ಭಾರತ ವಿಶ್ವದ ಅತ್ಯಂತ ಭ್ರಷ್ಟ ರಾಷ್ಟ್ರಗಳಲ್ಲೊಂದು. ಹೇಗಿದೆ, ನಮ್ಮ ಕೀರ್ತಿಯ ಪತಾಕೆ. ಬಹು ಎತ್ತರಕ್ಕೆ ಹಾರುತ್ತಿದೆ ಅಲ್ಲವೇ? ಏರುತಿಹುದು ಹಾರುತಿಹುದು ನೋಡು ನಮ್ಮ ಬಾವುಟ… ಅಂತರರಾಷ್ಟ್ರೀಯ ಪಾರದರ್ಶಕ ಸಂಸ್ಥೆ ಈ ಬಹುಮಾನವನ್ನು ಭಾರತಕ್ಕೂ ಮತ್ತು ಇತರ ರಾಷ್ಟ್ರಗಳಿಗೂ ದಯಪಾಲಿಸಿತು. ಸಮಾಧಾನ ಏನೆಂದರೆ ನಮ್ಮೊಂದಿಗೆ ಒಂದಿಷ್ಟು ಸಂಗಾತಿಗಳೂ ಇರುವುದು; ಸೋಮಾಲಿಯ, ಆಫ್ಘಾನಿಸ್ತಾನ, ಮಯನ್ಮಾರ್, ಸುಡಾನ್ ಮತ್ತು ಇರಾಕ್. ವಾಹ್! ಸ್ನೇಹಿತರ ಪ್ರೊಫೈಲ್ ಒಮ್ಮೆ ಸ್ವಲ್ಪ ನೋಡಿ. ೧೮೦ ರಾಷ್ಟ್ರಗಳ ಪೈಕಿ ನಮ್ಮ ರಾಂಕಿಂಗ್ ೮೪. ಲಂಚ ಎಂದ ಕೂಡಲೇ ಹೆಣವೂ ಬಾಯಿ ಬಿಡುತ್ತಂತೆ. ಬಿಟ್ಟಿ ದುಡ್ಡು ನೋಡಿ.. ದುಡಿಮೆ ಬೇಡ, ಬೆವರಿನ ಅಗತ್ಯವಿಲ್ಲ… ಮಾಡಲೇಬೇಕಾದ ಕೆಲಸವನ್ನು ಮಾಡಿ ಕೊಡಲಾರೆ ಎಂದು ೧೦೧ ಕಾರಣಗಳನ್ನು ನೀಡಿ ನಂತರ ಸ್ವಲ್ಪ ಕೊಳಕಾದ ಹಲ್ಲುಗಳನ್ನು ಪ್ರದರ್ಶಿಸಿದರೆ ಬಂದು ಬೀಳುತ್ತದೆ ಕಾಂಚಾಣ. ಕಾಂಚಾಣಂ ಕಾರ್ಯ ಸಿದ್ಧಿ. ಮತ್ತೆ ಧಾರ್ಮಿಕತೆಯನ್ನು ಪ್ರದರ್ಶಿಸಿ ಮುಖವಾದ ಹಾಕಿಕೊಂಡು ಓಡಾಡೋದು? ಅದಕ್ಕೇನು ದಾರಿಯಲ್ಲಿ ಸಿಗುವ ದೇವರ ಹುಂಡಿಗಳಿಗೋ ನಮ್ಮ ಇಷ್ಟದೇವರುಗಳ ಮಠಗಳಿಗೋ ಒಂದಿಷ್ಟು ಸುರಿದು ಬಂದರಾತು. ಲಂಚ ತೆಗೆದುಕೊಳ್ಳಬೇಡಿ ಎಂದು ಯಾವ ಧರ್ಮಭೀರುವಿನ ಬಾಯಿಂದಲೂ ಬರುವುದಿಲ್ಲ ನೋಡಿ, ಏಕೆಂದರೆ ಆ ಮೂಲದ ಮೂಲಕವೇ ಅಲ್ಲವೇ ಅವರ ಹೊಟ್ಟೆಪಾಡು ಸಾಗುವುದು? ಯಾರಾದರೂ ಕೊಡಲಿಯನ್ನು ತಮ್ಮ ಕಾಲ ಮೇಲೆಯೇ ಹಾಕಿಕೊಳ್ಳುತ್ತಾರ? ಇಂಥ ಸಾಮಾಜಿಕ ಅನಿಷ್ಟಗಳನ್ನು ಹೋಗಲಾಡಿಸುವತ್ತ ಗಮನ ಹರಿಸುವುದನ್ನು ಬಿಟ್ಟು ರಾಷ್ಟ್ರ ಭಾಷೆ ಯಾವುದಾಗಬೇಕು, ರಾಷ್ಟ್ರ ಗೀತೆ ಇದಾದರೇನು ಅಥವಾ ಇನ್ನಾವುದಾದರೂ ಹೊಸ ಸಮಸ್ಯೆಯನ್ನು ingenuity ಉಪಯೋಗಿಸಿ ಹುಟ್ಟುಹಾಕಿ ಜನರ ಪೀಡಿಸುವುದು, ಈ ತೆರನಾದ ವ್ಯರ್ಥ ಕಾರ್ಯಗಳಲ್ಲಿ ನಾವು ನಮ್ಮನ್ನು ತೊಡಗಿಸಿಕೊಂಡು ವಿಶ್ವದ ಎದುರಿಗೆ ನಮ್ಮ ಮಾನ ನಾವೇ ಹರಾಜಿಗೆ ಹಾಕಿಕೊಳ್ಳುತ್ತೇವೆ.