ಬಾಲ್ಯದ ಕಿನಾರೆಯಿಂದ…

೬ ನೆ ಕ್ಲಾಸಿನಲ್ಲಿದ್ದಾಗ ನಡೆದದ್ದು. ಶಾಲೆಯಲ್ಲಿನ ಮೇಷ್ಟ್ರುಗಳಿಗೆ ಅಡ್ಡ ಹೆಸರಿಟ್ಟು ಖುಷಿ ಪಡುವುದು ನಮ್ಮ ಕೆಲಸ. ಒಂದು ದಿನ ಕನ್ನಡದ ಮೇಷ್ಟ್ರು ೧೦೦ ವಸ್ತುಗಳ ಹೆಸರನ್ನು ಬರೆಯಲು ಹೇಳಿದರು. ಬಾಯಿಗೆ ಬಂದದ್ದೆಲ್ಲಾ ಬರೆದಾಯಿತು. ನನ್ನ ಮಿತ್ರ ಕುಮಾರ ಕೇಳಿದ, ಲೇ, ಮೇಷ್ಟ್ರ ಹೆಸರು ” ಬ್ಯಾಟರಿ” ಎಂದು ಬರೆದರೆ ಹೇಗೆ? ಇದು ಕೇಳಿ ನಮಗೆ ಪುಳಕವಾಗಿ ಹೌದು ಕಣೋ ಅದನ್ನೂ ಸೇರಿಸು ಎಂದು ಪುಸಲಾಯಿಸಿ ಬರೆಸಿದೆವು. ಅವನ ಹೆಸರು ಬಂದಾಕ್ಷಣ ಎದ್ದು ಹೋದ ಕುಮಾರ ಕೆಲವು ಹೆಸರುಗಳನ್ನು ಓದಿ ನಂತರ ಬ್ಯಾಟರಿ ಎಂದ. ಬ್ಯಾಟರಿ ಎನ್ನುವಾಗ ಪಾಪ ಅವನಿಗೆ ನಗು ತಡೆಯಲಾಗಲಿಲ್ಲ. ಇದನ್ನು ಕೇಳಿದ ಮೇಷ್ಟ್ರಿಗೆ ಎಲ್ಲಿಲ್ಲದ ಕೋಪ ಬಂದು ರೂಲ್ ದೊಣ್ಣೆಯಿಂದ ಸರಿಯಾಗಿ ಕುಂಡೆ, ಬೆನ್ನಿನ ಮೇಲೆಲ್ಲಾ ಬ್ಯಾಟರಿ ಚಿತ್ರ ಮೂಡಿಸಿದ್ದು ನೋಡಿ ನಮಗೆ ನಗುವೋ ನಗು. ಉತ್ತೇಜಿಸಿ ನಾವೇ ಬ್ಯಾಟರಿ ಬರೆಸಿದ್ದು ಸಾಲದೇ ಅದರ ಮೇಲೆ ಅವನ ಬಾಸುಂಡೆಗಳನ್ನು ನೋಡಿ ಕುಪ್ಪಳಿಸಿ ನಕ್ಕಿದ್ದು ನೆನೆದು ಈಗ ( ೩೧ ವರ್ಷಗಳ ನಂತರ ) ಪಾಪ ಅನ್ನಿಸುತ್ತಿದೆ.

ಬಾಲ್ಯವನ್ನರಸಿ…

೬ ವರ್ಷದ ನಾನು ಸೈಂಟ್ ಚಾರ್ಲ್ಸ್ ಆಂಗ್ಲ ಶಾಲೆಗೆ ಹೋಗುತ್ತಿದ್ದೆ. ಶಾಲೆ ದೂರವಾದ ಕಾರಣ ಜಟಕಾದಲ್ಲಿ ಪ್ರಯಾಣ. ಈಗಿನ ಮಕ್ಕಳ ಹಾಗೆ ರಿಕ್ಷಾದಲ್ಲೋ, ಬಸ್ಸು, ವ್ಯಾನ್ನಲ್ಲೋ ಹೋಗುತ್ತಿರಲಿಲ್ಲ. ಕುಣಿಯುವ ಕುದುರೆ ಬಾಲ, ಜಟಕಾ ಡ್ರೈವರ್ನ ಚಾಟಿಯ ಹೊಡೆತ ನೋಡುತ್ತಾ ದೊಡ್ಡವನಾದಾಗ ನಾನೂ ಜಟಕಾ ಡ್ರೈವರ್ ಆಗಬೇಕು ಎಂದು ಕನಸು ಕಾಣುತ್ತಿದ್ದೆ. ಸ್ಟೀಲ್ ಬಾಕ್ಸ್ ನಲ್ಲಿ ಲಂಚ್ ತೆಗೆದುಕೊಂಡು ಹೋಗುತ್ತಿದ್ದ ನಾನು ಆಗಾಗ ಬಾಕ್ಸ್ಅನ್ನು ಶಾಲೆಯಲ್ಲೇ ಬಿಟ್ಟು ಬರುವುದು ನನ್ನ ವಾಡಿಕೆ. ಕೋಪಗೊಂಡ ನನ್ನಮ್ಮ ಕಳಪೆ ದರ್ಜೆಯ ಅಲುಮಿನಿಯಮ್ ಬಾಕ್ಸ್ ನಲ್ಲಿ ತಿಂಡಿ ಕೊಟ್ಟಾಗ ನಾನು ಅದನ್ನು ಕೊಂಡು ಹೋಗಲು ಒಪ್ಪದೇ ಹಠ ತೊಟ್ಟೆ. ಒಪ್ಪದ ಅಮ್ಮ ಜಟಕಾ ಡ್ರೈವರ್ “ನೂರ್” ಹತ್ತಿರ ಬಾಕ್ಸ್ ಕೊಟ್ಟು ಶಾಲೆಯಲ್ಲಿ ಅವನಿಗೆ ಕೊಡು ಎಂದು ಕೊಟ್ಟರು.  aluminium box ಲಂಚ್ ತೆಗೆದುಕೊಂಡು ಹೋಗೋದು ಅವಮಾನ ಎಂದು ನನ್ನ ಭಾವನೆ. ಕೆಲ ದಿನಗಳ ನಂತರ ನನ್ನ ಮರೆಗುಳಿ ಸ್ವಭಾವ ಹೋದ ನಂತರ ತಿರುಗಿ ಬಂತು ಸ್ಟೀಲ್ ಬಾಕ್ಸ್. ಶಾಲೆಯಲ್ಲಿ ನನ್ನ ಮಿತ್ರ ರಫೀಕ್ ನಿಗೆ ನಾನು ತರುವ ದೋಸೆ ಮೇಲೆ ಕಣ್ಣು. ದೋಸೆ ಕೊಡದಿದ್ದರೆ ಶೈತಾನ್” (ಭೂತ) ಅನ್ನು ಕರೆಯುತ್ತೇನೆ ಎಂದು ಬೆದರಿಸಿ ನನ್ನ ದೋಸೆ ತಿಂದು ತನ್ನ ಒಣಗಿದ ರೊಟ್ಟಿ ನನಗೆ ಕೊಡುತ್ತಿದ್ದ.

I’d give all wealth that years have piled,

The slow result of Life’s decay,

To be once more a little child

For one bright summer day.

~Lewis Carroll, “Solitude”childhood2

 

ಬಾಲ್ಯ, ನೀನೆಲ್ಲಿ?

childhood 

ಬಾಲ್ಯದ ಬಗ್ಗೆ ಯೋಚಿಸಿದಾಗ ಗತಕಾಲದ ವೈಭವ ನೆನಪಾಗಿ ಆ ದಿನಗಳನ್ನು ಕಾಣಲು ಮನಸ್ಸು ತುಡಿಯುತ್ತದೆ. ಆದರೆ time and tide wait for no man ಅಂದಹಾಗೆ ಕಳೆದುಹೋದ ದಿನಗಳೆಂದೂ ಬರುವುದಿಲ್ಲ. ಈ ಕಾರಣಕ್ಕಾಗಿಯೇ ಏನೋ ನೆನಪು ಎಂಬ ಸೌಲಭ್ಯವನ್ನು ದೈವ ಒದಗಿಸಿದ್ದು; ದನಗಳ ಥರ ಮೆಲುಕು ಹಾಕು ಆಗಿ ಹೋದ ಘಟನೆಗಳನ್ನ, ಮಾಯವಾದ ಘಳಿಗೆಗಳನ್ನ ಎಂದು. ನನಗೆ ನೆನಪಿರುವಂತೆ ಸುಮಾರು ನಾನು ೫ ವರ್ಷದವನಾಗಿದ್ದಾಗಿನ ಘಟನೆಗಳು ಅಸ್ಪಷ್ಟವಾಗಿ ಇನ್ನೂ ನೆನಪಿನಲ್ಲುಳಿದಿದೆ. ಯಾವುದಕ್ಕೋ ಹಠ ಮಾಡಿ ಅಳುತ್ತಿದ್ದ ನನ್ನನ್ನು ನನ್ನ ಚಿಕ್ಕಮ್ಮ ಮಹಡಿಯಮೆಲಿನ ಬೆಡ್ರೂಮಿನ ಕಿಟಕಿಯಿಂದ ಕಾಣುವ ನದಿಯನ್ನು ತೋರಿಸುತ್ತಾ ಸುಮ್ಮನಿರು ಅಳಬೇಡ ಈಗ ಆನೆಗಳು ನೀರು ಕುಡಿಯಲು ಬರುತ್ತವೆ ಎಂದು. ಆನೆ ಎಂದ ಕೂಡಲೇ ಅಳು ನಿಲ್ಲಿಸಿದ ನಾನು ತದೇಕ ಚಿತ್ತದಿಂದ ಹೊಳೆಯ ಕಡೆಗೆ ನೋಡುತ್ತಾ ನಿಂತೆ. ಎಷ್ಟೇ ಹೊತ್ತಾದರೂ ಆನೆಗಳೂ ಬರಲಿಲ್ಲ ಆಮೆಗಳೂ ಬರಲಿಲ್ಲ. ನನ್ನ ಅಳು ನಿಲ್ಲಿಸಲು ಚಿಕ್ಕಮ್ಮ ಹೂಡಿದ ತಂತ್ರ ಇದು.  

ಕೆಂಪು ಸಮುದ್ರದ ವಧು

21052008591ಸೌದಿ ಅರೇಬಿಯಾದ ವಾಣಿಜ್ಯ ಕೇಂದ್ರ ಜೆಡ್ಡಾ. ಕೆಂಪು ಸಮುದ್ರದ ತೀರದ ಮೇಲೆ ಕಂಗೊಳಿಸುವ ಈ ಮಹಾ ನಗರಕ್ಕೆ ” ಕೆಂಪು ಸಮುದ್ರದ ವಧು ” ಎಂದೂ ಕರೆಯುತ್ತಾರೆ. ಇಲ್ಲಿನ ನಿವಾಸಿಗಳ ಫೇವರೆಟ್ ಪಾಸ್ ಟೈಮ್ ಅಂದ್ರೆ ಸಮುದ್ರದ ತೀರದಮೇಲೆ ಬಾರ್ಬೀಕ್ಯು ಮಾಡಿ ತಿಂದು ಉರುಳಾಡುವುದು. ಹತ್ತು ಹಲವು ಝಗಝಗಿಸುವ ಮಾಲುಗಳಿದ್ದರೂ ಜನ ಸೋಲುವುದು ಕೆಂಪು ಸಮುದ್ರಕ್ಕೇ.

ಸಾಧಾರಣ ಸಮುದ್ರದ ಹಾಗೆ ಅಲೆಗಳ ಆರ್ಭಟ ಈ ಸಮುದ್ರಕ್ಕಿಲ್ಲ ಹಾಗೂ ಒಮ್ಮೆಗೇ ನೋಡಿದಾಗ ತೋರುವುದು ದೊಡ್ಡ ನದಿಯ ಹಾಗೆ. ಸಂಜೆ ಐದಕ್ಕೆ ಬೆಳ್ಳಿ ಬಣ್ಣದ ಸೂರ್ಯ ಬರು ಬರುತ್ತಾ ಕಿತ್ತಳೆ ಹಣ್ಣಾಗಿ ಸಮುದ್ರಕ್ಕೆ ಜಾರುವ ದೃಶ್ಯ ಸುಂದರ. 

ಮಾದಕ ದ್ರವ್ಯ ಸೇವನೆ OK ಎಂದ ನ್ಯಾಯಾಲಯ

ಇಟಲಿಯ ಪೊಲೀಸರು ಶೋಧನೆಯ ವೇಳೆ ಕುರಿಕಾಯುವವನ ಕಾರಿನಲ್ಲಿದ್ದ ಮಾದಕ ದ್ರವ್ಯ (marijuana) ವಶಪಡಿಸಿ ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದರು. ದೂರನ್ನು ಆಲಿಸಿದ ನ್ಯಾಯಮೂರ್ತಿ ಕುರಿಕಾಯುವವ ತನ್ನ ಮಂದೆಯೊಂದಿಗೆ ಒಂಟಿಯಾಗಿ ಗುಡ್ಡಗಾಡಿನಲ್ಲಿ ಅಲೆಯುವುದರಿಂದ ಮಾದಕ ದ್ರವ್ಯ ಆತನಿಗೆ ಸಂಗಾತಿ ಮತ್ತು ಇದು ಅಪರಾಧವಲ್ಲ” ಎಂದು ತೀರ್ಪಿತ್ತು ಪೋಲೀಸರನ್ನು ದಂಗುಪಡಿಸಿದರು. ಇನ್ನು ಮಾದಕ ದ್ರವ್ಯ ಸೇವಿಸಲು ಮನಸ್ಸಾದರೆ ತಾತ್ಕಾಲಿಕವಾಗಿ ಕುರುಬನಾದರೆ ಸಾಕು.    

twitter

picture-for-twitter-article 

twitter ಅಂದ್ರೆ ಚಿಲಿಪಿಲಿ ಆಲ್ವಾ? social networking ಸುದ್ದಿ ಮಾಡುತ್ತಿರುವ twitter ಒಂದು ಆಕರ್ಷಕ application. ಒಮ್ಮೆಗೆ ೧೪೦ ಅಕ್ಷರಗಳಲ್ಲಿ ಮಾತ್ರ ಬರೆಯಬಹುದಾದ ಈ ವ್ಯವಸ್ಥೆಯನ್ನು ಪರಿವಾರದವರೊಂದಿಗೆ ಮತ್ತು ಸಹೋದ್ಯೋಗಿಗಳೊಂದಿಗೆ ಚಿಕ್ಕ ಹರಟೆ ಹೊಡಯಲು ಉಪಯೋಗಿಸಬಹುದು. facebook ಮತ್ತು twitter ಇಂದಿನ ಯುವಪೀಳಿಗೆ ಮಾರು ಹೋದ ಅಂತರ್ಜಾಲ ತಾಣದ ಹೊಸ ಅನ್ವೇಷಣೆ. ಲೇಖನದೊಂದಿಗಿರುವ ಈ ಪುಟ್ಟ ಗುಬ್ಬಿ “ಬಡಪಾಯಿ ನನ್ನನ್ನೂ ವ್ಯಾಪಾರದ ವಸ್ತುವಾಗಿಸಿಬಿಟ್ಟಿರಾ” ಎಂದು ನಿಟ್ಟುಸಿರು ಬಿಡುತ್ತಿರುವಂತೆ ಕಾಣುತ್ತಿಲ್ಲವೇ

 

 

ಇರಾಕ್

ಇಂದು ಇರಾಕಿನ ಮೇಲಿನ ಅಮೆರಿಕೆಯ ಧಾಳಿ ಮತ್ತು ಆಕ್ರಮಣಕ್ಕೆ ಆರು ವರ್ಷ.  ಯಾವುದೇ ಕಾರಣವಿಲ್ಲದೆ ಸದ್ದಾಂ ಹುಸ್ಸೇನ್ ಮಾರಕ ಅಸ್ತ್ರಗಳನ್ನು ಶೇಖರಿಸಿದ್ದಾನೆ ಎಂದು ಸುಳ್ಳು ಪುರಾವೆಗಳೊಂದಿಗೆ ಅಮೇರಿಕ ಮತ್ತು ಇಂಗ್ಲೆಂಡ್ ಇರಾಕಿನ ಮೇಲೆ ಧಾಳಿ ಮಾಡಿದವು. weapons of mass destruction ಇದೆ ಎಂದು ಹೇಳಿದ ಅಮೇರಿಕ ವಿಶ್ವಸಂಸ್ಥೆಗೆ ಮತ್ತು ವಿಶ್ವಕ್ಕೆ ನೀಡಿದ ಸಬೂತು “words of mass deception”. ಸೆಪ್ಟೆಂಬರ್ ೧೧, ೨೦೦೧ರ ಅಮೆರಿಕೆಯ ನ್ಯೂಯಾರ್ಕ್ ಮತ್ತು ವಾಷಿಂಗ್ಟನ್ ಮೇಲಿನ ಧಾಳಿಯ ನಂತರ ಬೆಚ್ಚಿಬಿದ್ದು ಬುಧ್ಧಿಯ ಸ್ತಿಮಿತತೆ ಕಳೆದುಕೊಂಡ ಅಮೇರಿಕ ಬಿನ್ ಲಾಡೆನ್ ಆಫ್ಘಾನಿಸ್ತಾನದ ಗುಡ್ಡಗಳಲ್ಲಿ ಅವಿತಿರಬಹುದೆಂದು ಸಾರಾಸಗಟು ಬಾಂಬುಗಳನ್ನು ಸುರಿಸಿತು. ತೋರಬೋರ ಪರ್ವತ ಶ್ರೇಣಿಯ ಗುಹೆಗಳಲ್ಲಿ ಅಡಗಿರುವ ಲಾಡೆನ್ ನನ್ನು ಹೊಗೆ ಹಾಕಿ ಹೊರತೆಗೆದು ತರುತ್ತೇನೆ ಎಂದು ಅಮೆರಿಕನ್ನರನ್ನು ನಂಬಿಸಿದ ಬುಷ್ ಆ ಕಾರ್ಯದಲ್ಲಿ ಸಫಲನಾಗಲಿಲ್ಲ. ಬದಲಿಗೆ ಮದುವೆ ದಿಬ್ಬಣಗಳ ಮೇಲೆ, ಶಾಲೆಗಳ ಮೇಲೆ, ಆಸ್ಪತ್ರೆಗಳ ಮೇಲೆ ಹೀಗೆ ಸಿಕ್ಕ ಸಿಕ್ಕಲ್ಲಿ ಬಾಂಬು ಹಾಕಿ ಸಾವಿರಾರು ಜನರನ್ನು ಬಲಿತೆಗೆದುಕೊಂಡ.  ತನ್ನ ದ್ರಿಷ್ಟಿಯನ್ನು ಆಫ್ಘಾನಿಸ್ತಾನದಿಂದ ಇರಾಕಿನೆಡೆಗೆ ಹರಿಸಿದ ಬುಷ್ ತನ್ನ ತಂದೆ ಬುಷ್ ಸೀನಿಯರ್ ಗಾದ ಸೋಲಿನ ಸೇಡು ತೀರಿಸಲು ತೀರ್ಮಾನಿಸಿದ. ಬುಷ್ ಸೀನಿಯರ್ ಸೋಲು ಹೇಗಾಯಿತು?

 

ಇರಾಕಿನ ಅಧ್ಯಕ್ಷ ಸದ್ದಾಂ ಹುಸೇನ್ ತೈಲ ಸಂಪನ್ನ ಕುವೈತ್ ರಾಷ್ಟ್ರ ಇರಾಕಿನ ೧೯ ನೆ ಪ್ರಾಂತ್ಯ ಎಂದು ಘೋಷಿಸಿ  ೧೯೯೦ ಆಗಸ್ಟ್ ತಿಂಗಳಿನಲ್ಲಿ ತನ್ನ ಸೈನ್ಯವನ್ನು ಪುಟ್ಟ ರಾಷ್ಟ್ರ ಕುವೈತ್ ನೊಳಕ್ಕೆ ನುಗ್ಗಿಸಿ ರಂಪ ಎಬ್ಬಿಸಿದ. ಈ ಕ್ರಮದಿಂದ ದಿಗಿಲೆದ್ದ ಅರಬ್ ರಾಷ್ಟ್ರಗಳು ವಿಶೇಷವಾಗಿ ಸೌದಿ ಅರೇಬಿಯಾ ಅಮೆರಿಕನ್ನರ ಸಹಾಯ ಯಾಚಿಸಿದವು. ಸದ್ದಾಮನ ಆಕ್ರಮಣಕಾರಿ ಮನೋಭಾವ ಅರಿತಿದ್ದ ಅರಬರಿಗೆ ಸದ್ದಾಂ ಮುಂದುವರೆದು ಸೌದಿ ಮತ್ತು UAE ಗಳನ್ನೂ ಕಬಳಿಸಬಹುದು ಎಂದು ಭಯ ಉಂಟಾಯಿತು. ಅತ್ತ ಅಮೆರಿಕೆಗೂ ಹೇಗಾದರೂ ಮಧ್ಯ ಪ್ರಾಚ್ಯದಲ್ಲಿ ಒಂದು ಸಾಹಸಕ್ಕೆ ಕೈ ಹಾಕ್ಬೇಕು ಅನ್ನೋ ಕೈಕದಿತ ಶುರುವಾಗಿತ್ತು. ಇದಕ್ಕೆ ಸದ್ದಾಂ ಅನ್ನೋ ಐಲು ದೊರೆ ಅವಕಾಶ ಮಾಡಿ ಕೊಟ್ಟ.          

ಸಂಪತ್ತನ್ನರಸಿ….

ಆಸೆಯೇ ದುಃಖಕ್ಕೆ ಮೂಲ. ನಮ್ಮಲ್ಲಿರುವುದರಲ್ಲೇ ತೃಪ್ತಿ ಪಟ್ಟುಕೊಂಡು ಬದುಕು ಸಾಗಿಸಿದರೆ ನೆಮ್ಮದಿ, ಸಂತೋಷ. ಎಲ್ಲರೂ ತಮ್ಮದೇ ಆದ ರೀತಿಯಲ್ಲಿ ಶ್ರೀಮಂತರು ಎನ್ನುವುದನ್ನು ಮರೆಯಬಾರದು. ಶ್ರೀಮಂತಿಕೆಯನ್ನು ಹಣದ ಮಾನ ದಂಡದಿಂದಲೇ ಅಳೆಯಬೇಕಿಲ್ಲ. ಈಗಿನ ದೃಶ್ಯ ಮಾಧ್ಯಮಗಳಲ್ಲಿ ಶ್ರೀಮಂತಿಕೆಯನ್ನು ಬಿಂಬಿಸುವ ರೀತಿ ನೋಡಿದರೆ ಜನ ಮಾನ ಬಿಟ್ಟು ಸಂಪಾದನೆ ಮಾಡಿದರೆ, ಸಂಪತ್ತು ಮಾನವನ್ನು ತಂದು ಕೊಡುತ್ತದೆಅನ್ನೋ ಭಾವನೆ ಬೆಳೆಸಿಕೊಂಡಿದ್ದಾರೆ. ಈ ರೀತಿಯ ಸಂಪತ್ತಿನ ಹಿಂದೆ ಓಡುವ ಮನುಷ್ಯ ಬದುಕಿನ ಹತ್ತು ಹಲವು little pleasures ಗಳನ್ನು ಕಾಣಲು, ಅನುಭವಿಸಲು ವಿಫಲನಾಗುತ್ತಾನೆ.
One who wakes up with his whole attention directed towards the world is cut off from God, and God shall make four qualities to accompany him: endless sorrow, never ending occupation, a neediness which is never relieved, and a hope which is never achieved. – Prophet Muhammad
.

be my valentine

taj-for-valentinevalentines day ಆಗಲೀ mothers day, fathers day, sister-in-laws day, dogs day ಆಗಲೀ ಇವುಗಳನ್ನು ವಿದೇಶಿ ಸಂಸ್ಕೃತಿ ಎಂದು ಹೀಗಳೆಯುವುದು ಬೇಡ. ನಮ್ಮ ಸಂಸ್ಕೃತಿ ನಮಗೆ ಹಿರಿದು, ಅವರದು ಅವರಿಗೆ ಹಿರಿದು. ವರ್ಷದ ೩೬೫ ದಿನಗಳನ್ನೂ ಒಂದಲ್ಲ ಒಂದು ಹೆಸರನ್ನಿಟ್ಟುಕೊಂಡು ಆಚರಿಸಿ ಸಂಭ್ರಮ ಪಡುವ ಪಾಶ್ಚಾತ್ಯರು ವಾಣಿಜ್ಯ ಕಂಪೆನಿಗಳ ಹುನ್ನಾರಕ್ಕೆ ಬಿದ್ದು ಚಟ ಅಂಟಿಸಿ ಕೊಂಡಿರುವುದು ನಿಜ. ಗ್ರೀಟಿಂಗ್ ಕಾರ್ಡ್,ಮೇಣ ಮತ್ತು ಪುಷ್ಪ ಕಂಪೆನಿಗಳ ಮಾರ್ಕೆಟಿಂಗ್ ತಂತ್ರಕ್ಕೆ ತಮ್ಮನ್ನು ಮಾರಿಕೊಂಡು ಕುಣಿಯುವ ಯುವಜನತೆಗೆ ನಮ್ಮ ಸಂಸ್ಕೃತಿ ಪರಿಚಯ ಮಾಡಿ ಕೊಡಬೇಕಾದ್ದು ಮುಖ್ಯ. ಇಂಗ್ಲಿಷ್ ಕಲಿತು, ಮಮ್ಮಿ ಡ್ಯಾಡಿ ಎಂದು ಬಡಬಡಿಸುತ್ತಾ, ಆಂಗ್ಲ ಸಾಹಿತ್ಯದ ಗೀಳು ಅಂಟಿಸಿ ಕೊಂಡಿರುವ ನಮ್ಮ ಯುವಜನತೆ ಅಮೆರಿಕನ್ ಲೈಫ್ ಸ್ಟೈಲ್ ಗೆ ಮಾರು ಹೋಗಿದ್ದು ದುರಂತ. ಭಾಷೆ ಸಂಸ್ಕೃತಿಯನ್ನು ಬೆಸೆಯುವ ಸಂವಹನ. ಇಂಗ್ಲಿಷ್ ಭಾಷೆಯೇ ಬದುಕಾದಾಗ ಇಂಥ ಅನಿಷ್ಟಗಳು ಒಕ್ಕರಿಸಿಕೊಳ್ಳುವುದು ಸಹಜವೆ. ನಮ್ಮ ಮಕ್ಕಳಿಗೆ ಮೊದಲು ನಮ್ಮ ಮಾತೃ ಭಾಷೆಯನ್ನೂ, ನಮ್ಮ ಸಂಸ್ಕೃತಿಯ ಹಿರಿಮೆಯನ್ನೂ ಚಿಕ್ಕಂದಿನಿಂದಲೇ ಹೇಳಿಕೊಟ್ಟು ಬೆಳೆಸಿದರೆ ಈ ರೀತಿಯ ಚರ್ಚೆಗಳಲ್ಲಿ ಹಿರಿಯರು ಕಾಲ ವ್ಯಯಿಸುವ ಅವಸ್ಥೆ ಬರುವುದಿಲ್ಲ.
ಮಕ್ಕಳು ಎಲ್ಲಿಗೆ ಹೋಗುತ್ತಾರೆ, ಏನು ಮಾಡುತ್ತಾರೆ ಎಂದು ನಿಗಾ ಇಟ್ಟು ಇಂಥ ಕಾಲ, ಕಾಸು ಹರಣ ಮಾಡುವ ನಿರರ್ಥಕ ‘days’ ಗಳಿಗೆ ಅವರು ಮಾರುಹೋಗದಂತೆ ನೋಡಿಕೊಳ್ಳಬೇಕು. ತಂದೆ ತಾಯಂದಿರ ಒಪ್ಪಿಗೆಯಿಂದ ಯುವಜನರು ಹೋಗುವುದಾದರೆ ನಮ್ಮನೈತಿಕ ಪೋಲಿಸ್ತಮ್ಮ ಗಬ್ಬು ಮೂಗು ತೂರಿಸಿ ರಂಪ ಮಾಡುವುದು ಸಲ್ಲದು.
ಅತ್ಯುನ್ನತ ನೀತಿಗಳನ್ನು ಮೌಲ್ಯಗಳನ್ನು ನನ್ನ ಜೀವನದಲ್ಲಿ ಅಳವಡಿಸಿಕೊಂಡು ಸಾತ್ವಿಕನಾಗಿ ಸಂಭಾವಿತನಾಗಿ ಬದುಕಲು ಅನುವು ಮಾಡಿಕೊಟ್ಟಿದ್ದು ನನ್ನ ಮದರಸ ಶಿಕ್ಷಣ. (ಮದರಸ ಶಿಕ್ಷಣದ ಬಗ್ಗೆ ಹಿಂದೂ ಮತಾಂಧರ ಕಪೋಲಕಲ್ಪಿತ ವಿಚಾರಗಳು ನರಕ ಸೇರಲಿ) ನನ್ನ ಗೆಳೆಯರು ಹೆಂಡ ಹೆಣ್ಣು ಎಂದು ದಿಕ್ಕಿಲ್ಲದೆ ನಡೆದಾಗ ನನ್ನ ಕಾಲುಗಳು ನನ್ನನ್ನು ನಡೆಸಿದ್ದು ಶಿಷ್ಟಾಚಾರದ ಕಡೆಗೆ. ಇದೇ ರೀತಿಯ ಧಾರ್ಮಿಕ ಬೋಧನೆ ನೀಡುವ, ನಮ್ಮ ಸಂಸ್ಕೃತಿಯನ್ನು ಕೊಂಡಾಡುವ ಒಂದು ವ್ಯವಸ್ಥೆಯನ್ನು ಆದುನಿಕ (?) ಸಮಾಜ ಕಂಡುಕೊಳ್ಳದಿದ್ದರೆ valentines day ಮಾತ್ರ ಅಲ್ಲ, ಇನೂ ಹತ್ತು ಹಲವು ಅನಿಷ್ಟ ಚೇಷ್ಟೆಗಳು ನಮ್ಮನ್ನು ಬೆಂಬತ್ತಬಹುದು.

   

I love You, do You too?

valentine“ಬೆಂಗಳೂರಿಗರೆ ನಿಮ್ಮ ಕಚೇರಿ, ಕಾಲೇಜಿನಿಂದ ಹೊರಬನ್ನಿ, ನಿಮ್ಮ ಹಕ್ಕುಗಳಿಗೆ ಬದ್ಧರಾಗಿರಿ ಮತ್ತು ಮೂಲಭೂತವಾದಿಗಳನ್ನು ಕಿತ್ತು ಒಗೆಯಿರಿ.”

ಫೆಬ್ರವರಿ 14ರಂದು ಪ್ರೇಮಿಗಳ ದಿನ ಆಚರಿಸುವುದು ಭಾರತೀಯ ಸಂಸ್ಕೃತಿಗೆ ವಿರುದ್ಧ, ಅಂಥ ಆಚರಣೆಗೆ ಅವಕಾಶ ನೀಡುವುದಿಲ್ಲ ಎಂದು ಶ್ರೀರಾಮ ಸೇನೆ ಮುಖಂಡ ಪ್ರಮೋದ್ ಮುತಾಲಿಕ್ ಅವರು ಹಿಡಿದಿರುವಪಟ್ಟಿಗೆ ಪ್ರತಿಯಾಗಿ ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ ನಲ್ಲಿ ಪ್ರೊಫೆಸರಾಗಿರುವ ರಾಜಕೀಯ ವಿಶ್ಲೇಷಕ ರಾಜೀವ್ ಗೌಡ ಅವರು ಬೆಂಗಳೂರಿನ ವಿದ್ಯಾವಂತರಿಗೆ ಕರೆ ನೀಡಿದ್ದಾರೆ.

this sort of confrontationist approach will not serve anyone. ಸಮಾಜದ ಬಗೆಗಿನ  ರಾಜೀವ್ ಗೌಡರ ಕಳಕಳಿ ಅರ್ಥವಾಗುವಂಥದ್ದೆ. ಆದರೆ ಪರಿಸ್ಥಿತಿ aggravate ಆಗಲು ಬಿಟ್ಟರೆ ಪುಂಡರಿಗೆ  ಲಾಭ ಹೊರತು ಶಾಂತಿಪ್ರಿಯರಿಗಲ್ಲ. ಹೊಡಿ ಬಡಿ ಕಡಿ ಎನ್ನೋ ಒಂದು ಸಂಸ್ಕೃತಿ ರಾಷ್ಟ್ರೀಯತೆಯ ಸೋಗು ಹಾಕಿಕೊಂಡು ಓಡಾಡುತ್ತಾ ನಮ್ಮೆಲ್ಲರ ಸಹನೆಯನ್ನು ಮತ್ತು ಒಳ್ಳೆಯತನವನ್ನೂ ಪರೀಕ್ಷಿಸುತ್ತಿರುವ ಈ ಕ್ಲಿಷ್ಟಕರ ಸನ್ನಿವೇಶದಲ್ಲಿ ನಾವು ದುಗುಡದಿಂದ ವರ್ತಿಸುವುದು ಕ್ಷೇಮವಲ್ಲ. ನಮ್ಮ ಸಂಸ್ಕೃತಿಯ ಹಿರಿಮೆ ಬಗ್ಗೆ ನಮ್ಮ ಯುವಜನರಿಗೆ ಹೇಳೋಣ. ನಮ್ಮ ಯುವಜನತೆ ವಿವೇಚನಾಶೀಲರು, ಯಾವುದನ್ನು ಆರಿಸಬೇಕು ಯಾವುದನ್ನು ತಿರಸ್ಕರಿಬೇಕೆನ್ನುವುದನ್ನು ಅವರ ವಿವೇಚನೆಗೆ ಬಿಡೋಣ. ಸಂವಾದದಿಂದ ಮಾತ್ರ ಶಾಂತಿ ಮತ್ತು ಮುನ್ನಡೆ ಸಾಧ್ಯ. valentines ಮತ್ತು ಇತರ ಕಾಸು ಕಾಲ ಹರಣ ಮಾಡುವ ನಿರರ್ಥಕ ಆಚರಣೆಗಳಿಂದ ಯಾವುದೇ ಪ್ರಯೋಜನವಿಲ್ಲ ಎಂದು ತಿಳಿಹೇಳುವ ಅಭಿಯಾನ ಪ್ರಾರಂಭಿಸೋಣ. ವಿಚಾರಗಳನ್ನು ಯಾರ ಮೇಲೂ ಹೇರುವುದು ಬೇಡ. ಶಾಲಾ ಕಾಲೇಜು ಮಟ್ಟಗಳಲ್ಲಿ ಚರ್ಚೆಗಳು ನಡೆಯಲಿ. ಒಂದಲ್ಲ ಒಂದು ಕ್ಷುಲ್ಲಕ ಕಾರಣ ಇಟ್ಟುಕೊಂಡು ಬೀದಿಗಿಳಿಯುವ ಅಸಹ್ಯ, ಕನಿಕರ ಹುಟ್ಟಿಸುವ ಚಾಳಿಗಳನ್ನು ಚಿವುಟಿ ಹಾಕೋಣ.  ಈ ನಮ್ಮ ದೇಶವನ್ನು ವಿಶ್ವ ರಾಷ್ಟ್ರಗಳ ಸಮೂಹದಲ್ಲಿ ಧ್ರುವ ನಕ್ಷತ್ರದಂತೆ ಹೊಳೆಯುವಂತೆ ಮಾಡೋಣ.
ಕೇವಲ ೬೦ ವರ್ಷಗಳ ಹಿಂದೆ ನಮ್ಮಂತೆ ಅತಿ ಬಡ ರಾಷ್ಟ್ರವಾಗಿದ್ದ ದಕ್ಷಿಣ ಕೊರಿಯಾ ಇಂದು ಬಲಾಡ್ಯ ಶ್ರೀಮಂತ ರಾಷ್ಟ್ರಗಳ ಸಾಲಿಗೆ ಸೇರಿದ್ದು ಒಗ್ಗಟ್ಟಿನಿಂದ, ಸಂಯಮದಿಂದ ನಡೆದುಕೊಂಡಿದ್ದರಿಂದ.