ಚಿಕ್ಕ ಪುಟ್ಟ ಸೌಜನ್ಯಗಳು
ಚಿಕ್ಕ ಚಿಕ್ಕ ವಿಷಯಗಳಿಗೆ ತಲೆ ಕೆಡಿಸಿಕೊಳ್ಳಬಾರದಂತೆ.ಆಂಗ್ಲ ಭಾಷೆಯಲ್ಲಿ ಇದನ್ನು ಹೊಂದುವ ಮಾತು dont sweat the small stuff ಅಂತ. ಆದರೆ ಈ ಚಿಕ್ಕ ಪುಟ್ಟ ಕೆಲಸಗಳು ಆಹ್ಲಾದಕರ ಸೌಜನ್ಯಗಳಾಗಿ ಮಾರ್ಪಟ್ಟಾಗ? ತರುವುದು ನಾಕ, ಅಲ್ಲವೇ? ನಮ್ಮ ಬದುಕಿನ ನಿರಂತರ ಜಂಜಾಟಗಳ ನಡುವೆಯೂ ಕೆಲವೊಂದು ಮುಗುಳ್ನಗು ಮತ್ತು ಉಲ್ಲಾಸ ತರುವ ಘಟನೆಗಳು ಬಂದೇ ಇರುತ್ತವೆ. ಅಂಥ ಪುಟ್ಟ ಪುಟ್ಟ ಉಲ್ಲಾಸಮಯ ಕ್ಷಣ ಗಳಿಗಾಗಿಯೇ ಒಂದು ವೆಬ್ ತಾಣವೂ ಇದೆ. ಅದರಲ್ಲಿ ಜನ ತಮ್ಮ ದೈನಂದಿನ ಬದುಕಿನಲ್ಲಿ ಎದುರಾದ, ಎಡವಿದ ಸುಂದರ ಕ್ಷಣಗಳ ಬಗ್ಗೆ ಬರೆದು ಕೃತಜ್ಞತೆ ತೋರಿಸುತ್ತಾರೆ ಮತ್ತು ವಿಶ್ವ ನಾವೆಣಿಸಿದಂತೆ ತೀರಾ ಸ್ವಾರ್ಥಿಗಳ ಸಂತೆ ಅಲ್ಲ ಎಂದು ತೋರಿಸುತ್ತಾರೆ. ನನಗೂ ಈ ರೀತಿಯ ಮುಖದಲ್ಲಿ ಮಂದಹಾಸ, ಮನಸ್ಸಿಗೆ ಮುದ ನೀಡುವ ಚಿಕ್ಕ ಪುಟ್ಟ ಸಂಗತಿಗಳು ಸಿಗುತ್ತವೆ.
ಒಮ್ಮೆ ಪವಿತ್ರ ಮಕ್ಕಾ ನಗರ ತಲುಪಿ ಕಾರನ್ನು ಪಾರ್ಕಿಂಗ್ ನಲ್ಲಿ ನಿಲ್ಲಿಸಿ ಮಗಳನ್ನ ಎತ್ತಿಕೊಂಡು ಮಸೀದಿಯ ಕಡೆ ನಡೆದು ಬರುತ್ತಿದ್ದೆ. ಸ್ವಲ್ಪ ದೂರ ಬಂದಾಗ ರಸ್ತೆ ಬದಿ ನಿಲ್ಲಿಸಿದ್ದ ಕಾರೊಂದರಿಂದ ಮಹಿಳೆಯ ಸ್ವರ ಕೇಳಿಸಿತು excuse me, please accept this from me ಎಂದು. ತೆಗೆದುಕೊಂಡಾಗ ಪುಟ್ಟ ಚೀಲದಲ್ಲಿ ಒಂದು ಚಿಕ್ಕ ಖರ್ಜೂರದ ಪೊಟ್ಟಣ ಮತ್ತು ಲಬನ್ (ಮೊಸರನ್ನು ಹೋಲುವ ಪಾನೀಯ, ಅರೇಬಿಯಾದಲ್ಲಿ ಜನಪ್ರಿಯ) ಪ್ಯಾಕೆಟ್ ಇತ್ತು. ಆಕೆಯನ್ನು ವಂದಿಸಿ ಸ್ವಲ್ಪ ಮುಂದೆ ಹೋದ ಕೂಡಲೇ ಮತ್ತೊಬ್ಬ ರೊಟ್ಟಿ ಹಂಚುತ್ತಿದ್ದ. ಆತ ಕೊಟ್ಟ ರೊಟ್ಟಿಯನ್ನೂ ಪಡೆದು ಅಲ್ಲೇ ಒಂದು ಗೋಪುರದ ೩೭ ಡಿಗ್ರೀ ಎಂದು ತಾಪಮಾನ ಸೂಚಿಸುವ ಫಲಕ ನೋಡುತ್ತಾ ಮಸ್ಜಿದ್ ನ ಮಹಾದ್ವಾರದ ಹತ್ತಿರ ಬಂದಾಗ ನನ್ನ ಮಗನ ಅದೃಷ್ಟ ಖುಲಾಯಿಸಿತು. ಒಂದಡಿ ಉದ್ದದ ಎರಡು ಪೆನ್ಸಿಲ್ ಮತ್ತು eraser ಇದ್ದ ಪುಟ್ಟ ಕಾಣಿಕೆ ನನ್ನ ಮಗನಿಗೆ ಓರ್ವ ವ್ಯಕ್ತಿಯಿಂದ. ದಣಿದಿದ್ದ ಮಗನ ಮುಖ ಅರಳಿ ಅಲ್ಲೇ ಒಂದು ಚಿಕ್ಕ jig ಮಾಡಿ ಆ ವ್ಯಕ್ತಿಗೆ ಥ್ಯಾಂಕ್ ಯೂ ಹೇಳಿದ. ಪವಿತ್ರ ಕ್ಷೇತ್ರಗಳಾದ ಮಕ್ಕಾ ಮತ್ತು ಮದೀನಾ ಗಳಲ್ಲಿ ಇಂಥ ದೃಶ್ಯಗಳು ಸಾಮಾನ್ಯ ಎನ್ನಬಹುದು. ವಿಶ್ವದ ಹಲವೆಡೆಗಳಿಂದ ಬರುವ ಯಾತ್ರಾರ್ಥಿಗಳನ್ನು ಆದರಿಸುವುದು, ಉಡುಗೊರೆ ಕೊಡುವುದು, ಅವರಿಗೆ ಸಹಾಯ ಮಾಡುವುದು ಇಲ್ಲಿನ ಜನರಿಗೆ ಖುಷಿ ಕೊಡುತ್ತದೆ. ಈ ಕ್ಷೇತ್ರಗಳಿಗೆ ಬರುವವರ ಸೇವೆ ಮಾಡಿದರೆ ಪುಣ್ಯ ಹೆಚ್ಚು ಎನ್ನುವ ನಂಬಿಕೆ ಇರಬೇಕು ಜನರನ್ನು ಈ ರೀತಿ ಸೌಜನ್ಯಯುತವಾಗಿ ವರ್ತಿಸುವಂತೆ ಮಾಡುವುದು. ಕೆಲವೊಮ್ಮೆ ನಾನಂದು ಕೊಳ್ಳುತ್ತೇನೆ ಇದೇ ಸೌಜನ್ಯವನ್ನ ಜನ ಬರೀ ಪವಿತ್ರ ಕ್ಷೇತ್ರಗಳಿಗೆ ಮೀಸಲಿಡದೆ ತಾವು ಹೋದೆಡೆ ಮತ್ತು ಅವಶ್ಯಕತೆ ಇರುವೆಡೆ ಎಲ್ಲಾ ಮಾಡಬಾರದೇ ಎಂದು. ಏಕೆಂದರೆ ದೇವರು ಹೇಳುತ್ತಾನೆ, ಇಡೀ ಭೂಮಂಡಲವನ್ನೇ ನಾನು ನನ್ನ ಆರಾಧನೆಗೆಂದು ಹರಡಿಟ್ಟಿದ್ದೇನೆ ಎಂದು. ಮೇಲೆ ಹೇಳಿದ ಚಿಕ್ಕ ಪುಟ್ಟ gestures ಸಹ ಆರಾಧನೆಯ ಒಂದು ಅಂಗವೇ ತಾನೇ? ಹೀಗೆ ಯೋಚಿಸುತ್ತಾ ಪಾದರಕ್ಷೆಗಳನ್ನು ಕಳಚಿ ಬ್ಯಾಗಿನಲ್ಲಿರಿಸಿ ಮಸ್ಜಿದ್ ಪ್ರವೇಶಿ ಸಿ ಸ್ವಲ್ಪ ಮುಂದೆ ಹೋಗುತ್ತಿದ್ದಂತೆ ಸುಮಾರು ಅರವತ್ತು ವರುಷ ಪ್ರಾಯದ, ಬಿಳಿ ಗಡ್ಡ ಬಿಟ್ಟ, ಶುಭ್ರ ಬಿಳಿ ಬಣ್ಣದ ನೀಳ ವಸ್ತ್ರ ಧರಿಸಿದ ವ್ಯಕ್ತಿಯೊಬ್ಬರು ಕೈಯ್ಯಲ್ಲಿ ಒಂದು ಚಿಕ್ಕ ಸುಗಂಧ ದ್ರವ್ಯದ ಬಾಟಲಿ ಹಿಡಿದು ತನ್ನನ್ನು ದಾಟಿ ಹೋಗುವವರ ಕೈಗಳಿಗೆ ಹಚ್ಚುತ್ತಾ ನಿಂತಿದ್ದರು. ಆ ವ್ಯಕ್ತಿಯ ಮುಖದಲ್ಲಿ ಅದೇನೋ ಧನ್ಯತಾ ಭಾವ. ನನ್ನ “ಸರ್ವಾಂತರ್ಯಾಮಿ” ಮಗ ಒಡ್ಡಿದ ತನ್ನ ಕೈಯ್ಯನ್ನೂ ತಾತನ ಸುಗಂಧ ದ್ರವ್ಯಕ್ಕಾಗಿ.
ಮೊನ್ನೆ ಬೆಳಿಗ್ಗೆ ಘಂಟೆ ಹತ್ತಾಗುತ್ತಿದ್ದಂತೆ ಹಸಿವು ಶುರುವಾಯಿತು. ಹತ್ತಿರವೇ ಇದ್ದ “ಬಕಾಲ” ಎಂದು ಕರೆಯಲ್ಪಡುವ ಚಿಕ್ಕ ಮಾರ್ಕೆಟ್ ಒಂದರೊಳಗೆ ಹೋಗಿ ಒಂದು ಖರ್ಜೂರದ ಕೇಕ್ ಮತ್ತು ನಿಂಬೆ ರಸ ತೆಗೆದು ಕ್ಯಾಶ್ ಕೌಂಟರ್ ಗೆ ಬಂದು ವಾಲೆಟ್ ತೆರೆದಾಗ ಒಂದು ಚಿಕ್ಕಾಸೂ ಇಲ್ಲ. ಕ್ರೆಡಿಟ್ ಕಾರ್ಡ್ ಮತ್ತು ಒಂದಿಷ್ಟು ಕಾಗದಗಳು ಮಾತ್ರ ಇದ್ದವು. ಛೆ, ಹಣ ತರಲು ಮರೆತೆನಲ್ಲಾ ಎನ್ನುತ್ತಾ ಕೈಯ್ಯಲ್ಲಿದ್ದ ಕೇಕ್, ಮತ್ತು ನಿಂಬೆ ರಸದ ಪ್ಯಾಕೆಟ್ ಅವುಗಳಿದ್ದ ಸ್ಥಳದಲ್ಲಿಡಲು ಹೋದಾಗ ಅಂಗಡಿಯವ ಕಾರಣ ಕೇಳಿದ. ಹಣ ತರಲು ಮರೆತೆ ಎಂದು ಹೇಳಿದಾಗ ನನಗೆ ಪರಿಚಯವಿಲ್ಲದ ಆ ಅಂಗಡಿಯ ಎಷ್ಟು ಹೇಳಿದರೂ ಕೇಳದೆ ಮತ್ತೆಂದಾದರೂ ಹಣ ತಂದು ಕೊಡುವಂತೆ ಹೇಳಿ ನನ್ನ ಬೆಳಗಿನ ತಿಂಡಿಯನ್ನು ನನಗೆ ನೀಡಿ ಕಳಿಸಿದ. ನೋಡಲು ಯಮನ್ ದೇಶದವನ ಥರ ಕಾಣುತ್ತಿದ್ದ ಅಂಗಡಿಯವ ನನಗೆ ಅಪರಿಚಿತ, ಆದರೂ ಹಣವಿಲ್ಲದಿದ್ದರೂ ನನಗೆ ಬೇಕಾದ್ದನ್ನು ಕೊಟ್ಟು ಕಳಿಸಿದ. ಈ ತೆರನಾದ ಘಟನೆಗಳು ಎದುರಾದಾಗ ಒಂದು ರೀತಿಯ ಸಂತಸ ಮನಸ್ಸಿಗೆ. ಕೆಲವೊಮ್ಮೆ ನಾನು ಹೋಗುವ ಪೆಟ್ರೋಲ್ ಬಂಕ್ ನ ಬಾಂಗ್ಲಾ ದೇಶದ ಹುಡುಗರಿಗೆ ತಂಪಾದ ಪಾನೀಯ ಕೊಡಿಸುತ್ತೇನೆ. ಬಿಸಿಲಿನ ಬೇಗೆ ಯಲ್ಲಿ ಬೇಯುತ್ತಾ ಕೆಲಸ ಮಾಡುವ ಹುಡುಗರ ಮೊಗದಲ್ಲಿ ತಂಪು ಪಾನೀಯ ಸಿಕ್ಕಾಗ ನೋಡ ಸಿಗುವ ಮುಗುಳ್ನಗು ಮನಸ್ಸಿಗೆ ಖುಷಿ ಕೊಡುತ್ತದೆ. ಯಾಂತ್ರಿಕ ಬದುಕಿನಲ್ಲಿ ಇಂಥ ಮಾಂತ್ರಿಕ ಕ್ಷಣಗಳು ನಮ್ಮೆದುರು ಬಂದಾಗ ಯಾರಿಗೆ ತಾನೇ ಸಂತಸವಾಗದಿರಲು ಸಾಧ್ಯ? ಅಮೆರಿಕೆಯ ಯುವತಿಯೊಬ್ಬಳು ತನ್ನ ಬ್ಲಾಗ್ ನಲ್ಲಿ ಹೀಗೆ ಬರೆದಿದ್ದಳು…
“ಪ್ರತೀ ತಿಂಗಳೂ ಅಥವಾ ಎರಡು ತಿಂಗಳಿಗೊಮ್ಮೆಯಾದರೂ ನಾನು ಕಾಫಿಗೆಂದು drive in ಕಾಫೀ ಶಾಪ್ ಗೆ ಹೋದರೆ ನನ್ನ ಹಿಂದಿರುವ ಕಾರಿನವರ ಕಾಫಿಯ ಹಣವನ್ನೂ ಕೊಟ್ಟು ಹೋಗುತ್ತೇನೆ. ಅದೇ ರೀತಿ ಪಟ್ಟಣ ಬಿತ್ತು ಹೊರಕ್ಕೆ ಹೋದಾಗಲೂ toll gate ಹಣವನ್ನು ನನ್ನ ಹಿಂದೆ ಇರುವ ಕಾರಿಗೂ ಸೇರಿಸಿ ಕೊಟ್ಟು ಮುಂದೆ ಹೋಗುತ್ತೇನೆ. ಇದು ನನಗೆ ಆನಂದವನ್ನು ಕೊಡುವ ಕೃತ್ಯಗಳು. ಒಮ್ಮೆ ಹೀಗೆಯೇ drive in ಕಾಫೀ ಶಾಪ್ ನಲ್ಲಿ ನನ್ನ ಹಿಂದಿನ ಕಾರಿನಲ್ಲಿದ್ದ ಮಹಿಳೆಯ ಕಾಫಿಗೂ ಹಣ ಕೊಟ್ಟು ಹೋದೆ. ಸ್ವಲ್ಪ ದೂರ ಹೋದ ನಂತರ ಆ ಮಹಿಳೆ ನನ್ನನ್ನು ಹಿಂಬಾಲಿಸುತ್ತಿದ್ದಳು. ಒಂದು ಕಡೆ ಸಿಗ್ನಲ್ ಹತ್ತಿರ ಕಾರನ್ನು ನಿಲ್ಲಿಸಿದಾಗ ಆಕೆ ತನ್ನ ಕಾರನ್ನು ಪಕ್ಕಕ್ಕೆ ನಿಲ್ಲಿಸಿ, ಕಿಟಕಿಯ ಗಾಜನ್ನು ಕೆಳಗಿಳಿಸಿ, ಕಾಫಿ ಕಪ್ಪನ್ನು ಎತ್ತಿ ಹಿಡಿದು ಹೇಳಿದಳು, ” ವಂದನೆಗಳು, ನಾನು ನಿರುದ್ಯೋಗಿ, ಈ ಕಾಫಿ ನನಗೆ ದುಬಾರಿಯಾದರೂ ಇಂದು ಕುಡಿಯುವ ಮನಸ್ಸಾಯಿತು. ಆದರೆ ಅದರ ಹಣವನ್ನು ನೀನು ಪಾವತಿಸಿದೆ” ಎಂದು ಆಕೆ ಹೇಳುವಾಗ ಆಕೆಯ ಕಣ್ಣುಗಳು ತುಂಬಿತ್ತು. ಈಕೆಯ ಮಾತು, ಮತ್ತು ಆಕೆಯ ಭಾವನೆಗಳನ್ನು ನೋಡಿ ನಾನು ತಬ್ಬಿಬ್ಬಾದೆ, ಇಷ್ಟೊಂದು ಚಿಕ್ಕ ಒಂದು ವಿಷಯ ಆಕೆಗೆ ಎಷ್ಟೊಂದು ಸಂತೋಷವನ್ನು ಕೊಟ್ಟಿತು, ಕೆಲಸ ಹುಡುಕಿ ನಡೆಯುತ್ತಿರುವ ಈಕೆಗೆ ಕೆಲಸ ಸಿಗಲಿ ಎಂದು ಹಾರೈಸುತ್ತಾ ನನ್ನ ಕಾರನ್ನು ಮುನ್ನಡೆಸಿದೆ”.
ಕಲ್ಲಾಗಿ ಸತ್ತು…ಜಲಾಲುದ್ದೀನ್ ರೂಮಿ ಕವನ
ಕಲ್ಲಾಗಿ ಸತ್ತು ಸಸಿಯಾಗಿ ಹುಟ್ಟಿದೆ ನಾ
ಸಸಿಯಾಗಿ ಸತ್ತು ಪ್ರಾಣಿಯಾಗಿ ಹುಟ್ಟಿದೆ ನಾ
ಪ್ರಾಣಿಯಾಗಿ ಸತ್ತು ಮನುಜನಾಗಿ ಹುಟ್ಟಿದೆ ನಾ
ಭಯವಾದರೂ ಏಕೆ ನನಗೆ..
ಸಾವಿನಲ್ಲಿ ಕಳೆದುಕೊಂಡಿರುವಾಗ?
ಬೇಡವಾದೆವಾ ನಾವು ನೊಣಗಳಿಗೂ?
ಕಾಲವೊಂದಿತ್ತು, ಮಾವಿನ ಹಣ್ಣು, ದ್ರಾಕ್ಷಿ ಹೀಗೆ ತರಾವರಿ ಹಣ್ಣು ಹಂಪಲುಗಳ ಮೇಲೆ ನೊಣಗಳು ಮುತ್ತಿಗೆ ಹಾಕುತ್ತಿದವು. ಪುಷ್ಪದ ಮೇಲೆ ಹಾರುವ ಭ್ರಮರಗಳ ಹಾಗೆ. ಆದರೆ ಈಗ ನೊಣಗಳು ಹಣ್ಣುಗಳ ಮೂಸಿ ನೋಡಲೂ ತಯಾರಿಲ್ಲ, ಅವು ಮಣ್ಣಿನ ಮೇಲಾದರೂ ಕೂತಾವು ಆದರೆ ಹಣ್ಣುಗಳ ಮೇಲಲ್ಲ. ಕಾರಣ?ಬಹುಶಃ ನೊಣಗಳಿಗೂ ಸುಳಿವು ಸಿಕ್ಕಿರಬೇಕು ಈ ಹಣ್ಣುಗಳು ಸತ್ವವಿಲ್ಲದವು, ರಾಸಾಯನಿಕಗಳ ಸಹವಾಸದಿಂದ ತನ್ನತನವನ್ನು ಕಳೆದುಕೊಂಡವು ಎಂದು. ಮನುಷ್ಯನ ಅತಿಯಾಸೆ, ದುರ್ಬುದ್ಧಿಯ ಸುಳಿವು ನೊಣ ಗಳಿಗೂ ಅರಿವಾಯಿತು. ಆದರೆ ಲಜ್ಜೆಯಿಲ್ಲದ ಮನುಷ್ಯನಿಗೆ ನೊಣಗಳ ಬಹಿಷ್ಕಾರದಿಂದ ಆಗುವ ನಷ್ಟವಾದರೂ ಏನು?
ಮಾರುಕಟ್ಟೆಯಲ್ಲಿ ಕಾಣಸಿಗುವ ನಾನಾ, ತರಾವರಿ ಹಣ್ಣು ಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಹಣ್ಣುಗಳಿಗೆ ಸಿಂಪಡಿಸುವ “ಕೀಟನಾಶಕ” ಗಳಿವೆ ಎಂದು ವರದಿ. ೨೮ ನಮೂನೆಯ ಅಪಾಯಕಾರೀ ಕೀಟ ನಾಶಕಗಳಿದ್ದು ಒಂದೊಂದು ಹಣ್ಣಿನ ಮೇಲೂ ಕನಿಷ್ಠ ಐದು ನಮೂನೆಯ ಕೀಟ ನಾಶಕಗಳ ಬಳಕೆಯಾಗುತ್ತದಂತೆ. ಐರೋಪ್ಯ ಸಂಸತ್ತು ಈ ವಿಷಯವನ್ನೂ ಬಯಲುಮಾಡಿತು. ಈ ೨೮ ನಮೂನೆಯ ಕೀಟನಾಶಕಗಳಲ್ಲಿ ೧೦ ಕ್ಯಾನ್ಸರ್ ರೋಗಕ್ಕೂ, ೩ ನರ ದೌರ್ಬಲ್ಯಗಳಂಥ ಕಾಯಿಲೆಗೂ ಕಾರಣವಂತೆ.
ಈ ರೀತಿ “ಕೀಟನಾಶಕ” ಗ್ರಸ್ಥ ಹಣ್ಣು ಗಳನ್ನೂ, ತರಕಾರಿಗಳನ್ನೂ ಚೆನ್ನಾಗಿ ತೊಳೆದರೂ ಸಹ ಅವಕ್ಕೆ ಅಂಟಿದ ವಿಷ ರಾಸಾಯನಿಕಗಳು ಸಂಪೂರ್ಣವಾಗಿ ಹೋಗುವುದಿಲ್ಲವಂತೆ. ಅಂಥ ಆಹಾರ ಪದಾರ್ಥಗಳು ಕೆಳಗಿನವು:
Celery, Cherries, Peaches, Strawberries, Apples, Domestic blueberries, Nectarines, Sweet bell peppers, Spinach, Kale and collard greens,Potatoes, Imported grapes, Lettuce
ರಸಾಯನಿಕಗಳು ಕೆಳಗೆ ತೋರಿಸಿದ ಕೆಲವು ಹಣ್ಣುಗಳ ಮೇಲೆ ಮತ್ತು ತರಕಾರಿಗಳ ಮೇಲೆ ಇದ್ದರೂ ತೊಳೆದರೆ ಮಾಯವಾಗುವಂಥವು. ಅವುಗಳು ಕೆಳಗಿನಂತಿವೆ,
Onions, Avocados, Sweet corn, Pineapples, Mango,Sweet peas, Asparagus, Kiwi fruit, Cabbage, Eggplant (ಬದನೆ), Cantaloupe, Watermelon, Grapefruit, Sweet potatoes,Sweet onions
ಹೀಗೆ ನಾವು, ನಮ್ಮ ಪುಟ್ಟ ಮಕ್ಕಳು ಸೇವಿಸುವ ಆಹಾರಕ್ಕೆ ರಾಸಾಯನಿಕಗಳು ಹಾಕಿದ ಲಗ್ಗೆ ಸಾಲದೆಂಬಂತೆ ಈ ವಿಷ ಪದಾರ್ಥಗಳನ್ನು ನಿರ್ಮೂಲನ ಮಾಡಲು ಮತ್ತೊಂದು ರಾಸಾಯನಿಕ. ಅದೇ ಲಿಕ್ವಿಡ್ ಸೋಪು. ಈ ಸೋಪಿನಿಂದ ಆಹಾರವನ್ನೂ ತೊಳೆದರೆ ರಾಸಾಯನಿಕ ಮುಕ್ತವಾಗುತ್ತದಂತೆ ನಮ್ಮ ಆಹಾರ. ಈ ಸೋಪಿನ ಮೇಲೆ ಎಷ್ಟು ಪದರಗಳ ರಾಸಾಯನಿಕಗಳು, ಕೀಟ ನಾಶಕಗಳು ಕುಳಿತಿವೆ ಎಂದು ಮಾತ್ರ ಕೇಳಬೇಡಿ.
ತರಕಾರಿ ಮತ್ತು ಹಣ್ಣು ಗಳನ್ನು ಹೇಗೆ ತೊಳೆಯ ಬೇಕೆಂಬುದರ ಬಗ್ಗೆ ತಿಳಿಯಲು ಕೆಳಗಿನ ಕೊಂಡಿ ಕ್ಲಿಕ್ಕಿಸಿ.
http://www.associatedcontent.com/article/1183252/the_safe_way_to_clean_fresh_fruits.html?cat=6
word press ನಲ್ಲಿ ಹೊಸತು
be the first to like this post – ಈ ಪೋಸ್ಟನ್ನು ಇಷ್ಟಪಟ್ಟವರಲ್ಲಿ ಮೊದಲಿಗರಾಗಿರಿ – ಈ ಸಂದೇಶ ಈಗ wordpress ನ ಪ್ರತೀ ಬ್ಲಾಗ್ ಪೋಸ್ಟ್ ಅಡಿಯಲ್ಲಿ ಕಾಣ ಸಿಗುತ್ತದೆ. ಆದರೆ ಈ ವ್ಯವಸ್ಥೆಯನ್ನು ಕನ್ನಡ ಬ್ಲಾಗಿಗರು ದೊಡ್ಡ ರೀತಿಯಲ್ಲಿ ಬಳಸಿಕೊಳ್ಳುವುದು ಅನುಮಾನವೇ.
ಪ್ರತಿಕ್ರಿಯೆ ಬರೆಯಲು ಸೋಮಾರಿತನ ತೋರಿಸುವವರಿಗೆ ಒಂದು ರೀತಿಯ ಸುಲಭ ವಿಧಾನ ಈ “ನನಗಿಷ್ಟವಾಯಿತು” ಎಂದು ಹೇಳುವ ಸೌಲಭ್ಯ. ಆಧುನಿಕ ಬದುಕಿನಲ್ಲಿ ಎಲ್ಲವೂ ಸಲೀಸಾಗಿರಬೇಕೆನ್ನುವ ಅಲಿಖಿತ ನಿಯಮ ಇದ್ದೇ ಇದೆಯಲ್ಲ. ಬನ್ನಿ, ಉಪಯೋಗಿಸೋಣ.
ಕವನ ವಾಚನ
ಬದುಕೇ, ನೀನಾರೆಂದು ನನಗೆ ತಿಳಿದಿಲ್ಲ
ಇಷ್ಟು ಮಾತ್ರ ಗೊತ್ತು ನಾವು ಅಗಲಲೇಬೇಕು
ಹೇಗೆ, ಯಾವಾಗ, ಎಲ್ಲಿ ನಾವು ಭೆಟ್ಟಿಯಾದೆವು
ನನಗದು ರಹಸ್ಯವೆ ಈಗಲೂ.
ಏಳು ಬೀಳುಗಳನ್ನು ಒಟ್ಟಿಗೆ ಕಂಡೆವು ನಾವು
ನಿಜಕ್ಕೂ ಕಷ್ಟಕರ ಮಿತ್ರರು ಅಗಲುವುದು
ಅಗಲಿಕೆ ಸಮಯ ನೀನೇ ನಿಶ್ಚಯಿಸಿಕೋ
ಹೇಳಬೇಡ ವಿದಾಯವ ಎಂದಿಗೂ
ಬದಲಿಗೆ ಹಾರೈಸುವೆಯಾ
ಶುಭ ಮುಂಜಾನೆಯ..
R . Barbauld ರವರ ಕವಿತೆಯ ಅನುವಾದ
ಹೀಗೊಂದು ಸಂಭಾಷಣೆ
ಫೋನಿನಲ್ಲಿ ಸಂಭಾಷಣಾ ನಿರತ ಜನ ತಮ್ಮ ಸುತ್ತ ಮುತ್ತ ಇತರೆ ಜನರಿರುತ್ತಾರೆ, ತಮ್ಮನ್ನು ಗಮನಿಸುತ್ತಿರುತ್ತಾರೆ, ನಮ್ಮ ಮಾತುಗಳನ್ನು ಕೇಳುತ್ತಿರುತ್ತಾರೆ ಎನ್ನುವ ಯಾವುದೇ ಪರಿವೆಯಿಲ್ಲದೆ ಸ್ವರ ಏರಿಸಿ ಬಡ ಬಡಿಸುತ್ತಾರೆ. ಸಾರ್ವಜನಿಕ ಸ್ಥಳಗಳಲ್ಲಿ ಪಾಲಿಸಬೇಕಾದ ಸೌಜನ್ಯಗಳ ಬಗ್ಗೆ ಜನರಿಗೆ ಅರಿವನ್ನು ಹೇಗೆ ಮೂಡಿಸ ಬಹುದೋ ಗೊತ್ತಿಲ್ಲ. ಮೊನ್ನೆ ಒಂದು ಚೆಕ್ಕಿನ ಬಗ್ಗೆ ವಿಚಾರಿಸಲು ಸೌದಿ ಅಮೇರಿಕನ್ ಬ್ಯಾಂಕ್ ಗೆ ಹೋದೆ. ಚೆಕ್ vip ವಿಭಾಗಕ್ಕೆ ಸೇರಿದ್ದರಿಂದ ವಿಶಾಲವಾದ, ಸುಸಜ್ಜಿತ vip lounge ನಲ್ಲಿ ಆಸೀನನಾದೆ. ನನ್ನ ಪಕ್ಕದಲ್ಲಿ ಸುಮಾರು ನಲವತ್ತು ನಲವತ್ತೈದರ ಸೌದಿ ಯೊಬ್ಬ ಬರ್ಮುಡಾ ಚಡ್ಡಿ, ಬೇಸ್ ಬಾಲ್ ಟೋಪಿ ಧರಿಸಿ ಫೋನಿನಲ್ಲಿ ಹರಟುತ್ತಿದ್ದ. ಆತನ ಮಾತಿನಿಂದ ತಿಳಿಯಿತು ಅವನೊಬ್ಬ ಅತ್ಯಾಧುನಿಕ, ಸ್ಪೋರ್ಟ್ಸ್ ಮಾಡೆಲ್ ಕಾರುಗಳ ಡೀಲರ್, ಮತ್ತು ಆತನೊಂದಿಗೆ ಫೋನಿನಲ್ಲಿ ಮಾತನಾಡುತ್ತಿದ್ದವನು ಅಮೆರಿಕೆಯವನು ಎಂದು. ಸೌದಿ ಅವನಿಗೆ ಹೇಳಿದ ಹೌದು ನೀನು ಕೇಳುತ್ತಿರುವ ಕಾರು ನನ್ನ ಹತ್ತಿರ ಇದೆ, ನಾನು ನಾಳೆ ರಿಯಾಧ್ ಗೆ ಬರುತ್ತಿದ್ದೇನೆ, ಬರುವುದು ವಿಮಾನದಲ್ಲಲ್ಲ ನನ್ನ porsche ಕಾರಿನಲ್ಲಿ, ನನಗೆ ಸುಮಾರು ೧೦ ಘಂಟೆಗಳ ಸಮಯ ಹಿಡಿಯಬಹುದು ಎಂದು ಹೇಳುತ್ತಿದ್ದ. ಜೆಡ್ಡಾ ದಿಂದ ರಿಯಾಧ್ ಸುಮಾರು ೧೪೦೦ ಕಿ.ಮಿ. porsche (ಪೋರ್ಷೆ) ಅತಿ ವೇಗವಾಗಿ ಸರಾಗವಾಗಿ ಚಲಿಸಬಲ್ಲ ಕಾರು. ಈ ಸೌದಿ ೧೦ ಘಂಟೆಗಳು ಸಾಕು ರಿಯಾದ್ ತಲುಪಲು ಸಾಕು ಎಂದಾಗ ಅಮೆರಿಕೆಯವ ಹೇಳಿದ ನಿಧಾನವಾಗಿ ಓಡಿಸು ಕಾರನ್ನು, express way ರಸ್ತೆಯಲ್ಲಿ ಅಪಘಾತ ಹೆಚ್ಚು ಎಂದು ಎಚ್ಚರಿಸಿದ. ಅದಕ್ಕೆ ಸೌದಿ ಹೇಳಿದ, ಹೇಯ್ ನೀನೇನು ಭಯ ಪಡಬೇಡ. ನಾನು ಸಣಕಲು ವ್ಯಕ್ತಿ, ಅಪಘಾತವಾದರೂ ಎಲ್ಲಾದರೂ ಮರುಭೂಮಿಯಲ್ಲಿ ಹಾರಿ ಬಿದ್ದಿರುತ್ತೇನೆ, ಆದರೆ ದೊಡ್ಡ ಹೊಟ್ಟೆಯ ಸ್ಥೂಲಕಾಯದವರಾದರೆ ಚಿಂದಿ ಚಿಂದಿ ಆಗುತ್ತಾರೆ (they will go smithereens) ಅಪಘಾತವಾದಾಗ ಎಂದು ಹೇಳುತ್ತಿದ್ದ. ನಮ್ಮ ಮುಂದಿನ ಸೋಫಾದಲ್ಲಿ ಸೂಟು ಬೂಟು ತೊಟ್ಟ ಲೆಬನಾನ್ ದೇಶದವನ ಥರ ಕಾಣುತ್ತಿದ್ದ ಸ್ಥೂಲ ಕಾಯದ ವ್ಯಕ್ತಿಯೊಬ್ಬ ಕುಳಿತಿದ್ದ. ಈಗಾಗಲೇ ಈ ಜೋರಾದ ಸಂಭಾಷಣೆಯಿಂದ ಬೇಸತ್ತಿದ್ದ ಆ ವ್ಯಕ್ತಿ ಈ ಸ್ಥೂಲ ಕಾಯದವರ ಬಗ್ಗೆ ಸೌದಿ ಆಡಿದ ಮಾತಿನಿಂದ ಕುಳಿತಲ್ಲಿಂದಲೇ ಮಿಸುಕಾಡುತ್ತಿದ್ದ. ಹೀಗೆ ಹೇಳಿದ ವ್ಯಕ್ತಿ ಸೌದಿ ಅಲ್ಲದಿದ್ದರೆ ಸರಿಯಾದ ಉತ್ತರ ಕೊಡುತ್ತಿದ್ದನೇನೋ ಪಾಪ ಆ ಡುಮ್ಮ, ಆದರೆ ಈ ಮಾತುಗಳನ್ನ ಕೇಳಿ ಅವನಿಗೆ ಅಲ್ಲಿ ಕೂತಿರಲು ಆಗದೆ ನಿಧಾನವಾಗಿ ತನ್ನ ಶರೀರವನ್ನು ಸೋಫಾದಿಂದ ಆರೋಹಣ ಮಾಡಿ ಕಾಲ್ತೆಗೆದ. ಈ ಸನ್ನಿವೇಶ ನೋಡಿ ನನಗೆ ನಗು ತಡೆಯಲಾಗಲಿಲ್ಲ. ಇಲ್ಲಿಗೆ ನಿಲ್ಲಲಿಲ್ಲ ಪುಕ್ಕಟೆ ಮನರಂಜನೆ, ಸೌದಿಯ ಮಾತು ಇನ್ನೂ ಮುಂದುವರೆದಿತ್ತು. ಅಮೆರಿಕೆಯವ ಹೇಳಿದ ನಾನು feeling lonely in riyadh ಎಂದು, ಅದಕ್ಕೆ ಥಟ್ಟನೆ ಈ ಸೌದಿ ಅವನಿಗೆ ಹೇಳಿದ your lonliness and my kindness might prompt you to do something (ನಿನ್ನ ಒಂಟಿತನ ಮತ್ತು ನನ್ನ ಒಳ್ಳೆಯತನ “ಬೇಡದ್ದನ್ನು” ಮಾಡಲು ನಿನ್ನನ್ನು ಪ್ರೇರೇಪಿಸಬಹುದು) ಹ ಹ ಹಾ ಎಂದು ನಕ್ಕ.
ತಿಂಗಳ ತುಣುಕು
ಇಂದು ಆಗಸ್ಟ್ ತಿಂಗಳ ಆರಂಭ. ನಮಗೆ ಸ್ವಾತಂತ್ರ್ಯ ಸಿಕ್ಕಿದ, ಬಿಳಿಯರಿಂದ ಮುಕ್ತಿ ಸಿಕ್ಕಿದ ಮಾಸ. ಅಷ್ಟೇ ಅಲ್ಲ ನಾನು ಹುಟ್ಟಿದ ತಿಂಗಳೂ ಹೌದು. ಹಾಗಾಗಿ ಈ ತಿಂಗಳಿಗೆ ವಿಶೇಷ ಪ್ರಾಶಸ್ತ್ಯ. ಆಗಸ್ಟ್ ತಿಂಗಳಲ್ಲೇ ಇಂಗ್ಲೆಂಡಿನ ಜನರ ಅಚ್ಚುಮೆಚ್ಚಿನ ರಾಜಕುಮಾರಿ, ರಾಜಕುಮಾರ ಚಾರ್ಲ್ಸ್ ರವರ ಪತ್ನಿ ಡಯಾನ ಅಪಘಾತವೊಂದರಲ್ಲಿ ನಿಧನ (ಆಗಸ್ಟ್ ೩೧, ೧೯೯೭) ಹೊಂದಿದ ದಿನ.
ರೋಮ್ ಚಕ್ರವರ್ತಿ “ಆಗಸ್ಟಸ್ ಕಸೆಸರ್” ಸ್ಮರಣಾರ್ಥ ಸೆಕ್ಸ್ಟಿಲಿಸ್ ಎಂದು ಇದ್ದ ಹೆಸರನ್ನು ಆಗಸ್ಟ್ ಎಂದು ನಾಮಕರಣ ಮಾಡಲಾಯಿತು. ಈ ಚಕ್ರವರ್ತಿ ಆಳುವಾಗ ಎಂಟನೆ ತಿಂಗಳಿನಲ್ಲಿ ಮಹತ್ವ ಪೂರ್ಣ ಘಟನೆಗಳು ಜರುಗಿದ್ದರಿಂದ ಆತನ ಗೌರವಾರ್ಥ ಆಗಸ್ಟ್ ಎಂದು ಹೆಸರು ಬಂದಿದ್ದು.
ಆಗಸ್ಟ್ ತಿಂಗಳಿನಲ್ಲೇ ಅಮೆರಿಕೆಯ ಕರಿಯರ ನಾಯಕ ಮಾರ್ಟಿನ್ ಲೂಥರ್ ಕಿಂಗ್ i have a dream ಎನ್ನುವ ಅದ್ಭುತ ಭಾಷಣ ಮಾಡಿ ಅಮೇರಿಕ ಕರಿಯರನ್ನು ನಡೆಸಿಕೊಂಡ ಬಗೆಯನ್ನು ಜನಸ್ತೋಮಕ್ಕೆ ವಿವರಿಸಿದರು.
ಆಗಸ್ಟ್ ತಿಂಗಳಿನಲ್ಲಿ ರೆಡ್ ಕ್ರಾಸ್ ಸಂಸ್ಥೆಯ ಸ್ಥಾಪನೆ ಮತ್ತು ಜಮೈಕಾ ದೇಶಕ್ಕೂ ಆಗಸ್ಟ್ ತಿಂಗಳಿನಲ್ಲೇ ಬ್ರಿಟಿಷರ ದಾಸ್ಯದಿಂದ ಮುಕ್ತಿ ಸಿಕ್ಕಿದ್ದು.
ಜೋಸೆಫ್ ಪ್ರೀಸ್ಟ್ಲಿ ಆಮ್ಲಜನಕ ವನ್ನ ಕಂಡು ಹಿಡಿದಿದ್ದು ೧೭೭೪, ಆಗಸ್ಟ್ ತಿಂಗಳಿನಲ್ಲಿ.
ತಿಳಿವಳಿಕೆಗೆ ಮತ್ತೊಂದಿಷ್ಟು ತಿಳಿಸಾರು
ಬದುಕಿನಲ್ಲಿ ಮನೆಯವರಿಂದ , ನೆಂಟರಿಂದ , ಮಿತ್ರರಿಂದ, ಸಹೋದ್ಯೋಗಿಗಳಿಂದ ಬಹಳಷ್ಟು ಕುಹಕಗಳನ್ನು, ಕಟು ಮಾತುಗಳನ್ನ ಕೇಳಿರುತ್ತೇವೆ. ನಿನ್ನ ಕೈಯ್ಯಿಂದ ಏನೇನೂ ಆಗದು, ನೀನು ದಡ್ಡ, ಮೂರ್ಖ, ಕೋಪಿಷ್ಠ, ನಿನ್ನನ್ನು ಕಂಡರೆ ಯಾರಿಗೂ ಆಗೋದಿಲ್ಲ್ಲ, ನಿನ್ನ ಮುಖ ನೋಡು, ಇನ್ನೂ ಸ್ವಲ್ಪ ಚೆನ್ನಾಗಿ, ನೋಡುವಂತಿದ್ದರೆ ಏನು ಮಾಡುತ್ತಿದ್ದೆಯೋ, ನೀನ್ಯಾಕೆ ಹೀಗೇ, ನೀನು “ಸ್ಟ್ರೇಂಜ್”, “ವೀರ್ಡ್” ಹೀಗೇ ಸಾಗುತ್ತವೆ ಗುಣಗಾನಗಳು. ಇವನ್ನು ಒದರುವವರಿಗೆ ತಿಳಿದಿರುವುದಿಲ್ಲ ಈ ಮಾತುಗಳು ಮನಸ್ಸಿಗೆ ಮಾತ್ರವಲ್ಲ ನಮ್ಮ self worth ಮೇಲೂ ಯಾವ ಪರಿಣಾಮ ಬೀರುತ್ತವೆ ಎಂದು. ಕೆಲವರಿಗೆ ಟೀಕಿಸೋದರಲ್ಲೇ ಏನೋ ಒಂದು ಸುಖ, ನೆಮ್ಮದಿ. ಯಾರನ್ನಾದರೂ ಕಟು ಮಾತುಗಳಲ್ಲಿ ಹಳಿದ ಮೇಲೆ ಏನನ್ನೋ ಸಾಧಿಸಿದ ಹಾಗೆ. ಚೆನ್ನಾಗಿ ಉರ್ಕೊಂಡ ಎಂದು ಒಳಗೊಳಗೇ ಸಂತಸ. ಇನ್ನು ಕೆಲವರಿಗೆ ತಮ್ಮ ಕುಟುಕು ಮಾತು ಜನರಿಗೆ ನೋವುಂಟು ಮಾಡುತ್ತದೆ ಎನ್ನುವ ಪರಿವೆಯೂ ಇರುವುದಿಲ್ಲ. ಚೆನ್ನಾಗಿ ಬೊಗಳಿದ ನಂತರ ಬಾಲವನ್ನು ಕುಂಡೆ ಯಡಿಗೆ ಸೇರಿಸಿ ನಡೆಯುವ ನಾಯಿಯಂತೆ ಜಾಗ ಖಾಲಿ ಮಾಡುತ್ತಾರೆ.
ಇಂಥ ತಿಳಿಗೇಡಿಗಳು, ಮತಿಹೀನರು, ಹೇಳಿದ್ದನ್ನು ಮನಸ್ಸಿಗೆ ತೆಗೆದುಕೊಳ್ಳದೆ ಇರುವುದೂ ಕೆಲವೊಮ್ಮೆ ಅಸಾಧ್ಯವೇ. ಹಾಗಾದ್ರೆ ಕೊರಗಿ ಕೊರಗಿ ಮನಸ್ಸು ಕೆಡಿಸಿಕೊಳ್ಳ ಬೇಕೋ? ಬೇಡ, ಅಂಥ ವ್ಯಕ್ತಿಗಳ ಸಹವಾಸವನ್ನು ನಿಲ್ಲಿಸುವುದು ಅಥವಾ ಕಡಿಮೆ ಮಾಡುವುದು ಮೊದಲನೆಯದಾಗಿ ಮಾಡಬೇಕಾದ ಕೆಲಸ. ಸ್ವತಃ ಮನೆಯವರೇ ಆದರೆ? ಅವರಿಗೆ ತಿಳಿ ಹೇಳೋದು ಕಷ್ಟವಾದರೂ ಜಾಣ್ಮೆಯಿಂದ, ನಾಜೂಕಿನಿಂದ ವಿವರಿಸಬೇಕು. ಆದರೆ ಆಗೊಮ್ಮೆ ಈಗೊಮ್ಮೆ ಸನ್ನಡತೆಯ, ಸ್ವೀಟ್ ನೇಚರ್ ನ ಜನರನ್ನೂ ನಾವು ಕಾಣುತ್ತೇವೆ. ಮುಕ್ತ ಕಂಠದಿಂದ ಹೊಗಳುವ, ಮೆಚ್ಚುಗೆ ವ್ಯಕ್ತಪಡಿಸುವ, ಒಳ್ಳೆಯ ಮಾತನ್ನಾಡುವ, ನಮ್ಮ ಮೇಲೆ ನಮಗೇ ಅಭಿಮಾನ ಮೂಡುವಂತೆ ಮಾಡುವ ಜನರೂ ಇಲ್ಲದ್ದಿಲ್ಲ. ಅಂಥವರ ಸಹವಾಸ ಮನಸ್ಸಿಗೆ ಮುದ ನೀಡುತ್ತದೆ, ಅಂಥವರು ಆದರ್ಶ ಸಂಗಾತಿಗಳು. ಒಬ್ಬ ವ್ಯಕ್ತಿ ವ್ಯಾಯಾಮ ನಿರತನಾಗಿದ್ದಾಗ ಅವನ ಲಾಕರ್ ನಲ್ಲಿ ಅವನ ಸ್ನೇಹಿತ ಒಂದು ಚಿಕ್ಕ ಚೀಟಿಯನ್ನು ಇಟ್ಟು ಹೋಗಿರುತ್ತಾನೆ, ತೆರೆದು ನೋಡಿದಾಗ ಅದರಲ್ಲಿ ಹೀಗೇ ಬರೆದಿರುತ್ತದೆ;
“ಯಾವುದನ್ನೂ ಮನಸ್ಸಿಗೆ ಹಚ್ಚಿಕೊಂಡು ಕೊರಗಬೇಡ, ನೀನು ಜ್ಞಾನದಲ್ಲಾಗಲಿ, ಅನುಭವದಲ್ಲಾಗಲಿ ಕಡಿಮೆಯಲ್ಲ. ನೀನು ನಿಷ್ಠುರವಾಗಿ ಮಾತನಾಡಿದರೂ ಸತ್ಯವನ್ನೇ ನುಡಿಯುವೆ, ಕ್ರಿಯಾಶೀಲತೆ ಇದೆ ನಿನ್ನಲ್ಲಿ, ನೀನು ಮಾತಿಗೆ ತಪ್ಪುವವನಲ್ಲ, ನಿನ್ನಿಂದಾದ ಸಹಾಯ ಮಾಡಲು ನೀನು ಯಾವಾಗಲೂ ತಯಾರು. ನಿನ್ನದು ನಿನಗೇ ತಿಳಿಯದಷ್ಟು ಉನ್ನತ ಮೌಲ್ಯಗಳುಳ್ಳ ವ್ಯಕ್ತಿತ್ವ, ಇಂದಲ್ಲ ನಾಳೆ ಯಶಸ್ಸು ನಿನ್ನನ್ನು ಹುಡುಕಿಕೊಂಡು ಬಂದೆ ಬರುತ್ತದೆ”. ನಾವೆಂದಾದರೂ ನೊಂದ ಆತ್ಮಗಳಿಗೆ ಇಂಥ ಸಾಂತ್ವನದ ನುಡಿಗಳನ್ನು ಹೇಳಿದ್ದೇವೆಯೇ, ಬರೆದಿದ್ದೇವೆಯೇ?