ಬೊಗಳುವ ಏರಿಯ

ಭಾಷೆಗಳ ಅಧ್ಯಯನ ಒಂದು ಸೊಗಸಾದ ಹವ್ಯಾಸ. ತುಂಬಾ ಆಳವಾಗಿ ಹೋಗದೆ ಮೇಲ್ಮೆಯಲ್ಲೇ ಒಂದೊಂದು ಭಾಷೆಗಳ ವೈವಿಧ್ಯತೆ ನೋಡಿದಾಗ ವಿಸ್ಮಯದೊಂದಿಗೆ ಒಂದಿಷ್ಟು ನಗಲು ಮೆಟೀರಿಯಲ್ ಸಹ ಸಿಗುತ್ತದೆ. ಹಾಗೊಂದು ಭಾಷೆಯ ನಂಟು ಬೆಳೆಯಿತು ನನ್ನ ಮರಳುಗಾಡಿನ ಬದುಕಿನಲ್ಲಿ. ಅದೇ ಅರಬ್ಬೀ ಭಾಷೆ. ಶತಮಾನಗಳ ಇತಹಾಸ ಇರುವ, ವಿಶ್ವದ ೨೨ ಕೋಟಿಗೂ ಹೆಚ್ಚು ಜನರು ಮಾತನಾಡುವ ಅರಬ್ಬೀ ಭಾಷೆಯ ಲಿಪಿ “ಬಲದಿಂದ ಎಡಕ್ಕೆ” ಬರೆಯಲ್ಪಡುತ್ತದೆ. ಈ ರೀತಿ ಬರೆಯಲ್ಪಡುವ ಮತ್ತೊಂದು ಭಾಷೆ ಎಂದರೆ ಯಹೂದಿಗಳ “ಹೀಬ್ರೂ”.

ಅರಬ್ಬೀ ಭಾಷೆಯಲ್ಲಿ “ಪ”  ಅಥವಾ “P” ಅಕ್ಷರ ಇಲ್ಲ. ಆಂಗ್ಲ ಭಾಷೆಯಲ್ಲಿ ಒಂದು ಗಾದೆ ಇದೆ. ” mind your p’s and q’s” ಅಂತ. ಹಾಗೆಯೇ ಅರಬ್ಬೀ ಮಾತನಾಡುವಾಗ “mind your p’s and b’s ಎಂದು ಹೇಳಬಹುದು. ಈ “p” ಮತ್ತು “b” conundrum ನ ಸ್ವಾರಸ್ಯ ಕೇಳಿ. p ಬದಲಿಗೆ b ಬಳಸಿದಾಗ ಆಗುವ ಅನಾಹುತ;  “Ahmad put his car in the parking area” will become “ahmad put his car in the “barking area”. ಅಹಮದ್ ತನ್ನ ಕಾರನ್ನು ಬೊಗಳುವ ಸ್ಥಳದಲ್ಲಿ ನಿಲ್ಲಿಸಿದ ಅಂತ.  ಪಾರ್ಕಿಂಗ್ ಏರಿಯ, ಬಾರ್ಕಿಂಗ್ ಏರಿಯ ಆಯಿತು. go and pray ಎಂದು  ಹೇಳುವ ಬದಲು go and “bray” ಎಂದು ಹೇಳಿದಂತೆ. bray ಪದದ ಅರ್ಥ ಗೊತ್ತಲ್ಲ? ಗಾರ್ದಭ ಸ್ವರ, ಮಾರಾಯ್ರೇ.

ಜೈ ಕನ್ನಡ

ಒಂದು ರಾತ್ರಿ ಸದ್ದಾಂ ಹುಸೇನನಿಗೆ ಕನಸು. ಪಕ್ಕದ ಕುವೈತ್ ಎಂಬ ಪುಟ್ಟ ರಾಜ್ಯ ತನ್ನ ೧೯ ನೆ ಪ್ರಾಂತ್ಯ ಅಂತ. ಸರಿ ಬೆಳಿಗ್ಗೆದ್ದು ತನ್ನ ಸೈನಿಕರಿಗೆ ಆಜ್ಞೆ ಕೊಟ್ಟ, ಬುತ್ತಿ ಕಟ್ಟಿಕೊಂಡು ಕುವೈತ್ಗೆ ಹೊರಡಿ, ಒಂದೆರಡು ದಿನಗಳಲ್ಲಿ ಬರುವಿರಂತೆ ಮರಳಿ ಎಂದು.  ಅದು ಆಗಸ್ಟ್ ೨, ೧೯೯೦. ನಾನು ಆಗತಾನೆ ಗ್ರಹಚಾರಕ್ಕೆ ಹೊಸದಾಗಿ ಒಂಟೆ ಮೇಯಿಸಲೆಂದು ಸೌದಿ ಅರೇಬಿಯಕ್ಕೆ ಬಂದಿದ್ದು. ನಂತರದ ಘಟನೆಯೆಲ್ಲ ತಮಗೆ ತಿಳಿದದ್ದೇ. ಹತ್ತಾರು ರಾಷ್ಟ್ರಗಳು ಸೇರಿ ರೌಡಿಯನ್ನು ತದುಕುವಂತೆ ಇರಾಕನ್ನು ತದುಕಿ ಕುವೈತಿನಿಂದ ಹೊರ ಹಾಕಿದ್ದು.

ದಹರಾನ್ ಎನ್ನುವ ಸ್ಥಳದಲ್ಲಿ ನನಗೆ ಕೆಲಸ. ಕುವೈತ್ ಮತ್ತು ಇರಾಕಿಗೆ ಸಮೀಪ. ಮಿಲಿಟರಿ ಆಸ್ಪತ್ರೆಯೊಂದರ cafeteria ದಲ್ಲಿ cashier ಆಗಿದ್ದೆ. ೨೫೦ ಅಮೆರಿಕನ್ ಸೈನಿಕರು ಸೇರಿದಂತೆ ಒಟ್ಟು ೧೦೦೦ ಕ್ಕೂ ಹೆಚ್ಚು ಜನ ಬರುತ್ತಿದ್ದರು. ಕನ್ನಡಿಗರು ಇಲ್ಲ ಅನ್ನುವಷ್ಟು ವಿರಳ. ನನಗೋ ಕನ್ನಡ ಮಾತನಾಡಲು ಜನ ಸಿಗದೇ ತಳಮಳ. ಯಾರೋ ಹೇಳಿದರು ಕರ್ನಾಟಕದ ಒಬ್ಬ ಡಾಕ್ಟರ್ ಇದ್ದಾರೆ, ಬ್ರಿಟಿಷ್ ಪೌರ ಅಂತ. ಆದರೆ ಅವರು ಕನ್ನಡದಲ್ಲಿ ಮಾತನಾಡಲೊಲ್ಲರು. ಅವಮಾನವೋ, ಪ್ರತಿಷ್ಟೆಗೆ ಚ್ಯುತಿ ಬರಬಹುದು ಎಂದೋ ಏನೋ. ಒಂದು ದಿನ ನನ್ನ ಬಳಿ ತಮ್ಮ tray ತೆಗೆದುಕೊಂಡು ಬಂದರು ಚಿಕೆನ್ ಊಟದೊಂದಿಗೆ. ನಾನು cash register ನಲ್ಲಿ ಎಂಟರ್ ಮಾಡುತ್ತಿದ್ದೆ. ಆಗ ಅವರು ಕೇಳಿದರು ಚಿಕನ್ಗೆ ಎಷ್ಟು ಎಂದು ಇಂಗ್ಲೀಷಿನಲ್ಲಿ. ನಾನು 6 riyals ಎಂದೆ. ಕೂಡಲೇ ಆತ “ಆರೆಂಟ್ಲೇ ನಲವತ್ತೆಂಟು” ಎಂದು ( ಒಂದು ರಿಯಾಲಿಗೆ ಆಗ ೮ ರೂಪಾಯಿ) ಕನ್ನಡದಲ್ಲಿ ಗುಣಿಸಿ ಹಣ ಕೊಟ್ಟರು. ನಾನು ಮನಸಿನಲ್ಲೇ ಹಾಗೆ ಬಾರಣ್ಣ ದಾರಿಗೆ ಎಂದು ಹಣ ತೆಗೆದುಕೊಂಡೆ. ಅಂದರೆ ಯಾರು ಎಷ್ಟೇ ಶೋಕಿ ಹೊಡೆದರೂ ಆಂತರ್ಯದ ಭಾಷೆ ಅನ್ನೋದು ತನ್ನ ಬಣ್ಣವನ್ನು ತೋರಿಸದೇ ಬಿಡೋಲ್ಲ. ಅದರಲ್ಲೂ ಮಗ್ಗಿಯಂತೂ ಸ್ವಭಾಷೆಯಲ್ಲಿ ಕಲಿತಿದ್ದರೆ ನೀವು ಸ್ವರ್ಗಲೋಕಕ್ಕೆ ಹೋದರೂ ಬಿಡದು ತನ್ನತನವನ್ನು. ನೀವು ಅಮೆರಿಕನ್ನಾದರೂ ಸರಿ, ಬ್ರಿಟಿಷ್ ಆದರೂ ಸರಿ ಇಲ್ಲಾ, ಮೊಜಾಂಬಿಕ್ನವನಾದರೂ ಸರಿ.

…..ಕನ್ನಡವೆನಲು ಕುಣಿದಾಡುವುದೆನ್ನೆದೆ….

 

ಮರಳು ಗೂಡಿನಿಂದ…

ಮೊನ್ನೆ ಒಂದು ತಮಾಷೆ ಸೌದಿ ಅರೇಬಿಯಾದ ಪಟ್ಟಣವೊಂದರಲ್ಲಿ. ಅದೆಂದರೆ ಬಹಳ ವರ್ಷಗಳಿಂದ ಧೂಮಪಾನಕ್ಕೆ ಗುಲಾಮನಾಗಿದ್ದ ಹುಡುಗ ಚಟ ಬಿಟ್ಟ. ವಾಹ್! ಇದೂ ಒಂದು ಸ್ವಾರಸ್ಯಾನ ಎಂದು ಮೂಗೆಳೆಯಬೇಡಿ. ತಾಳ್ಮೆ ಇರಲಿ, ತಾಳಿದವನು ಬಾಳಿಯಾನು. ಚಟ ಬಿಟ್ಟ ಹುಡುಗನಿಗೆ ೯೦ ವರ್ಷ ವಯಸ್ಸು. ಆಆಅ, ತೊಂಭತ್ತಾ? ಹೌದು ತೊಂಭತ್ತು, ಭರ್ತಿ. ಸ್ವಲ್ಪ ಆಚೇನೂ ಇಲ್ಲ, ಈಚೇನೂ ಇಲ್ಲ. ಚಟ್ಟದ ಸಮೀಪ ಬಂದು ಗೆಳೆತನ ಬಿಡೋದೇ ಸಿಗರೇಟಿನ? ಈಗ ಕುಹಕ ಬಿಟ್ಟು ಇದರಲ್ಲೊಂದು moral ಅನ್ನು ಹುಡುಕೋಣ.

ವಯಸ್ಸು ಒಂದು statistics ಅಷ್ಟೇ. ಏನಾದರೂ ಸಾಧಿಸಬೇಕಿದ್ದರೆ ವಯಸ್ಸಿನ ಮುಲಾಜೋ, ಅನುಮತಿಯೋ ಬೇಕಿಲ್ಲ, ಬೇಕಿರುವುದು ಸಾಧಿಸ ಬೇಕೆಂಬ ಛಲ. “ಮಣಿಸಬಹುದು ಎಪ್ಪತ್ತರಲ್ಲಿ “ಎವರೆಸ್ಟ್” ಅನ್ನೂ, ತೊಂಭತ್ತರಲ್ಲಿ ಧೂಮದ ಚಟವನ್ನೂ”.      

 

ಬಾಲ್ಯದ ಸುತ್ತ…

ಹೈ ಸ್ಕೂಲಿನಲ್ಲಿದ್ದಾಗ ನಡೆದ ಘಟನೆ. JTS ಶಾಲೆ principal ನನ್ನ ತಂದೆಗೆ ಪರಿಚಯವಿದ್ದುದರಿಂದ ನನ್ನನ್ನು ಅಲ್ಲಿಗೆ ಸೇರಿಸಿದ್ದರು. ಬೇರೆ ಪ್ರೌಢ ಶಾಲೆಯ ಹಾಗಲ್ಲ ಈ ಶಾಲೆ. carpentry, fitting, electrical, mechanical ವಿಷಯಗಳನ್ನೂ ಕಲಿಸುತ್ತಾರೆ. ೮ ನೆ ಕ್ಲಾಸಿನವರಿಗೆ ತಿಂಗಳಿಗೆ ೧೦ ರೂಪಾಯಿ ಸ್ಟೈಪೆಂಡ್, ೯ ಮಾತು ೧೦ ತರಗತಿಗಳವರಿಗೆ ೧೫ ರೂಪಾಯಿ. ಆಗ ಈ ಹತ್ತೂ ಮತ್ತು ಹದಿನೈದಕ್ಕೆ ಬಹಳ ಕೀಮತ್ತು. ಈಗಿನ ಮಕ್ಕಳು ೧೦ ರೂಪಾಯನ್ನು ಎಡಗೈಯಿಂದಲೂ ಮುಟ್ಟುವುದಿಲ್ಲ. ಎರಡು ಮೂರು ತಿಂಗಳ ಹಣ ಕೂಡಿಸಿ ನನ್ನಮ್ಮನಿಗೆ ಮನೆಗೆ ಬೇಕಾದ ಏನಾದರೂ ಸಾಮಾನನ್ನು ಕೊಡಿಸುತ್ತಿದ್ದೆ.

ನಮ್ಮ ಶಾಲೆಯ ಕಂಪೌಂಡ್ ಗೋಡೆ ಕೆಲಸದ ಕಾಮಗಾರಿ ನನ್ನ ತಂದೆಯವರಿಗೆ ಸಿಕ್ಕಿ ನನಗೆ ದೊಡ್ಡ ತಾಪತ್ರಯವಾಯಿತು. ಗೋಡೆ ಕೆಲಸ ಮುಗಿದ ಕೂಡಲೇ ದರಿದ್ರದ ೧೧೦ ವರ್ಷಗಳಲ್ಲಿ ಆಗಿರದಂಥ ಮಳೆ ನನ್ನ ತಂದೆ ಕಟ್ಟಿಸಿದ ಗೋಡೆಯನ್ನು ತನಗೆ ಸಲ್ಲಬೇಕಾದ ಶುಲ್ಕ ಎನ್ನುವಂತೆ ತಿಂದು, ನೆಕ್ಕಿ ಹೋಯಿತು. ಮಾರನೆ ದಿನ ಶಾಲೆಗೆ ಬಂದಾಗ ಎಲ್ಲಿದೆ ಗೋಡೆ? ಶುರುವಾಯಿತು ಹಾಸ್ಯದ ಸುರಿಮಳೆ. ತಮಾಷೆ, ಕುಹಕ ಮಾಡುವುದೇ ತನ್ನ ಕಸುಬೆನ್ದುಕೊಂಡ ನಮ್ಮ ಕನ್ನಡ ಮಾಷ್ಟ್ರು ಇಡೀ ದಿನ ನನ್ನ ಮಾನ ತೆಗೆದರು. ಕೋಪದಿಂದ ಮನೆಗೆ ಹೋದ ನಾನು ತಂದೆಯನ್ನು ಎಂಥ ಗೋಡೆ ಕಟ್ಟಿಸಿದಿರಾ ಎಂದು ತರಾಟೆಗೆ ತೆಗೆದುಕೊಂಡೆ. ಆಗ ತಂದೆ ಶಾಂತವಾಗಿ ಹೇಳಿದ್ದು ಇದು; “ಲೇ, ಹೋಗಿ ನಿನ್ನ ಮೇಷ್ಟ್ರಿಗೆ ಹೇಳು ಆ ಗೋಡೆಯೇನಾದರೂ ಬಿದ್ದಿಲ್ಲದೆ ಹೋಗಿದ್ದರೆ ಶಾಲೆಯ ಕಟ್ಟಡವೇ ಬಿದ್ದು ಎಲ್ಲಾದರೂ ಮರದ ಕೆಳಗೆ ಕೂತು ಪಾಠ ಹೇಳಬೇಕಾಗಿತ್ತು ಅಂತ”. ಗೋಡೆಗೆ drain holes ಕೊಟ್ಟಿರಲಿಲ್ಲ. ಅದು ಇಂಜಿನಿಯರ್ನ ತಪ್ಪೋ, ನಮ್ಮಪ್ಪನದೋ ನನಗೆ ಗೊತ್ತಿಲ್ಲ. ಆ ನೀರು ಹೊರಹೋಗದೆ ಅಲ್ಲೇ ನಿಂತಿದ್ದರೆ ಶಾಲೆಯೇ ಬೀಳುತ್ತಿತ್ತಂತೆ. ಈ ಕತೆಯನ್ನು ನಾನೇನೂ ಶಾಲೆಗೆ ಹೋಗಿ ಹೇಳಲಿಲ್ಲ ಅನ್ನಿ. a very embarrassing story.   

 

back to reality…

ಈಸಬೇಕು ಇದ್ದು ಜೈಸಬೇಕು…ಮದುವೆ ಆಗಬೇಕು, ಆಗಿ ಜೈಸಬೇಕು, ಸಾಧ್ಯಾನಾ? ಮದುವೆ ಅನ್ನೋ ವ್ಯವಸ್ಥೆಯಲ್ಲಿ ಹೆಣ್ಣೇ ಅಂತ ಕಾಣುತ್ತೆ major beneficiary. ಗಂಡಿಗೆ ಸಿಗುವುದು ಬ್ಯಾಂಕಿನ ಪಾಸ್ ಬುಕ್ನಲ್ಲಿ ಬಡ್ಡಿಯ ಎಂಟ್ರಿ ಇರುತ್ತಲ್ಲ, ಕೆಲವು ಚಿಲ್ಲರೆಗಳು, ಅಷ್ಟೇ. shhhh, ಕೇಳಿಸಿ ಕೊಂಡಾಳು. ಮದುವೆ ಊಟ ಹೋಗಿ ತಿಥಿಯ ತಿಂಡಿಯ ತಯಾರಿ ಶುರುವಾಗೋದು ಬೇಡ.  

ಬಾಲ್ಯದ ಕಿನಾರೆಯಿಂದ…

೬ ನೆ ಕ್ಲಾಸಿನಲ್ಲಿದ್ದಾಗ ನಡೆದದ್ದು. ಶಾಲೆಯಲ್ಲಿನ ಮೇಷ್ಟ್ರುಗಳಿಗೆ ಅಡ್ಡ ಹೆಸರಿಟ್ಟು ಖುಷಿ ಪಡುವುದು ನಮ್ಮ ಕೆಲಸ. ಒಂದು ದಿನ ಕನ್ನಡದ ಮೇಷ್ಟ್ರು ೧೦೦ ವಸ್ತುಗಳ ಹೆಸರನ್ನು ಬರೆಯಲು ಹೇಳಿದರು. ಬಾಯಿಗೆ ಬಂದದ್ದೆಲ್ಲಾ ಬರೆದಾಯಿತು. ನನ್ನ ಮಿತ್ರ ಕುಮಾರ ಕೇಳಿದ, ಲೇ, ಮೇಷ್ಟ್ರ ಹೆಸರು ” ಬ್ಯಾಟರಿ” ಎಂದು ಬರೆದರೆ ಹೇಗೆ? ಇದು ಕೇಳಿ ನಮಗೆ ಪುಳಕವಾಗಿ ಹೌದು ಕಣೋ ಅದನ್ನೂ ಸೇರಿಸು ಎಂದು ಪುಸಲಾಯಿಸಿ ಬರೆಸಿದೆವು. ಅವನ ಹೆಸರು ಬಂದಾಕ್ಷಣ ಎದ್ದು ಹೋದ ಕುಮಾರ ಕೆಲವು ಹೆಸರುಗಳನ್ನು ಓದಿ ನಂತರ ಬ್ಯಾಟರಿ ಎಂದ. ಬ್ಯಾಟರಿ ಎನ್ನುವಾಗ ಪಾಪ ಅವನಿಗೆ ನಗು ತಡೆಯಲಾಗಲಿಲ್ಲ. ಇದನ್ನು ಕೇಳಿದ ಮೇಷ್ಟ್ರಿಗೆ ಎಲ್ಲಿಲ್ಲದ ಕೋಪ ಬಂದು ರೂಲ್ ದೊಣ್ಣೆಯಿಂದ ಸರಿಯಾಗಿ ಕುಂಡೆ, ಬೆನ್ನಿನ ಮೇಲೆಲ್ಲಾ ಬ್ಯಾಟರಿ ಚಿತ್ರ ಮೂಡಿಸಿದ್ದು ನೋಡಿ ನಮಗೆ ನಗುವೋ ನಗು. ಉತ್ತೇಜಿಸಿ ನಾವೇ ಬ್ಯಾಟರಿ ಬರೆಸಿದ್ದು ಸಾಲದೇ ಅದರ ಮೇಲೆ ಅವನ ಬಾಸುಂಡೆಗಳನ್ನು ನೋಡಿ ಕುಪ್ಪಳಿಸಿ ನಕ್ಕಿದ್ದು ನೆನೆದು ಈಗ ( ೩೧ ವರ್ಷಗಳ ನಂತರ ) ಪಾಪ ಅನ್ನಿಸುತ್ತಿದೆ.

ಬಾಲ್ಯವನ್ನರಸಿ…

೬ ವರ್ಷದ ನಾನು ಸೈಂಟ್ ಚಾರ್ಲ್ಸ್ ಆಂಗ್ಲ ಶಾಲೆಗೆ ಹೋಗುತ್ತಿದ್ದೆ. ಶಾಲೆ ದೂರವಾದ ಕಾರಣ ಜಟಕಾದಲ್ಲಿ ಪ್ರಯಾಣ. ಈಗಿನ ಮಕ್ಕಳ ಹಾಗೆ ರಿಕ್ಷಾದಲ್ಲೋ, ಬಸ್ಸು, ವ್ಯಾನ್ನಲ್ಲೋ ಹೋಗುತ್ತಿರಲಿಲ್ಲ. ಕುಣಿಯುವ ಕುದುರೆ ಬಾಲ, ಜಟಕಾ ಡ್ರೈವರ್ನ ಚಾಟಿಯ ಹೊಡೆತ ನೋಡುತ್ತಾ ದೊಡ್ಡವನಾದಾಗ ನಾನೂ ಜಟಕಾ ಡ್ರೈವರ್ ಆಗಬೇಕು ಎಂದು ಕನಸು ಕಾಣುತ್ತಿದ್ದೆ. ಸ್ಟೀಲ್ ಬಾಕ್ಸ್ ನಲ್ಲಿ ಲಂಚ್ ತೆಗೆದುಕೊಂಡು ಹೋಗುತ್ತಿದ್ದ ನಾನು ಆಗಾಗ ಬಾಕ್ಸ್ಅನ್ನು ಶಾಲೆಯಲ್ಲೇ ಬಿಟ್ಟು ಬರುವುದು ನನ್ನ ವಾಡಿಕೆ. ಕೋಪಗೊಂಡ ನನ್ನಮ್ಮ ಕಳಪೆ ದರ್ಜೆಯ ಅಲುಮಿನಿಯಮ್ ಬಾಕ್ಸ್ ನಲ್ಲಿ ತಿಂಡಿ ಕೊಟ್ಟಾಗ ನಾನು ಅದನ್ನು ಕೊಂಡು ಹೋಗಲು ಒಪ್ಪದೇ ಹಠ ತೊಟ್ಟೆ. ಒಪ್ಪದ ಅಮ್ಮ ಜಟಕಾ ಡ್ರೈವರ್ “ನೂರ್” ಹತ್ತಿರ ಬಾಕ್ಸ್ ಕೊಟ್ಟು ಶಾಲೆಯಲ್ಲಿ ಅವನಿಗೆ ಕೊಡು ಎಂದು ಕೊಟ್ಟರು.  aluminium box ಲಂಚ್ ತೆಗೆದುಕೊಂಡು ಹೋಗೋದು ಅವಮಾನ ಎಂದು ನನ್ನ ಭಾವನೆ. ಕೆಲ ದಿನಗಳ ನಂತರ ನನ್ನ ಮರೆಗುಳಿ ಸ್ವಭಾವ ಹೋದ ನಂತರ ತಿರುಗಿ ಬಂತು ಸ್ಟೀಲ್ ಬಾಕ್ಸ್. ಶಾಲೆಯಲ್ಲಿ ನನ್ನ ಮಿತ್ರ ರಫೀಕ್ ನಿಗೆ ನಾನು ತರುವ ದೋಸೆ ಮೇಲೆ ಕಣ್ಣು. ದೋಸೆ ಕೊಡದಿದ್ದರೆ ಶೈತಾನ್” (ಭೂತ) ಅನ್ನು ಕರೆಯುತ್ತೇನೆ ಎಂದು ಬೆದರಿಸಿ ನನ್ನ ದೋಸೆ ತಿಂದು ತನ್ನ ಒಣಗಿದ ರೊಟ್ಟಿ ನನಗೆ ಕೊಡುತ್ತಿದ್ದ.

I’d give all wealth that years have piled,

The slow result of Life’s decay,

To be once more a little child

For one bright summer day.

~Lewis Carroll, “Solitude”childhood2

 

ಬಾಲ್ಯ, ನೀನೆಲ್ಲಿ?

childhood 

ಬಾಲ್ಯದ ಬಗ್ಗೆ ಯೋಚಿಸಿದಾಗ ಗತಕಾಲದ ವೈಭವ ನೆನಪಾಗಿ ಆ ದಿನಗಳನ್ನು ಕಾಣಲು ಮನಸ್ಸು ತುಡಿಯುತ್ತದೆ. ಆದರೆ time and tide wait for no man ಅಂದಹಾಗೆ ಕಳೆದುಹೋದ ದಿನಗಳೆಂದೂ ಬರುವುದಿಲ್ಲ. ಈ ಕಾರಣಕ್ಕಾಗಿಯೇ ಏನೋ ನೆನಪು ಎಂಬ ಸೌಲಭ್ಯವನ್ನು ದೈವ ಒದಗಿಸಿದ್ದು; ದನಗಳ ಥರ ಮೆಲುಕು ಹಾಕು ಆಗಿ ಹೋದ ಘಟನೆಗಳನ್ನ, ಮಾಯವಾದ ಘಳಿಗೆಗಳನ್ನ ಎಂದು. ನನಗೆ ನೆನಪಿರುವಂತೆ ಸುಮಾರು ನಾನು ೫ ವರ್ಷದವನಾಗಿದ್ದಾಗಿನ ಘಟನೆಗಳು ಅಸ್ಪಷ್ಟವಾಗಿ ಇನ್ನೂ ನೆನಪಿನಲ್ಲುಳಿದಿದೆ. ಯಾವುದಕ್ಕೋ ಹಠ ಮಾಡಿ ಅಳುತ್ತಿದ್ದ ನನ್ನನ್ನು ನನ್ನ ಚಿಕ್ಕಮ್ಮ ಮಹಡಿಯಮೆಲಿನ ಬೆಡ್ರೂಮಿನ ಕಿಟಕಿಯಿಂದ ಕಾಣುವ ನದಿಯನ್ನು ತೋರಿಸುತ್ತಾ ಸುಮ್ಮನಿರು ಅಳಬೇಡ ಈಗ ಆನೆಗಳು ನೀರು ಕುಡಿಯಲು ಬರುತ್ತವೆ ಎಂದು. ಆನೆ ಎಂದ ಕೂಡಲೇ ಅಳು ನಿಲ್ಲಿಸಿದ ನಾನು ತದೇಕ ಚಿತ್ತದಿಂದ ಹೊಳೆಯ ಕಡೆಗೆ ನೋಡುತ್ತಾ ನಿಂತೆ. ಎಷ್ಟೇ ಹೊತ್ತಾದರೂ ಆನೆಗಳೂ ಬರಲಿಲ್ಲ ಆಮೆಗಳೂ ಬರಲಿಲ್ಲ. ನನ್ನ ಅಳು ನಿಲ್ಲಿಸಲು ಚಿಕ್ಕಮ್ಮ ಹೂಡಿದ ತಂತ್ರ ಇದು.  

ಕೆಂಪು ಸಮುದ್ರದ ವಧು

21052008591ಸೌದಿ ಅರೇಬಿಯಾದ ವಾಣಿಜ್ಯ ಕೇಂದ್ರ ಜೆಡ್ಡಾ. ಕೆಂಪು ಸಮುದ್ರದ ತೀರದ ಮೇಲೆ ಕಂಗೊಳಿಸುವ ಈ ಮಹಾ ನಗರಕ್ಕೆ ” ಕೆಂಪು ಸಮುದ್ರದ ವಧು ” ಎಂದೂ ಕರೆಯುತ್ತಾರೆ. ಇಲ್ಲಿನ ನಿವಾಸಿಗಳ ಫೇವರೆಟ್ ಪಾಸ್ ಟೈಮ್ ಅಂದ್ರೆ ಸಮುದ್ರದ ತೀರದಮೇಲೆ ಬಾರ್ಬೀಕ್ಯು ಮಾಡಿ ತಿಂದು ಉರುಳಾಡುವುದು. ಹತ್ತು ಹಲವು ಝಗಝಗಿಸುವ ಮಾಲುಗಳಿದ್ದರೂ ಜನ ಸೋಲುವುದು ಕೆಂಪು ಸಮುದ್ರಕ್ಕೇ.

ಸಾಧಾರಣ ಸಮುದ್ರದ ಹಾಗೆ ಅಲೆಗಳ ಆರ್ಭಟ ಈ ಸಮುದ್ರಕ್ಕಿಲ್ಲ ಹಾಗೂ ಒಮ್ಮೆಗೇ ನೋಡಿದಾಗ ತೋರುವುದು ದೊಡ್ಡ ನದಿಯ ಹಾಗೆ. ಸಂಜೆ ಐದಕ್ಕೆ ಬೆಳ್ಳಿ ಬಣ್ಣದ ಸೂರ್ಯ ಬರು ಬರುತ್ತಾ ಕಿತ್ತಳೆ ಹಣ್ಣಾಗಿ ಸಮುದ್ರಕ್ಕೆ ಜಾರುವ ದೃಶ್ಯ ಸುಂದರ.