ವಾಕರಿಕೆ ತರಿಸುವಂತೆ ಕಾಣುತ್ತೀರಿ…

ನೀವು, ಗಂಡೋ, ಹೆಣ್ಣೋ, ತುಂಬಾ ಮುತುವರ್ಜಿಯಿಂದ ಸುಂದರ ಸೊಗಸಾದ ಉಡುಗೆ, ಒಪ್ಪುವ ಮೇಕಪ್ ತೊಟ್ಟುಕೊಂಡುದುದನ್ನು ನೋಡಿ ಯಾರಾದರೂ ಆಹ್, ತುಂಬಾ ವಾಕರಿಕೆ (sick) ಬರುವಂತೆ ಕಾಣುತ್ತಿದ್ದೀರಿ ಎಂದರೆ ಏನು ಮಾಡುತ್ತೀರಿ? ಎಲ್ಲೋ ಹುಚ್ಚಾಸ್ಪತ್ರೆ ಕಡೆ ತಿಳಿಯದೆ ಬಂದು ಬಿಟ್ಟೆ ಎಂದು ಕಾಲು ಕೀಳುತ್ತೀರೋ ಅಥವಾ ಅವನ/ಳ ನ್ನು ಕೊಲ್ಲುವಂತೆ ನೋಡುತ್ತೀರೋ? ನಿಮ್ಮ ನಿಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಏನು ಬೇಕಾದರೂ ಮಾಡಿಕೊಳ್ಳಿ ಆದರೆ ಆತ ಅಥವಾ ಆಕೆ you look sick ಅಂತ ಹೇಳಿದ್ದು ಮಾತ್ರ ಕಟು ಮಾತಲ್ಲ. ಹೀಗಂತ ನಾನಲ್ಲ ಆಂಗ್ಲ ಭಾಷೆ ಹೇಳುತ್ತದೆ.

sick ಅನ್ನೋ ಪದವನ್ನು ಗುಣವಾಚಕ ಅಥವಾ ವಿಶೇಷಣವಾಗಿ cool ಎನ್ನೋ ಪದಕ್ಕೆ ಸರಿ ಸಮಾನವಾಗಿ ಉಪಯೋಗಿಸುತ್ತಾರೆ. you look cool, or ‘cool’ ಎಂದು ಉಲಿಯುವುದನ್ನು ಕೇಳಿಯೇ ಇರುತ್ತೀರಿ ಅಲ್ಲವೇ? ಹದಿನೆಂಟನೆ ಶತಮಾನದಲ್ಲೇ ಅಮೆರಿಕೆಯಲ್ಲಿ ಬಳಕೆ ಯಲ್ಲಿದ್ದ ಈ ಉಪಯೋಗ ಬ್ರಿಟಿಶ್ ತೀರಕ್ಕೆ ಅಪ್ಪಳಿಸಿದ್ದು ತೀರಾ ಇತ್ತೀಚೆಗೆ.

ಈಗ ಇದನ್ನು ಓದಿ ಜ್ಞಾನ ಪ್ರದರ್ಶನಕ್ಕೆಂದು ಮದುವೆ ಮನೆಯಲ್ಲಿ ಭಾರೀ ಜರತಾರಿ ಸೀರೆ, ಅದಕ್ಕಿಂತ ಭಾರೀ ಮೇಕಪ್ ಮಾಡಿಕೊಂಡು ಬಂದ ಸುರಾಂಗನೆಯ ಮೇಲೆ ಈ ಪದ ಪ್ರಯೋಗ ಮಾಡಿ ರಾದ್ಧಾಂತ ಕ್ಕೆ ಎಡೆ ಮಾಡಿಕೊಡಬೇಡಿ. ಏಕೆಂದರೆ ನಮ್ಮ ಸಮಾಜ ಇನ್ನೂ “ಶೈ “ಶವಾ” ವಸ್ಥೆಯಲ್ಲೇ ಇದೆ ತುಂಬಾ ವಿಷಯಗಳಲ್ಲಿ. ಮೇಲಿನ ರೀತಿಯ ಮತ್ತು ಇನ್ನೂ ತರಾವರಿ ರೀತಿಯ ವಿಷಯ ಮತ್ತು ಕೀಟಲೆಗಳಿಗೆ ನನ್ನ ‘ಗುಬ್ಬಚ್ಚಿ’ ಗೂಡಿಗೆ ಭೇಟಿ ಕೊಡಿ.

http://www.twitter.com/bhadravathi

paracetamol ರಾಮ ಬಾಣ ಅಲ್ಲ

ಜ್ವರ ಅಥವಾ ನೋವು ಕಾಣಿಸಿ ಕೊಂಡ ಕೂಡಲೇ ನಾವು ಮೊರೆ ಹೋಗುವುದು paracetamol ಇರುವ ಔಷಧಿ ಕಡೆಗೆ. ವಿಶೇಷವಾಗಿ ಮಕ್ಕಳಿಗೆ ಕಾಣಿಸಿಕೊಳ್ಳುವ ಜ್ವರಕ್ಕೆ paracetamol ರಾಮ ಬಾಣ ಎಂದು ನಮ್ಮೆಲ್ಲರ ಗ್ರಹಿಕೆ. ಆದರೆ ಈ ಗ್ರಹಿಕೆಗೆ ಒಂದು ಕೊಡಲಿಯೇಟು ಬಿದ್ದಿದೆ; paracetamol ಒಳಗೊಂಡ ಔಷಧಿ ಮಕ್ಕಳಲ್ಲಿ ಅಸ್ತಮಾ ರೋಗವನ್ನು ಬರಿಸುತ್ತದೆ. ಗರ್ಭಿಣಿಯರು paracetamol ಹೆಚ್ಚು ತೆಗೆದು ಕೊಂಡಷ್ಟೂ ಹುಟ್ಟುವ ಮಕ್ಕಳಲ್ಲಿ ಅಸ್ತಮಾ ಕಾಣಿಸಿಕೊಳ್ಳಲು ಕಾರಣವಾಗುತ್ತದಂತೆ. ಈ ಔಷಧಿಯನ್ನು ಆಂಗ್ಲ ಭಾಷೆ ಮಾತನಾಡುವ ರಾಷ್ಟ್ರಗಳ ಜನ ಹೆಚ್ಚು ತೆಗೆದು ಕೊಳ್ಳುತ್ತಿದ್ದು ಅಲ್ಲಿನ ಮಕ್ಕಳ ಆರೋಗ್ಯದ ಅಧ್ಯಯನ ನಡೆಸಿದ ಮೇಲೆ ಈ ವಿದ್ಯಮಾನ ಬೆಳಕಿಗೆ ಬಂತು. ಆದರೆ ಕಂಪೆನಿಗಳು ಈ ಅಧ್ಯಯನವನ್ನು ಒಪ್ಪುತ್ತಿಲ್ಲ. ಅಸ್ತಮಾದ ಬಗೆಗಿನ ಅಧ್ಯಯನ ಗಮನಾರ್ಹವಲ್ಲದಿದ್ದರೆ medical journal “Lancet” ಪತ್ರಿಕೆಯಲ್ಲಿ ಇದು ಬೆಳಕನ್ನು ಕಾಣುತ್ತಿರಲಿಲ್ಲ.ಮಕ್ಕಳಲ್ಲಿ ಕಫ ತುಂಬಿ ಉಬ್ಬಸ ತೋರಿದಾಗ ಕೊಡುವ paracetamol ಕ್ರಮೇಣ ಮಕ್ಕಳಲ್ಲಿ ಅಸ್ತಮಾ ರೋಗಕ್ಕೆ ಕಾರಣವಾಗುತ್ತದೆ ಎಂದು ಅಭಿಪ್ರಾಯ. ಹಾಗಾದರೆ ಮಕ್ಕಳಿಗೆ ಜ್ವರ ಬಂದಾಗ ಕೊಡಬೇಕಾದದ್ದಾದರೂ ಏನು? ಕೆಲವು ವೈದ್ಯರ ಪ್ರಕಾರ ಜ್ವರ ಬಂದಾಗ ಯಾವ ಔಷಧಿಯನ್ನೂ ಕೊಡುವ ಅಗತ್ಯವಿಲ್ಲವಂತೆ. ಏಕೆಂದರೆ ಶರೀರಕ್ಕೆ ತಗಲುವ ಸೋಂಕಿಗೆ ನೈಸರ್ಗಿಕ ಪ್ರತಿರೋಧವಾಗಿ ಜ್ವರ ಬರುತ್ತದಂತೆ. ಆದರೆ ನಾವೀಗ ಕಾಣುತ್ತಿರುವ ಇಲಿ ಜ್ವರ, ಹಂದಿ ಜ್ವರ ಮುಂತಾದ “zoo” ಜ್ವರಗಳ ಬಗ್ಗೆ ಮಾತ್ರ ಎಚ್ಚರಿಕೆಯಿಂದಿರುವುದು ಅತ್ಯವಶ್ಯಕ.