ಕನಿಷ್ಠ ಉಡುಗೆ, ಗರಿಷ್ಠ ಅಪಾಯ

ನಮ್ಮ ದೇಶದಲ್ಲಿ ಅತ್ಯಾಚಾರ ಹೆಚ್ಚುತ್ತಿರುವುದಕ್ಕೆ ಕಾರಣ ಮಹಿಳೆಯರು ಪ್ರಚೋದನಕಾರಿ ಉಡುಗೆ ತೊಡುತ್ತಿರುವುದು ಎಂದು ಆಂಧ್ರ ಪ್ರದೇಶದ ಪೊಲೀಸ್ ಮುಖ್ಯಸ್ಥ ದಿನೇಶ್ ರೆಡ್ಡಿ ಹೇಳಿಕೆ ನೀಡುವುದರ ಮೂಲಕ ಜೇನುಗೂಡಿಗೆ ಕಲ್ಲು ಬೀಸಿದ್ದಾರೆ. ಈ ಮಾತಿಗೆ ವಿರೋಧ ವ್ಯಕ್ತಪಡಿಸಿದರು ನಮ್ಮ ಸನ್ಮಾನ್ಯ ಗೃಹ ಮಂತ್ರಿಗಳು. ಈ ಹೇಳಿಕೆ ಸರಿಯಲ್ಲ, ಕಾಕ್ಟೇಲ್ ಪಾರ್ಟಿ ಗೆ ಹೋಗುವ ಮಹಿಳೆ ಬಿಕಿನಿಯಲ್ಲಿ ಹೋಗಲಾರಳು, ಸಂದರ್ಭಕ್ಕೆ ಅನುಸಾರವಾಗಿ ಆಕೆ ಬಟ್ಟೆ ತೊಡುವಳು ಎಂದು ಬಡಬಡಿಸಿದರು.

ಗೃಹ ಮಂತ್ರಿಗಳಿಗಿಂತ ಚೆನ್ನಾಗಿ ಸಮಾಜ ಕಾಯುವ ಪೊಲೀಸರಿಗೆ ತಾನೇ ಗೊತ್ತಿರೋದು ಸಮಾಜದ ಆಗುಹೋಗುಗಳು? ಕನಿಷ್ಠ ಬಟ್ಟೆ ತೊಟ್ಟ ಹುಡುಗಿ ಅಥವಾ ಮಹಿಳೆ ಯಾವುದೇ ಕಾರಣದಿಂದಲೂ ಒಳ್ಳೆಯ ಭಾವನೆ ತರಲಾರರು. ನಮ್ಮಲ್ಲಿ ಬರುವ ವಿದೇಶೀ ಮಹಿಳೆಯರನ್ನು ಗಂಡಸರು ನೋಡುವ ರೀತಿ ನೀವು ಗಮನಿಸಿರಲೇಬೇಕಲ್ಲ, ಅದಕ್ಕೆ ಕಾರಣ ಏನು, ಆಕೆಯ ಅಂಗ ಸೌಷ್ಠವದ ಪ್ರದರ್ಶನ. ಮೈ ಪ್ರದರ್ಶನ ನಡೆಸೋ ಮಹಿಳೆಯರು loose character ನವರು ಎಂದು ಬಹಳ ಜನ ತಪ್ಪಾಗಿ ತಿಳಿಯುತ್ತಾರೆ. ನಮಗೇಕೆ ವಿದೇಶೀ  ಜನರ ಉಡುಗೆ ತೊಡುಗೆ ಮೇಲೆ ವ್ಯಾಮೋಹ? ಅವರು ಕನಿಷ್ಠ ಉಡುಗೆ ತೊದಲು ಕಾರಣ ಯಾವಾಗಲೂ ಗಡಿ ಬಿಡಿ ಯಾಗಿರುವ ಅವರ ಚಟುವಟಿಕೆ ಯಾಗಿರಬಹುದು. ನಮ್ಮ ಮಹಿಳೆಯರ ಥರ ಉದ್ದದ ಕೂದಲನ್ನೂ ಸಹ ಬೆಳೆಸೋಲ್ಲ ಅವರು. ಸ್ನಾನದ ನಂತರ ಒಣಗಲು ನಂತರ  ಬಾಚಲು ಸಿಗದ ಸಮಯದ ಕಾರಣ. ಮಹಿಳೆಯರು ಅಂತರಂಗದ ಸೌಂದರ್ಯಕ್ಕೆ  ಪ್ರಾಶಸ್ತ್ಯ ಕೊಟ್ಟರಾಗದೆ? ಈ ವರದಿ ಆಂಗ್ಲ ಪತ್ರಿಕೆಯಲ್ಲಿ ಬಂದಿದ್ದೆ ತಡ, ಪ್ರತಿಕ್ರಿಯೆಗಳ ಮಹಾಪೂರವೇ ಹರಿದು ಬಂತು. ಬಹುತೇಕ ಓದುಗರು ದಿನೇಶ್ ರೆಡ್ಡಿಯವರ ಮಾತಿಗೆ ಸಹಮತ ವ್ಯಕಪಡಿಸಿದರು. ದಿನೇಶ ರೆಡ್ಡಿಯವರ ಪ್ರಕಾರ ಗ್ರಾಮಾಂತರ ಪ್ರದೇಶಗಳಿಗೂ ಅಂಟಿಕೊಂಡಿದೆ ಈ ಪಿಡುಗು. ಪೊಲೀಸ್ ಮುಖ್ಯಸ್ಥರ ಹೇಳಿಕೆಗೆ ಮಹಿಳಾ ಸಂಘಟನೆಗಳು ರೆಡ್ಡಿಯವರನ್ನು chauvinist ಎಂದು ಮೂದಲಿಸಿದವು.

ನಮ್ಮ ಸಂಸ್ಕೃತಿ ಪಾಶ್ಚಾತ್ಯರಿಗಿಂತ ವಿಭಿನ್ನ, ಹಾಗೆಯೇ ಅಂಥಾ ಮಾಡರ್ನ್ ಸಂಸ್ಕಾರಕ್ಕೆ ನಮ್ಮ ಸಮಾಜ ಇನ್ನೂ ತಯಾರಾಗಿಲ್ಲ, ತಯಾರಾಗುವವರೆಗೆ ನಮ್ಮ ಸಂಸ್ಕೃತಿಗೆ ತಕ್ಕುದಾದ ಉಡುಗೆ ಧರಿಸುವುದು ಒಳಿತು.

ವೈ ಎಸ್ಸ್ ಆರ್ – ಒಂದು ಬ್ಲಾಗಾಂಜಲಿ

ನಿಸರ್ಗದ ವೈಪರೀತ್ಯಕ್ಕೋ ಅಥವಾ ಬೇರಾವುದಾದರೂ ನಿಗೂಢ ಕಾರಣಗಳಿಗೋ ಹೆಲಿಕಾಪ್ಟರ್ ಅಪಘಾತದಲ್ಲಿ ಮೃತಪಟ್ಟ ಆಂಧ್ರದ ಜನನಾಯಕ, ಜನಪ್ರಿಯ ಮುಖ್ಯಮಂತ್ರಿ Y.S. ರಾಜಶೇಖರ ರೆಡ್ಡಿಯವರ ಅಕಾಲಿಕ ಮರಣ ಆಂಧ್ರಕ್ಕೆ ಮಾತ್ರವಲ್ಲ ದೇಶಕ್ಕೆ ಒಂದು ದೊಡ್ಡ ಆಘಾತ ಮತ್ತು ನಷ್ಟ. ಯಾರೇ ಸಾವನ್ನಪ್ಪಿದರೂ ತುಂಬಲಾರದ ನಷ್ಟ ಎಂದು ಅನುಕಂಪದ ಮಾತು ಹೇಳುವುದಿದೆ . ಆದರೆ ಈ ಮಾತು ವೈ ಎಸ್ಸ್ ಆರ್ ಅವರಿಗೆ ಅನ್ವಯಿಸುವುದಿಲ್ಲ. ಕಳೆದ ಆರು ವರ್ಷಗಳಲ್ಲಿ ಅವರು ರಾಜ್ಯಕ್ಕೆ ನೀಡಿದ ಕೊಡುಗೆ ಅಪಾರ. ಬಡತನವನ್ನು, ನಿಸ್ಸಹಾಯಕತೆಯನ್ನು ಇವೆಲ್ಲಕ್ಕೂ ಕಾರಣವಾಗುವ ಅಧಿಕಾರಶಾಹಿಯ ಮೊಂಡುತನವನ್ನು ಕಣ್ಣಾರೆ ಕಂಡು ಪರಿಹಾರ ಕಂಡುಕೊಳ್ಳಲು ಸ್ವತಃ ಪ್ರಯಾಣಿಸಿ ಪ್ರಯತ್ನಿಸುವ ರಾಜಕಾರಣಿಗಳು ವಿರಳ. ಕೇವಲ ಇವರ ವರ್ಚಸ್ಸಿನ್ನಿದಲೇ ಆಂಧ್ರ ರಾಜ್ಯವನ್ನು ಕಾಂಗ್ರೆಸ್ ತೆಕ್ಕೆಗೆ ಬೀಳಿಸಿಕೊಂಡ ಈ ಜನನಾಯಕ ಕೇಂದ್ರದ ಕಾಂಗ್ರೆಸ್ ನಾಯಕರುಗಳ ಮದ್ಧ್ಯೆ ಕಂಗೊಳಿಸುತ್ತಿದ್ದರು. ಹಿಂದಿನ ಮುಖ್ಯಮಂತ್ರಿ ಚಂದ್ರಬಾಬು ನಾಯುಡು ಬಿಲ್ ಗೇಟ್ಸ್ ಮುಂತಾದ ಸೊಫ್ಟ್ವೇರ್ ಜನರ ಹಿಂದೆ ಅಲೆದು ಕೇವಲ ಹೈದರಾಬಾದ್ ನಗರವನ್ನು ( ನಮ್ಮ S.M. Krishna ಬೆಂಗಳೂರಿಗೆ ಇದ್ದ ಹಾಗೆ ) ಉದ್ಧಾರ ಮಾಡಿ ರೈತರ ಬಡ ಬಗ್ಗರ ಕಷ್ಟದ ಕಡೆ ಕಿವುಡುತನ ಪ್ರದರ್ಶಿಸಿದರೆ YSR ಹಳ್ಳಿ ಗ್ರಾಮಗಳ ಕಡೆ ದೃಷ್ಟಿ ಹರಿಸಿ ಜನ ಮೆಚ್ಚ್ಚುಗೆ ಸಾಧಿಸಿದರು. ಹೈದರಾಬಾದ್ನ ನೀರಿನ ಕಾರಂಜಿ ಚಿಲುಮೆಗಳನ್ನು, ರೈತರು ಹನಿ ಹನಿ ನೀರಿಗಾಗಿ ಪರಿತಪಿಸುವುದನ್ನು ಹೋಲಿಸಿ ಚುನಾವಣೆ ಗೆದ್ದು ತಾನು ಜನನಾಡಿ ಬಲ್ಲ ರಾಜಕಾರಣಿ ಎಂದು ದೇಶಕ್ಕೆ ತೋರಿಸಿದರು.

ಆದರೆ ವಿಧಿಯ ಆಟವೇ ಹೀಗೆ. ಜನಸೇವೆ ಮಾಡಿ ಲಕ್ಷಗಟ್ಟಲೆ ಜನರ ಮುಖದ ಮೇಲೆ ಮಂದಹಾಸ ತರಿಸುವ ರಾಜಕಾರಣಿಗಳು ಇಂಥ ಅವಘಡದಲ್ಲಿ ಸಾವನ್ನಪ್ಪಿದರೆ ಹೊಡಿ ಬಡಿ ಕಡಿ ಎಂದು ರಕ್ತಪಾತವೇ ನಮ್ಮ ಧರ್ಮ ಎಂದು ಸಮಾಜವನ್ನು ಒಡೆದು ಆಳುವ ರಾಜಕಾರಣಿಗಳು ದೀರ್ಘಾಯುಷಿಗಳಾಗಿ ಭೂಮಿಗೆ ಭಾರವಾಗಿ ಮೆರೆಯುತ್ತಾರೆ.

ಮಣ್ಣಿನ ಮಗ ರಾಜಶೇಖರ ರೆಡ್ಡಿಯವರಿಗೆ ಅಂತಿಮ ವಿದಾಯ ಹೇಳುತ್ತಾ…