ನೋಡುದ್ರಾ ‘ಬೂಬ್ ವಿಂಡೋ’ ವಾ?

Eva Longoria attends the 'Global Gift Gala 2013' at the Hotel Four Season George V in Paris
ಹಾಲಿವುಡ್ ನ ಮತ್ತೊಬ್ಬ ಸೆಕ್ಸೀ ಬೆಡಗಿ ಏವಾ ಲೊಂಗೊರಿಯಾ (eva longoria).

ವಯಸ್ಸು ೩೮ ಆದರೂ ತಮ್ಮ ಸೌಂದರ್ಯ, ಸೆಕ್ಸ್ ಅಪ್ಪೀಲ್ (ನಮ್ಮ LBW appeal ಥರ) ಅನ್ನು ಜೋಪಾನವಾಗಿ ಕಾಯ್ದು ಕೊಂಡು ಬರುವುದರಲ್ಲಿ ಪಾಶ್ಚಾತ್ಯರು ನಿಪುಣರು.

ಮಹಿಳೆಯರು ಮತ್ತು ಮಕ್ಕಳಿಗಾಗಿ ಇರುವ ಒಂದು ಚಾರಿಟಿ ಸಮಾರಂಭದಲ್ಲಿ ಏವ ಕಾಣಿಸಿಕೊಂಡ ಉಡುಗೆ ಮಾಧ್ಯಮಗಳ ಕಣ್ಣು ಕುಕ್ಕಿತು. ಎದೆಯ ಭಾಗ ಮತ್ತು ತೊಡೆಯ ಭಾಗಗಳನ್ನು ಪ್ರದರ್ಶಿಸುವ ಪಾರದರ್ಶಕ ಉಡುಗೆ ತೊಟ್ಟ ಏವ ಎಲ್ಲರ ಕಣ್ಸೆಳೆದಳು. ‘ಬೂಬ್ ವಿಂಡೋ’ (ಮೈಕ್ರೋಸಾಫ್ಟ್ ವಿಂಡೋ ಅಲ್ಲ) ಎಂದು ನಾಮಕರಣ ಗೊಂಡ ಈ ಉಡುಗೆ ಸ್ತನಗಳನ್ನು ಪ್ರದರ್ಶಿಸಲೆಂದೇ ಸೃಷ್ಟಿಸಲ್ಪಟ್ಟಿ ರಬೇಕು.

ಜನರ ಗಮನ ಮತ್ತು ಜೊಳ್ಳನ್ನು ಸೆಳೆಯಲೆಂದೇ ಪ್ರದರ್ಶನಕ್ಕೆ ಬರುವ ‘ಬೂಬ್’ ಗಳು ಒಂದು ದಿನ ‘ಔಟ್ ಆಫ್ ವಿಂಡೋ’ ಆಗದಿದ್ದರೆ ಸಾಕು.

pic courtesy: http://www.ynaija.com

ಚೀನಾದ ಪಿಕ್ನಿಕ್

ಮೂರು ವಾರಗಳ ಕಾಲ ಬಿಡಾರ ಹೂಡಿ ಅದೇನನ್ನು ಮಾಡಬೇಕು ಎಂದು ಬಯಸಿದ್ದರೋ ಅದನ್ನು ಮಾಡಿಯೋ, ಅಥವಾ ಮಾಡದೆ ಬಿಟ್ಟೋ, ಅಂತೂ ಚೀನೀಯರು ನಮ್ಮ ನೆಲದಿಂದ ಕಾಲ್ಕಿತ್ತರು. ೧೯ ಕಿಲೋ ಮೀಟರು ಗಳಷ್ಟು ಒಳಬಂದು ಠಿಕಾಣಿ ಹಾಕಿದ್ದರು ಚೀನೀಯರು.
ಬದುಕಿನಲ್ಲಿ ಮಿತ್ರರನ್ನು ಬದಲಾಯಿಸಬಹುದು, ನೆರೆಹೊರೆಯವರನ್ನೂ ಬೇಕಾದರೆ ಬದಲಾಯಿಸಬಹುದು, ಆದರೆ ದೇಶದ ವಿಷಯದಲ್ಲಿ ಮಾತ್ರ ಮಿತ್ರರನ್ನು ಚೇಂಜ್ ಮಾಡಬಹುದು, ನಿನ್ನೆ ರಷ್ಯಾ, ಇವತ್ತು ಅಮೇರಿಕಾ, ನಾಳೆ ಇಥಿಯೋಪಿಯಾ. ಆದರೆ ನೆರೆಹೊರೆಯವರನ್ನು ಬದಲಾಯಿಸಲು ಬರುವುದಿಲ್ಲ. ಅದು ಪರ್ಮನೆಂಟ್ ಫಿಕ್ಸ್ಚರ್ರು. ಎಡದಲ್ಲಿ ಪಾಕಿಸ್ತಾನ, ಬಲದಲ್ಲಿ ಚೀನಾ, ಇವೆರಡು ಶನಿಗಳ ಮಧ್ಯೆ ನಾವು, ಫಲಿತಾಂಶ, ಆಗಾಗ ಶತ್ರು ನಮ್ಮ ಗಡಿಯೊಳಕ್ಕೆ ಬಂದು ನಮ್ಮ ಸಹನೆಯ ಮಟ್ಟ ಪರೀಕ್ಷಿಸೋದು.

ಮೂರು ವಾರಗಳ ಕಾಲ ನಮ್ಮ ಸಹನೆ ಪರೀಕ್ಷಿಸಿ, ನಮ್ಮ ಮಾತುಕತೆಯ ಧಾಟಿ ನೋಡಿ, ಚೀನೀಯರು ಜಾಗ ಖಾಲಿ ಮಾಡಿದರು. ಚೀನೀಯರು ಈ ರೀತಿ ಮಾಡಲು, ತಮಗೆ ಬೇಕಾದಾಗ ನಮ್ಮ ದೇಶದೊಳಕ್ಕೆ ನುಗ್ಗಲು, ಅರುಣಾ ಛಲ ಪ್ರದೇಶ ನನ್ನದು ಎನ್ನಲು, ನಮ್ಮ ಪ್ರಧಾನಿ ತನ್ನ ದೇಶದೊಳಕ್ಕೆ ಪ್ರವಾಸ ಮಾಡ ಹೊರಟಾಗ ತಗಾದೆ ತೆಗೆಯಲು ಕಾರಣ ನಾವೇ. ನಮ್ಮ ಸೈನ್ಯ ಅವರಷ್ಟು ಬಲಿಷ್ಠವಾಗಿ ಹೊರಹೊಮ್ಮಲು ನಮಗಿಲ್ಲದ ಇರಾದೆ. ನಮ್ಮ ಗಮನ, ಆಸಕ್ತಿ ಎಲ್ಲಾ ವೈಯಕ್ತಿಕ ಆಕಾಂಕ್ಷೆ ಕಡೆ ನೆಟ್ಟಿರುವ ಕಾರಣ ನಾವು ಪದೇ ಪ ದೇ ಇಂಥ ಸನ್ನಿವೇಶಗಳನ್ನು, ಮುಜುಗುರಗಳನ್ನು ಎದುರಿಸುವ ದೌರ್ಭಾಗ್ಯ ಬರುತ್ತದೆ. ಮಾತ್ರವಲ್ಲ ಓರ್ವ ದೂರ ದೃಷ್ಟಿ ಯುಳ್ಳ ನಾಯಕನ ಕೊರತೆ ಸಹ ಎದ್ದು ಕಾಣುತ್ತದೆ.

ಈ ಕ್ಲಿಷ್ಟಕರ ಸನ್ನಿವೇಶ ವನ್ನು ನಾವು ಎದುರಿಸಿದ್ದು “ಮಾರ್ಷಲ್ ಆರ್ಟ್ಸ್” ವೀರರ ಥರ. ಮಾರ್ಷಲ್ ಆರ್ಟ್ಸ್ ನಲ್ಲಿ ವಿರೋಧಿಯ ಮೇಲೆ ಒಮ್ಮೆಗೆ ಎರಗೋಲ್ಲ. non-resistance ತಂತ್ರ ಉಪಯೋಗಿಸಿ ಶತ್ರುವಿನ ಶಕ್ತಿಯನ್ನ ನಮ್ಮ ಉಪಯೋಗಕ್ಕೆ ತಂದು ಸೋಲಿಸೋದು. ಚೀನೀಯರು ಒಳಬಂದಾಗ ನಾವು ಪ್ರತಿರೋಧ ಒಡ್ಡಲಿಲ್ಲ. ನೋಡೋಣ ಏನು ಮಾಡುತ್ತಾರೆ ಎಂದು ಕಾದು ನೋಡಿದೆವು. ಶತ್ರು ತನ್ನ ಶಕ್ತಿಯನ್ನ ವೃಥಾ ವಿನಿಯೋಗಿಸಿ ನಿತ್ರಾಣಗೊಂಡ. ಲಡಾಖ್ ಯಾವುದೇ ಲಡಾಯಿ ಇಲ್ಲದೆ ಶಾಂತವಾಗಿ ನಿದ್ರಾದೇವಿಯ ತೋಳ್ತೆಕ್ಕೆಗೆ ಜಾರಿತು.

ಮಾಧ್ಯಮದ ಮಟ್ಟ ಇದು

muslim stares at a Hindu man at polling station in deccan herald

ಮಾಧ್ಯಮ ಇಳಿಯುವ ಮಟ್ಟ ನೋಡಿ. ಜನ ಸಹಬಾಳ್ವೆ ಬಯಸಿದರೂ, ಮಾದ್ಯಮ ಬಿಡದು. ಮತ ಹಾಕಲು ಸರತಿಯಲ್ಲಿ ಜೊತೆಯಾಗಿ ನಿಂತ ಮುಸ್ಲಿಂ ವೃದ್ಧ ಮತ್ತ್ತು ಹಿಂದೂ ವ್ಯಕ್ತಿಯ ಚಿತ್ರ ತೆಗೆದು ” a muslim stares at a Hindu man at polling station” ಎಂದು ತನ್ನ ಮಹಾಕೃತಿಯನ್ನು ವರ್ಣಿಸುತ್ತಾನೆ. ವಿವಿಧ ಧರ್ಮಗ ಳಿಗೆ ಸೇರಿದ ಜನ ವೋಟ್ ಹಾಕುವಾಗ, ಪ್ರಯಾಣಿಸುವಾಗ, ಪಡಿತರ ಅಂಗಡಿಗಳ ಸಾಲಿನಲ್ಲಿ, ಶಾಲೆ ಕಾಲೇಜುಗಳಲ್ಲಿ ಒಟ್ಟಿಗೆ ಸೇರುವುದು ತೀರಾ ಸಹಜ, ಸಾಮಾನ್ಯ. ಈ ಸಾಮಾನ್ಯ ಜ್ಞಾನ ಕ್ಯಾಮೆರಾಧಾರೀ ಪಂಡಿತನಿಗೆ ಹೊಳೆಯದೆ ಹೋಯಿತು, ಅಥವಾ ಕುಚೇಷ್ಟೆ ತನ್ನ ಕುಬುದ್ಧಿಯನ್ನು ಪ್ರದರ್ಶಿಸಿತು.

ಮುಸ್ಲಿಂ ಜೊತೆಯಲ್ಲಿ ಕಾಣಸಿಗುವ ಪ್ರತೀ ಸನ್ನಿವೇಶಕ್ಕೂ ಏನಾದರೂ ಒಂದು ಬಣ್ಣ ಕಟ್ಟಲೇಬೇಕು. ಕನಿಷ್ಠ ಯೋಗ್ಯತೆ, ಕನಿಷ್ಠ ವಿದ್ಯೆ ಇಲ್ಲದ ನಾಲಾಯಕ್ ಗಳು ಮಾಧ್ಯಮ ದಲ್ಲಿ ತುಂಬಿಕೊಂಡಾಗ ಆಗುವ ಅನಾಹುತ, ಅಭಾಸಕ್ಕೆ ಈ ಚಿತ್ರ ಕೈಗನ್ನಡಿ.

ಮೈಸೂರು ಪ್ರಿಂಟರ್ಸ್ ಬಳಗದ ಡೆಕ್ಕನ್ ಹೆರಾಲ್ಡ್ ಪತ್ರಿಕೆಯಲ್ಲಿ ಬಂದ ಚಿತ್ರ ಇದು. ಮೈಸೂರು ಪ್ರಿಂಟರ್ಸ್ ನನಗೆ ತಿಳಿದ ಹಾಗೆ ಸಮುದಾಯಗಳ ನಡುವೆ ಈ ತೆರನಾದ ಗೋಡೆ ಎಬ್ಬಿಸುವ ಪರಿಪಾಠ ಇಟ್ಟುಕೊಂಡ ಸಂಸ್ಥೆಯಲ್ಲ. ಕಾಲ ಬದಲಾದ ಲಕ್ಷಣವೋ ಅಥವಾ ಬೇರಿನ್ನೇನೋ ಒಟ್ಟಿನಲ್ಲಿ ಪತ್ರಿಕೆಯ ಈ ನಡೆ ಮಾತ್ರ ಆ ಸಂಸ್ಥೆಗೆ ಶೋಭೆ ತರುವಂಥದ್ದಲ್ಲ. ಮೈಸೂರು ಪ್ರಿಂಟರ್ಸ್ ತಮ್ಮ ಸಂಸ್ಥೆಯಲ್ಲಿ ಹೊಕ್ಕಿರುವ ಸಮಾಜ ಕಂಟಕ ಹುಳುಗಳನ್ನು ಹೆಕ್ಕಿ ಹೊರಕ್ಕೆಸೆಯಲಿ.

ಇದನ್ನು ಓದಿ…

stepping
ಇದನ್ನು ಓದಿ. ನನಗೆ ಇಷ್ಟವಾಯಿತು. ನಿಮಗೂ ಇಷ್ಟ ವಾಗಬಹುದು. ಆಗದಿದ್ದರೆ ಆಗುವ ನಷ್ಟ ಒಂದೂವರೆ ನಿಮಿಷಗಳು ಮಾತ್ರ.
ಇದನ್ನು ಓದಿ ನಿಮಗೆ ತಿಳಿದ, ತೋಚಿದ, ಹೊಳೆಯುವ ರೀತಿಯಲ್ಲಿ ವಿಶ್ಲೇಷಿಸಿ. ದೊಡ್ಡ ವೇದಾಂತ ವಂತೂ ಅಲ್ಲ, ಆದರೂ ಒಂದು ಸುಂದರ, ಕಾಲ್ಪನಿಕವಾದರೂ ಬಹುಶಃ ಸಂಭವಿಸಬಹುದಾದ, ಸಂಭವನೀಯತೆ.

ನಿಮ್ಮ ಆಧ್ಯಾತ್ಮಿಕ ಯಾತ್ರೆಯಲ್ಲಿ ನೀವು ಒಂದು ಸ್ಥಳ ತಲುಪುವಿರಿ. ಕಡಿದಾದ, ಎತ್ತರದ ಸ್ಥಳದ ತುತ್ತ ತುದಿಗೆ ತಲುಪುವ ನೀವು ಅಂಚಿನಲ್ಲಿ ನಿಂತು ಮತ್ತೊಂದು ಹೆಜ್ಜೆ ಮುಂದೆ ಇಟ್ಟಾಗ ಆಗುವ ಅನುಭವ ಅಥವಾ ಅವಘಡ.
ಆ precarious ಹೆಜ್ಜೆ ನಿಮ್ಮನ್ನು ಒಂದೋ…
ಅಡಿಯಲ್ಲಿ ಕಾಣುವ ತಳ ಮೇಲಕ್ಕೆ ಬಂದು ನಿಮ್ಮ ಕಾಲುಗಳಿಗೆ ಆಸರೆಯಾಗಿ ನಿಲ್ಲುತ್ತದೆ…
ಅಥವಾ,
ನಿಮಗೆ ರೆಕ್ಕೆಗಳು ಹುಟ್ಟಿ ಹಾರಲು ಕಲಿಯುವಿರಿ.

ಚಿತ್ರ ಮತ್ತು ಬರಹ ಕೃಪೆ: http://vision5d2012.wordpress.com/2013/05/06/stepping-off-the-edge-and-flying/

ನಿಮ್ ವೋಟ್ ಯಾರ್ಗೆ?

ಕರ್ನಾಟಕದಲ್ಲಿ ಚುನಾವಣೆಯ ಜ್ವರ ಇಳಿದು, ಮತಗಣನೆಯ ಚಳಿ ಶುರುವಾಗಲಿದೆ. ಆಪ್ತ ಮಿತ್ರನೊಬ್ಬನಿಗೆ ಕುಶಲ ವಿಚಾರಿಸಲು ಫೋನಾಯಿಸಿದಾಗ ಊಟ ಈಗತಾನೆ ಆಯ್ತಪಾ, ವೋಟ್ ಹಾಕೋಕೆ ಹೋಗ್ಬೇಕು ಎಂದು ಚುನಾವಣೆಯ ಮೂಡ್ ಗೆ ತಂದ ಸಂಭಾಷಣೆಯನ್ನು. ಚಿಕ್ಕಂದಿನಿಂದಲೂ ನನಗೆ ರಾಜಕೀಯದ ಹುಚ್ಚು. ಅಪ್ಪ ಪಕ್ಕಾ ಕಾಂಗ್ರೆಸ್ಸಿಗರಾದರೆ ನಾನು ಜನತಾ ಪಕ್ಷ. ಆಗ ಇದ್ದಿದ್ದು ಒಂದೇ ಜನತಾ ಪಕ್ಷ. ಈಗ ಭಾರತೀಯ ಜನತಾ ಪಕ್ಷ, ಕರ್ನಾಟಕ ಜನತಾ ಪಕ್ಷ, ‘ಸೆಕ್ಯೂಲರ್’ ಜನತಾ ಪಕ್ಷ, ಬೈನಾಕ್ಯುಲರ್ ಜನತಾ ಪಕ್ಷ…ಹೀಗೆ ತರಾವರಿ ಪಕ್ಷಗಳು. ಜನರ ಸೇವೆ ಗಾಗಿಯೇ ತಮ್ಮ ಬಾಳನ್ನು ಮುಡಿಪಾಗಿಸಿಕೊಂಡ ಪಕ್ಷಗಳು.

ಚುನಾವಣೆಯ ಬಗ್ಗೆ ಮಾತನ್ನು ಮುಂದುವರೆಸಿದಾಗ ತಿಳಿಯಿತು ಇದು ನನ್ನ ಕಾಲದ ಚುನಾವಣೆಯಲ್ಲ, ಈಗಿನ ಚುನಾವಣೆ ಹೈ ಟೆಕ್ ಚುನಾವಣೆ, ಧ್ವನಿ ವರ್ಧಕ ಉಪಯೋಗಿಸುವಂತಿಲ್ಲವಂತೆ, ಭಿತ್ತಿ ಪತ್ರ ಅಂಟಿಸ ಬಾರದಂತೆ, ಮನಸ್ಸಿಗೆ ತೋಚಿದಂತೆ ಪಾಂಪ್ಲೆಟ್ ಮುದ್ರಿಸಬಾರದಂತೆ, ಮೆರವಣಿಗೆ ಕೂಡದಂತೆ, ಘೋಷಣೆ ಬೇಡವಂತೆ……ಥತ್ತೇರಿ, ಇದೆಂಥಾ ಚುನಾವಣೆ ಎಂದು ಅನ್ನಿಸಿತು. ನನ್ನ ಜಮಾನದ ಚುನಾವಣೆಯೇ ಚೆಂದ. ರಂಗು ರಂಗಿನ ಬ್ಯಾಡ್ಜು, ಅಭ್ಯರ್ಥಿಗಳಿಂದ ಊಟ, ತಿಂಡಿ ವ್ಯವಸ್ಥೆ, ಬೀರು ಬ್ರಾಂದಿ, ಪ್ರಾಸಬದ್ದ ಘೋಷಣೆಗಳು, ಜನತಾ ಪಕ್ಷ ಎತ್ತು ಭಿಕ್ಷ, ಕಾಂಗ್ರೆಸ್ ಪಕ್ಷ ಎತ್ತು ಭಿಕ್ಷ, ಭಾರತ್ ಮಾತಾ ಕೀ ಜೈ, ಎಂದು ಗಂಟಲು ಹರಿದು ಕೊಳ್ಳುವಂತೆ ಕೂಗುತ್ತಿದ್ದದ್ದು, ಅಯ್ಯೋ ಇದೆಲ್ಲಾ ಇಲ್ವೆ ಇಲ್ವಲ್ಲೋ ಎಂದಾಗ ಅವನು, ಅದೇನೂ ಇಲ್ಲ ಕಣೋ ಈಗ, ಹೆಣ ನೋಡಲು ಹೋಗೋ ಥರಾ ಮೌನವಾಗಿ ವೋಟಿಂಗ್ ಮೆಶೀನ್ ಹತ್ರ ನಿಂತು, ಯಾವುದಾದರೂ ಒಂದು ಬಟನ್ ಚುಚ್ಚಿ ಹೊರಬರೋದು ಅಷ್ಟೇ ಎಂದ. ಮೊದಲು ಮತಗಟ್ಟೆ ಬಳಿಯೂ ಕಾರ್ಯಕರ್ತರು. ದೂರದಿಂದ ಹಲ್ಲು ಗಿಂಜುತ್ತಾ, ಕೈಸನ್ನೆಯಿಂದ ತಮ್ಮ ಪಕ್ಷದ ಗುರುತನ್ನು ಜನರಿಗೆ ತೋರಿಸಿ ಎದುರು ಪಕ್ಷದವರ ಕೈಯಲ್ಲಿ ಉಗಿಸಿ ಕೊಂಡು ಹೆ ಹೇ ಎಂದು ಪೆಚ್ಚು ನಗು ನಗೋದು…

ಹೋಯ್ತಾ ಆ ಕಾಲ? ಮಾತಿನ ಮಧ್ಯೆ, ರಾಮನಗರದ ಹತ್ತಿರ ಮಚ್ಚು ತೋರಿಸಿ ವೋಟ್ ಮಾಡಲು ಒಂದು ಪಕ್ಷದವರು ಬೆದರಿಕೆ ಹಾಕುತ್ತಿರುವುದನ್ನು ಟೀವೀ ಲಿ ತೋರಿಸ್ತಾ ಇದ್ದಾರೆ ನೋಡು ಎಂದಾಗ, ಒಹ್, ಸಧ್ಯ ಈ ಸಂಸ್ಕಾರವನ್ನು ನಮ್ಮ ಜನ ಇನ್ನೂ ಜೋಪಾನವಾಗಿ ಇಟ್ಟುಕೊಂಡಿದ್ದಾರೆ ಎಂದು ಸಮಾಧಾನ ಪಡುತ್ತಾ ಮಿತ್ರನಿಗೆ ವಿದಾಯ ಹೇಳಿದೆ.

ಬೆಡಗಿ ಬಾಲಿವುಡ್ ಗೆ ೧೦೦

isha-chawla 2

ಮೊನ್ನೆ ಶುಕ್ರವಾರ ಬಾಲಿವುಡ್ ಗೆ ೧೦೦ ವರ್ಷಗಳು ತುಂಬಿದವಂತೆ. ೧೮೯೫ ರಲ್ಲಿ ಪ್ಯಾರಿಸ್ ನಗರದಲ್ಲಿ ಆರಂಭವಾದ ಸಿನೆಮಾ ಆರೇ ತಿಂಗಳಿನಲ್ಲಿ ಮುಂಬೈ ತೀರವನ್ನು ತಲುಪಿ ಜನರನ್ನು ಮಂತ್ರ ಮುಗ್ಧ ರನ್ನಾಗಿಸಿತು. ಕೂಡಲೇ ಈ ತಂತ್ರ ಜ್ಞಾನವನ್ನು ತನ್ನ ತೆಕ್ಕೆಗೆ ಸೇರಿಸಿಕೊಂಡ ಭಾರತೀಯ ಒಂದು, ಎರಡು ರೀಲ್ ಗಳ ಪುಟ್ಟ ಸಿನೆಮಾದೊಂದಿಗೆ ಚಲನ ಚಿತ್ರದೊಂದಿಗಿನ ತನ್ನ ಸಂಬಂಧಕ್ಕೆ ನಾಂದಿ ಹಾಡಿದ. ಬಡ ದೇಶವಾದರೂ, ಒಪ್ಪತ್ತಿಗೂ ಗತಿಯಿಲ್ಲದೆ, ಆಗಸವನ್ನು ಸೂರಾಗಿಸಿಕೊಂಡರೂ ಬಾಲಿವುಡ್ ಮಾತ್ರ ರೀಲ್ ಮೇಲೆ ರೀಲುಗಳಂತೆ ಚಿತ್ರಗಳನ್ನ ತಯಾರಿಸಿ ಜನ ಹಸಿವನ್ನು ಮರೆಯಲು ಸಹಾಯ ಮಾಡಿತು. ಭಾರತೀಯರಿಗೆ ಕಥೆ ಕೇಳೋದು, ಕೇಳಿದ ಕಥೆಯನ್ನೇ ಮತ್ತೊಮ್ಮೆ ಕೇಳೋದು ಮೋಜಿನ ಸಂಗತಿಯಂತೆ. ಸಿನಿಮಾ ಬಂದಾಗಲೂ ಆಗಿದ್ದಷ್ಟೇ. ಒಂದೇ ಸಿನಿಮಾವನ್ನು ಹಲವು ಸಲ ನೋಡುವ ಜನರಿದ್ದಾಗ ಬಾಲಿವುಡ್ ವ್ಯಾಪಾರ ಸರಾಗ ವಾಯಿತು. ಅದರ ಮೇಲೆ ನಿಜ ಜೀವನಕ್ಕೆ ಯಾವುದೇ ರೀತಿಯಿಂದಲೂ ಹೊಂದದ ಬದುಕಿನ ರೀತಿಯನ್ನು ತೆರೆಯ ಮೇಲೆ ತೋರಿಸಿದಾಗ ಬಂದ ಶಿಳ್ಳೆ ನೋಡಿ ಬಾಲಿವುಡ್ ಗೆ ಯಶಸ್ಸಿನ ಮಂತ್ರ ಏನು ಎಂದು ಹೇಳಲು ಪಂಡಿತರ ಅವಶ್ಯಕತೆ ಬರಲಿಲ್ಲ.

ಸಿನಿಮಾ ಒಂದು ಅತ್ಯಂತ ಶಕ್ತಿಶಾಲೀ ಮತ್ತು ಪ್ರಭಾವಶಾಲೀ ಮಾಧ್ಯಮ. ಅದನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಿದಾಗ ಸಮಾಜದ ಪರಿವರ್ತನೆ ಬಹು ಸುಲಭ. ಆದರೆ ಸಮಾಜ ಪರಿವರ್ತಿಸುವ ಚಿತ್ರಗಳು ಬಂದಾಗ ಅವುಗಳಿಗೆ ಸಿಗುವ ಪ್ರತಿಕ್ರಿಯೆ, ಪ್ರೋತ್ಸಾಹ ಕಂಡ ಬಾಲಿವುಡ್ ಸಿಕ್ಕಾಪಟ್ಟೆ ಹಣ ಹಾಕಿ ಕೈ ಸುಟ್ಟುಕೊಳ್ಳಬಾರದು ಎಂದು ಅಂಗ ಸೌಷ್ಟವಗಳ ಪ್ರದರ್ಶನಕ್ಕೆ ಕೈ ಹಾಕಿತು. ಪ್ರತೀ ಚಿತ್ರದಲ್ಲೂ ಒಂದು ಕ್ಯಾಬರೆ ನೃತ್ಯ ಇರಲೇಬೇಕು. ಜನರನ್ನು ಉದ್ರೇಕಿ ಸುತ್ತಿದ್ದ ಈ ನೃತ್ಯಗಳು ಕಾಲಕ್ರಮೇಣ ಪ್ರತೀ ಹಾಡಿನಲ್ಲೂ ಕಾಣಲು ಸಿಕ್ಕಿತು. ಈಗಂತೂ ವಾತ್ಸ್ಯಾಯನನ ಎಲ್ಲಾ ಭಂಗಿಗಳೂ ಲಭ್ಯ ಹಾಡುಗಳಲ್ಲಿ. ಈ ಚಿತ್ರಗಳು ಬಾಕ್ಸ್ ಆಫೀಸಿನಲ್ಲಿ ಹಣ ಚೆಲ್ಲಾಡಲು ಸಹಾಯಕಾರಿಯಾದವು.

ಸಮಾಜದ ಕಡೆ ಬಾಲಿವುಡ್ ತನ್ನ ದೃಷ್ಟಿ ಹರಿಸಲೇ ಇಲ್ಲ ಎಂದೂ ಹೇಳುವಂತಿಲ್ಲ. ಅಸ್ಪೃಶ್ಯತೆ ಬಗೆಗಿನ ೧೯೩೬ ರ “ಅಚ್ಚುತ್ ಕನ್ಯಾ”, ವಿಧವಾ ವಿವಾಹದ ಮೇಲಿನ ಏಕ್ ಹೀ ರಾಸ್ತಾ (೧೯೫೬), ವರದಕ್ಷಿಣೆ ಬಗೆಗಿನ ದಹೇಜ್ (೧೯೫೦) ಚಿತ್ರಗಳು ವ್ಯಾಪಾರೀ ಮನೋಭಾವ ಬಿಟ್ಟು ಸಮಾಜದ ಕಡೆ ಗಮನ ಹರಿಸಿದವು.

ಉತ್ತರ ಮತ್ತು ದಕ್ಷಿಣ ಭಾರತ ದಿಕ್ಕುಗಳಂತೆ ಯೇ ವಿರುದ್ಧ ಹಲವು ವಿಷಯಗಳಲ್ಲಿ. ಉತ್ತರ ಭಾರತೀಯ ಮತ್ತು ದಕ್ಷಿಣ ಭಾರತೀಯ ರ ನಡುವಿನ ಚಿತ್ರವನ್ನ ೧೯೫೬ ರಲ್ಲಿ ನಿರ್ದೇಶಕ ಮೋಹನ್ ಸೆಹಗಲ್ ನಿರ್ಮಿಸಿ ಸುದ್ದಿ ಮಾಡಿದರು. ಈ ಚಿತ್ರದಲ್ಲಿ ಉತ್ತರದ ಪಂಜಾಬಿ ಯುವಕ ತಮಿಳು ಮೂಲದ ಪ್ರೆಯಸಿಯಲ್ಲಿ ಹೇಳುತ್ತಾನೆ, ಅವನ ತಂದೆಯ ಪ್ರಕಾರ, ಒಂದು ನಾಗರ ಹಾವೂ, ದಕ್ಷಿಣ ಭಾರತೀಯನೂ ಎದುರಾದರೆ ಮೊದಲು ಮದ್ರಾಸಿ ಯನ್ನು ಕೊಲ್ಲಬೇಕಂತೆ. ಹೇಗಿದೆ ಸಂಬಂಧ, ಮತ್ತು ನಮ್ಮ ಬಗೆಗಿನ ಅವರ ಒಲವು. ಈ ಒಲವನ್ನು ಈಗಲೂ, ವಿಶೇಷವಾಗಿ ಬೆಂಗಳೂರಿಗರಿಗೆ ಕಾಣಲು ಸುಲಭ ಸಾಧ್ಯವಂತೆ.

ಬಾಲಿವುಡ್ ನಮ್ಮ ಸಮಾಜದ ಮೇಲೆ ಯಾವುದೇ ರೀತಿಯಿಂದಲೂ ಒಳ್ಳೆಯ ಪರಿಣಾಮ ಬೀರುತ್ತಿಲ್ಲ ಎನ್ನುವ ದೂರು ಜೋರಾಗಿ ಕೇಳಿಸುತ್ತಿದೆ. ಬೆಳಗಾದರೆ ನಾವು ಓದುವ ಹಸುಳೆ ಯಿಂದ ಹಿಡಿದು ಇಳಿವಯಸ್ಸಿನ ಮಹಿಳೆಯ ಮೇಲೆ ನಡೆಯುವ ಅತ್ಯಾಚಾರಕ್ಕೆ ಕಾರಣ ನಟಿಯರಿಗೆ ಉಡುಗೆಯ ಮೇಲಿನ ವೈರಾಗ್ಯ ಕಾರಣವಂತೆ. ಹಣಕ್ಕಾಗಿ ಬಿಚ್ಚಿದ್ದೇ ಬಿಚ್ಚಿದ್ದು. ನಿರ್ದೇಶಕ ಸ್ವಲ್ಪ ಬಿಚ್ಚಿದರೆ ಸಾಕು ಎಂದರೆ ಸ್ವಲ್ಪ ಉಟ್ಟರೆ ಸಾಕು ಎಂದು ತಪ್ಪಾಗಿ ಕೇಳಿಸಿಕೊಳ್ಳುವ ನಟಿಯರಿಗೆ ಬಿಚ್ಚುವುದರಲ್ಲಿ ಅದೇನೋ ಒಂದು ಸುಖ. ತಮ್ಮ ಅಂಗ ಸೌಷ್ಠವ ಪ್ರದರ್ಶನಕ್ಕಿಟ್ಟು ಜನರನ್ನು ಉದ್ದೀಪಿಸುವ ತಾರೆಯರು ತಾವು ಮಾತ್ರ ಬಾಡಿ ಗಾರ್ಡ್ ಗಳ ರಕ್ಷಣೆಯಲ್ಲಿ ಸುರಕ್ಷಿತ. ದಾರಿಹೋಕ, ಹೊಟ್ಟೆ ಪಾಡಿಗೆಂದು ಹೊರಹೋಗುವ ಬಡಪಾಯಿ ಮಹಿಳೆಯರು ಕಾಮ ಪಿಪಾಸುಗಳಿಗೆ ಬಲಿ.

ಇದು ಬಾಲಿವುಡ್ ನ ನೂರು ವರ್ಷ ಗಳ ವೀರಗಾಥೆ.

Pic Courtesy: http://bollywoodkickass.blogspot.com/2011/11/isha-chawla-photos-in-wet-red-blue.html

ಸಿಕ್ಕರೆ ಆಟ, ಸಿಗದಿದ್ದರೆ ಮಾಟ

ಲಂಚ, ಭ್ರಷ್ಟಾಚಾರ, ಮುಂತಾದ ಪಿಡುಗುಗಳನ್ನು ಹಿಂದಕ್ಕೆ ಹಾಕಿ ಮನುಷ್ಯ ತಲೆ ತಗ್ಗಿಸುವಂತೆ ಮಾಡುತ್ತಿರುವ ಕೃತ್ಯವೆಂದರೆ ಲೈಂಗಿಕ ಹಿಂಸೆ. ದಿನ ಬೆಳಗಾದರೆ ಲೈಂಗಿಕ ದೌರ್ಜನ್ಯ, ಲೈಂಗಿಕ ಶೋಷಣೆ, ಲೈಂಗಿಕ ಪೀಡನೆ, ಲೈಂಗಿಕ ಅತ್ಯಾಚಾರ ಗಳು ನಮ್ಮ ಚಿತ್ತವನ್ನು ಕಲಕುತ್ತವೆ. ಇಂಥ ನೀಚ ಕೃತ್ಯಗಳಲ್ಲಿ ತೊಡಗಿಸಿಕೊಳ್ಳುವವರನ್ನು ಸಹಿಸಿಕೊಳ್ಳುವ ಸಮಾಜ, ಮತ್ತು ವ್ಯವಸ್ಥೆಯ ಬಗ್ಗೆ ತಾತ್ಸಾರ ಮೂಡುತ್ತದೆ.

ಲೈಂಗಿಕ ಪೀಡನೆಗಳು ಹತ್ತು ಹಲವು ಆಕಾರ ಪಡೆದು ಕೊಂಡು ಮುಗ್ಧ ರ ಮೇಲೆ ಎರಗುವುದು ನಾವು ಓದಿದ್ದೇವೆ, ಕೇಳಿದ್ದೇವೆ. ಈ ಶೋಷಣೆಗೆ ಸುಲಭವಾಗಿ ದಕ್ಕುವುದು ಮಕ್ಕಳು.   ಲೈಂಗಿಕ ಶೋಷಣೆ ಬೀದಿಯಲ್ಲಿ ನಡೆಯೋದಕ್ಕಿಂತ ಹೆಚ್ಚು ಮನೆಗಳಲ್ಲೇ ನಡೆಯುತ್ತವಂತೆ. ಹಾಗಾಗಿ ಬೀದಿಗಳಿಂತ ಹೆಚ್ಚು ಅಪಾಯಕರ ಮನೆ ಎಂದರೆ ಯಾರೂ ಬೆಚ್ಚದೆ ಇರಲಾರರು.

ಲೈಂಗಿಕ ಶೋಷಣೆಯ ಮತ್ತೊಂದು ವಿಧ ಇಲ್ಲಿದೆ ನೋಡಿ.

ಅಜ್ಜಿ ಒಬ್ಬರೇ ಮನೆಯಲ್ಲಿ ಎಂದು ಮೊಮ್ಮಗಳು ಅವರೊಂದಿಗೆ ಇರಲು ಬರುತ್ತಾಳೆ. ಗಂಡಸರಾರೂ ಮನೆಯಲ್ಲಿಲ್ಲದ ಕಾರಣ ಹತ್ತಿರದ ಸಂಬಂಧಿಯೊಬ್ಬನನ್ನು ರಾತ್ರಿ ಮಲಗಿಸಿ ಕೊಳ್ಳುತ್ತಾರೆ. ಕರೆ ಘಂಟೆ ಶಬ್ದವಾದ್ದರಿಂದ ಯಾರು ಎಂದು ವಿಚಾರಿಸಲು ನೆಂಟ ನನ್ನು ಎಬ್ಬಿಸುತ್ತಾಳೆ ಯುವತಿ. ಆತ ಎದ್ದು ಆಕೆಗೆ ಸಹಾಯ ಮಾಡುವುದನ್ನು ಬಿಟ್ಟು ಬಿಗಿದಪ್ಪಿಕೊಳ್ಳುತ್ತಾನೆ. ಗಾಭರಿಯಾದ ಆಕೆ  ಹೇಗಾದರೂ ಅವನೊಂದಿಗೆ ಸೆಣಸಾಡಿ, ಬಿಡಿಸಿಕೊಂಡು ಅಜ್ಜಿಯ ಕೋಣೆ ಸೇರಿಕೊಂಡು ಚಿಲಕ ಹಾಕಿ ಕೊಳ್ಳುತ್ತಾಳೆ. ಬೆಳಗಾದ ಕೂಡಲೇ ಈ ವಿಷಯ ಯಾರಲ್ಲಾದರೂ ಆಕೆ ಹೇಳಿಬಿಟ್ಟರೆ ಎಂದು ಹೆದರಿ ನೆಂಟ ಆಕೆಯ ಕ್ಷಮೆ ಕೇಳಿ, ನನಗೆ ಯಾರೋ ಮಾಟ ಮಾಡಿ ಬಿಟ್ಟಿದ್ದಾರೆ, ಹಾಗಾಗಿ ನನಗೆ ನನ್ನ ಸೋದರಿಯರ, ಹತ್ತಿರದ ನೆಂಟರ ಹುಡುಗಿಯರನ್ನು ಕಂಡರೆ ಉದ್ರೇಕವಾಗುತ್ತದೆ, ಇನ್ನು ಎಂದೂ ಹೀಗೆ ಮಾಡೋಲ್ಲ ಎಂದು ಮತ್ತೂಮ್ಮೆ ಕೇಳಿ ಜಾಗ ಖಾಲಿ ಮಾಡುತ್ತಾನೆ. ಈತನ ವಿರುದ್ಧ, ಅಥವಾ ಈತ ಮಾಡಿದ ಕೆಲಸವನ್ನ ಈಕೆ ಯಾರ ಹತ್ತಿರವೂ ಹೇಳಲಿಕ್ಕೆ ಕಷ್ಟ, ಏಕೆಂದರೆ ಈ ಯುವತಿಯ ತಂದೆಯ ಸೋದರಿಯ ಮಗ ಈತ. ಎಷ್ಟು ಹತ್ತಿರದ ಸಂಬಂಧ ನೋಡಿ. ಮನೆಯವರು ನಂಬುವುದು ಕಷ್ಟ. ಈಗ ಹೇಳಿ ಯಾವುದಾದರೂ ಕಾರಣಕ್ಕೆ ಮನೆಯಲ್ಲಿ ತಂಗುವ ನೆಂಟರನ್ನು ನಂಬುವುದು ಹೇಗೆ ಎಂದು. ಈ ಯುವತಿ ಈತನ ಲಂಪಟ ತನವನ್ನು ಪ್ರತಿಭಟಿಸಿದ್ದರಿಂದ ಇದು “ಮಾಟ”, ಸಹಕರಿಸಿದ್ದರೆ ಇವನಿಗೆ ಇದೊಂದು ‘ಆಟ’.              

ಒಂದು ಪುಟ್ಟ ಅನಿಸಿಕೆ

ನನ್ನ ಫ್ಲಾಟ್ ನ ಹತ್ತಿರ  ಐದಾರು ಸೌದಿ ಹುಡುಗರು  ಬೀದಿ ಫುಟ್ ಬಾಲ್ ಆಡುತ್ತಿದ್ದರು. ಆಟದ ಮಧ್ಯೆ ಸುಮಾರು ೧೦-೧೨ ವರ್ಷ ಪ್ರಾಯದ ಹುಡುಗ ಅಲ್ಲೇ ಪಕ್ಕದಲ್ಲಿ ಊರುಗೋಲಿನೊಂದಿಗೆ ನಿಂತಿದ್ದ ವ್ಯಕ್ತಿಯ ಹತ್ತಿರ ಹೋಗಿ ಆತನ ಕಾಲಿಗೆ ಹೇಗೆ ಏಟಾಯಿತು ಎಂದು ಅನುಕಂಪದಿಂದ  ವಿಚಾರಿಸಿ, ಆತನಿಗೆ ಹಸ್ತ ಲಾಘವ ನೀಡಿ ಮರಳಿದ ತನ್ನ ಆಟ ಮುಂದುವರೆಸಲು.

ಬದುಕಿನ ನಾಗಾಲೋಟದಲ್ಲಿ ನಮಗೆ ಇಂಥ ದಯೆ ತೋರಿಸಲು ಸಮಯ ಸಿಗೋಲ್ಲ, ಅಥವಾ ಅದರ ಕಡೆ ನಾವು ಗಮನ ಹರಿಸೋಲ್ಲ. ಈ ಪುಟ್ಟ ಹುಡುಗ ಒಂದು ಸುಂದರ ಪಾಠ ನನಗೆ ನೀಡಿದ. ಎಲ್ಲೆಲ್ಲೂ ಹಿಂಸೆ, ಅಸಹನೆ, ಹಗೆ, ಧ್ವೇಷ, ಅವುಗಳ ಮಧ್ಯೆ ಇಂಥ ಅವಿಸ್ಮರಣೀಯ ದೃಶ್ಯ.  ಅರಬ್ ಅಥವಾ ಅರಬೇತರ, ಮಾನವೀಯತೆ ಮಾತ್ರ ನಿರಂತರ, ಅಲ್ವಾ?     

ಈ ಭಾವನೆ ಎಲ್ಲರಲ್ಲೂ ಇದ್ದಿದ್ದರೆ?

ಮಹಾಕಾವ್ಯ ಮಹಾಭಾರತವನ್ನು ವಿಮರ್ಶಿಸಿ ಒಬ್ಬರು ಲೇಖನದ ಬರೆದರು. ಅದರಲ್ಲಿ ಮಹಾಭಾರತ ವನ್ನು ಸ್ವಲ್ಪ ಕಟುವಾಗಿ ಟೀಕಿಸಲಾಗಿತ್ತು. ಓದಿದ ಒಬ್ಬರು ಈ ಲೇಖನಕ್ಕೆ ಪ್ರತಿಕ್ರಯಿಸಿದ್ದು ಹೀಗೆ.

“ಯಾವುದೋ ಕಾಲದ ಪುರಾಣದ ಕತೆಗಳನ್ನು ತೆಗೆದುಕೊಂಡು, ನಮ್ಮ ಮನಸಿಗೆ ಕಾಣುವುದೆ ಸತ್ಯವೆಂದು ನಿರ್ದರಿಸಿ, (ನಾವು ಯಾರು ಆಗಿನ ಕಾಲಕ್ಕೆ ಹೋಗಿ ಸತ್ಯವೇನೆಂದು ಅರಿಯಲಾರೆವು, ಏನು ನಡೆಯಿತೆಂದು ತಿಳಿಯಲಾರೆವು), ಈಗಿನ ವಾತವರಣ ಕಲುಶಿತಗೊಳಿಸುತ್ತ ಹೋಗುವ ಅರ್ಥವಾದರು ಏನು . ನಿಮಗೆ ಕೃಷ್ಣ ರಾಮರು ಬೇಡ ಬಿಡಿ. ಆದರೆ ಯಾವುದು ಸತ್ಯ ತಿಳಿಸಿ, ಅದನ್ನೆ ಎಲ್ಲರಿಗು ಹೇಳಿ, ನಿಮ್ಮ ದಾರಿಗೆ ಕರೆದೊಯ್ಯಿರಿ, ಆದರೆ ಯಾವುದನ್ನೊ ನಿಂದಿಸುತ್ತ, ಅವರ ನಂಭಿಕೆಯನ್ನು ದ್ವೇಶಿಸುತ್ತ ಇದ್ದಲ್ಲಿ, ಅವರು ನಿಮ್ಮ ಭಾವನೆಗಳನ್ನು ಹೇಗೆ ಗೌರವಿಸುತ್ತಾರೆ. ದ್ವೇಶದಿಂದ ದ್ವೇಶವೆ ಹುಟ್ಟುತ್ತದೆ, ನಿಂದನೆಯಿಂದ ನಿಂದನೆಯಿ ಹುಟ್ಟುತ್ತದೆ, ಮತ್ತೆ ಕಡೆಯದಾಗಿ ಪ್ರೀತಿಯಿಂದ ಪ್ರೀತಿಯೆ ಹುಟ್ಟುತ್ತದೆ.”

ಸತ್ಯವಾದ ಮಾತುಗಳು. ಹಳೆಕಾಲದ ರಾಜರ ಪ್ರಮಾದಗಳನ್ನು ಇತಿಹಾಸ ಎಂದು ವಿಷ ಸೇರಿಸಿ ವಿಕೃತ ಇದೇ ಇತಿಹಾಸ ಎಂದು ಸುಖ ಕಾಣುವ ‘ಇತಿಹಾಸ್ಯ’ ಕಾರರು, ಆ ಇತಿಹಾಸ್ಯ ಓದಿ ಇಂದಿನ ಪೀಳಿಗೆಯವರನ್ನು ಗೋಳು ಹೊಯ್ದು ಕೊಳ್ಳುವ ತರಲೆಗಳು, ಪತ್ರಿಕಾ ಧರ್ಮದ ಗಂಧ ಗಾಳಿಯಿಲ್ಲದೆ ಧ್ವೇಷ ತುಂಬಿದ ಲೇಖನಗಳನ್ನು ರಚಿಸುವ ‘ಪೋಸ್ಟರ್ ಬಾಯ್’ ಗಳು ತಮ್ಮ ಮನಸ್ಸು ಮತಿಯ ಮೇಲೆ ಅಚ್ಚೊತ್ತ ಬೇಕಾದ ಮಾತುಗಳು ಮೇಲಿನವು.

…….ಇದ್ದಿದ್ದ ‘ರೆ’? ಈ ತಲೆಬರಹದ ‘ರೆ’ ಬರೀ ಆಶಯವಾಗಿರದೆ ‘ಖರೆ’ಯಾದರೆ ನಮ್ಮ ದೇಶ ಇನ್ನೂ ಚೆಂದ.

ಆಸ್ಪತ್ರೆಯ ಹೆರಿಗೆ ಕೊಠಡಿಯಲ್ಲಿ ನಾಯಿ

dog
ಗರ್ಭಿಣಿ ಮಹಿಳೆಯೊಬ್ಬಾಕೆ ಪ್ರಸವಕ್ಕೆಂದು ಹೆರಿಗೆ ಕೊಠಡಿ ಗೆ ಹೋಗುವಾಗ ತನ್ನ ಸಾಕು ನಾಯಿ ‘ಲ್ಯಾಬ್ರ ಡರ್’ ಜೊತೆಗೊಯ್ಯಲು ಆಸ್ಪತ್ರೆಗೆ ಮನವಿ ಸಲ್ಲಿಸಿದಾಗ ಆಸ್ಪತ್ರೆ ಒಪ್ಪಿತು. ಎರಡು ಘಂಟೆಗಳ ಕಾಲದ ಹೆರಿಗೆ ನೋವಿನ ಸಮಯ ನಾಯಿಯ ಉಪಸ್ಥಿತಿ ಆಕೆಗೆ ಮಾನಸಿಕವಾಗಿ ಸಹಾಯ ಮಾಡಬಲ್ಲುದು ಎಂದು ಆಸ್ಪತ್ರೆಯ ಅಭಿಪ್ರಾಯ.

ಗರ್ಭಿಣಿ ಮಹಿಳೆಯ ಜೊತೆ ಆಕೆಯ ಪತಿ ಅಥವಾ ಸಂಗಾತಿಯನ್ನು ಹೆರಿಗೆ ಸಮಯ ಲೇಬರ್ ರೂಮಿನಲ್ಲಿ ಬಿಡುವುದಿದೆ, ಆಕೆಯಲ್ಲಿ ಸ್ಥೈರ್ಯ ತುಂಬಲು ಮತ್ತು ಆಕೆ ಪಡುವ ಕಷ್ಟ ಮತ್ತು ನೋವಿನ ಅರಿವು ಗಂಡಿಗಾಗಲು. ಆದರೆ ನಾಯಿಯನ್ನು ಈ ಕೆಲಸಕ್ಕೆ ಒಳಗೆ ಬಿಟ್ಟಿದ್ದು ಮಾತ್ರ ಆಸ್ಪತ್ರೆಯ ನೌಕರರು ಹುಬ್ಬೇರಿಸುವಂತೆ ಮಾಡಿತು.

ಇದು ನಡೆದಿದ್ದು ಇಂಗ್ಲೆಂಡ್ನಲ್ಲಿ.