ಕನ್ನಡೀಕರಣಕ್ಕೆ ಜೈ

ಕಂಪ್ಯೂಟರ್ ಗೆ ‘ಗಣಕ ಯಂತ್ರ’ ಅಂತಾರೆ ಕನ್ನದಲ್ಲಿ, ಆಲ್ವಾ? ಈ ಗಣಕ ಯಂತ್ರ ಅಂದ ಕೂಡಲೇ ಕಂಪ್ಯೂಟರ್ ಕಣ್ಣಿಗೆ ಬರೋ ಬದಲು ಮಂತ್ರವಾದಿಯ ಯಂತ್ರ, ತಂತ್ರದ ದೃಶ್ಯ ಕಣ್ಣಿಗೆ ಬರುತ್ತೆ. ಎಲ್ಲವನ್ನೂ ಕನ್ನಡೀಕರಿಸಲೇಬೇಕೆ? ಇಂಜಿನಿಯರ್ ಅಂದ್ರೆ ಅಭಿಯಂತರ. ಈ ಪದ ಯಾರೂ ಉಪಯೋಗಿಸಿದ್ದು ಕಿವಿಗೆ ಬಿದ್ದಿಲ್ಲ. ಡಾಕ್ಟರ್ ಅಂದ್ರೆ ವೈದ್ಯ ಅಲ್ವಾ? ಆದ್ರೆ ವೈದ್ಯ ಅಂದ್ರೆ ಆಯುರ್ವೇದದ ಡಾಕ್ಟ್ರು. MBBS ಮಾಡಿದವನನ್ನು ವೈದ್ಯ ಅನ್ನೋಲ್ಲ. ಅವನು ಡಾಕ್ಟರ್.

ಕನ್ನಡೀಕರಿಸಿ ಜನರನ್ನು ಪೇಚಿಗೆ, ಕಷ್ಟಕ್ಕೆ ಸಿಕ್ಕಿಸೋಕ್ಕಿಂತ ನಾನು ಕನ್ನಡ ಮಾತನಾಡ ಬಲ್ಲೆ ಎಂದು ಕನ್ನಡವನ್ನು ತಮಿಳೀ ಕರಿಸುವ ಜನರನ್ನು ದಾರಿಗೆ ತರುವುದು ಒಳ್ಳೆಯದು. ಕನ್ನಡ ಟೀವೀ ಚಾನಲ್ ಗಳಲ್ಲಿ ಕೇಳಿ ಬರುವ ಕನ್ನಡ ಯಾವ ಕ್ವಾಲಿಟಿ ದು ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ ತಾನೇ? ಸುದ್ದಿ ಓದುವವರು, ವರದಿ ಮಾಡುವವರು, ಒಂದೋ ತಮಿಳರು ಅಥವಾ ಬೆಂಗಳೂರಿನಲ್ಲಿ ವ್ಯಾಪಕ ವಾಗಿರುವ ಚೆನ್ನೈ ಪ್ರಭಾವಕ್ಕೆ ಒಳಗಾಗಿ ತಮ್ಮ ಕನ್ನಡವನ್ನು ತಮಿಳಿಗೋ ಅಥವಾ ತಮಿಳನ್ನು ಕನ್ನಡಕ್ಕೋ adapt ಮಾಡಿಕೊಂಡವರು. ಚಾನಲ್ ನವರ ಕನ್ನಡ ಕೇಳಿದಾಗ ವಾಕರಿಕೆ ಅಲ್ಲದೆ ಬೇರೇನೂ ಬರುವುದಿಲ್ಲ. ಬೇರೆ ಭಾಷೆಗಳ ಅವಸ್ಥೆ ನಮ್ಮ ಹಾಗಲ್ಲ. ಸ್ವಚ್ಛವಾಗಿ, ಹೆಮ್ಮೆಯಿಂದ ಬೀಗುತ್ತಾ ಮಾತನ್ನಾಡುತ್ತಾರೆ ತಮ್ಮ ತಮ್ಮ ಭಾಷೆಯಲ್ಲಿ. ನಮಗೋ ಪರ ಭಾಷಾ ವ್ಯಾಮೋಹ. ಈ ತೆರನಾದ ನಡವಳಿಕೆ ಇಟ್ಟುಕೊಂಡು ನಮ್ಮ ಭಾಷೆ ಕಲಿಯಿರಿ, ಗೌರವಿಸಿ ಎಂದು ಹೇಳುವ ಹಮ್ಮು ನಮಗೆ.

ಕಂಪ್ಯೂಟರ್ ನಲ್ಲಿ ಕನ್ನಡೀಕರಣ… cu, asl, gn, gm, gr8, f9 ಇವು ನಮಗೆಲ್ಲಾ ಗೊತ್ತಿರುವ ಗಣಕ ಭಾಷೆ, ಗ್ರಾಮರ್ ಬೇಡ, ಸ್ಪೆಲ್ಲಿಂಗ್ ಬೇಡವೇ ಬೇಡ. ಮತ್ತೊಂದು ಪದ ಇದೆ, lol (laughing out loud ). ಇದನ್ನು ಕನ್ನಡೀಕರಿಸಿದಾಗ ‘ಗಗನ’ ಎನ್ನಬಹುದು. ಅಂದರೆ, ಗ-ಹ ಗ-ಹಿಸಿ ನ-ಗು. ಕನ್ನಡೀಕರಣಕ್ಕೆ ಜೈ.