಕರ್ತ ಸಮೂಹ ಮಾಡೀತೆ?

 

ನಮ್ಮ ರಾಜ್ಯದ ರಾಜಕಾರಣ

ಕರ್ನಾಟಕದ ಕಿಣ್ಣರು ಗಣಿತ ಮತ್ತು ಜಾಗ್ರಫಿ ವಿಷಯಗಳಲ್ಲಿ ಬೇರೆಲ್ಲಾ ರಾಜ್ಯಗಳ ಕಿಣ್ಣ ರಿಗಿಂತ ಮುಂದೆ ಅಂತೆ – “ಅಧ್ಯಯನ” (ದಿನವೂ ನಾವು ಓದಿದ ದಿನಪತ್ರಿಕೆಯ ಅಧ್ಯಯನ).

ಗಡಗಡ ನಡುಗಿಸುವ ಗಣಿತ, ಜೋಂಪು ಹತ್ತಿಸುವ ಜಾಗ್ರಫಿ ವಿಷಯಗಳಲ್ಲಿ ನಮ್ಮ ಮಕ್ಕಳು ಮುಂದು ಎಂದರೆ ನಮ್ಮ “ಗುರು ದೇವೋಭವಃ” ಸಮುದಾಯ ಹಗಲು ರಾತ್ರಿ ಸಂಶೋಧನೆ ಮಾಡಿ ಹೊಸತನ್ನೇನಾದರೂ ಕಂಡು ಹಿಡಿದಿರಬೇಕು ಗಣಿತ ವನ್ನು amusing ಮಾಡಲು ಮತ್ತು ಜಾಗ್ರಫಿ ಯನ್ನು interesting ಆಗಿಸಲು. ಬಿಡ್ತು ಅನ್ನಿ, ಹಾಗೇನಿಲ್ಲ. ಸರಕಾರ ವಿದ್ಯೆ ಕೊಡುವ ಸಮುದಾಯಕ್ಕೆ ಕೊಡುವ ಸಂಬಳದ ಚೆಂದ ನೋಡಿದರೆ ಅಂಥ ಕಾಲ ಇನ್ನೂ ಬಹು ದೂರ. ಕಲಿಕೆಯಲ್ಲಿ innovation ತರುವ ಮಾತಿರಲಿ, ಬಾರುಕೋಲಿನ ಪ್ರಯೋಗ ಇಲ್ಲದೆ ಪಾಠ ಹೇಳಿದ್ದರೆ ಸಾಕಿತ್ತು ಶಿಕ್ಷಕರು. ಗಣಿತದಲ್ಲೂ, ಭೂಗೋಳದಲ್ಲೂ ನಮ್ಮ ಮಕ್ಕಳು ಮುಂದೆ ಎಂದ ಮಾತಿನಲ್ಲಿ ರಾಜಕಾರಣ ಅಡಗಿದೆ. ಪ್ರತಿಯೊಂದರಲ್ಲೂ ರಾಜಕಾರಣ ಕಾಣುವ ಸಮಾಜ ತಾನೆ ನಮ್ಮದು?

ಕರ್ನಾಟಕದ ರಾಜಕೀಯ ದಿನದಿಂದ ದಿನಕ್ಕೆ ಬಗೆಯ ಬಗೆಯ ಮನೋರಂಜನೆಯನ್ನು ಒದಗಿಸುತ್ತಿದ್ದು ಬಿಡುವಿನ ಸಮಯವನ್ನು ವ್ಯರ್ಥ ಮಾಡಲು ಟೀವೀಯ ಮೊರೆಯೋ, ಅಂತರ್ಜಾಲದ ಜಾಲದಲ್ಲೋ ಬೀಳಬೇಕಿಲ್ಲ ಕನ್ನಡಿಗ. ನಮ್ಮ ರಾಜಕಾರಣ ಎನ್ನುವುದು ನಂಬರ್ ಗೇಂ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಭಾಜಪ ನಿಚ್ಚಳ ಬಹುಮತ ಸಾಧಿಸಿದರೂ ಅದನ್ನು ನೆಮ್ಮದಿಯಾಗಿ ಆಳಲು ಬಿಡಲು ಒಲ್ಲೆ ಎನ್ನುವ ಗುಂಪು ಆಗಾಗ ದೊಡ್ಡ ದೊಡ್ಡ ಸದ್ದನ್ನು ಮಾತ್ರವಲ್ಲ, ಎಲ್ಲಾ ಬಗೆಯ ಟ್ರಿಕ್ಕುಗಳನ್ನು ತನ್ನ ಬಗಲಿನಿಂದ ಎಸೆಯುತ್ತಲೇ ಇರುತ್ತದೆ. ಒಂದೆಂಟು ಅತೃಪ್ತ ಶಾಸಕರನ್ನು ನಂದಿ ಬೆಟ್ಟಕ್ಕೋ, ಅದರಲ್ಲೂ ಅತೃಪ್ತರಾದರೆ ಇನ್ನೂ ಹೆಚ್ಚಿನ excitement ಗಾಗಿ ಗೋವಾ ಪರ್ಯಟನೆ ಗೋ ಕಳಿಸಿ ನಮ್ಮ ಸನ್ಮಾನ್ಯ ಮು. ಮಂತ್ರಿಗಳು ಕಣ್ಣೇರು ಹಾಕುವಂತೆ ಮಾಡಿ sadist ಮಜಾ ತೆಗೆದು ಕೊಳ್ಳೋದು. ದಿನ ಬೆಳಗಾದರೆ ಸಾಕು ಅಂಕಿ ಸಂಖ್ಯೆಗಳು ಏರು ಪೇರಾಗುತ್ತವೆ, ಥೇಟ್ ನಮ್ಮ BSE Index ಥರ. ಸ್ಟಾಕ್ ಎಕ್ಸ್ಚೇಂಜ್ ರೀತಿ. ಬೆಳಿಗ್ಗೆ ಸಂಖ್ಯೆಯಲ್ಲಿ ವೃದ್ಧಿ ಕಂಡರೆ ಸಂಜೆಯಾಗುತ್ತಲೇ ಇಳಿತ. ಅಥವಾ “ವೈಸೀ ವರ್ಸಾ”. ಹೀಗೆ ದಿನವೂ ಕೂಡುತ್ತಾ, ಕಳೆಯುತ್ತಾ ಏರುಪೇರಾಗುವ, ಸಂಖ್ಯೆಗಳನ್ನು ನೆನಪಿನಲ್ಲಿ ಇಡಬೇಕು, ಇಲ್ಲದಿದ್ದರೆ ಎರಡು ತಿಂಗಳಿಗೊಮ್ಮೆ ಬರುವ ಟೆಸ್ಟು ಗಳಲ್ಲಿ ನಮ್ಮ ಮು. ಮಂತ್ರಿ ಯಾರು ಎಂದರೆ ತಿಳಿದಿರಲೇಬೇಕಲ್ಲ. ಇಲ್ಲದಿದ್ದರೆ ಸಿಗುವ ಒಂದೇ ಒಂದು ಅಂಕಕ್ಕೂ ಚ್ಯುತಿ. ಹೀಗೆ ಸಂಖ್ಯೆಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳಲು ಹೆಣಗಾಡುತ್ತಾ ಗಣಿತವನ್ನು ಕರಗತವಾಗಿಸಿ ಕೊಂಡರು ನಮ್ಮ ಮಕ್ಕಳು. ಅದರೊಂದಿಗೆ ಸಂಭವನೀಯತೆ ಎನ್ನುವ ವಿಷ್ಯ ಕೂಡಾ.

ಒಂದು ಡೇರೆಯಿಂದ ಮತ್ತೊಂದು ಡೇರೆ ಗೆ ಕೆಲವು ಶಾಸಕರು ಜಿಗಿದರೆ ಯಾರು ಮು. ಮಂತ್ರಿ ಆಗಬಹುದು ಎನ್ನುವ ಸಂಭವನೀಯತೆ. ಸಂಭವನೀಯತೆಯಲ್ಲಿ ನಾಣ್ಯ ಚಿಮ್ಮುವ ಉದಾಹರಣೆ ಕೊಟ್ಟರೆ ರಾಜಕಾರಣದ ಸಂಭವನೀಯತೆಯಲ್ಲಿ ಡೇರೆ ಜಿಗಿಯುವ ಉದಾಹರಣೆ. ಅತೃಪ್ತ ಸದಸ್ಯರನ್ನು round the world, ಕ್ಷಮಿಸಿ, round the state ಟೂರಿಗೋ, ಅಥವಾ across the sate sojourn ಗೋ ಕಳಿಸಿದಾಗ ಜಾಗ್ರಫಿ ಸಹ ಮೂಡಿ ಬಂತು ತೆರೆಯ ಮೇಲೆ. ಯಾವ ಯಾವ ರೆಸಾರ್ಟ್ ಎಲ್ಲಿದೆ, ಅಡಗುತಾಣಗಳ ವಿಳಾಸ ಇವೆಲ್ಲವನ್ನೂ ತಿಳಿದಾಗ ಜಾಗ್ರಫಿ ಸಹ ಕರಗತವಾಗದೆ ಇದ್ದೀತೆ? ಅಷ್ಟೇ ಅಲ್ಲ, ಟೂರ್ ಹೊಡೆಸಿ, ಆಳಲು ಬೇಕಾದ ಮಾಂತ್ರಿಕ ಸಂಖ್ಯೆಯನ್ನು ಹೊಂದಿಸಿ, ನಂತರ ನಮ್ಮ ದೇಶದ ಅಧ್ಯಕ್ಷೆ ಯವರ ಹತ್ತಿರ ಪರೇಡ್ ಸಹ ಮಾಡಿಸಬೇಕು. ಅದಕ್ಕೆ ದಿಲ್ಲಿಗೆ ಹೋಗಬೇಕು. ಜಾಗ್ರಫಿ ಜ್ಞಾನ ವಿಸ್ತಾರ ಆಯಿತು ನೋಡಿ. ಆ ಪರೇಡ್ ಸಮಯ ಬರೀ ಮು. ಮಂತ್ರಿಗಳೂ, ಶಾಸಕ ಮಹೋದಯರೂ ಇದ್ದರೆ ಸಾಲದು, ಅವರನ್ನು ಕಾಯಲು ಪಕ್ಷದ ವತಿಯಿಂದ ವರಿಷ್ಠ ರೂ ಬರಬೇಕು, ವಿರೋಧೀ ಪಾಳಯ ದೂರದಲ್ಲಿ ನಿಂತು ಗೋವಾದ ಗೋಲ್ದನ್ ಬೀಚ್ ನ ಚಿತ್ರವನ್ನೋ, ನಾನ್ ಸ್ಟಾಪ್ ಅಂಕೆಗಳಿರುವ ಚೆಕ್ ನ ಫೋಟೋ ಕಾಪಿಯನ್ನೋ ತೋರಿಸಿ ಈಚೆ ಕಡೆ ಎಳೆದುಕೊಂಡು ಬಿಟ್ಟರೆ? ಪರೇಡ್ ಒಂದು ರೀತಿಯ ಮುಜುಗರ ತರುವ ಕಪ್ಪೆ ತೂಕವಾಗಿ ಪರಿವರ್ತನೆ ಆಗಬಾರದು ನೋಡಿ.

ನಮ್ಮ ಈ ರಾಜಕೀಯ ಅವ್ಯವಸ್ಥೆಗೆ ಪ್ರಜಾಪ್ರಭುತ್ವ ಎನ್ನುವ ಹೆಸರೇ ಒಂದು ‘misnomer’. ಅಪಪ್ರಯೋಗ. ಈ ವ್ಯವಸ್ಥೆಯಲ್ಲಿ ಪ್ರಜೆ ಪ್ರಭುವಾಗೋದು ಮತದಾನ ಕೇಂದ್ರದ ಕಡೆಗಿನ ನಡಿಗೆ ವೇಳೆ ಮಾತ್ರ. ಅವನನ್ನು ಕಳ್ಳ ನಗೆಯಿಂದ, ಓಲೈಸಲು ಡಜನ್ ಗಟ್ಟಲೆ ಜನ. ಮತದಾನವಾಯಿತೋ, ಆ ಕೂಡಲೇ ಅವನು ಹತಾಶ ಏಕಾಂಗಿ, ಮುಂದೆ ಅನಾವರಣಗೊಳ್ಳಲಿರುವ ನಾಟಕದ ಪರದೆ ಮುಂದೆ.