Uncategorized
ಹಸಿವು ಮತ್ತು ಸರ್ಕಸ್
ಕೇರಳದ ಹೆಸರನ್ನು ಈಗ “ಕೇರಳಮ್” ಎಂದು ಮಾಡಲು ಸರಕಾರ ಯೋಚಿಸುತ್ತಿದೆ ಎಂದು ವರದಿ. ದಕ್ಷಿಣ ಭಾರತದ ಸಂಪೂರ್ಣಸಾಕ್ಷರ ರಾಜ್ಯ ಹೆಸರು ಬದಲಿಸುವುದರಲ್ಲಿ ಹಿಂದೆ ಇಲ್ಲ ಎಂದು ಈಗಾಗಲೇ ತೋರಿಸಿ ಕೊಟ್ಟಿದೆ. ತ್ರಿಚೂರ್, ಕ್ಯಾಲಿಕಟ್, ಟ್ರೀವೆನ್ಡ್ರಂ ಗಳನ್ನು ಬದಲಿಸಿ ತ್ರಿಶೂರ್, ಕೊಜಿಕೋಡ್, ತಿರುವನಂತಪುರಂ ಎಂದು ಬದಲಿಸಲಾಗಿದ್ದು ಹೆಸರುಗಳನ್ನ ಬದಲಿಸಿ ಅದೇನನ್ನು ಸಾಧಿಸಲು ಹೊರಟಿದ್ದೇವೆಯೋ ಎಂದು ಖಾದಿ ಧರಿಸುವ ರಾಜಕಾರಣಿಗಳೇ ಹೇಳಬೇಕು. ಭಾರತದ ಬಡತನದ ಬಗೆಗಿನ ವರದಿಯೊಂದು ನಮ್ಮ ವ್ಯವಸ್ಥೆಯ ವೈಫಲ್ಯದ ಮೇಲೆ ಕನ್ನಡಿ ಹಿಡಿದಿರುವಾಗ ರಾಜಕಾರಣಿಗಳು ಹೆಸರು ಬದಲಿಸುವ ಸರ್ಕಸ್ ಗಳಲ್ಲಿ ನಿರತರಾಗಿ ಜನರ ಲಕ್ಷ್ಯ ಬೇರೆಡೆ ತಿರುಗಿಸುವ ಆಟದಲ್ಲಿ ನಿರತರಾಗಿದ್ದಾರೆ. ಆಫ್ರಿಕಾದ ೨೬ ಅತಿ ಬಡ ರಾಷ್ಟ್ರಗಳಲ್ಲಿರುವ ಬಡವರಿಗಿಂತಲೂ ಹೆಚ್ಚು ಬಡವರು ನಮ್ಮ ದೇಶದ ಎಂಟು ರಾಜ್ಯಗಳಲ್ಲಿ ಇದ್ದಾರಂತೆ. ಆ ಎಂಟು ರಾಜ್ಯಗಳು ಯಾವುವೆಂದರೆ ಬಿಹಾರ್, ಛತ್ತೀಸ್ ಘಡ, ಒರಿಸ್ಸಾ, ಝಾರ್ಖಂಡ್, ಮಧ್ಯ ಪ್ರದೇಶ, ರಾಜಸ್ಥಾನ, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ.
ಆದರೆ ರೊಟ್ಟಿ ಯಿಲ್ಲದೆ ಹಸಿದವರ ಸಂಖ್ಯೆ ದಿನೇ ದಿನೇ ಏರುತ್ತಿದ್ದಂತೆಯೇ ಕೋಟ್ಯಾಧಿ ಪತಿಗಳ ಸಂಖ್ಯೆಯೂ ಅಷ್ಟೇ ವೇಗದಲ್ಲಿ ಬೆಳೆಯುತ್ತಿರುವುದು ವಿಸ್ಮಯಕಾರಿ ಬೆಳವಣಿಗೆ ಎನ್ನಬಹುದು.
ನೀವೂ ಮರೆಗುಳಿಯೋ?
ಎಂದಿನಂತೆ ಇಂದೂ ಬೆಳಿಗ್ಗೆ ತಡಬಡಿಸಿ ಎದ್ದೆ. ಸ್ನಾನಕ್ಕೆ ಮತ್ತು ತಯಾರಾಗಲು ಬೇಕಾದ ಸಮಯ ಇಟ್ಟುಕೊಂಡು ಮಾತ್ರ ನಾನು ಏಳೋದು. ಸರಿ ಎದ್ದು ತಯಾರಾಗಿ ರಕ್ತದೊತ್ತಡದ ಮಾತ್ರೆ ತೆಗೆದುಕೊಳ್ಳೋಣ ಎಂದು ಸ್ವಲ್ಪ ನೀರನ್ನು ಕುಡಿದು ಪ್ಯಾಕೆಟ್ ತೆರೆಯುತ್ತಿದಂತೆ ನನಗೊಂದು ಸಂಶಯ. ನಾನು ಆಗಲೇ ಮಾತ್ರೆ ತೆಗೆದು ಕೊಂಡೆನೋ ಎಂದು. ಕೇವಲ ಕೆಲವೇ ಸೆಕೆಂಡುಗಳ ಅಂತರದಲ್ಲಿ ಸಂಶಯ ಪಿಶಾಚಿಯ ಆಗಮನ. ಈ ತೆರನಾದ ಮರೆಗುಳಿಗಳಿಗೆ ಔಷಧಿ ಕಂಪೆನಿಯವರು tablet strip ಹಿಂದುಗಡೆ ವಾರದ ಹೆಸರುಗಳನ್ನ ಹಾಕಿರುತ್ತಾರೆ. ಆದರೆ ದುರದೃಷ್ಟಕ್ಕೆ ನನ್ನ concor strip ಮೇಲೆ ಆ ಸೌಲಭ್ಯ ಇಲ್ಲ. ಥುತ್ ಹಾಳಾದ್ದು, ಸಂಶಯವೇ ಬೇಡ ಎಂದು ಮಾತ್ರೆ ತೆಗೆದುಕೊಳ್ಳದೆ ಕಾರಿನ ಕೀಲಿಗಳನ್ನು ತೆಗೆದಕೊಂಡು ಹೊರನಡೆಯ ಬೇಕು ಎನ್ನುವಷ್ಟರಲ್ಲಿ ಮತ್ತೊಂದು ಸಂಶಯ. ಲೇ, ನಾನು ತಲೆ ಬಾಚಿ ಕೊಂಡಿದ್ದೀನಾ, ಸ್ವಲ್ಪ ನೋಡು ಎಂದೆ. ಈಗಾಗಲೇ ನನ್ನನ್ನು ಗಮನಿಸುತ್ತಿದ್ದ ಪತ್ನಿ ಕೇಳಿದಳು, ಏನಾಗಿದೆರೀ ನಿಮಗೆ ಇವತ್ತು ಎಂದು ನನ್ನನ್ನೇ ಅಚ್ಚರಿಯಿಂದ ನೋಡಿ ಹೇಳಿದಳು ಬಾಚಿದ್ದೀರಾ ಹೋಗಿ ಎಂದು. ಮತ್ತೊಂದು ದಿನವೂ ಹೀಗೆಯೇ. ಆಫೀಸಿಗೆ ಹೊರಟೆ, ಮೊಬೈಲ್, ಕಾರಿನ ಕೀಲಿ, ವಾಲೆಟ್, ಎಲ್ಲಾ ಹಿಂದೆ ಬಿಟ್ಟು. ಕಾರಿನ ಕೀಲಿ ಬಿಟ್ಟು ಆಫೀಸಿಗೆ ಹೇಗೇ ಹೋಗುತ್ತೀರಾ, ನಡೆದುಕೊಂಡಾ ಎಂದು ನಾನು ಬಿಟ್ಟ ಎಲ್ಲಾ ವಸ್ತುಗಳನ್ನ ನನ್ನ ಕೈಗೆ ತುರುಕಿ ಬೀಳ್ಕೊಟ್ಟಳು. ಈ ರೀತಿಯ ಮರೆಗುಳಿತನದಿಂದ ಮೈ ಪರಚಿ ಕೊಳ್ಳುವಂತಾದರೂ ಚರ್ಮದ ಮೇಲೆ ಗೆರೆಗಳು ಉಳಿಯುತ್ತವೆಯೇ ಹೊರತು ಬೇರೆ ಪ್ರಯೋಜನ ಕಾಣದು. ಆಶ್ಚರ್ಯ ಏನೆಂದರೆ ನಾವು ತೀರಾ ಅವಲಂಬಿತರಾಗಿರುವ ಮೊಬೈಲ್ ಅನ್ನು ಸಹಾ ಬಿಟ್ಟು ಹೋಗುತ್ತೇವೆ. ನನ್ನದು ಆನೆಯ ರೀತಿಯ ತೀಕ್ಷ್ಣ ಜ್ಞಾಪಕ ಶಕ್ತಿ ಎಂದು ಹೆಮ್ಮೆ ಪಡುವ ನಮ್ಮ ಬಾಸ್ ಸಹ ಹಲವು ಸಲ ಮೊಬೈಲ್ ಮನೆಯಲ್ಲಿ ಬಿಟ್ಟು ಬಂದಿರುತ್ತಾರೆ.
ಮರೆಗುಳಿತನದ ಅನುಭವಗಳು baffling. Absent minded professor ಕಥೆ ನಮಗೆ ತಿಳಿದೇ ಇದೆ. ಯಾವಾಗಲೂ ತನ್ನ ಊರುಗೋಲನ್ನು ಹಿಡಿದು ಹೊರ ಹೋಗುತ್ತಿದ್ದ ಪ್ರೊಫೆಸರ್ ಮನೆಗೆ ಬಂದ ನಂತರ ಊರುಗೋಲನ್ನು ಬಾಗಿಲಿನ ಹಿಂದೆ ಇಟ್ಟು ಸೋಫಾದ ಮೇಲೆ ಕೂರುತ್ತಿದ್ದ. ಒಂದು ದಿನ ಅದೇನನ್ನೂ ಆಲೋಚಿಸುತ್ತಾ ಮನೆಗೆ ಬಂದ ಅವನು ಊರು ಗೋಲನ್ನು ಸೋಫಾದ ಮೇಲೆ ಕೂರಿಸಿ, ತಾನು ಹೋಗಿ ಬಾಗಿಲಿನ ಹಿಂದೆ ನಿಂತನಂತೆ. ಒಂದು ದಿನ ನಾನು ಸಾಕ್ಸ್ ಇಲ್ಲದೆ ಶೂ ಧರಿಸಿ, ಸಾಕ್ಸನ್ನು ಶೂಗೆ ತೊಡಿಸಲು ನೋಡಿದ್ದನ್ನು ನನ್ನ ಹೆಂಡತಿ ನೋಡಿ ಹೊಟ್ಟೆ ತುಂಬಾ ನಕ್ಕಿದ್ದಳು. alzheimer ಖಾಯಿಲೆ ಹತ್ತಿ ಕೊಂಡರೆ ಮರೆವು ಹೆಚ್ಚಂತೆ. ಮರೆವೇ ಈ ರೋಗದ ಮುಖ್ಯ ಲಕ್ಷಣ ಕೂಡಾ.
ಕೆಲವರು ಕೋಣೆಗೆ ಹೋಗುತ್ತಾರೆ ಏನನ್ನೋ ತರಲು ಎಂದು, ಕೋಣೆ ತಲುಪಿದ ಕೂಡಲೇ ಮರೆತು ಬಿಡುತ್ತಾರೆ ಏನನ್ನು ತರಲು ಕೋಣೆಗೆ ನುಗ್ಗಿದ್ದು ಎಂದು. ಈ ರೀತಿಯ ಮರೆವಿಗೆ ಪ್ರಾಣಿಗಳೂ ಹೊರತಲ್ಲ, ಕೆಳಗಿದೆ ನೋಡಿ ಒಂದು ಉದಾಹರಣೆ.
ಹಾವುರಾಣಿ ಎನ್ನುವ ಜೀವಿಯೂ ಮರೆಗುಳಿಯಂತೆ. ಕಚ್ಚ ಬೇಕೆಂದು ಓಡಿ ಬರುವ ಅದಕ್ಕೆ ಹತ್ತಿರ ಬರುತ್ತಲೇ ಕಚ್ಚಬೇಕೆನ್ನುವುದು ಮರೆತುಬಿಡುತ್ತದಂತೆ. ಈ ಕಾರಣಕ್ಕಾಗಿಯೇ ಹಾವು ರಾಣಿ ಕಚ್ಚುವುದಿಲ್ಲ.
ನಾವೆಲ್ಲಾದರೂ ಏನನ್ನಾದರೂ ಮರೆತರೆ ನಮ್ಮ ಬಾಸ್ ಹೇಳುತ್ತಾರೆ, i know what I had asked you to do, I dont forget. My memory is like elephant’s. ಅಂದರೆ ಆನೆ ತೀಕ್ಷ್ಣ ಮತಿ ಅಂತ, ಅಲ್ವರ?
ಕೆಲವೊಮ್ಮೆ ADHD ಇದ್ದರೂ ರೀತಿಯ ಮರೆವಿನ ತೊಡಕುಗಳು ಎದುರಾಗುತ್ತವೆ. attention deficit hyperactivity disorder ಸಾಮಾನ್ಯವಾಗಿ ಮಕ್ಕಳಲ್ಲಿ ಕಾಣಬಹುದು. ಇದಕ್ಕೆ ವೈದ್ಯಕೀಯ ನಿವಾರಣೆ ಇದೆ.
ಗರ್ಭಿಣಿಯರಿಗೆ ಮರೆವು ಜಾಸ್ತಿ. ಇದಕ್ಕೆ pregnancy-induced brain fog ಎನ್ನುತ್ತಾರೆ. ಆದರೆ ಇದು ತಾತ್ಕಾಲಿಕ. ಹಾರ್ಮೋನುಗಳ ಏರು ಪೇರಿನಿಂದ ಆಗುತ್ತದೆ ಎಂದು ಹೇಳುತ್ತದೆ ವೈದ್ಯ ಶಾಸ್ತ್ರ.
ನೆನಪಿನಲ್ಲಿಡಬೇಕಾದ್ದನ್ನು ಬರೆದಿಟ್ಟು ಕೊಂಡರೆ ಒಳ್ಳೆಯದಂತೆ. ಈಗಂತೂ ಆಧುನಿಕ gadget ಗಳ ಯುಗ. black berry, laptop ಹೀಗೆ ಹಲವು ಉಪಕರಣಗಳು ನಮ್ಮ ಸಹಾಯಕ್ಕೆ. ಎಲ್ಲವನ್ನೂ ನಮ್ಮ ನೆನಪಿನ ಸುಪರ್ದಿಗೆ ಬಿಡದೆ ಬರೆದಿಟ್ಟು ಕೊಳ್ಳುವುದು ಒಳ್ಳೆಯದು ಎನ್ನುವುದಕ್ಕೆ ಒಂದು ಚೀನೀ ಗಾದೆಯೂ ಇದೆ, The palest ink is better than the best memory. ಅತ್ಯುತ್ತಮ ಜ್ಞಾಪಕಶಕ್ತಿಗಿಂತ ಮಬ್ಬಾದ ಮಸಿ ಒಳ್ಳೆಯದು.
ದೊಡ್ಡ embarrassing ಮರೆವು ಎಂದರೆ ನಾವು ಭೇಟಿ ಮಾಡಿದವರ, ಹೆಸರುಗಳನ್ನ ಮರೆಯೋದು. ನನಗಂತೂ ನನ್ನ ನಾದಿನಿಯ ಹೆಸರೂ ನೆನಪಿನಲ್ಲಿ ಇರುವುದಿಲ್ಲ, ಈ ಕಾರಣ ಹೆಂಡತಿಯಿಂದ ತಿವಿಸಿಕೊಂಡಿದ್ದೂ ಇದೆ.
ನನಗೆ ತಿಳಿದ ಮಟ್ಟಿಗೆ ಈ ರೋಗಕ್ಕೆ ಕಾರಣ ನಮ್ಮ mind. ನಾನು ಮರೆಗುಳಿ, ನನ್ನ ತಲೆಯಲ್ಲಿ ಏನೂ ಉಳಿಯೋದಿಲ್ಲ, ಒಂದು ರೀತಿಯ ಜರಡೆಯಂತೆ ನನ್ನ ಜ್ಞಾಪಕ ಶಕ್ತಿ ಎಂದು ನಿಮ್ಮ ತಲೆಯನ್ನು ನೀವೇ ಕೀಳರಿಮೆಯಿಂದ ನಡೆಸಿ ಕೊಂಡರೆ ಫಲಿತಾಂಶ ಮರೆಗುಳಿತನ. ಅದೇ ಸಮಯ ಆತ್ಮ ವಿಶ್ವಾಸದಿಂದ ನಾನು ನೆನಪಿಟ್ಟು ಕೊಳ್ಳ ಬಲ್ಲೆ ಎಂದು ನೆನಪಿಟ್ಟುಕೊಳ್ಳ ಬೇಕಾದ್ದನ್ನು ಶ್ರದ್ಧೆಯಿಂದ, ಗಮನವಿಟ್ಟು ಕೇಳಿ, ಓದಿದರೆ ಖಂಡಿತಾ ನಿಮ್ಮ ನೆನಪು ನಿಮಗೆ ಕೈಗೆ ಕೊಡುವುದಿಲ್ಲ.
ಇದನ್ನು ಬರೆಯುತ್ತಿದ್ದಂತೆ ನನ್ನ ಹೆಂಡತಿಯ ಫೋನ್ ಬಂತು. ಯಾಕೆ ಫೋನ್ ಮಾಡಿದ್ದು ಎಂದು ಕೇಳಿದ್ದಕ್ಕೆ ಅವಳು ಕೊಟ್ಟ ಉತ್ತರ, ಅಯ್ಯೋ ಮರೆತೆ ಹೋಯಿತು ಯಾಕೆ ಕರೆದಿದ್ದು ಅಂತ, ನೀವು ಫೋನ್ ಇಡಿ, ನೆನಪಾದಾಗ ಆಮೇಲೆ ಮಾಡುತ್ತೇನೆ ಎಂದಳು. ಅಂದರೆ ಈ ಮರೆವು universal, ನನಗೆ ಮಾತ್ರ ತಗುಲಿ ಕೊಂಡ ಪ್ರಾರಬ್ದ ಅಲ್ಲ.
ಯಾರೀ “ಸೈತಾನ”?
ಮೊನ್ನೆ ಆಪ್ತ ಸಂಪದಿಗರೊಬ್ಬರು ಸೈತಾನನೊಂದಿಗಿನ ಜೊತೆ ಬಸ್ಸಿನಲ್ಲಿ ತಮಗೆ ಆದ ಒಂದು ಅನುಭವವನ್ನು ಬರೆದಿದ್ದರು. ಪ್ರಯಾಣದ ವೇಳೆ ಸಹಪ್ರಯಾಣಿಕರಾಗಿದ್ದ ಯಾರೋ ಅಪರಿಚಿತ ತಂದೆ-ಮಗಳ ನಡುವಿನ ಸಂವಾದವನ್ನು ಆಲಿಸಿ ತಂದೆ ಉಪಯೋಗಿಸಿದ ಸೈತಾನ್ ಪದದ ಬಗ್ಗೆ ದುಃಖಿತರಾಗಿ ತಮ್ಮ ಅಳಲನ್ನು ತೋಡಿಕೊಂಡಿದ್ದರು. ತಮ್ಮ ಇಷ್ಟ ದೇವರನ್ನು ಸೈತಾನ ಎಂದು ಕರೆದ ವ್ಯಕ್ತಿಯ ನಂಬುಗೆಯ ಬಗ್ಗೆ ರಂಗು ರಂಗಿನ ಕಾಮೆಂಟುಗಳೂ ಬಂದವು. ನಾನಂತೂ ಇದು ಶುದ್ಧ ಸುಳ್ಳು ಎಂದು ಜೇನುಗೂಡಿಗೆ ಕಲ್ಲು ಬೀಸಿದ್ದೇ ತಡ ಬಂದೆರಗಿದವು ದಂಡು. ನೆಚ್ಚಿನ ನಟನ autograph ಪಡೆಯಲು ಮುತ್ತಿಕ್ಕುವ ಅಭಿಮಾನಿಗಳಂತೆ. ಈ storm in a tea cup ತೆರನಾದ ವಿವಾದವನ್ನ ಎಬ್ಬಿಸಿದ ಸೈತಾನ್ ನನ್ನ ಹಿಂದೆಯೂ ಬಿದ್ದ ತನ್ನ ಬಗ್ಗೆ ಸಹಾ ಒಂದಿಷ್ಟು ಬರಿ ಎಂದು.
ಸೈತಾನ್ ಮತ್ತು ಶೈತಾನ್ ಇವೆರಡೂ ಒಂದೇ ಪದಗಳು, ಉಚ್ಛಾರ ಮಾತ್ರ ಬೇರೆ. ಅರಬ್ಬೀ ಮೂಲದ ಈ ಪದಗಳು ವಿವಿಧ ಸಂದರ್ಭಗಳಲ್ಲಿ ವಿವಿಧ ಅರ್ಥ ಬರುವ ರೀತಿಯಲ್ಲಿ ಬಳಸುತ್ತಾರೆ. satanic verses ಬರೆದ ರುಶ್ಡಿ ತನ್ನ ಲೇಖನಿಯಿಂದ ಹೊರಹೊಮ್ಮಿದ ಸೈತಾನನ ದೆಸೆಯಿಂದ ತನ್ನ ತಲೆಗೆ ಭಾರೀ ಮೊತ್ತದ ಬಹುಮಾನವನ್ನು ಕಟ್ಟಿಕೊಂಡ. ರುಶ್ಡಿ ಗೆ ತಗುಲಿಕೊಂಡ ಸೈತಾನನೇ ಕುಂಚವೀರ ಹುಸೇನನಿಗೂ ತಗುಲಿಕೊಂಡು ದೇಶಾಂತರ ಹೋಗಲು ಮಾಡಿದ್ದು. ನೋಡಿದಿರಾ ಸೈತಾನನ ಮಹಿಮೆಯನ್ನು. ವಿಕ್ರಮನ ಬೆಂಬಿಡದ ಭೇತಾಳನಂತೆ ಈತ ಕೂಡಾ.
ಮಕ್ಕಳು ತುಂಬಾ ತುಂಟತನ ಮಾಡಿದಾಗ ಎಂಥ ಸೈತಾನ ಹುಡುಗ ಅಪ್ಪ ಇವನು ಎಂದು ಮೂದಲಿಸುವುದನ್ನು ಕೇಳಿದ್ದೇನೆ. ಮಕ್ಕಳನ್ನು ಸೈತಾನ ಎಂದು ಕರೆಯಬಾರದು ಎಂದು ಹಿರಿಯರು ನಯವಾಗಿ ಗದರುವುದೂ ಇದೆ. ದೇವರು ಮನುಷ್ಯನನ್ನು ಸೃಷ್ಟಿಸುವ ನಿರ್ಣಯ ಮಾಡಿದಾಗ ಸಕಲ ದೇವದೂತ ಸಮೂಹ ದೇವರನ್ನು ಉದ್ದೇಶಿಸಿ ಹೇಳುತ್ತದೆ, ಪ್ರಭು, ನಿನ್ನನ್ನು ಆರಾಧಿಸಲು, ನಿನ್ನ ಆಜ್ಞೆಗಳನ್ನು ಶಿರಸಾ ಪಾಲಿಸಲು ನಾವಿರುವಾಗ ಈ ಮನುಷ್ಯನನ್ನು ಸೃಷ್ಟಿಸಿ ಭೂಲೋಕಕ್ಕೆ ಕಳಿಸಿ ದೊಡ್ಡ ಗಂಡಾಂತರಕ್ಕೆ ದಾರಿ ಮಾಡಿ ಕೊಟ್ಟಂತಾಗುತ್ತದೆ ಅಲ್ಲವೇ ಎಂದಾಗ ದೇವರು ಹೇಳುತ್ತಾನೆ, ನನ್ನ ಆಜ್ಞಾನುವರ್ತಿ ದಾಸರೇ, ನಿಮಗೆ ಅರಿವಿಲ್ಲದ್ದು ನನಗೆ ತಿಳಿದಿದೆ, ನಿಮ್ಮನ್ನೂ ಸಹಾ ನಾನೇ ಅಲ್ಲವೇ ಸೃಷ್ಟಿಸಿದ್ದು ಎಂದು ಹೇಳಿ ಮಣ್ಣಿನಿಂದ ಸೃಷ್ಟಿಸಿದ ಮನುಷ್ಯನಿಗೆ ಸಾಷ್ಟಾಂಗ ಮಾಡುವಂತೆ ಅಪ್ಪಣೆ ಕೊಡುತ್ತಾನೆ. ಸಮಸ್ತ ದೇವದೂತ ಸಮೂಹ ಕೂಡಲೇ ಮನುಷ್ಯನಿಗೆ ಸಾಷ್ಟಾಂಗ ಎರಗುತ್ತವೆ, ಒಬ್ಬನನ್ನು ಹೊರತು ಪಡಿಸಿ. ಅವನೇ ದೇವದೂತರ ನಾಯಕ ಇಬ್ಲಿಸ್. ಇಬ್ಲಿಸ್ ಹೇಳುತ್ತಾನೆ, ಪ್ರಭು, ನನ್ನನ್ನು ನೀನು ಸೃಷ್ಟಿಸಿದ್ದು ಹೊಗೆಯಿಲ್ಲದ ಅಗ್ನಿಯಿಂದ, ಜೇಡಿ ಮಣ್ಣಿನಿಂದ ಸೃಷ್ಟಿಸಿದ ಈ ಮನುಷ್ಯನಿಗೆ ನಾನು ಸಾಷ್ಟಾಂಗ ಎರಗಲು ನೀನು ಕೇಳುವುದು ಯಾವ ನ್ಯಾಯ ಎಂದು ತನ್ನ ಒಡೆಯ, ತನ್ನನ್ನು ಸೃಷ್ಟಿಸಿದ ಸಕಲ ಲೋಕಗಳ ಪ್ರಭುವಿಗೆ ಮರುತ್ತರ ನೀಡುತ್ತಾನೆ. ಕುಪಿತನಾದ ದೇವರು ಅವನನ್ನು ದೇವಲೋಕದಿಂದ ಅಟ್ಟುತ್ತಾನೆ. ಪ್ರಥಮ ಮಾನವ ಜೋಡಿ “ಆದಂ” ಮತ್ತು “ಹವ್ವಾ” (adam and eve) ರನ್ನು ಸಂಬೋಧಿಸುವ ದೇವರು ನೀವು ಸ್ವರ್ಗ ಲೋಕದಲ್ಲಿ ಬೇಕಾದ್ದನ್ನು ಮಾಡಿರಿ, ಸುಖಿಸಿ ಆದರೆ ಆ ವೃಕ್ಷದ ಫಲ ಮಾತ್ರ ತಿನ್ನಬೇಡಿ ಎಂದು ತಾಕೀತು ಮಾಡುತ್ತಾನೆ. ಈಗ ಆಗಮನವಾಗುತ್ತದೆ ಸ್ವರ್ಗಲೋಕದಿಂದ ಹೊರದಬ್ಬಲ್ಪಟ್ಟ “ಇಬ್ಲಿಸ್” ನದು. ನೀವೆಷ್ಟೆಲ್ಲ ರೀತಿಯ ಸುಖ ಅನುಭವಿಸುತ್ತಿರುವಾಗ ಈ ವೃಕ್ಷದ ಹಣ್ಣನ್ನು ತಿನ್ನಬೇಡಿ ಎಂದು ಪ್ರಭು ಹೇಳಲು ಏನು ಕಾರಣ, ನೀವು ತಿನ್ನಿ ಎಂದು ಅವರಿಗೆ ಆಮಿಷ ಒಡ್ಡುತ್ತಾನೆ. ಮನುಷ್ಯ ಚಂಚಲ, ಸ್ವರ್ಗದಲ್ಲಿ ಇಷ್ಟೆಲ್ಲಾ ಇದ್ದರೂ ಯಾವುದು ಪ್ರತಿಬಂಧಿಸಲ್ಪಟ್ಟಿದೆಯೋ ಅದನ್ನು ತಿನ್ನಬೇಕು. ಸರಿ ಆ ಫಲವನ್ನ ತಿಂದಿದ್ದೇ ತಡ ದೇವರು ಹೇಳುತ್ತಾನೆ, ಧಿಕ್ಕಾರಿಗಳಾದ ನೀವಿಬ್ಬರೂ ಸ್ವರ್ಗ ಬಿಟ್ಟು ತೊಲಗಿ, ಭೂಲೋಕಕ್ಕೆ ಹೋಗಿ ನೆಲೆಸಿ ಎಂದು ಅವರನ್ನು ಕಳಿಸುತ್ತಾನೆ. ಈ ಘಟನೆಗೆ ಆಮಿಷ ತೋರಿಸಿದ “ಇಬ್ಲಿಸ್” ಕಾರಣ ಮತ್ತು ಇವನನ್ನೇ ಸೈತಾನ್ ಎಂದೂ ಕರೆಯುತ್ತಾರೆ.
ಮುಸ್ಲಿಮರು ಏಕದೇವೋಪಾಸನೆಯಲ್ಲಿ ನಿರತರಾಗಿರುವಾಗಲೂ ಸೈತಾನ ಬಂದು ತನ್ನ ಕುಚೇಷ್ಟೆಗಳನ್ನು ತೋರಿಸುತ್ತಾನೆ ಎಂದು ನಂಬುಗೆ. ಹೇಗೆಂದರೆ, ಧ್ಯಾನ ನಿರತರಾಗಿದ್ದಾಗ ಅವರ ಮನಸನ್ನು ಇನ್ನೆಲ್ಲಿಗಾದರೂ ಸೆಳೆಯುವುದು, ನಮಾಜಿನ ಲಹರಿಯಲ್ಲಿ ಏರು ಪೇರುಂಟು ಮಾಡುವುದು, ಇಲ್ಲಸಲ್ಲದ ಆಲೋಚನೆಗಳನ್ನು ಬಿತ್ತುವುದು, ಈ ರೀತಿಯ ಕುಚೇಷ್ಟೆ ತೋರಿಸುತ್ತಾನೆ. ಅದಕ್ಕಾಗಿ ಆರಾಧನೆ ಆರಂಭದಲ್ಲಿ “ಅಊದು ಬಿಲ್ಲಾಹಿ ಮಿನ ಶೈತಾನಿ ರಜೀಮ್” ಎಂದು ಹೇಳಿಯೇ ನಮಾಜ್ ಆರಂಭಿಸುವುದು. ಈ ಸೂಕ್ತದ ಅರ್ಥ ” ಸೈತಾನನ ಚೇಷ್ಟೆಯಿಂದ ಅಲ್ಲಾಹನ ಅಭಯ ಅರಸುತ್ತೇನೆ” ಎಂದು. ಇಸ್ಲಾಮಿನಲ್ಲಿ ಕಡ್ಡಾಯ ಪ್ರಾರ್ಥನೆಗಳನ್ನು ಸಾಮೂಹಿಕವಾಗಿ ಮಾಡಬೇಕೆಂದು ನಿಯಮವಿದೆ. ತಮ್ಮ ಹಿಂದೆ ಸಾಲಾಗಿ ನಿಲ್ಲುವ ಆರಾಧಕರನ್ನು ಉದ್ದೇಶಿಸಿ ಇಮಾಂ ಹೇಳುತ್ತಾರೆ, ನೇರವಾಗಿ ನಿಲ್ಲಿ, ಇಬ್ಬರ ಮಧ್ಯೆ ಸೈತಾನನಿಗೆ ನಿಲ್ಲಲು ಅವಕಾಶ ಮಾಡಬೇಡಿ ಎಂದು. ಮನೆಯಲ್ಲಿ ಒಬ್ಬರೇ ನಮಾಜ್ ಮಾಡಿದ ನಂತರ ನೆಲದ ಮೇಲೆ ಹರಡುವ ಚಿಕ್ಕ ಕಂಬಳಿಯನ್ನು (prayer mat) ಮಡಚಿ ಇಟ್ಟು ಹೋಗುತ್ತಾರೆ ಸೈತಾನ ಬಂದು ಉಪಯೋಗಿಸಬಹುದು ಎಂದು ಹೆದರಿ. “ಸೈತಾನನ ಚೇಷ್ಟೆಯಿಂದ ಅಲ್ಲಾಹನ ಅಭಯ ಕೇಳುವ ಪುಟ್ಟ ಪ್ರಾರ್ಥನೆ ಮುಸ್ಲಿಮರ ನಾಲಗೆಯ ತುದಿಯಲ್ಲಿ ಯಾವಾಗಲೂ ಇರುತ್ತದೆ.
ಈ ಮೇಲಿನ ಸಂದರ್ಭದಲ್ಲಿ ಸೈತಾನ ಎಂದರೆ ಒಂದು ರೀತಿಯ distraction. ಶ್ರದ್ಧೆ ತಪ್ಪುವಂತೆ ಮಾಡುವುದು ಅವನ pastime.
ರಾತ್ರಿ ಮಕ್ಕಳು ಕಾಲು ತೊಳೆಯದೆ ಮಲಗಲು ಹೋದರೆ ಇದ್ದರೆ ತಾಯಿ ಗದರಿಸುತ್ತಾಳೆ , ನಿಮ್ಮ ಕಾಲುಗಳನ್ನು ಸೈತಾನ ಬಂದು ನೆಕ್ಕುತ್ತಾನೆ ಎಂದು. ಭಯದಿಂದ ಮಕ್ಕಳು ತೆಪ್ಪಗೆ ಬಚ್ಚಲ ಮನೆಯ ಕಡೆ ಪ್ರಯಾಣ ಬೆಳೆಸುತ್ತಾರೆ. ಮನಸ್ಸಿಗೆ ಯಾವುದಾದರೂ ವಿಷಯದಲ್ಲಿ ಅನುಮಾನ ತೋರಿದಾಗ, ಜನರ ಬಗ್ಗೆ ಅನಾವಶ್ಯಕ ಗುಮಾನಿ ಮೂಡಿದಾಗಲೂ ದೂರುವುದು ಸೈತಾನನನ್ನೇ.
ವಿವಾಹಿತರಾಗದ ಹೆಣ್ಣು ಗಂಡು ಏಕಾಂತದಲ್ಲಿದ್ದರೆ ಮೂರನೆಯ ವ್ಯಕ್ತಿಯಾಗಿ ಹಾಜರಿರುತ್ತಾನಂತೆ ಸೈತಾನ. ಸೈತಾನ ಬಂದು ಅವರೀರ್ವರ ಅಥವಾ ಅವರಲ್ಲೊಬ್ಬರ ಮನಸ್ಸಿನಲ್ಲಿ ಕೊಳಕು ಆಲೋಚನೆ ಬಿತ್ತುತ್ತಾನೆ ಎಂದು ವಿಧ್ವಾಂಸರು ಹೇಳುತ್ತಾರೆ. ಇದರರ್ಥ ಏನೆಂದರೆ ಅನಾವಶ್ಯಕವಾಗಿ ವಿರುದ್ಧ ಲಿಂಗದವರು ಒಟ್ಟಿಗೆ ಸೇರಬಾರದು ಎಂದು.
ಈ ಮೇಲಿನ ಉದಾಹರಣೆಯಲ್ಲಿ ಸೈತಾನ ಮಾಡುವ ಕೆಲಸ ಮನಸ್ಸಿನಲ್ಲಿ ಲಾಲಸೆ ಉಂಟು ಮಾಡುವುದು.
ಭೂತ, ಪ್ರೇತ, ಪಿಶಾಚಿ, ಮೋಹಿನಿ, ದೆವ್ವಾದಿಗಳಿಗೂ ಸೈತಾನ ಎಂದು ಕರೆಯುತಾರೆ. ವರುಷಗಳ ಹಿಂದಿನ ಮಾತು. ಹಳ್ಳಿಯೊಂದರಲ್ಲಿದ್ದ ನಮ್ಮ ತೆಂಗಿನ ತೋಟದಲ್ಲಿ ಒಂದು ಕೇರಳ ಮೂಲದ ಕುಟುಂಬ ತೋಟವನ್ನು ಕಾಯುವ ಕೆಲಸ ಮಾಡುತ್ತಿತ್ತು. ಪ್ರತೀ ರಂಜಾನ್, ಬಕ್ರೀದ್ ಹಬ್ಬಗಳಿಗೆ ಆ ಮನೆಯ ಯಜಮಾನ ಪಟ್ಟಣದಲ್ಲಿದ್ದ ನಮ್ಮ ಮನೆಗೆ ಬರುತ್ತಿದ್ದರು. ಅವರು ಹಿಂದಿರುಗುವಾಗ ನಮ್ಮಮ್ಮ ಅವರ ಮನೆಯವರಿಗೆಂದು ಬಿರಿಯಾನಿ ಕಟ್ಟಿ ಕೊಡುತ್ತಿದ್ದರು. ಒಮ್ಮೆ ಈ ರೀತಿ ಬುತ್ತಿಯನ್ನು ಸೈಕಲ್ ಕ್ಯಾರಿಯರ್ ಮೇಲೆ ಇಟ್ಟುಕೊಂಡು ಆ ವ್ಯಕ್ತಿ ತಮ್ಮ ಮನೆಗೆ ಹೋಗುತ್ತಿದ್ದರು. ಅವರು ವಾಸಿಸುತ್ತಿದ್ದ ಸ್ಥಳ ನಿರ್ಜನ. ಹೋಗುವ ದಾರಿಯಲ್ಲಿ ಸಿಗುವ ರೈಲ್ವೆ ಕ್ರಾಸಿಂಗ್ ದಾಟಿ ಇಳಿಜಾರಿನಲ್ಲಿ ಸರಾಗವಾಗಿ ಹೋಗುತ್ತಿದ್ದ ಸೈಕಲ್ ಅನ್ನು ಯಾರೋ ಹಿಡಿದು ಹಿಂದಕ್ಕೆಳೆದ ಅನುಭವ ಅವರಿಗೆ. ಹಿಂದಿರುಗಿ ನೋಡಿದಾಗ ಯಾರೂ ಕಾಣಲಿಲ್ಲ. ಏನೋ ಭ್ರಮೆ ಇರಬೇಕು ಎಂದು ಮತ್ತೊಮ್ಮೆ ಸೈಕಲ್ ಹತ್ತಿ ಮುಂದಕ್ಕೆ ಹೋಗಲು ಹೊರಟಾಗ ಅದೇ ರೀತಿಯ ಅನುಭವ. ಹೀಗೆ ಮೂರ್ನಾಕು ಸಲ ಆದ ಕೂಡಲೇ ಬೇಸತ್ತ ಅವರು ಇದು ಸೈತಾನನ ಆಟ ಇರಬೇಕು, ಬಿರಿಯಾನಿ ತಿನ್ನಲು ಮನಸ್ಸಾಗಿದೆ ಸೈತಾನನಿಗೆ, ಅದಕ್ಕೇ ಎಳೆಯುತ್ತಿದೆ ಸೈಕಲ್ ಅನ್ನು ಎಂದು ಒಂದು ಡಬ್ಬದಷ್ಟು ಬಿರಿಯಾನಿಯನ್ನು ರಸ್ತೆಗೆ ಬಿಸಾಡಿದ ನಂತರವೇ ಸೈಕಲ್ ಸರಾಗವಾಗಿ ಓಡಿದ್ದು. ನಮಗೆ ಅಷ್ಟೇನೂ ರುಚಿಕರವಾಗಿ ಕಾಣದಿದ್ದರೂ ಸೈತಾನನಿಗಾದರೂ ಇಷ್ಟವಾಯಿತಲ್ಲ ನಮ್ಮಮ್ಮನ ಬಿರಿಯಾನಿ ಎಂದು ಈ ಕತೆ ಕೇಳಿದ ನಾವು ಅಂದು ಕೊಂಡು ಭಯದಿಂದ ಮುದುಡಿ ಮಲಗಿದ್ದೆವು ರಾತ್ರಿ.
ಸೈತಾನ ಎಂದರೆ ಪ್ರೇತ ಎಂದೂ ಹೇಳಲಾಗುತ್ತದೆ. ಒಂದಾನೊಂದು ಕಾಲದಲ್ಲಿ ಉಕ್ಕಿನ ಕಾರ್ಖಾನೆಯ ಹತ್ತಿರ ಇದ್ದ ನನ್ನ ಅಜ್ಜಿಯ ಮನೆಯಲ್ಲಿ ಸೈತಾನನ ಹಾವಳಿ ಇತ್ತಂತೆ. ತಡ ರಾತ್ರಿ ತನಕ ನನ್ನ ಅಜ್ಜ ರೇಡಿಯೋ ಕೇಳುತ್ತಿದ್ದರು. ಮಲಗಲು ಹೋದ ನಂತರ ಸೈತಾನ ಬಂದು ಮತ್ತೊಮ್ಮೆ ರೇಡಿಯೋ ಆನ್ ಮಾಡುತ್ತಿದ್ದನಂತೆ. ಮಾಡುತ್ತಿದ್ದನಂತೆ? ಮಾಡುತ್ತಿದ್ದಳಂತೆ ಏಕಾಗಬಾರದು? ಚಂಡಮಾರುತಗಳಿಗೆ ಸ್ತ್ರೀಯರ ಹೆಸರೇ ಏಕೆ ಎಂದು ಪ್ರತಿಭಟಿಸಿದ ನಾರೀಮಣಿಗಳ ಥರ ನಾವೂ ಪ್ರತಿಭಟಿಸಬೇಕು ನೋಡಿ ಸೈತಾನನ ಪುಲ್ಲಿಂಗ ಪ್ರಯೋಗದ ಬಗ್ಗೆ.
ಒಂದು ಸಮುದಾಯಕ್ಕೆ ಸೇರಿದವರ ಇಷ್ಟ ದೇವರನ್ನು ಸೈತಾನ ಎಂದು ಜರೆದ ತಂದೆ ಮಗಳ ಸಂವಾದ ಆಲಿಸಿ ಅಳಲನ್ನು ತೋಡಿಕೊಂಡ ಸಂಪದಿಗರಿಗೆ ಸೈತಾನನ ಪ್ರಭಾವದಿಂದ ತಪ್ಪು ಗ್ರಹಿಕೆ ಆಗಿರಲಿಕ್ಕೂ ಸಾಕು. ಏಕೆಂದರೆ ಕೇಳಿದ್ದೆಲ್ಲಾ ಸತ್ಯವೇ ಆಗ ಬೇಕೆಂದಿಲ್ಲವಲ್ಲ. “ನೋಡಿದ್ದು ಸುಳ್ಳಾಗಬಹುದು, ಕೇಳಿದ್ದು ಸುಳ್ಳಾಗಬಹುದು, ನಿಧಾನಿಸಿ ಯೋಚಿಸಿದಾಗ, ನಿಜವು ತಿಳಿವುದು” ಎನ್ನುವ ನೀತಿ ಬೋಧನೆಯ ಹಾಡೇ ಇಲ್ಲವೇ? ಬಹುಶಃ ಬೇರಾವುದಾದರೂ ವಸ್ತುವನ್ನು ತೋರಿಸಿ ಸೈತಾನ ಎಂದು ತಂದೆ ತನ್ನ ಪ್ರೀತಿಯ ಮಗಳಿಗೆ ಹೇಳುತ್ತಿರುವಾಗ coincidentally ಅದೇ ಸಂದರ್ಭದಲ್ಲಿ ದೇವರ ಮೆರವಣಿಗೆ ಬಂದಿರಬೇಕು. possibilities are endless, you see? ಇದೂ ಒಂದು ರೀತಿಯ ಸೈತಾನನ ಆಟವೇ ಆಗಿರಬೇಕು, ಜನರ ನಡುವೆ ಸಂಶಯದ ಬೀಜ ಬಿತ್ತುವುದು. ಹಾಗೇನಾದರೂ ಆ ವ್ಯಕ್ತಿ ಹೇಳಿದ್ದು ಅವರ ದೇವರ ಬಗ್ಗೆಯೇ ಆಗಿದ್ದರೂ ಅದನ್ನು ಅವರಿಗೆ ಅರ್ಥವಾಗುವ ಹಾಗೆ ತಿಳಿ ಹೇಳಬೇಕು, ಎಲ್ಲಾ ಜನರ ನಂಬಿಕೆಗಳನ್ನೂ, ದೇವರುಗಳನ್ನೂ ಗೌರವಿಸಬೇಕಪ್ಪಾ ದೊರೆ ಎಂದು. ಅದಕ್ಕೇ ಅಲ್ಲವೇ ಮನುಷ್ಯನಿಗೆ ದೇವರು ಮಾತು ಎನ್ನುವ faculty ದಯಪಾಲಿಸಿದ್ದು? ಪ್ರಾಣಿಗಳಿಗಿಲ್ಲದ ಈ ಅದ್ಭುತ ಸೌಲಭ್ಯವನ್ನ ಆ ಕರುಣಾಮಯನಾದ ದೇವರು ಮನುಷ್ಯನಿಗೆ ದಯಪಾಲಿಸಿರುವಾಗ ಅದನ್ನು ಯಥೇಚ್ಚವಾಗಿ ಉಪಯೋಗಿಸಿಲ್ಲದಿದ್ದರೆ ನಾಳೆ “ಮಾತು” ಅನ್ನುವ ಪ್ರಯೋಗವನ್ನೇ ಮನುಷ್ಯ ಮರೆತು ಬಿಡಬಹುದು (ಸಂಸ್ಕೃತ ಭಾಷೆಯನ್ನೂ ಹೆಚ್ಚೂ ಕಡಿಮೆ ಕಳೆದುಕೊಂಡಂತೆ). ಸಂವಾದ ಬರೀ ಜಗಳ ಕಾಯಲು ಮಾತ್ರವಲ್ಲದೆ ಜನರಿಗೆ ತಿಳಿ ಹೇಳಲು, ವಿವರಿಸಲು, ಉಪದೇಶಿಸಲು, ಒಳ್ಳೆಯ ಮಾತುಗಳನ್ನಾಡಲು ಉಪಯೋಗಿಸಿದಾಗ ಎಲ್ಲಾ ರೀತಿಯ ಸಂಶಯಗಳೂ ಪರಿಹಾರ ಕಾಣುವುವು. ಮಾತೇ ಆಡದಿದ್ದರೆ ಯಾರೋ ಹೇಳಿದ ಸುಳ್ಳುಗಳನ್ನು ಸತ್ಯ ಎಂದು ನಂಬಿ, ಕಲ್ಪನಾ ಲೋಕದಲ್ಲಿ ವಿಹರಿಸುತ್ತಾ ಬೇಡದ ಆಲೋಚನೆ, ಕಲ್ಪನೆ ಮಾಡಿ ಕೊಂಡು ಅನುಮಾನಗಳನ್ನೂ, ಸಂಶಯಗಳನ್ನೂ ಎದೆಯಲ್ಲಿ ಇಟ್ಟು ಕೊಂಡು ನಡೆದರೆ ಆರೋಗ್ಯಕ್ಕೂ, ಚಿತ್ತ ಸ್ವಾಸ್ಥ್ಯಕ್ಕೂ ಒಳ್ಳೆಯದಲ್ಲ ಎಂದು ಹಿರಿಯರು ಹೇಳುವರು.
ಬನ್ನಿ ಮಾತನಾಡೋಣ, ಸೈತಾನ್ ಹತ್ತಿರ ಸುಳಿಯೋದಿಲ್ಲ, ಏಕೆಂದರೆ ಸೈತಾನರು ಮನೆ ಮಾಡಿಕೊಂಡಿರುವುದು ಸ್ಮಶಾನದಂಥ ನಿರ್ಜನ ಸ್ಥಳಗಳಲ್ಲೂ, (scheming empty minds) ಬರಿದಾದ ಮನಸ್ಸಿನಲ್ಲೂ ಅಲ್ಲವೇ?
ನೋಡಿ ಸೈತಾನನ ಕೆಲಸ, ನಾನು ನಿಜವಾಗಿ ಬರೆಯಲು ಹೊರಟಿದ್ದು ಈಗ ನನ್ನ ಕೈಯಲ್ಲಿರುವ “ಕವಲು” ಕಾದಂಬರಿಯ ಬಗ್ಗೆ, ಆದರೆ ಗೀಚಿದ್ದು ಉಲ್ಟಾ ಕಾಲುಗಳ ಸೃಷ್ಟಿಗಳ ಬಗ್ಗೆ.
ವ್ಯಂಗ್ಯ ಚಿತ್ರ ಕೃಪೆ: joel roi aronowitz
ಜಿಹಾದ್ ಎಂದರೇನು?
ನಮ್ಮಲ್ಲಿ ಧಾರ್ಮಿಕ ವಿದ್ಯೆಗಾಗಿ “ಮದ್ರಸಾ” ಗಳಿಗೆ ಮಕ್ಕಳನ್ನು ಕಳಿಸುವುದಿದೆ. ಅಲ್ಲಿ ಕುರಾನ್ಅನ್ನು ಉರು ಹೊಡೆಯುವುದು, ನಮಾಜ್ ಯಾವ ರೀತಿ ಮಾಡುವುದು ಮತ್ತು ಇತರೆ ಧಾರ್ಮಿಕ ಸಂಗತಿಗಳನ್ನು ಹೇಳಿ ಕೊಡುತ್ತಾರೆ. ಮದರಸಾ ಶಿಕ್ಷಣ ಪಡೆದ ನಾನು ಜಿಹಾದ್ ಪದದ ಕುರಿತು ಯಾರ ಬಾಯಲ್ಲೂ ಕೇಳಿರಲಿಲ್ಲ. ಪ್ರಪ್ರಥಮವಾಗಿ ಜಿಹಾದ್ ಎನ್ನುವ ಪದ ಕೇಳಿದ್ದು ೨೦೦೧ ರಲ್ಲಿ. ಅಮೆರಿಕೆಯ ಮೇಲೆ ನಡೆದ ಧಾಳಿಯಲ್ಲಿ ಅಮೇರಿಕಾ ಮತ್ತು ಇತರೆ ಪಾಶ್ಚಾತ್ಯ ರಾಷ್ಟ್ರಗಳ ರಾಜಕೀಯ ಪಂಡಿತರುಗಳು ಉಪಯೋಗಿಸಿದ ಪದದಿಂದ ನನಗೆ ಪ್ರಥಮವಾಗಿ ಜಿಹಾದ್ ಪದದ ಪರಿಚಯವಾಯಿತು. ಇನ್ನು ಮುಸ್ಲಿಮರಿಗೆ ಧಾರ್ಮಿಕ ಆಚರಣೆಗಳ ರೀತಿ ಜಿಹಾದ್ ಅನ್ನೂ ಹೇಳಿ ಕೊಟ್ಟು, ಜಿಹಾದ್ ಅಂದರೆ ಯುದ್ಧ, ಸಿಕ್ಕ ಸಿಕ್ಕವರನ್ನು ಕೊಲ್ಲುವುದು ಎಂದಿದ್ದರೆ ವಿಶ್ವ ಈ ರೀತಿಯಲ್ಲಿ ಖಂಡಿತಾ ಇರುತ್ತಿರಲಿಲ್ಲ. ನನಗೂ ಈ ಪದದ ಬಗ್ಗೆ ಅರಿಯಲು ಇಷ್ಟೊಂದು ವರ್ಷಗಳು ಬೇಕಿರಲಿಲ್ಲ. ೧೭೦ ಕೋಟಿ ಮುಸ್ಲಿಮ್ ಜನಸಂಖ್ಯೆಯಿರುವ ಪ್ರಪಂಚದಲ್ಲಿ ಈ ತೆರನಾದ ನಿರರ್ಥಕ ಹಿಂಸೆಯಲ್ಲಿ ತೊಡಗಿಸಿಕೊಂಡವರು ಕೆಲವೇ ಲಕ್ಷಗಳಷ್ಟು ದುರುಳರು, ಧರ್ಮ ದ್ರೋಹಿಗಳು. ಬಹುಪಾಲು ಮುಸ್ಲಿಮರು ಎಲ್ಲರಂತೆ ದುಡಿಯುತ್ತಾ, ತಮ್ಮ ಕುಟುಂಬದ ಶ್ರೇಯಸ್ಸಿಗಾಗಿ ಶ್ರಮ ಪಡುತ್ತಿರುವವರು. ಅವರಿಗೆ ಹಿಂಸೆ ಬೇಕಿಲ್ಲ. ಅವರಿಗೆ ಬೇಕಿರುವುದು ರೋಟಿ, ಕಪಡಾ, ಔರ್ ಮಕಾನ್. ತಿನ್ನಲು ಆಹಾರ, ಉಡಲು ಬಟ್ಟೆ, ಮತ್ತು ತಲೆಯ ಮೇಲೊಂದು ಸೂರು.
ಆಸ್ಟ್ರೇಲಿಯಾದಲ್ಲಿ ಜಿಹಾದ್ ನ ಬಗ್ಗೆ ಒಂದು ಸಮ್ಮೇಳನದಲ್ಲಿ ಮಾತನಾಡಿದ ಇಸ್ಲಾಮೀ ವಿಧ್ವಾಂಸರು ಹೇಳಿದ್ದು, ಜಿಹಾದ್ ಎಂದರೆ ಶ್ರಮ ಎಂದು ಹೇಳುತ್ತಾ ಒಂದು ಒಳ್ಳೆಯ ಸುಸಂಸ್ಕೃತ ಸಮಾಜ ಕಟ್ಟಲು ವಿಶ್ವದ ಎಲ್ಲಾ ದೇಶಗಳ ಥರಾ ಆಸ್ಟ್ರೇಲಿಯಾ ದೇಶದ ಸರಕಾರ ಸಹ ಜಿಹಾದ್ ಇಲಾಖೆಗಳನ್ನು ಹೊಂದಿದೆ, ಅದೆಂದರೆ ಗೃಹ ಅಥವಾ ರಕ್ಷಣಾ ಇಲಾಖೆ, ಕುಟುಂಬ ಕಲ್ಯಾಣ ಇಲಾಖೆ ಮತ್ತು ವಿದ್ಯಾ ಇಲಾಖೆ. ಅದರ ಅರ್ಥ ಸಮಾಜದ ರಕ್ಷಣೆ, ಒಳಿತು ಮತ್ತು ಉನ್ನತಿಗಾಗಿ ಜನ ನೇಮಿಸಿದ, ಆರಿಸಿದ ಸರಕಾರ ಪರಿಶ್ರಮ ಪಡುವುದು ಎಂದು.
ಜಿಹಾದ್ ಪದದ ಮೂಲ “ಜಹ್ದ್” ಎನ್ನುವ ಅರಬ್ ಪದದಿಂದ. ಅದರ ಅರ್ಥ ಶ್ರಮ ವಹಿಸುವುದು. ಒಬ್ಬ ದುಶ್ಚಟ ಬಿಡಲು, ಕುಡಿತ ನ್=ಬಿಡಲು , ಜೂಜಾಟ ಬಿಡಲು ಪರಿಶ್ರಮಿಸುವ ಹಾಗೆಯೇ ಜಿಹಾದ್ ಎನ್ನುವುದು ಸಹ ಒಳ್ಳೆಯ ನಡತೆಗೆ ಒಬ್ಬ ಮಾಡುವ ಪರಿಶ್ರಮ. ಮೇಲೆ ಹೇಳಿದ ಮೂಲ ಪದದಿಂದ ಬಂದ ಮತ್ತೆರಡು ಪದಗಳೆಂದರೆ ಇಜ್ತಿಹಾದ್, ಮತ್ತು ತಹಜ್ಜುದ್.
ಇಜ್ತಿಹಾದ್ ಎಂದರೆ ಜ್ಞಾನಾರ್ಜನೆ ಎಂದು. ಈ ಇಜ್ತಿಹಾದ್ ನ ಪರಿಣಾಮವೇ ಒಂದು ಸಾವಿರ ವರ್ಷಗಳಿಗೂ ಮೊದಲು ಬಾಗ್ದಾದ್, ಕೈರೋ ಮತ್ತು ಡಮಾಸ್ಕಸ್ ನಗರಗಳಲ್ಲಿ ವಿಶ್ವವಿಖ್ಯಾತ ವಿಶ್ವ ವಿದ್ಯಾಲಯಗಳು ಸ್ಥಾಪಿತ ಗೊಂಡಿದ್ದು ಮತ್ತು ಅಲ್ಲಿಂದಲೆ ಅಂಧಕಾರದಲ್ಲಿದ್ದ ಅಇರೋಪ್ಯ ದೇಶಗಳಿಗೆ ಜ್ಞಾನ ಹರಡಿದ್ದು.
“ಇಜ್ತಿಹಾದ್” ನ ಪರಿಣಾಮವೇ ಇರಬೇಕು ಹಿಂದೂ ವೇದಗಳನ್ನು ಮುಘಲ್ ಚಕ್ರವರ್ತಿ ಷಾಜಹಾನನ ಮಗ “ದಾರಾ ಶಿಕೋ” ಸಂಸ್ಕೃತದಿಂದ ಪರ್ಷಿಯನ್ ಭಾಷೆಗೆ ಭಾಷಾಂತರಿಸಿ ವಿಶ್ವಕ್ಕೆ ಪರಿಚಯಿಸಿದ್ದು. ಆಗಲೇ ವೇದಗಳ ಸೊಗಸು ವಿಶ್ವಕ್ಕೆ ತಿಳಿದಿದ್ದು, ಅದರ ಕಂಪು ಪಸರಿದ್ದು.
“ತಹಜ್ಜುದ್: ಎಂದರೆ ಏಕಾಂತದ ಆರಾಧನೆ: ಗಾಢ ನಿದ್ದೆಯಿಂದ ರಾತ್ರಿ ಎಚ್ಚರವಾದರೆ ಕೂಡಲೇ ಎದ್ದು ನಮಾಜ್ ಮಾಡಬೇಕೆಂದು ನಿಯಮವಿದೆ. ಆ ನಮಾಜ್ ಕಡ್ಡಾಯವಲ್ಲ, ಆದರೆ ಬಹಳಷ್ಟು ಜನ ಈ ತಹಜ್ಜುದ್ ನಮಾಜ್ ಮಾಡುತ್ತಾರೆ. ಏಕೆಂದರೆ ನೀರವ ರಾತ್ರಿಯಲ್ಲಿ ಇಡೀ ವಿಶ್ವ ಗಾಢ ನಿದ್ದೆಯಲ್ಲಿರುವಾಗ ತನ್ನನ್ನು ಸೃಷ್ಟಿಸಿದ ಪ್ರಭುವನ್ನು ನೆನೆದು ಸಾಷ್ಟಾಂಗ ಮಾಡಿದರೆ ಅವನ ಪ್ರಾರ್ಥನೆಗೆ ಉತ್ತರ ಸಿಗುವುದಲ್ಲದೆ ಅವನು ದೇವರಿಗೆ ತೀರಾ ಹತ್ತಿರದವನಾಗುತ್ತಾನೆ ಎನ್ನುವ ನಂಬಿಕೆಯಿಂದ.
ಈಗ ನನ್ನ ಈ ಬರಹವನ್ನ ಅತ್ಯಂತ ಸಂಯಮದಿಂದ ಯಾವುದೇ ಆವೇಶಕ್ಕೆ ಒಳಗಾಗದೆ ನೀವು ಓದುತ್ತಿದ್ದರೆ ನೀವು ಜಿಹಾದ್ ಮಾಡುತ್ತಿದ್ದೀರಿ ಎಂದರ್ಥ. ಅಂದರೆ ಕಾತುರತೆಯನ್ನು ಹತ್ತಿಕ್ಕಿ ಶಾಂತರಾಗಿ ಸಂಯಮದಿಂದ ಮುಂದೆ ಬರೆದಿದ್ದನ್ನು ಓದುವ, ನೀವು ಮಾಡುವ ಯತ್ನ ಅಥವಾ ಪರಿಶ್ರಮ, ಇದೇ ನಿಜವಾದ ಜಿಹಾದ್ ನ ಅರ್ಥ.
ಈ ಮೇಲಿನ ವಿಶ್ಲೇಷಣೆ ನೋಡಿದಾಗ ಜಿಹಾದ್ ಪದಕ್ಕೂ ಹಿಂಸೆ, ಭಯೋತ್ಪಾದನೆಗೂ ಯಾವುದೇ ರೀತಿಯ ಸಂಬಂಧವಿಲ್ಲ ಎಂದು ನಮಗೆ ತಿಳಿಯುತ್ತದೆ. “ಜುಹ್ದ್” ಒಬ್ಬ ವ್ಯಕ್ತಿ ತನ್ನ ವ್ಯಕ್ತಿತ್ವವನ್ನೂ ಕೌಶಲ್ಯವನ್ನೂ, ಉತ್ತಮ ಪಡಿಸಿ ಕೊಳ್ಳಲು ಮಾಡುವ ಪ್ರಾಮಾಣಿಕ ಯತ್ನ, “ಇಜ್ತಿಹಾದ್” ಎಂದರೆ ಆ ಪ್ರಾಮಾಣಿಕ ಯತ್ನದ ಕಡೆ ಜ್ಞಾನದ ಸಹಾಯ ಪಡೆಯುವುದು ಮತ್ತು ತನ್ನ ಪರಿಶ್ರಮ ಮತ್ತು ಜ್ಞಾನಾರ್ಜನೆಯ ಅನ್ವೇಷಣೆಯಲ್ಲಿ ತನ್ನನ್ನು ಸೃಷ್ಟಿಸಿದ ತನ್ನ ಭಗವಂತನ ಸಹಾಯ ಯಾಚಿಸುವುದು ಏಕಾಂತದ ಆರಾಧನೆಯಾದ ” ತಹಜ್ಜುದ್” ಮೂಲಕ. ಹಾಗಾದರೆ ಯುದ್ಧಕ್ಕೆ, ಹೋರಾಟಕ್ಕೆ ಅರಬ್ಬೀ ಏನೆಂದು ಕರೆಯುತ್ತಾರೆ?
ಜಿಹಾದ್ ಎಂದರೆ ಯುದ್ಧ ಹಿಂಸೆ ಮಾತ್ರ ಅಲ್ಲ ಎಂದಾದರೆ ಯುದ್ಧ ಮತ್ತು ಈ ತೆರನಾದ ಸ್ವರಕ್ಷಣೆಯ ಹೋರಾಟಕ್ಕೆ “ಹರ್ಬ್” ಮತ್ತು “ಕತ್ಲ್” ಎಂತಲೂ ಕರೆಯತ್ತಾರೆ. “ಹರ್ಬ್” ಎಂದರೆ ಯುದ್ಧ. “ಕತ್ಲ್” ಎಂದರೆ ಕೊಲೆ ಎಂದು. (ಹಿಂದೀ ಮತ್ತು ಉರ್ದು ಭಾಷೆಯಲ್ಲಿ ಕೂಡಾ ಕತ್ಲ್ ಅಂದರೆ ಕೊಲೆ ಎಂದೂ, ಕಾತಿಲ್ ಎಂದರೆ ಕೊಲೆಗಾರ ಎಂದೂ ಕರೆಯುತ್ತಾರೆ).
ಹಾಗಾದರೆ ಮಾಧ್ಯಮಗಳು ಮತ್ತು ಇಸ್ಲಾಂ ಟೀಕಾಕಾರ ರಿಗೆ ಈ ವಿವರಣೆ ಆಗಲಿ, ಅರಬ್ಬೀ ವ್ಯಾಕರಣದ ಈ ಅಂಶಗಳಾಗಲಿ ತಿಳಿದಿಲ್ಲ ಎಂದಲ್ಲ. ಇಸ್ಲಾಮನ್ನು ದೂಷಿಸುವ ಪರಿಪಾಠ ಇಂದು ನಿನ್ನೆಯದಲ್ಲ. ಕ್ರೈಸ್ತರ ಮೊದಲ ಧರ್ಮ ಯುದ್ಧ ದ (crusade) ನಂತರ ಮತ್ತು ಎರಡನೇ ಧರ್ಮ ಯುದ್ಧದಲ್ಲಿ ಇಂಗ್ಲೆಂಡಿನ ರಾಜ richard the lion heart ಮುಸ್ಲಿಮರ ವಿರುದ್ಧ ನಡೆದ ಜೆರುಸಲೆಂ ಕದನದಲ್ಲಿ ಸೋತ ನಂತರ ಆರಂಭ ಗೊಂಡ ಈ wittch hunting and slandering campaign ನಿರಂತರವಾಗಿ ನಡೆದುಕೊಂಡು ಬಂದು ಸೆಪ್ಟಂಬರ್ ಧಾಳಿಯ ನಂತರ ಆಧುನಿಕ ರೂಪ ಪಡೆದುಕೊಂಡಿತು.
ಜಿಹಾದ್ ಅಂದರೆ ಯುದ್ಧ ಅಲ್ಲವೇ ಅಲ್ಲ ಎಂತಲೋ? ಸ್ವರಕ್ಷಣೆಗೆ ರಾಷ್ಟ್ರಗಳು ಯುದ್ಧ ಸಾರಿವೆ, ಅವನ್ನು ಜಿಹಾದ್ ಎಂದೂ ಕರೆಯಲಾಗಿದೆ. ಆದರೆ ಕಂದಹಾರದ, ಪಾಕಿಸ್ತಾನದ ಗುಡ್ಡ ಗಾಡಿನಲ್ಲಿ ಅವಿತುಕೊಂಡು ನಮ್ಮ ಮೇಲೆ ಮತ್ತು ಅಲ್ಲಿನ ಮುಗ್ಧ ಜನರ ಮೇಲೆ ಆಕ್ರಮಣ ನಡೆಸಿ ರಕ್ತ ಪಾತ ಎಸಗುವ ಮತಾಂಧರು ಜಿಹಾದ್ ಅಲ್ಲ ಮಾಡುತ್ತಿರುವುದು. ಧರ್ಮದ್ರೋಹದ, ಅಮಾನವೀಯ ಕೃತ್ಯ.
ಇಸ್ಲಾಮೀ ರಾಜಕೀಯ ಶಾಸ್ತ್ರದಲ್ಲಿ ಎರಡು ರೀತಿಯ ರಾಷ್ಟ್ರ ಸಮೂಹಗಳ ಉಲ್ಲೇಖವಿದೆ. ಒಂದು, “ದಾರುಲ್ ಹರ್ಬ್”, ಮತ್ತೊಂದು “ದಾರುಲ್ ಇಸ್ಲಾಮ್”. ದಾರುಲ್ ಹರ್ಬ್ ಎಂದರೆ ಶತ್ರು ರಾಷ್ಟ್ರ. ಕಾರಣವಿಲ್ಲದೆ ಕಾಲು ಕೆರೆದು ಜಗಳಕ್ಕೆ ನಿಲ್ಲುವ ಪಾಕಿಸ್ತಾನ ಮತ್ತು ಚೀನಾ ದೇಶಗಳಂತೆ. ಇಂಥ ರಾಷ್ಟ್ರಗಳು ದಾರುಲ್ ಹರ್ಬ್ ವ್ಯಾಖ್ಯಾನಕ್ಕೆ ಬರುತ್ತವೆ. ದಾರುಲ್ ಇಸ್ಲಾಂ ಎಂದರೆ ಮುಸ್ಲಿಂ ರಾಷ್ಟ್ರ. ಮುಸ್ಲಿಂ ರಾಷ್ಟ್ರ ಮಾತ್ರವಲ್ಲ ಇಸ್ಲಾಮನ್ನು ಗೌರವಿಸಿ, ಆದರಿಸಿ ಮುಸ್ಲಿಮರ ಆರಾಧನೆಗೆ ಅನುಕೂಲ ಮಾಡಿಕೊಡುವ, ಮಸೀದಿ, ಮದ್ರಸಗಳನ್ನು ಕಟ್ಟಲು ಸಹಾಯ ಮಾಡುವ, ಸರಿಸಮನಾದ ಹಕ್ಕುಗಳನ್ನೂ ನೀಡಿ ಕಾಳಜಿ ವಹಿಸುವ ಮುಸ್ಲಿಮೇತರ ರಾಷ್ಟ್ರವೂ ದಾರುಲ್ ಇಸ್ಲಾಂ ವ್ಯಾಖ್ಯಾನದ ಅಡಿಗೆ ಬರುತ್ತದೆ. ನಮ್ಮ ಭವ್ಯ ಭಾರತ ಈ ರಾಷ್ಟ್ರದ ವ್ಯಾಖ್ಯಾನಕ್ಕೆ ಒಳಪಡುತ್ತದೆ. ಇಲ್ಲಿ ಬಹುಸಂಖ್ಯಾತ ಹಿಂದೂಗಳು ಮುಸ್ಲಿಮರನ್ನು, ಅವರ ಸಂಸ್ಕೃತಿಯನ್ನು ಆದರಿಸುವ ರೀತಿ ನೋಡಿ ಜಗತ್ತಿನ ಇತರೆ ಇಸ್ಲಾಮೀ ದೇಶಗಳು ಮೆಚ್ಚುಗೆ ವ್ಯಕ್ತಪಡಿಸಿವೆ. ಅಮೋಘ ಭಾರತೀಯ ಸಂಸ್ಕಾರವನ್ನು, ಹೃದಯ ವೈಶಾಲ್ಯತೆಯನ್ನು ಕೊಂಡಾಡಿವೆ. ಹೀಗಿರುವಾಗ ಈ ದೇಶದ ಮೇಲೆ ಶಸ್ತ್ರ ಪ್ರಯೋಗ ಮಾಡುವುದು, ಅಮಾಯಕರನ್ನು ಕೊಲ್ಲುವುದು ಅಕ್ಷಮ್ಯ ಅಪರಾಧ ಮಾತ್ರವಲ್ಲ ಅಂಥ ವಿದ್ರೋಹಿಗಳನ್ನು ನೇರ ಮಾಡಲು ಸಾಧ್ಯವಿಲ್ಲದಿದ್ದರೆ ನೇರವಾಗಿ ನೇಣಿಗೆ ಕಳಿಸಬೇಕಾದ್ದು ನಾಗರೀಕ ಸಮಾಜ ಮಾಡಬೇಕಾದ ಪ್ರಥಮ ಕೆಲಸ.
ಪ್ರಪಂಚದಲ್ಲಿ ಎಲ್ಲಾ ಧರ್ಮಕ್ಕೆ ಸೇರಿದ ಜನರು ಒಂದಲ್ಲ ಒಂದು ರೀತಿಯ ಹೋರಾಟದಲ್ಲಿ ನಿರತರಾಗಿದ್ದನ್ನು ನಾವು ಕಂಡಿದ್ದೇವೆ. ಯೂರೋಪ್ ಖಂಡದಲ್ಲಿ ೬೦ ಲಕ್ಷ ಯೂಹೂದ್ಯರನ್ನು ಕೊಂದಿದ್ದು, gas chamber ಗಳಿಗೆ ಕಳಿಸಿ ನಿರ್ನಾಮ ಮಾಡಿದ್ದು “ನಾಜಿಗಳು”. ನಾಜಿಗಳು ಯಾವ ಧರ್ಮೀಯರೆಂದು ಯಾರಿಗಾದರೂ ತಿಳಿದಿದೆಯೇ? ಬೋಸ್ನಿಯಾದಲ್ಲಿ ೮೦ ಸಾವಿರಕ್ಕೂ ಮುಸ್ಲಿಮರನ್ನು ಕೊಂದವರು “ಸರ್ಬಿಯನ್ನರು”. ಸರ್ಬಿಯನ್ನರು ಯಾವ ಧರ್ಮೀಯರೆಂದು ಎಲ್ಲೂ ಉಲ್ಲೇಖವಿಲ್ಲ. ಶ್ರೀಲಂಕೆಯಲ್ಲಿ ಅಮಾಯಕ ತಮಿಳರ ಹಿಂಸೆ, ಕೊಲೆ ನಡೆಸಿದ್ದು “JVP” ಯವರು, JVP ಯವರು ಯಾವ ಧರ್ಮದರೆಂದು ಉಲ್ಲೇಖವಿಲ್ಲ. ಅದೇ ಶ್ರೀಲಂಕೆಯಲ್ಲಿ ೨೫ ವರ್ಷಗಳಿಗೂ ಹೆಚ್ಚು ಕಾಲ ಬೌದ್ಧರನ್ನೂ, ಅಲ್ಲಿನ ದೊಡ್ಡ ದೊಡ್ಡ ನಾಯಕರನ್ನೂ ಕೊಂದವರು “ವ್ಯಾಘ್ರರು”. ವ್ಯಾಘ್ರರು ಯಾವ ಧರ್ಮೀಯರೆಂದು ಉಲ್ಲೇಖವಿಲ್ಲ. ಇತ್ತೀಚೆಗೆ ಅಮೆರಿಕೆಯಲ್ಲಿ ಅಪಾರ ಆಯುಧ ಶೇಖರಿಸಿ ದೊಡ್ಡ ರೀತಿಯ ಹಿಂಸೆಗೆ ಅಣಿಯಾಗುತ್ತಿದ್ದ ಜನರು “ಹುಟಾರಿ” ಪಂಗಡದವರು. “ಹುಟಾರಿ” ಗಳು ನಂಬಿದ ಧರ್ಮ ಯಾವುದು ಎಂದು ಯಾರಿಗೂ ತಿಳಿದಿಲ್ಲ. ಆದರೆ ಈ ಮಾನದಂಡ ಮುಸ್ಲಿಮರೆಂದು ಕರೆದುಕೊಂಡು ಧರ್ಮಕ್ಕೆ ಕಳಂಕ ತರುವ ಜನರಿಗೆ ನೀಡಲು ಮಾಧ್ಯಮ, ಕುಬುದ್ಧಿಯ ಪಂಡಿತರು ತಯಾರಿಲ್ಲ. ಸಿಕ್ಕಿ ಹಾಕಿಕೊಂಡವನ ಹೆಸರು ಮುಸ್ಲಿಂ ಆದರೆ ಸಾಕು ಟಾಮ್ ಟಾಮ್ ಶುರು; ಮುಸ್ಲಿಮ್ ಭಯೋತ್ಪಾದಕ, ಶಂಕಿತ ಮುಸ್ಲಿಂ ತೀವ್ರವಾದಿ, ಮುಸ್ಲಿಂ ಮೂಲಭೂತವಾದಿ, islamic activist, muslim radical, muslim fundamentalist…………………ಯಾವ ರೀತಿಯ ಲೇಬಲ್ಲುಗಳು ಬೇಕು ನಿಮಗೆ, ಆ ರೀತಿಯ ಲೇಬಲ್ಲುಗಳು ತಯಾರು. ಹಾಗಾದರೆ ಮೇಲೆ ನಾನು ಉದ್ಧರಿಸಿದ ಹತ್ಯಾಕಾಂಡಗಳ ಕರ್ತೃಗಳು ಯಾರು? “ಹುಟಾರಿ”, “ನಾಜಿ” ಎಂದರೆ ಮಂಗಳ ಗ್ರಹದಿಂದಲೋ ಅಥವಾ ಬೇರಾವುದು ಗ್ರಹದಿಂದ ಬಂದಪ್ಪಳಿಸಿದ ಅನರ್ಥವೋ? ವ್ಯಾಘ್ರ ಅಂದರೆ ಒಂದು ರೀತಿಯ ಸೊಂಕೋ, ರೋಗವೋ? JVP ಎಂದರೆ AIDS ರೀತಿಯ ಬ್ಯಾನೆಯೋ? ಸರ್ಬಿಯನ್ ಎಂದರೆ ಪ್ರಳಯವೋ, ಜ್ವಾಲಾಮುಖಿಯೋ? ಏಕೀ ಇಬ್ಬಂದಿತನ? ಲೇಖನಿಗೆ ದ್ರೋಹ ಬಗೆಯುವ ಪರಿಪಾಠ? ಲೇಖನಿ ಹುತಾತ್ಮನ ರಕ್ತಕ್ಕಿಂತಲೂ ಪವಿತ್ರ ಅಂತಾರೆ. ಆದರೆ ಮೇಲೆ ಹೇಳಿದ ಉದಾಹರಣೆಗಳಲ್ಲಿ ಎಷ್ಟೊಂದು ಪಾವಿತ್ರ್ಯ ಅವಿತುಕೊಂಡಿದೆ ನೋಡಿ.
ಜನರನ್ನು ಲೇಬಲ್ ಅಡಿಯಲ್ಲಿ ವ್ಯಾಖ್ಯಾನಿಸಿ ದೂರ ಮಾಡುವುದಕ್ಕಿಂತ ಒಳ್ಳೆಯ ಕೆಲಸ ಸಂವಾದದ ಪ್ರಕ್ರಿಯೆ ಶುರು ಮಾಡುವುದು. ಜನರ ಮಧ್ಯೆ ಕಂದಕ ತೋಡಲೆಂದೇ ಅವತರಿಸಿದ ಸಮೂಹವನ್ನು ನಾಗರೀಕ ಸಮಾಜ ದೂರ ಮಾಡಿ ಎಲ್ಲರೂ ಮೇಲೆ ಕೂತ ಭಗವಂತನ ಮಕ್ಕಳು, ಎಲ್ಲರಿಗೂ ಸರಿಸಮನವಾಗಿ ವಿಶಾಲವಾದ ಭೂಮಿಯನ್ನು ಹರಡಿ ತಾರತಮ್ಯ ಮಾಡದೆ ಗಾಳಿ ಬೆಳಕು ನೀರು ಒದಗಿಸುತ್ತಿರುವ ಮಹಾ ಪ್ರಭುವಿನ ಮಕ್ಕಳೆಂದು ಭಾವಿಸಿ ಬದುಕನ್ನು ಸಾಗಿಸುವುದು. ಹಕ್ಕಿಯಂತೆ ಹಾರಲು ಕಲಿತ, ಮೀನಿನನಂತೆ ಈಜಲು ಕಲಿತ ಮನುಷ್ಯ ಮನುಷ್ಯನ ರೀತಿ ಬಾಳಲು ಕಲಿಯುವುದನ್ನು ಕಲಿಯುವುದು ಅತ್ಯವಶ್ಯಕ. man should “relearn” how to live like a man.
ನಾ ಕಂಡುಕೊಂಡ ಇಸ್ಲಾಂ
ಇಸ್ಲಾಂ ಧರ್ಮದ ಬಗೆಗಿನ ಸಂಶಯ, ಅಪನಂಬಿಕೆಗಳು, ತಾರಕಕ್ಕೇರಿದ್ದು ನಮ್ಮೆಲ್ಲರ ಮಧ್ಯೆ ಇರುವ, ನಾವು ದಿನವೂ ಕಾಣುವ ಇಸ್ಲಾಮಿನ ಆಚಾರ ವಿಚಾರಗಳು ಇದ್ದಕ್ಕಿದ್ದಂತೆ ಅಪರಿಚಿತವಾಗಿ ಇದೀಗ ತಾನೇ ಭೂಲೋಕಕ್ಕೆ ಅವತರಿಸಿದ ಅನರ್ಥದಂತೆ ಚಿತ್ರಿಸಲಾಗುತ್ತಿದೆ ಮುಸ್ಲಿಮರನ್ನು ಮತ್ತು ಅವರು ನಂಬಿಕೊಂಡು ಬಂದ ಧರ್ಮವನ್ನು. ಸೆಪ್ಟಂಬರ್ ೧೧, ೨೦೦೧ ರಲ್ಲಿ ಅಮೆರಿಕೆಯ ಗಗನಚುಂಬಿ ಕಟ್ಟಡಗಳನ್ನು ೧೯ ಜನ ಅರಬ್ ಮೂಲದ ಯುವಕರು ಕದ್ದೊಯ್ದ ವಿಮಾನಗಳನ್ನು ಕ್ಷಿಪಣಿಗಳಂತೆ ಉಪಯೋಗಿಸಿ ನೆಲಸಮಗೊಳಿಸಿದ್ದು, ಸಾವಿರಾರು ಜನರ ಸಾವು ನೋವುಗಳಿಗೆ ಕಾರಣವಾಗಿದ್ದು ಇಸ್ಲಾಮಿನ ಬಗ್ಗೆ ಭಯ ಜನರ ಮನಸ್ಸಿನಲ್ಲಿ ಬೇರೂರಲು ಸಹಾಯಮಾಡಿತು. ತಮ್ಮ ಸ್ವಾರ್ಥ, ಕ್ಷುಲ್ಲಕ, “ಅಡಗಿರಿಸಿದ ಕಾರ್ಯತಂತ್ರ” ಸಾಧಿಸುವ ನಿಟ್ಟಿನಲ್ಲಿ ಇಸ್ಲಾಂ ವಿರೋಧಿಗಳು ಮಾಧ್ಯಮಗಳ ಸಹಾಯದಿಂದ ಈ ಭಯ ಜನರ ಮನಸ್ಸಿನಲ್ಲಿ ಮತ್ತಷ್ಟು ಬೇರೂರಿಸಿ ಒಬ್ಬ ಮುಸ್ಲಿಮನ ದರ್ಶನವಾದರೂ ಮುಗಿಬೀಳುವಂತೆ ಅಥವಾ ವಿಷ ಜಂತುವನ್ನು ಕಂಡಂತೆ ಆಡಲು ಕಾರಣಕರ್ತರಾದರು.
ಇಷ್ಟೊಂದು ನಿರ್ಭೀತಿಯಿಂದ, ಅಸಾಧಾರಣ ದೈರ್ಯದಿಂದ, ಸ್ವಂತ ಜೀವವನ್ನೂ ಲೆಕ್ಕಿಸದೆ ಆಕ್ರಮಣ ಮಾಡಿದವರ ideology ಯಾವುದು, ಅದರ ಉದ್ದೇಶವೇನು ಹೀಗೆ ಕುತೂಹಲ ಮುಗಿಲು ಮುಟ್ಟಿ ಇಸ್ಲಾಮಿನ ಬಗ್ಗೆ ಅಲ್ಪ ಸ್ವಲ್ಪ ಜ್ಞಾನವಿದ್ದವರೆಲ್ಲಾ ಏಕಾಏಕಿ ಇಸ್ಲಾಮಿನ ಪಂಡಿತರಾಗಿ ಪುಸ್ತಕಗಳನ್ನೂ, ಲೇಖನಗಳನ್ನೂ ಬರೆದರು. ತನಗೆ ಅರ್ಥವಾಗದ ಖಾಯಿಲೆ ತಗುಲಿ ಕೊಂಡಾಗ ಖೊಟ್ಟಿ ವೈದ್ಯರ ಮೊರೆ ಹೋಗುವ ವ್ಯಕ್ತಿಯ ಹಾಗೆ ಜನರು ಅರೆ ಬುದ್ಧಿವಂತ ಪಂಡಿತರ ಮೊರೆ ಹೋದರು ಇಸ್ಲಾಮನ್ನು ಅರಿಯಲು. ಆದರೆ ಅವರಿಗೇ ಸಿಕ್ಕಿದ್ದು ಅರೆಬೆಂದ, ಕಪೋಲಕಲ್ಪಿತ ವಿಚಾರಗಳು. ಈ ಬೆಳವಣಿಗೆ ಪಾಶ್ಚಾತ್ಯ ದೇಶಗಳಿಗೆ ಮಾತ್ರ ಸೀಮಿತವಾಗಲಿಲ್ಲ. ಸಾಗರ ದಾಟಿ ನಮ್ಮ ತೀರಕ್ಕೂ ಬಂದವು ಸಂಶಯಗಳು, ಕಪೋಲಕಲ್ಪಿತ ವಿಚಾರಗಳು. ೮೦೦ ವರ್ಷಗಳಿಗೂ ಮಿಕ್ಕು ಆಳಿದ ಒಂದು ಸಂಸ್ಕೃತಿ, ತಮ್ಮ ಭಾಷೆ, ಉಡುಗೆ, ತೊಡುಗೆ, ವಾಸ್ತು ಶಿಲ್ಪಿ, ಸಂಗೀತ ಹೀಗೆ ಬದುಕಿನ ಸಂಸ್ಕೃತಿಯ ಎಲ್ಲಾ ಮಜಲುಗಳಲ್ಲಿ ತನ್ನದೇ ಆದ, ಎಂದಿಗೂ ಅಳಿಸಲಾಗದ, ಛಾಪನ್ನು ಒತ್ತಿದ ಧರ್ಮವನ್ನು ಮತ್ತೊಮ್ಮೆ ನಾಡಿನವರಿಗೆ ಪರಿಚಯಮಾಡಿ ಕೊಡಬೇಕಾದ ಅವಶ್ಯಕತೆ ಬಗ್ಗೆ ದುಃಖ ತೋರಿದರೂ ನಾನು ನಂಬಿದ ಮತ್ತು ೧೬ ಕೋಟಿಗೂ ಮಿಕ್ಕು ಭಾರತೀಯರು ಕೊಂಡಾಡುವ ಒಂದು ಸಂಸ್ಕೃತಿಯ ಬಗ್ಗೆ ಬರೆಯೋಣ ಎನ್ನಿಸಿತು. ಭಾರತವನು ಆಳಿದ ಮುಸ್ಲಿಮ ಅರಸರು, ಚಕ್ರವರ್ತಿಗಳು ಆಳಬೇಕಾದ ರೀತಿಯಲ್ಲಿ ಆಳಿದ್ದರೆ ಈ ಲೇಖನ ಬರೆಯುವ ಅವಶ್ಯಕತೆ ಇರುತ್ತಿರಲಿಲ್ಲವೇನೋ. ನಾನು ಇಸ್ಲಾಂ ಪಂಡಿತನಲ್ಲ. ನನ್ನ ದೈನಂದಿನ ಬದುಕಿನ ಇಸ್ಲಾಮನ್ನು ನಿಮಗೆ ಪರಿಚಯ ಮಾಡಿಸುವತ್ತ ನನ್ನ ಪ್ರಯತ್ನ ಮಾಡುತ್ತೇನೆ. ಸಂದು ಹೋದ ಕಾಲದ, ವೈಭವದ ಬಗ್ಗೆ ಪ್ರಲಾಪಿಸದೆ, ಹಲುಬದೆ, ನನ್ನ ಸಂಸ್ಕೃತಿ ಮಾತ್ರ ಮೇಲು ಎನ್ನುವ ಉಡಾಫೆತನ ತೋರಿಸದೆ, ನಿಮ್ಮ ಮುಂದೆ ಇಟ್ಟಿದ್ದೇನೆ ನಾನು ನಂಬಿದ ನಂಬಿಕೆ, ಧರ್ಮ, ಮತ್ತು ಜೀವನ ರೀತಿಯ ಒಂದು ತುಣುಕನ್ನು.
ಇಸ್ಲಾಂ ಅಂದರೇನು: ಇಸ್ಲಾಂ ಅಂದರೆ ಶರಣಾಗುವುದು, ನಿರಾಕಾರನಾದ ಪ್ರಭುವಿನ ಆಜ್ಞೆಗಳಿಗೆ ಶರಣಾಗುವುದು ಎಂದು. ಸಲಾಂ ಎಂದರೆ ಶಾಂತಿ ಎನ್ನುವ ಪದದ ಮೂಲವೂ ಇದೇ ಆದ್ದರಿಂದ ಇಸ್ಲಾಂ ಶಾಂತಿಯ ಧರ್ಮವೂ ಹೌದು. ಆದರೆ characteristically ಇಸ್ಲಾಮನ್ನು ಶಾಂತಿಯ ಧರ್ಮ ಮಾತ್ರ ಎಂದು ವಿವರಿಸಲಾಗದು. ಒಂದು ಕೆನ್ನೆಗೆ ಹೊಡೆದರೆ ಮತ್ತೊಂದು ಕೆನ್ನೆ ತೋರಿಸಬೇಕೆನ್ನುವ ಅಸ್ವಾಭಾವಿಕ impractical ನಡವಳಿಕೆಗೆ ಇಸ್ಲಾಂ ಒಪ್ಪದೇ ಸಾಮಾಜಿಕ ನ್ಯಾಯಕ್ಕಾಗಿ, ಮನುಷ್ಯನ ಸ್ವಾಭಾವಿಕ ಆತ್ಮ ಗೌರವಕ್ಕಾಗಿ, ಕುಟುಂಬ,ಜೀವ, ಸೊತ್ತುಗಳ ರಕ್ಷಣೆಗಾಗಿ ಸಿದ್ಧರಾಗಲು ಕರೆ ನೀಡುತ್ತದೆ. ಆದರೆ ಯಾವುದೇ ರೀತಿಯ ಹೋರಾಟವೂ ದೇವಾಜ್ಞೆಗಳ ಚೌಕಟ್ಟಿನಲ್ಲಿ, ನ್ಯಾಯ ಸಮ್ಮತ ರೀತಿಯಲ್ಲಿ ನಡೆಯಬೇಕೆನ್ನುವ ಇಸ್ಲಾಂ ಅದೇ ಉಸಿರಿನಲ್ಲಿ ಎದುರಾಳಿಯನ್ನು ಕ್ಷಮಿಸಿ, ಹೃದಯ ವೈಶಾಲ್ಯತೆ ತೋರಿ ದೈವಸಂಪ್ರೀತಿಗಳಿಸಿಕೊಳ್ಳಲು ಕರೆ ನೀಡುತ್ತದೆ ತನ್ನ ಅನುಯಾಯಿಗಳಿಗೆ.
ಇಸ್ಲಾಮಿನ ಮೂಲಭೂತ ನಂಬಿಕೆ ಮತ್ತು ಅಡಿಗಲ್ಲೆಂದರೆ ಏಕದೇವೋಪಾಸನೆ. ಈ ವಿಷಯದ ಬಗ್ಗೆ ಇಸ್ಲಾಂ ನ ನಿಲುವು uncompromising. ಏಕದೇವೋಪಾಸನೆಯ ಈ ವೈಶಿಷ್ಟ್ಯ ಕ್ರೈಸ್ತ ಧರ್ಮಕ್ಕೆ ಸೇರಿದ ಇಸ್ಲಾಂ ಟೀಕಾಕಾರರ ಮತ್ತು ಹಿಂದೂ ಧಾರ್ಮಿಕ ಗುರುಗಳ ಮೆಚ್ಚುಗೆಯನ್ನೂ ಗಳಿಸಿತು. ಈ ನಿಲುವನ್ನು ಯಾವುದೇ ಕಾರಣಕ್ಕೂ ಸಡಿಲಿಸದೆ ಇದ್ದ ಕಾರಣ ಪ್ರವಾದಿಗಳು ತಮ್ಮ ಹುಟ್ಟೂರಾದ ಮಕ್ಕಾ ಪಟ್ಟಣದಿಂದ ಹೊರಗಟ್ಟಲ್ಪಟ್ಟರು.
“ಕಾಬಾ” ಇರುವುದು ಮಕ್ಕಾ ನಗರದಲ್ಲಿ. ಚೌಕಾಕಾರದ, ಕಪ್ಪು ವಸ್ತ್ರದಿಂದ ಹೊದೆಯಲ್ಪಟ್ಟ ಈ ಕಟ್ಟಡದ ಸುತ್ತಾ ಆಗಿನ ಕಾಲದ ಮಕ್ಕಾ ಮತ್ತು ಅರೇಬಿಯಾದ ನಿವಾಸಿಗಳು ಪ್ರದಕ್ಷಣೆ ಹಾಕುತ್ತಿದ್ದರು. ೩೬೦ ಕ್ಕೂ ಹೆಚ್ಚು ವಿಗ್ರಹಗಳಿದ್ದ ಈ ಭವನಕ್ಕೆ ಸ್ತ್ರೀಯರು ನಗ್ನರಾಗಿ ಪ್ರದಕ್ಷಿಣೆ ಮಾಡುತ್ತಿದ್ದರು. ಸಾಮಾಜಿಕವಾಗಿ ಅಲ್ಲಿನ ಜನರು ಕುಡಿತ, ಜೂಜು, ಪರಸ್ತ್ರೀ ಸಂಗ, ಬಡ್ಡಿ ವ್ಯವಾಹಾರ, ವ್ಯಾಪಾರದಲ್ಲಿ ಮೋಸ, ತೂಕದಲ್ಲಿ ಮೋಸ, ಕಾಳ ಧಂಧೆ, ಹುಟ್ಟಿದ ಮಗು ಹೆಣ್ಣಾದರೆ ಜೀವಂತವಾಗಿ ಹೂಳುವುದು ಹೀಗೆ ನೂರಾರು ಅನಿಷ್ಟಗಳಿಂದ ತಮ್ಮ ಜೀವನ ಶೈಲಿಯನ್ನಾಗಿ ಮಾಡಿ ಕೊಂಡಿದ್ದರು. ಈ ದುರ್ವರ್ತನೆಗಳು ಕೂಡದು, ನಮ್ಮ ಪ್ರತೀ ಕ್ರಿಯೆಗಳು ದೇವನನ್ನು ಸಾಕ್ಷಿಯನ್ನಾಗಿ ಇಟ್ಟುಕೊಂಡು, ಅವನ ಸಂಪ್ರೀತಿಗಾಗಿ ನಮ್ಮ ಬದುಕನ್ನು ಮುಡಿಪಿಡಬೇಕು ಎಂದ ಪ್ರವಾದಿಗಳ ಮಾತು ಅಲ್ಲಿನ ಜನರಿಗೆ ಹಿಡಿಸಲಿಲ್ಲ. ನಮ್ಮ ಆರಾಧನಾ ಕ್ರಮಗಳು ಮತ್ತು ಜೀವನ ರೀತಿಯನ್ನು ವಿರೋಧಿಸದೆ ಇದ್ದರೆ ನಿನ್ನ ಕಾಲಿನ ಬುಡಕ್ಕೆ ನಮ್ಮ ಸಂಪತ್ತನ್ನೆಲ್ಲಾ ಸುರಿಯುತ್ತೇವೆ, ನಿನ್ನನ್ನು ನಮ್ಮ ನಾಯಕನನ್ನಾಗಿ ಮಾಡುತ್ತೇವೆ, ರಾಜನನ್ನಾಗಿ ಅಂಗೀಕರಿಸುತ್ತೇವೆ ಎಂದು ಆಮಿಷ ತೋರಿಸಿದ ಬುಡಕಟ್ಟಿನ ಜನರ ಮಾತಿಗೆ ಒಪ್ಪದೇ ಆರಾಧನೆ ಸೃಷ್ಟಿ ಕರ್ತನಿಗೆ ಮಾತ್ರ, ನಮ್ಮ ಕೈಯ್ಯಾರೆ ಸೃಷ್ಟಿಸಿದ ಸೃಷ್ಟಿಗಳಿಗಲ್ಲ ಎಂದು ಸೊಲ್ಪವೂ ವಿಚಲಿತರಾಗದೆ ಧೃಢ ಸ್ವರದಲ್ಲಿ ಪ್ರವಾದಿಗಳು ಹೇಳಿದಾಗ ಅವರನ್ನು ಮಕ್ಕಾ ನಗರದಿಂದ ಹೊರಗಟ್ಟಿದರು ಅಲ್ಲಿನ ನಿವಾಸಿಗಳು. ಪ್ರವಾದಿಗಳು ತಮ್ಮ ಅನುಚರರೊಂದಿಗೆ ಭಾರವಾದ ಹೃದಯದಿಂದ ತಮ್ಮ ಪ್ರೀತಿಯ ಮಕ್ಕಾ ಪಟ್ಟಣ ಬಿಟ್ಟು ಮದೀನಾ ನಗರಕ್ಕೆ ಬಂದರು. ಇದನ್ನು “ಹಿಜರಿ” ಎಂದು ಕರೆಯುತ್ತಾರೆ. ಹಿಜರಿ ಎಂದರೆ ವಲಸೆ ಎಂದರ್ಥ. ಏಕದೇವೋಪಾಸನೆಯ ವಿಷಯದಲ್ಲಿ ಮಕ್ಕಾ ಜನರೊಂದಿಗೆ ರಾಜಿ ಮಾಡಿ ಕೊಂಡಿದ್ದರೆ ಪ್ರವಾದಿಗಳು ಕಷ್ಟ ಕಾರ್ಪಣ್ಯ, ಸಾಮಾಜಿಕ ಬಹಿಷ್ಕಾರಗಳನ್ನು ಎದುರಿಸ ಬೇಕಿರಲಿಲ್ಲ. ಪ್ರವಾದಿಗಳ ಈ ನಿಲುವು ಅವರಿಗೆ ಹೊಸ ಬೆಂಬಲಿಗರನ್ನು ಗಳಿಸಿ ಕೊಟ್ಟಿತು.
ಮಾನವರೆಲ್ಲಾ ಸಮಾನರು, “ಸನ್ನಡತೆಯ ಗಂಡು” ಮತ್ತು “ಸನ್ನಡತೆಯ ಹೆಣ್ಣು” ಇವೆರಡೇ ಜಾತಿಗಳು ಎಂದು ಸಾರಿದ ಪ್ರವಾದಿಗಳಿಗೆ ಮದೀನಾ ನಗರದಲ್ಲಿ ಅಭೂತಪೂರ್ವವಾದ ಸ್ವಾಗತ ಸಿಕ್ಕಿತು. ಕಡು ಕಪ್ಪ್ಪು ತ್ವಚೆಯ ಗುಲಾಮರು ಸಮಾಜದ ಕುಲೀನ ವರ್ಗದವರೊಂದಿಗೆ ಬೆರೆತು ಸರಿ ಸಮಾನರಾಗಿ ಬಾಳುತ್ತಿದ್ದರು. ನಮಾಜಿನ ಸಮಯ ನೀಡುವ ಕರೆ “ಅದಾನ್” ಪ್ರಪ್ರಥಮವಾಗಿ ಕಾಬಾ ಭವನದ ಮೇಲೆ ನಿಂತು ನೀಡಿದ್ದು ಇಥಿಯೋಪಿಯಾ ದೇಶದ ಗುಲಾಮ “ಬಿಲಾಲ್”. ಈ ಸಮಾನತೆಯ ಮೋಹಕ ಆದರ್ಶ ವಿಶ್ವದಾದ್ಯಂತ ದಂಡು ದಂಡಾಗಿ ಜನ ಇಸ್ಲಾಮಿಗೆ ಶರಣಾಗುವಂತೆ ಮಾಡಿತು.
ಆರಾಧನೆ: ದಿನದಲ್ಲಿ ಐದು ಹೊತ್ತು ಯಾವುದೇ ಸಮಜಾಯಿಷಿ ಇಲ್ಲದೆ ನಮಾಜ್ ನಿರ್ವಹಿಸುವುದು ಇಸ್ಲಾಮಿನ ಮತ್ತೊಂದು ಅಡಿಗಲ್ಲು. ಹೆಣ್ಣಿಗೆ ಶಾರೀರಿಕ ತೊಡಕು ಹೊರತು ಪಡಿಸಿ, ಮತ್ತು ಗಂಡು ತನ್ನ ಕೊನೆಯುಸಿರಿರುವವರೆಗೂ ನಮಾಜನ್ನು ನಿರ್ವಹಿಸಲೇಬೇಕು. ಪ್ರಯಾಣದಲ್ಲೂ, ಶಾರೀರಿಕ ಅಸ್ವಸ್ಥ ಸ್ಥಿತಿಯಲ್ಲೂ, ರಣರಂಗದಲ್ಲೂ, ಯಾವುದೇ ವಿನಾಯಿತಿ ಇಲ್ಲದೆ ಕ್ಲಪ್ತ ಸಮಯಕ್ಕೆ ಸೃಷ್ಟಿ ಕರ್ತನ ಆರಾಧನೆಯಲ್ಲಿ ತೊಡಗಿಸಿಕೊಳ್ಳಬೇಕು. ಅರುಣೋದಯ ದ ಪ್ರಾರ್ಥನೆ, ಸೂರ್ಯ ನೆತ್ತಿಗೆ ಬಂದಾಗಿನ ಹೊತ್ತು, ಅಪರಾಹ್ನ, ಸಂಜೆ, ಮತ್ತು ರಾತ್ರಿ ಇವು ನಮಾಜ್ ಗೆಂದು ನಿಯುಕ್ತ ಗೊಂಡ ಸಮಯಗಳು. ಸಮಯ ತಪ್ಪಿಸಿದರೆ ಆ ಆರಾಧನೆ ಚಲಾವಣೆ ಕಳೆದು ಕೊಂಡ ಕಾಸಿನಂತೆ. ನಿರರ್ಥಕ. ಸಮಯ ತಪ್ಪಿಸಿದ ಆರಾಧನೆ ನನಗೆ ಬೇಡ ಎನ್ನುತ್ತಾನೆ ಪರಮಾತ್ಮ. ಈ ನಿಯಮದಲ್ಲಿ ಬದುಕಿನಲ್ಲಿ ಯಶಸ್ಸಿಗೊಂದು ಪಾಠ ಇಲ್ಲಿದೆ ನೋಡಿ. ನಮಾಜ್ ಸಮಯಪ್ರಜ್ಞೆಯನ್ನು ಜನರಲ್ಲಿ ಬೆಳೆಸುತ್ತದೆ, ಸಮಯದ ಮಹತ್ವದ ಬಗ್ಗೆ ನಿಷ್ಠುರತೆ ತೋರಿಸುತ್ತದೆ. ಆದರೆ ಈ ಸಾರವನ್ನು ಮುಸ್ಲಿಮ್ ಜನಾಂಗ ಅರಿಯದೆ ಇರುವುದು ಖೇದಕರ.
ಇಸ್ಲಾಮಿನಲ್ಲಿ ಸ್ತ್ರೀ: ಮನೋಹರವಾದ, ವಿಶ್ವ ಕೊಂಡಾಡಿದ ಆದರ್ಶಗಳಾದ ಏಕ ದೇವೋಪಾಸನೆ, ಮನುಷ್ಯರಲ್ಲಿ ಸಮಾನತೆ, ಯಾವುದೇ ಪರಿಸ್ಥಿತಿಯಲ್ಲೂ ದೇವರ ಆರಾಧನೆಯಂಥ ವಿಚಾರಗಳು ಮಾತ್ರವಲ್ಲ ಹೆಣ್ಣಿನ ಸ್ವಾತಂತ್ರ್ಯದ ಕಡೆಗೂ ಇಸ್ಲಾಂ ಗಮನ ಹರಿಸಿತು. ಆಗಿನ ಕಾಲದಲ್ಲಿ ಹೆಣ್ಣಿಗೆ ಆಸ್ತಿಯಲ್ಲಿ ಹಕ್ಕು ಯಾರೂ ಕೇಳಿರದ, ಕಂಡಿಲ್ಲದ ಒಂದು ಬೆಳವಣಿಗೆ. ಪ್ರಪ್ರಥಮವಾಗಿ ಹೆಣ್ಣಿಗೆ ತನ್ನ ತಂದೆಯ ಆಸ್ತಿಯಲ್ಲಿ ಹಕ್ಕನ್ನು ನೀಡುವ ಮೂಲಕ ಒಂದು ಕ್ರಾಂತಿ ಕಾರೀ ಬೆಳವಣಿಗೆಗೆ ಇಸ್ಲಾಂ ನಾಂದಿ ಹಾಡಿತು. ಇಸ್ಲಾಂ ಅನುಷ್ಠಾನಕ್ಕೆ ತಂದ ೮೦೦ ವರುಷಗಳ ತರುವಾಯ ಇಂಗ್ಲೆಂಡ್ ಈ ಕಾನೂನನ್ನು ಅನುಷ್ಠಾನಕ್ಕೆ ತಂದಿತು. ಹೆಣ್ಣಿಗೆ ಆತ್ಮವಿಲ್ಲ ಮತ್ತು ಸ್ವರ್ಗ ಲೋಕದಿಂದ ಮನುಷ್ಯ ಹೊರ ಹಾಕಲ್ಪಟ್ಟಿದ್ದು ಹೆಣ್ಣಿನ ತಪ್ಪಿನಿಂದ, ಪ್ರಪಂಚದ ಎಲ್ಲಾ ಕೋಲಾಹ, ಕಲಹಗಳಿಗೆ ಹೆಣ್ಣೇ ಕಾರಣ ಎಂದು ಮಹಿಳೆಯನ್ನು ಪಾಶ್ಚಾತ್ಯರಂತೆ ಜರಿಯದೆ ದೇವರಿಗೆ ಭಯ ಪಟ್ಟು ಬದುಕುವ ಗಂಡು ಮತ್ತು ಹೆಣ್ಣು ಹೇಗೆ ಸಮಾನರು ಎಂದು ಕುರಾನಿನ ಸೂಕ್ತದಲ್ಲಿ ವಿವರವಾಗಿ ಹೇಳಲಾಗಿದೆ. ಈಗಿನ ಹೆಣ್ಣಿನ ಶೋಷಣೆಗೆ, ದುರ್ಗತಿಗೆ ಮನುಷ್ಯನ ಅತಿಯಾಸೆ ಮತ್ತು ದಬ್ಬಾಳಿಕೆ ಕಾರಣವೇ ಹೊರತು ಧರ್ಮವಲ್ಲ ಎನ್ನುವುದನ್ನು ಇಸ್ಲಾಮಿನ ಆದರ್ಶಗಳನ್ನು ಅರಿತವರಿಗೆ ಅರಿವಾಗುವುದು. ವಿಧವೆಯರಿಗೆ ಅವರ ಉಡುಗೆ ತೊಡುಗೆಗಳಲ್ಲಿ ಯಾವುದೇ ನಿರ್ದಿಷ್ಟ ನಿರ್ಬಂಧ ಹೇರದೆ ಅವರ ಮರು ವಿವಾಹಕ್ಕೆ ಅನುವು ಮಾಡಿಕೊಡಲು ಸಮಾಜದಿಂದ ಇಸ್ಲಾಂ ಬಯಸುತ್ತದೆ.
ಸ್ತ್ರೀಯರಿಗೆ ಯಾವುದೇ ಸ್ವಾತಂತ್ರ್ಯವಿಲ್ಲ ಎಂದು ಹೇಳುವ ಟೀಕಾಕಾರರಿಗೆ ಮುಸ್ಲಿಮ್ ಸಮಾಜ ಉತ್ತರ ನೀಡಿದೆ. ವಿಶ್ವದಲ್ಲಿ ಇದುವರೆಗೂ ಐದು (ತುರ್ಕಿ, ಪಾಕಿಸ್ತಾನ, ಬಾಂಗ್ಲ ದೇಶ, ಕಿರ್ಗಿಸ್ತಾನ್) ಮುಸ್ಲಿಂ ಮಹಿಳಾ ಪ್ರಧಾನಮಂತ್ರಿಗಳಾಗಿ ಸೇವೆ ಸಲ್ಲಿಸಿದ್ದು ಅವರನ್ನು ಆರಿಸಿದ ಮತದಾರರಲ್ಲಿ ಪುರುಷರೂ ದೊಡ್ಡ ಸಂಖ್ಯೆಯಲ್ಲಿ ಇದ್ದರು ಎನ್ನುವುದನ್ನು ಮನಗಾಣಬೇಕು. ಅಷ್ಟೇ ಅಲ್ಲದೆ ಜೋರ್ಡನ್, ಮತ್ತು ಕತಾರ್ ದೇಶಗಳ ರಾಣಿಯರು ಮತ್ತು ಸಿರಿಯಾ ದೇಶದ ಅಧ್ಯಕ್ಷರ ಪತ್ನಿ ಆ ದೇಶಗಳ ರಾಜಕಾರಣಗಳಲ್ಲಿ ಸಕ್ರಿಯವಾಗಿ ಬಾಗವಹಿಸುತ್ತಿರುವರು. ಪಾಕಿಸ್ತಾನದಲ್ಲಿ ಮೊಟ್ಟ ಮೊದಲ ಮಹಿಳಾ ಬ್ಯಾಂಕನ್ನು ಸಂಸ್ಥಾಪನೆ ಮಾಡಿದ್ದು ಓರ್ವ ಮಹಿಳೆ.
ಬಹು ಪತ್ನಿತ್ವ: ಕೆಲವೊಂದು ಸನ್ನಿವೇಶಗಳಲ್ಲಿ, ಕಟ್ಟುನಿಟ್ಟಾದ ಷರತ್ತುಗಳೊಂದಿಗೆ ಪುರುಷ ಬಹು ಪತ್ನಿತ್ವ ಪಾಲಿಸಬಹುದು. ಆದರೆ ಪತ್ನಿಯರ ನಡುವೆ ನ್ಯಾಯ ಪಾಲಿಸುವಂತೆ ಇಸ್ಲಾಂ ಕಠಿಣ ಶರತ್ತುಗಳನ್ನು ಒಡ್ಡಿದ್ದರಿಂದ ಬಹುಸಂಖ್ಯಾತ ಮುಸ್ಲಿಮರು ಏಕ ಪತ್ನೀವ್ರತಸ್ಥರಾಗಿದ್ದಾರೆ ಎಂದು ನಾವು ಕಾಣಬಹುದು. ಈ ತೆರನಾದ ಒಂದಕ್ಕಿಂತ ಹೆಚ್ಚು ಹೆಂಡಿರನ್ನು ಹೊಂದುವ ಸೌಲಭ್ಯವಿದ್ದರೂ ವಿಶ್ವದ ಶೇಕಡಾ ೯೫ ಕ್ಕೂ ಅಧಿಕ ಮುಸ್ಲಿಂ ಪುರುಷರು ಓರ್ವ ಪತ್ನಿಯಿಂದಲೇ ಸಂತೃಪ್ತರಾಗಬೇಕಾದರೆ ಮುಸ್ಲಿಮರಲ್ಲಿರುವ ಆಳವಾದ ಧಾರ್ಮಿಕ ಪ್ರಜ್ಞೆ ಮತ್ತು ದೈವ ಭಯ ಇರುವುದರಿಂದಲೇ ಸಾಧ್ಯ ಎಂದು ಮನಗಾಣಬಹುದು.
ಮುಸ್ಲಿಮೇತರರೊಂದಿಗೆ ಇಸ್ಲಾಂ: ಸಂಪೂರ್ಣ ಅರೇಬಿಯಾ ತನ್ನ ಉನ್ನತ ಆದರ್ಶಗಳಿಗೆ ತಲೆ ಬಾಗಿ ನಡೆಯುತ್ತಿದ್ದರೂ ಪ್ರವಾದಿಗಳು ಯಹೂದ್ಯರೊಂದಿಗೆ ಒಳ್ಳೆಯ ಸಂಬಂಧ ಇಟ್ಟುಕೊಂಡಿದ್ದರು.
ಪ್ರವಾದಿಗಳ ನಂತರ ಖಲೀಫಾ ಆಳ್ವಿಕೆಯ ಪರಂಪರೆ ಆರಂಭವಾಯಿತು. ಪ್ರವಾದಿಗಳ ನಂತರದ ಸುಮಾರು ೫೦೦ -೬೦೦ ವರ್ಷಗಳನ್ನು ಇಸ್ಲಾಮಿನ ಸುವರ್ಣ ಯುಗ ಎಂದು ಇತಿಹಾಸಕಾರರು ಬಣ್ಣಿಸುತ್ತಾರೆ.
ಮುಸ್ಲಿಂ ಆಳ್ವಿಕೆಯಲ್ಲಿ ಮುಸ್ಲಿಮೇತರರ ಮೇಲೆ “ಜೆಜಿಯಾ” ತಲೆಗಂದಾಯ ವಿಧಿಸಿದ ಕಾರಣ ನೋಡೋಣ. ಎಲ್ಲಾ ಮುಸ್ಲಿಂ ರಾಜರುಗಳು ಈ ಪದ್ಧತಿಯನ್ನು ಅನುಸರಿಸಲಿಲ್ಲ. ಮುಸ್ಲಿಂ ಆಳ್ವಿಕೆಯಲ್ಲಿ, ಮುಸ್ಲಿಂ ದೇಶದಲ್ಲಿ ನೆಲೆಸುವ ಮುಸ್ಲಿಮೇತರರಿಗೆ ಕೆಲವು ಸೌಲಭ್ಯ ಕೊಡುವ ಕಾರಣ ಈ ತೆರಿಗೆ ವಿಧಿಸಲಾಯಿತು. ಮುಸ್ಲಿಮೇತರರು ಸೈನ್ಯದಲ್ಲಿ ಭಾಗವಹಿಸುವ ಅವಶ್ಯಕತೆಯಿಲ್ಲ, ಮತ್ತು ಪ್ರತೀ ಮುಸ್ಲಿಮನೂ ಪಾವತಿಸಲೇ ಬೇಕಾದ “zakah” ಎನ್ನುವ ತೆರಿಗೆಯಿಂದಲೂ ಮುಸ್ಲಿಮೇತರರಿಗೆ ವಿನಾಯಿತಿ ನೀಡಲಾಯಿತು. ಹಾಗೆಯೇ ಅವರ ಪ್ರಾಣ, ಆಸ್ತಿ ರಕ್ಷಣೆ ಸಹ ಮುಸ್ಲಿಂ ದೇಶದ ಹೊಣೆಯಾಗಿತ್ತು.
ಯಾವ ಧರ್ಮಕ್ಕೆ ಸೇರಿದವನಾದರೂ ನೆರೆ ಹೊರೆಯವನೊಂದಿಗೆ ಸ್ನೇಹದಿಂದ ಇರಲೂ, ನೆರೆಯವನ ಎಲ್ಲಾ ಅವಶ್ಯಕತೆ ಪೂರೈಸಲು ಮುಸ್ಲಿಮರನ್ನು ಇಸ್ಲಾಂ ಉತ್ತೇಜಿಸುತ್ತದೆ. ಇಸ್ಲಾಮಿನ ಎರಡನೇ ಖಲೀಫಾ (ಧರ್ಮಾಧಿಕಾರಿ, ಇಸ್ಲಾಮಿನಲ್ಲಿ “ರಾಜ” ಎನ್ನುವ ಪದ್ಧತಿಯಿಲ್ಲ, ಅದು ನವೀನ ಅವಿಷ್ಕಾರ) ಉಮರ್ ಅವರ ಕಾಲದಲ್ಲಿ ಒಬ್ಬ ಯಹೂದ್ಯ ವ್ಯಕ್ತಿ ತನ್ನ ಮನೆ ಪಕ್ಕದ ಖಾಲಿ ಜಾಗವನ್ನ ಮಾರುವಾಗ ದೊಡ್ಡ ಮೊತ್ತದ ಹಣ ಕೇಳುತ್ತಾನೆ. ಕಾರಣ ಕೇಳಿದಾಗ ಖಾಲಿ ಜಾಗದ ಪಕ್ಕದಲ್ಲಿ ಧರ್ಮ ನಿಷ್ಠ ಮುಸ್ಲಿಂ ವ್ಯಕ್ತಿ ವಾಸವಿರುವುದರಿಂದ ಆ ವ್ಯಕ್ತಿಯಿಂದ ಯಾವುದೇ ತಕರಾರು, ಸಮಸ್ಯೆಗಳು ಬರಲು ಸಾಧ್ಯವಿಲ್ಲದೆ ಇರುವುದರಿಂದ ಆ ಖಾಲಿ ಸ್ಥಳಕ್ಕೆ ಹೆಚ್ಚು ಹಣ ಎಂದು ವಿವರಣೆ ನೀಡುವ ಯಹೂದಿ ಪರೋಕ್ಷವಾಗಿ ಇಸ್ಲಾಮಿನ ಆದರ್ಶಗಳನ್ನು ಕೊಂಡಾಡುತ್ತಾನೆ.
ಕೊನೆಯದಾಗಿ ಇಸ್ಲಾಮಿನ ಹೆಸರಿನಲ್ಲಿ ಹಿಂಸೆ, ರಕ್ತ ಪಾತ ಹರಿಸುತ್ತಿರುವವರು ತಾವು ನಂಬಿದ ಧರ್ಮದ ಆದರ್ಶಗಳಿಗೆ ದ್ರೋಹ ಬಗೆಯುತ್ತಿದ್ದು ಅವರ ಕುಕೃತ್ಯಗಳಿಗೆ ಇಸ್ಲಾಂನ ಮೇಲೆ ಹೊಣೆ ಹೊರಿಸುವುದು ತಪ್ಪು. ವಿನಾಕಾರಣ ಯಾವುದೇ ನಿರಪರಾಧಿ, ಮುಗ್ಧ ವ್ಯಕ್ತಿಯನ್ನು ಕೊಂದರೆ ಇಡೀ ಮಾನವಕುಲವನ್ನೇ ಕೊಂದಂತೆ ಎಂದು ಸಾರುವ ಇಸ್ಲಾಂ ಒಬ್ಬ ವ್ಯಕ್ತಿಯ ಜೀವ ಉಳಿಸಿದರೂ ಜೀವ ಉಳಿಸಿದ ವ್ಯಕ್ತಿ ಮಾನವ ಕುಲವನ್ನೇ ಉಳಿಸಿದ ಕೀರ್ತಿಗೆ ಪಾತ್ರನಾಗುತ್ತಾನೆ ಎಂದು ಹೇಳಿದ್ದರೆ ಭಯೋತ್ಪಾದನೆಯ ಬಗೆಗಿನ ಇಸ್ಲಾಮ್ ನ ನಿಲುವು ಏನು ಎಂದು ತಿಳಿಯುತ್ತದೆ. ರಾಜಕೀಯ ಕಾರಣಗಳಿಗಾಗಿ ಹಿಂಸೆಯ ಮಾರ್ಗ ಹಿಡಿರುವ ದುರುಳರಿಗೆ ಅವರು ಮಾಡುತ್ತಿರುವುದು “ಪ್ರತಿಕ್ರಿಯಾತ್ಮಕ” ಹಿಂಸೆ ಎಂತಲೋ, “ಧರ್ಮಕ್ಕಾಗಿ ಕಯ್ಯೆತ್ತುವುದು” ಎಂತಲೂ ಮುಸ್ಲಿಮರು ಸಮರ್ಥಿಸದೆ ಒಕ್ಕೊರಲಿನಿಂದ ಖಂಡಿಸಿದ್ದಾರೆ. ರಕ್ತಪಾತ, ಸಾಮೂಹಿಕ ಕೊಲೆಯಂಥ ಕೃತ್ಯ ಎಸಗುವ ಜನರು ಇಸ್ಲಾಂ ಧರ್ಮಕ್ಕೆ ಸೇರಿದವರಲ್ಲ ಎಂದು ಕಳೆದವರ್ಷ ಹೈದರಾಬಾದಿನಲ್ಲಿ ಸೇರಿದ್ದ ದೇಶದ ಮುಸ್ಲಿಂ ಪಂಡಿತರುಗಳು ಇಸ್ಲಾಂ ವಿಶ್ವ ಶಾಂತಿ ಬಯಸುತ್ತದೆ ಎಂದು ಸಾರಿದ್ದರು.
ಮುಸ್ಲಿಮರಲ್ಲಿರುವ ಅನಕ್ಷರತೆ, ಮತ್ತಿತರ ನ್ಯೂನತೆಗಳಿಗೆ ಮುಸ್ಲಿಮರು ಹೊಣೆಯೇ ಹೊರತು ಅವರು ನಂಬುವ ಇಸ್ಲಾಂ ಧರ್ಮವಲ್ಲ. ಪವಿತ್ರ ಗ್ರಂಥ ಕುರಾನ್ ನ ಮೊದಲ ಸೂಕ್ತಗಳು ಆರಂಭಗೊಂಡಿದ್ದು ಈ ವಾಕ್ಯದಿಂದ; “ಓದು, ನಿನ್ನನ್ನು ಸೃಷ್ಟಿಸಿದ ಪ್ರಭುವಿನ ನಾಮದಿಂದ” ಎಂದು. ಇಸ್ಲಾಂ ಜ್ಞಾನಕ್ಕೆ ಎಷ್ಟು ಮಹತ್ವ ನೀಡಿದೆ ಎಂದು ಈ ಸೂಕ್ತದಿಂದ ತಿಳಿಯಬಹುದು. ಇಸ್ಲಾಂ ಧರ್ಮವನ್ನ ಅರಿಯಬೇಕೆಂದರೆ ನೇರವಾಗಿ ಧರ್ಮಗ್ರಂಥಗಳನ್ನು ಓದಿ ಅರ್ಥ ಮಾಡಿಕೊಳ್ಳಬೇಕೆ ವಿನಃ ಮುಸ್ಲಿಮರ ನಡವಳಿಕೆ ನೋಡಿ ಇವರ ಧರ್ಮ ಹೀಗೆ ಎಂದು ತೀರ್ಪು ನೀಡುವುದು ತಪ್ಪು.
ಪ್ರವಾದಿಗಳ ಬಗ್ಗೆ ಮೈಸೂರು ವಿಶ್ವವಿದ್ಯಾಲಯದ ಪ್ರೊಫೆಸರ್ ರಾಮಕೃಷ್ಣ ರಾವ್ ಸುಂದರವಾದ ಪುಸ್ತಿಕೆ ಬರೆದಿದ್ದಾರೆ. ಆಂಗ್ಲ ಭಾಷೆಯಲ್ಲಿ ಇರುವ ಆ ಪುಸ್ತಿಕೆ ಸೌದಿ ಅರೇಬಿಯಾದ ಮಸೀದಿಗಳಲ್ಲೂ ಕಾಣಬಹುದು. ಪುಸ್ತಿಕೆಯ ಹೆಸರು Muhammad, the prophet of Islam.
ಚಾಣಾಕ್ಷ ಕೈದಿ
ಇಟಲಿ ದೇಶದ ಮುದುಕನೊಬ್ಬ ನ್ಯೂಯಾರ್ಕ್ ನಗರದಲ್ಲಿ ವಾಸವಾಗಿರುತ್ತಾನೆ. ಅವನಿಗೆ ಟೊಮೇಟೊ ಸಸಿಗಳನ್ನು ತನ್ನ ತೋಟದಲ್ಲಿ ನೆಡುವ ಆಸೆ, ಯಾವಾಗಲೂ ಸಹಾಯ ಮಾಡುತ್ತಿದ್ದ ತನ್ನ ಏಕೈಕ ಪುತ್ರ ಜೈಲಿನಲಿದ್ದಿದ್ದರಿಂದ ಅವನಿಗೆ ಸಹಾಯಕ್ಕೆ ಯಾರೂ ಇರಲಿಲ್ಲ.
ಒಂದು ದಿನ ಮಗನಿಗೆ ಪತ್ರ ಬರೆಯುತ್ತಾನೆ ತಂದೆ,
ಪ್ರೀತಿಯ ವಿನ್ಸೆಂಟ್,
ನನಗೆ ದುಃಖ ವಾಗುತ್ತಿದೆ ಏಕೆಂದರೆ ನೀನು ಜೈಲಿನಲ್ಲಿರುವುದರಿಂದ ಎಂದಿನಂತೆ ಈ ಸಲ ಟೊಮೆಟೋ ಸಸಿ ನೆಡಲು ಆಗುತ್ತಿಲ್ಲ. ನನಗೂ ವಯಸ್ಸಾಯಿತು, ನೀನಿದ್ದರೆ ಎಷ್ಟು ಒಳ್ಳೆಯದಿತ್ತು ಎಂದು ಸಂಕಟ ತೋಡಿ ಕೊಳ್ಳುತ್ತಾನೆ.
ಮಗನ ಉತ್ತರ ಬರುತ್ತದೆ, ಪ್ರೀತಿಯ ಪಪ್ಪಾ, ಈಗಲೇ ತೋಟದಲ್ಲಿ ಉಳುವಿಕೆ ಶುರು ಮಾಡಿಬಿಡಬೇಡ, ಏಕೆಂದರೆ ಅಲ್ಲೇ ನಾನು ಹೆಣಗಳನ್ನು ಹೂತು ಹಾಕಿರುವುದು ಎಂದು.
ಈ ಪತ್ರ ಓದಿದ ಪೊಲೀಸರು ಕೂಡಲೇ ಅವನ ಅಪ್ಪನ ಮನೆಗೆ ತೆರಳಿ ಹೆಣ ತೆಗೆಯಲೆಂದು ತೋಟವನ್ನು ಅಗೆದು ಹಾಕಿದಾಗ ಅವರಿಗೆ ಏನೂ ಸಿಗದೇ ಮುದುಕನಿಗೆ ಕ್ಷಮೆ ಹೇಳಿ ಹಿಂದಿರುಗುತ್ತಾರೆ.
ಮಗ ಮತ್ತೊಂದು ಪತ್ರ ಬರೆಯುತ್ತಾನೆ,
ಪಪ್ಪಾ, ನೀನೀಗ ನಿನ್ನ ಸಸಿಗಳನ್ನು ನೆಡಬಹುದು, ನಾನಿರುವ ಈ ಪರಿಸ್ಥಿತಿಯಲ್ಲಿ ನನ್ನಿಂದ ಇಷ್ಟನ್ನ ಮಾತ್ರ ಮಾಡಲು ಸಾಧ್ಯ
ಕೈ ಕೊಟ್ಟ ದೇವರು
ಅರ್ಜೆಂಟೀನ ವಿಶ್ವಕಪ್ ನಿಂದ ಹೊರಕ್ಕೆ, ಅದೂ ಹೀನಾಯ ಸೋಲಿನೊಂದಿಗೆ. ೪-೦ ಎಂದರೆ ಸಾಧಾರಣ ಸೋಲಲ್ಲ ಫುಟ್ ಬಾಲ್ ಕ್ರೀಡೆಯಲ್ಲಿ. ತಮ್ಮ ಆಟವನ್ನು ಅತ್ಯಂತ ಸಾಂಪ್ರದಾಯಿಕ ಮತ್ತು ಕಾಪಿ ಬುಕ್ ಶೈಲಿಯಲ್ಲಿ ಅರ್ಜೆಂಟಿನ ತಂಡ ತಮ್ಮ brute muscle power ತೋರಿಸಿ ಒರಟಾಗಿ ಆಡುವ ಜರ್ಮನಿ ಎದುರು ಯಾವುದೇ ಉತ್ತರವಿಲ್ಲದೆ ಬರಿಗೈಲಿ ಮರಳ ಬೇಕಾಯಿತು ಡ್ರೆಸ್ಸಿಂಗ್ ಕೋಣೆಗೆ, ತದನಂತರ ತಮ್ಮ ದೇಶಕ್ಕೆ. ೧೯೮೬ ವಿಶ್ವಕಪ್ ನಲ್ಲಿ ಸಂಭವಿಸಿದ ಹಾಗೆ ಈ ಸಲ ದೇವರು ಬರಲಿಲ್ಲ ಸಹಾಯಕ್ಕೆ ಅರ್ಜೆಂಟಿನ ತಂಡವನ್ನು ಜರ್ಮನಿ ನುಂಗುವಾಗ. ವಿಶ್ವಕಪ್ ೧೯೮೬, ಮೆಕ್ಸಿಕೋ: ಜಗತ್ತಿನ ಬಲಿಷ್ಠ ಫುಟ್ಬಾಲ್ ಆಡುವ ದೇಶಗಳು ಬಂದಿಳಿದವು ಮೆಕ್ಸಿಕೋ ದೇಶಕ್ಕೆ ವಿಶ್ವಕಪ್ ತಮ್ಮದಾಗಿಸಿಕೊಳ್ಳಲು. ಆದರೆ ಬೇರೆಲ್ಲಾ ಪಂದ್ಯಗಳಿಗಿಂತ ಖ್ಯಾತಿ ಪಡೆದ ಪಂದ್ಯ ಇಂಗ್ಲೆಂಡ್, ಅರ್ಜೆಂಟಿನ ನಡುವಿನದು. ಕ್ವಾರ್ಟರ್ ಫೈನಲ್ ಎಂದರೆ ಫೈನಲ್ ನಿಂದ ಕೇವಲ ಎರಡು ಗಜ ದೂರ. ಎದುರಾಲಿಯನ್ನು ಮಣಿಸಿ ಸೆಮಿ ತಲುಪಲು ಆತುರ, ಉತ್ಸಾಹ ಈ ಎರಡು ತಂಗಳಲ್ಲಿ. ಅತ್ಯಂತ ಪ್ರತಿಭಾವಂತ ತಂಡಗಳು ಬೇರೆ, ಇನ್ನು ಸ್ಪರ್ದೆಯ ಬಗ್ಗೆ ಹೆಚ್ಚು ಹೇಳಬೇಕಿಲ್ಲ. ತಮ್ಮ ಕ್ರೀಡಾ ಪ್ರತಿಭೆಯ ನ್ನು ವಿಶ್ವದ ಪ್ರದರ್ಶನಕ್ಕಿಟ್ಟ ಈ ಎರಡೂ ತಂಡಗಳು ಹೇಗೇ ಸೆಣಸಿದರೂ ಪೂರ್ವಾರ್ಧದ ಸ್ಕೋರು ಎಲ್ಲಾ ಸೊನ್ನೆ. ಪಾನೀಯದ ನಂತರ ಹೊಸ ರಣ ನೀತಿಯೊಂದಿಗೆ ಮೈದಾನ ಪ್ರವೆಶಿಸಿದ ತಂಡಗಳು ಮೇಲುಗೈ ಸಾಧಿಸುವತ್ತ ತಮ್ಮ ಗಮನ ಕೇಂದ್ರೀಕರಿಸಿದವು. ಈಗ ಬಂತು ಉತ್ತರಾರ್ಧದ ಆರನೇ ನಿಮಿಷದಲ್ಲಿ ವಿಶ್ವ ದಂಗಾದ ಒಂದು ದೃಶ್ಯ. ಗೋಲ್ ಪೋಸ್ಟ್ ನ ಹತ್ತಿರ ಚೆಂಡನ್ನು ತಂದ ಮೆರಡೋನ ಮತ್ತು ವಲ್ದಾನೋ ಇಂಗ್ಲೆಂಡಿನ ರಕ್ಷಣೆಯನ್ನು ಭೇಧಿಸಲು ಹೆಣಗಿದರು. ಇಂಗ್ಲೆಂಡಿನ ರಕ್ಷಣಾ ಆಟಗಾರ ಸ್ಟೀವ್ ಹಾಡ್ಜ್ ಚೆಂಡನ್ನು ತನ್ನ ನಿಯಂತ್ರಣಕ್ಕೆ ತರುವ ಗಡಿಬಿಡಿಯಲ್ಲಿ ಒಂದು ರೀತಿಯ ಅನಿಶ್ಚಿತ ಸ್ಥಿತಿ, ಈ ವೇಳೆಗೆ ನುಗ್ಗಿದ ಮೆರಡೋನ ಚೆಂಡನ್ನು ತನ್ನ ನಿಯಂತ್ರಣಕ್ಕೆ ತೆಗೆದು ಕೊಳ್ಳಲು ಶ್ರಮ ಪಡುತ್ತಿದ್ದಂತೆ ಹಾಡ್ಜ್ ಸಹ ಅಲ್ಲಿಗೆ ಬಂದು ಮೆರಡೋನ ರನ್ನು ತಡೆಯುವಷ್ಟರಲ್ಲಿ ಮೆರಡೋನ ತಲೆಯಿಂದ ಚಿಮ್ಮಿದ ಚೆಂಡು ಗೋಲ್ ಪೋಸ್ಟಿನೊಳಕ್ಕೆ ಸೇರಿಕೊಂಡಿತು. ಆದರೆ ನಿಜವಾಗಿಯೂ ಚೆಂಡು ಮೆರಡೋನ ರ ತಲೆಯ ಹೊಡೆತದಿಂದ ಮಾತ್ರವಲ್ಲ ಅವರ ಎಡಗೈಯ ಸಹಾಯದಿಂದ ಗೋಲ್ ಪೋಸ್ಟಿಗೆ ಸೇರಿಕೊಂಡಿತು. ಟುನೀಸಿಯ ದೇಶದ ರೆಫೆರಿ “ಅಲಿ ಬಿನ್ ನಾಸರ್” ಈ ವಿವಾದಾತ್ಮಕ ಗೋಲನ್ನು ಸಕ್ರಮ ಎಂದು ಘೋಷಿಸಿದರು. ಈ ಚಮತ್ಕಾರದ ಗೋಲು ಇಂಗ್ಲೆಂಡ್ ತಂಡಕ್ಕೆ “ಗೋಳಾಗಿ” ಪರಿಣಮಿಸಿತು. ಪಂದ್ಯ ಗೆದ್ದ ನಂತರ ಮೆರಡೋನ ಪತ್ರಿಕಾ ಗೋಷ್ಠಿಯಲ್ಲಿ ಗೋಲಿನ ಬಗ್ಗೆ ವಿವರಿಸುತ್ತಾ ಈ ಚಮತ್ಕಾರದ ಗೋಲ್ ನಲ್ಲಿ “ದೇವರ ಕೈ” ಇತ್ತು ಎಂದು. ಸ್ವಲ್ಪ ನನ್ನ ತಲೆಯಿಂದಲೂ, ಸ್ವಲ್ಪ ದೇವರ ಕೈ ಯಿಂದಲೂ ಬಂದ ಗೋಲಿದು ಎಂದು ವರ್ಣಿಸಿದ ಮೆರಡೋನ “hand of god” ಅಪರೂಪದ ಪದ ಪ್ರಯೋಗವನ್ನು ಫುಟ್ ಬಾಲ್ ಕ್ರೀಡೆಗೆ ನೀಡಿದರು. ಆದರೆ ಅಂದು ೧೯೮೬ ರಲ್ಲಿ ಅರ್ಜೆಂಟಿನ ದ ನೆರವಿಗೆ ಬಂದ ದೇವರು ೨೦೧೦ ರಲ್ಲಿ ಬರಲಿಲ್ಲ. ಒಂದು ಸಲ ಬಂದು ತನ್ನ ಕೀರ್ತಿ ಹಾಳಾಗಿದ್ದು ಸಾಕು ಎಂದೆನ್ನಿಸಿರಬೇಕು ಆ ಪರಮಾತ್ಮನಿಗೆ.
ಬ್ರಾಯ್ಲರ್ ಚಿಕನ್
ಗಡಿ ಭದ್ರತಾ ಪಡೆಯ ಯೋಧರು ಬೇಟೆಗೆ ಬ್ರಾಯ್ಲರ್ ಚಿಕನ್ ಗಳಷ್ಟೇ ಸುಲಭ ಎಂದು ಹೇಳಿಕೆ ನೀಡಿ ಗಾಯದ ಮೇಲೆ ಇನ್ನಷ್ಟು ಉಪ್ಪು ಉಜ್ಜುವ ಮಾತನ್ನು ಆಡುತ್ತಿದ್ದಾರೆ ಮಾವೋ ವಾದಿಗಳು. ಮಾವೋ ಹಿಂಸೆ ಈಗೀಗ ಹೊಸ ರೂಪವನ್ನು ತಾಳುತ್ತಿದ್ದು ದಿನಗಳು ಉರುಳಿದಂತೆ ಅವರು ಇನ್ನಷ್ಟು ಹುಮ್ಮಸ್ಸಿನಿಂದ ಚೈತನ್ಯದಿಂದ ನಮ್ಮ ರಕ್ಷಣಾ ವ್ಯವಸ್ಥೆಯ ಮೇಲೆ ಹಲ್ಲೆ ನಡೆಸಿದ್ದಾರೆ. ಮೊನ್ನೆ ನಡೆದ ಮತ್ತೊಂದು ಮಾರಣ ಹೋಮದಲ್ಲಿ ೨೫ ಕ್ಕೂ ಹೆಚ್ಚು ಯೋಧರನ್ನು ಕೊಂದದ್ದು ಮಾತ್ರವಲ್ಲದೆ ಕೆಲವರ ಮೃತ ದೇಹಗಳನ್ನು ವಿಕೃತ ಗೊಳಿಸಿ ಯೋಧರು ಬ್ರಾಯ್ಲರ್ ಕೋಳಿಗಳಂತೆ ಎಂದು ಹೇಳಿಕೆ ನೀಡಿ ವಿಕೃತ ಆನಂದ ಪಡೆಯುತ್ತಿದ್ದಾರೆ. ಯೋಧರನ್ನು ಇಷ್ಟು ಸಾರಾಸಗಟಾಗಿ ಕೊಲ್ಲುವ ಮಾವೋಗಳು ನಮ್ಮ ಪಡೆಗಳ ಮೇಲೆ ಮಾನಸಿಕ ಒತ್ತಡವನ್ನು ಹೇರುತ್ತಿದ್ದಾರೆ. ಈ ರೀತಿಯ ಮಾವೋಗಳ ಯಶಸ್ಸು ಇವರನ್ನು ನಿಗ್ರಹಿಸುವ ಸರಕಾರದ ಶ್ರಮಕ್ಕೆ ದೊಡ್ಡ ಪೆಟ್ಟನ್ನೇ ನೀಡುತ್ತದೆ. ಆದರೆ ಸರಕಾರ ಇಂಥ ಸಮಯದಲ್ಲಿ ಧೃತಿಗೆಡದೆ ಸಮಚಿತ್ತದಿಂದ ಪರಿಹಾರ ಕಂಡು ಕೊಳ್ಳುವ ಪ್ರಯತ್ನ ಮಾಡಬೇಕು. ಇದಕ್ಕೆಎಲ್ಲಾ ರಾಜಕೀಯ ಪಕ್ಷಗಳ ಸಕ್ರಿಯ ಸಹಕಾರ ಅತ್ಯಗತ್ಯ. ಈ ಮಟ್ಟದ ಯೋಧರ ಕಗ್ಗೊಲೆಗೆ ಬೇಕಾದ ಶಸ್ತ್ರಗಳು ಮತ್ತು ಇತರೆ ಸೌಲಭ್ಯಗಳು ಮಾವೊಗಳಿಗೆ ಸಿಗುವುದಾದರೂ ಎಲ್ಲಿಂದ? ಈ ತೆರನಾದ ಕಾರ್ಯಾಚರಣೆಗೆ ಬೇಕಾಗುವ ಸಂಪನ್ಮೂಲ ಕಾಡಿನಲ್ಲಿ ಅವಿತುಕೊಂಡು ಹೊಂದಿಸಲಾಗದು. ಹಾಗಾದರೆ ವಿದೇಶಿ ಶಕ್ತಿಗಳ ಕೈವಾಡ ಇರಬಹುದೇ? ನಮ್ಮ ನೆರೆ ಹೊರೆ ಹೇಗೆ, ಅವರ ಉದ್ದೇಶ ಏನು ಎಂಬುದು ನಮಗೆ ತಿಳಿಯದ್ದಲ್ಲ. ಮಾವೊಗಳಿಗೆ ವಿದೇಶೀ ಸಂಪರ್ಕಗಳಿದ್ದರೆ ಅವನ್ನು ನಿಗ್ರಹಿಸಲು ಸರಕಾರ ಕ್ರಮ ತೆಗೆದುಕೊಳ್ಳಬೇಕು. ಹಾಗೆಯೇ ಮಾವೋಗಳು ಮತ್ತು ಇತರೆ ಬಂಡುಕೋರರನ್ನು ಬಗ್ಗು ಬಡಿಯಲು ಸರಕಾರ ದೊಡ್ಡ ರೀತಿಯಲ್ಲಿ ಪಡೆಗಳನ್ನು ಸುಸಜ್ಜಿತಗೊಳಿಸುವತ್ತ ಗಮನ ಹರಿಸಿ ಅದಕ್ಕೆ ಬೇಕಾದ ವ್ಯವಸ್ಥೆ ಮಾಡಬೇಕು.
ಆಧುನಿಕ ರಾಷ್ಟ್ರಗಳ ಆಧುನಿಕ ಜೀವನ ಶೈಲಿಯನ್ನು ನಾವು ಅಳವಡಿಕೊಳ್ಳಲು ಕಾತುರರಾಗಿರುವಾಗ, ಅದಕ್ಕೆ ಬೇಕಾದ ತಂತ್ರಜ್ಞಾನವನ್ನು ಅತ್ಯುತ್ಸಾಹದಿಂದ ಅಳವಡಿಸಿ ಕೊಳ್ಳಲು ನಮಗೆ ಸಾಧ್ಯವಾದರೆ ನಮ್ಮ ಪಡೆಗಳು ಓಬೀರಾಯನ ಕಾಲದ ಶಸ್ತ್ರಗಳನ್ನು ಇಟ್ಟುಕೊಂಡು ಹೋರಾಡಲು ಏಕೆ ಬಲವಂತ ಪಡಿಸಬೇಕು? ಆಫ್ಘನ್, ಇರಾಕ್ ನಲ್ಲಿರುವ ಅಮೇರಿಕನ್, ಬ್ರಿಟಿಶ್ ಯೋಧರ ಉಡುಗೆ, ಶಸ್ತ್ರ ನೋಡಿ ಮತ್ತು ನಮ್ಮ ಅಮಾಯಕ ಯೋಧರ ವೇಷ ಭೂಷಣ ನೋಡಿ, ವ್ಯತ್ಯಾಸ ತಿಳಿಯುತ್ತದೆ. ಕಾರ್ಗಿಲ್ ಯುದ್ಧದ ವೇಳೆ ಶತ್ರು ಸುಸಜ್ಜಿತನಾಗಿ ಬಂದಿದ್ದರೆ ನಮ್ಮ ಯೋಧರ ಬಳಿ ಮಂಜಿನ ಬೂಟುಗಳೂ ಇರಲಿಲ್ಲವಂತೆ. ಭಾರತೀಯ ಸೇನೆಯ ಪಾಡು ಹೀಗಾದರೆ ಭದ್ರತಾ ಪಡೆಯವರ ಪಾಡು ಹೇಗಿರಬಹುದು?
ಮಾವೋಗಳ ಹಿಂಸಾತ್ಮಕ ಯಶಸ್ಸು ನಮಗೆ ಒಳ್ಳೆಯದಲ್ಲ. ಇವರ ಯಶಸ್ಸಿನಿಂದ ಸ್ಫೂರ್ತಿ ಪಡೆದು ಈಶಾನ್ಯ ರಾಜ್ಯಗಳ ಇತರೆ ವಿಧ್ವಮ್ಸಕ ಗುಂಪುಗಳು ದೊಡ್ಡ ರೀತಿಯಲ್ಲಿ ಧಾಳಿ ಮಾಡಲು ಉತ್ಸಾಹ ತೋರಬಹುದು.
ಮಾವೋ ಹಿಂಸೆಗೆ ಪ್ರತಿ ಹಿಂಸೆ ಪರಿಹಾರವಲ್ಲ. ಆದರೆ ಮಾತುಕತೆಗೆ ಮಾವೋಗಳು ಅಷ್ಟು ಸುಲಭವಾಗಿ ಒಪ್ಪುವವರಲ್ಲ. ಅವರು ಬಯಸುವ ಸಾಮಾಜಿಕ ಸುಧಾರಣೆಗಳು ಯಾವುದೇ ಪಕ್ಷದಿಂದಲೂ ಸಾಧಿಸಲು ಸುಲಭ ಸಾಧ್ಯವಲ್ಲ. ಮಾವೋ ವಿಚಾರಧಾರೆ ಒಂದು ಕ್ರಾಂತಿಯಂತೆ. ನಾವು ಆರಿಸಿಕೊಂಡ ಬಂಡವಾಳಶಾಹಿ ವ್ಯವಸ್ಥೆ ಮಾವೋಗಳ ಆಶಯಗಳನ್ನು ಈಡೇರಿಸಲಾರದು. ಒಂದು ರೀತಿಯ ತ್ರಿಶಂಕು ಪರಿಸ್ಥಿತಿ ನಮ್ಮದು.
ಪಾಕ್ ಮತ್ತು ಕಾಲ್ಚೆಂಡು
ನಮ್ಮನ್ನು ಕಾಲ್ಚೆಂಡಿನಂತೆ ನಡೆಸಿಕೊಳ್ಳುವ ಪಕ್ಕದ ದೇಶ ಪಾಕಿಗೆ ಕಾಲ್ಚೆಂಡಿನ ಮೇಲೆ ಅದ್ಯಾವ ಮೋಹವೋ ಏನೋ? ಕಾಲ್ಚೆಂಡಿನಾಟ ಪಾಕ್ ನೆಲದಲ್ಲಿ ಅಷ್ಟೇನೂ ಆಳವಾಗಿ ಬೇರೂರದೆ ಇದ್ದರೂ ವಿಶ್ವದ ಕ್ರೀಡಾ ಪಟುಗಳ ಕಾಲುಗಳಿಗೆ ಸುಂದರ, ಉತ್ಕೃಷ್ಟ ಚೆಂಡುಗಳನ್ನಂತೂ ಹೊಲಿದು ಕೊಡುತ್ತಾರೆ. ಇಂಥ ಒಳ್ಳೆಯ ಚಟುವಟಿಕೆಗಳಲ್ಲಿ ಪಾಕಿಗಳು ತಮ್ಮನ್ನು ತಾವು ತೊಡಗಿಸಿಕೊಂಡರೆ ಅವರ ಆರ್ಥಿಕ ಸ್ಥಿತಿಗೆ ಒಳ್ಳೆಯದು ಮಾತ್ರವಲ್ಲ ನಮ್ಮ ಚಿತ್ತ ಸ್ವಾಸ್ಥ್ಯಕ್ಕೂ ಒಳ್ಳೆಯದೇ. ಅದ್ಹೇಗೆ ಅಂತೀರಾ? ಬಿಡುವಿನ ಸಮಯ ಅಥವಾ ಮಾಡಲು ಯಾವುದೇ ಕಸುಬಿಲ್ಲದಾದಾಗ ನಮ್ಮ ಗಡಿಯೊಳಕ್ಕೆ, ನಗರದೊಳಕ್ಕೆ ಭಯೋತ್ಪಾದಕರನ್ನು ನುಗ್ಗಿಸಿ ರಕ್ತ ಹರಿಸೋದಕ್ಕಿಂತ ಕಾಲ್ಚೆಂಡು ಹೊಲೆದು ಕ್ರೀಡಾಪಟುಗಳ ಬೆವರು ಹರಿಸಿದರೆ ನಮಗೆ ನೆಮ್ಮದಿ ತಾನೇ? ಇವರಿಗೆ ನಿರಂತರವಾಗಿ ಕಾಲ್ಚೆಂಡ ನ್ನು ಹೊಲೆಯುವ ಕೆಲಸ ಕೊಡಲು ಬೇಕಾದರೆ ಕ್ರಿಕೆಟ್ ಜೊತೆಗೇ ನಾವು ಫುಟ್ ಬಾಲ್ ಸಹ ಆಡೋಣ, ಒಂದಿಷ್ಟು ಕಾಲ್ಚೆಂಡುಗಳ ಆರ್ಡರ್ ಅವರಿಗೆ ರವಾನಿಸಿ ತುಪಾಕಿಗಳ ಸಹವಾಸದಿಂದ ಅವರನ್ನು ಮುಕ್ತಗೊಳಿ ಸೋಣ. ಸರಾಸರಿ ವರ್ಷಕ್ಕೆ ನಾಲ್ಕು ಕೋಟಿ ಚಂಡುಗಳನ್ನು ಉತ್ಪಾದಿಸುವ ಪಾಕಿ ನಗರ ಸಿಯಾಲ್ಕೋಟ್ ವಿಶ್ವ ಪ್ರಸಿದ್ಧಿ ಪಡೆದ ಕ್ರೀಡಾ ಸಂಸ್ಥೆಗಳಾದ ಅಡಿಡಾಸ್, ನೈಕಿ, ರೀಬಾಕ್, ಲೋಟೋ, ಗಳಿಗೆ ಹಗಲು ರಾತ್ರಿ ಚೆಂಡು ಗಳನ್ನು ಸರಬರಾಜು ಮಾಡಿ ವಿದೇಶಿ ವಿನಿಮಯ ಗಳಿಸುತ್ತಿದೆ. ಒಳ್ಳೆಯ ಸಂಪಾದನೆ ನೋಡಿ. ಅಮಾಯಕರ ರಕ್ತ ಹರಿಸಿ ಅವರ ಶಾಪ ಸಂಪಾದಿಸುವುದಕ್ಕಿಂತ ಈ ಕಸುಬು ಲೇಸು ಅಲ್ಲವೇ? ಇಷ್ಟು ದೊಡ್ಡ ಮೊತ್ತವನ್ನು ವಿದೇಶೀ ವಿನಿಮಯದ ಮೂಲಕ ಗಳಿಸುತ್ತಿರುವ ಪಾಕ್ ಮೇಲೆ ಈಗ ಚೀನಾ ಕಣ್ಣು ಹಾಕಿದೆಯಂತೆ. ಕೇವಲ ಆರು ಡಾಲರಿಗೆ ಚೆಂಡನ್ನು ಮಾರುತ್ತಿದ್ದ ಪಾಕಿಗಳಿಗೆ ಚೀನಾ ಸೆಡ್ಡು ಹೊಡೆದು ಮೂರು ದಾಲರಿಗೂ ಮಾರಲು ತಯಾರು ಎಂದು ಸಿಯಾಲ್ಕೋಟ್ ನ ಉದ್ಯಮಿಗಳಿಗೆ ನಡುಕ. ಕಳೆದ ವರ್ಷ ೩೦೦ ಜನ ಸೇರಿ ೫,೪೧,೧೭೬ ಮಾವಿನ ಸಸಿ ನೆಟ್ಟು ಗಿನ್ನೆಸ್ ದಾಖಲೆ ಸಹ ಮಾಡಿದರು. ಇದೊಂದು ರೀತಿಯ ವಿಸ್ಮಯಕಾರೀ ವಿಷಯ ಅಲ್ಲವೇ? ಕೋವಿ, ಬಾಂಬು, ಅಂತ ಸಾವನು ನೆಡುತ್ತಾ ಸಾಗುವ ಮಂದಿಗೆ ಮಾವಿನ ಸಸಿ ನೆಡುವ ಚಾಳಿ. ಏರುವ ಸಮುದ್ರ ಮಟ್ಟ ವನ್ನು ತಡೆಯಲು ಈ ರೀತಿ ಕರಾವಳಿ ಪ್ರದೇಶದಲ್ಲಿ ಮಾವಿನ ಸಸಿ ನೆಡುತ್ತಾರಂತೆ ಪಾಕಿಗಳು. ಅವರು ಕರಾವಳಿಯಲ್ಲಿ ಮಾವನ್ನೋ, ಆಟದ ಮೈದಾನದಲ್ಲಿ ಚೆಂಡನ್ನೋ ನೆಟ್ಟು ನಮ್ಮನ್ನು ನಮ್ಮ ಪಾಡಿಗೆ ಬಿಟ್ಟರೆ ಸಾಕು ಎಂದಿರಾ? ಈ ಮೇಲಿನ ಎರಡು ವಿದ್ಯಮಾನಗಳು ನಾಗರೀಕ ಸಮಾಜ ಮೆಚ್ಚುವಂಥದ್ದು. ಇಂಥ ಇನ್ನಷ್ಟು ಚಟುವಟಿಕೆಗಳು ಅವರ ದೇಶದೆಲ್ಲೆಡೆ ಹರಡಿ ಅವರಿಗೆ ಸುಭಿಕ್ಷೆಯನ್ನೂ ನಮಗೆ ನೆಮ್ಮದಿಯನ್ನೂ ತರಲಿ.
