ಬುಧ್ಧನ ಪಲಾಯಾನ

ಬುಧ್ಧನ ಪಲಾಯಾನ
ಬುದ್ಧಂ ಶರಣಂ ಗಚ್ಚಾಮಿ, ಧರ್ಮಂ ಶರಣಂ ಗಚ್ಚಾಮಿ ಎನ್ನುತ್ತಾ ಇರು ಎಂದ ಓರ್ವ ತರುಣನಿಗೆ ಡಿಸ್ಕೋ ಬ್ಯಾಂಡ್ ಪಸಂದ್ ಆಗಿ ಆಶ್ರಮ ಬಿಟ್ಟು ಓಡಿದ. ದಲೈ ಲಾಮ ತಮ್ಮ ಅವತಾರ ಎಂದು ನೇಮಿಸಿದ್ದ ಒಸೇಲ್ ಹಿತಾ ತೋರ್ರೆಸ್ ಗೆ ತೋಚಿದ್ದು ತಾನು ಸುಳ್ಳಿನ ಬದುಕನ್ನು  ಬದುಕುತ್ತಿದ್ದೇನೆಂದು. “It was like living a lie,” 

೫ ತಿಂಗಳ ಮಗುವಾಗಿದ್ದಾಗ ಈತನನ್ನು ಆಶ್ರಮದಲ್ಲಿ ನೋಡಿದ ಒಬ್ಬರು ಇವನಲ್ಲಿ ದಲೈ ಲಾಮರ ಅವತಾರವನ್ನು ಕಂಡರು. ೧೯೮೬ ರಲ್ಲಿ ಈತನಿಗೆ ೧೪ ತಿಂಗಳು ವಯಸ್ಸಾದಾಗ ಅವನ ಪಾಲಕರು ಧರ್ಮಶಾಲೆಗೆ ದಲೈ ಲಾಮರಲ್ಲಿ ಕರೆತಂದರು ಮತ್ತು ೯ ಮಕ್ಕಳಲ್ಲಿ ಲಾಮಾರ ಅವತಾರವಾಗಲು ಇವನನ್ನು ಚುನಾಯಿಸಲಾಯಿತು.
ನನ್ನನ್ನು ನನ್ನ ಪಾಲಕರಿಂದ ದೂರ ಮಾಡಿ ಮಧ್ಯ ಯುಗದ ಜೀವನಕ್ಕೆ ನನ್ನನ್ನು ತಳ್ಳಿದರು ಎಂದು ದೂರುವ ಈತ ಈ ಜೀವನದಿಂದ ಬಹಳಷ್ಟು ನರಳಿದ್ದೇನೆ ಎಂದು ಹೇಳುತ್ತಾನೆ.

ದೇವರು ಮನುಷ್ಯನನ್ನು ತನ್ನ ಅವತಾರ ಎಂದು ಸೃಷ್ಟಿಸಿ ಅವನಿಗಾಗಿಯೇ ಸಕಲ ವಸ್ತುಗಳನ್ನೂ ಸೃಷ್ಟಿಸಿ ಸುಖಿಸು ಎಂದರೆ ದೇವನ ಅಪ್ಪಣೆಗೆ ವಿರುದ್ಧವಾಗಿ ನಾವು ನಡೆದು  ವಿರಕ್ತರಾದರೆ ಇದೇ ಪರಿಸ್ಥಿತಿಯೋ ಏನೋ?

ಮತ್ಸ್ಯಗಂಧ ಎಕ್ಸ್ಪ್ರೆಸ್

ನನ್ನ ತಂದೆಯವರಿಗೆ ಮೀನೆಂದರೆ ಪ್ರಾಣ. ದಿನವೂ ಬೇಕೇ ಬೇಕು ಮೀನು. ಮನೆಗೆ ಮೀನು ಬಂದ ಕೂಡಲೇ ಅದರೊಂದಿಗೆ ಬರುತ್ತವೆ ಒಂದೆರಡು ಬೆಕ್ಕುಗಳು. ಮೀನಿನ ರೆಕ್ಕೆ, ಬಾಲ ಇನ್ನೇನಾದರೂ ಉಳಿದ ತುಂಡುಗಳನ್ನು ತಿನ್ನಲು. ಇಂದು ಬಹಳ ಆಸೆಯಿಂದ ೬೦೦ ಗ್ರಾಂ ತೂಕದ ಒಂದು ಮೀನನ್ನು ಮನೆಗೆ ತಂದು ತಾಯಿಗೆ ನೀಡಿದರು. ಸ್ವಲ್ಪ ಸಮಯದ ನಂತರ ಕತ್ತಿರಿಸೋಣ ಅಂತ ಮೀನನ್ನು ತಟ್ಟೆಯ ಮೇಲಿಟ್ಟು ಫ್ರಿಜ್ನ ಮೇಲಿಟ್ಟು ಸೀರಿಯಲ್ ನೋಡಲು ಕೂತರು. ಒಂದರ್ಧ ಘಂಟೆಯ ನಂತರ ಮೀನನ್ನು ಕ್ಲೀನ್ ಮಾಡಲು ಫ್ರಿಜ್ನ ಮೇಲಿನ ತಟ್ಟೆಯನ್ನು ತೆಗೆದರೆ ತಟ್ಟೆ ಮಾತ್ರ ಇತ್ತು, ಮೀನು ಇರಲಿಲ್ಲ. ಅರ್ರ್ರೆ, ಇದೇನು ಈಗತಾನೇ ಇತ್ತ ಮೀನು ಎಲ್ಲಿ ಹೋಯಿತು ಎಂದು Stealing_Fish_by_LoneDollಹುಡ್ಕಿದರೆ ಸಿಗುವುದಾದರೂ ಎಲ್ಲಿ. ಬೆಕ್ಕಿನ ಉದರ ಸೇರಿತ್ತು ಮೀನು. ಕಳ್ಳ ಬೆಕ್ಕು ಅಮ್ಮ ಸೀರಿಯಲ್ಲಿನಲ್ಲಿ ಮಗ್ನರಾಗಿದ್ದನ್ನು ನೋಡಿ ಸದ್ದಿಲ್ಲದೆ ಅಷ್ಟೆತ್ತರದ ಫ್ರಿಜ್ಜಿನ ಮೇಲೆ ನೆಗೆದು ತನ್ನ ಮಿಕವನ್ನು ಎಗರಿಸಿ ಓಟ ಕಿತ್ತಿತ್ತು. ಮತ್ಸ್ಯಾ ಅಪಹರಣದ ಸುದ್ದಿಯನ್ನು ಅಮ್ಮ ಅಪ್ಪನಿಗೆ ಮುಟ್ಟಿಸಿದಾಗ ತಂದೆಗೆ ಎಲ್ಲಿಲ್ಲದ ಕೋಪ. ಬೆಳಿಗ್ಗೆ ಹನ್ನೊಂದಕ್ಕೆ ಮೀನನ್ನು ಎಗರಿಸಿಕೊಂಡು  ಹೋದ ಬೆಕ್ಕು ಚೆನ್ನಾಗಿ ತಿಂದು ಒಂದು ಗಡದ್ದಾಗಿ ನಿದ್ದೆ ಹೊಡೆದು ಬಂತು ಸುಮಾರು ನಾಲ್ಕರ ಸಮಯಕ್ಕೆ ಕಳ್ಳ ನಗೆ  ಬೀರುತ್ತಾ.

ಪ್ರಜಾ ಪ್ರಭುತ್ವದ ಯುದ್ಧ

ಮಹಾ ಸಮರ ಸೆಣಸಿ ಆಯಿತು. ಭಾಜಪ ಮುಕ್ಕಿತು ಮಣ್ಣು, ಕಾಂಗ್ರೆಸ್ ಗೆ ದಕ್ಕಿತು ಹಣ್ಣು. ಮಾಯೆಯ ಆಸೆ ದಿಲ್ಲಿ ಸೇರಲಿಲ್ಲ, ಮಮತೆಗೆ ಒಲಿಯಿತು ಅದೃಷ್ಟ. ಎಡಿಯೂರಪ್ಪನವರ ವೈಯಕ್ತಿಕ ಆಸೆ ( ಮಗ ಗೆಲ್ಲುವ ) ಈಡೇರಿದರೂ ತನ್ನ ಪಕ್ಷಕ್ಕೆ ಅಧಿಕ ಸೀಟ್ಗಳನ್ನು ಕೊಡಿಸದಾದರು. ಪಕ್ಕದ ರಾಜಶೇಖರ ರೆಡ್ಡಿಗೆ ಖುಲಾಯಿಸಿತು ಲಾಟರಿ. ಕೇರಳ, ಬಂಗಾಳದಲ್ಲಿ ಕುಡುಗೋಲಿಗೆ  ಹಿಡಿಯಿತು ತುಕ್ಕು. ಯುವರಾಜ ರಾಹುಲನ ಪಟ್ಟಾಭಿಷೇಕಕ್ಕೆ ಅನುವು ಮಾಡಿ ಕೊಟ್ಟಿತು ಈ ಚುನಾವಣೆ. ಮನಮೋಹನ ಸಿಂಗಾರ ಮೋಹಕ ನಗೆಗೆ, ಸೋನಿಯಾರ ಮಾಂತ್ರಿಕ ಕೈಗೆ ಒಲಿಯಿತು ದೇಸ.  

ಯಾರೇ ಕೂಗಾಡಲಿ, ಯಾರೇ ಹೋರಾಡಲಿ, ನನ್ನ ನೆಮ್ಮದಿಗೆ ಭಂಗವಿಲ್ಲ, ಎಮ್ಮೇ ನಿನಗೆ ಸಾಟಿಯಿಲ್ಲ, ಬಿಸಿಲು ಮಳೆಗೆ ಬಿರುಗಾಳಿ ಚಳಿಗೆ ನೀ ಅಳುಕದೆ ಮುಂದೇ ಸಾಗುವೆ.. ಅರೆ ವೈ.. ಅರೆ ವೈ.. ಅರೆ ವೈ..ಅರೆ ವೈ.. ಡುರ್ರ್ ಬಿಯಾ, ಅಂತ ನಮ್ಮ ಮತ್ತು ಎಮ್ಮೆಯ ಬದುಕು ನೆಮ್ಮದಿಯಾಗಿ ಸಾಗಿದರೆ ಸಾಕು.

ರೆಡ್ ಲೈಟ್ ಏರಿಯಾದಿಂದ

ಮನೆಯಿಂದ ಆಫೀಸಿಗೆ ಕೇವಲ ೧೦ ನಿಮಿಷಗಳ drive ಮತ್ತು ಒಂದೇ ಒಂದು ಸಿಗ್ನಲ್ ನ ಭೆಟ್ಟಿ. ಆದರೆ ಕೆಲಸ ನಿಮಿತ್ತ ಪ್ರತಿದಿನ ಕನಿಷ್ಠ ೧೦೦ ಕಿಲೋಮೀಟರು ಓಡಾಟ ನಗರದ ಪರಿಮಿತಿಯೊಳಗೆ. ಜನನಿಬಿಡವಲ್ಲದಿದ್ದರೂ “ಜೆಡ್ಡಾ” ನಗರದಲ್ಲಿ ವಾಹನಗಳ ಸಂಖ್ಯೆ ಅತ್ಯಧಿಕ. ಸಿಗ್ನಲ್ನ ಸಮೀಪ ಬಂದರೂ ವಾಹನಗಳು ಮುಂದಕ್ಕೆ ಹರಿಯುವುದಿಲ್ಲ. ಕೆಲವೊಮ್ಮೆ ೩-೪ ಸಿಗ್ನಲ್ ಕಾಯಬೇಕು. ಹೀಗೆ ಸಿಗ್ನಲ್ಲುಗಳು ಗೋಸುಂಬೆಯ ಹಾಗೆ ಬಣ್ಣ ಬದಲಿಸುವುದನ್ನು ನೋಡುತ್ತಾ ಕೂತಾಗ ಹಲವು ಚಟುವಟಿಕೆಗಳು ಸಿಗ್ನಲ್ ಕಂಬದ ಸುತ್ತ ನಡೆಯುತ್ತಿರುತ್ತದೆ. ಕೆಂಪು ಬಣಕ್ಕೆ ತಲೆಬಾಗಿ ವಾಹನಗಳು ನಿಲ್ಲುತ್ತಿದ್ದಂತೆಯೇ ಒಂದು ಚಿಕ್ಕ shopping arena ತೆರೆದು ಕೊಳ್ಳುತ್ತದೆ, a floating shopping arena. ಸುಮಾರು ೬೫ ರ ವೃದ್ಧ ( ಯೆಮನ್ ದೇಶದವನ ಥರ ಕಾಣುತ್ತಾನೆ) ಮೋಯಾ, ಮೋಯಾ(ನೀರು, ಅರಬ್ಬೀ ಭಾಷೆಯಲ್ಲಿ) ಎಂದು ಕೂಗುತ್ತಾ ವಾಹನಗಳ ಸುತ್ತಾ ಸುತ್ತುತ್ತಿರುತ್ತಾನೆ.  ಮತ್ತೊಂದೆಡೆ ಒಬ್ಬ ಯುವಕ ಮಲ್ಲಿಗೆ ಹೂವನ್ನು ಮಾರುವ ಆತುರದಲ್ಲಿರುತ್ತಾನೆ. ಪ್ರಖರ ಬಿಸಿಲಿಗೆ, ವಾಹನಗಳ ಹೊಗೆಗೆ ಸಿಕ್ಕ ಹೂವುಗಳನ್ನು ಯಾವ ರೋಮಿಯೋ ತನ್ನ ಪ್ರೇಯಸಿಗೆ ಕೊಡುತ್ತಾನೋ?

ನನ್ನ ಈ “short errands” ನ ಸಂಗಾತಿ ಅಮೆರಿಕೆಯ NPR (national public radio). washington D.C. ಇಂದ ಬಿತ್ತರವಾಗುವ ಸುದ್ದಿ ಮತ್ತು ಚರ್ಚೆಗಳನ್ನು ಕೇಳುತ್ತಾ ಹೋದರೆ ಸಮಯ ಹೋಗುವುದು ತಿಳಿಯುವುದಿಲ್ಲ. ಅಮೆರಿಕೆಯ ಪ್ರಸಿದ್ಧ ವಾಹನ ತಯಾರಕರಾದ ford, GM ಗಳ ಅಧಿಕಾರಿಗಳು ತಮ್ಮ ಕಂಪೆನಿಗಳನ್ನು ಉಳಿಸಲು ಸರಕಾರ ನೀಡಿದ ಹಣ ಪಡೆಯಲು ಕೈ ಚಾಚಿ ಬಂದಿದ್ದಾರೆ ಎನ್ನುವ ಸುದ್ದಿ ಕೇಳುತ್ತಲೇ ಪಕ್ಕದಲ್ಲಿ ಸುಡಾನ್ ದೇಶದ ಒಬ್ಬ ಬಡ ಮಹಿಳೆ ಭಿಕ್ಷೆ ಬೇಡುತ್ತಾ ಉರಿಬಿಸಿಲಿನಲ್ಲಿ ನಡೆಯುತ್ತಿರುತ್ತಾಳೆ. ಕಡು ಕಪ್ಪು ವರ್ಣದ ಈ ಅಸಹಾಯಕ ಸ್ತ್ರೀಗೂ, ಸೂಟು ಬೂಟಿನಲ್ಲಿ ಭಿಕ್ಷೆ ಬೇಡಲು ಬಂದ ಲಕ್ಷಾಂತರ ಡಾಲರ್ ಸಂಬಳ ಪಡೆಯುವ ಅಧಿಕಾರಿಗಳಿಗೂ ಇರುವ ವ್ಯತ್ಯಾಸ ಏನು ಯೋಚಿಸುತ್ತಾ ಇದ್ದಾಗ ಪ್ರತ್ಯಕ್ಷವಾಯಿತು ಒಂದು ಸುಂದರ ಮೊಗ. ಸೂರ್ಯನ ಬಂಗಾರದ ರಶ್ಮಿಗಳನ್ನು ನಾಚಿಸುವ ಮೈಬಣ್ಣದ ಪೋರಿ ” batook ” chewing gum ಬೇಕಾ ಎಂದು ಮುಗುಳ್ನಗುತ್ತಾ ಕಣ್ಣಿನಿಂದಲೇ ಕೇಳುತ್ತಾಳೆ. ೮ ಅಥವಾ ೯ ವಯಸ್ಸಿನ ಆಫ್ಘಾನಿಸ್ತಾನದ ಹುಡುಗಿ. ಈ ಎಳೆ ಪ್ರಾಯದಲ್ಲಿ ಶಾಲೆಯಲ್ಲೋ ಮನೆಯಲ್ಲೋ ಬೆಚ್ಚಗಿರುವುದು ಬಿಟ್ಟು ಹೊಟ್ಟೆ ಪಾಡಿಗಾಗಿ ಉರಿ ಬಿಸಿಲಿನಲ್ಲಿ ದುಡಿಯುವ ಸ್ಥಿತಿ ನೋಡಿ ಮರುಕ ತೋರುತ್ತದೆ. (shopping ಮತ್ತು gaming ಗಳೇ ತಮ್ಮ ಬದುಕು ಎಂದು ಮಜಾ ಉಡಾಯಿಸುವ ನನ್ನ ಸೋದರಿಯ ಮಕ್ಕಳು ಈ ಹುಡುಗಿಯ ಮುಂದೆ ಸೋತು ನಿಲ್ಲುತ್ತಾರೆ ನನ್ನ ಕಣ್ಣಿನಲ್ಲಿ).

ಆಫ್ಘನ್ನರು ಸ್ವಾಭಿಮಾನಿಗಳು. ಕಷ್ಟ ಸಹಿಷ್ಣುಗಳು. ಬಿಸಿಲಿನ ಬೇಗೆಯ, ಕಣಿವೆ ಕಂದಕ ತುಂಬಿದ ನಿಸರ್ಗದ ನಿಷ್ಠುರ ವಾತಾವರಣದಲ್ಲಿ ಬೆಳೆದ ಇವರಿಗೆ ದಣಿವು ಇಲ್ಲ ಎನ್ನುವಷ್ಟು ಲವಲವಿಕೆ. ಯುದ್ದ ಕಾರಣ ಆಫ್ಘಾನಿಸ್ತಾನ ತೊರೆದು ಬಂದ ಇವರಿಗೆ ಸೌದಿ ಆಶ್ರಯ ನೀಡಿತು. ಕಾದಾಡುವುದೇ ಕಾಯಕ ಎಂದುಕೊಂಡಿರುವ ಇವರಿಗೆ ಯುದ್ಧಗಳಿಂದ ಮೋಕ್ಷ ಯಾವಾಗ ಸಿಗುತ್ತದೋ ಎಂದು ಯೋಚಿಸುತ್ತಾ ಕೂತಾಗ ಹಳದಿ ಬಣ್ಣ ಹಸಿರು ಬಣ್ಣಕ್ಕೆ ದಾರಿ ಮಾಡಿಕೊಟ್ಟಿತು. ಕೂಡಲೇ ಮತ್ತೊಂದು ಕೆಂಬಣ್ಣ ಕಾಣುವ ಮೊದಲು ಕಾಲು ಕಿತ್ತೋಣ ಎಂದು accelerator ಅನ್ನು  ಜೋರಾಗಿ ಒತ್ತಿ ಹಿಡಿದು high way ಸೇರಿಕೊಂಡೆ.

Mother’s day

busy_momಅಮೆರಿಕೆಯ NPR ರೇಡಿಯೋ ಬಾತ್ಮೀದಾರ ಸ್ಕಾಟ್ ಸಿಮೋನ್ ಮಾತೆಯರ ದಿನದಂದು ಬರೆದ ಪ್ರಬಂಧದ ಅನುವಾದ.

 ನಾನಿರುವಲ್ಲಿ ದಿನವೂ ಮಾತೆಯರ ದಿನ.

ನನ್ನ ಪತ್ನಿ ಕೆಲಸಕ್ಕೆ ಹೋಗುವುದಿಲ್ಲ. ಆಕೆ ಪೂರ್ಣ ಸಮಯ ತಾಯಿ. ಬೆಳಗ್ಗಾದ ಕೂಡಲೇ ಮಮ್ಮ ಮಮ್ಮ ಎಂದು ಚೀರುವ ೨ ವರ್ಷದ ಮಗಳನ್ನು ಒಂದು ಕೈಯಲ್ಲಿ ಎತ್ತಿಕೊಂಡು ಮತ್ತೊಂದು ಕಾಯ್ಯಿಂದ ಹಾಲು ಕಾಯಿಸಲು ಅಡುಗೆ ಮನೆಗೆ ಹೋಗುತ್ತಾಳೆ.

ನಾನಾದರೋ ನನ್ನ ಕಛೇರಿಯಲ್ಲಿ ಕುಳಿತು, ಮಾಡಬೇಕಾದ ಕೆಲಸವನ್ನು ಮುಂದಕ್ಕೆ ಹಾಕುವ ಬಗ್ಗೆ ಯೋಚಿಸುತ್ತಾ, ಬೇಸ್ ಬಾಲ್ ಸ್ಕೋರ್ ನೋಡುತ್ತಾ ನನ್ನ ಕಾಫಿಯ ನಿರೀಕ್ಷೆಯಲ್ಲಿ ಸಮಯ ಕಳೆಯುತ್ತೇನೆ. 

ಪತ್ನಿ ಸ್ನಾನ ಗೃಹಕ್ಕೆ ತೆರಳಲು ಮಗಳು ಬಿಡದಾಗ ಆಕೆಯನ್ನೂ ಎತ್ತಿ ಕೊಂಡು ಒಳ ಹೋಗುತ್ತಾಳೆ. ೨ ವರ್ಷದ ಮಗುವನ್ನು ಸ್ನಾನ ಗೃಹದಲ್ಲಿ ಸಂಭಾಳಿಸುವುದು ಸರ್ಕ್ಸಸ್ಸೇ ಸರಿ. ಈಗ ನಮ್ಮ ೬ ವರ್ಷದ ಮಗಳು ಮಮ್ಮ ಮಮ್ಮ ಎನ್ನುತ್ತಾ ಎದ್ದು  ಬಂದಾಗ ಆಕೆಯನ್ನೂ ಚಿಕ್ಕ ಮಗುವನ್ನೂ ಎರಡೂ ಕೈಗಳಲ್ಲಿ ಎತ್ತಿ ಹಿಡಿದು ತನ್ನ ಮೂರನೇ (?) ಕೈಯಿಂದ ಮತ್ತಷ್ಟು ಹಾಲನ್ನು ಬಿಸಿ ಮಾಡಲು ತೊಡಗುತ್ತಾಳೆ.

ಈಗ ಮತ್ತೊಂದು ಕಾಫಿಗಾಗಿ ನಾನು ಅಡುಗೆ ಕೊನೆಗೆ ಬರುತ್ತೇನೆ.

ಆಕೆ ಮಕ್ಕಳನ್ನು ಶಾಲೆಗೆ ತಯಾರಿ ಮಾಡಲು ಬಟ್ಟೆ ತೊಡಿಸುತ್ತಾಳೆ. ಮೊಲಗಳ ಥರ ಜಿಗಿದಾಡುವ ಅವರಿಗೆ ಬಟ್ಟೆ ತೊಡಿಸುವುದು ಮತ್ತೊಂದು ಸಾಹಸ. ಅವರನ್ನು ಪಕ್ಕದಲ್ಲೇ ಇರುವ ಶಿಶುವಿಹಾರಕ್ಕೆ ಬಿಟ್ಟು ಬರಲು ಅರ್ದ ಘಂಟೆಗೂ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಪ್ರತಿ ಅಂಗಡಿಯ ಮುಂದೆ ಮತ್ತು ಪ್ರತಿ ಕಿಟಕಿಗಳನ್ನು ಇಣಕಿ ನೋಡುತ್ತಾ ಸಾಗುತ್ತವೆ ನಮ್ಮ ಪುಟಾಣಿಗಳು.

 

ಮನೆಗೆ ಮರಳಿದ ಆಕೆಗೆ ಸ್ವಲ್ಪ ವಿರಾಮ. ಬಟ್ಟೆ ಒಗೆಯಲು ಹಾಕಿ,ಬಿಲ್ಲುಗಳನ್ನು, ಕ್ರೆಡಿಟ್ ಕಾರ್ಡ್ ಪಾವತಿ ಮಾಡಿ, ತಪ್ಪಾಗಿ ತನಗೆ ಬಂದ ಫೋನ್ ಬಿಲ್ಲುಗಳನ್ನು ಕಂಪನಿ ಯವರೊಂದಿಗೆ ರಗಳೆ ಮಾಡಿ ಬಗೆಹರಿಸುತ್ತಾಳೆ. ಇದನ್ನೆಲ್ಲಾ ಮಾಡುತ್ತಿದ್ದಾಗ ನಮ್ಮ ಚಿಕ್ಕ ಮಗಳು ಚಿಂಪಾನ್ಜೀ ಥರ ಅವಳ ತಾಯಿಯ ಕೊರಳ ಮೇಲೆ ತೂಗುತ್ತಿರುತ್ತಾಳೆ. ಚೆಲ್ಲಾಡಿದ ಆಟಿಕೆಗಳನ್ನು ಹೆಕ್ಕಿ, ಸ್ವಲ್ಪ ಶಾಪಿಂಗ್ ಮಾಡಿ, ಬೀರುವನ್ನು ಒಪ್ಪವಾಗಿಡುತ್ತಾಳೆ. fish tank ಕ್ಲೀನ್ ಮಾಡಿ ಬೆಕ್ಕಿನ ಗಲೀಜನ್ನು ಶುಚಿಕರಿಸುತ್ತಾಳೆ. ಚಿಕ್ಕ ಮಗಳ ಕಳೆದು ಹೋದ ಆಟಿಕೆ ಹುಡುಕಿ ಕೊಟ್ಟ ಮೇಲೆ ಸ್ನಾನಕ್ಕೆ ಹೋಗಲು ಸಮಯವಿರುವುದಿಲ್ಲ ಆಕೆಗೆ. ಇಷ್ಟಾದ ನಂತರ ಮಗಳನ್ನು ಶಾಲೆಯಿಂದ ಕರೆತಂದು ballet ಕ್ಲಾಸಿಗೆ ಕರೆದೊಯ್ಯುತ್ತಾಳೆ. ಮೂರು ಹೊತ್ತಿನ ಅಡುಗೆ ಮತ್ತು ತರಾವರಿ ತಿಂಡಿ ತಯಾರಿ ಮಾಡಿ, ಮಕ್ಕಳ ಅಜ್ಜಿಯಂದಿರಿಗೆ ಫೋನಾಯಿಸಿ, ಅವರಿಗೆ ಮೊಮಕ್ಕಳ ಫೋಟೋ ಕಳಿಸಿ ಕೊಡುತ್ತಾಳೆ. ನಾನು ಒಂದೆರೆಡು ಬಾರಿ ಆಕೆಗೆ ಫೋನ್ ಮಾಡಿ ನಾನು ಬಹಳ ಬ್ಯುಸಿ ಇದ್ದೇನೆ ‘ ಸ್ವಲ್ಪ ನನ್ನ ಕೆಂಬಣ್ಣದ ಕಾಲ್ಚೀಲ ಹುಡುಕಿ ಇಡ್ತೀಯ ಅಂತ ಕೇಳುತ್ತೇನೆ. 

 

ಆಕೆಗೆಂದು ಲಭ್ಯವಿರುವುದು ಕೇವಲ ೪ ನಿಮಿಷಗಳು ಮಾತ್ರ. ನೆಲದ ಮೇಲೆ ಬಿದ್ದ ತಿನಿಸೇ ಆಕೆಯ ಊಟ. ದಿನಕ್ಕೆ ೧೫ ಘಂಟೆಗಳ ಬಿಡುವಿಲ್ಲದ ದುಡಿತ ಆಕೆಯದು.  ೩೬೫ ದಿನ ಪೂರ್ತಿ, ರಜೆಯಿಲ್ಲ. ಇಷ್ಟೆಲ್ಲಾ ಕಷ್ಟ ಬಿದ್ದರೂ ಆಕೆಯ ಪ್ರಕಾರ ಪೂರ್ತಿ ಸಮಯ ತಾಯಿಯಾಗಿರುವುದೇ ಒಂದು ವರದಾನ,  ಮಕ್ಕಳೊಂದಿಗೆ ಮನೆಯಲ್ಲಿರುವ ಭಾಗ್ಯ.

 

ಈ ಪ್ರಬಂಧ ಓದಿ ನನ್ನ ಬದುಕು ನನ್ನ ಕಣ್ಣ ಮುಂದೆ ಬಂದು ಬಿಟ್ಟಿತು. ಇದೇ juggling ನನ್ನ ಮಡದಿಯದೂ. ಆರು ವರ್ಷದ ಪೋರ, ೧೫ ತಿಂಗಳ ಪೋರಿ ಸರ್ಕಸ್ಸಿನ ರಿಂಗ್ ಮಾಸ್ಟರ್ ಪ್ರಾಣಿಗಳನ್ನು ಮಣಿಸಿ, ಕುಣಿಸುವಂತೆ ತಮ್ಮ ತಾಯಿಯನ್ನು ಕುಣಿಸುತ್ತಾರೆ. ನಾನಾದರೋ ನನ್ನ ಲ್ಯಾಪ್ಟಾಪ್ ಆಯಿತು ಇಲ್ಲಾ ಪುಸ್ತಕ ಆಯಿತು. ಮನೆಯಲ್ಲಿ ಭೂಕಂಪವಾದರೂ ತಿರುಗಿ ನೋಡುವುದಿಲ್ಲ. ನನ್ನ ಈ ಸ್ವಭಾವ ನೋಡಿಯೋ ಅಥವಾ ಗಂಡು ಜಾತಿಯೇ ಹೀಗೆ ಎಂದೋ ಆಕೆಯೂ ನನಗೆ ಯಾವ ಕೆಲಸವೂ ಹೇಳುವುದಿಲ್ಲ. ಹೆಚ್ಚು ಎಂದರೆ garbage ಹೊರಕ್ಕೆ ಎಸೆಯಲು ಮಾತ್ರ ನನ್ನ ಸಹಾಯ ಸೀಮಿತ. ಸಿಮೊನ್ ರ ಈ ಪ್ರಬಂಧ ಓದಿ ಸ್ವಲ್ಪ guilty ಫೀಲ್ ಆಗ್ತಿದೆ. ನೀವು ಇದನ್ನು ಓದುತ್ತಿರುವಂತೆಯೇ ನನ್ನ ಮಗಳು, ಹೂದಾನಿ ತುಂಬಾ ಸೌಟು, ಬೂಟು, ಚಮಚ, ಆಟಿಕೆಗಳನ್ನು ತುಂಬಿಸಿ  ಇಟ್ಟಿದ್ದಾಳೆ, ಅದನ್ನು  ಬರಿದು ಮಾಡಿ ಬರುತ್ತೇನೆ.

ಅಡ್ಡ ಹೆಸರು, ದಿಡ್ದ ಹೆಸರು

ಸಾಬು ಅಂತ ಕರೆಯುತ್ತಿದ್ದರು ನನ್ನನ್ನು. ಪ್ರೀತಿಯಿಂದ ಕರೆಯುತ್ತಿದ್ದರಿಂದ ಸಹಿಸಿಕೊಳ್ಳುತ್ತಿದ್ದೆ. ಅದರಲ್ಲೂ ಶಿಕ್ಷಕರು ಕರೆದರೆ protest ಮಾಡಲು ಸಾಧ್ಯವೇ? ನಾನಂತೂ ಆ ಪದವನ್ನು ಅತ್ಯಂತ ಲಘುವಾಗಿ ತೆಗೆದುಕೊಳ್ಳುತ್ತಿದ್ದೆ. ಒಮ್ಮೆ, ನಾನು ಚಿಕ್ಕವನಿದ್ದಾಗ ನನ್ನ ಮಿತ್ರ ಬಸರಾಜ ಕೇಳಿದ ಏನೋ ಬೆಳಿಗ್ಗೆ ಮನೆಯಲ್ಲಿ ತಿಂಡಿ ಎಂದು. ನಾನು ಇಡ್ಲಿ ಎಂದೆ. ಮಾರನೆ ದಿನವೂ ಕೇಳಿದ, ಮತ್ತೆ ಇಡ್ಲಿ ಅಂದೆ. ಇಡ್ಲಿಯಷ್ಟು prolific breakfast ಬೇರೆ ಇಲ್ಲ ಅಂತ ಅನ್ನಿಸುತ್ತೆ. ಒಂದೇ ಏಟಿಗೆ ೫೦ ಇಡ್ಲಿ ಹಿಟ್ಟನ್ನು ಪಾತ್ರೆಗೆ ಏರಿಸಿಬಿಟ್ಟರೆ ಸ್ವಲ್ಪ ಹೊತ್ತಿನಲ್ಲೇ ಬೇಕಷ್ಟು ಜನರಿಗೆ ಇಡ್ಲಿ ಸರಬರಾಜು ಮಾಡಬಹುದು. ಮೂರನೇ ದಿನವೂ ನನ್ನ ಉತ್ತರ ಇಡ್ಲಿ. ಇದನ್ನು ಕೇಳಿದ ಅವನು ” ಏನೋ ನಿನಗೆ ಇಡ್ಲಿ ಅಂದ್ರೆ ಅಷ್ಟೊಂದು ಇಷ್ಟಾನ? ಅಂದ್ರೆ ನಿನ್ ಹೆಸರು ಈಗ ” ಇಡ್ಲಿ ಬೂಸಾ” ಎಂದು ಬೀದಿಯಲ್ಲೆಲ್ಲಾ ಟಾಮ್ ಟಾಮ್ ಮಾಡಿದ. ಕೆಲವೊಮ್ಮೆ tuition ಗೆ ತಡವಾಗಿ ಬರುತ್ತಿದ್ದ ನನ್ನನ್ನು ಮೇಡಂ ಒಬ್ಬರು late latif ಎಂದು ಕರೆಯುತ್ತಿದ್ದರು. ನನ್ನ ಮಿತ್ರ ಗುರುವಿನ ಅಡ್ಡ ಹೆಸರು “ಮುಳಗಾಯಿ”. ಅವನ ಅಕ್ಕಂದಿರು ಇಟ್ಟ ಹೆಸರು. ಎಲ್ಲವನ್ನು ಬಲ್ಲ ನನ್ನ ಮಿತ್ರನೊಬ್ಬನ ಹೆಸರು ” ದುನಿಯಾ ಕಿ ಚಾವಿ ” ಎಂದು. ಅಂದ್ರೆ ಅವನಿಗೆ ಗೊತ್ತಿಲ್ಲದ ವಿಷಯ ಯಾವುದೂ ಇಲ್ಲ ಅಂತ. ಇನ್ನೊಬ್ಬ ಹೊಸ ಹೊಸ ಕತೆಗಳನ್ನು, ಸುದ್ದಿಗಳನ್ನು ಹುಟ್ಟು ಹಾಕುತ್ತಿದ್ದ. ಬಹುತೇಕ ಅವು ಸುಳ್ಳಾಗಿರುತ್ತಿದ್ದವು. ಕೊನೆಗೆ ಅವನಿಗೆ ಆಯಿತು ನಾಮಕರಣ, ” ಲುಂಗಿ ನ್ಯೂಸ್ ” ಅಂತ.

ಹಾರುವ ಚಪ್ಪಲಿ

ಇದೀಗ ಬಂದ ವರದಿಯ ಪ್ರಕಾರ ಓರ್ವ ವ್ಯಕ್ತಿ ಅಡ್ವಾಣಿ ಯವರ ಮೇಲೆ ಚಪ್ಪಲಿಯನ್ನು ಬೀಸಿ ತನ್ನ ಅಸಮಾಧಾನವನ್ನು ವ್ಯಕ್ತಪಡಿಸಿದ. ಅಭಿಪ್ರಾಯಗಳನ್ನು, ಕುಂದುಕೊರತೆಗಳನ್ನು ದುಃಖ ದುಮ್ಮಾನಗಳನ್ನು ವ್ಯಕ್ತಪಡಿಸಲು ಹತ್ತು ಹಲವು ಮಾರ್ಗಗಳು. ಇರಾಕಿನಲ್ಲಿ ಮುಂತಸರ್ ಜೈದಿ ಎನ್ನುವ ಪತ್ರಕರ್ತನೊಬ್ಬ ಅಮೆರಿಕೆಯ ಬುಷ್ ಮೇಲೆ ಬೂಟುಗಳನ್ನು ಎಸೆದು ಅಭಿವ್ಯಕ್ತಿ ಸ್ವಾಂತ್ರ್ಯದ expression ಗೆ ಹೊಸ ನಾಂದಿ ಹಾಡಿದ. ಲಕ್ಷಗಟ್ಟಲೆ ಇರಾಕಿಗಳನ್ನು ವಿನಾಕಾರಣ ಕೊಂದ ಬುಷ್ನ ಮೇಲೆ ಆಕ್ರಮಣ ಮಾಡಿದ್ದರಲ್ಲಿ ತಪ್ಪಿಲ್ಲ ಎಂದು ತನ್ನ ಕೆಲಸವನ್ನು ಸಮರ್ಥಿಸಿಕೊಂಡ ಜೈದಿ. ಬಾಗ್ದಾದಿನಿಂದ ಆರಂಭಗೊಂಡ ಈ ಫ್ಯಾಷನ್ ವಿಶ್ವದ ಹಲವು ನಗರಗಳ ಪರ್ಯಟನ ಮಾಡುತ್ತಿದೆ, cat walk ಥರ. ಅತ್ಯಂತ ವಿಧೇಯವಾಗಿ, ದೈನ್ಯತೆಯಿಂದ ನಮ್ಮ ಕಾಲಡಿ ಬದುಕನ್ನು ನಡೆಸುತ್ತಿರುವ ಬೂಟು, ಎಕ್ಕಡ ಇತ್ಯಾದಿಗಳು ನಮ್ಮ ಮೇಲೇ ಎರಗಲು ಆರಂಭಿಸಿದರೆ ಹೇಗೆ?

 

೧೯೯೪ ರಲ್ಲಿ ಅಮೇರಿಕೆಯಲ್ಲಿ “ಲೋರೆನ್ ಬಾಬ್ಬಿಟ್” ಹೆಸರಿನ ತರುಣಿಯೊಬ್ಬಳು ತನ್ನ ಪ್ರಿಯಕರ ತನ್ನನ್ನು ಬಲಾತ್ಕರಿಸಲು ಯತ್ನಿಸಿದಾಗ ಅವನ ಲಿಂಗಚ್ಚೇಧ ಮಾಡಿ ವಿಶ್ವ ಪ್ರಸಿದ್ದಿ ಪಡೆದಳು. ಅಷ್ಟೇ ಅಲ್ಲ “ಲಿಂಗಚ್ಚೇಧ” ಕ್ಕೆ ಪರ್ಯಾಯ ಪದವಾಗಿ “bobbitt” ಆಂಗ್ಲ ಶಬ್ದಕೋಶವನ್ನೂ ಸೇರಿ ಅವಳ ಹೆಸರು ಅಮರವಾಯಿತು.  

 

ಪಾಶ್ಯಾತ್ಯ ಸಂಸ್ಕೃತಿಯಲ್ಲಿ ನಾಲ್ಕೂ ಬೆರಳುಗಳನ್ನು ಮಡಚಿ ಮಧ್ಯದ ಬೆರಳನ್ನು ತೋರಿಸುವುದು ದೊಡ್ಡ ಅವಮಾನ, ತೆಗಳಿಕೆ. ಶ್ರೀಲಂಕ ದಲ್ಲಿ  ತೋರು ಬೇರನ್ನು ತೋರಿಸಿದರೆ ವಕ್ಕರಿಸಿತು ಗ್ರಹಚಾರ. ಮಧ್ಯ ಪ್ರಾಚ್ಯ ರಾಷ್ಟ್ರಗಳಲ್ಲಿ ಬಲಗೈಯ ಮಧ್ಯದ ಬೆರಳನ್ನು ಎಡಗೈಯ ಹಸ್ತದೊಳಕ್ಕೆ ಚುಚ್ಚಿದರೆ ದೊಡ್ಡ ರಂಪ. ಹೀಗೆ ಸಾಗುತ್ತದೆ ಅವಮಾನಿಸುವ ವೈವಿಧ್ಯಗಳ  ಸರಣಿ. 

ಎಲ್ಲಾ ಸರಿ ಭಾರತವನ್ನೇಕೆ ಬಿಟ್ಟೆ? ನಾವು ಕೈ ಸನ್ನೆ ಮಾಡೋದು ಬಸ್ಸನ್ನು ನಿಲ್ಲಿಸೋಕೆ ಮಾತ್ರ. ಅದು ಬಿಟ್ರೆ ನಾವು more verbal.

ಅಮೇರಿಕೆಗೆ ತಿಗಣೆ ಕಡಿತ

ಅಮೆರಿಕೆಗೀಗ ತಿಗಣೆ ಕಾಟ ಅಂತೆ. ಅಮೆರಿಕವೇ ಒಂದು ಮಹಾ ತಿಗಣೆ ಎಂದು ಅದನ್ನು ನಿಗ್ರಹಿಸಲು ನಾವು ಯೋಚಿಸುತಿದ್ದರೆ ಬಂತು ಹೊಸ ಪ್ರಾರಬ್ದ.  ಕಳೆದ ೫ ವರ್ಷಗಳಲ್ಲಿ ಶೇಕಡಾ ೭೧ ರಷ್ಟು ವೃದ್ಧಿ ಆಗಿದೆ ಅಂತೆ ಅಮೇರಿಕೆಯಲ್ಲಿ. ಎಲ್ಲಿಂದ ಬಂದವು ಎಂದು ಕೇಳಬೇಡಿ, ಬಹುಶಃ ಅಮೆರಿಕೆಯ ಮಿತ್ರ ಲಾಡೆನ್ ಮಹಾಶಯ ಆಫ್ಘಾನಿಸ್ತಾನದ “ತೋರಬೋರ” ಗವಿಗಳಿಂದ ಕಳಿಸಿರಲಿಕ್ಕೂ ಸಾಕು. you cannot laugh it off, anything can happen in this world, you see?

 ಇದರ ಹಾವಳಿ ತಡೆಯಲು ” ರಾಷ್ಟ್ರೀಯ ತಿಗಣೆ ಶೃಂಗ ಸಭೆ” ಅಮೇರಿಕೆಯಲ್ಲಿ. ತಿಗಣೆಯಿಂದ ಕಚ್ಚಿಸಿಕೊಂಡು ಕೆಂಡಾ ಮಂಡಲವಾಗಿರುವ  ಎಲ್ಲರೂ ಸೇರಿ ಚರ್ಚೆ ನಡೆಸಬಹುದು ತಿಗಣೆ ಹಾವಳಿ ಹೇಗೆ ತಡೆಯುವುದು ಎಂದು. ಸಭೆ ಗಿಭೆ ಮಾಡಿ ಡಾಲರ್ ಕಳೆಯುವುದಕ್ಕಿಂತ ಬಾಂಗ್ಲಾ ದೇಶದಿಂದಲೋ, ಅಥವಾ ನಮ್ಮ ದೇಶದಿಂದಲೋ ಒಂದಿಷ್ಟು ಐಡಿಯಾ ಎರವಲು ಪಡೆಯಬಾರದೆ? ತುಂಬಾ ವರ್ಷಗಳ ಹಿಂದಿನ ಮಾತು. ಒಮ್ಮೆ ಒಂದು ಜಾಹೀರಾತು ನೋಡಿದೆ. ತಿಗಣೆ ಕೊಲ್ಲುವ ಮೆಶಿನ್ ಬಗ್ಗೆ. ಕಂಪೆನಿ ಇರುವುದು ದೆಹಲಿಯಲ್ಲಿ. ೫ ರೂಪಾಯಿ ಸ್ಟಾಂಪ್ ಮಾತ್ರ ಫೀಸು. ಸರಿ ಹೇಗಾದರೂ ತಿಗಣೆ ತೊಲಗಿದರೆ ಸಾಕು ಅಂತ ಹೇಗೋ ೫ ರೂಪಾಯಿ ಹೊಂದಿಸಿ ಕಳಿಸಿದ್ದಾಯಿತು. ಬಂತು ಮೆಶಿನ್ ಮನೆಗೆ. ಕಾತುರದಿಂದ ಕವರ್ ತೆರೆದು ನೋಡಿದಾಗ ೨ ಚಿಕ್ಕ ಕಲ್ಲುಗಳು, ಮತ್ತೊಂದು ಕಡ್ಡಿ. ಅದರೊಂದಿಗೆ manual ಬೇರೆ. ಕಡ್ಡಿಯಿಂದ ತಿಗಣೆ ಹಿಡಿದು ಎರಡು ಕಲ್ಲುಗಳ ನಡುವೆ ಅದನ್ನು ಇಟ್ಟು ಜಜ್ಜಬೇಕು. ಎಂಥಾ ಮೋಸ ನೋಡಿ. ಒಂದು ಕಡೆ ೫ ರೂಪಾಯಿ ಹೋದ ದುಃಖ, ಮತ್ತೊಂದೆಡೆ ದೂರದ “ಜಂತರ್ ಮಂತರ್” (ದಿಲ್ಲಿ) ನಲ್ಲಿ ಕೂತು ಚೇಷ್ಟೆ ಮಾಡಿದವನ ಮೇಲೆ ಸಾವಿರ ತಿಗಣೆ ಹರಿಬಿಡುವಷ್ಟು ಕೋಪ.

ಅಮೆರಿಕೆಯ ಈ ತಿಗಣೆ ತಾಪತ್ರಯ ನೋಡಿ ಇರಾನ್, ಉತ್ತರ ಕೊರಿಯಾ, ಅಲ್ಕೈದ, ಲಿಬ್ಯ, ಕ್ಯೂಬಾ, ವೆನೆಜುಯೆಲ ಗಳಿಗೆ ಆನಂದವೋ ಆನಂದ. ನಮ್ಮ ಪಾಲಿಗೆ ದೊಡ್ಡ ತಿಗಣೆಯಾಗಿದ್ದ ಅಮೇರಿಕೆಗೆ ದೇವರು ಕಳಿಸಿದನಲ್ಲಾ ರಕ್ತ ಹೀರುವ ಸರಿಯಾದ ತಿಗಣೆಯನ್ನು ಎಂದು.                  

ಲೋಕಲ್ ಅನೆಸ್ಥೀಸಿಯ (ಮರೆವಳಿಕೆ) ಕೊಟ್ಟು ನಮಗೆ ತೊಂದರೆ ಆಗದಂತೆ ರಕ್ತ ಪಾನ ಮಾಡುವ ತಿಗಣೆಗಳಿಂದ  ಕಚ್ಚಿಸಿಕೊಳ್ಳುವುದೂ ಒಂದು ಮಜಾ.

ಇದೀಗ ಬಂದ ಸುದ್ದಿ: ಉತ್ತರ ಪ್ರದೇಶದ ಲಕ್ನೌ ದಲ್ಲಿ ಶಿಯಾ ಮುಸ್ಲಿಮರನ್ನು ತಿಗಣೆ ಅಂತಲೂ, ಸುನ್ನಿ ಮುಸ್ಲಿಮರನ್ನು ಸೊಳ್ಳೆ ಎಂದೂ ಕರೆಯುತ್ತಾರಂತೆ. ಅಂದ್ರೆ ನಾನು ಸೊಳ್ಳೆ.

ಅಗಲುವ ಮುನ್ನ…

ನೆನಪಿಡಿ: bedbug ಎನ್ನುವುದು ಒಂದು ಪದ. bed bug ಅಲ್ಲ.

 

ಎರಡು ಚುನಾವಣೆಗಳ ಸುತ್ತ

ನವೆಂಬರ್ ೪, ೨೦೦೮ ರಲ್ಲಿ ನಡೆದ ಐತಿಹಾಸಿಕ ಚುನಾವಣೆಯಲ್ಲಿ ಬರಾಕ್ ಒಬಾಮ ಜಯಭೇರಿ ಬಾರಿಸಿದರು. ೪೪ನೆ ಅಧ್ಯಕ್ಷರಾಗಿ ಚುನಾಯಿತರಾದ ಒಬಾಮ ಅಮೆರಿಕೆಯ ಪ್ರಪ್ರಥಮ ಕಪ್ಪು ಅಧ್ಯಕ್ಷ ಎಂಬ ಹೆಗ್ಗಳಿಕೆ ಮತ್ತು ಗೌರವಕ್ಕೆ ಪಾತ್ರರಾಗಿ ಚರಿತ್ರೆಯ ಸುವರ್ಣ ಪುಟಗಳಲ್ಲಿ ತಮ್ಮ ಹೆಸರನ್ನು ಸೇರಿಸಿಕೊಂಡರು. ಹಣಾಹಣಿಯಿಂದ ಕೂಡಿದ, ruthless campaign ಎಂದು ಹೆಸರು ಪಡೆದ ಈ ಚುನಾವಣೆ ಅಮೆರಿಕೆಯ ಪ್ರಮುಖ ಎರಡು ಪಕ್ಷಗಳಾದ ರಿಪಬ್ಲಿಕನ್ ಮತ್ತು ಡೆಮೊಕ್ರಾಟಿಕ್ ಅಭ್ಯರ್ಥಿಗಳ ವಾಗ್ಯುದ್ಧಗಳ ಮಹಾಪೂರವನ್ನೇ ಸೃಷ್ಟಿಸಿತು. ತಮ್ಮದೇ ಪಕ್ಷದ ಹಿಲೆರಿ ಕ್ಲಿಂಟನ್ ಅತ್ಯಂತ ಪ್ರಬಲವಾದ ಸವಾಲನ್ನು ಒಡ್ಡಿದಾಗ ವಿಚಲಿತರಾಗದ ಒಬಾಮಾ ಸಂಯಮದಿಂದ ತಮ್ಮ ವಾಕ್ಚಾತುರ್ಯದಿಂದ janara ಮನ ಗೆದ್ದರು. ಹಿಲೆರಿ, ಒಬಾಮ ಮಧ್ಯೆಯ ಸಮರ ಒಬಾಮರ ಅಧಿಕೃತ ಅಧ್ಯಕ್ಷೀಯ ಅಭ್ಯರ್ಥಿ ಎಂಬ ಘೋಷಣೆಯೊಂದಿಗೆ ನಿಂತಿತು. ರಿಪಬ್ಲಿಕನ್ ಅಭ್ಯರ್ಥಿ ಜಾನ್ ಮಕೇನ್ ಮತ್ತು ಸಾರ ಪೇಲಿನ್ ಜೋಡಿ ಎದುರು ಒಬಾಮ – ಹಿಲೆರಿ ಜೋಡಿ ಅಮೋಘವಾಗಿ ಹೋರಾಡಿತು.     CBS, CNN, MSNBC ಮುಂತಾದ ಮಾಧ್ಯಮಗಳೆದುರಲ್ಲದೆ ಮಾಲ್ ಗಳ ಆವರಣದಲ್ಲೂ, ಕಾಲೇಜು ಕಾಮ್ಪಸುಗಳಲ್ಲೂ, ರೋಡ್ ಷೋ ಗಳಲ್ಲೂ ಎಲ್ಲೆಲ್ಲೂ ಚರ್ಚೆಗಳಲ್ಲಿ ಭಾಗವಹಿಸ್ದರು ಅಮೆರಿಕೆಯ ಅಭ್ಯರ್ಥಿಗಳು. ತಮ್ಮ ನಾಡಿಗಾಗಿ ಏನು ಮಾಡಬಹುದು, ಯಾವುದು ಒಳ್ಳೆಯದು, ಯಾವ ನೀತಿ ಅಮೇರಿಕೆಗೆ ಒಳ್ಳೆಯದು ಹೀಗೆ ನೂರಾರು ವಿಷಯಗಳ ಬಗ್ಗೆ ವ್ಯಾಪಕ ಚರ್ಚೆಗಳಲ್ಲಿ ಭಾಗವಹಿಸಿದರು. ಅಪರೂಪದ ಸಂದರ್ಭಗಳನ್ನು ಬಿಟ್ಟರೆ ಎಲ್ಲೂ ವೈಯಕ್ತಿಕ ಟೀಕೆಗಳಿಗೆ ಆಸ್ಪದ ಕೊಡಲಿಲ್ಲ. ಒಟ್ಟಿನಲ್ಲಿ ಒಂದು ಐತಿಹಾಸಿಕ ಚುನಾವಣೆಯಾಗಿ ಹೊಮ್ಮಿತು ಅಮೆರಿಕೆಯ ೨೦೦೮ರ ಚುನಾವಣೆ.  

 

 

ಹೆಚ್ಚು ಮಾತನಾಡಿದರೆ ತಲೆ ಕಡಿಯಬೇಕಾಗುತ್ತದೆ”

ತಲೆ ಕಡಿಯುವವನ ಮೇಲೆ ರೋಡ್ ರೋಲ್ಲರ್ ಓಡಿಸುತ್ತೇನೆ”

ಸುಸ್ವಾಗತ, ಭವ್ಯ ಭಾರತದ ಚುನಾವಣಾ ಮಂಟಪಕೆ….

 

ಚುನಾವಣೆಯ ಕಾವೇರುತ್ತಿದ್ದಂತೆ ಮೇಲೆ ಕಾಣಿಸಿದ ಹೇಳಿಕೆಗಳನ್ನು ನಾವು ಕೇಳಲು ಆರಂಭಿಸಿದೆವು. ಶತಮಾನಗಳಿಂದ ಇಲ್ಲೇ ಹುಟ್ಟಿ ಸಾಯುವ ಒಂದು ಜನಾಂಗದವರನ್ನು ಒಬ್ಬ ಯುವ ರಾಜಕಾರಣಿ ಮೇಲಿನಂತೆ ಜರೆದಾಗ ಆತನ ಕಿವಿ ಹಿಡಿದು ಬುದ್ಧಿ ಹೇಳುವ ಬದಲು ಹಿರಿಯ ರಾಜಕಾರಣಿಯೊಬ್ಬರು ರೋಡ್ ರೋಲ್ಲರ್ ಓಡಿಸಲು ತಯಾರಾದರು. ಚುನಾವಣೆ ದಿನ ಪ್ರಕಟವಾಗಿದ್ದೇ ತಡ ಪಕ್ಷಗಳಲ್ಲಿ ತುಮುಲ, ಆತುರ. ಯಾರು ಯಾರೊಂದಿಗೆ ಮಲಗುವುದು ಎಂದು. ideology ಹಾಳು ಬಾವಿ ಸೇರಿತು. ನಮಗೆ ಬೇಕಿರುವುದು ಸ್ಥಾನ, ಅಧಿಕಾರ. ರಸ್ತೆಯಲ್ಲಿ ಓಡಾಡುವ ಬಹುತೇಕ ವಾಹನಗಳಲ್ಲಿ ಸಾರಾಸಗಟು ಹೆಂಡ – ಸಾರಾಯಿ, ರೊಕ್ಕ – ರವಿಕೆಗಳು. ಮತದಾರರಿಗೆ ಹಂಚಲು. ಹಾಗೆ ಮಾಡಬೇಡಿ, ಹೀಗೆ ಮಾಡಬೇಡಿ ಎಂದು ಹೇಳಲು ಚುನಾವಣಾ ಆಯೋಗ. ಯಾಕೆಂದರೆ ನಾವು ನೋಟಿಸು ಪ್ರಿಯರಲ್ಲವೇ? nation of notices. ಅಲ್ಲಿ  ಉಗುಳಬೇಡ, ಇಲ್ಲಿ ಹುಯ್ಯಬೇಡ. ಕಿಟಕಿ ಹೊರಗೆ ತಲೆ ಹಾಕಬೇಡ, ಬಾಗಿಲ ಹೊರಗೆ ಬಾಲ ತೂರಿಸಬೇಡ. ಒಂದು ರೀತಿಯ class room ನ ವಾತವರಣ. ಕ್ಲಾಸಿಗೊಬ್ಬ ಮೊನಿಟರ್ ಬೇಕೇ ಬೇಕು. ಬೆತ್ತದ ನೆರಳಿನಲ್ಲಿ ಬದುಕುವವರು ನಾವು. ಏನು ಹೇಳಬೇಕು ಏನು ಹೇಳಬಾರದು ಎಂದು ಮೊನಿಟರ್ ಎಂಬ ಆಯೋಗ ಹೇಳಬೇಕು ಅಭ್ಯರ್ಥಿಗಳಿಗೆ. ಹಿರಿಯ ರಾಜಕಾರಣಿಯೊಬ್ಬರನ್ನು  ಅರಬ್ಬೀ ಸಮುದ್ರಕ್ಕೆ ಎಸೆಯಬೇಕಂತ ಒಂದು ಪಕ್ಷ ಹೇಳಿದರೆ, ಮತ್ತೊಬ್ಬ ಮಹಿಳಾ ರಾಜಕಾರಣಿಯನ್ನು “ಬುಡಿಯಾ, ಗುಡಿಯಾ” ಎಂದು ಕರೆಯುತ್ತಾನೆ. ಯಾವನಾದರೂ ನಮ್ಮ ದೇಶದ ಬಗ್ಗೆ ಗಹನವಾಗಿ ಚರ್ಚೆಗೆ ಇಳಿದಿದ್ದು ನೋಡಿದ್ದೀರ? ಪಕ್ಕದ ರಾಷ್ಟ್ರದ ಪುಂಡಾಟಿಕೆಯನ್ನು ಹೇಗೆ ನಿಗ್ರಹಿಸುವುದು, ನಮ್ಮ ದೇಶವನ್ನು ಮುಂದುವರಿದ ರಾಷ್ಟ್ರಗಳ ಸಾಲಿನಲ್ಲಿ ಹೇಗೆ ಸೇರಿಸುವುದು, ಹೀಗೆ ಒಂದಾದರೂ ಮಾತು ಬಂತೆ ಖಾದಿಗಳಿಂದ? ಕೆಳಗಿವೆ ನೋಡಿ ದೂರದ ಅಮೆರಿಕಾದ ಒಬಾಮ ಹೇಳಿದ ಮಾತುಗಳು.

America, this is our moment. This is our time. Our time to turn the page of the policies of the past.

 

“It took a lot of blood, sweat and tears to get to where we are today, but we have just begun. Today we begin in earnest the work of making sure that the world we leave our children is just a little bit better than the one we inhabit today.”

 ಕೊನೆಗೊಂದು ಮುತ್ತಿನಂಥ ಮಾತುಗಳು ಒಬಾಮ ಬಾಯಿಂದ…

there is no white america, there is no black america, there is only UNITED STATES OF AMERICA.

ಎಲ್ಲಿ ನೋಡೋಣ ನಮ್ಮವರು ಅಂಥ ಮಾತು ಹೇಳುವುದನ್ನು. ” ಇದು ಹಿಂದೂ ಭಾರತವಲ್ಲ, ಮುಸ್ಲಿಂ ಭಾರತವಲ್ಲ, ನಮ್ಮದು ಅಖಂಡ ಭಾರತ”.

ಹೀಗೆ ಹೇಳಲು ಸಾಧ್ಯವಾದೀತೆ? ಯಾಕೆ ಸಾಧ್ಯವಾಗಬಾರದು? 

 

 

 

ಗಂಗೂ, ಈ ಬೈಕು ಕಲಿಸಿಕೊಡೋ ನಂಗೂ

telecommunication-tn 

ಈ ಹಾಡನ್ನು ಒಬ್ಬ “ಮೊಬೈಲ್ ಅಪ್ಪ” ಹೆಚ್ಚು ಕಡಿಮೆ ಪೂರ್ತಿ ಕೇಳಿಸಿದ ನನ್ನ ರೈಲು ಪ್ರಯಾಣದ ವೇಳೆ. ಅಕ್ಕ ಪಕ್ಕ ಕುಳಿತಿರುವವರ ಯಾವುದೇ ಪರಿವೆ ಇಲ್ಲದೆ ಎಲ್ಲರೂ ತನ್ನ creation ಮೆಚ್ಚಿ ತಲೆದೂಗುತ್ತಿದ್ದಾರೆನೋ ಅನ್ನೋ ಭಾವದಿಂದ ಆತ ಕೂತಿದ್ದ. ಭದ್ರಾವತಿಯಿಂದ ಬೆಂಗಳೂರು ತಲುಪುವವರೆಗೂ ಎಂಥೆಂಥ ಹಾಡು ಬೇಕು ನಿಮಗೆ. ಎಲ್ಲಾ ಲಭ್ಯ, ಸಹನೆ ಒಂದಿದ್ದರೆ.

 

ಸಂಬಳ ೨ ಸಾವಿರ ಆದರೂ ೧೦ ಸಾವಿರದ ಮೊಬೈಲ್ ಇರುತ್ತೆ ಕೆಲವರ ಬಳಿ. ಮೊಬೈಲ್ ನಷ್ಟು ಸಾಮಾಜಿಕ ನ್ಯಾಯವನ್ನು ಬೇರಾವುದೇ ವ್ಯಕ್ತಿಯೂ, ವ್ಯವಸ್ಥೆಯೂ, ಉಪಕರಣವೂ ನೀಡಿರಲಾರದು. ಭಿಕ್ಷುಕರ ಕೈಯಲ್ಲೂ ಮೊಬೈಲ್. ನಾನಿರುವ ಜೆದ್ದಾಹ್ದಲ್ಲಿ ಒಂದು ತಮಾಷೆ ಕೇಳಿ.  ಸೌದಿಗಳು (ಅರಬರು) ಬಾಂಗ್ಲಾದೇಶದ ರಸ್ತೆ ಗುಡಿಸುವ ಕೆಲಸಗಾರರಿಗೆ, ಮತ್ತು ಇತರ ನಾಡಿನವರಿಗೆ ದಾನ ಕೊಡುವ ಪದ್ಧತಿ ಇದೆ. ಹೀಗೆ ಒಮ್ಮೆ ಒಬ್ಬ ಅರಬ್ ರಸ್ತೆ ಬದಿ ನಿಂತಿದ್ದ ಬಂಗ್ಲದೆಶದವನನ್ನು ಕರೆದು ಹಣ ಕೊಡಲು ಹೋದಾಗ ಆ ಬಂಗಾಳಿಗೆ ಒಂದು ಕರೆ ಬಂತು. ಜೇಬಿನಿಂದ ಹೊರಗೆ ಬಂತು ಹೊಳೆಯುವ N 90 ಮೊಬೈಲು. ಇದನ್ನು ನೋಡಿದ ಸೌದಿ ಹೇಳಿದ ನನ್ನ ಹತ್ತಿರ ಇನ್ನೂ ಓಬೀರಾಯನ ಕಾಲದ ಮೊಬೈಲ್ ಇರೋದು, ನಿನಗೇಕೆ ಭಕ್ಷೀಸು ಎಂದು ಹೋಗಿಬಿಟ್ಟ.

 

ಹೊಸ technology ಜೊತೆ ಒಂದಿಷ್ಟು ಸೋಶಿಯಲ್ ರೆಸ್ಪೋನಿಸ್ಬಿಲಿಟಿ ಸಹ ಬರಬೇಕು.

ಪ್ರಪ್ರಥಮವಾಗಿ ವಾಹನ ಚಲಾವಣೆ ವೇಳೆ ದಯಮಾಡಿ ಮೊಬೈಲ್ ಉಪಯೋಗಿಸಬೇಡಿ. ಮೊನ್ನೆ ಅಮೆರಿಕಲ್ಲಿ ಒಬ್ಬಳು ಗಾಡಿ ಕಾರು ಚಲಾಯಿಸುತ್ತಾ ಮೆಸೇಜ್ ಮಾಡುತ್ತಿದ್ದಾಗ ನಿಂತ ವಾಹನಗಳ ಮೇಲೆ ಕಾರು ಚಲಾಯಿಸಿ ಒಬ್ಬ ವ್ಯಕ್ತಿಯನ್ನು ಕೊಂದಳು.

 

ಒಮ್ಮೆ ಸೌದಿ ಏರ್ಲೈನ್ಸ್ ನಲ್ಲಿ ಜೆದ್ದಾ ದಿಂದ ದಮ್ಮಾಂ ಹೋಗುವ ವೇಳೆ ವಿಮಾನ ಆರೋಹಣ ಆದ ನಂತರವೂ ಒಬ್ಬ ಅರಬ್ ತನ್ನ ಮೊಬೈಲ್ ಮೂಲಕ ಮಾತನಾಡುತ್ತಿದ್ದ. ಪರಿಚಾರಕರು ಬಂದು ಮನವಿ ಮಾಡಿಕೊಂಡರೂ ಅವನು ಹೇಳಿದ್ದು, ಇದೆಲ್ಲ ಸುಳ್ಳು, ಮೊಬೈಲ್ ಉಪಯೋಗಿಸಿಬಿಟ್ಟರೆ ವಿಮಾನ ಬಿದ್ದು ಹೋಗಲ್ಲ ಅಂತ. ದಮ್ಮಾಂ ತಲುಪಿದ ಕೂಡಲೇ ಆತನನ್ನು ಪೋಲೀಸರ ಕಸ್ಟಡಿಗೆ ಕೊಡಲಾಯಿತು. ಬೇಕಿತ್ತೆ ಇವನಿಗೆ ಈ ತೊಳಲಾಟ? 

 

ಮೊಬೈಲ್ ರಿಂಗ್ ಆದ ಕೂಡಲೇ ಅದನ್ನು ಸೈಲೆಂಟ್ ಮಾಡಿ ಉತ್ತರಿಸಿದರೆ ಎಷ್ಟು ಚೆನ್ನು. ಅವಳ (ನಿನ್ಗೂವಿನ) ಬೈಕಿನ ಮೇಲಿನ ಮೋಹ (ದ್ವಂದ್ವಾರ್ಥದ ಅಸಹ್ಯ ಹುಟ್ಟಿಸೋ ಪೋಲಿ ಹಾಡು)  ನನಗೇಕೆ ಕೇಳಿಸಬೇಕು?

 ಮೊಬೈಲ್ ನಲ್ಲಿ ಜೋರು ಜೋರಾಗಿ ಮಾತನಾಡೋದು. ಇವನ ಹೊಸ ಮೊಬೈಲ್ ನ ಬೆಲೆ ಅಥವಾ ಭತ್ತದ ಧಾರಣೆ ಬಗ್ಗೆ, ಗರ್ಲ್ ಫ್ರೆಂಡ್ ಬಗ್ಗೆ ಬೋಗಿಯಲ್ಲಿರುವವರಿಗೆಲ್ಲಾ ಕೇಳಿಸುವ ಅವಶ್ಯಕತೆ ಇಲ್ಲ. ಮೊಬೈಲ್ ನ volume ಕಡಿಮೆ ಇರಲಿ. 

ಆಸ್ಪತ್ರೆ ಆವರಣದಲ್ಲೂ, ಜನ ನೆಮ್ಮದಿಯಾಗಿ ಊಟ ಮಾಡುವ ರೆಸ್ಟುರಾಂಟ್ ಗಳಲ್ಲೂ ಮೊಬೈಲ್ ಉಪಯೋಗ ಕನಿಷ್ಟವಾಗಿರಲಿ.

ಸಭೆ ಸಮಾರಂಭಗಳಲ್ಲಿ, ಮದುವೆ ಮನೆಗಳಂಥ  ಸ್ಥಳಗಳಲ್ಲಿ ಮೊಬೈಲ್ ಆಪ್ ಮಾಡಿದರೆ ತುಂಬಾ ಒಳ್ಳೇದು.

ಆರಾಧನಾಲಯಗಳಲ್ಲಿ ಮೊಬೈಲ್ ಉಪಯೋಗ ಬೇಡ.

ಕೊನೆಗೆ ಮೊಬೈಲ್ ಗೂ ಮೊದಲು ಪ್ರಪಂಚ ಇತ್ತು ಅನ್ನುವುದು ನೆನಪಿರಲಿ.

ಎಲ್ಲರ ಕೈಯಲ್ಲೂ ಮೊಬೈಲ್ ನೋಡಿ ನನ್ನಾಕೆಯೂ ನನಗೂ ಬೇಕು ಎಂದು ಬೆನ್ನು ಬಿದ್ದಾಗ “ಇದೇನು  ಶೋಕಿ ಬಂತೆ ನಿಂಗೂ” ಎಂದು ಹೇಳಿ ಕೊಡಿಸಿದೆ.