ಬೆಡ್ ಟೈಮ್ ಸ್ಟೋರಿ

bedtimeನೀವು ಹೇಳುವಿರಾ ಮಕ್ಕಳಿಗೆ ಮಲಗುವಾಗಿನ ಕತೆಗಳನ್ನು? ಸ್ವಲ್ಪ ಕಷ್ಟದ ಕೆಲಸವಾದರೂ ಅದರಲ್ಲಿ ಮಕ್ಕಳಿಗೆ ಸಂತಸವನ್ನಲ್ಲದೆ ನಮಗೂ ಮೋಜನ್ನು ನೀಡುತ್ತದೆ. ಮಾತ್ರವಲ್ಲ ಕೆಲವೊಮ್ಮೆ ನಮ್ಮ ಬಾಲ್ಯದ ಕೆಲವು ಘಟನೆಗಳನ್ನೂ ನೆನಪಿಗೆ ಬರುವಂತೆ ಮಾಡುತ್ತದೆ. ಮಕ್ಕಳಿಗೆ ಕತೆ ಓದುವುದರಿಂದ ಮಕ್ಕಳೊಂದಿಗಿನ ನಮ್ಮ ಬಾಂಧವ್ಯವನ್ನು ದೃಢ ವಾಗಿಸುತ್ತದೆ. ಒಮ್ಮೆ ಜೆದ್ದಾ ದ ರಸ್ತೆಯಲ್ಲಿ ಹಾದು ಹೋಗುವಾಗ ಮಕ್ಕಳಿಗೆ ಓದುವುದನ್ನು ಉತ್ತೇಜಿಸುವ ಬಿಲ್ ಬೋರ್ಡ್ ಕಾಣ ಸಿಕ್ಕಿತು. ಅಲ್ಲಾವುದ್ದೀನ್ ಮಾಂತ್ರಿಕ ದೀಪ ಹಿಡಿದ ಚಿತ್ರದೊಂದಿಗೆ ದಿನದಲ್ಲಿ ಕನಿಷ್ಠ ೧೫ ನಿಮಿಷ ವಾದರೂ ಓದಬೇಕೆನ್ನುವ ಕಿವಿಮಾತನ್ನೂ ಸೇರಿಸಿದ್ದರು.

 

 ನನ್ನ ೫ ವರ್ಷದ ಮಗ ಹಿಶಾಮ್ ನಿಗೆ ದಿನವೂ ನಾನು ಕತೆ ಹೇಳಬೇಕು ಅವನು ಮಲಗುವಾಗ. ಹಿಶಾಮನಿಗೆ ಅವನ ಒಂದೂವರೆ ವರ್ಷದ ಇಸ್ರಾ ಳನ್ನು ಕಂಡರೆ ಆಗದು. ಒಂಥರಾ ಅಸೂಯೆ. ಎಷ್ಟೇ ಬುಧ್ಧಿ ಹೇಳಿದರೂ ಕೇಳುವುದಿಲ್ಲ. ಅವಳು ಕಣ್ಣಿಗೆ ಬಿದ್ದರೆ ಕಟ ಕಟ ಹಲ್ಲು ಮಸೆಯುತ್ತಾನೆ. ಸರಿ ಇದನ್ನೇ ಆಧಾರ ವಾಗಿಟ್ಟುಕೊಂಡು ಒಂದು ಕತೆ ಹೆಣೆದೆ.

” ಒಂದೂರಿನಲ್ಲಿ ಒಬ್ಬ ಹುಡ್ಗನಿದ್ದ, ಅವನಿಗೆ ತನ್ನ ತಂಗಿಯನ್ನು ಕಂಡರೆ ಇಷ್ಟವಿಲ್ಲ. ಯಾವಗಲೂ ಹಲ್ಲು ಕಡಿಯುತ್ತಾನೆ ಅವಳನ್ನು ನೋಡಿ. ಒಂದು ದಿನ ಅವನ ಬಾಯಿಯ ಹಲ್ಲುಗಳು ಸಭೆ ನಡೆಸಿ ಈ ಹುಡುಗ ನಮ್ಮನ್ನು ಕಡಿದು ಕಡಿದೂ ನೋವು ಕೊಡುತ್ತಾನೆ, ಅವನು ಮಲಗಿದಾಗ ನಾವೆಲ್ಲಾ ಎದ್ದು ಓಡಿ ಹೋಗೋಣ ಎಂದು. ಸರಿ ಒಂದು ರಾತ್ರಿ ಹಲ್ಲುಗಳೆಲ್ಲ ಸೇರಿ ಓಡಿ ಬಾತ್ರೂಮಿನ ಕಿಟಕಿಯ ಮೇಲೆ ಅಡಗಿ ಕೂರುತ್ತವೆ. ಹುಡುಗ ಬೆಳಗಾದಾಗ ಹಲ್ಲುಜ್ಜಲು ಹೋಗುತ್ತಾನೆ, ಪೇಸ್ಟ್ ಹಚ್ಚಿ ಕನ್ನಡಿಯ ಮುಂದೆ ನಿಂತಾಗ ಹಲ್ಲುಗಳು ಗೋಚರಿಸುವುದಿಲ್ಲ. ಅಯ್ಯೋ, ನನ್ನ ಹಲ್ಲುಗಳೆಲ್ಲಿ ಎಂದು ಓಡಿ ತನ್ನ ತಾಯಿಗೆ ಹೇಳುತ್ತಾನೆ. ತಾಯಿಯ ಕಣ್ಣಿಗೂ ಕಾಣುವುದಿಲ್ಲ. ಶಾಲೆಗೆ ಹೊತ್ತಾಯಿತೆಂದು ಹುಡುಗ ಶಾಲೆಗೆ ಓಡುತ್ತಾನೆ. ಅಲ್ಲಿ ಅವನ ಗೆಳೆಯರ ಅವನ ಹಲ್ಲಿಲ್ಲದ ಬಾಯಿ ನೋಡಿ ತಮಾಷೆ ಮಾಡಿ ನಗುತ್ತಾರೆ. ಶಿಕ್ಷಕರು ವಿಷಯವೇನೆಂದು ಕೇಳಿದಾಗ ಹುಡುಗ ನಡೆದದ್ದನ್ನು ಹೇಳುತ್ತಾನೆ. ಕೊನೆಗೆ ಅವನ ಶಿಕ್ಷಕರು ಅವನ ಮನೆಗೆ ಬಂದು ನೋಡಿದಾಗ ಹಲ್ಲುಗಳು ಬಾತ್ ರೂಮಿನ ಕಿಟಕಿಯ ಮೇಲೆ ಸಾಲಾಗಿ ಕುಳಿತಿರುತ್ತವೆ. ವಿಚಾರಿಸಿದಾಗ ಹಲ್ಲುಗಳು ನಡೆದದ್ದನ್ನು ಹೇಳುತ್ತವೆ. ಶಿಕ್ಷಕರು ಹಲ್ಲುಗಳ ಮನವೊಲಿಸಿ ಅವನ ಬಾಯಿಗೆ ಮರಳುವಂತೆ ಮಾಡುತ್ತಾರೆ. ಮತ್ತು ಹುಡುಗನಿಗೆ ತಾಕೀತು ಮಾಡುತ್ತಾರೆ ಇನ್ನೊಮ್ಮೆ ನಿನ್ನ ತಂಗಿಯನ್ನಾಗಲಿ ನೋಡಿ ಹಲ್ಲು ಮಸೆದರೆ ಹಲ್ಲುಗಳು ಎಂದಿಗೂ ಮರಳುವುದಿಲ್ಲ ಜೋಕೆ ಎಂದು ಹೇಳಿ ಹೋಗುತ್ತಾರೆ”.

ಈ ಕತೆ ಕೇಳಿದ ನಂತರ ನನ್ನ ಮಗ ಹಲ್ಲು ಮಸೆಯುವುದನ್ನು ಸ್ವಲ್ಪ ದಿನದ ಮಟ್ಟಿಗೆ ನಿಲ್ಲಿಸಿದ.