ಸಮಸ್ಯೆಯ ಜಾಡನ್ನು ಹಿಡಿದು…..

Alexis de Tocqueville, ೧೯ ನೇ ಶತಮಾನದ ಫ್ರೆಂಚ್ ದಾರ್ಶನಿಕ ತನ್ನ Democracy in America ಪುಸ್ತಕದ ಮೂಲಕ ವಿಶ್ವ ಪ್ರಸಿದ್ಧಿ ಪಡೆದ. ಫ್ರೆಂಚ್ ಕ್ರಾಂತಿಯ ಬಗ್ಗೆ ಬರೆಯುತ್ತಾ The old regime and the revolution ಪುಸ್ತಕದಲ್ಲಿ ಫ್ರೆಂಚ್ ಕ್ರಾಂತಿ ವಾಸ್ತವ ಕ್ರಾಂತಿಗಿಂತ ಬಹು ಮೊದಲೇ ಶುರುವಾಗಿತ್ತು ಎಂದು ವಾದವನ್ನು ಮಂಡಿಸಿದ. ೧೮ ನೇ ಶತಮಾನದ ಕೊನೆಯಭಾಗದಲ್ಲಿ ನಡೆದ ಫ್ರೆಂಚ್ ಕ್ರಾಂತಿಗೆ ದಶಕಗಳ ಮೊದಲೇ ಭೂಗತ ಕಂಪನಗಳು ಶುರುವಾಗಿತ್ತು ಹಾಗೂ ಅಸಮಾನತೆ ಮತ್ತು ಅನ್ಯಾಯದ ಕಾರಣ ನಡೆದ ಈ ಕ್ರಾಂತಿಯ ಸುಳಿವನ್ನು ಜನ ಮೊದಲೇ ಅರಿತು ಜಾಣತನದಿಂದ ಪ್ರತಿಕ್ರಯಿಸಿದ್ದರೆ “ಭೀತಿಯ ಆಳ್ವಿಕೆ” (Reign of Terror) ಯನ್ನು ತಡೆಗಟ್ಟಬಹುದಿತ್ತು ಎಂದೂ ಹೇಳಿದ.

ಮೇಲಿನ ಹೇಳಿಕೆಯಲ್ಲಿ ನಮಗೆ ನಮ್ಮ ಮಧ್ಯೆಯೇ ಸಂಭವಿಸುತ್ತಿರುವ ಘಟನೆಗಳೊಂದಿಗೆ  ಸಾಮ್ಯತೆ ಕಾಣುತ್ತಿದೆಯೇ? ನಿನ್ನೆ ನಡೆದ ಬರ್ಬರ ಸಾಮೂಹಿಕ ಹತ್ಯೆಗೆ ಕಾರಣರಾದ ಮಾವೋ ಗಳು ನಮಗೆ ಈ ಸಾಮ್ಯತೆಯನ್ನು ಒದಗಿಸುತ್ತಿಲ್ಲವೇ? ಕಾಡಿನಿಂದ ಆರಂಭವಾದ ಸಾವಿನ ಛಾಯೆ ಈಗ ನಗರಗಳನ್ನೂ ಆವರಿಸತೊಡಗಿದೆ. ಎಲ್ಲರಿಗೂ ತಿಳಿದಂತೆ ಈ ನಕ್ಸಲ್, ಮಾವೋ ಮುಂತಾದ ಚಳುವಳಿಗಳು ಬಹು ಹಿಂದೆಯೇ ಶುರುವಾಗಿದ್ದವು. ಆದರೆ ಪ್ರಪಂಚದ ಎಲ್ಲಾ ಸರಕಾರಗಳಂತೆ ನಮ್ಮ ಸರಕಾರವೂ ಕಣ್ಣು ಬಿಟ್ಟಿದ್ದು ಹಿಂಸೆ ಕೈ ಮೀರಿದಾಗ, ರಕ್ತ ದ ಹೊಳೆ ಹರಿಯಲು ತೊಡಗಿದಾಗ. ಝರಿಯ ರೀತಿ ಆರಂಭವಾದ ಈ ಚಳುವಳಿ ರಕ್ತದ ಕಾಲುವೆಯನ್ನು ಹರಿಬಿಟ್ಟಾಗ ನಾವು ಕಂಗಾಲು. ನಿಜವಾಗಿ ಹೇಳಬೇಕೆಂದರೆ ಈ ಚಳುವಳಿಯನ್ನು ಹತ್ತಿಕ್ಕಲು ಬೇಕಾದ ಯಾವ ಪರಿಹಾರವೂ ನಮ್ಮಲ್ಲಿಲ್ಲ. ಇದ್ದಿದ್ದರೆ ನಮ್ಮ ಗಡಿ ಭದ್ರತಾ ಪಡೆಯ ಸೈನಿಕರು ದಂತೆವಾಡ ದಲ್ಲಿ ಜೀವ ತೆತ್ತಾಗಲೇ ಹೊರಬರುತ್ತಿತ್ತು ಪರಿಹಾರದ ಅಸ್ತ್ರ. ಈ ಸಾಮಾಜಿಕ ಸಮಸ್ಯೆಗೆ  ಸೈನಿಕ ಪರಿಹಾರವಾಗಲಿ, ಸಾಮಾಜಿಕ ಪರಿಹಾರವಾಗಲಿ ನಮಗೆ ಕಾಣುತ್ತಿಲ್ಲ. ನಕ್ಸಲ್ ಪೀಡೆಯನ್ನು ಬಲಿ ಹಾಕಲು ಸೈನ್ಯವನ್ನು ಕಾನನಕ್ಕೆ ಬಿಡಲು ಸಾಧ್ಯವಿಲ್ಲ ಎಂದು ನಾವು ಅರಿತಿದ್ದಾಯಿತು ಶ್ರೀಲಂಕೆಯಲ್ಲಿ. ತಮಿಳು ಭಯೋತ್ಪಾದಕರನ್ನು ಸದೆ ಬಡಿಯಲು ರಾಜೀವ್ ಗಾಂಧೀ ಆತುರ ತೋರಿಸಿ ಬೆರಳು ಕಚ್ಚಿ ಕೊಂಡಿದ್ದು ಮಾತ್ರವಲ್ಲ, ಶ್ರೀಲಂಕೆಯ ಅಂದಿನ ಅಧಕ್ಷ J.R. ಜಯವರ್ಧನೆ ಯವರ ರಾಜಕೀಯ ದಾಳಕ್ಕೆ ಬಲಿಯಾಗಿ, ಅಲ್ಲಿನ ಸೇನೆಯ ದ್ರೋಹದಿಂದಲೂ, ಕಾಡಿನಲ್ಲಿ ಹೋರಾಡಿದ ಅನುಭವದ ಕೊರತೆಯೂ ನಾವು ಮುಖ ಭಂಗ ಅನುಭವಿಸುವಂತೆ ಮಾಡಿತು. ಕಾಡಿನಲ್ಲಿ ಅವಿತು ಹೋರಾಡುವ ನಕ್ಸಲರು vietnam ನ “ವಿಎಟ್ ಕಾಂಗ್” ಥರದ ಹೋರಾಟಗಾರರು. ಸಾಮಾನ್ಯ ಜನ ಯಾರು, ನಕ್ಸಲರು ಯಾರು ಎಂದು ಹೇಳಲು ಸಾಧ್ಯವಿಲ್ಲ. vietnam ನಲ್ಲಿ ಅಮೇರಿಕಾ ಸೋತು ಸುಣ್ಣವಾಗಿದ್ದು ಈ ವ್ಯತ್ಯಾಸದ ಅರಿವಿಲ್ಲದೆ ಇದ್ದುದರಿಂದ. ಆದ್ದರಿಂದ ಸರಕಾರ ಯಾವುದೇ ಕಾರಣಕ್ಕೂ ನಮ್ಮ ಸೈನ್ಯವನ್ನು ಕಾಡಿಗೆ ಕಳಿಸಬಾರದು. ದುಡುಕಿನ, ಮೂರ್ಖ ಸಾಹಸಕ್ಕೆ ನಮ್ಮ ಸೈನಿಕರು ಬಲಿಯಾಗುವುದು ಬೇಡ.  

ಶ್ರೀಮಂತ ಅತಿ ಶ್ರೀಮಂತನಾಗುತ್ತಿರುವುದು ಮತ್ತು ಬಡವ ದಿನೇ ದಿನೇ ಬಡತನದ ಪಾತಾಳಕ್ಕೆ ಇಳಿಯುತ್ತಿರುವುದು ನಮಗೆ ತಿಳಿದ ಸತ್ಯ. ಆದರೆ ಬಂಡವಾಳಶಾಹಿ ವ್ಯವಸ್ಥೆಯ ಮೊರೆ ಹೋದ ನಮಗೆ ಝಗ ಝಗಿಸುವ ನಿಯಾನ್ ಬೆಳಕುಗಳು, ಗಗನ ಚುಂಬಿ ಗೋಪುರಗಳು, ಕೆಲವು fly over ಗಳು ನಮ್ಮ ದೃಷ್ಟಿ ತಪ್ಪಿಸಿದವು. ನಮಗೆ ಟಾಟಾ, ಗೋದ್ರೆಜ್, ಅಂಬಾನಿಗಳಂಥವರ ಶ್ರೀಮಂತಿಕೆ,  ಬಾಲಿವುಡ್ ತಾರೆಯರ ಬದುಕುವ ರೀತಿ ಮೋಡಿ ಮಾಡಿದವು. ಇದೇ ನಿಜವಾದ ಭಾರತ ಎನ್ನುವ ಭ್ರಮೆ ಆವರಿಸಿತು. ಈ ಭ್ರಮೆಗೆ ಆಂಗ್ಲ ಮಾಧ್ಯಮಗಳು, ಕೃತಕ ಬದುಕನ್ನು ವೈಭವೀಕರಿಸುವ ಟಿವಿ ಧಾರಾವಾಹಿಗಳು ನೀರೆರೆದು ನಾವು ಪ್ರಗತಿಯಲ್ಲಿ  ಅಮೆರಿಕೆಯನ್ನು ಹಿಂದಕ್ಕೆ ಹಾಕಲು ಮೂರು ಗಜ ದೂರ ಮಾತ್ರ ಉಳಿದಿರುವುದು ಎಂದು ನಂಬುವಂತೆ ಮಾಡಿದವು. ಆದರೆ ವಾಸ್ತವವೋ? ಜನಸಂಖ್ಯೆಯ ಅರ್ಧಕ್ಕೂ ಹೆಚ್ಚು ಪಾಲು ಒಪ್ಪೊತ್ತಿನ ಕೂಳಿಗಾಗಿ ಹರ ಸಾಹಸ ಮಾಡಬೇಕು. ದಿನೇ ದಿನೇ ಆಹಾರ ಸಾಮಗ್ರಿಗಳ ಬೆಲೆ ಗಗನಕ್ಕೇರಿದವು. ಇಂಟರ್ನೆಟ್ ಯುಗ ಮತ್ತೊಂದು ರೀತಿಯ ಸಮಾಜವನ್ನೇ ಸೃಷ್ಟಿಸಿತು. ಎಂದೂ ಕಾಣದ ಕೇಳದ ದಶಸಾವಿರದಲ್ಲಿ ಎಷ್ಟು ಸೊನ್ನೆಗಳಿವೆ ಎಂದು ಗೊತ್ತಿಲ್ಲದ ಸಮುದಾಯ ಧಿಡೀರನೆ ದೊಡ್ಡ ಮೊತ್ತದ ಸಂಬಳ ಪಡೆದು ಮೆರೆಯಲು ತೊಡಗಿತು. ಚೌಕಾಶಿ ಎಂದರೆ ಒಂದು ಕೀಳು ಪರಿಪಾಠ ಎನ್ನುವ ಮಟ್ಟಿಗೆ ಹೇಳಿದ ಬೆಲೆಗೆ ಸಾಮಾನುಗಳನ್ನು ಕೊಂಡು ಬಡ ಜನರ ಬದುಕನ್ನು ಇನ್ನಷ್ಟು ದುಸ್ತರವಾಗಿಸಿತು. ಈ ರೀತಿಯ ಅಸಹಾಯಕ ಪರಿಸ್ಥಿತಿ ನಕ್ಸಲರಿಗೆ ವರದಾನವಾಗಿ ಪರಿಣಮಿಸಿತು.  ಥಳಕಿನ ಬದುಕು ಶೋಷಣೆ ಎಂದು ಜನರಿಗೆ ಮನವರಿಕೆ ಮಾಡಿಸಿ ಮುಗ್ಧ ಜನ ಶಸ್ತ್ರದ ಮೊರೆ ಹೋಗುವಂತೆ ಮಾಡಿತು.

ಹಿಂಸೆಯಿಂದ ಯಾರಿಗೂ ಲಾಭವಿಲ್ಲ ಎಂದು ಹೊಟ್ಟೆ ತುಂಬಿದವನಿಗೆ, ದೊಡ್ಡ ಕಾರನ್ನು ಪೆಟ್ರೋಲ್ ಬಂಕ್ ನಲ್ಲಿ ನಿಲ್ಲಿಸಿ ಟ್ಯಾಂಕ್ ತುಂಬುವವನಿಗೆ  ಗೊತ್ತು. ಆದರೆ ಹೊಟ್ಟೆಗಿಲ್ಲದೆ ಚೀರಾಡುವ, ತನ್ನ ಪುಟಾಣಿಗಳನ್ನು ವ್ಯರ್ಥವಾಗಿ ಸಮಾಧಾನ ಪಡಿಸಲು ಹೆಣಗಾಡುವವನಿಗೆ ಗೊತ್ತೇ ಈ ಸಾಮಾನ್ಯ ಲಾಜಿಕ್? ದಾರಿ ಕಾಣದೆ ಅಸಹಾಯಕರಾಗಿ ತನ್ನ ಹೊಟ್ಟೆಗಿಲ್ಲದಿದ್ದರೂ ಚಿಂತೆಯಿಲ್ಲ ನಮ್ಮನ್ನು ವಂಚಿಸಿದ ವ್ಯವಸ್ಥೆ ವಿರುದ್ಧ ಹೋರಾಡಿ ರಕ್ತ ಹರಿಸಬೇಕು ಎನ್ನುವುದು ಇವರ ಗುರಿಯಾಯಿತು. ಸಂಪತ್ತನ್ನು ದೋಚಿ ದುರಹಂಕಾರದಿಂದ ಮೆರೆಯುವವರಿಗೆ ತಿಳಿದಿರಲಿಲ್ಲವೇ ಇದೇ ಸಂಪತ್ತು ಅಸೂಯೆಯ ಹಾವಾಗಿ ಬಂದು ಕಚ್ಚೀತು ಎಂದು? ಪಾಪ ಅವರಿಗೆ ತಿಳಿಯುವ ಸಾಧ್ಯತೆ ತುಂಬಾ ಕಡಿಮೆ. surround sound ಮ್ಯೂಸಿಕ್ ಸಿಸ್ಟಂ, ಮತ್ತು ಹೋಂ ಥಿಯೇಟರ್ ನಲ್ಲಿ ಹಾಡು ಕೇಳುತ್ತಾ ಮೈಮರೆಯುವ ಮಂದಿಗೆ ಬಡವನ ಆಕ್ರಂದನ ಮುಟ್ಟದು, ಕೇಳದು. ಅಂದರೆ ಈ ರೀತಿಯ ತಾರತಮ್ಯದ ಬದುಕು ಗೂಳಿಯಾಗಿ ನಮ್ಮ ಮೇಲೆಯೇ ಎರಗದು ಎಂದು ನಮಗೆ ತಿಳಿದಿಲ್ಲ ಎಂದಲ್ಲ. ನಾವೆಷ್ಟೇ ಕೃತಕ ಮುಗ್ಧತೆ ಯನ್ನು ಪ್ರದರ್ಶಿಸಿದರೂ ನಮ್ಮೊಳಗೊಬ್ಬ ಇದ್ದೇ ಇರುತ್ತಾನಲ್ಲವೇ? ಮನಸ್ಸಾಕ್ಷಿ ಎಂಬ “ಗುರು” (inner teacher) ನಮಗೆ ತಿಳಿ ಹೇಳುತ್ತಲೇ ಇರುತ್ತಾನೆ. ಆದರೆ ಹಿತೋಪದೇಶ ಮಾಡುವ ತಂದೆಯನ್ನು, ಹಿರಿಯರನ್ನು ಅವಗಣನೆ ಮಾಡಿ ಬಾಯಿ ಮುಚ್ಚಿಸುವ ರೀತಿ ಈ ಗುರುವಿಗೂ ಇದೇ ಉಪಚಾರವನ್ನು ನಾವು ಕೊಟ್ಟೆವು. ಪರಿಣಾಮ ಈ ರಕ್ತದೋಕುಳಿ. ಏಕಾಏಕಿ ಮಕ್ಕಳು ತಬ್ಬಲಿಯಾಗುತ್ತಾರೆ, ಸುಮಂಗಲಿಯರು ವಿಧವೆಯರಾಗುತ್ತಾರೆ. ವೃದ್ಧ ಪಾಲಕರು ಪೋಷಿಸುವ ಮಕ್ಕಳನ್ನು ಕಳೆದುಕೊಂಡು ಪರಿತಪಿಸುತ್ತಾರೆ. ಭಯ, ಅಸಹಾಯಕತೆ ಎಲ್ಲೆಲ್ಲೂ ಆವರಿಸುತದೆ.

ನಿಸರ್ಗ calm before storm ರೀತಿ ನಮ್ಮ ನ್ನು ಅಚ್ಚರಿಗೊಳಿಸುತ್ತದೆ. ಆದರೆ ನಾವು ಕಾಣುತ್ತಿರುವ ನಕ್ಸಲ್ ಪ್ರತಿರೋಧಗಳು ಏಕಾಕಿ ಬಂದು ಬಿದ್ದಿದ್ದಲ್ಲ. ಚಿಕ್ಕ ಚಿಕ್ಕ ಕಂಪನಗಳು ಆಗಾಗ ಕೇಳಿ ಬರುತ್ತಲೇ ಇದ್ದವು. ಬಹುಶಃ ನಮಗದು ಸಂಗೀತದ drum ನ ಸದ್ದಿನಂತೆ ಕೇಳಿಸಿತು. ಮೇಲೆ ಹೇಳಿದಂತೆ ದೊಡ್ಡ ಮಟ್ಟದ ಹಿಂಸೆ ಆದಾಗಲೇ ಸರಕಾರ ತೂಕಡಿಕೆಯಿಂದ ತಲೆ ಎತ್ತುವಂತೆ ಮಾಡುವುದು. ತಲೆ ಎತ್ತಿದ ಮೇಲೋ? ತಲೆ, ಬಾಲ ಇಲ್ಲದ, ನಿಲ್ಲದ ಹರಟೆ. ಒಣ ಜಂಭ, ಒಣ ಬೆದರಿಕೆ. ಒಂದಿಷ್ಟು ಟಾಕ್ ಷೋ ಗಳು. ನಿವೃತ್ತ ಅಧಿಕಾರಿಗಳನ್ನು ಕರೆಸಿ ಒಂದಿಷ್ಟು ಚರ್ಚೆ, ನಂತರ ಮಹೋಗನಿ ಹಲಗೆಗಳಿಂದ ಆವೃತ್ತವಾದ, ಹವಾನಿ ಯಂತ್ರಿತ ಕಚೇರಿಗೆ ಹಿಂದಿರುಗಿ ಮತ್ತೊಂದು ತೂಕಡಿಕೆಗೆ ಸಿದ್ಧತೆ. ಇವರು ತೂಕಡಿಸುತ್ತಿರುವಾಗ ಅಮಾಯಕರು ರೈಲು ಹಳಿಗಳ ಮೇಲೆ ತಮ್ಮ ರಕ್ತ ಹರಿಬಿಟ್ಟು ಕೊಂಡು ಪ್ರಾಣ ಕಳೆದುಕೊಳ್ಳುವುದು. ಒಂದು ರೀತಿಯ vicious cycle.     

ಯಾವುದೇ ವಿವಾದ, ಸಮಸ್ಯೆ ಪರಿಹರಿಸಲು ಮಾತುಕತೆ ಬೇಕು. ಮಾತುಕತೆ ಎಂಥ ಸನ್ನಿವೇಶಗಳಿಗೂ ಒಂದು ದಿವ್ಯ ಮಂತ್ರ. ಜನ ಪರಸ್ಪರ ಮಾತನಾಡಬೇಕು. ಕಿವುಡತನ ಪ್ರದರ್ಶಿಸದೆ ಸವಾಧಾನವಾಗಿ ಒಬ್ಬರನ್ನೊಬ್ಬರು  ಅರಿಯಲು ಆರಂಭಿಸಬೇಕು. ಈ ಪ್ರಕ್ರಿಯೆ ಸಮಯ ತೆಗೆದು ಕೊಂಡರೂ ಆ ಸಮಯ ವ್ಯರ್ಥವಾಗಿ ಹೋಗುವುದಿಲ್ಲ.    

ಕ್ಷಿಪಣಿ ಉಡಾವಣೆಗಳು, ಚಂದ್ರಯಾನ, ಕಾಮನ್ ವೆಲ್ತ್ ಕ್ರೀಡೆಗಳು ಹಸಿದ ಜನರಿಗೆ ಒಪ್ಪೊತ್ತಿನ ಅನ್ನವನ್ನೋ, ಜೀವರಕ್ಷಕ ಔಷಧಿಗಳನ್ನೋ ಪೂರೈಸಲಾರವು. ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಖಾಯಮ್ ಸದಸ್ಯತ್ವ ದಿಂದ ದೊಡ್ಡ ಲಾಭವೇನೂ ಇಲ್ಲ. ನಮ್ಮ ego ವನ್ನು ಇನ್ನಷ್ಟು ಉಬ್ಬಿಸುತ್ತದೆ ಅಷ್ಟೇ. ಆಳುವವರು ಬಡವರ, ಅವಕಾಶ ವಂಚಿತರ ಹಿತದೃಷ್ಟಿಯ ಕಡೆ ತಮ್ಮ ದೃಷ್ಟಿ ನೆಡಬೇಕು. ಕೈಗಾರಿಕೋದ್ಯಮಿಗಳ, ಅಗರ್ಭ ಶ್ರೀಮಂತರ ಕೈಗಳಿಂದ “ಮದ್ಯ ತುಂಬಿದ ಪೆಗ್ಗು” ಗಳನ್ನು ಕಸಿದು ಒಂದು ಪರಿಹಾರಕ್ಕೆ ಅವರನ್ನೂ ಎಳೆದು ತರಬೇಕು. ತೆರಿಗೆ ವಂಚಿಸಿ ಮತ್ತು ತಮಗೆ ತೋಚಿದ ದಾರಿ ಹಿಡಿದು ಸಂಪತ್ತು ದೋಚುವವರಿಗೆ ಸಾಮಾಜಿಕ ಜವಾಬ್ದಾರಿ ಸಹ ಇರಬೇಕು. ಕ್ಷಿಪಣಿಗಳು ತಮ್ಮ ಘಳಿಗೆಗಾಗಿ ಇನ್ನಷ್ಟು ಸಮಯ ಕಾಯಲಿ. ಹಸಿದ ಉದರಕ್ಕೆ ಸಮಯ ಎನ್ನುವುದ ಜೀವನಾಡಿ. ಇನ್ನಷ್ಟು ಸಮಯ ವ್ಯರ್ಥಗೊಳಿಸದೆ ಎಲ್ಲಾ ರಾಜಕೀಯ ಪಕ್ಷಗಳನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಒಂದು ನಿರ್ದಿಷ್ಟ ಕಾರ್ಯ ಸೂಚಿಗೆ ಅಂತಿಟ್ಟುಕೊಂಡು ಬಡವರ, ನಿರ್ಗತಿಕರ ಆಕಾಂಕ್ಷೆ ಗಳನ್ನು ನೆರವೇರಿಸುವತ್ತ ಸರಕಾರ ಗಮನ ನೀಡಬೇಕು. ಅಲ್ಲಿಯವರೆಗೆ ನಕ್ಸಲರನ್ನು ಗಾಂಧೀವಾದಿಗಳು ಎಂದೆಲ್ಲಾ ಬಣ್ಣಿಸಿ ಯಾರಿಗೂ ಪ್ರಯೋಜನ ತಾರದ ಲೇಖನಗಳನ್ನ ಪ್ರಕಟಿಸಿ ಪರಿಸ್ಥಿತಿಯನ್ನು ಇನ್ನಷ್ಟು ಗೋಜಲುಗೊಳಿಸುವ ಬುದ್ಧಿವಂತರು ತಮ್ಮ ಲೇಖನಿಗೆ ಕಡಿವಾಣ ಹಾಕಲಿ.

* ಹೆಣ್ಣಿಗೆ ಅಭಯ, ಅಬಾಯಾ

ಇತ್ತೀಚೆಗೆ ರಾಜ್ಯದಲ್ಲಿ ಕೋಲಾಹಲ. ಮುಸ್ಲಿಂ ಮಹಿಳೆಯರು, ತಮ್ಮಿಷ್ಟದ ಪ್ರಕಾರ, ಹಕ್ಕುಬದ್ಧವಾಗಿ ಧರಿಸುವ, ಬುರ್ಖಾ ಎಂದು ಕರೆಯಲ್ಪಡುವ, (ಅರಬ್ ದೇಶ ಗಳಲ್ಲಿ “ಅಬಾಯಾ” ಎನ್ನುತ್ತಾರೆ)   “ಹಿಜಾಬ್” ದೊಡ್ಡ ಅನಾಹುತವನ್ನೇ ಸೃಷ್ಟಿಸಿತು.  ತನ್ನ ಕೂದಲನ್ನು ಮರೆಮಾಡಲು ಉಪಯೋಗಿಸುವ ಒಂದು ತುಂಡು ಬಟ್ಟೆ ಇಷ್ಟೊಂದು ದೊಡ್ಡ ವಿವಾದವನ್ನು ಸೃಷ್ಟಿಸುತ್ತದೆ ಎಂದು ಯಾರೂ ಅಂದು ಕೊಂಡಿರಲಿಲ್ಲ, ಮುಸ್ಲಿಂ ಮಹಿಳೆಯಂತೂ ಕನಸಿನಲ್ಲೂ ಕಂಡಿರಲಿಕ್ಕಿಲ್ಲ ದೊಂಬಿಯಿಂದ  ಉಂಟಾದ ಈ ರಕ್ತಸಿಕ್ತ  ಚಿತ್ರಣವನ್ನು. 

ಮುಸ್ಲಿಂ ಮಹಿಳೆ ತನ್ನ ಶರೀರವನ್ನು ಪ್ರದರ್ಶನಕ್ಕಿಡದೆ ಮರ್ಯಾದೆಯಿಂದ, ತನ್ನನ್ನು ಅನಾವಶ್ಯಕ ನೋಟ ಬೀರುವ ಕಣ್ಣುಗಳಿಂದ ರಕ್ಷಿಸಿಕೊಳ್ಳುವುದು ಸುಶಿಕ್ಷಿತ ಸಮಾಜಕ್ಕೆ ಮುಳುವಾಗಿ ಕಂಡಿತು. ಕಾಣದೆ ಏನಾದೀತು ಹೇಳಿ, ಬಿಕಿನಿ ಎಂದು ಕರೆಸಿಕೊಳ್ಳುವ ಒಂದು ತುಂಡು ಬಟ್ಟೆ ಉಟ್ಟು ಸಮುದ್ರ ತೀರದ ಮೇಲೆ “ನೀರೆ” ನಡೆದಾಡಿದರೆ ಆಕೆ ಅಧುನಿಕ ಮನೋಭಾವವುಳ್ಳ ಹೆಣ್ಣು ಎಂದು ಪುರಸ್ಕಾರ. ಅದು ಸಲ್ಲದು, ನನ್ನ ಶರೀರ ನನ್ನ ಮಾನ, ಪರ ಪುರುಷನ ಕಣ್ಣುಗಳ ತಣಿಸಲು ಅಲ್ಲ ಎಂದರೆ ಅದು ಕೂಡದು. ಅದು ಹೆಣ್ತನಕ್ಕೆ ಆಗುವ ಅಪಮಾನ. ಹೆಣ್ಣಿನ ಶೋಷಣೆ. ಮತಾಂಧತೆಯ ಪರಾಕಾಷ್ಠೆ. islam is a regressive religion. ಬೇಕಾದ ರೀತಿಯಲ್ಲಿ ವ್ಯಾಖ್ಯಾನ. ಕಪಿಯ ಕೈಗೆ ಸಿಕ್ಕ ಮಾಣಿಕ್ಯವಾಯಿತು ಲೇಖನಿ.  ಓರ್ವ ಹೆಣ್ಣಿಗೆ ತಾನು ಏನನ್ನು ಉಡಬೇಕೆಂದು ಹೇಳಲು ಹೊರಗಿನವರ ಅಪ್ಪಣೆ. ಪುರುಷನೊಬ್ಬ ಅಷ್ಟೊಂದು ಶುದ್ಧ ಹಸ್ತದವನಾಗಿದ್ದರೆ, ಎಲ್ಲರೂ ಸಚ್ಚಾರಿತ್ರ್ಯ ದವರೇ ಆಗಿದ್ದರೆ ಏಕೆ ಬೇಕು ಮಹಿಳೆಯರಿಗೆ ವಿಶೇಷ ರೈಲು, ಏಕೆ ಬೇಕು ಮಹಿಳೆಯರಿಗೆ ಪ್ರತ್ಯೇಕ ಸರತಿ, ಮಹಿಳೆಯರಿಗೆ ಪ್ರತ್ಯೇಕ ಹಾಸ್ಟೆಲ್ಲುಗಳು? ಕೇರಳದಲ್ಲಿ ಬಸ್ಸಿನಲ್ಲಿ ಮಹಿಳೆಯರು ಹಿಂದಿನ ಸಾಲಿನಲ್ಲಿ ಕೂರಬೇಕು, ಏಕೆ?

ಅಚ್ಚರಿಯ ಸಂಗತಿ ಏನೆಂದರೆ ಮುಸ್ಲಿಂ ಮಹಿಳೆ ಧರಿಸುವ ಹಿಜಾಬ್ ನ ಬಗ್ಗೆ ವಿಶೇಷ ಕುತೂಹಲ. ಒಂದು ರೀತಿಯ ಕಾಳಜಿ. ಆಕೆಯನ್ನು ಕತ್ತಲ ಕೂಪದಿಂದ ಹೊರತರುವ ಉತ್ಕಟೇಚ್ಚೆ. ಈ ಕಾಳಜಿ, ನೋವು ಗಲಭೆಗಳ ಸಂದರ್ಭದಲ್ಲಿ ಅತ್ಯಾಚಾರಕ್ಕೊಳಗಾದ  ಮಹಿಳೆಯರ ಬಗ್ಗೆ ಇರಲಿಲ್ಲ. ಇಂಥ ಘಟನೆಗಳ ಬಗ್ಗೆ ಯಾವುದಾದರೂ ಮಹಿಳಾ ಸಂಘಟನೆಗಳು ಸೊಲ್ಲೆತ್ತಿದ್ದು ಓದಿದ್ದೀರಾ?     

ನಾನು ಹಿಜಾಬ್ ನ ದೊಡ್ಡ ಅಭಿಮಾನಿಯೇನೂ ಅಲ್ಲ. ಆದರೆ ಅದನ್ನು ವಿರೋಧಿಸುವವರ ಪೈಕಿಯವನೂ ಅಲ್ಲ. ನನ್ನ ಪತ್ನಿ ಹಿಜಾಬ್ ಧರಿಸುತ್ತಾಳೆ. ಮದುವೆಯಾದ  ಹೊಸತರಲ್ಲಿ ನಾನು ನನ್ನ ಪತ್ನಿಗೆ ಸಾಂದರ್ಭಿಕವಾಗಿ ಹಿಜಾಬ್ ನ ಅವಶ್ಯಕತೆ ಇಲ್ಲ ಎಂದಾಗ ನನ್ನ ಮಡದಿ ಕೇಳಿದ್ದು, ಏಕೆ ಈ ಪ್ರಶ್ನೆ ನನ್ನನ್ನು ಮದುವೆ ಮುನ್ನ ನೋಡಲು ಬರುವಾಗಲೇ ಕೇಳಬಹುದಿತ್ತಲ್ಲ ಅಂತ. ಅದರ ಅರ್ಥ ಹಿಜಾಬ್ ವಿರೋಧಿಸುವ ನಿನ್ನನ್ನು ನಾನು ವರಿಸುತ್ತಿರಲಿಲ್ಲ ಎಂದು. ಇದು ಆಕೆಯ ಅಪ್ಪ ಹೇಳಿ ಕೊಟ್ಟಿದ್ದರಿಂದಲೋ, ಅಥವಾ ಆಕೆಯ ಅಮ್ಮ ಕಲಿಸಿದ್ದರಿಂದಲೋ ಸಿಕ್ಕಿದ ವಿವೇಕವಲ್ಲ. ತನ್ನ ಸುತ್ತ ಮುತ್ತ ನಡೆಯುವ ಆಗುಹೋಗುಗಳನ್ನು ನೋಡಿ ಕಲಿತ ಪಾಠ. ಅಷ್ಟು ಮಾತ್ರ ಅಲ್ಲ ತಾನು ಆರಾಧಿಸುವ ತನ್ನ ಸೃಷ್ಟಿಕರ್ತನ ಅಪ್ಪಣೆಗೆ ವಿಧೇಯಳಾಗುವ ಅಭಿಲಾಷೆ.

ಹಿಜಾಬ್ ಅಂದರೆ ಶರೀರವನ್ನು ಕಪ್ಪು ಬಟ್ಟೆಯಿಂದ ಸಂಪೂರ್ಣವಾಗಿ ಸುತ್ತಬೇಕು ಎಂದಲ್ಲ. ಮುಖ ಮತ್ತು ಮುಂಗೈಗಳು ಮಾತ್ರ ಕಾಣುವಂತೆ, ಅಂಗ ಸೌಷ್ಠವ ತೋರಿಸದ ಸಡಿಲವಾದ ಉಡುಪು. ಭಾಜಪದ ನಾಯಕಿ ಸುಷ್ಮಾ ಅವರ ಉಡುಗೆ ನೋಡಿದ್ದೀರಾ? ಹೆಚ್ಚು ಕಡಿಮೆ ಆ ರೀತಿಯದೇ. ಹಾಗೆ ಧರಿಸದೆ ಇದ್ದಾಗ ಹೆಣ್ಣು ಬಿಚ್ಚೋಲೆ ಗೌರಮ್ಮ. ಸಾಕಷ್ಟು ಅಂಗಗಳ ಪ್ರದರ್ಶನ ನಡೆದರೆ ಆಧುನಿಕ ಫ್ಯಾಶನ್ ಜೊತೆ ಹೆಜ್ಜೆ ಹಾಕುತ್ತಿರುವ ಮಹಿಳೆ. liberated woman. stylish. modern. chic.  ತನಗೆ ಬೇಕಾದ ರೀತಿಯಲ್ಲಿ, ಕನಿಷ್ಠ ಉಡುಗೆ ತೊಟ್ಟು ನಡೆಯುವ ಮಹಿಳೆಯ ಬಗ್ಗೆ ಮುಸ್ಲಿಂ ಮಹಿಳೆ ಚಕಾರ ಎತ್ತದೆ ಇದ್ದರೆ ಅದೇ ರೀತಿಯದಾದ ಪ್ರತ್ಯುಪಕಾರವನ್ನು ನಿರೀಕ್ಷಿಸಬಾರದೇ ಹಿಜಾಬ್ ಧರಿಸುವ ಹೆಣ್ಣು? ಹೆಣ್ಣನ್ನು ಇಂದು ಅಪ್ಪಟ ವ್ಯಾಪಾರದ ವಸ್ತುವಾಗಿಸಿ, ಗಂಡು ತೊಡುವ ಒಳ ಉಡುಪಿನಿಂದ ಹಿಡಿದು, ಕಾರನ್ನು ಮಾರಲೂ ಹೆಣ್ಣನ್ನು ಉಪಯೋಗಿಸುವ ನಾಗರೀಕತೆಗೆ ಹಿಜಾಬ್ ತೊಡಕಾಗಿ ಕಂಡರೆ, ಹಿನ್ನಡೆಯಾಗಿ ಕಂಡರೆ ಅಚ್ಚರಿಯಿಲ್ಲ.  ಹೆಣ್ಣನ್ನು ಅಶ್ಲೀಲವಾಗಿ ಬಿಂಬಿಸಿ ಪಾನ್ ಪರಾಗ್ ಅಥವಾ ಮತ್ಯಾವುದಾದರೂ ವಸ್ತುವಿನ ಜಾಹೀರಾತು ಇಲ್ಲದ ಚದರಡಿ ಜಾಗ ಸಿಕ್ಕೀತೆ ರಸ್ತೆಯಲ್ಲಿ? ಹೀಗೆ ಹೆಣ್ಣು ಮಕ್ಕಳನ್ನು ವ್ಯಾಪಾರದ, ಭೋಗದ ವಸ್ತುವನ್ನಾಗಿ ಉಪಯೋಗಿಸುವ ಪುರುಷರು ತಮ್ಮ ಮನೆಯ ಹೆಣ್ಣು ಮಕ್ಕಳನ್ನು ಎಷ್ಟು ಜೋಪಾನದಿಂದ ಇಟ್ಟು ಕೊಳ್ಳುತ್ತಾರೆ ನೋಡಿ. 

ಗಂಡು ಮತ್ತು ಹೆಣ್ಣಿಗೆ ಇಸ್ಲಾಂ ಕೆಲವೊಂದು ಶಿಷ್ಟಾಚಾರಗಳನ್ನು ನೀಡಿದೆ. ತಮ್ಮ ದೃಷ್ಟಿಗಳನ್ನು ಬೇಡದ ಕಡೆ ನೆಡದೆ ನೆಲದ ಮೇಲೆ ಇಟ್ಟು, ಸುಶೀಲರಂತೆ ನಡೆಯಲು ಇಸ್ಲಾಂ ಬಯಸುತ್ತದೆ ತನ್ನ ಅನುಯಾಯಿಗಳಿಂದ. ಎಷ್ಟೋ ಪುರುಷರು ಶರೀರವನ್ನು ಬಿಗಿದಪ್ಪುವ ಜೀನ್ಸ್ಗಳನ್ನೂ ಧರಿಸುವುದಿಲ್ಲ.

ಹಿಜಾಬ್ ನ ಬಗ್ಗೆ ಮುಸ್ಲಿಂ ಪಂಡಿತರಲ್ಲೂ ಹಲವು ಅಭಿಪ್ರಾಯಗಳಿವೆ.  ಶರೀರವನ್ನು ಸಂಪೂರ್ಣವಾಗಿ ಹೊದ್ದು ಕಣ್ಣನ್ನು ಮಾತ್ರ ತೋರಿಸಿ ಧರಿಸುವ ಹಿಜಾಬ್ ನ ಅವಶ್ಯಕತೆ ಇಲ್ಲ ಎಂದು ವಿಶ್ವ ಪ್ರಸಿದ್ಧ, ೧೧೦೦ ವರ್ಷಗಳ ಇತಿಹಾಸ ಇರುವ ಇಜಿಪ್ಟ್ ದೇಶದ al-azhar ವಿಶ್ವ ವಿದ್ಯಾಲಯದ ಕುಲಪತಿ ಶೇಖ್ ತಂತಾವಿ ಹೇಳಿಕೆ ನೀಡಿದರು. ಹಾಗೆ ಸಂಪೂರ್ಣವಾಗಿ ಹಿಜಾಬ್ ಧರಿಸುವುದು ಇಸ್ಲಾಮಿಗಿಂತ ಮುಂಚಿನ ರೂಢಿ, ಆ ರೀತಿಯ ಧರಿಸುವಿಕೆಗೆ ಇಸ್ಲಾಮಿನ ಅನುಮೋದನೆ ಇಲ್ಲ ಎಂದು ಹೇಳಿಕೆ ನೀಡಿದ್ದರು. ಆದರೆ ಮುಖವನ್ನು ತೆರೆದಿಟ್ಟು ಧರಿಸುವ ಹಿಜಾಬ್ ಹೆಣ್ಣಿಗೆ ಒಳ್ಳೆಯದು ಎನ್ನುವುದು ಎಲ್ಲ ಪಂಡಿತರ ಅಭಿಪ್ರಾಯ.   

ಹಿಜಾಬ್ ಬಗ್ಗೆ ಪ್ರಸಿದ್ಧ ಸಾಹಿತಿ Naomi Wolf ಹೇಳಿದ್ದು”

Choice is everything. But Westerners should recognise that when a woman in France or Britain chooses a veil, it is not necessarily a sign of her repression, and the feminist on the other side of the veil debate.

“I put on a shalwar kameez and a headscarf in Morocco for a trip to the bazaar. Yes, some of the warmth I encountered was probably from the novelty of seeing a Westerner so clothed; but, as I moved about the market – the shape of my legs obscured, my long hair not flying about me – I felt a novel sense of calm and serenity. I felt, yes, in certain ways, free,”