* ಅಪಹರಣ, ಅತ್ಯಾಚಾರ, ನಂತರ ವಿವಾಹ

ಪ್ರತಿಯೊಬ್ಬ ವಿವಾಹಿತ ಮಹಿಳೆಯೂ ತನ್ನ ವಿವಾಹ ದ ದಿನವನ್ನು ಒಂದು ಹನಿ ಕಣ್ಣೀರಿನೊಂದಿಗೆ ಸ್ಮರಿಸುತ್ತಾಳೆ. ಆದರೆ ಇಥಿಯೋಪಿಯ ದೇಶದಲ್ಲಿ ಓರ್ವ ಹೆಣ್ಣಿನ ಈ ಕಣ್ಣೀರು ಬೇರೆಯದೇ ಆದ ವ್ಯಥೆಯನ್ನು ಹೇಳುತ್ತದೆ. “ನುರಾಮೆ ಅಬೇದೋ” ತನ್ನ ಗುಡಿಸಿಲಿನಲ್ಲಿ ಕುಳಿತು ತಾನು ಪತ್ನಿಯಾದ ದಿನವನ್ನು ನೆನೆಸುತ್ತಾಳೆ. ಕನ್ಯಾಪಹರಣ ದ ರಾಜಧಾನಿಯಾದ ಗುಡ್ಡ ಗಾಡಿನಲ್ಲಿ ಆಕೆಯ ವಾಸ. ೪೦ ವರ್ಷಗಳ ಯಾತನೆಯನ್ನು ಆಕೆ ಹೇಳಲು ಹೊರಟರೆ ಆಕೆ ಯನ್ನು ಬಂಧಿಸಿದವರು ಅದಕ್ಕೆ ಆಸ್ಪದ ಕೊಡುವುದಿಲ್ಲ; ಒಳ್ಳೆಯ ಹೆಣ್ಣುಮಕ್ಕಳು ಈ ರೀತಿ ಮಾತನಾಡುವುದಿಲ್ಲ ಎಂದು. ಆದರೂ ಆಕೆ ತನ್ನ ವ್ಯಥೆಯ ಗಾಥೆಯನ್ನು ನಿಧಾನವಾಗಿ ಹೇಳುತ್ತಾಳೆ, ಆಗಾಗ ತನ್ನ ಒಡಲಿನಿಂದ ತನಗರಿವಿಲ್ಲದೆ ಬರುವ ನಗುವಿನೊಂದಿಗೆ. 

ತುಳಿತಕ್ಕೊಳಗಾದ ಬಡವನ ಮತ್ತೊಂದು ಅಸ್ತ್ರ ನಗು. ಒಣ ನಗು.  

ಮಲಗಿದ್ದ ನುರಾಮೆ ಎಚ್ಚರಗೊಂದಿದ್ದು ಅಬ್ಬರದ ಗಲಾಟೆ ಕೇಳಿ. ಆಕೆಯ ಕುಟುಂಬದಲ್ಲಿ ಗಂಡಸರ ಸಂಖ್ಯೆ ೧೦ ಅಥವಾ ಹೆಚ್ಚು. ಆಕೆಯ ತಂದೆಯ ಎದುರಿನಲ್ಲಿ ಅವರೆಲ್ಲಾ ಅರಚುತ್ತಿದ್ದರು. ವಿದ್ಯುಚ್ಚಕ್ತಿ ಇಲ್ಲದ ಕಗ್ಗತ್ತಲ ರಾತ್ರಿ ಆಕೆಗೆ ಎಲ್ಲವೂ ಮಸುಕು. ಆಕೆ ಕೇವಲ ೮ ವರ್ಷ ದ ಪೋರಿಯಾದರೂ ಅಲ್ಲಿ ಏನು ನಡೆಯುತ್ತಿದೆ ಎಂದು ಆಕೆ ಶಂಕಿಸಿದಳು.

ಆಕೆ ಜನ ಪಿಸುಗುಟ್ಟುವುದನ್ನು ಕೇಳಿದ್ದಳು, ಹುಡುಗಿ ಪ್ರಾಯಕ್ಕೆ ಬಂದಾಗ ಗಂಡು ಆಕೆಯನ್ನು ಬಲಾತ್ಕಾರ ಮಾಡಿ ನಂತರ ತನ್ನ ಸೇವೆಗಾಗಿ ಆಕೆಯನ್ನು ಇಟ್ಟುಕೊಳ್ಳುತ್ತಾನೆಂದು. ಜೀವನ ಪೂರ್ತಿ ಆಕೆ ಅವನ ಸೇವಕಳು. “ಅದು ಇಲ್ಲಿನ ಸಂಸ್ಕೃತಿ” ಆದರೆ ಖಂಡಿತ ಅವಳ ಸಂಸ್ಕೃತಿಯಾಗಿರಲಿಲ್ಲ. ಬೇರೆಲ್ಲಾ ಹುಡಗಿಯರ ಹಾಗೆ ಆಕೆಗೂ ಅದು ಇಷ್ಟವಿರಲಿಲ್ಲ. ಬಂದವರಿಂದ ತಪ್ಪಿಸಿಕೊಳ್ಳಲು ಅರಚುತ್ತಾ ಗುಡಿಸಿಲಿನಿಂದ ಹೊರಗೋಡಿ ಮರದ ಹಿಂದೆ ಅವಿತುಕೊಂಡಳು. ಆದರೂ ಗುಂಪಿನಲ್ಲಿದ್ದ ಒಬ್ಬ ವ್ಯಕ್ತಿ ತನ್ನನ್ನು ನೋಡಿಬಿಟ್ಟ.

ಆಕೆಯನ್ನು ಎಳೆದು ಕೊಂಡು ತನ್ನ ಮನೆಗೊಯ್ದ ಆ ವ್ಯಕ್ತಿ ಅವನ ಕುಟುಂಬದವರ ಮುಂದೆಯೇ ಆಕೆಯನ್ನು ಬಲಾತ್ಕಾರ ಮಾಡಿ ಮರು ದಿನ ಮದುವೆಗೆಂದು ಕರೆದೊಯ್ದು ದಿಗ್ಭ್ರಮೆಗೊಂಡ ಅವಳಿಂದ ಕೆಲವೊಂದು ಕಾಗದಗಳಿಗೆ ಸಹಿಯನ್ನು ಹಾಕಿಸಿ ಕೊಳ್ಳುತ್ತಾನೆ. ಸಹಿ ಮಾಡುತ್ತಾ ಆಕೆ ಅಲ್ಲಿಂದ ಹೇಗೆ ಪಾರಾಗುವುದರ ಬಗ್ಗೆ ಯೋಚಿಸುತ್ತಾಳೆ.  

ಮೂರು ದಿನಗಳ ನಂತರ ತನ್ನನ್ನು ಆತ ತನ್ನನ್ನು ಒಂಟಿಯಾಗಿ ಬಿಟ್ಟ ಕೂಡಲೇ ಬರಿಗಾಲಿನಲ್ಲಿ ಆಕೆ ಓಡುತ್ತಾಳೆ ತನ್ನ ಗುಡಿಸಿಲಿಗೆ, ತನ್ನ ಬದುಕಿಗೆ, ತನ್ನ ಬಾಲ್ಯದ ದಿನಗಳಿಗೆ. ಸಂತಸದ ಕಣ್ಣೀರಿಡುತ್ತಾ ಗುಡಿಸಿನೊಳಗೆ ಬಂದ ಆಕೆಗೆ ತಂದೆಯ ಉಪದೇಶ ಆಕೆಯನ್ನು ಧೃತಿಗೆಡಿಸುತ್ತದೆ. ಆತನೊಂದಿಗೆ ನಾನು ಲೈಂಗಿಕ ಸಂಬಂಧ ಹೊಂದಿದ ಕಾರಣ ನಾನು ಯಾರಿಗೂ ಬೇಡ, ಒಳ್ಳೆಯ ಪತ್ನಿಯಾಗಿ ಅವನೊಡನೆ ಬದುಕಬೇಕು ಎಂದು ಅಪ್ಪನ ಉಪದೇಶ. ಅಪ್ಪನ ಮಾತಿಗೆ ಅಮ್ಮ ದುಃಖಿತಳಾದರೂ ಹೂಂಗುಟ್ಟು  ತ್ತಾಳೆ. ಇವರ ಮಾತನ್ನು ನಾನು ಕೇಳಲೇ ಬೇಕು, ಬೇರೆ ದಾರಿಯೇ ಇಲ್ಲ, ದೇವರೇ ನನಗೆ ದಾರಿ ತೋರಿಸು ಎನ್ನುತ್ತಾ ಆಕೆ ಗಂಡನ ಮನೆಗೆ ಮರಳುತ್ತಾಳೆ.

ಕೆಲವರ್ಷಗಳಲ್ಲೇ ಆರು ಮಕ್ಕಳನ್ನು ಹೆತ್ತ ಆಕೆ ಹೇಳುತ್ತಾಳೆ ಹೆಣ್ಣಿನ ಬದುಕು ದುಸ್ತರ ಎಂದು.

ನುರಮೆ ಗೆ ಬೇರೆಯೇ ರೀತಿ ಬದುಕುವ ಆಸೆಯಿತ್ತು. ಚೆನ್ನಾಗಿ ಕಲಿತು ನನ್ನ ಬದುಕನ್ನು ನಾನೇ ಆರಿಸಿಕೊಳ್ಳಲು ಸಾಧ್ಯವಿತ್ತು. ಆದರೆ ಆ ಅವಕಾಶ ಈಗ ಆಕೆಗಿಲ್ಲ. ನನಗೀಗ ವಯಸ್ಸಾಯಿತು, ನಾನು ಸಂತುಷ್ಟಳಾಗೇ ಇರಬೇಕು. ನನಗೆ ಮಕ್ಕಳಿದ್ದಾರೆ ಮತ್ತು ಅವರನ್ನು ನಾನು ಪ್ರೀತಿಸುತ್ತೇನೆ ಎಂದು ಕೈಚೆಲ್ಲಿ ಹೇಳುವ ಆಕೆ ಕೂಡಲೇ ಈ ಮಾತನ್ನೂ ಸೇರಿಸುತ್ತಾಳೆ, ನನ್ನ ಗಂಡನೂ ಒಳ್ಳೆಯವನೇ, ಅವನು ನನ್ನನ್ನು ಹೊಡೆಯುವುದಿಲ್ಲ, ನಾನವನನ್ನು ಪ್ರೀತಿಸುತ್ತೇನೆ, ಆತ ಬಹಳ ಒಳ್ಳೆಯವನು.   

ನಾನು ಭೇಟಿ ಮಾಡಿದ ಮಹಿಳೆಯರೆಲ್ಲರ ಅತ್ಯಾಚಾರದ ಕಥೆಯೂ ಇದೇ ಆದರೂ ಆಶಾವಾದಿಗಳಾಗಿ “ನುರಾಮೆ” ರಂತೆಯೇ  ಮಾತನಾಡುತ್ತಾರೆ. ಎಲ್ಲರೂ ಹೇಳುವುದು ಮೊದಲ ಐದು ವರ್ಷಗಳು ಮಾತ್ರ ಕಷ್ಟ ಎಂದು. ಆದರೆ ನುರಾಮೆ ಈ ತೆರನಾದ ವ್ಯವಸ್ಥೆಗೆ ತನ್ನ ಮಗಳನ್ನು ಮಾತ್ರ ನೂಕುವುದಿಲ್ಲ ಎಂದು ದೃಢತೆಯಿಂದ ಹೇಳುತ್ತಾಳೆ. 

ಇಥಿಯೋಪಿಯ ದಲ್ಲಿ ನುರಾಮೆ ತೆರನಾದ ಘಟನೆಗಳು ದಿನವೂ ನಡೆಯುತ್ತವೆ. ಒಂದು ಅಂಕಿ ಅಂಶಗಳ ಪ್ರಕಾರ ಶೇಕಡಾ ೬೯ ವಿವಾಹಗಳು ಆರಂಭವಾಗುವುದು ಅಪಹರಣ ಮತ್ತು ಅತ್ಯಾಚಾರಗಳಿಂದ. ಕ್ರೈಸ್ತ ಮತ್ತು ಮುಸ್ಲಿಮರಿರುವ ಈ ನಾಡಿನಲ್ಲಿ ಎಲ್ಲರೂ ಇದೇ ರೀತಿಯ ವ್ಯವಸ್ಥೆಗೆ ತಮ್ಮನು ಒಡ್ಡಿ ಕೊಂಡಿದ್ದಾರೆ. ಶತಮಾನಗಳಿಂದ ಈ ವ್ಯವಸ್ಥೆ ಇದ್ದರೂ ಕಳೆದ ದಶಕದಿಂದೀಚೆಗೆ ಇದರ ವಿರುದ್ಧ ಧ್ವನಿಗಳು ಕೇಳಿಬರುತ್ತಿವೆ. 

ಹೌದು ನನ್ನ ಹಲವು ಪತ್ನಿಯರು ಇದೇ ರೀತಿ ಅಪಹರಣದ ಮೂಲಕ ಬಂದವರು ಎಂದು ಮತ್ತೊಬ್ಬ ನುಡಿಯುತ್ತಾನೆ. ಕುಂಬಾರನಾದ ಈತನಿಗೆ ಏಳು ಹೆಂಡಿರು ಮತ್ತು ಅವರೆಲ್ಲರೂ ಮಣ್ಣಿನ ಪಾತ್ರೆಗಳನ್ನು ತಯಾರಿಸುತ್ತಾರೆ. ಇವನಿಗೆ ಮಹಿಳೆಯರ ಅಪಹರಣ “ಪ್ರೇಮದ ಕುರುಹು”. ಹೆಣ್ಣಿಗೆ ಗಂಡನಾದವನು ಜೇನು ತುಪ್ಪದಂತೆ, ಜೇನು ಸಿಕ್ಕಿದ ಕೂಡಲೇ ಆಕೆ ಸಂತುಷ್ಟಳು ಎಂದು ಹೇಳುವಾಗ ಅವನಲ್ಲಿ ತುಂಟತನ  ಎದ್ದು ಕಾಣುತ್ತದೆ.  ಅವನ ಪ್ರಕಾರ ಮಹಿಳೆಯರು ಕಾರ್ಖಾನೆಗಳಿದ್ದಂತೆ. ಗಂಡನ ಆಜ್ಞೆಗಳನ್ನು ಪಾಲಿಸುತ್ತಾ ಇರುವುದೇ ಮಹಿಳೆಯರಿಗೂ ಇಷ್ಟ ಎಂದು ಅವನ ಅಭಿಪ್ರಾಯ.  

ಇಥಿಯೋಪಿಯಾ ಇನ್ನೂ ಕಗ್ಗತ್ತಲಿನಲ್ಲಿದೆ ಎಂದು ಮೇಲಿನ ಘಟನೆಗಳೇ ಸಾಕ್ಷಿ.

Abducted. Raped. Married. Can Ethiopia’s wives ever break free? ಶೀರ್ಷಿಕೆಯಡಿ ಇಂಗ್ಲೆಂಡಿನ independent ಪತ್ರಿಕೆಯಲ್ಲಿ ಇಂದು ಪ್ರಕಟವಾದ “ಜೊಹಾನ್ ಹರಿ” ಯವರ ಲೇಖನದ ಒಂದು ಭಾಗವನ್ನು ನನಗೆ ತಿಳಿದ ಮಟ್ಟಿಗೆ ಭಾಷಾಂತರಿಸಿದ್ದೇನೆ. ಹರಿ, ರೋಬರ್ಟ್ ಫಿಸ್ಕ್ ರಂತೆಯೇ ಜನಪ್ರಿಯ ಅಂಕಣಕಾರ. ಕಳೆದ ವಾರ ಪಲೆಸ್ತಿನ್ ಸಮಸ್ಯೆ ಬಗ್ಗೆ ಮನೋಜ್ಞವಾಗಿ ಹರಿ ಬರೆದಿದ್ದರು. ಮೇಲಿನ ಲೇಖನವನ್ನು ಪೂರ್ತಿಯಾಗಿ ಓದಲು ಕೆಳಗಿನ ಕೊಂಡಿ ಕ್ಲಿಕ್ಕಿಸಿ.

http://www.independent.co.uk/news/world/africa/abducted-raped-married-can-ethiopias-wives-ever-break-free-1922263.html 

 

* ಹೆಣ್ಣಿಗೆ ಅಭಯ, ಅಬಾಯಾ

ಇತ್ತೀಚೆಗೆ ರಾಜ್ಯದಲ್ಲಿ ಕೋಲಾಹಲ. ಮುಸ್ಲಿಂ ಮಹಿಳೆಯರು, ತಮ್ಮಿಷ್ಟದ ಪ್ರಕಾರ, ಹಕ್ಕುಬದ್ಧವಾಗಿ ಧರಿಸುವ, ಬುರ್ಖಾ ಎಂದು ಕರೆಯಲ್ಪಡುವ, (ಅರಬ್ ದೇಶ ಗಳಲ್ಲಿ “ಅಬಾಯಾ” ಎನ್ನುತ್ತಾರೆ)   “ಹಿಜಾಬ್” ದೊಡ್ಡ ಅನಾಹುತವನ್ನೇ ಸೃಷ್ಟಿಸಿತು.  ತನ್ನ ಕೂದಲನ್ನು ಮರೆಮಾಡಲು ಉಪಯೋಗಿಸುವ ಒಂದು ತುಂಡು ಬಟ್ಟೆ ಇಷ್ಟೊಂದು ದೊಡ್ಡ ವಿವಾದವನ್ನು ಸೃಷ್ಟಿಸುತ್ತದೆ ಎಂದು ಯಾರೂ ಅಂದು ಕೊಂಡಿರಲಿಲ್ಲ, ಮುಸ್ಲಿಂ ಮಹಿಳೆಯಂತೂ ಕನಸಿನಲ್ಲೂ ಕಂಡಿರಲಿಕ್ಕಿಲ್ಲ ದೊಂಬಿಯಿಂದ  ಉಂಟಾದ ಈ ರಕ್ತಸಿಕ್ತ  ಚಿತ್ರಣವನ್ನು. 

ಮುಸ್ಲಿಂ ಮಹಿಳೆ ತನ್ನ ಶರೀರವನ್ನು ಪ್ರದರ್ಶನಕ್ಕಿಡದೆ ಮರ್ಯಾದೆಯಿಂದ, ತನ್ನನ್ನು ಅನಾವಶ್ಯಕ ನೋಟ ಬೀರುವ ಕಣ್ಣುಗಳಿಂದ ರಕ್ಷಿಸಿಕೊಳ್ಳುವುದು ಸುಶಿಕ್ಷಿತ ಸಮಾಜಕ್ಕೆ ಮುಳುವಾಗಿ ಕಂಡಿತು. ಕಾಣದೆ ಏನಾದೀತು ಹೇಳಿ, ಬಿಕಿನಿ ಎಂದು ಕರೆಸಿಕೊಳ್ಳುವ ಒಂದು ತುಂಡು ಬಟ್ಟೆ ಉಟ್ಟು ಸಮುದ್ರ ತೀರದ ಮೇಲೆ “ನೀರೆ” ನಡೆದಾಡಿದರೆ ಆಕೆ ಅಧುನಿಕ ಮನೋಭಾವವುಳ್ಳ ಹೆಣ್ಣು ಎಂದು ಪುರಸ್ಕಾರ. ಅದು ಸಲ್ಲದು, ನನ್ನ ಶರೀರ ನನ್ನ ಮಾನ, ಪರ ಪುರುಷನ ಕಣ್ಣುಗಳ ತಣಿಸಲು ಅಲ್ಲ ಎಂದರೆ ಅದು ಕೂಡದು. ಅದು ಹೆಣ್ತನಕ್ಕೆ ಆಗುವ ಅಪಮಾನ. ಹೆಣ್ಣಿನ ಶೋಷಣೆ. ಮತಾಂಧತೆಯ ಪರಾಕಾಷ್ಠೆ. islam is a regressive religion. ಬೇಕಾದ ರೀತಿಯಲ್ಲಿ ವ್ಯಾಖ್ಯಾನ. ಕಪಿಯ ಕೈಗೆ ಸಿಕ್ಕ ಮಾಣಿಕ್ಯವಾಯಿತು ಲೇಖನಿ.  ಓರ್ವ ಹೆಣ್ಣಿಗೆ ತಾನು ಏನನ್ನು ಉಡಬೇಕೆಂದು ಹೇಳಲು ಹೊರಗಿನವರ ಅಪ್ಪಣೆ. ಪುರುಷನೊಬ್ಬ ಅಷ್ಟೊಂದು ಶುದ್ಧ ಹಸ್ತದವನಾಗಿದ್ದರೆ, ಎಲ್ಲರೂ ಸಚ್ಚಾರಿತ್ರ್ಯ ದವರೇ ಆಗಿದ್ದರೆ ಏಕೆ ಬೇಕು ಮಹಿಳೆಯರಿಗೆ ವಿಶೇಷ ರೈಲು, ಏಕೆ ಬೇಕು ಮಹಿಳೆಯರಿಗೆ ಪ್ರತ್ಯೇಕ ಸರತಿ, ಮಹಿಳೆಯರಿಗೆ ಪ್ರತ್ಯೇಕ ಹಾಸ್ಟೆಲ್ಲುಗಳು? ಕೇರಳದಲ್ಲಿ ಬಸ್ಸಿನಲ್ಲಿ ಮಹಿಳೆಯರು ಹಿಂದಿನ ಸಾಲಿನಲ್ಲಿ ಕೂರಬೇಕು, ಏಕೆ?

ಅಚ್ಚರಿಯ ಸಂಗತಿ ಏನೆಂದರೆ ಮುಸ್ಲಿಂ ಮಹಿಳೆ ಧರಿಸುವ ಹಿಜಾಬ್ ನ ಬಗ್ಗೆ ವಿಶೇಷ ಕುತೂಹಲ. ಒಂದು ರೀತಿಯ ಕಾಳಜಿ. ಆಕೆಯನ್ನು ಕತ್ತಲ ಕೂಪದಿಂದ ಹೊರತರುವ ಉತ್ಕಟೇಚ್ಚೆ. ಈ ಕಾಳಜಿ, ನೋವು ಗಲಭೆಗಳ ಸಂದರ್ಭದಲ್ಲಿ ಅತ್ಯಾಚಾರಕ್ಕೊಳಗಾದ  ಮಹಿಳೆಯರ ಬಗ್ಗೆ ಇರಲಿಲ್ಲ. ಇಂಥ ಘಟನೆಗಳ ಬಗ್ಗೆ ಯಾವುದಾದರೂ ಮಹಿಳಾ ಸಂಘಟನೆಗಳು ಸೊಲ್ಲೆತ್ತಿದ್ದು ಓದಿದ್ದೀರಾ?     

ನಾನು ಹಿಜಾಬ್ ನ ದೊಡ್ಡ ಅಭಿಮಾನಿಯೇನೂ ಅಲ್ಲ. ಆದರೆ ಅದನ್ನು ವಿರೋಧಿಸುವವರ ಪೈಕಿಯವನೂ ಅಲ್ಲ. ನನ್ನ ಪತ್ನಿ ಹಿಜಾಬ್ ಧರಿಸುತ್ತಾಳೆ. ಮದುವೆಯಾದ  ಹೊಸತರಲ್ಲಿ ನಾನು ನನ್ನ ಪತ್ನಿಗೆ ಸಾಂದರ್ಭಿಕವಾಗಿ ಹಿಜಾಬ್ ನ ಅವಶ್ಯಕತೆ ಇಲ್ಲ ಎಂದಾಗ ನನ್ನ ಮಡದಿ ಕೇಳಿದ್ದು, ಏಕೆ ಈ ಪ್ರಶ್ನೆ ನನ್ನನ್ನು ಮದುವೆ ಮುನ್ನ ನೋಡಲು ಬರುವಾಗಲೇ ಕೇಳಬಹುದಿತ್ತಲ್ಲ ಅಂತ. ಅದರ ಅರ್ಥ ಹಿಜಾಬ್ ವಿರೋಧಿಸುವ ನಿನ್ನನ್ನು ನಾನು ವರಿಸುತ್ತಿರಲಿಲ್ಲ ಎಂದು. ಇದು ಆಕೆಯ ಅಪ್ಪ ಹೇಳಿ ಕೊಟ್ಟಿದ್ದರಿಂದಲೋ, ಅಥವಾ ಆಕೆಯ ಅಮ್ಮ ಕಲಿಸಿದ್ದರಿಂದಲೋ ಸಿಕ್ಕಿದ ವಿವೇಕವಲ್ಲ. ತನ್ನ ಸುತ್ತ ಮುತ್ತ ನಡೆಯುವ ಆಗುಹೋಗುಗಳನ್ನು ನೋಡಿ ಕಲಿತ ಪಾಠ. ಅಷ್ಟು ಮಾತ್ರ ಅಲ್ಲ ತಾನು ಆರಾಧಿಸುವ ತನ್ನ ಸೃಷ್ಟಿಕರ್ತನ ಅಪ್ಪಣೆಗೆ ವಿಧೇಯಳಾಗುವ ಅಭಿಲಾಷೆ.

ಹಿಜಾಬ್ ಅಂದರೆ ಶರೀರವನ್ನು ಕಪ್ಪು ಬಟ್ಟೆಯಿಂದ ಸಂಪೂರ್ಣವಾಗಿ ಸುತ್ತಬೇಕು ಎಂದಲ್ಲ. ಮುಖ ಮತ್ತು ಮುಂಗೈಗಳು ಮಾತ್ರ ಕಾಣುವಂತೆ, ಅಂಗ ಸೌಷ್ಠವ ತೋರಿಸದ ಸಡಿಲವಾದ ಉಡುಪು. ಭಾಜಪದ ನಾಯಕಿ ಸುಷ್ಮಾ ಅವರ ಉಡುಗೆ ನೋಡಿದ್ದೀರಾ? ಹೆಚ್ಚು ಕಡಿಮೆ ಆ ರೀತಿಯದೇ. ಹಾಗೆ ಧರಿಸದೆ ಇದ್ದಾಗ ಹೆಣ್ಣು ಬಿಚ್ಚೋಲೆ ಗೌರಮ್ಮ. ಸಾಕಷ್ಟು ಅಂಗಗಳ ಪ್ರದರ್ಶನ ನಡೆದರೆ ಆಧುನಿಕ ಫ್ಯಾಶನ್ ಜೊತೆ ಹೆಜ್ಜೆ ಹಾಕುತ್ತಿರುವ ಮಹಿಳೆ. liberated woman. stylish. modern. chic.  ತನಗೆ ಬೇಕಾದ ರೀತಿಯಲ್ಲಿ, ಕನಿಷ್ಠ ಉಡುಗೆ ತೊಟ್ಟು ನಡೆಯುವ ಮಹಿಳೆಯ ಬಗ್ಗೆ ಮುಸ್ಲಿಂ ಮಹಿಳೆ ಚಕಾರ ಎತ್ತದೆ ಇದ್ದರೆ ಅದೇ ರೀತಿಯದಾದ ಪ್ರತ್ಯುಪಕಾರವನ್ನು ನಿರೀಕ್ಷಿಸಬಾರದೇ ಹಿಜಾಬ್ ಧರಿಸುವ ಹೆಣ್ಣು? ಹೆಣ್ಣನ್ನು ಇಂದು ಅಪ್ಪಟ ವ್ಯಾಪಾರದ ವಸ್ತುವಾಗಿಸಿ, ಗಂಡು ತೊಡುವ ಒಳ ಉಡುಪಿನಿಂದ ಹಿಡಿದು, ಕಾರನ್ನು ಮಾರಲೂ ಹೆಣ್ಣನ್ನು ಉಪಯೋಗಿಸುವ ನಾಗರೀಕತೆಗೆ ಹಿಜಾಬ್ ತೊಡಕಾಗಿ ಕಂಡರೆ, ಹಿನ್ನಡೆಯಾಗಿ ಕಂಡರೆ ಅಚ್ಚರಿಯಿಲ್ಲ.  ಹೆಣ್ಣನ್ನು ಅಶ್ಲೀಲವಾಗಿ ಬಿಂಬಿಸಿ ಪಾನ್ ಪರಾಗ್ ಅಥವಾ ಮತ್ಯಾವುದಾದರೂ ವಸ್ತುವಿನ ಜಾಹೀರಾತು ಇಲ್ಲದ ಚದರಡಿ ಜಾಗ ಸಿಕ್ಕೀತೆ ರಸ್ತೆಯಲ್ಲಿ? ಹೀಗೆ ಹೆಣ್ಣು ಮಕ್ಕಳನ್ನು ವ್ಯಾಪಾರದ, ಭೋಗದ ವಸ್ತುವನ್ನಾಗಿ ಉಪಯೋಗಿಸುವ ಪುರುಷರು ತಮ್ಮ ಮನೆಯ ಹೆಣ್ಣು ಮಕ್ಕಳನ್ನು ಎಷ್ಟು ಜೋಪಾನದಿಂದ ಇಟ್ಟು ಕೊಳ್ಳುತ್ತಾರೆ ನೋಡಿ. 

ಗಂಡು ಮತ್ತು ಹೆಣ್ಣಿಗೆ ಇಸ್ಲಾಂ ಕೆಲವೊಂದು ಶಿಷ್ಟಾಚಾರಗಳನ್ನು ನೀಡಿದೆ. ತಮ್ಮ ದೃಷ್ಟಿಗಳನ್ನು ಬೇಡದ ಕಡೆ ನೆಡದೆ ನೆಲದ ಮೇಲೆ ಇಟ್ಟು, ಸುಶೀಲರಂತೆ ನಡೆಯಲು ಇಸ್ಲಾಂ ಬಯಸುತ್ತದೆ ತನ್ನ ಅನುಯಾಯಿಗಳಿಂದ. ಎಷ್ಟೋ ಪುರುಷರು ಶರೀರವನ್ನು ಬಿಗಿದಪ್ಪುವ ಜೀನ್ಸ್ಗಳನ್ನೂ ಧರಿಸುವುದಿಲ್ಲ.

ಹಿಜಾಬ್ ನ ಬಗ್ಗೆ ಮುಸ್ಲಿಂ ಪಂಡಿತರಲ್ಲೂ ಹಲವು ಅಭಿಪ್ರಾಯಗಳಿವೆ.  ಶರೀರವನ್ನು ಸಂಪೂರ್ಣವಾಗಿ ಹೊದ್ದು ಕಣ್ಣನ್ನು ಮಾತ್ರ ತೋರಿಸಿ ಧರಿಸುವ ಹಿಜಾಬ್ ನ ಅವಶ್ಯಕತೆ ಇಲ್ಲ ಎಂದು ವಿಶ್ವ ಪ್ರಸಿದ್ಧ, ೧೧೦೦ ವರ್ಷಗಳ ಇತಿಹಾಸ ಇರುವ ಇಜಿಪ್ಟ್ ದೇಶದ al-azhar ವಿಶ್ವ ವಿದ್ಯಾಲಯದ ಕುಲಪತಿ ಶೇಖ್ ತಂತಾವಿ ಹೇಳಿಕೆ ನೀಡಿದರು. ಹಾಗೆ ಸಂಪೂರ್ಣವಾಗಿ ಹಿಜಾಬ್ ಧರಿಸುವುದು ಇಸ್ಲಾಮಿಗಿಂತ ಮುಂಚಿನ ರೂಢಿ, ಆ ರೀತಿಯ ಧರಿಸುವಿಕೆಗೆ ಇಸ್ಲಾಮಿನ ಅನುಮೋದನೆ ಇಲ್ಲ ಎಂದು ಹೇಳಿಕೆ ನೀಡಿದ್ದರು. ಆದರೆ ಮುಖವನ್ನು ತೆರೆದಿಟ್ಟು ಧರಿಸುವ ಹಿಜಾಬ್ ಹೆಣ್ಣಿಗೆ ಒಳ್ಳೆಯದು ಎನ್ನುವುದು ಎಲ್ಲ ಪಂಡಿತರ ಅಭಿಪ್ರಾಯ.   

ಹಿಜಾಬ್ ಬಗ್ಗೆ ಪ್ರಸಿದ್ಧ ಸಾಹಿತಿ Naomi Wolf ಹೇಳಿದ್ದು”

Choice is everything. But Westerners should recognise that when a woman in France or Britain chooses a veil, it is not necessarily a sign of her repression, and the feminist on the other side of the veil debate.

“I put on a shalwar kameez and a headscarf in Morocco for a trip to the bazaar. Yes, some of the warmth I encountered was probably from the novelty of seeing a Westerner so clothed; but, as I moved about the market – the shape of my legs obscured, my long hair not flying about me – I felt a novel sense of calm and serenity. I felt, yes, in certain ways, free,”

* ಅಭಿವ್ಯಕ್ತಿ ಸ್ವಾತಂತ್ರ್ಯ

View Imageಹಿಂದೂ ದೇವರುಗಳನ್ನು ವಿಲಕ್ಷಣವಾಗಿ ಚಿತ್ರಿಸಿ ಹುಸೇನ್ ತನ್ನ ದೇಶ ವನ್ನು ಕಳೆದುಕೊಂಡರು. ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ನಾವು ಪೂಜಿಸುವ, ಆದರಿಸುವ, ನಮ್ಮ ಬದುಕಿನಲ್ಲಿ ಆದರ್ಶ ವ್ಯಕ್ತಿಗಳನ್ನಾಗಿ ಮಾಡಿ ಕೊಂಡವರನ್ನು ವಿವಸ್ತ್ರ ಗೊಳಿಸಿ ನಮ್ಮ ನಂಬಿಕೆಗೆ, ಭಕ್ತಿಗೆ ಕುಂದುಂಟು ಮಾಡುವುದು ಅಕ್ಷಮ್ಯ ಅಪರಾಧ. ಚಿತ್ರಗಳ ಮೂಲಕ ಮಾತ್ರವಲ್ಲ, ಬರಹಗಳ ಅವತಾರಗಳಲ್ಲೂ ನಮ್ಮ ಭಾವನೆಗಳನ್ನು ಕೆರಳಿಸುವ ಇಂಥ ಚಟುವಟಿಕೆ ಗಳನ್ನು ನಾವು ಪ್ರತಿಭಟಿಸಬೇಕು. ಧರ್ಮ ಮತ್ತು ಧಾರ್ಮಿಕ ಹೆಗ್ಗುರುತುಗಳು, ಪವಾಡ ಪುರುಷರು ಸಾರ್ವಜನಿಕ ಸ್ವತ್ತಾಗಿರಬಹುದು. ನೆರಳನ್ನು ನೀಡುವ ರಸ್ತೆ ಬದಿಯ ಮರ ಸಾರ್ವಜನಿಕರಿಗಾಗಿ ಎಂದು ಅಲ್ಲೇ ಶೌಚಕ್ಕೆ ಕುಳಿತರೆ?

ಇದನ್ನು ಬರೆಯಲು ಕಾರಣ ಹುಸೇನ್ ಬಗೆಗಿನ, ಅಭಿವ್ಯಕ್ತಿ ಸ್ವಾತಂತ್ರ್ಯದ ಬಗೆಗಿನ ಚರ್ಚೆ ಬಿರುಸಿನಿಂದ ನಡೆಯುತ್ತಿದೆ. ಖಂಡನಾರ್ಹವಾದ ಹುಸೇನರ ಚಿತ್ರಗಳು ನಮ್ಮ ಸಹನೆಯನ್ನು ಪರೀಕ್ಷಿಸುತ್ತಿವೆ. ಬೆಣ್ಣೆ ಸುಣ್ಣದ ರಾಜಕೀಯ ಬಿಟ್ಟು, ದ್ವಂದ್ವಗಳ ದೊಂಬರಾಟ ಬಿಟ್ಟು ಯಾವುದೇ ಧರ್ಮದ ಬಗ್ಗೆಯೂ ಬರುವ ವಿಲಕ್ಷಣ “ಕೃತಿ” ಗಳನ್ನು ಖಂಡಿಸೋಣ. ಆದರೆ ಹೇಗೆ? ಹುಸೇನರ ಕುಂಚ ತನ್ನ ಪಾತ್ರಗಳನ್ನು ವಿವಸ್ತ್ರಗೊಳಿಸಿ ಆತ ತನ್ನ ಪ್ರೀತಿಯ ದೇಶವನ್ನು ಕಳೆದುಕೊಳ್ಳುವಂತೆ ಮಾಡಿದರೆ ಇದರ ಬಗ್ಗೆ ನಮ್ಮ ಲೇಖನಿಯನ್ನು (ಕೀಲಿಗಳನ್ನು) ಸಂಭ್ರಮದಿಂದ ಹರಿಬಿಟ್ಟು ನಾವೂ ವಿವಸ್ತ್ರರಾದೆವು. ನಮ್ಮ ಮಟ್ಟಿಗೆ ಹುಸೇನ್ ದೇಶ ಕಳೆದುಕೊಂಡರೂ ಆತನ ಮಟ್ಟಿಗೆ ದೇಶದ ಪರಿಕಲ್ಪನೆ ಅವನಿಗೆ ಇಲ್ಲವಂತೆ. ಆತನ ಅಥವಾ ಯಾವುದೇ ಕಲಾವಿದನ ರಾಜ್ಯ ಭೌಗೋಳಿಕ ಅಲ್ಲವಂತೆ. ಅವರದು ಕುಂಚದ ಸಾಮ್ರಾಜ್ಯ. ಅವರುಗಳು ಕುಂಚ ಮಾತೆಯ ಸುಪುತ್ರರು. ಅವರು ಗೀಚುವ ಗೆರೆಗಳೇ ಅವರ ಗಡಿ. ವ್ಯಾಪ್ತಿಯಿಲ್ಲದ ಸರಹದ್ದು. ಗಾಳಿ ಬಂದ ಕಡೆ ತೂರಿ ಕೊಳ್ಳುವ ಹಾಗೆ. ಕುಂಚ ತೋರಿದೆಡೆ ಪಯಣ. “ಕಾಯಾ, ವಾಚಾ, ಕುಂಚ” ಇವರ ಮಂತ್ರ.

ಹುಸೇನರ ಬಗ್ಗೆ ಟೀಕಿಸಿ ಬಂದ ವಾಕ್ಯ ರತ್ನಗಳನ್ನೂ, ವ್ಯಂಗ್ಯವನ್ನೂ ನೋಡಿದಾಗ ಸುಶಿಕ್ಷಿತ ಸಮಾಜಕ್ಕೆ ಇನ್ನಷ್ಟು ಶಿಕ್ಷಣದ ಅವಶ್ಯಕತೆ ಎದ್ದು ಕಾಣುತ್ತದೆ. ಇಲ್ಲಿ ನಮಗೆ ತೋಚಿದ ರೀತಿಯಲ್ಲಿ ಬರೆದು ನಾವು ಸಾಧಿಸಿದ್ದು ನಮ್ಮ ತಿಳುವಳಿಕೆಯ ಕೊರತೆಯ ಪ್ರದರ್ಶನ. ಈ ಮಾತನ್ನು ನಾನು ಹೇಳುತ್ತಿರುವ ಉದ್ದೇಶ ದಯಮಾಡಿ ಅರ್ಥ ಮಾಡಿಕೊಳ್ಳಿ. ನಾನು ಸೇರಿದ ಸಮಾಜ ಇಂಥ ವಿಷಯಗಳು ಬಂದಾಗ ಹದ್ದು ಮೀರಿ ಅಸಹನೆ ಮೆರೆದು, ಕಲ್ಲು ಹೊಡೆದು, ಅರಚಾಡಿ ತಮಗೆ ತೋಚಿದ ರೀತಿಯಲ್ಲಿ ಅಸಮಾಧಾನವನ್ನೂ ಕೋಪವನ್ನೂ ಪ್ರದರ್ಶಿಸಿತು. ಪರಿಣಾಮ? ದೊಡ್ಡ ನಾಮ. ಡೆನ್ಮಾರ್ಕಿನಿಂದ ಹಿಡಿದು ಶಿವಮೊಗ್ಗದವರೆಗೂ ನಮ್ಮ ಕಾಲು ಕೆಸರಿನಲ್ಲಿ ಸಿಕ್ಕಿ ಹಾಕಿಕೊಂಡಿದೆ. ಇಂಗ್ಲೆಂಡಿನಿಂದ, ಇರಾನಿನವರೆಗೂ ನಾವು ನಗೆಪಾಟಲಿಗೀಡು. ಪವಿತ್ರ ಕುರಾನ್ “ಸಹನೆ, ಸಂಯಮ” ವನ್ನು ಜೀವನ ರೀತಿಯಾಗಿಸುವಂತೆ ಪದೇ, ಪದೇ ಹಲವು ಕಡೆಗಳಲ್ಲಿ ಸಾರಿದರೂ ಕಣ್ಣಿದ್ದೂ ಕುರುಡರು, ಕಿವಿಯಿದ್ದೂ ಕಿವುಡರಂತೆ ವರ್ತಿಸುತ್ತಿರುವ ಸಮಾಜದ ಒಂದು negligible ಭಾಗ ಅಸಹನೆಯ ವಿಷವನ್ನು ಪಸರಿಸುತ್ತಾ ಸಾಗುತ್ತಿದೆ. (and verily whoso is patient and forgiveth, that verily is the steadfast heart of things 42-43) ಸಹನಾಮಯಿಗಳೂ, ಕ್ಷಮಾಶೀಲರೂ ಆದವರು ಸಮರ್ಪಕ ಕಾರ್ಯಗಳನ್ನೇ ಮಾಡುವರು. ಪವಿತ್ರ ಕುರಾನಿನ ಈ ಸೂಕ್ತಕ್ಕೂ ಧರ್ಮದ ಭಾರವನ್ನು ತಮ್ಮ ಮೆದುಳಿಲ್ಲದ, ಚಿಂತಿಸದ ತಲೆಯ ಮೇಲೆ ಹೊತ್ತು ಹೇಸಿಗೆಯ ವಾತಾವರಣವನ್ನು ಸೃಷ್ಟಿಸಿಕೊಂಡಿರುವ ಬೆರಳೆಣಿಕೆಯ ಜನರ ನಡವಳಿಕೆಗೂ ಇರುವ ವ್ಯತ್ಯಾಸ ನೋಡಿ. ಹುಸೇನರ ಕುರಿತ ಲೇಖನಕ್ಕೆ ಪ್ರತಿಕ್ರಿಯಾ ರೂಪದಲ್ಲಿ ಬಂದ ಮಹಾ ವಾಕ್ಯಗಳನ್ನು ಆಫ್ಘಾನಿಸ್ತಾನದ “ಪಷ್ತು” ಭಾಷೆಗೋ ಅಥವಾ ಕಂದಹಾರದ ಯಾವುದಾದರೂ ಭಾಷೆಗೋ ಅನುವಾದಿಸಿ ನೋಡಿ. ಕಣ್ಣಿನೆದುರು ಬಂದು ನಿಲ್ಲುವುದಿಲ್ಲವೇ ಮುಲ್ಲಾ ಉಮರನ, ಅವನಂಥವರ ಹೇಳಿಕೆಗಳು, ಹಾವ ಭಾವಗಳು? ಸರಿಯೋ ತಪ್ಪೋ? ಆವೇಶದಿಂದ ಬರೆದಾಗ ನಮ್ಮ ನಿಜ ವೇಷ ಸರ್ವವೇದ್ಯವಾಗಿ ಬಿಡುತ್ತೆ. ಹಾಗಾಗುವುದು ಬೇಡ. ನಮ್ಮ ನಂಬಿಕೆಗಳನ್ನು, ಆದರ್ಶಗಳನ್ನು ರಕ್ಷಿಸಲು ವೈಚಾರಿಕ ಮಾರ್ಗಗಳಿವೆ. ವಿಚಾರವಂತರು ಎಂದು ಬಿರುದು ಇಟ್ಟುಕೊಂಡು ನಮ್ಮ ಭಾವನೆಗಳೊಂದಿಗೆ ಚೆಲ್ಲುತನ ತೋರುವ ವಿಚಾರವಾದಿಗಳಿಗೆ ಒಳ್ಳೆಯ ಮಾತಿನಲ್ಲಿ ತಿಳಿ ಹೇಳೋಣ. ಅವರ ಸೃಷ್ಟಿ (ಅದೆಂಥದ್ದೇ ಮಹಾಕಾವ್ಯವಾಗಿರಲಿ, ಇತಿ”ಹಾಸ್ಯ”ವಾಗಿರಲಿ, ಚಿತ್ರವಾಗಿರಲಿ) ಕೀಳು ಅಭಿರುಚಿಯಿಂದ ಕೂಡಿದ್ದು ಎಂದು ಜನರಲ್ಲಿ ಅರಿವು ಮೂಡಿಸಿ ಅಂಥ ಕಲಾವಿದರಿಗೆ ಮಣೆ ಹಾಕುವುದರಿಂದ ಜನರನ್ನು ತಡೆಯೋಣ. ಆದರೆ ಎಲ್ಲವೂ ನಾಗರೀಕ ಶೈಲಿಯಲ್ಲಿ. ನಮ್ಮ ಮನೆ (charity begins at home), ಮತ್ತು ಶಿಕ್ಷಣ ಹೇಳಿಕೊಟ್ಟ ಮಾದರಿಯಲ್ಲಿ. ಕಾಲದ ಪರೀಕ್ಷೆ ಗೆದ್ದು ನಾವು ಉಳಿಸಿಕೊಂಡು ಬಂದ ಸಂಸ್ಕೃತಿಯ ರೀತಿಯಲ್ಲಿ. ಅಪನಂಬಿಕೆ, ಅಸಹನೆಯಿಂದ ರೋಸಿದ, ಬಳಲಿದ ವಿಶ್ವ ನಮ್ಮೆಡೆ ದೃಷ್ಟಿ ಬೀರುತ್ತಿದೆ…

Time tested value ಗಳಿಗಾಗಿ. let us not disappoint.

* ಕಯಾಕಿಂಗ್ ಅಂದರೆ ತೊಗಲ ದೋಣಿ ಯಾತ್ರೆ

ಇದು ಬ್ರಿಟಿಶ್ ತಂಡ ಕಯಾಕಿಂಗ್ ಮಾಡುತ್ತಿರುವ ಚಿತ್ರ. kayak ಅಂದರೆ ತೊಗಲ ದೋಣಿ ಅಥವಾ ಚಕ್ಕಳದ ದೋಣಿ ಅಂತೆ, prof. GV ಅವರ ನಿಘಂಟಿನ ಪ್ರಕಾರ. ಈ ಚಿತ್ರ ಚಿಲಿ ದೇಶದ ಪಟಗೊನಿಯ ಪ್ರದೇಶದ್ದು. ಬೆಟ್ಟ ಗುಡ್ಡಗಳು ತಮ್ಮ ಮೇಲೆ ಮಂಜನ್ನು ಬಳಿದುಕೊಂಡು ಪಡುತ್ತಿರುವ ಸಂತಸ, ಮತ್ತು ಆ ಬೆಟ್ಟಗಳ ತಪ್ಪಲಿನಲ್ಲಿ ಕಯಾಕಿಂಗ್ ನ ಮಜಾ. ಎಂಜಾಯ್ ಮಾಡಿದ್ರಾ?

* ಭಾವೀ ವರರೇ, ಎಚ್ಚರ!

ಮದುವೆ ಆಗಲು ಬಯಸುವ ಭಾವೀ ವರರೇ ಎಚ್ಚರ. ಭಾರತೀಯ ನಾರಿ ಎಚ್ಚೆತ್ತು ಕೊಂಡಿದ್ದಾಳೆ. ಕಳೆದ ಗುರುವಾರ ಬಿಹಾರದ ಸರಾಯಿರಂಜನ್ ಗ್ರಾಮದಲ್ಲಿ ಒಂದು ಮದುವೆ. ಪಾನ ಮತ್ತನಾಗಿ ತನ್ನ ಭಾವೀ ಪತಿ ಮದುವೆ ದಿಬ್ಬಣದೊಂದಿಗೆ ಬಂದವರೊಂದಿಗೆ ಅಶ್ಲೀಲವಾಗಿ ಕುಣಿದ ಎಂದು ವಧು ಅವನನ್ನು ವರಿಸಲು ನಿರಾಕರಿಸಿದಳು. ಬೆಚ್ಚಿ ಬಿದ್ದ ವರ ರವಿ ಕುಮಾರ್ ಚೌಧುರಿ ದಾರಿ ಕಾಣದೆ ಪೋಲೀಸರ ಮೊರೆ ಹೊಕ್ಕ. 

ಜಪ್ಪಯ್ಯ ಅನ್ನಲಿಲ್ಲ ಮದುವೆ ಮಂಟಪಕ್ಕೆ ಆಗಮಿಸಿದ್ದ ಸಾಲಂಕೃತ ವಧು. ವಧುವಿನ ತಂದೆ ತನ್ನ ಮಗಳ ನಿರ್ಧಾರಕ್ಕೆ ಸಂಪೂರ್ಣ ಬೆಂಬಲ ಸೂಚಿಸಿ ವರ ಗಂಟು ಮೂಟೆ ಕಟ್ಟುವಂತೆ ಮಾಡಿದ. ಪಾಪ ಬಾಸಿಂಗ ಕಟ್ಟಿಕೊಂಡು ಏನೇನೋ ಆಸೆಗಳನ್ನು ಇಟ್ಟುಕೊಂಡು ಹಸೆ ಮಣೆ ಏರಲು ಬಂದಿದ್ದ ರವಿ ಕುಮಾರನಿಗೆ ಕಾಲಿಗೆ ಬುದ್ಧಿ ಹೇಳುವುದೊಂದೇ ಬಾಕಿ ಉಳಿದಿದ್ದು.   

 

ಈ ರೀತಿಯ ಅಪೂರ್ವ ಧೈರ್ಯ ಪ್ರದರ್ಶಿಸಿದ ಮದುಮಗಳು ಇತರರಿಗೂ ಮಾದರಿ ಆಗಬೇಕು. ತನ್ನನ್ನು ವರಿಸುವವನಲ್ಲಿ ಸದ್ಗುಣಗಳನ್ನು ಬಯಸುವುದು ಪ್ರತೀ ವಧುವಿನ ಹಕ್ಕು. ಆ ಹಕ್ಕನ್ನು ಈ ಹೆಣ್ಣುಮಗಳು ಮನೋಹರವಾಗಿ ಚಲಾಯಿಸಿದಳು. ಆಕೆಯ ತೀರ್ಮಾನಕ್ಕೆ ಬೆಂಬಲ ಸೂಚಿಸಿದ ಆಕೆಯ ತಂದೆಯೂ ಅಭಿನಂದನಾರ್ಹ. ಇದೇ ರೀತಿ ವಧುಗಳು ಲಜ್ಜೆ ಬಿಟ್ಟು ಹೆಣ್ಣಿನ ಮನೆಯವರಿಂದ ವರ ದಕ್ಷಿಣೆ ಬಯಸುವ ಗಂಡುಗಳನ್ನೂ ಎಡಗಾಲಿಂದ ಒದ್ದು ಸಮಾಜವನ್ನು ಈ ವರದಕ್ಷಿಣೆ ಎಂಬ ಅನಿಷ್ಟ ಪೀಡೆಯಿಂದ ಬಿಡುಗಡೆಗೊಳಿಸಬೇಕು.  

* “ಒಹ್, ಇದ್ ನಂಬಳ ಪೊಣ್ಣ್”

ನನ್ನ ತಂಗಿಯೊಂದಿಗೆ ಆಕೆಯ ಮಕ್ಕಳನ್ನು ಶಾಲೆಯಿಂದ ಕರೆತರಲು ಹರಟುತ್ತಾ ಹೋದಾಗ ಆಕೆ ಹೇಳಿದ್ದು ಈ ವಿಷಯ. ಮೊನ್ನೆ ಟೀವಿಯಲ್ಲಿ ಸಿನಿ ಅವಾರ್ಡ್ ಸಮಾರಂಭದಲ್ಲಿ ನಟಿ ರೇಖಾ ಉಪಸ್ಥಿತರಿದ್ದರಂತೆ. ತಮಿಳು ನಾಡಿನ ವಿದ್ಯಾ ಬಾಲನ್ ಯಾವುದೋ ಚಿತ್ರಕ್ಕೆ ಪ್ರಶಸ್ತಿ ಪಡೆದಳು. ಪ್ರಶಸ್ತಿ ಪ್ರದಾನ ಮಾಡಲು ಆಕೆಯನ್ನು ಕರೆದಾಗ ವಿದ್ಯಾಳನ್ನು ನೋಡಿದ ರೇಖಾ ಎಲ್ಲರೂ ಕೇಳುವಂತೆ ಉದ್ಗರಿಸಿದ್ದು “ಒಹ್, ಇದ್ ನಂಬಳ ಪೊಣ್ಣ್” ಅಂತ. ಅಂದರೆ ಒಹ್ ಈಕೆ ನಮ್ಮ ಹುಡುಗಿ ಎಂದು. ಈ ಭಾವನೆ ಕನ್ನಡಿಗರನ್ನು ಬಿಟ್ಟು ಎಲ್ಲಾ ರಾಜ್ಯದವರಿಗೂ ಇದೆಯಲ್ಲಾ ಯಾಕೆ ಎಂದು ನನ್ನ ಸೋದರಿ ಮುಗ್ಧಳಾಗಿ ಕೇಳಿದಳು. ಕೆಲವೊಂದು ಪ್ರಶ್ನೆಗಳಿಗೆ ಉತ್ತರ ಸುಲಭವಲ್ಲ ಎಂದು ನಾನು ಆಕೆಗೆ ಉತ್ತರಿಸದೆ ಪಿಕ್ ಅಪ್ ಟ್ರಕ್ ಹಿಂದೆ ಮುಗ್ಧವಾಗಿ ಕೂತು ಸವಾರಿ ಮಾಡುತ್ತಿದ್ದ ಒಂಟೆಯನ್ನು ನೋಡುತ್ತಾ  ಡ್ರೈವ್ ಮಾಡುತ್ತಿದ್ದೆ.            

* ಹಳೇ ಸೇತುವೆ.. ಹಳೇ ನೆನಪು, ಹೊಸ ಭರವಸೆ

 

ಹಳೇ ಸೇತುವೆಗೆ ತುಂಬಿತು ನೂರು. ನೂರು ಎಂದರೆ ಸೇತುವೆಗೆ ನೂರು ವರ್ಷ ತುಂಬಿತು ಎಂದಲ್ಲ. ನಾನು ಆರಂಭಿಸಿದ “ಹಳೇ ಸೇತುವೆ” ಹೆಸರಿನ ಬ್ಲಾಗ್ ಗೆ ೧೦೦ ಪೋಸ್ಟ್ಗಳು ತುಂಬಿ ಕೊಂಡವು.  

 ಈ ಬ್ಲಾಗ್ ಆರಂಭಿಸುವಾಗ ನನಗನ್ನಿಸಿರಲಿಲ್ಲ ಇಷ್ಟು ದೂರ ಬರುವೆ ಎಂದು ಏಕೆಂದರೆ ನಾನು ನುರಿತ ಬರಹಗಾರನೇನೂ ಅಲ್ಲ. ಪತ್ರಿಕೋದ್ಯಮದ ವಿದ್ಯಾರ್ಥಿಯೂ ಅಲ್ಲ, ಬರಹಗಾರರ ಗೆಳೆತನವೂ ಇಲ್ಲ. ಒಂದೆರಡು ಆನ್ ಲೈನ್ ಪತ್ರಿಕೆಗಳಲ್ಲಿ ಅಭಿಪ್ರಾಯ ಬರೆದು ಬರೆಯುವ ಧೈರ್ಯ ನನಗೆ ನಾನೇ ತಂದುಕೊಂಡೆ.   

ಬ್ಲಾಗ್ ಆರಂಭಿಸುವ ಬಗ್ಗೆ ಕೆಲವು ಲೇಖನಗಳನ್ನು ಓದಿದ ನಂತರ ನನಗೂ ನನ್ನದೇ ಆದ ಒಂದು ಬ್ಲಾಗ್ ಆರಂಭಿಸಿಕೊಳ್ಳುವ ಆಸಕ್ತಿ ಮೂಡಿತು. ಅದರಲ್ಲೂ ಪುಕ್ಕಟೆಯಾಗಿ ಬ್ಲಾಗ್ ರಚಿಸಿಕೊಳ್ಳಬಹುದು ಎಂದ ಮೇಲಂತೂ ಕೇಳಬೇಕೆ? ಪುಕ್ಕಟೆ ಸಿಕ್ಕರೆ ಯಾರಿಗೆ ಬೇಡ? ನಾನು ಹೈಸ್ಕೂಲಿನಲ್ಲಿದ್ದಾಗ ಕನ್ನಡ ಪಂಡಿತರೊಬ್ಬರು ಹೇಳಿದ್ದು ನೆನಪಿಗೆ ಬಂತು. ಪುಕ್ಕಟೆ ಯಾಗಿ ಹೆಣ್ಣು ಸಿಕ್ಕರೆ ನನಗೊಂದು,ನಮ್ಮಪ್ಪನಿಗೊಂದು, ನಮ್ಮಜ್ಜನಿಗೊಂದಂತೆ. ಅದೇ ಸಮಯ ಅದಕ್ಕೆ ಒಂದಿಷ್ಟು ಕಾಸು ತಗಲುತ್ತದೆ ಅಂದಾಕ್ಷಣ ನನಗಿನ್ನೂ ಎಳೇ ಪ್ರಾಯ, ನಮ್ಮಪ್ಪನಿಗೊಂದು ಹೆಣ್ಣೀಗಾಗಲೇ ಇದೆ, ನಮ್ಮಜ್ಜನಿಗೆ ವಯಸ್ಸಾಯಿತು ಎಂದು ಜಾರಿಕೊಳ್ಳುತ್ತಾರಂತೆ.     

ಬ್ಲಾಗ್ ಗೆ ಹಳೇ ಸೇತುವೆ ಎಂದು ಹೆಸರಿಟ್ಟಾಗ ನನ್ನ ಸೋದರಿಯರು ಕೇಳಿದರು ಯಾಕೀ ಹೆಸರೆಂದು. ಈ ಸೇತುವೆ ತೋರಿಸಿ ಹೊಳೆಯಿಂದಾಚೆಯಿಂದ ಸೈತಾನ್ ಬರುತ್ತಾನೆ ಎಂದು ನನ್ನ ಚಿಕ್ಕಮ್ಮಂದಿರು ನಾನು ಚಿಕ್ಕವನಿದ್ದಾಗ ಹೆದರಿಸುತ್ತಿದ್ದರು. ಈ ಸೇತುವೆ ದಾಟಿ ಕೊಂಡೇ ನನ್ನ ಆಪ್ತ ಮಿತ್ರರನ್ನು ಭೆಟ್ಟಿಯಾಗಲು ನಾನು ಹೋಗುತ್ತಿದ್ದದ್ದು. ನನ್ನ ಪ್ರೀತಿಯ ತಮ್ಮ ಆಕಸ್ಮಿಕವಾಗಿ ನದಿಯಲ್ಲಿ ಜಾರಿ ಬಿದ್ದು ನಿಧನ ಹೊಡಿದ ನಂತರ ಅವನ ಅಂತಿಮ ಯಾತ್ರೆ ಸಹಾ ಇದೇ ಸೇತುವೆ ಮೇಲೇ ಹಾದು ಹೋಗಿದ್ದು. ಹಾಗಾಗಿ ಈ ಸೇತುವೆ ನನ್ನನ್ನು ಭಾವುಕನನ್ನಾಗಿ ಮಾಡುತ್ತದೆ. ಹಳೇ ನೆನಪುಗಳನ್ನು ನನಗೆ ತಲುಪಿಸುತ್ತದೆ. ಈ ಕಾರಣಗಳಿಗಾಗಿ ಹಳೇ ಸೇತುವೆ ಹಸರು ಆಪ್ತವಾಗಿ, ಪ್ರಸಕ್ತವಾಗಿ ಕಂಡಿತು.  

ಕನ್ನಡ ನಾಡಿನಿಂದ ಹೆಚ್ಚು ಕಡಿಮೆ ಇಪ್ಪತ್ತು ವರ್ಷ ಹೊರಗಿದ್ದುದರಿಂದ ನಾಡಿನೊಂದಿಗೆ ಮಾತ್ರವಲ್ಲ ನುಡಿಯೊಂದಿಗೂ ನಂಟು ಬಿಟ್ಟು ಹೋಗಿತ್ತು. ಆದರೆ ಮಾತೃ ಭಾಷೆ ನೀವೆಲ್ಲೇ ಇದ್ದರೂ ನಿಮ್ಮ ಬೆನ್ನು ಬಿಡದು. ಮಾತೃ ಭಾಷೆಯ ಮೋಡಿ ಇಲ್ಲಿದೆ ನೋಡಿ. ವ್ಯಕ್ತಿ ಏನೆಲ್ಲವನ್ನು ಕಳೆದುಕೊಂಡರೂ ಅವನ ಅಂತರಂಗದ ಭಾಷೆ ಅವನ ಉಸಿರಿನಂತೆ ಅವನೊಂದಿಗೆ ಇರುತ್ತದೆ. ಕೆಲವರು ಡ್ರಾಮ ಮಾಡಬಹುದು ದೇಶದ ಹೊರಗೆ ಇರುವುದರಿಂದ ಭಾಷೆ ಮರೆತು ಹೋಯಿತು ಎಂದು. ಅದು ಶುದ್ಧ, ಸೋಗಲಾಡಿತನ.  ನಾವು ಮನೆಯಲ್ಲಿ ಬೇರೆ ಭಾಷೆ ಮಾತನಾಡಿದರೂ ನನ್ನ ಮನದ, ಮೆಚ್ಚಿನ ನುಡಿ ಕನ್ನಡ. ಭೂಮಿ ತಾಯಿ ಇರುವಾ ತನಕ ನಗುತಾ ಇರಲಿ ಕನ್ನಡ ಎಂದಂತೆ ನನ್ನ ಮನದಲ್ಲಿ ಕನ್ನಡಕ್ಕೆ ವಿಶೇಷ ಸ್ಥಾನ ಎಂದಿಗೂ ಇರುತ್ತದೆ.  

ಮನುಷ್ಯ ಸಂಬಂಧಗಳ ಥರ ಶಿಥಿಲವಾಗುತ್ತಿರುವ, ಸುಣ್ಣದ ಕಲ್ಲಿನಿಂದ ಕಟ್ಟಿದ, ಭದ್ರೆಯ ಆಪ್ತ ಮಿತ್ರ ಹಳೇ ಸೇತುವೆ ಜಾಗದಲ್ಲಿ ಮತ್ತೊಂದು ಸೇತುವೆ ಬಂದರೂ ಅಂತರ್ಜಾಲದಲ್ಲಿ ಹಳೇ ಸೇತುವೆ ಹೆಸರು ಖಾಯಮ್ಮಾಗಿ ಉಳಿಯುವಂತೆ ನನ್ನ ಬ್ಲಾಗ್ ಸಹಾಯ ಮಾಡಬಲ್ಲುದು ಎಂದು ನನ್ನ ನಂಬಿಕೆ.

ನನ್ನ ಬರವಣಿಗೆಯ ನಿಟ್ಟಿನಲ್ಲಿ ಸಂಪದದಿಂದ ಸಿಕ್ಕ ಸಹಾಯಕ್ಕೆ ನಾನೆಂದೂ ಋಣಿ. ಅದೇ ರೀತಿ google transliteration ಬಳಸುವ ನನಗೆ ಗೂಗಲ್ ನ ಈ ಸೌಲಭ್ಯ ಬಹಳ ಸಹಾಯಕವಾಯಿತು.

ಚಿತ್ರ ಕೃಪೆ:

* ವಿಷ ಕನ್ಯೆ

ಹಳೆ ಕಾಲದಲ್ಲಿ ರಾಜರು ಭವಿಷ್ಯದಲ್ಲಿ ವಿಧವೆಯರಾಗಬಹುದಾದ ಹುಡುಗಿಯರನ್ನು ತಂದು ವಿಷ ತಿನ್ನಿಸಿ ಅವರನ್ನು ವಿಷ ಕನ್ಯೆಯರನ್ನಾಗಿ ಪರಿವರ್ತಿಸುತ್ತಿದ್ದರಂತೆ. ಅಂತಹ ಕನ್ಯೆಯರನ್ನು ತಮ್ಮ ಶತ್ರುಗಳಿಗೆ ಕಳಿಸಿ ವಿಷ ಕನ್ಯೆಯೊಂದಿಗೆ ಪ್ರೇಮಾಂಕುರವಾಗುವಂತೆ ಮಾಡಿ, ರಾಸಲೀಲೆ ನಡೆಸಿದ ಶತ್ರು ಸಾವನ್ನಪ್ಪುವಂತೆ ಮಾಡುತ್ತಿದ್ದರಂತೆ. ಚಕ್ರವರ್ತಿ ಅಲೆಗ್ಸಾಂಡರ್ ಸಹಾ ಇದೇ ರೀತಿ ಸತ್ತ ಎಂದು ಓದಿದ ನೆನಪು. ನಮ್ಮ ಕಲಿಯುಗದ ವಿಷ ಕನ್ಯೆ ಬಗ್ಗೆ ಸ್ವಲ್ಪ ಓದೋಣ. ಇಂಗ್ಲೆಂಡಿನ ಭಾರತೀಯ ಮೂಲದ ಮಹಿಳೆ ತನ್ನ ಪ್ರಿಯಕರನನ್ನು ಕೊಂದಳು, ಸಾರಿನಲ್ಲಿ (curry) ವಿಷ ಬೆರೆಸಿ. ತನ್ನ ಪ್ರಿಯಕರ ತನಗಿಂತಲೂ ಚಿಕ್ಕ ವಯಸ್ಸಿನ ಹುಡುಗಿಯನ್ನು ಮದುವೆ ಮಾಡಿಕೊಳ್ಳುವುದನ್ನು ಸಹಿಸದೆ ಆಕೆ ಈ ಕೃತ್ಯವನ್ನು ಎಸಗಿದಳು. ವಿಷ ದ ಸಾರನ್ನು ಸೇವಿಸಿದ ಪ್ರಿಯಕರ ಮತ್ತು ಆತನ ನವ ಪ್ರೇಯಸಿ ಆಸ್ಪತ್ರೆಗೆ ದಾಖಲಾದರೂ ಪ್ರಿಯಕರ ಸಾವನ್ನಪ್ಪಿದ. ಪ್ರಕರಣ ನ್ಯಾಲಯಕ್ಕೆ ಬಂದು ಆಕೆಗೆ ೨೩ ವರ್ಷಗಳ ಕಾರಾರಹ ವಾಸ ದಯಪಾಲಿಸಿದ ನ್ಯಾಯಾಧೀಶ. ತನ್ನ ತೀರ್ಪಿನಲ್ಲಿ ” “You were not just a spurned lover, you did not simply explode in anger at your rejection. You set about a cold and calculating revenge.” ನ್ಯಾಯಾಧೀಶ ನುಡಿದ.
ಆಕ್ರೋಶದಲ್ಲಿ ಮನುಷ್ಯ ಕುರುಡನಾದಾಗ ಮತ್ತು ಆಕ್ರೋಶದೊಂದಿಗೆ ಮತ್ಸರವೂ ಸೇರಿಕೊಂಡಾಗ ಫಲ ವಿಷದಷ್ಟೇ deadly combination.
   

* “ಪಿಂಕ್ ಟ್ರಕ್ಕು”

ಪಿಂಕ್ ಎಂದ ಕೂಡಲೇ ಮನದಲ್ಲಿ ಭಯ ಆವರಿಸುತ್ತೆ ಅಲ್ಲವೇ? ಪಿಂಕ್ ಬಣ್ಣ valentine   ದಿನದೊಂದಿಗೆ ಗುರುತಿಸಿಕೊಂಡು ಪ್ರೇಮಿಗಳ ಪಾಲಿಗೆ ದಿಗಿಲು ಹುಟ್ಟಿಸುವ ದಿನವಾಗಿ ಪರಿಣಮಿಸಿದೆ. ಕಳೆದ ವರ್ಷ ಪ್ರೇಮಿಗಳ ದಿನ ಆಚರಿಸುವವರನ್ನು ಹಿಡಿದು ಮಂಗಳ ಸೂತ್ರ ಕಟ್ಟಿಸಲು ಮುನ್ನುಗ್ಗುತ್ತಿದ್ದಾಗ ಬೆಂಗಳೂರಿನ ತರುಣಿಯೊಬ್ಬಳು ಪ್ರೇಮಿಗಳ ದಿನವನ್ನು ಪ್ರತಿಭಟಿಸಿದ ವ್ಯಕ್ತಿಯೊಬ್ಬನಿಗೆ ಪಿಂಕ್ ಚಡ್ಡಿಗಳನ್ನು ಕಳಿಸುವಂತೆ ಮನವಿ ಮಾಡಿಕೊಂಡಾಗ ಪ್ರವಾಹೋಪಾದಿಯಲ್ಲಿ ಹರಿದು ಬಂದವು ಹುಬ್ಬಳ್ಳಿಗೆ ಪಿಂಕ್ ಚಡ್ಡಿಗಳು. 
 
ಇಂದು ಮಧ್ಯಾಹ್ನ ಊಟಕ್ಕೆಂದು ಮನೆಗೆ ಹೊರಟಾಗ ದಾರಿ ಬದಿಯಲ್ಲಿ ಬಹರೇನ್ ದೇಶದಿಂದ ಬಂದ ನಾಲ್ಕೈದು ಪಿಂಕ್ ಟ್ರಕ್ಕುಗಳು ನಿಂತಿದ್ದವು. ಅವುಗಳನ್ನು ನೋಡಿ ಕಳೆದ ವರ್ಷದ ಘಟನೆಗಳು ನೆನಪಿಗೆ ಬಂದವು. ಇನ್ನು ಕೆಲವೇ ದಿನಗಳಲ್ಲಿ “ಪ್ರೇಮಿಗಳ ದಿನ” ಆಗಮಿಸಲಿದ್ದು ಈ ಸಲ ಅದ್ಯಾವ ವರಸೆ ಕಾಣಲಿಕ್ಕೆ ಇದೆಯೋ  ಆ “ಕಾಮದೇವ” ನೇ ಬಲ್ಲ.   

“ಮಾತೃ ದೆವ್ವೋ ಭವ”

ಮಾತೃ ದೇವೋಭವ ಎಂದು ತಾಯಿಯನ್ನು ಪೂಜಿಸಿ ಗೌರವಿಸು ಎಂದು ಹಿಂದೂ ಸಂಸ್ಕೃತಿ ಉತ್ತೇಜಿಸಿದರೆ, ಮಾತೆಯ ಕಾಲಿನಡಿಯಲ್ಲಿ ಸ್ವರ್ಗವಿದೆ, ಆಕೆಯನ್ನು ಸರಿಯಾಗಿ ನಡೆಸಿಕೊ ಎನ್ನುವ ಇಸ್ಲಾಂ ಧರ್ಮದ ನುಡಿ. ತಾಯಿ ತನಗೆ ಬೆಂಬಿಡದೆ ಒಂದೇ ಸಮನೆ ಫೋನ್ ಮಾಡುತ್ತಿರುತ್ತಾಳೆ ಎಂದು ಪುತ್ರ ಮಹಾಶಯ ನ್ಯಾಯಾಲಯದ ಕಟ್ಟೆ ಹತ್ತಿದ. ಆಸ್ಟ್ರಿಯಾದ ೭೩ ವರ್ಷದ ಈ ವೃದ್ಧ ಮಾತೆ ದಿನಕ್ಕೆ ೪೯ ಸಲ ಫೋನ್ ಮಾಡಿ ಪೀಡಿಸುತ್ತಿದ್ದಳಂತೆ ಒಂಭತ್ತು ತಿಂಗಳು ಹೊತ್ತೂ, ಹೆತ್ತೂ ಸಾಕಿದ ಮಗನನ್ನು. ನ್ಯಾಯಾಲಯ ಆಕೆಯಿಂದ ವಿವರಣೆ ಕೇಳಿದಾಗ ಆಕೆ ಹೇಳಿದ್ದು, ನನಗೆ ಅವನೊಂದಿಗೆ ಮಾತನಾಡಬೇಕಿತ್ತು ಅಷ್ಟೇ ಎಂದು. ಮುಂದುವರೆದು, ನನ್ನ ಮಗನ ಹತ್ತಿರವೋ, ಮಗಳ ಹತ್ತಿರವೋ ಮಾತನಾಡುವಂತಿಲ್ಲ, ನನ್ನ ೧೫ ವರುಷದ ಮೊಮ್ಮಗುವನ್ನು ಇದುವರೆಗೂ ನಾನು ನೋಡಿಯೇ ಇಲ್ಲ ಎಂದು ತನ್ನ ಅಳಲನ್ನು ತೋಡಿಕೊಂಡಳು ಆ ಮಹಾತಾಯಿ.

ತನಗೆ ಅದು ಬೇಕು ಇದು ಬೇಕು ಪೀಡಿಸದೇ ತನ್ನ ಮಗನೊಂದಿಗೆ ಮಾತನಾಡಲು ಶ್ರಮಿಸುವುದೇ ಆ ತಾಯಿ ಮಾಡಿದ ಮಹಾಪರಾಧ. ನೋಡಿ ನಮ್ಮ ಸಂಸ್ಕೃತಿಗೂ, ಸಂಪತ್ತಿನ ಹಿಂದೆ ಬಿದ್ದು ಮನೋಕ್ಲೇಷೆಗಳನ್ನು ಗಳಿಸಿಕೊಂಡ ಆಧುನಿಕ ಜಗತ್ತಿನ ಸಂಸ್ಕೃತಿಗೂ ಇರುವ ವ್ಯತ್ಯಾಸ. ಇಂಥ ಪ್ರಕರಣಗಳು ನಮ್ಮಲ್ಲಿಲ್ಲ ಎಂದೇನಲ್ಲ. ಆದರೆ ಅವು ಈ ಮಟ್ಟಕ್ಕಂತೂ ಇಳಿದಿರುವುದಿಲ್ಲ. ತಾವು ಆರ್ಹ್ತಿಕವಾಗಿ ಸುಸ್ಥಿಯಲ್ಲಿದ್ದರೂ ಮಡದಿ ಏನೆಂದುಕೊಳ್ಳುತ್ತಾಳೋ ಎಂದು ಹೆದರಿ ತಮ್ಮ ತಾಯಂದಿರನ್ನು ತಮ್ಮೊಂದಿಗೆ ಇಟ್ಟುಕೊಳ್ಳದ ಮಹಾನುಭಾವರೂ ಇದ್ದಾರೆ. ವಿಧಿಯಿಲ್ಲದೇ ಇಂಥ ತಾಯಂದಿರು ಯಾರದಾದರೂ ಮನೆಯಲ್ಲಿ ಕೆಲಸಕ್ಕಿದ್ದು ಇರುವಷ್ಟು ಆಯಸ್ಸನ್ನು ಕಳೆಯುತ್ತಿದ್ದಾರೆ. ಸರಿ ನ್ಯಾಯಾಲಯ ಇವರೀರ್ವರ ವಾದ ಆಲಿಸಿ ಕೊಟ್ಟ ಮಹಾ ತೀರ್ಪು? ೩೬೦ ಯುರೋಗಳ ದಂಡ.

ಈ ಕೇಸನ್ನು ಕೋರ್ಟಿನ ಮುಂದೆ ತಂದು ಆಮೂಲ್ಯ ಸಮಯ ಹಾಳು ಮಾಡಿದ್ದಕ್ಕೂ, ತಾಯ್ತನಕ್ಕೆ ಚಿಕ್ಕಾಸಿನ ಬೆಲೆ ಕೊಡದ ಮಗನ ಸಂಸ್ಕೃತಿಗೂ ವಿಧಿಸಿದ ದಂಡ ಅಲ್ಲ. ಒಂದೇಸಮನೆ ಫೋನ್ ಮಾಡಿ ಮಗನ ನೆಮ್ಮದಿ ಕೆಡಿಸಿದ ತಾಯಿಗೆ ವಿಧಿಸಿತು ದಂಡ ನ್ಯಾಯಾಲಯ.