shut up, shut up kiss me

shut up, shut up kiss me.. shut up shut up kiss me na
ಇದು ಈಗಿನ ಹಾಡು. ಹೊಸ ತಲೆಮಾರಿನ ಪ್ರೀತಿಸುವ ಶೈಲಿ. ಎಲ್ಲಾ ಝಟ್, ಫಟ್. ಫಾಸ್ಟ್ ಫುಡ್ ಥರ. ಓಲೈಸುವ ಅಗತ್ಯ ಇಲ್ಲ, ಉಡುಗೊರೆ ಬೇಡವೇ ಬೇಡ.

ನಲ್ಲೆ ಒಂದು ಕೇಳ್ತೀನಿ, ಇಲ್ಲ ಅನ್ನ್ದೇ ಕೊಡ್ತೀಯ, ನಿನ್ನಾ ಪ್ರೀತಿ ಮಾಡ್ತೀನಿ…..

ಈ ಸಾಲುಗಳೆಲ್ಲಾ ಬೇಡ ಈಗ. redundant. ಪ್ರೇಮಿಗಳು ಆಕರ್ಷಿಸಲು ಹಲವು ಮಾರ್ಗಗಳನ್ನು ಅನುಸರಿಸುತ್ತಿದ್ದರು. ಒಳ್ಳೆ ಮಾತುಗಳಿಂದ, ಒಳಗೆ ಎಷ್ಟೇ ಹುಳುಕಿದ್ದರೂ ಒಳ್ಳೆಯ ನಡವಳಿಕೆಯಿಂದ ಗೆಲ್ಲಲು ಶ್ರಮ ಪಡುತ್ತಿದ್ದರು. ಉಡುಗೊರೆ ಕೊಟ್ಟು ಮನದಿಂಗಿತ  ವ್ಯಕ್ತ ಪಡಿಸುತ್ತಿದ್ದರು.

ಈಗ ಅದೆಲ್ಲಾ ಮಾಯಾ. ಎಲ್ಲ spur of the moment ಭಾವನೆಗಳು.

ಲಂಕಾ ದಹನ

twenty20 ವಿಶ್ವಕಪ್ ಸರಣಿಯಲ್ಲಿ ಲಂಕೆಗೆ ಸೋಲು. ಆಡಿದ ಎಲ್ಲ ಪಂದ್ಯಗಳನ್ನೂ ಗೆದ್ದು ಬೀಗುತಿದ್ದ ಲಂಕೆಗೆ ಅಂತಿಮ ಪಂದ್ಯದಲ್ಲಿ ಪಾಕ್ ಪೆಡಂಭೂತ ನುಂಗಿ ಹಾಕಿತು. “ವಾಟರ್ ಲೂ” ಆಗಿ ಪರಿಣಮಿಸಿತು ಲಂಕೆಗೆ Lord’s ಮೈದಾನ. ತನ್ನ ದಾರಿಗೆ ಅಡ್ಡ ನಿಂತ ಒಂದೊಂದೇ ತಂಡಗಳನ್ನು ಮಣಿಸುತ್ತಾ ಬಂದ ಲಂಕಾ ಕಪ್ ತನ್ನದೇ ಎಂದು ಭಾವಿಸಿದ್ದರೆ ತಪ್ಪಿಲ್ಲ. ಆದರೆ ಎಂದಿನಂತೆ ಅನಿಶ್ಚಿತತೆಯೇ ತನ್ನ ಪ್ರಕೃತಿ ಎಂದು ಆಡುವ ಪಾಕಿಸ್ತಾನ ಸರಿಯಾದ ಆಘಾತವನ್ನೇ ಲಂಕೆಗೆ ನೀಡಿತು. ಬೂಂ ಬೂಂ ಎಂದು ವರ್ಣಿಸಲ್ಪಡುವ ಶಾಹಿದ್ ಆಫ್ರಿದಿ ತನ್ನ ನೈಸರ್ಗಿಕ ಆಟಕ್ಕೆ  ಅತ್ಯಂತ ವಿರುದ್ಧವಾಗಿ ಜಾಗರೂಕನಾಗಿ ಆಡಿ ಪಂದ್ಯ ಪಾಕ್ ಕೈ ತಪ್ಪದಂತೆ ನೋಡಿಕೊಂಡಿದ್ದು ವಿಶೇಷ.

ಎಂಟು ವಿಕೆಟುಗಳು, ಎಂಟು ಚೆಂಡುಗಳು ಬಾಕಿ ಇರುವಂತೆ ಪಾಕ್ ವಿಜಯ ಕಹಳೆ ಮೊಳಗಿತು.

ಲಂಕಾ ಆಟಗಾರರ ಮೇಲೆ ಪಾಕ್ ನೆಲದ ಮೇಲೆ ನಡೆದ ಆಕ್ರಮಣದಿಂದ ಪಾಕ್ ಕ್ರಿಕೆಟ್ ತತ್ತರಿಸಿತ್ತು. ಯಾವುದೇ ತಂಡಗಳೂ ಪಾಕಿಗೆ ಹೋಗಲು ತಯಾರಿಲ್ಲ. ಸ್ಥಳೀಯ ಕ್ರಿಕೆಟ್ ಸಹ ಹಲವು ಕಾರಣಗಳಿಗೆ ಸೊರಗಿತ್ತು. ಆಂತರಿಕ ಕ್ಷೋಭೆಗಳಿಂದ ಬಳಲುತ್ತಿದ್ದ ಪಾಕಿಗೆ ಭಯೋತ್ಪಾದಕ ರಾಷ್ಟ್ರ ಎನ್ನುವ ಪಟ್ಟ. ಇಂಥ ಹೆನ್ನೆಲೆಯ ನಡುವೆಯೂ ಪಾಕ್ ಆಟಗಾರರು ಮೋಹಕ ಪ್ರದರ್ಶನ ನೀಡಿ ವಿಶ್ವಕಪ್ ಗೆದ್ದರು. ಈ ಗೆಲುವಿನಿಂದ ಪಾಕಿಸ್ತಾನಕ್ಕೆ ವಿಶ್ವ ಸ್ಥರದಲ್ಲಿ ಒಂದಿಷ್ಟು ಮಾನ. ಪಾಕ್ ಬರೀ ಭಯೋತ್ಪಾದಕರ ಸಂತೆಯಲ್ಲ ಎಂದು ತೋರಬಹುದು ವಿಶ್ವಕ್ಕೆ.

ಸ್ವಾತ್ ಕಣಿವೆಯಲ್ಲಿ ತಾಲಿಬಾನ್ ದ್ರೋಹಿಗಳನ್ನು ಸದೆಬಡಿಯುತ್ತಿರುವ ಪಾಕ್ ಸೈನಿಕರಿಗೆ ಇನ್ನಷ್ಟು ಹುಮ್ಮಸ್ಸು ಬಂದು ಸಂಪೂರ್ಣವಾಗಿ ತಾಲಿಬಾನ್ ಎಂಬ ವಿಷ ಕಳೆಯನ್ನು ಕಿತ್ತು ಹಾಕಲು ಈ ಗೆಲುವು ಸಹಾಯಕವಾಗಬಹುದು. ಹೀಗಾದರೆ ಅದು ಪಾಕಿಗೂ ಒಳ್ಳೆಯದು ನಮಗೂ ಒಳ್ಳೆಯದು.

ಅಪ್ಪನಿಗೂ ಒಂದು “ದಿನ”

 
ಇಂದು ಅಪ್ಪನ ದಿನ. ಎಲ್ಲರಿಗೂ ಇರುವಂತೆ ಬಡ ಅಪ್ಪನಿಗೂ ಒಂದು ದಿನ.

ಇಸ್ಲಾಮಿನ ಪವಿತ್ರ ಪ್ರವಾದಿಗಳ ಹತ್ತಿರ ಒಬ್ಬರು ಬಂದು ಕೇಳುತ್ತಾರೆ, ನಾವು ಅತಿ ಹೆಚ್ಚ್ಚು ಗೌರವಿಸಬೇಕಾದ, ಪ್ರೀತಿಸಬೇಕಾದ ವ್ಯಕ್ತಿ ಯಾರು ಎಂದು. ಸುಡು ಮರಳಾರಣ್ಯದಿಂದ ವಿಶ್ವಕ್ಕೆ ಶಾಂತಿ, ಸಮನ್ವತೆಯ ಸಂದೇಶ ತಂದ ಮಹರ್ಷಿ ಹೇಳಿದ್ದು, ನಿನ್ನ ತಾಯಿ ಎಂದು. ನಂತರ ಯಾರು ಎನ್ನುವ ಅವರ ಪ್ರಶ್ನೆಗೆ ಪ್ರವಾದಿ ಹೇಳಿದ್ದು ತಾಯಿ. ಮೂರನೆಯ ಸಲವೂ ಕೇಳಿದಾಗ ತಾಯಿಯೇ ಉತ್ತರ. ಪ್ರವಾದಿಗಳೇ ನಂತರದ ಸರತಿ ಯಾರದು ಎಂದು ಆತ ಹತಾಶೆಯಿಂದ ಕೇಳಿದಾಗ ನಿನ್ನ “ತಂದೆ” ಎಂದರು ಪ್ರವಾದಿ.

ಮತ್ತೊಂದು ಕಡೆ ತಾಯಿಯ ಮಹತ್ವವನ್ನು ವಿವರಿಸುತ್ತಾ ಪ್ರವಾದಿಗಳು ” ಮಾತೆಯ ಕಾಲಿನಡಿಯಲ್ಲಿದೆ  ಮಕ್ಕಳ ಸ್ವರ್ಗ” ಎಂದು ತಾಯ್ತನವನ್ನು ಕೊಂಡಾಡಿದರು.

ಅಮ್ಮ ನೀನು ನಕ್ಕರೇ ನಮ್ಮ ಬಾಳು ಸಕ್ಕರೆ,……
ತಾಯಿ ಸತ್ತ ಮೇಲೆ ತವರಿಗೆ ಎಂದೂ ಹೋಗಬಾರದವ್ವಾ…

ಓಹ್, enough enough, where is dad, where is the father? ಅಪ್ಪನ ದಿನದಲ್ಲೂ ಎಂಥದ್ದು ತಾಯಿಯ ಗುಣಗಾನ ಎನ್ನುತ್ತೀರಾ? ನಿಲ್ಲಿ, ಅಗೋ ನೋಡಿ ಬರುತ್ತಿದ್ದಾನೆ ಅಪ್ಪ. ದಿನವಿಡೀ ಸೌದೆ ಕಡಿದು ಹೆಗಲ ಮೇಲೆ ಕೊಡಲಿಯನ್ನು ಹೊತ್ತು, ಕೈಯಲ್ಲಿ ತನ್ನ ಮಕ್ಕಳಿಗೆ ತಿಂಡಿ ಮತ್ತು ಹೆಂಡತಿಗೆ ಹೂವು ತರುತ್ತಿದ್ದಾನೆ. ರಕ್ತವನ್ನು ಬೆವರಾಗಿಸಿ dog eat dog world ನಲ್ಲಿ ಸೆಣಸಿ ತನ್ನ ಪರಿವಾರವನ್ನು ಸುಖಿಯಾಗಿಡಲು ಅವನು ಪಡುತ್ತಿರುವ ಪಾಡಿಗೆ ಚಿಕ್ಕಾಸಿನ ಬೆಲೆಯಿಲ್ಲ. ತಂದೆ ಎಂದರೆ ದುಡಿಯುವ ಒಂದು ಮೆಶಿನ್ ಅಷ್ಟೇ. ಪೂರ್ಣವಿರಾಮ. 

ಅಪ್ಪ ಎಷ್ಟು ಚಿಕ್ಕ ಚೊಕ್ಕ ಪದ? ಆದರೆ ಅದರ ಹಿಂದಿರುವ ತ್ಯಾಗ, ಕಷ್ಟ ಕಾರ್ಪಣ್ಯ? ಮಕ್ಕಳಾದರೆ ತಾಯಿಗೆ ಕ್ರೆಡಿಟ್. ಹೊತ್ತು ಹೆತ್ತು ಹೊತ್ತು ಸಾಕುತ್ತಾಳಂತೆ. ಅದರ ನಂತರದ ಎಲ್ಲ ಜಂಜಾಟಗಳಿಗೂ ತಂದೆಯೇ ಅಲ್ಲವೇ ಮುಂಚೂಣಿಯಲ್ಲಿ ನಿಂತು ನಿಭಾಯಿಸಬೇಕಾದ್ದು?

ಅಪ್ಪನ ಪಾತ್ರ ಬಹಳಷ್ಟು ಚೈತನ್ಯ, ( takes oodles of energy ), ಬಹಳಷ್ಟು ಬಾಧ್ಯತೆ (takes lots of commitment) ಗಳನ್ನೂ ಬೇಡುತ್ತದೆ. ದಿನವಿಡೀ ದುಡಿದು, ಮೇಲಿನವರಿಂದ, ಯಜಮಾನರಿಂದ ತೆಗಳಿಸಿಕೊಂಡು ಸಪ್ಪೆ ಮುಖದಿಂದ ಕೆಲಸದ ಸ್ಥಳ ಬಿಟ್ಟು ಮನೆಗೆ ಬಂದಾಗ ಆತ ಚೈತನ್ಯದ ಚಿಲುಮೆ ಆಗಬೇಕು ಮಡದಿಗೆ, ಮಕ್ಕಳಿಗೆ.
ನನ್ನ ತಂದೆ world’s best dad. ಮಕ್ಕಳು ಏನನ್ನುತ್ತಾರೋ ಅದು ಸರಿ, ಅವರಿಗೆ ಬೇಕಿದ್ದನ್ನಲ್ಲವನ್ನೂ ಕೊಡಿಸುವ ಯತ್ನ. ದಾರಿ ತಪ್ಪಂದಂತೆ ಅತ್ಯಂತ ಕಟ್ಟುನಿಟ್ಟಾಗಿ ಪ್ರೀತಿಯಿಂದ ಸಾಕಿದ ನನ್ನ ಅಪ್ಪ ಹೊರಗೆ ಎಷ್ಟೇ ಕಷ್ಟವಿದ್ದರೂ ಮಕ್ಕಳೆದುರು ತೋರಿಸುತ್ತಿರಲಿಲ್ಲ. ಒಮ್ಮೆ ಸನಾದಿ ಅಪ್ಪಣ್ಣ ಚಿತ್ರ ನೋಡಿ ಬಂದ ತಂದೆ ಅಮ್ಮನಲ್ಲಿ ಇಷ್ಟೊಂದು ಪ್ರೀತಿಯಿಂದ ಸಾಕಿದ ನಮ್ಮ ಮಗನೂ ಹೀಗೆ ಆಗಿ ಬಿಟ್ಟರೆ ಹೇಗೆ ಎಂದು ಅನುಮಾನಿಸಿದ್ದರು.

ಆದರೆ ಅಪ್ಪನಿಗೆ ದೊಡ್ಡ ನಿರಾಶೆಯನ್ನೇ ಬಡಿಸಿದೆ ನಾನು.

ಈಗ ಎರಡು ಪುಟ್ಟ ಮಕ್ಕಳ ತಂದೆಯಾಗಿರುವ ನಾನು ನನ್ನ ಶ್ರಮ ಮೀರಿ ಪ್ರಯತ್ನಿಸುತ್ತೇನೆ ಒಳ್ಳೆ, ಪ್ರೀತಿಯ, ಮಮತೆಯ ತಂದೆಯಾಗಲು. ನಾನು ಪಡುವ ಪಾಡಿಗೆ ನನಗೆ ನನ್ನ ಮಕ್ಕಳ ಟೈ ಕೊಡುಗೆಯಾಗಲಿ, ಕೈ ಗಡಿಯಾರದ ಉಡುಗೊರೆಯಾಗಲಿ ಬೇಕಿಲ್ಲ. ನನಗೆ ಬೇಕಿರುವುದು ಇಷ್ಟೇ; ಸ್ವಾಭಿಮಾನಿಗಳಾಗಿ ದೇಶಕ್ಕೂ ತಾವು ನಂಬಿದ ಸಂಸ್ಕೃತಿಗೂ ಅಂಟಿಕೊಂಡು ಇವೆರಡಕ್ಕೂ ಕೀರ್ತಿ ತರುವ, ಬೆಳಗುವ ರತ್ನಗಳಾಗಿ ಬಾಳಲಿ ನನ್ನ ಮಕ್ಕಳು ಎಂದು.

ವರುಣನ (ಅವ) ಕೃಪೆ

ಚುನಾವಣೆ ನಡೆದು ತಿಂಗಳುರುಳಿದರೂ ಆಘಾತಕಾರಿ ಸೋಲನ್ನು ಕಂಡ ರಾಜಕೀಯ ಪಕ್ಷವೊಂದರ post mortem ಇನ್ನೂ ನಡೆಯುತ್ತಲೇ ಇದೆ. ಹಿಂದುತ್ವ ಬಿಟ್ಟಿದ್ದರಿಂದ ಬಂತು ಹೊಡೆತ ಎಂದು ಒಬ್ಬ ಹೇಳಿದರೆ ವರುಣನ “ನಿಂದಾ ವರ್ಷ” ಕಾರಣ ಎಂದ ಮಗುದೊಬ್ಬ. ಅಲ್ಪಸಂಖ್ಯಾತರ ಬಗ್ಗೆ ಇಲ್ಲಸಲ್ಲದ ಮಾತುಗಳನ್ನು ಆಡಿ ನಂತರ ನಾನು ಆ ರೀತಿ ಹೇಳಿಯೇ ಇಲ್ಲ ಯಾವುದೋ ಭೂತ ಪಿಶಾಚಿ CD ಒಳಗೆ ನುಗ್ಗಿ ರಂಪ ಮಾಡುತ್ತಿದೆ ಎಂದು ತಾಯಿ ಮಗ ಬೆಂಕಿ ನಂದಿಸುವ ಕಾರ್ಯ ಮಾಡಿದರು. ಆದರೆ ಇದನ್ನು ಮಾಧ್ಯಮಗಳಾಗಲಿ, ಸಾಮಾನ್ಯ ಜನರಾಗಲಿ ನಂಬುವುದಿಲ್ಲ. ಹೌದು ನನ್ನಿಂದ ತಪ್ಪು ನಡೆದು ಹೋಯಿತು, ಉನ್ಮಾದದಲ್ಲಿ ಆಡಿದ ಮಾತುಗಳಿಗೆ ಕ್ಷಮೆಯಿರಲಿ ಎಂದು ಹೇಳಿಕೆ ಕೊಟ್ಟು ಜನರನ್ನು ಗೆಲ್ಲಬಹುದಿತ್ತು. ಆದರೆ ಅಂತ ಮಾತುಗಳನ್ನು ಆಡಲು ವ್ಯಕ್ತಿಯ ನೈತಿಕತೆ ಉನ್ನತ ಮಟ್ಟದ್ದಾಗಿರಬೇಕು.  

ಪ್ರಾಣಿ ದಯೆ ಬೋಧಿಸುವ ತಾಯಿ (ಮೇನಕ ಗಾಂಧಿ) ಮನುಷ್ಯರನ್ನು ಹೇಗೆ ನಡೆಸಿಕೊಳ್ಳಬೇಕೆಂದು ತನ್ನ ಸುಪುತ್ರನಿಗೆ ಹೇಳಿಕೊಡಲು ಸಮಯ ಸಿಗದಿದ್ದದು ಖೇದಕರ.  

ಒಂದು ಸಮುದಾಯವನ್ನು ನಿಂದಿಸಿ, ಓರ್ವ ಸಮರ್ಥ ಪ್ರಧಾನಿಯನ್ನು ಅಸಮರ್ಥ ಎಂದು ಬಣ್ಣಿಸಿ ಚುನಾವಣೆ ಗೆಲ್ಲಬಹುದು ಎಂದು ಎಣಿಸಿದ್ದ ಪಕ್ಷವೊಂದು ಭಾರತೀಯ ಮತದಾರ ವಿಶ್ವದಲ್ಲೇ ಅತ್ಯಂತ ಪ್ರಬುಧ್ಧ ಎಂದು ಮನಗಾಣಲು ಸೋತಿದ್ದು ತನ್ನ ಹಿನ್ನಡೆಗೆ ಕಾರಣ ಎಂದು ಅರಿತುಕೊಳ್ಳಬೇಕು. ಸಮಸ್ತ ಭಾರತೀಯರನ್ನು ಭರತವರ್ಷ ಎಂಬ ಹಡಗಿನಲ್ಲಿ ಕೂರಿಸಿ ಭವ್ಯ ಭವಿಷ್ಯದ ಕಡೆಗೆ ಹಡಗನ್ನು ಮುನ್ನಡೆಸುವ ಹೃದಯ ವೈಶಾಲ್ಯತೆಯನ್ನು ಮತ್ತು ಅಗತ್ಯವನ್ನು ಮನಗಾಣಬೇಕು.  

ಮತದಾರನಿಗೆ ಏನು ಬೇಕು ಎಂದು ಮನಗಂಡು ಅದಕ್ಕೆ ತಕ್ಕ ಕಾರ್ಯಕ್ರಮ ಪ್ರಸ್ತುತಪಡಿಸದೆ ತಾನು ಏನು ಹೇಳಿದರೂ ಜನ ನಂಬಿ ಗದ್ದುಗೆಗೆ ಕೂರಿಸಬಹುದು ಎಂಬ ನಂಬಿಕೆ ತನಗೆ ಮುಳುವಾಯಿತು ಎಂದು ಪಕ್ಷ ಶೀಘ್ರ ಅರಿತು ಕೊಂಡರೆ ಭಾರತದ ರಾಜಕಾರಣದಿಂದ ಸಂಪೂರ್ಣವಾಗಿ ಅಳಿಸಿ ಹೋಗುವ ಭೀತಿ ಇಲ್ಲವಾಗಬಹುದು.

ನಾವೇಕೆ ಹೀಗೆ?

ಭಾರತ twenty20 ಯಲ್ಲಿ ಸೋಲುಂಡ ನಂತರ ನಮ್ಮ ಪತ್ರಿಕೆಗಳು ಧೋನಿ ಮತ್ತು ತಂಡದವರನ್ನು ಹಿಗ್ಗಾ ಮುಗ್ಗಾ ಹೀಗಳೆದು ಬರೆದವು. ವಿದ್ಯುನ್ಮಾನ ಮಾಧ್ಯಮಗಳು ತಾವು ಯಾರಿಗೂ ದ್ವಿತೀಯರಲ್ಲ ಎಂದು ತೋರಿಸುವ ಹುಮ್ಮಸ್ಸಿನಲ್ಲಿ ಭಾರತ ತಂಡವನ್ನು ಟೀಕಿಸಿ ಅವರ ಅಳಿದುಳಿದ ಮನೋಸ್ಥೈರ್ಯವನ್ನು ಉಡುಗಿಸುವ ಕೆಲಸ ಸೊಗಸಾಗಿ ಮಾಡಿದವು. ಯಾವುದೇ ಆಟದಲ್ಲೂ ಒಬ್ಬರು ಗೆದ್ದರೆ ಮತ್ತೊಬ್ಬ ಸೋಲಲೇ ಬೇಕು. ಇದು ನಿಯಮ. ಇದನ್ನು ಅರಿಯಲಾರದ ಮಾಧ್ಯಮಗಳಿಗೆ ಬೇಕಿರುವುದು ವಿಷಯಗಳನ್ನು ಸಂಕೀರ್ಣಗೊಳಿಸಿ ತಮಗೆ ತೋಚಿದಂತೆ ಬರೆದು ಪತ್ರಿಕಾ ದ್ಧರ್ಮವನ್ನು ಮೆರೆದ ಪುಣ್ಯಭಾವದ ಸೋಗು ಹಾಕುವುದು. ವಿಶ್ವದ ಬೇರಾವುದೇ ರಾಷ್ಟ್ರಗಳಲ್ಲೂ ಕಾಣದ ಈ ವರ್ತನೆ ನಮ್ಮ ದೇಶಕ್ಕೆ ಬಂದದ್ದಾದರೂ ಹೇಗೆ? ಬಹುಶಃ ಕ್ರೀಡೆಯಲ್ಲಿ ಕ್ರಿಕೆಟ್ ಮಾತ್ರ ಇರಬೇಕು ನಮಗೆ ಒಂದಿಷ್ಟು ಸಾಧಿಸಿದ್ದೇವೆ ಎನ್ನೋ ಭಾವ ತಂದ ಆಟ. ಇದನ್ನೂ ಸೋಲುತ್ತಾ ಕೂತರೆ ಮತ್ಯಾವುದರಲ್ಲಿ ನಾವು ಶ್ರೇಷ್ಠರು? ಕ್ರಿಕೆಟ್ ಗೆ ಕೊಟ್ಟ ಮರ್ಯಾದೆ ಮಾನ್ಯತೆಯಲ್ಲಿ ಕಾಲು ಭಾಗವಾದರೂ ಇತರೆ ಕ್ರೀಡೆಗಳಿಗೆ ಕೊಟ್ಟಿದ್ದರೆ ನಮಗೆ ಹೀಗೆ ನಮ್ಮನ್ನು ನಾವೇ ಹಳಿದುಕೊಳ್ಳುವ ಗತಿ ಬರುತ್ತಿರಲಿಲ್ಲವೋ ಏನೋ?

ಹಿಶಾಮ್

DSCF0001UKG ಕಲಿಯುತ್ತಿರುವ ನನ್ನ ಮಗ ಹಿಶಾಮ್ ನನ್ನು ಮಧ್ಯಾಹ್ನ ಶಾಲೆಯಿಂದ ಮನೆಗೆ ಕರೆತಂದೆ. ಮನೆ ತಲುಪಿದ ಸ್ವಲ್ಪ ನಂತರ ಹೆಂಡತಿ ಮಗನ ಸ್ಕೂಲ್ ಬ್ಯಾಗ್ ಎಲ್ಲಿ ಎಂದು ಕೇಳಿದಳು. ಮಗ ತಂದಿದ್ದೇನೆ ಎಂದರೂ ಕಾಣಲಿಲ್ಲ. ನಾನು ಕಾರಿನಲ್ಲಿರಬಹುದೆಂದು ಹೋಗಿ ನೋಡಿದರೆ ಅಲ್ಲೂ ಇಲ್ಲ. ಮರಳಿ ಮತ್ತೊಮ್ಮೆ ವಿಚಾರಿಸಿದಾಗ ಪೆದ್ದನ ಹಾಗೆ ನಟಿಸಿದ ಹಿಶಾಮ್. ಎಂಥಾ ಮರೆಗುಳಿ ನೀನು ಎಂದು ಕೋಪದಿಂದ ಅವನ ಕಿವಿಯನ್ನು ಹಿಂಡಿ ಮತ್ತೊಮ್ಮೆ ಸುಡುಬಿಸಿಲಿನಲ್ಲಿ ಶಾಲೆಯ ಕಡೆ ಹೊರಟೆ. ಮನೆಯಿಂದ ಶಾಲೆ ೨೦ ನಿಮಿಷದ ಡ್ರೈವ್.  ಶಾಲೆಯಲ್ಲಿ ವಿಚಾರಿಸಿದಾಗ ಅಲ್ಲೂ ಇಲ್ಲ. ಸಿಕ್ಕರೆ ತೆಗೆದಿಡುತ್ತೇವೆ ಎಂದು ವಾಚ್ ಮ್ಯಾನ್ ಹೇಳಿದ. ಸರಿ ಆಫೀಸ್ ಗೆ ಮರಳಿ ಬಂದು ಮನೆಗೆ ಫೋನ್ ಮಾಡಿ ಹೇಳಿದೆ ಶಾಲೆಯಲ್ಲೂ ಇಲ್ಲ ಬ್ಯಾಗ್ ಎಂದು. ಹೆಂಡತಿ ಮತ್ತೊಂದು ಸಲ ನೋಡುತ್ತೇನೆ ಎಂದಾಗ ನಾನಂದೆ ಅದೇನು ಕಡ್ಲೆ ನಾ ಕಾಣದೇ ಇರೋಕ್ಕೆ, ಶಾಲೆಯಲ್ಲೇ ಇರಬೇಕು ಬಿಡು ಎಂದು. ೨ ನಿಮಿಷದ ನಂತರ ಮನೆಯಿಂದ ಫೋನ್. ಬ್ಯಾಗ್ ಸಿಕ್ತು ಅಂತ. ಸರಿ ನನ್ನ ಲಂಚ್  ಟೈಮ್ ಗೆ ಮನೆಗೆ ಬಂದು ಮಗನಿಗೆ ಸಾರಿ ಎಂದಾಗ ಕಿವಿ ಹಿಂಡಿಸಿ ಕೊಂಡಿದ್ದನ್ನು ಆಗಲೇ ಮರೆತಿದ್ದ ಮಗ ಕೇಳಿದ ಯಾಕಪ್ಪಾ ಸಾರಿ ಎಂದು.  ನಡೆದದ್ದೇನೆಂದರೆ ಭಾರತದಿಂದ ನನ್ನ ಸೋದರಿ ಮಕ್ಕ ಸಂದರ್ಶನಕ್ಕೆ ಸೌದಿ ಬಂದಿದ್ದಳು. ಮನೆಗೆ ಬಂದ ನನ್ನ ಮಗನ ಕೈಯಿಂದ ಬ್ಯಾಗ್ ತೆಗೆದು ಅವನ ರೂಮಿನಲ್ಲಿ ಇಟ್ಟ ನಂತರ ಸಂಪೂರ್ಣವಾಗಿ ಮರೆತಿದ್ದಳು. ಎಂಥಾ ಮರೆಗುಳಿ ಇರಬೇಕು. ಅವಳ ಕಡೆಯಿಂದ ಪಾಪ ನನ್ನ ಮಗ ತನ್ನ ಕಿವಿಯನ್ನು ನನ್ನಿಂದ ವೈಂಡ್ ಮಾಡಿಸಿಕೊಂಡ.

i dont want to grow

i dont want to grow ಎಂದ ನನ್ನ ಅಳಿಯ ಅಂದರೆ ನನ್ನ ತಂಗಿಯ ೫ ವರುಷದ ಮಗ. ಯಾಕಪ್ಪಾ ಯಾಕೆ ಬೆಳೆಯುವುದಿಲ್ಲ ಅಂತೀಯ ಎಂದು ಕೇಳಿದಾಗ ಅವ ಹೇಳಿದ. ಶಾಲೆಯಲ್ಲಿ ಅಧ್ಯಾಪಕರು ಹೇಳಿದರು, when you grow up you get to have girls ಅಂತ. ನನಗೆ ಹುಡ್ಗೀರು ಇಷ್ಟವಿಲ್ಲ ಆದ್ದರಿಂದ ನನಗೆ ಬೆಳೆಯಲು ಇಷ್ಟ ಇಲ್ಲ. ಈ ಅಧ್ಯಾಪಕರುಗಳಿಗೆ ಯಾಕೆ ಬೇಕೋ ಇಷ್ಟು ಚಿಕ್ಕ ವಯಸ್ಸಿನಲ್ಲಿ ಇದನ್ನೆಲ್ಲಾ ಹೇಳಿಕೊಡುವುದು. ಅವನು ಕಲಿಯುವುದು ಜೆಡ್ದಾದ ಬ್ರಿಟಿಷ್ ಶಾಲೆಯಲ್ಲಿ. ಹಾಗಂದ ಮಾತ್ರಕ್ಕೆ ಅವರ ಸಂಸ್ಕೃತಿಯನ್ನು ಎಳೇ ವಯಸ್ಸಿನಲ್ಲೇ ತುಂಬಬೇಕೆ?

ನಾನು ಪ್ರೌಢ ಶಾಲೆಯಲ್ಲಿದ್ದಾಗ ನಡೆದಿದ್ದು. ನಮ್ಮ ಕನ್ನಡ ಲೆಕ್ಚರರ್ ಸ್ವಲ್ಪ ತಮಾಷೆಯವರು. ಒಂದು ದಿನ ಪಾಠ ಮಾಡುತ್ತಾ ಹೇಳಿದರು. ಹೆಣ್ಣಿನ ಬಗ್ಗೆ ಪುರಾಣ ಏನು ಹೇಳುತ್ತೆ ಗೊತ್ತೇನ್ರೋ? ಹೆಣ್ಣಿನ ವರ್ಣನೆ ಹೇಗಿದೆ ಗೊತ್ತಾ, ಸ್ವಲ್ಪ ಕೇಳ್ರಿ ಎಂದು ಶುರು ಮಾಡಿದರು.
“ಕ್ಷಮಯಾ ಧರಿತ್ರೀ
ಜ್ಞಾನೇನು ಸರಸ್ವತೀ
ರೂಪೇಣು ಲಕ್ಷ್ಮೀ,
ಶಯನೇಶು ವೇಶ್ಯಾ”
ಹೀಗಿರಬೇಕಂತೆ ಹೆಣ್ಣು. 
ಆಹಾ ವೇಶ್ಯಾ ಎನ್ನುತ್ತಾ ನಮ್ಮೆಡೆ ತುಂಟ ಕಣ್ಣುಗಳಿಂದ ನೋಡಿ ನಕ್ಕರು.

Choose to save

Choose to save, it will save you in the long run ಅಂತ ಹೇಳುತ್ತಾರೆ. ಆದರೆ ವಾಸ್ತವವಾಗಿ ಎಷ್ಟು ಜನ ಈ ನುಡಿಯನ್ನು ಅರಿತು ಮಳೆಗಾಲಕ್ಕೊಂದಿಷ್ಟು ಎಂದು ಉಳಿತಾಯ ಮಾಡುತ್ತಾರೆ? ಉಳಿತಾಯ ಮತ್ತು ವ್ಯಾಯಾಮ  ಇವೆರಡೂ ಒಂದೇ ಗುಂಪಿನವು. ವ್ಯಾಯಾಮ ಮಾಡಬೇಕು ಅನ್ನೋ ಇಚ್ಛೆ ಒಂದಿದ್ದರೆ ಸಾಲದು ಟ್ರ್ಯಾಕ್ ಅಥವಾ ಜಿಮ್ ದಾರಿ ಹಿಡಿಯಲೇ ಬೇಕು. ನಾಳೆ ಮಾಡೋಣ, ಮತ್ತೊಂದು ದಿನ ಮಾಡೋಣ ಎಂದು ದಿನ ದೂಡುವಂತೆಯೇ ಉಳಿತಾಯದ ಬಗ್ಗೆಯೂ ನಮ್ಮ ನೀತಿ. ಮುಂದಿನ ಸಂಬಳದಲ್ಲಿ ಒಂದಿಷ್ಟು ತೆಗೆದಿಡೋಣ ಅಥವಾ ಇನ್ನೆಂದಾದರೂ ಉಳಿಸೋಣ ಎಂದು ಮುಂದಕ್ಕೆ ಹಾಕುತ್ತಿರುತ್ತೇವೆ. ಚಿಕ್ಕಾಸಾದರೂ ಸರಿ ನಮ್ಮದಲ್ಲ ಎಂದು ತೆಗೆದಿಟ್ಟರೆ ಅವು ಕೆಲಸಕ್ಕೆ ಬರುತ್ತವೆ. ಹಣಕಾಸು ಪಂಡಿತರ ಪ್ರಕಾರ ವರ್ಷದಲ್ಲಿ ಕನಿಷ್ಠ ೩ ತಿಂಗಳ ಸಂಬಳವಾದರೂ ಉಳಿತಾಯವಾಗಿ ಉಳಿಯಬೇಕು. ಇದು ದೊಡ್ಡ ಸಾಹಸವೇ ಸರಿ. ವಿಶೇಷವಾಗಿ ಎಂದೂ ವ್ಯಾಯಾಮ ಮಾಡಿರದವನಿಗೆ ಒಮ್ಮೆಲೇ ನೂರು ಭಸ್ಕಿ ಹೊಡಿ ಎಂದು ಹೇಳಿದಂತೆ ವರುಷದ ಮೂರು ತಿಂಗಳ ಹಣವನ್ನು ಮುಟ್ಟದಂತೆ ಕಾಪಾಡುವುದು. ಹೊಸ ವರ್ಷದ ನಿರ್ಣಯಗಳು ಗೋತ ಹೊಡೆದಂತೆ ಉಳಿತಾಯದ ಐಡಿಯಾಗಳೂ ಹೊಡೆದವು ಗೋತಾ. ಆದರೆ ಸ್ವಲ್ಪ ಗಟ್ಟಿ ಮನಸ್ಸು ಮಾಡಿ ಶುರು ಮಾಡಿದರೆ ಖಂಡಿತ ಸಾಧ್ಯ ಉಳಿತಾಯ. ಒಮ್ಮೆಲೇ ದೊಡ್ಡ ಮೊತ್ತವನ್ನು ತೆಗೆದಿಡಲು ಹೋಗಬಾರದು. start small. long journey starts with one step ಅನ್ನೋ ಹಾಗೆ ಸ್ವಲ್ಪ ಸೊಲ್ಪವೇ ಉಳಿಸಿಕೊಂಡು ಹೋದರೆ ಮುಂದೊಂದು ದಿನ ಆ ಮೊತ್ತ ಯಾವುದಾದರೂ ಉಪಯೋಗಕ್ಕೆ ಬರುತ್ತದೆ. ಇನ್ನು ಕೆಲವರು ಸಣ್ಣ ಪ್ರಮಾಣದ ಭೂಮಿ ಅಥವಾ ಸೈಟ್ ಖರೀದಿ ಮಾಡಿ ಇಡುತ್ತಾರೆ. ಸಂಬಳ ಸಿಕ್ಕಾಗ ಒಂದು ಕವರಿನಲ್ಲಿ ನಮ್ಮದಲ್ಲ ಎಂದು ತೆಗೆದಿಟ್ಟರೂ ಒಳ್ಳೆಯದೇ. ಶಾಪಿಂಗ್ ವೇಳೆಯಲ್ಲೂ ನಮಗೆ ಬೇಡದ ವಸ್ತುಗಳನ್ನು ಖರೀದಿ ಮಾಡಬಾರದು ಅಥವಾ ಆ ವಸ್ತು ಬೇಕೇ ಬೇಕು ಎಂದಾಗ ಅದರಲ್ಲೇ ವಿವಿಧ ಬ್ರಾಂಡ್ ಗಳಿಗೆ ಬೇರೆ ಬೇರೆ ದರಗಳಿರುತ್ತವೆ, ಅದನ್ನು ನೋಡಿ ಬ್ರಾಂಡ್ ಮೋಹಕ್ಕೆ ಬೀಳದೆ ಕೊಂಡು ಅಲ್ಲಿಯೂ ಉಳಿಸುವುದನ್ನು ಮಾಡಬಹುದು.

ಬಯ್ ಒನ್, ಗೆಟ್ ಒನ್ ಫ್ರೀ

ಇದು ಕೊಳ್ಳುವ ವಸ್ತುಗಳಿಗೆ ಸೀಮಿತವೋ, ಮದುವೆಗೂ ಅನ್ವಯಿಸಬಹುದೇ ಇದು? ಒಂದನ್ನು ಮದುವೆಯಾದರೆ ಮತ್ತೊಂದು ಫ್ರೀ? ಡಿವೋರ್ಸ್ ಆದ ಒಂದು ಮಗುವಿರುವ ತಾಯಿಯನ್ನು ಮದುವೆಯಾದರೆ ಹೇಳುವುದಿದೆ. ಆಕೆಯನ್ನು ಮದುವೆಯಾದರೆ ಮಗು ಫ್ರೀ. ಇದೂ ಒಂಥರಾ ಬಯ್ ಒನ್ ಗೆಟ್ ಒನ್ ಫ್ರೀ ಕಾನ್ಸೆಪ್ಟು. . ಮಾರ್ಕೆಟಿಂಗ್ ಕಂಪೆನಿಗಳು ತಮ್ಮ ಮಾರಾಟವಾಗದೇ ಉಳಿದ ಮಾಲುಗಳನ್ನು ಈ ರೀತಿ ವ್ಯಾಪಾರ ಮಾಡಿ ಮುಗಿಸುತ್ತಾರೆ. ಹಲ್ಲುಜ್ಜುವ ಪೇಸ್ಟ್ ಕಂಪನಿ ಒಂದಿಷ್ಟು ವಿವಿಧ ರುಚಿಯುಳ್ಳ ಪೇಸ್ಟ್ ಗಳನ್ನು ಮಾರುಕಟ್ಟೆಗೆ ತರುತ್ತದೆ. ಅವುಗಳಲ್ಲಿ ಒಂದೆರಡು ರುಚಿಯ ಪೇಸ್ಟ್ ಗಳು ಗೋತಾ ಹೊಡೆದಾಗ ಬರುತ್ತವೆ ಬಯ್ ಒನ್ ಗೆಟ್ ಒನ್ ಫ್ರೀ.  

 

ತಮಾಷೆ ಬಿಟ್ಹಾಕಿ ನಿಜ ಜೀವನಕ್ಕೆ ಬರೋಣ. ನನಗೆ ಪರಿಚಯದ ಒಬ್ಬರೊಂದಿಗೆ ನಡೆದ ಘಟನೆ. ಅಪ್ಪ ಜಮೀನ್ದಾರ. ೬೦ ವಯಸ್ಸಿನ ಈ ವ್ಯಕ್ತಿ ತನ್ನ ಹೆಂಡತಿ ತೀರಿಕೊಂಡಾಗ ಮತ್ತೊಂದು ಮದುವೆ ಆಗುತ್ತಾರೆ. ಯೌವನಕ್ಕೆ ಮಾತ್ರವಲ್ಲ, ಮುಪ್ಪಿಗೂ ಬೇಕಲ್ಲ ಜೊತೆ. ಸರಿ ಮೊದಲ ಹೆಂಡತಿಯ ಮಕ್ಕಳು ಆಸ್ತಿಯಲ್ಲಿ ಸಹಜವಾಗಿಯೇ ಪಾಲು ಕೇಳುತ್ತಾರೆ. ಅದಕ್ಕೆ ಅಪ್ಪ ಕೊಟ್ಟ ಉತ್ತರ ಏನು ಗೊತ್ತಾ? ಓಕೆ, ನಾನು ರೆಡಿ ಆದರೆ ಒಂದು ಷರತ್ತು. ಒಂದೆಕರೆ ಜಮೀನು ಹಣ ಕೊಟ್ಟು ಕೊಂಡರೆ ಮತ್ತೊಂದ್ ಎಕರೆ ಜಮೀನು ಫ್ರೀ. ವಾಹ್, ಈ ಅಪ್ಪ wharton business school ನಲ್ಲಿ ಕಲಿತಿದ್ದಾ? ಕೆಲ ಸ್ಥಿತಿವಂತ ಹುಡಗರು ಹಣ ಕೊಟ್ಟು ಕೊಂಡರು ಜಮೀನನ್ನು. ಆದರೆ ಕೊನೆ ಮಗನ ಸ್ಥಿತಿ ಅಷ್ಟಕ್ಕಷ್ಟೇ. ಅವನಿಗೆ ದಕ್ಕಲಿಲ್ಲ ಪಾಲು ಅಪ್ಪನ ಆಸ್ತಿಯಲ್ಲಿ.

ಹಿಜ್ ಡ

ikeaIKEA ವಿಶ್ವ ಪ್ರಸಿದ್ಧ ಗೃಹ ಬಳಕೆಯ ವಸ್ತುಗಳ ದೈತ್ಯ ಸರಣಿ. ಎಲೆಕ್ಟ್ರಾನಿಕ್ಸ್ ಬಿಟ್ಟು ಮನೆಗೆ ಬೇಕಾದ ಪ್ರತಿ ವಸ್ತು ಲಭ್ಯ ಇಲ್ಲಿ. ಇವರ ಷೋ ರೂಂ ಅತಿ ವಿಸ್ತಾರ ಮತ್ತು ಮನೆಯನ್ನು ಯಾವ ರೀತಿ ಸಜ್ಜುಗೊಳಿಸಬೇಕೆಂದು ತೋರಿಸುವ ಮಾಡೆಲ್ ರೂಮ್ಗಳು ಆಯ್ಕೆಗೆ ಸಹಾಯ ಮಾಡುತ್ತವೆ. ಇಲ್ಲಿ ಮಾರಲ್ಪಡುವ ವಸ್ತುಗಳು box packed. ನಾವೇ ಮನೆಗೆ ಒಯ್ದು ಜೋಡಿಸಿಕೊಲ್ಲಬೇಕು. ಇದು ikea ವಿಶೇಷತೆ. ಈ ವ್ಯವಸ್ಥೆ ಮಾರುವವನಿಗೂ ಕೊಳ್ಳುವವನಿಗೂ ಹಣ  ಉಳಿತಾಯ  ಮಾಡುತ್ತದಂತೆ. ಸ್ವೀಡನ್ ಮೂಲದ ಈ ಸರಣಿ ಮುಂದುವರಿದ ರಾಷ್ಟ್ರಗಳಲ್ಲಿ ಜನಪ್ರಿಯ.

ಜೆಡ್ಡಾ ನಗರದ IKEA ಕೂಡ ಭಾರೀ ಗಾತ್ರದ್ದು. ಕೆಲವೊಮ್ಮೆ ಸಮಯ ಕಳೆಯಲು ಅಲ್ಲಿಗೆ ನಾನು ಹೋಗುವುದುಂಟು. ಸುಲಭವಾಗಿ ೨-೩ ಘಂಟೆ ಕಳೆಯಬಹುದು ಒಮ್ಮೆ ಒಳ ಹೊಕ್ಕರೆ. ಆಯಾಸವೋ, ಹಸಿವೋ ಆದರೆ ಸುಸಜ್ಜಿತ ರೆಸ್ಟುರಾಂಟ್ ಸಹ ಇದೆ. ಒಮ್ಮೆ ಸುತ್ತಾಟ ಮುಗಿಸಿ ಎಲಿವೇಟರ್ ನಿಂದ ಕೆಳಗಿಳಿಯುವಾಗ ದೊಡ್ಡದಾದ ಬೋರ್ಡ್ ಮೇಲೆ “hej da” ಎಂದು ಬರೆದದ್ದು ನೋಡಿ ನನಗೆ ಏನಪ್ಪಾ ಇದು ಹೀಗೆ ಬರೆದಿದ್ದಾರೆ ಎಂದು ನಗು ಬಂತು. ಏನಾದರೂ ತಿಳಿಯದಿದ್ದರೆ wiki ಮತ್ತು google ಎನ್ನುವ ಬೃಹಸ್ಪತಿಗಳು ಇದ್ದಾರಲ್ಲ ಸಹಾಯ ಪಡೆಯಲು. ಅದನ್ನೇ ನಾನು ನಾನು ಮಾಡಿದ್ದು ಮನೆ ತಲುಪಿ. “hej da” ಎಂದರೆ good bye. ಅದರ ಉಚ್ಚಾರ “ಹೇ ದೋರ್” ಎಂದು.

ಸ್ವಾರಸ್ಯಕರ, ಅಲ್ವಾ?