ಜ್ವರ ಅಥವಾ ನೋವು ಕಾಣಿಸಿ ಕೊಂಡ ಕೂಡಲೇ ನಾವು ಮೊರೆ ಹೋಗುವುದು paracetamol ಇರುವ ಔಷಧಿ ಕಡೆಗೆ. ವಿಶೇಷವಾಗಿ ಮಕ್ಕಳಿಗೆ ಕಾಣಿಸಿಕೊಳ್ಳುವ ಜ್ವರಕ್ಕೆ paracetamol ರಾಮ ಬಾಣ ಎಂದು ನಮ್ಮೆಲ್ಲರ ಗ್ರಹಿಕೆ. ಆದರೆ ಈ ಗ್ರಹಿಕೆಗೆ ಒಂದು ಕೊಡಲಿಯೇಟು ಬಿದ್ದಿದೆ; paracetamol ಒಳಗೊಂಡ ಔಷಧಿ ಮಕ್ಕಳಲ್ಲಿ ಅಸ್ತಮಾ ರೋಗವನ್ನು ಬರಿಸುತ್ತದೆ. ಗರ್ಭಿಣಿಯರು paracetamol ಹೆಚ್ಚು ತೆಗೆದು ಕೊಂಡಷ್ಟೂ ಹುಟ್ಟುವ ಮಕ್ಕಳಲ್ಲಿ ಅಸ್ತಮಾ ಕಾಣಿಸಿಕೊಳ್ಳಲು ಕಾರಣವಾಗುತ್ತದಂತೆ. ಈ ಔಷಧಿಯನ್ನು ಆಂಗ್ಲ ಭಾಷೆ ಮಾತನಾಡುವ ರಾಷ್ಟ್ರಗಳ ಜನ ಹೆಚ್ಚು ತೆಗೆದು ಕೊಳ್ಳುತ್ತಿದ್ದು ಅಲ್ಲಿನ ಮಕ್ಕಳ ಆರೋಗ್ಯದ ಅಧ್ಯಯನ ನಡೆಸಿದ ಮೇಲೆ ಈ ವಿದ್ಯಮಾನ ಬೆಳಕಿಗೆ ಬಂತು. ಆದರೆ ಕಂಪೆನಿಗಳು ಈ ಅಧ್ಯಯನವನ್ನು ಒಪ್ಪುತ್ತಿಲ್ಲ. ಅಸ್ತಮಾದ ಬಗೆಗಿನ ಅಧ್ಯಯನ ಗಮನಾರ್ಹವಲ್ಲದಿದ್ದರೆ medical journal “Lancet” ಪತ್ರಿಕೆಯಲ್ಲಿ ಇದು ಬೆಳಕನ್ನು ಕಾಣುತ್ತಿರಲಿಲ್ಲ.ಮಕ್ಕಳಲ್ಲಿ ಕಫ ತುಂಬಿ ಉಬ್ಬಸ ತೋರಿದಾಗ ಕೊಡುವ paracetamol ಕ್ರಮೇಣ ಮಕ್ಕಳಲ್ಲಿ ಅಸ್ತಮಾ ರೋಗಕ್ಕೆ ಕಾರಣವಾಗುತ್ತದೆ ಎಂದು ಅಭಿಪ್ರಾಯ. ಹಾಗಾದರೆ ಮಕ್ಕಳಿಗೆ ಜ್ವರ ಬಂದಾಗ ಕೊಡಬೇಕಾದದ್ದಾದರೂ ಏನು? ಕೆಲವು ವೈದ್ಯರ ಪ್ರಕಾರ ಜ್ವರ ಬಂದಾಗ ಯಾವ ಔಷಧಿಯನ್ನೂ ಕೊಡುವ ಅಗತ್ಯವಿಲ್ಲವಂತೆ. ಏಕೆಂದರೆ ಶರೀರಕ್ಕೆ ತಗಲುವ ಸೋಂಕಿಗೆ ನೈಸರ್ಗಿಕ ಪ್ರತಿರೋಧವಾಗಿ ಜ್ವರ ಬರುತ್ತದಂತೆ. ಆದರೆ ನಾವೀಗ ಕಾಣುತ್ತಿರುವ ಇಲಿ ಜ್ವರ, ಹಂದಿ ಜ್ವರ ಮುಂತಾದ “zoo” ಜ್ವರಗಳ ಬಗ್ಗೆ ಮಾತ್ರ ಎಚ್ಚರಿಕೆಯಿಂದಿರುವುದು ಅತ್ಯವಶ್ಯಕ.
ಚಿಟಿಕೆ
ಮಾಡಲೇಬೇಕಾದ ಕೆಲಸವನ್ನ ಮಾಡದೆ ವೃಥಾ ಮುಂದೂಡುವುದು
ಬರೆಯಲು ಸಾಕಷ್ಟು ಟಾಪಿಕ್ ಗಳಿದ್ದರೂ ಒಂದು ಕಡೆ ಅಂಡನ್ನು ಆಳವಾಗಿ ಊರಿ ಬರೆಯಲು ಸೋಮಾರಿತನ, lethargy. ಈ lethargy ಗೆ ಸಂಗಾತಿಯಾಗಿ procrastination ಸಿಕ್ಕಿದರಂತೂ ಕೇಳೋದೇ ಬೇಡ ಅನ್ನಿ. ಈ procrastinate ಅನ್ನೋ ಖಾಯಿಲೆಯನ್ನ ನೊಬೆಲ್ ಪ್ರಶಸ್ತಿ ವಿಜೇತರೂ ಅಂಟಿಸಿ ಕೊಂಡಿದ್ದಾರಂತೆ. ದಾರ್ಶನಿಕ ಸಾಮ್ಯುಎಲ್ ಜಾನ್ಸನ್ ಸಹ ಈ ಪಿಡುಗಿಗೆ ಬಲಿಯಾಗಿರಬೇಕಾದರೆ ನೀವೇ ಊಹಿಸಿ. ಖ್ಯಾತ ಸಾಹಿತಿ ವಿಕ್ಟರ್ ಹ್ಯೂಗೋ ತಾನುಟ್ಟ ಬಟ್ಟೆ ಬಿಚ್ಚಿ, ಸೇವಕನಿಗೆ ಒಪ್ಪಿಸಿ, ಅಡಗಿಸಿಡಲು ಹೇಳಿ ನಗ್ನನಾಗಿ ಕೂತು ಬರೆಯುತ್ತಿದ್ದನಂತೆ ತಾನು ಬರೆಯುವುದನ್ನು ನಿಲ್ಲಿಸಿ ಹೊರಕ್ಕೆ ಹೋಗಬಾರದು ಎಂದು. ನೋಡಿದಿರಾ ತನ್ನ ಮೇಲೆ ತಾನೇ ಯಾವ ರೀತಿಯ “ನಗ್ನ” ನಿರ್ಬಂಧವನ್ನು ಹೇರಿಕೊಂಡ ಈ ಪ್ರತಿಭಾವಂತ ಸಾಹಿತಿ procrastination ಎನ್ನುವ ಪೆಡಂಭೂತಕ್ಕೆ ಹೆದರಿ? procrastination ಪದ ಲ್ಯಾಟಿನ್ ಮೂಲದ್ದು ಮತ್ತು ಆಂಗ್ಲ ಭಾಷೆಗೆ ಆಮದಾಗಿದ್ದು ಸುಮಾರು ೧೬ ನೆ ಶತಮಾನದಲ್ಲಿ.
ನಿಂಬೆ ಹಣ್ಣಿನಲ್ಲಿ cholesterol
ಹಾಂ, ಎಂದು ಹಾವು ತುಳಿದವರಂತೆ ಆಡಬೇಡಿ….
ರಾತ್ರಿ ಊಟಕ್ಕೆ ಕುಳಿತೆ. ಅದೇ ಉಪ್ಪು ಇನ್ನು ಇಲ್ಲದ ಒಣಗಿದಂತೆ ಕಾಣುವ ಚಪಾತಿ, ಒಂದು ಡಬ್ಬ lowfat yoghurt ಒಂದಿಷ್ಟು ಪಲ್ಯ, ಇದನ್ನು ನೋಡಿ ಹೇಗಪ್ಪಾ ತಿನ್ನೋದು ಎಂದು ನನಗೆ ಸಂಕಟ. ಈ ದರಿದ್ರದ BP (ಹೆಚ್ಚಿಲ್ಲ, ಬರೀ ೧೩೦/೯೦) ನನ್ನ ಗೆಳೆಯನಾದಂದಿನಿಂದ ನನ್ನ ಮೇಲೆ ನಾನೇ ಹೇರಿಕೊಂಡ ಶಿಕ್ಷೆ. ಸರಿ, ಒಂದಿಷ್ಟು ಈರುಳ್ಳಿ, ನಿಂಬೆ ಹಣ್ಣನ್ನಾದರೂ ಇಡಬಾರದೇ ಎಂದಾಗ ನಿಂಬೆ ಹಣ್ಣು ಇಲ್ಲ ಎಂದು ಹೇಳೋ ಬದಲು ಹಾಕಿದಳು ಬಾಂಬನ್ನು, ನಿಂಬೆ ಹಣ್ಣಿನಲ್ಲಿ cholesterol ಇದ್ಯಲ್ಲಾ ಅದಕ್ಕೇ ಇಟ್ಟಿಲ್ಲ ಎಂದು. ಮೇಲೆ ನೀವು ತುಳಿದಂತೆ ನಾನೂ ತುಳಿದೆ ಹಾವನ್ನು. ನಿಂಬೆ ಹಣ್ಣಿನಲ್ಲಿ cholesterol? ಇದೆಲ್ಲಿಂದ ಸಿಕ್ಕಿತು ಹೊಸ, lemon shattering ಸುದ್ದಿ ಇವಳಿಗೆ? ಬೆಂಗಳೂರಿನಲ್ಲಿದ್ದಾಗ ಅಮೆರಿಕೆಯ isntructor ಹತ್ತಿರ medical transcription ಸಮಯವೂ ನನಗೆ ಈ ಸಂಗತಿ ಗೊತ್ತಾಗಲಿಲ್ಲ. med trans ಸಹವಾಸದ ಕಾರಣ ಹಚ್ಚಿಕೊಂಡ ಖಾಯಿಲೆ ಬಗೆಗಿಗಿನ ಗೀಳು, ಮತ್ತು ಏನಿಲ್ಲವೆಂದರೂ ಒಂದುವಾರಕ್ಕೊಮ್ಮೆ ಯಾದರೂ mayo clinic ವೆಬ್ ಸೈಟ್ ನೋಡಿಯೇ ತೀರುವ ಅಭ್ಯಾಸ, ಇವೆರಡರಿಂದಲೂ ಸಿಗದ info ಈಕೆಗೆ ಹೇಗೆ ಸಿಕ್ಕಿತು. ಈಕೆ ಓದುವ ಮಂಗಳ ಅಷ್ಟೊಂದು ಮುಂದುವರಿದು ಬಿಟ್ಟಿತೆ? ಸರಿ ಕೇಳಿಯೇ ಬಿಡೋಣ ಅವಳನ್ನೇ ಎಂದು ಅಲ್ಲಾ, ನಿನಗೆ ಎಲ್ಲಿಂದ ಸಿಕ್ತು ಈ ಹೊಸ ವಿಷ್ಯ ಎಂದು ಕೇಳಿದೆ. ನಿಮ್ಮ ಭಾವ ನಿಂಬೆ ಹಣ್ಣು ತಿನ್ನೋದಿಲ್ಲ cholesterol ಅಂತ ಎಂದು ಹೇಳಿದಾಗ ತಿಳಿಯಿತು ಸರಿಯಾಗೇ ಎಡವಿದ್ದಾಳೆ ಇವಳು ಎಂದು. ನನ್ನ ಭಾವನಿಗೆ uric acid ಸಮಸ್ಯೆ. ಅದಕ್ಕೆ ನಿಂಬೆ ಹಣ್ಣು ತಿನ್ನೋದಿಲ್ಲ. ಯಾವುದೇ citrus ಮೂಲದ ವಸ್ತುವೂ ಪಥ್ಯ ಅವರಿಗೆ. uric acid ನನ್ನ ಅರ್ಧಾಂಗಿನಿಗೆ cholesterol ಆಯಿತು. ಆಂಗ್ಲ ಭಾಷೆಯಲ್ಲಿ mind ur p’s and q’s ಎನ್ನುತ್ತಾರೆ confuse ಮಾಡಿ ಕೊಂಡಾಗ. ಈ confusion ನನ್ನನ್ನೂ ನಿಮ್ಮನ್ನೂ ಸುಖಾಸುಮ್ಮನೆ ಹಾವು ತುಳಿಯುವಂತೆ ಮಾಡಿದ್ದು.
ಯೋಗಾಸನ ಪೈಶಾಚಿಕವಂತೆ
ಯೋಗಾಸನ ಪೈಶಾಚಿಕವಂತೆ, ಹೀಗಂತ decree ಹೊರಡಿಸಿದವರು ಅಮೆರಿಕೆಯ ಪಾದ್ರಿಯೊಬ್ಬರು. ಸಿಯಾಟ್ಲ್ ರಾಜ್ಯದ ಆ ಪಾದ್ರಿಗೆ ಯೋಗಾಸನವು ಪದ್ಮಾಸನ ಹಾಕಿ ಕೂತ ಪಿಶಾಚಿಯಂತೆ ತೋರುತ್ತದಂತೆ. ಯೋಗ ತರಗತಿಗೆ ನೊಂದಾಯಿಸಿ ಕೊಳ್ಳುವುದರ ಮೂಲಕ ಒಂದು ಪುಟ್ಟ ಪೈಶಾಚಿಕ ತರಗತಿಗೂ ಸೇರುತ್ತಿದ್ದೀರಿ ಎಂದು ಕ್ರೈಸ್ತ ಧರ್ಮೀಯರಿಗೆ ಕಿವಿ ಮಾತು ಹೇಳಿದ R Albert Mohler Jr, ಕೆಂಟಕಿಯ ದಕ್ಷಿಣ ಬ್ಯಾಪ್ಟಿಸ್ಟ್ ಧಾರ್ಮಿಕ ಸಂಸ್ಥೆಯೊಂದರ ಅಧ್ಯಕ್ಷ. ಯೋಗದ ವೇಳೆ ಪಠಿಸಲ್ಪಡುವ ಮಂತ್ರಗಳು ಸಂಸ್ಕೃತ ದ್ದೂ ಮತ್ತು ಕ್ರೈಸ್ತ ಧರ್ಮದ ಆದರ್ಶಗಳಿಗೆ ವಿರೋಧಿಯೆಂದೂ ಹೇಳಿಕೆ ನೀಡಿದ ಈ ಪಾದ್ರಿ ಅಮೇರಿಕಾ ಹೇಗೆ ದಿನೇ ದಿನೇ ಕ್ರೈಸ್ತ ಮೂಲಭೂತವಾದದ ತನಗರಿವಿಲ್ಲದಂತೆ ಜಾರುತ್ತಿದೆ ಎನ್ನುವುದಕ್ಕೆ ನಿದರ್ಶನವಾದರು. ಕೆಲ ವಾರಗಳ ಹಿಂದೆ ಪವಿತ್ರ “ಕುರ್’ ಆನ್” ಗ್ರಂಥವನ್ನು ಬಹಿರಂಗವಾಗಿ ಸುಡಲು ಕರೆ ನೀಡಿದ್ದ ಪಾದ್ರಿಯೊಬ್ಬ ವಿಶ್ವದಾದ್ಯಂತ ಕೇಳಿ ಬಂದ ಪ್ರತಿಭಟನೆಗೆ ಮಣಿದು ಹಿಂಜರಿದ. ಯೋಗದ ಬಗ್ಗೆ ಮಲೇಷ್ಯಾದ ಮುಸ್ಲಿಂ ವಿಧ್ವಾಂಸರೂ ಅಪಸ್ವರ ಎತ್ತಿದ್ದರು, ಅದು ಇಸ್ಲಾಮಿನ ಅಡಿಗಲ್ಲಾದ ಏಕದೇವೋಪಾಸನೆಯ ತತ್ವಗಳಿಗೆ ವಿರುದ್ಧ ಎಂದು. ಆದರೆ ಇದು ಅವರ ವೈಯಕ್ತಿಕ ಹೇಳಿಕೆಯಾಗಿದ್ದು ಯಾವುದೇ ವ್ಯತಿರಿಕ್ತ ಪರಿಣಾಮ ಬೀರಲಿಲ್ಲ. ನನ್ನ ಭಾವ ಮತ್ತು ನನ್ನ ಅತ್ತೆ (ಸೋದರ ಮಾವನ ಪತ್ನಿ) ಯೋಗ ದ ಅಭಿಮಾನಿಗಳು. ಇಸ್ಲಾಂ ತತ್ವದ ಪರಿಧಿಯ ಒಳಗಿದ್ದು ಕೊಂಡೆ ಯೋಗದ ಪ್ರಯೋಜನ ಪಡೆಯುತ್ತಿದ್ದಾರೆ. ಇದೇ ರೀತಿಯ ಧಾರ್ಮಿಕ ಅಸಹಿಷ್ಣುತೆ ಯ ಮತ್ತೊಂದು ಉದಾಹರಣೆ ಕೇರಳ ರಾಜ್ಯದಲ್ಲಿ ಕಾಣಲು ಸಿಕ್ಕಿತು ಮೊನ್ನೆ. ಅತಿ ಹೆಚ್ಚು ಸಾಕ್ಷರತೆ ಇರುವ, ರಾಜಕೀಯ ಪ್ರಬುದ್ಧತೆಯಲ್ಲಿ ದೇಶದ ಎಲ್ಲಾ ರಾಜ್ಯಗಳಿಗಿಂತ ಮುಂಚೂಣಿಯಲ್ಲಿರುವ ಕೇರಳದಲ್ಲಿ ಮಕ್ಕಳಿಗೆ ಅಕ್ಷರಾಭ್ಯಾಸಕ್ಕೆ ಹಚ್ಚುವ ಧಾರ್ಮಿಕ ಪರಂಪರೆಯಿದೆ. ಅದಕ್ಕೆ “ವಿದ್ಯಾರಂಭಂ” ಎಂದು ಕರೆಯುತ್ತಾರೆ. ಸಾವಿರಾರು ಮಕ್ಕಳು ಈ ಸಮಾರಂಭದಲ್ಲಿ ಪಾಲುಗೊಂಡು ಅಕ್ಷರಾಭ್ಯಾಸಕ್ಕೆ ತಮ್ಮ ಮೊದಲ ಹೆಜ್ಜೆ ಇಡುತ್ತಾರೆ. ಈ ಸಮಾರಂಭಕ್ಕೆ ಜಾತಿ ಮತಗಳ ಬೇಧ ಭಾವ ಇಲ್ಲ. ಇರಲಿಲ್ಲ ಈ ವರ್ಷದವರೆಗೂ. ಸಬ್-ಇನ್ಸ್ಪೆಕ್ಟರ್ ಒಬ್ಬರ ಎರಡೂವರೆ ವರ್ಷದ ಪುಟಾಣಿ ಸಹ ಉತ್ಸಾಹದಿಂದ ಈ ಕಾರ್ಯಕ್ರಮದಲ್ಲಿ ಪಾಲುಗೊಳ್ಳಲು ಬಂದಿದ್ದ. ಆತ ಹಿಂದೂ ಅಲ್ಲ ಎಂದು ಹೇಳಿ ಅವನಿಗೆ ಪ್ರವೇಶ ನಿರಾಕರಿಸಲಾಯಿತು. ಓರ್ವ ಇಸ್ಲಾಂ ಧರ್ಮೀಯರಾದ ಕಾರಣ ಹುಡುಗನ ಪಾಲಕರಿಗೆ ಈ ಸಮಾರಂಭದಲ್ಲಿ ಪಾಲುಗೊಳ್ಳಲು ಸಾಧ್ಯವಾಗಲಿಲ್ಲ. “ವಿದ್ಯಾರಂಭಂ” ಸಮಾರಂಭ ನಡೆಯುವ ಸ್ಥಳವನ್ನು “ಇಲ್ಲಂ” ಎಂದು ಕರೆಯುತ್ತಾರೆ ಮಲಯಾಳಂ ಭಾಷೆಯಲ್ಲಿ, ಮತ್ತು “ಇಲ್ಲಂ” ಸಹ ದೇವಸ್ಥಾನದ ಒಂದು ಅಂಗ ಎಂದು ಕುಂಟು ನೆಪ ಒಡ್ಡಿ ಈ ಪುಟಾಣಿಗೆ ಪ್ರವೇಶ ನಿರಾಕರಿಸಲಾಯಿತಂತೆ. ಈ ಸುದ್ದಿ ಬಂದಿದ್ದ ಆಮಂತ್ರಿತ ಗಣ್ಯರಿಗೆ ತಿಳಿದು ಸಮಾರಂಭಕ್ಕೆ ಬಂದಿದ್ದ ಖ್ಯಾತ ಲೇಖಕ ಸಿ. ವಾಸುದೇವನ್ ಈ ತಾರತಮ್ಯವನ್ನು ಖಂಡಿಸಿ “ಇಲ್ಲಂ” ಆವರಣದ ಹೊರಗೆ ಈ ಮುಸ್ಲಿಂ ಹುಡುಗನಿಗೆ ಅಕ್ಷರಾಭ್ಯಾಸಕ್ಕೆ ಹಚ್ಚಿದರು. ಜಗತ್ತು ಯಾವ ರೀತಿ ದಿನೇ ದಿನೇ ಅಸಹಿಷ್ಣುತೆ ಕಡೆ ವಾಲುತ್ತಿದೆ, ಜನರ ಮಧ್ಯೆ ಕಂದಕ ಸೃಷ್ಟಿಸುತ್ತಿದೆ ಎಂದು ಶಾಂತಿ ಪ್ರಿಯ ಜನತೆ ಕಳವಳ ಪಡಲು ಮೇಲಿನ ಉದಾಹರಣೆಗಳೇ ಸಾಕೇನೋ.
ಮಾವಿನ ಮರದಲ್ಲಿ ತೆಂಗು
ಈಗಿನ ಕಾಲದ ಹುಡುಗ ರಿಗೆ concentration ಕಡಿಮೆ ಎಂದು ಹೇಳ್ತಾರೆ. ಏನೇ ಹೇಳಿದರೂ ಒಂದೋ, ತಲೆಗೆ ಹೋಗೋದಿಲ್ಲ, ಇಲ್ಲಾ, ಎಲ್ಲಾ ಕೇಳಿ ನನಗೆ ಅರ್ಥವಾಯಿತು ಅಂತ ಗೋಣಾಡಿಸಿ ಮರೆತು ಬಿಡೋದು, ಇದು ಈಗಿನ ಪೀಳಿಗೆಯ ವೈಶಿಷ್ಟ್ಯ. ಕಳೆದ ವಾರ ಹಾನಗಲ್ಲಕ್ಕೆ ಹೋಗುತ್ತಾ ನನ್ನ ಸೋದರ ಮಾವನ ಮಗನಿಗೆ ದಾರಿಯಿಂದ ಫೋನ್ ಮಾಡಿ ಹೊಳೆ (ಭದ್ರಾವತಿ) ಸಾಲಿನಿಂದ (ಮರದಿಂದ ಬಿದ್ದಿದ್ದರೆ) ಒಂದು ಹಕ್ಕಿ ಗೂಡನ್ನು ತೆಗೆದು ಕೊಂಡು ಬರಲು ನಿನ್ನ ಅಣ್ಣನಿಗೆ ಹೇಳು ಎನ್ನುವ ಸಂದೇಶ ನೀಡಿ ಅರ್ಥ ಆಯಿತು ಎಂದು ಖಾತ್ರಿ ಪಡಿಸಿ ಕೊಂಡ ನಂತರ ಫೋನ್ ಇಟ್ಟೆ. ರಾತ್ರಿ ಮನೆಗೆ ವಾಪಸಾದ ನಂತರ ಹೋಂ ವರ್ಕ್ ಮಾಡುತ್ತಾ ಕೂತವನಿಗೆ ಕೇಳಿದೆ ನನ್ನ ಬೆಳಗ್ಗಿನ ಸಂಭಾಷಣೆಯ ಬಗ್ಗೆ. ಏನೂ ಗೊತ್ತಿಲ್ಲದವನಂತೆ ನಾಟಕ ವಾಡಿದ. ಹತಾಶನಾಗಿ, ಅಲ್ಲಾ ಕಣೋ ನಿನಿಗ್ ನಾನ್ ಫೋನ್ ಮಾಡಿ ಏನ್ ಹೇಳ್ದೆ ಎಂದಾಗ, ಫೋನಾ? ಯಾವಾಗ? ಎಂದು ಇಷ್ಟಗಲ ಬಾಯ್ತೆರೆದ. ನಿನ್ನ ಅಣ್ಣನಿಗೆ ಏನ್ ಮೆಸೇಜ್ ಕೊಡಲು ನಾನ್ ಹೇಳ್ದೆ, ಎಂದು ಸಿಡುಕಿ ಕೇಳಿದಾಗ ಮೆಸೇಜಾ, ಊಂ, ಹಾಂ… ತಲೆ ಕೆರೆದುಕೊಳ್ಳುತ್ತಾ, ಹಾಂ…. ಈಗ ಜ್ಞಾಪಕ ಬಂತು ಎಂದ. ಸರಿ ಜ್ಞಾಪಕ ಬಂದಿದ್ದು ಏನಂತ ಹೇಳು ನೋಡೋಣ ಅಂದಾಗ, ಅದೇ…. ಅಟ್ಟದ ಮೇಲಿನಿಂದ ಕೊಬ್ಬರಿ ತೆಗೆಯೋದಕ್ಕೆ ಆಲ್ವಾ ನೀವು ಹೇಳಿದ್ದು ಎಂದಾಗ ನನ್ನ ಸಹನೆಯ ಕಟ್ಟೆ ಒಡೆಯದಿದ್ದರೂ ಸಂಭಾಳಿಸಿಕೊಂಡು ಹೇಳಿದೆ, ಅಲ್ಲಾ ಕಣೋ ಪೆದ್ದೆ, ನಾನು ಹೇಳಿದ್ದು ಅಟ್ಟದ ಮೇಲಿಂದ ಕೊಬ್ಬರಿ ಇಳಿಸೋದಕ್ಕಲ್ಲ, ಹೊರಗಿರುವ ಮಾವಿನ ಮರದಲ್ಲಿ ತೆಂಗು ಬಿಟ್ಟಿದೆ ಅದನ್ನು ಕೀಳು ಎಂದು ಹೇಳಿದ್ದು ಎಂದು ಹಲ್ಲು ಮಸೆಯುತ್ತಾ ಜಾಗ ಬಿಟ್ಟೆ. ಈ ಬೆಳವಣಿಗೆ growing years ನ ಮತ್ತೊಂದು ಪ್ರಾರಬ್ದ ಅಂತ ಬಿಟ್ಹಾಕೋದೋ, ಇಲ್ಲ, ಇದೂ (lack of concentration) ಒಂದು ರೀತಿಯ ರೋಗ ಎಂದು ಚಿಕಿತ್ಸೆ ಕಡೆ ಗಮನ ಹರಿಸೋದೋ ತಿಳಿಯುತ್ತಿಲ್ಲ.
ಶುಂಠಿ, ನೊಬೆಲ್, “ಸಪ್ಲೈ ಮತ್ತು ಡಿಮಾಂಡ್”
ಅರ್ಥಶಾಸ್ತ್ರದಲ್ಲಿ ಈ ವರುಷದ ನೊಬೆಲ್ ಪ್ರಶಸ್ತಿ ಮೂರು ಜನರಿಗೆ. Massachusetts Institute of Technology ಯ ಪೀಟರ್ ಡಯಮಂಡ್, Northwestern University ಯ ಡೇಲ್ ಮಾರ್ಟನ್ಸನ್, ಮತ್ತು London School of Economics ನ ಕ್ರಿಸ್ಟಾಫರ್ ಪಿಸ್ಸಾರಿಡ್ಸ್, ಪ್ರಶಸ್ತಿ ಯನ್ನು ಮೂರು ಪಾಲು ಮಾಡಿಕೊಂಡ ಅರ್ಥಶಾಸ್ತ್ರಜ್ಞರು ತಮ್ಮ ಪ್ರತಿಭೆಯ ಆಧಾರದ ಮೇಲೆ. ಏಕೆ ಸಿಕ್ಕಿತು ಈ ತ್ರಿಮೂರ್ತಿಗಳಿಗೆ ನೊಬೆಲ್? ಪೂರೈಕೆ ಮತ್ತು ಬೇಡಿಕೆ – supply and demand – ಮೇಲಿನ ಅಧ್ಯಯನಕ್ಕೆ ಲಭಿಸಿತು ಇವರುಗಳಿಗೆ ವಿಶ್ವದ ಅತ್ಯುನ್ನತ ಪ್ರಶಸ್ತಿ ನೊಬೆಲ್. ೧೯೭೦ ರ ದಶಕದಲ್ಲಿ ಮುಂದುವರಿದ ರಾಷ್ಟ್ರಗಳಿಗೆ “ತೈಲ ಸಂಕಷ್ಟ” ದ ನಂತರ ಎದುರಾದ ಮತ್ತೊಂದು ಸಮಸ್ಯೆ ನಿರುದ್ಯೋಗ. ನಿರುದ್ಯೋಗ, ಉದ್ಯೋಗದ ಲಭಿಕೆ ಮತ್ತು ವೇತನ, ಈ ಮೂರು ಅಂಶಗಳು ಒಂದಕ್ಕೊಂದು ತಳುಕು ಹಾಕಿಕೊಂಡು ವಿಶ್ವದ ಸರಕಾರಗಳಿಗೆ ಒಂದು ಸವಾಲಾಗಿತ್ತು. ಈ ಸಮಸ್ಯೆ ಹೇಗೆಂದರೆ ಕೆಲಸ ಕೊಡುವ ಧಣಿಗೆ ಕೆಲಸಗಾರರು ಸಿಗುವುದಿಲ್ಲ, ಕೆಲಸಗಾರಿಗೆ ಕೆಲಸ ಕೊಡುವ ಧಣಿ ಸಿಗುವುದಿಲ್ಲ. ಒಂದು ರೀತಿಯ catch 22 ಪರಿಸ್ಥಿತಿ. ಈ ಪರಿಸ್ಥಿತಿಯಿಂದ ಹೇಗೆ ಹೊರಬರಬಹುದು ಎಂದು ತೋರಿಸಿ ಕೊಟ್ಟರು ಈ ತ್ರಿಮೂರ್ತಿ ವಿಧ್ವಾಂಸರುಗಳು. “ಉದ್ಯೋಗಗಳಿದ್ದೂ ನಿರೋದ್ಯೋಗ” ಸಮಸ್ಯೆಗೆ ಪರಿಹಾರ ಕಾಣುವ ನಿಟ್ಟಿನಲ್ಲಿ ನಡೆಸಿದ ಇವರುಗಳ ಅಧ್ಯಯನ ಮತ್ತು ಪರಿಹಾರ ವಿಶ್ವ ಸರಕಾರಗಳಿಗೆ ನೆರವಾಗುತ್ತದಂತೆ.
“ಸಪ್ಲೈ ಮತ್ತು ಡಿಮಾಂಡ್”ಎಂದರೇನು? ಬಹುತೇಕ ಜನರಿಗೆ ತಿಳಿದದ್ದೇ ಇದು, ಆದರೂ ದಿನ ನಿತ್ಯ ನಮಗೆ ಕಾಣ ಸಿಗುವ ಉದಾಹರಣೆಗಳ ಮೂಲಕ ಅರ್ಥೈಸಿ ಕೊಳ್ಳೋಣ ಈ phenomenon ಅನ್ನು. ಮೇಲೆ ಹೇಳಿದ “ಉದ್ಯೋಗಗಳಿದ್ದೂ ನಿರೋದ್ಯೋಗ” ಗೆ ಸಂಬಂಧಿಸಿದ ಅನುಭವವಲ್ಲ ಕೆಳಗಿನದು. ಇದು ೧೯೮೪ ರ ಮಾತು.
ಒಮ್ಮೆ ತರಕಾರಿಗೆಂದು ಭದ್ರಾವತಿಯ ಪುರಸಭೆ ಒಡೆತನದ (ನಿಜವಾದ ಒಡೆಯ ರೈಲ್ವೆ ಅಂತೆ, ಈಗ ಅದನ್ನು ನೆಲಸಮಗೊಳಿಸಿದ್ದಾರೆ ರಸ್ತೆ ಅಗಲೀಕರಣದ ಕಾರಣ ಒಡ್ಡಿ ) ಮಾರುಕಟ್ಟೆಗೆ ಹೋಗಿದ್ದೆ. ಪರಿಚಯದ ಕೇರಳ ಮೂಲದ ಅಂಗಡಿಯವ ಹೇಳಿದ ಹೇ, ಶುಂಠಿ ತಗೊಂಡು ಹೋಗು, ಈ ಶುಂಠಿ ಮಾರಿಯೇ ನಿನ್ನ ಮಾವನಿಗೆ ವರದಕ್ಷಿಣೆ ಕೊಟ್ಟಿದ್ದು ಹೆಣ್ಣಿನ ಕಡೆಯವರು ಎಂದು. ನನಗೆ ಅರ್ಥವಾಗಲಿಲ್ಲ, ಆತ ಬಿಡಿಸಿ ಹೇಳಿದ. ಆ ಸಮಯದಲ್ಲಿ ರಾಜ್ಯದಲ್ಲಿ ಶುಂಠಿಗೆ ಬಂತು ಬರ, ಶುಂಠಿ ಬೆಳೆದು ಗುಡ್ಡ ಹಾಕಿದವನೇ ಶ್ರೀಮಂತ. ಲಾಟರಿ ಹೊಡೆದಂತೆ. ನನ್ನ ಅತ್ತೆಯ ಮನೆಯವರು ಜಮೀನ್ದಾರರು. ಅವರ ಲಕ್ ಖುಲಾಯಿಸಿದ್ದರಿಂದ ಎಲ್ಲಾ ಬಿಟ್ಟು ಅಂಕು ಡೊಂಕಾಗಿ ತರಕಾರಿಯಲ್ಲಿ ಶುದ್ಧ ಕುರೂಪಿಯಾದ ಶುಂಠಿಯನ್ನು ಬೆಳೆದರು ತಮ್ಮ ಹೊಲದ ತುಂಬಾ. ಬಂತು ಒಳ್ಳೆ ಬೆಲೆ, ಮಾರಿದ್ದೇ ಮಾರಿದ್ದು. ಶುಂಠಿ ಇಲ್ಲದ ಮಾರುಕಟ್ಟೆಯಲ್ಲಿ ಶುಂಠಿ ಇಟ್ಟುಕೊಂಡವನೇ “ಶಾಣ”. ಶುಂಠಿ ಬೆಳೆದವ ವಿಜಯದ ನಗೆ ಬೀರಿದ. ಜೇಬು ತುಂಬಿಸಿಕೊಂಡ. ಈಗಲೂ ನೋಡಿ, ಆ ಪಕ್ಷದಿಂದ ಈ ಪಕ್ಷ ಎಂದು ನೆಗೆಯುವ ನಾಚಿಕೆಗೆಟ್ಟ ಶಾಸಕ, ರಾಜಕಾರಣಿಯಂತೆ ನಮ್ಮ ರೈತರೂ ಒಲಾಡುತ್ತಾರೆ, ಒಮ್ಮೆ ಕಬ್ಬು ಎಂದರೆ, ಮತ್ತೊಮ್ಮೆ ಅಡಿಕೆ, ಮಗುದೊಮ್ಮೆ ರೇಶಿಮೆ, ಬಾಳೆ ಹೀಗೇ. ಯಾವುದಕ್ಕೆ ಮಾರುಕಟ್ಟೆಯಲ್ಲಿ ಕ್ಷಾಮವಿರುತ್ತದೋ ಅದನ್ನು ಪೂರೈಸಿದಾಗ ಸಿಗುವ ಲಾಭದ ಮೇಲೆ ಕಣ್ಣಿಟ್ಟು ಬೆಳೆಯುತ್ತಾರೆ ಉತ್ಪನ್ನಗಳನ್ನು.
ಇದು ನಾನು ಅರ್ಥೈಸಿ ಕೊಂಡ supply demand story.
ಜೋಕೆ, ಅಂಡು ಕಂಡಲ್ಲಿ ಗುಂಡು
ಕಿತಾಪತಿ ಜಾಸ್ತಿ ಆದಾಗ ಕಿಡಿಗೇಡಿಗಳ ವಿರುದ್ಧ ಪೊಲೀಸರು ಕಂಡಲ್ಲಿ ಗುಂಡು ಪ್ರಯೋಗಿಸುವುದುಂಟು. ಅಮೆರಿಕೆಯ ನಗರವೊಂದರಲ್ಲಿ ಬೇರೆಯದೇ ಆದ ಘಟನೆ. ಇಲ್ಲಿ ಅಂಡಿಗೆ ಗುಂಡು. ಅಂಡುಗಳ ಪ್ರದರ್ಶನದಿಂದ ರೋಸಿ ಹೋದ ನನಗೆ ಈ ರೋಚಕ ಸುದ್ದಿ ಓದಿ ಒಂದು ರೀತಿಯ ಆನಂದ. ಗುಂಡು ಗಳನ್ನು ಹಾರಿಸಿ ತನ್ನ ಹತಾಶೆ ಹೊರ ಹಾಕಿದ “ಕೆನ್ನೆತ್ ಬಾಂಡ್ಸ್” ಕೊನೆಗೂ ಆದ ಜೇಮ್ಸ್ ಬಾಂಡ್. ಅಂಡುಗಳ ವಿರುದ್ಧ ತನ್ನದೇ ಆದ ಶೈಲಿಯಲ್ಲಿ ಸಮರ ಸಾರಿದ. ಗುಂಡೇಟು ತಿಂದ ಬಡಪಾಯಿ ಹುಡುಗರು ಆಸ್ಪತ್ರೆಯಲ್ಲಿ ಚೇತರಿಸಿ ಕೊಳ್ಳುತ್ತಿದ್ದಾರೆ. ೧೬, ೧೭ ರ ಪ್ರಾಯದ ಹುಡಗರೊಂದಿಗೆ ತಮ್ಮ ಪ್ಯಾಂಟ್ ಸರಿಯಾಗಿ ತೊಟ್ಟು ಕೊಳ್ಳಲು ವಿನತಿಸಿದ ೪೫ ರ ಪ್ರಾಯದ ಬಾಂಡ್ಸ್. ಮಾಗಿದ ಹದಿಹರೆಯ, ಅದರ ಮೇಲೆ ಮೊಂಡು ಕಿವುಡು ಬೇರೆ. ಹುಡಗರು ಸೊಪ್ಪು ಹಾಕಲಿಲ್ಲ. ಸಿಟ್ಟಿಗೆದ್ದ ಬಾಂಡ್ಸ್ ತನ್ನ ಜೇಬಿನಲ್ಲಿದ್ದ ಆಟೋ ಮ್ಯಾಟಿಕ್ ಗನ್ ಹೊರತೆಗೆದು ನೆಟ್ಟೆ ಬಿಟ್ಟ ಗುರಿಯ, ಚಡ್ಡಿಯೊಳಗಿಂದ ಇಣುಕುತ್ತಿದ್ದ ಗಿರಿಗಳ ಮೇಲೆ. ಎದ್ನೆಪೋ, ಸತ್ನೆಪೋ ಎನ್ನುತ್ತಾ ಹುಡುಗರು ಮೇಲೇರಿಸಿಕೊಳ್ಳಲಾರದ ಪ್ಯಾಂಟು ಗಳನ್ನು ಮೇಲೇರಿಸಿಕೊಳ್ಳಲು ಹೆಣಗುತ್ತಾ. ಬಾಂಡ್ಸ್ ಮತ್ತಷ್ಟು ಗುಂಡುಗಳನ್ನು ಹಾರಿಸಿದ. ನಮಗೆ ಬಾಂಡ್ಸ್ ನ ಈ ಕೃತ್ಯ ಸ್ವಲ್ಪ ಅತಿಯಾಗೇ ತೋರಿದರೂ ಕೆಲವೊಮ್ಮೆ ಅಸಹನೆ ಮೇಲುಗೈ ಸಾಧಿಸುತ್ತದೆ ಅಸಹ್ಯ ಹುಟ್ಟುವ ಫ್ಯಾಶನ್ ಅಂಡನ್ನು ತೋರಿಸುವ ಮಟ್ಟಕ್ಕಿಳಿದಾಗ. ಭೂಮಿಯ ಗುರುತ್ವಾಕರ್ಷಣ ಶಕ್ತಿಯ ಸಾಮರ್ಥ್ಯವನ್ನು ಪರೀಕ್ಷಿಸಲೆಂದೇ ಈ ಹುಡುಗರು ತೊಡುತ್ತಾರೋ ಏನೋ ಪ್ಯಾಂಟುಗಳನ್ನು. precarious ಆಗಿ ಹಿಂಬದಿಯಿಂದ ನೇತಾಡುವ ಪ್ಯಾಂಟು ಯಾವುದೇ ಕ್ಷಣದಲ್ಲೂ , ನಿಮಿಷದಲ್ಲೂ ಧರೆಗೆ ಶರಣಾಗುವುದು ಎಂದು ತೋರುತ್ತದೆ ನೋಡುಗರ ಕಣ್ಣುಗಳಿಗೆ.
ನನ್ನ ತಂಗಿಯರ ಇಬ್ಬರು ಗಂಡು ಮಕ್ಕಳು ಮತ್ತು ಸೋದರ ಮಾವನ ಮಗನೊಬ್ಬ ಈ ರೀತಿಯ ಅಂಡುಗಳ ಪ್ರದರ್ಶನಕ್ಕೆ ಶರಣಾದ ಯುವ ಸಮೂಹ. ಯಾಕ್ರೋ ಈ ರೀತಿಯ ಹೊಲಸು, ಕಳಪೆ ಫ್ಯಾಶನ್ ಗೆ ಮಾರು ಹೋಗುತ್ತೀರಾ ಎಂದು ಸಿಡುಕಿದಾಗ ಬಹಳ ಕಷ್ಟ ಪಟ್ಟು ಮೇಲೆ ಎಳೆಯಲು ವ್ಯರ್ಥ ಪ್ರಯತ್ನ ನಡೆಸುತ್ತಾರೆ. ಪರಿಚಯಸ್ಥರೊಬ್ಬರು ಹೇಳಿದರು, ಬೈದಾಗ ಪ್ಯಾಂಟ್ ಮೇಲೆರಿಸುವಂತೆ ಅವರು ನಾಟಕ ಮಾತ್ರ ಮಾಡೋದು, ತುದಿಗಾಲಿನಲ್ಲಿ ನಿಂತು ಪ್ಯಾಂಟ್ ಏರಿಸುವಂತೆ ನಮಗೆ ತೋರುತ್ತದೆಯೇ ಹೊರತು ಮೇಲೆ ಏರಿದ್ದು ಅವರ ತುದಿಗಾಲು ಮಾತ್ರ, ಪ್ಯಾಂಟ್ ಅಲ್ಲ ಎಂದು ಉರಿಯುತ್ತಾ ನುಡಿದರು.
ಹೆಣ್ಣು ಮೈ ತೋರಿಸಿ ಕಾರಿನ ಟಯರು ಗಳನ್ನೂ, ಪುರುಷರ ಒಳ ಉಡುಪುಗಳನ್ನೂ ಪ್ರೊಮೋಟ್ ಮಾಡಲು ತಯಾರಿರುವಾಗ, ಅದನ್ನು ಮೆಚ್ಚಿ ಚಪ್ಪಾಳೆ ತಟ್ಟುವ ಸಮೂಹವೂ ಇರುವಾಗ ನಮ್ಮ ಹಿಂಬದಿಯ ಪ್ರದರ್ಶನದಿಂದ ಆಗುವ ನಷ್ಟವಾದರೂ ಏನು ಎಂದು ಇವರಿಗೆ ಅನ್ನಿಸಿರಲಿಕ್ಕೂ ಸಾಕು.
ನಾನು ಫ್ಯಾಶನ್ ವಿರೋಧಿಯಲ್ಲ. ಆದರೆ ಎಲ್ಲಕ್ಕೂ ಒಂದು ಮಿತಿ ಇದ್ದೇ ಇರುತ್ತದೆ. . ಒಂದು ಕಡೆ ಹದಿಹರೆಯದ ಹುಡುಗರ ಕಿರಿಕ್ ಅನ್ನಿಸುವ “ಪಿರ್ರೆ” ಗಳ ಪ್ರದರ್ಶನ, ಮತ್ತೊಂದೆಡೆ “ಚಿಯರ್ ಗರ್ಲ್ಸ್” ಗಳ ಗರಿಷ್ಟ ಅಂಗ ಸೌಷ್ಠವ ಗಳ ಅರೆನಗ್ನ ಪ್ರದರ್ಶನ. ಇವೆರಡರ ಮತ್ತು ಇಂಥವೇ unsolicited ಮೈಮಾಂಸ ತೋರಿಸುವ ಫ್ಯಾಶನ್ ಕಾರಣ ಉಲ್ಲಾಸೀ ಅಥವಾ ದಾಂಪತ್ಯ ಬದುಕಿಗೆ ಬೇಕಾದ ಶೃಂಗಾರ ಭಾವನೆ ಎಲ್ಲಿ ಮಾಯಾವಾಗಿ ಬಿಡುತ್ತೋ ಅನ್ನೋ ಚಿಂತೆ ನಮ್ಮನ್ನು ಕಾಡಿದರೆ ಆ ಚಿಂತೆ well founded.
