ಒಂದು ಉದ್ದದ ಮಾತು…

ganesha2

ಸಾಮಾಜಿಕ ತಾಣಗಳು ವಿಜ್ರಂಭಿಸುತ್ತಿರುವ ಈ ಕಾಲದಲ್ಲಿ ಹರಟೆ ಒಂದು ವಿಶೇಷ ಸ್ಥಾನಮಾನವನ್ನು ಪಡೆದುಕೊಂಡಿದೆ. ನೆಂಟರಿಷ್ಟರನ್ನು, ಮಿತ್ರರನ್ನು ಭೇಟಿ ಮಾಡಲು ಸಮಯದ ಕೊರತೆ ಇದ್ದರೂ ಸಾಮಾಜಿಕ ತಾಣಗಳಲ್ಲಿ ಇಣುಕಿ ಮತ್ತೊಬ್ಬರ ಕೊರೆತ ಓದಲು ಬೇಕಷ್ಟು ಸಮಯ ಹೊಂದಿಸಲು ನಮಗೆ ಸಾಧ್ಯ. ಈ ಬರಹಕ್ಕೆ “ಒಂದು ಹರಟೆ” ಎನ್ನುವ ಶೀರ್ಷಿಕೆ ಕೊಟ್ಟು ಅದನ್ನು ನೀವು ಓದಬೇಕೆಂದು ಒತ್ತಾಯ ಹೇರುವ ಹೊಸ ಪರಿಪಾಠ ಮೇಲಿನ ಪೀಠಿಕೆ. ದಯಮಾಡಿ ಓದಿ.  ಅಷ್ಟೇ ಅಲ್ಲ…

ಏನನನ್ನೂ ಬರೆಯದೆ ಸ್ವಲ್ಪ ಸಮಯವಾಯಿತು. ಸುದೀರ್ಘ ಸಮಯ. ಬರೆಯದೆ ಇರುವುದಕ್ಕೆ, ಸೋಮಾರಿತನ ಬಿಟ್ಟರೆ, ವಿಶೇಷ ಕಾರಣಗಳೇನೂ ಇಲ್ಲ.  ಬರೆಯೋದಕ್ಕೆ ಬರೋಲ್ಲ ಎನ್ನುವ ಸಾಮರ್ಥ್ಯದ ಕೊರತೆಯೂ ಇಲ್ಲ. ನನ್ನ ನೆಚ್ಚಿನ, ಕನ್ನಡದ ಪ್ರಸಿದ್ಧ ಸಾಹಿತ್ಯಕ ತಾಣ “ಸಂಪದ” ದಲ್ಲಿ ನಾನು ಬರೆಯುವುದನ್ನು ಕರಗತ ಮಾಡಿ ಕೊಂಡಿದ್ದು. ನನ್ನ ಬರಹಗಳು ಸಾಕಷ್ಟು ಟೀಕೆ, ಬೇಕಾದಷ್ಟು ಹೊಗಳಿಕೆಗಳನ್ನು ಗಳಿಸುತ್ತಾ ಒಂದು ಚಿಕ್ಕ ಮಟ್ಟದ ಬರಹಗಾರನನ್ನು ನನ್ನಲ್ಲಿ ಹುಟ್ಟು ಹಾಕಲು ಸಂಪದ ಓದುಗರ ಪಾತ್ರ ದೊಡ್ಡದು. ಸಂಪದದ ಪಾತ್ರ ಮತ್ತಷ್ಟು ಹಿರಿದು. ಹಾಗಾಗಿ, ಈ ಒಂದು ಪುಟ್ಟ ಹರಟೆಯ ಉದ್ದೇಶ ಸಹ, ಸೋಮಾರಿತನ ಕೊಡವಿ ಮತ್ತೊಮ್ಮೆ ಬ್ಲಾಗ್ ವಲಯದಲ್ಲಿ ಸಕ್ರಿಯನಾಗುವ ಹಂಬಲ, ಅಭಿಲಾಷೆ.

ಟ್ವಿಟ್ಟರ್, ಫೇಸ್ಬುಕ್, ವಾಟ್ಸಪ್ ಗಳ ದಾಂಧಲೆ ಅಂತರ್ಜಾಲದಲ್ಲಿ. ಬೇಡ, ಬೇಡವೆಂದರೂ ಸುದ್ದಿಗಳ ಸುಗ್ಗಿ. ಬೇಕಾದ್ದು, ಬೇಡವಾದದ್ದು ಎಲ್ಲವೂ ಹೇರಳ. ಅಂತರ್ಜಾಲದಿಂದ ಬಿಡುಗಡೆ ಹೊಂದಲು ಸಾಧ್ಯವಾಗದ ಈ ಆಧುನಿಕ ಬದುಕಿನಲ್ಲಿ ಟ್ವಿಟ್ಟರ್, ಫೇಸ್ಬುಕ್, ವಾಟ್ಸಪ್ ಗಳನ್ನು ಸಹಿಸಿ ಕೊಳ್ಳಲೇಬೇಕು. ಮೊನ್ನೆ ಫ್ರಾನ್ಸ್ ನಲ್ಲಿ ಒಬ್ಬ ರೈಲಿನ ಶೌಚಾಲಯದಲ್ಲಿ ಸೇರಿ ಕೊಂಡು ಹೊರಬರದೆ ಇದ್ದಾಗ ಎಲ್ಲರಲ್ಲೂ ಆತಂಕ ಸೃಷ್ಟಿಸಿತು. ಭಯೋತ್ಪಾದನೆಯ ಸಂಶಯ ಆವರಿಸಿತು. ಪೋಲೀಸರನ್ನು ಕರೆಸಲಾಯಿತು. ಈ ಸುದ್ದಿಗೆ ಟ್ವಿಟ್ಟರ್ ನಲ್ಲಿ ಒಬ್ಬರು ಹೀಗೆ ಪ್ರತಿಕ್ರಯಿಸಿದರು. ಫ್ರಾನ್ಸ್ನಲ್ಲಿ ಒಬ್ಬ ಶೌಚದಲ್ಲಿ ಸೇರಿಕೊಂಡು ಅಗುಳಿ ಹಾಕಿಕೊಂಡರೆ ಭಯೋತ್ಪಾದನೆ, ನಮ್ಮ ದೇಶದಲ್ಲಿ ಹೀಗೆ ನಡೆದರೆ ಅದು ಟಿಕೆಟ್ ಇಲ್ಲದೆ ಸಂಚಾರ ಮಾಡೋ ಪ್ರಯಾಣಿಕನ ವರ್ತನೆ.  ಹೇಗಿದೆ, ಒಂದೇ ತೆರನಾದ ಘಟನೆಗಳು ದೇಶದಿಂದ ದೇಶಕ್ಕೆ ವಿವಿಧ narrative ಪಡೆದುಕೊಳ್ಳುತ್ತವೆ, ಅಲ್ಲವೇ?

ನಾಡಿನಲ್ಲಿ ಗಣೇಶ ಚತುರ್ಥಿಯ ಸಂಭ್ರಮ. ವಿಘ್ನ ವಿನಾಶಕನನ್ನು ಮನೆಯಲ್ಲೂ, ಕಛೇರಿಗಳಲ್ಲೂ, ಶಾಲೆ ಕಾಲೇಜುಗಳಲ್ಲೂ, ಬೀದಿಗಳಲ್ಲೂ ಕೂರಿಸಿ, ಭಕ್ತಿಯಿಂದ ಆರಾಧಿಸಿ,  ನಂತರ ಮ್ಲಾನವದನರಾಗಿ ವಿಸರ್ಜಿಸೋ ಸಂದರ್ಭ. ಈ ಸಂದರ್ಭಕ್ಕೆ ಸೂಕ್ತವಾಗುವಂತೆ ಸಂಯುಕ್ತ ಅರಬ್ ಗಣರಾಜ್ಯದಲ್ಲಿ ವಾಸಿಸುವ ಅಕ್ಬರ್ ಎನ್ನುವವರು ಪ್ರಧಾನಿಗಳಿಗೆ ಈ ಲೇಖನದೊಂದಿಗೆ ಲಗತ್ತಿಸಿದ ಕಲಾಕೃತಿಯೊಂದನ್ನು ಕಳಿಸಿ ಶುಭ ಕೋರಿದರು. ವಿವಿಧ ಮತೀಯರು ಒಂದಾಗಿ, ಸೌಹಾರ್ದದಿಂದ ಬದುಕುವ ನಮ್ಮ ನಾಡಿನಲ್ಲಿ ಎಲ್ಲರ ಹಬ್ಬ ಹರಿದಿನ, ಈದ್, ಕ್ರಿಸ್ಮಸ್, ಆಚರಣೆಗಳಿಗೆ ಶುಭ ಕೋರುವುದು ನಮ್ಮ ಸಂಸ್ಕಾರದ ಹೆಗ್ಗಳಿಕೆ. ಅದರಲ್ಲಿದೆ ನಮ್ಮ ಹೃದಯ ವೈಶಾಲ್ಯತೆ. ಈ ಕೃತಿಯನ್ನು ಪ್ರಧಾನಿಗಳಿಗೆ ಕಳಿಸಿ ತನ್ನ ಸಂಸ್ಕಾರವನ್ನು ಸೊಗಸಾಗಿ ಮೆರೆದ ಸೋದರ ಅಕ್ಬರ್ ಪ್ರಶಂಸಾರ್ಹರು.

ಚಿತ್ರ ಕೃಪೆ: http://www.scooparabia.co/socialpost/6318507

ಭಾಷೆಗಳ ಸ್ವಾರಸ್ಯ

ಭಾಷೆಗಳ ಅಧ್ಯಯನ ಸ್ವಾರಸ್ಯಕರ. ನಮಗೆ ಕೇಳ ಸಿಗುವ ಸಾವಿರಾರು ಭಾಷೆಗಳಲ್ಲಿ ಪ್ರತಿಯೊಂದರಲ್ಲೂ ವಿಶೇಷಾಂಶಗಳು ಖಂಡಿತ ಇರುತ್ತವೆ. ಪ್ರೊ. ಜಿ. ವೆಂಕಟಸುಬ್ಬಯ್ಯನವರ “ಇಗೋ ಕನ್ನಡ” ಸಾಮಾಜಿಕ ನಿಘಂಟು ಸ್ವಾರಸ್ಯದ ಗಣಿಯನ್ನೇ ಒಳಗೊಂಡಿದೆ. ಆಫ್ರಿಕಾದ “ಮಸಾಯಿ ಮಾರಾ” ಬುಡಕಟ್ಟಿನವರು ಮಾತನಾಡುವ ಭಾಷೆಯಲ್ಲಿ, ದೊಡ್ಡ ವಸ್ತುವನ್ನು “ಪುಲ್ಲಿಂಗ” ಎಂತಲೂ, ಚಿಕ್ಕ ವಸ್ತುವನ್ನ “ಸ್ತ್ರೀ ಲಿಂಗ” ಎಂತಲೂ ಗುರುತಿಸುತ್ತಾರಂತೆ. ಹಾಗೆಯೇ ಆನೆಯ ಲದ್ದಿ ‘ಪುಲ್ಲಿಂಗ’ ವಾದರೆ, ಆಡಿನ ಹಿಕ್ಕೆ ‘ಸ್ತ್ರೀ ಲಿಂಗ’. ಚಿಕ್ಕ ಗಾತ್ರದ್ದಕ್ಕೆಲ್ಲಾ ಹೆಣ್ಣಿನೊಂದಿಗೆ ಸಂಬಂಧ ಜೋಡಿಸೋ ಈ ಭಾಷೆಗಳ ಜನರಲ್ಲೂ ಹೆಣ್ಣು ಅಬಲೆ ಎನ್ನೋ ಮನೋಭಾವ ಇರಲೇ ಬೇಕಲ್ಲವೇ? ಇರದೇ ಏನು? ಹೆಣ್ಣನ್ನು ತುಚ್ಚೀಕರಿಸುವುದರಲ್ಲಿ ಮಾತ್ರ ಎಲ್ಲಾ ಬಗೆಯ ಜನರಲ್ಲೂ ಸಮನತೆಯನ್ನು ನಾವು ಕಾಣಬಹುದು. ಈಗ ಚರ್ಚೆ ಶುರು ಹಚ್ಚಿಕೊಂಡಿರೋದು ಶಬ್ದಗಳಲ್ಲಿ, ಪದಗಳಲ್ಲಿ ಸ್ತ್ರೀ ಲಿಂಗ ಮತ್ತು ಪುಲ್ಲಿಂಗದ ಪಾರುಪತ್ಯದ ಬಗ್ಗೆ. ಹೆಣ್ಣು ಗಂಡಿನ ಮಧ್ಯೆ ಕಲಹ ತರೋದಲ್ಲ. ಹಾಗಾಗಿ ರಿಟರ್ನ್ ಟು ದ ಸಬ್ಜೆಕ್ಟ್…

ಸ್ಕ್ರೂ (screw) ನಿಮಗೆ ಗೊತ್ತೇ ಇದೆಯಲ್ಲ? ಆಂಗ್ಲ ಭಾಷೆಯಲ್ಲಿ ಈ ಸ್ಕ್ರೂಗೂ ಪುಲಿಂಗ ಸ್ತ್ರೀಲಿಂಗ ಅನ್ವಯ ಆಗುತ್ತೆ. ಹಾಂ…, ಹೇಗೆ…? ಹೀಗೆ… male screw, female screw. ನಟ್ಟು ಬೋಲ್ಟು ಟೈಟ್ ಮಾಡೋದನ್ನ ನೋಡಿದ್ದೀರಿ. ಒಳಗೆ ಹೋಗೋ ಸ್ಕ್ರೂ ವನ್ನು ಮೇಲ್ ಸ್ಕ್ರೂ ಎಂತಲೂ, ಒಳಕ್ಕೆ ಬಿಡಿಸಿ ಕೊಳ್ಳುವ ಸ್ಕ್ರೂ ವನ್ನು ಫೀಮೇಲ್ ಸ್ಕ್ರೂ ಎಂತಲೂ ಕರೆಯುತ್ತಾರೆ.

ಅರಬ್ಬೀ ಭಾಷೆಯಲ್ಲಿ ಒಬ್ಬ ಗಂಡು “ಶುಕ್ರನ್” (ವಂದನೆಗಳು) ಎಂದು ಮಹಿಳೆಗೆ ಹೇಳುವಾಗ “ಅಷ್ಕುರುಕೀ” ಎನ್ನುತ್ತಾನೆ. ಮಹಿಳೆ, ಗಂಡಿಗೆ “ಅಷ್ಕುರಕ್” ಎನ್ನುತ್ತಾಳೆ.

ಇದೇ ನಿಘಂಟಿನಲ್ಲಿ ನಾವು ಬಹು ಮಹಡಿ ಕಟ್ಟಡ, ಮಾಲುಗಳಲ್ಲಿ ಉಪಯೋಗಿಸೋ ಎಲಿವೇಟರ್ ಅಥವಾ ಲಿಫ್ಟ್ ಗೆ “ಏರಿಳಿ” ಎಂದು ಪ್ರಚಾರಕ್ಕೆ ತರಬೇಕು ಎಂದು ಲೇಖಕ ಬಯಸುತ್ತಾರೆ. ಹತ್ತುವುದಕ್ಕೆ ಇಳಿಯುದಕ್ಕೆ ಇರೋ ಯಾಂತ್ರಿಕ ಸಾಧನ ಅಥವಾ ವ್ಯವಸ್ಥೆಗೆ “ಏರಿಳಿ’ ಎಂದು ಉದ್ದದ ಪದ ಉಪಯೋಗಿಸೋ ಬದಲು ನಮ್ಮ ಅದೇ ಹಳೆಯ, ಕಾಲ ಬದಲಾದರೂ ನಾನು ಬದಲಾಗೋಲ್ಲ ಎಂದು ಹಠ ಹಿಡಿದು “ನಿಂತಿರುವ” ಏಣಿ ಎನ್ನುವ ಪದವನ್ನ ಉಪಯೋಗಿಸಬಾರದೆ? ‘ಏರಿಳಿ’ ಗೆ ಬದಲಾಗಿ ಏಣಿ ಎಂದು ಬಿಟ್ಟರೆ ಹೇಗೆ? ಏಣಿ ಎಲಿವೇಟರ್ ಮಾಡೋ ಕೆಲದವನ್ನ ತಾನೆ ಮಾಡೋದು?

ಎಲಿವೇಟರ್ ಗೋ ವಿದ್ಯುಚ್ಛಕ್ತಿ ಬೇಕು, ನಮ್ಮ ಏಣಿಗೆ ಏನೂ ಬೇಡ. ಸ್ವಲ್ಪ ತಾಕಿಸಿ ಕೊಂಡು ನಿಲ್ಲಲು ಗೋಡೆಯದೋ ಮತ್ಯಾವುದಾದರದೋ ಆಸರೆ ಸಾಕು….

…ಪರಸ್ಪರ ಆಸರೆ ಇದ್ದರೆ ಮನುಷ್ಯ ಮೇಲಕ್ಕೆ ಇರಬಹುದು, ಹೇ ಹೇ. ನೋಡಿ ಉದಾತ್ತ ಆಶಯ ಕೂಡಾ ಹೊಕ್ಕಿಕೊಂಡಿತು ಭಾಷೆಯ ಚರ್ಚೆಯಲ್ಲಿ.
ಮೇಲೆ ಹೇಳಿದ ಎಲ್ಲಾ ವಿಷಯಗಳೂ ಆ ನಿಘಂಟಿನಲ್ಲಿ ಕಾಣಲು ಸಿಗೊಲ್ಲ. ಕೆಲವು ನನ್ನ ಅನುಭವದ ಮೂಸೆಯಿಂದ ಬಂದಿದ್ದು.

ಬರಹವನ್ನು ನಿಲ್ಲಿಸಲು ಸಾಧ್ಯವೇ….?

ಬರೆಯದೇ ಬಹಳ ದಿನಗಳಾದವು. ತೀರಾ ಬರೆದೇ ಇಲ್ಲ ಎಂದಲ್ಲ, twitter ನಲ್ಲಿ ದಿನವೂ ಕುಟ್ಟುತ್ತಲೇ ಇರುತ್ತೇನೆ ಮರಕುಟುಕನ ಥರ. ಹೆಚ್ಚೂ ಕಡಿಮೆ ೧೪,೦೦೦ ಟ್ವೀಟುಗಳು ಮೊಳಗಿವೆ ಈವರೆಗೆ. ಸಾಕಲ್ವಾ? …. ಹೆ..ಹೇ ಎಲ್ಲಾದರೂ ಉಂಟೇ? man is a political animal ಎನ್ನೋ ಮಾತನ್ನ ಕೇಳಿಯೇ ಇರುತ್ತೀರಿ, ಅಲ್ವಾ? ನಾನಂತೂ ರಾಜಕಾರಣಕ್ಕೆ ತುಂಬಾ ಹಳಬ. ಪ್ರಾಚೀನ ಎನ್ನುವಷ್ಟು. ಕದ್ದು ಮುಚ್ಚಿ ಎಲ್ರೂ ಸಿನಿಮಾದ ಕಡೆ ದೌಡಾಯಿಸಿದರೆ, ನನ್ನ ದೌಡು ಕನಕ ಮಂಟಪದ ಕಡೆಗೆ.

ನನ್ನೂರು ಭದ್ರಾವತಿಯಲ್ಲಿ ಇರೋ ಈ ಕನಕ ಮಂಟಪಕ್ಕೆ ರಾಜಕೀಯ ನೇತಾರರು ಚುನಾವಣೆ ಸಮಯ ಭಾಷಣ ಮಾಡಲು ಬರುತ್ತಿದ್ದರು. ಅಲ್ಲಿಗೆ ಓಡುತ್ತಿದ್ದೆ ನಾನು. ಹೋಂ ವರ್ಕ್ ಮಾಡೋ ಬದಲು ಖಾದಿ ಸಂಭ್ರಮ ನೋಡೋ ಕೌತುಕ ನನಗೆ. ರಾಜಕಾರಣ ಬಿಟ್ಟರೆ, ಕ್ರಿಕೆಟ್ಟು, ಅದು ಬಿಟ್ಟರೆ ಸುರತಿ, ರತಿ ವಿಜ್ಞಾನ ದಂಥ ಪುಸ್ತಕಗಳ ಗೀಳು, ಇನ್ನೂ ಮುಂದುವರೆದು ಆಂಗ್ಲ ಭಾಷೆ , ಆ ಭಾಷೆಯ ಸೊಗಡು,ಅದರಲ್ಲಿನ ಕವಿತೆ, ಬರಹಗಳ ಮೋಡಿಗೆ ಮಾರು… ಹೀಗೆ ಸಾಗುವ ನನ್ನ ವಿದ್ವತ್ತು ಬರಹದಲ್ಲಿ ಬಂಧಿತವಾಗಲು ತವಕಿಸಿದಾಗ ಹಳೇ ಸೇತುವೆ (ನನ್ನ ಬ್ಲಾಗ್) ಯ ನಿರ್ಮಾಣ; ಸಿಮೆಂಟು ಕಬ್ಬಿಣ ಮರಳಿನ ಸಹವಾಸ ಇಲ್ಲದೆ. ಹೀಗಿರುವಾಗ, ಬರಹವನ್ನು ನಿಲ್ಲಿಸಲು ಸಾಧ್ಯವೇ? ಅದರಲ್ಲೂ ಅಷ್ಟೋ ಇಷ್ಟೋ ಬರೆದಿದ್ದನ್ನು ಓದಿ, ಮೆಚ್ಚಿ, ನನ್ನ ಯೋಗ್ಯತೆಗೂ ಮಿಕ್ಕು ಮುಕ್ತ ಕಂಠದಿಂದ ಕೊಂಡಾಡುವ ‘Kumar’ ರಂಥ ಸಹೃದಯಿಗಳು ಇರುವಾಗ ಬರೆಯೋಕೆ ಸ್ಫೂರ್ತಿ.

ನಾಳೆಯಿಂದ ಬರೀತೀನಿ…. ‘ನಾಳೆ ಬಾ’ ಎಂದು ಭೂತ ಪಿಶಾಚಿಗಳನ್ನು ಏಮಾರಿಸಲು ಮನೆ ಬಾಗಿಲ ಮೇಲೆ ಗೀಚಿದಂತಲ್ಲ…

ನಿಜ್ವಾಗ್ಲೂ !

ಭಾರತೀಯ ಮುಸ್ಲಿಂ ಮತ್ತು ದೇಶ ಪ್ರೇಮದ ಸರ್ಟಿಫಿಕೇಟಿನ ಅನಿವಾರ್ಯತೆ

ಹುಸೇನಿ ~'s avatarನೆನಪಿನ ಸಂಚಿ

induian muslim

“ಭಾರತೀಯ ಮುಸ್ಲಿಮರು ದೇಶಕ್ಕಾಗಿ ಬದುಕುತ್ತಾರೆ ದೇಶಕ್ಕಾಗಿ ಪ್ರಾಣ ಕೊಡುತ್ತಾರೆ “. ನಮ್ಮ ಘನವೆತ್ತ ಪ್ರಧಾನ ಮಂತ್ರಿಯ ಉಚ್ಚಿಷ್ಠ ಉವಾಚವಿದು. ನಮ್ಮ ಪ್ರಧಾನಿಯಿಂದ ಇಂಥದ್ದೊಂದು ಸರ್ಟಿಫಿಕೇಟ್ ಪಡೆಯುವ ಅವಶ್ಯಕತೆ ಬಂದೊದಗಿದ್ದು ಭಾರತೀಯ ಮುಸ್ಲಿಮನ ಪಾಲಿಗೆ ಬಹು ನೋವಿನ ಸಂಗತಿ.

ಭಯೋತ್ಪಾದಕ, ಮೂಲಭೂತವಾದಿ, ದೇಶದ್ರೋಹಿ, ಹೇಗೆಲ್ಲಾ ಹೀಗಳೆದು ಸಮಾಜದ ಮುಖ್ಯವಾಹಿನಿಯಿಂದ ಒಂದಿಷ್ಟು ಅಂತರ ಕಾಯುವಂತೆ ಮಾಡಿ, ಹುಟ್ಟಿ ಬಿದ್ದ ಮಣ್ಣಿನಲ್ಲಿ ದ್ವಿತೀಯ ದರ್ಜೆಯ ಪ್ರಜೆಗಳನ್ನಾಗಿಸಿದರೂ, ಸ್ವತಂತ್ರಾ ನಂತರ ಬಂದೊದಗಿದ ಕೋಮುಗಲಭೆಯ ಕಂಟಕಗಳು, ರಾಜಕೀಯ, ಸಾಮಾಜಿಕ ಹಾಗೂ ಶೈಕ್ಷಣಿಕ ರಂಗದಲ್ಲಿ ಹಿಂದುಳಿದು ‘ನವ ದಲಿತರು’ ಎಂದು ಕರೆಯಲ್ಪಟ್ಟರೂ ಭಾರತೀಯ ಮುಸ್ಲಿಂ ತನ್ನೆಲ್ಲ ನೋವನ್ನು ಸಮಯದ ಭೂ ಗರ್ಭದಲಿ ಅರಗಿಸಿಕೊಂಡು ಮುನ್ನಡೆಯುತ್ತಿದ್ದಾನೆ.

ಶಹೀದೆ ಮಿಲ್ಲತ್ ಟಿಪ್ಪು ಸುಲ್ತಾನ್, ಹೈದರಾಲಿ, ಮೌಲಾನಾ ಶೌಕತ್ ಅಲಿ, ಖಾನ್ ಅಬ್ದುಲ್ ಗಫಾರ್ ಖಾನ್, ಡಾ।ಮಗ್ಫೂರ್ ಅಹ್ಮದ್ ಅಜಾಝಿ, ಮೌಲಾನಾ ಮಂಝುರ್ ಅಹ್ಸನ್ ಅಜಾಝಿ, ಅಲಿ ಆಸೀಫ್,ಮೊಹಮ್ಮದ್ ಜೌಹರ್,ಅಲಿ ಇನಾಯತ್, ಶಹೀದ್ ಫೀರ್ ಅಲಿ, ವಲಯತ್ ಅಲಿ, ಅಲಿ ವಾರಿಸ್, ಅಬ್ದುಲ್ ಖಯ್ಯೂಮ್ ಅನ್ಸಾರಿ, ಮೌಲಾನಾ ಅಬ್ದುಲ್ ಕಲಾಂ ಅಝಾದ್, ಹಕೀಮ್ ಅಜ್ಮಲ್ ಖಾನ್, ಅಶ್ಫಾಕುಲ್ಲಾಹ್ ಖಾನ್, ಬೇಗಮ್ ಹಜ್ರತ್ ಮಹಲ್,ಮೌಲಾನಾ ಹುಸೈನ್ ಅಹ್ಮದ್, ರಫಿ ಅಹ್ಮದ್ ಕಿದ್ವಾಯಿ ಹಾಗು ಇನ್ನು ಹಲವಾರು ಮುಸ್ಲಿಂ ಧಾರ್ಮಿಕ ಮತ್ತು ಸಾಮುದಾಯಿಕ ನಾಯಕರು ಭಾರತ ಸ್ವಾತಂತ್ರ್ಯ ಸಂಗ್ರಾಮದ ಹೋರಾಟದ ಮುಖ್ಯ ಭೂಮಿಕೆಯಲ್ಲಿದ್ದರು. ಇವರ ದೇಶ ಪ್ರೇಮವು ಪ್ರಶ್ನಾತೀತವಾಗಿರುವಗಲೇ, ಪ್ರಸ್ತುತ ಭಾರತೀಯ ಮುಸ್ಲಿಮರು ದೇಶ ಪ್ರೇಮವನ್ನು,ದೇಶನಿಷ್ಠೆಯನ್ನು ಪ್ರತೀ ದಿನ ಸಾಬೀತುಪಡಿಸಬೇಕಾದ ಅನಿವಾರ್ಯತೆಗೆ ಒಳಗಾಗಿದ್ದಾನೆ.

ಅಷ್ಟಕ್ಕೂ ಮುಸ್ಲಿಮರ ದೇಶಪ್ರೇಮವು ಪ್ರಧಾನಿಯಿಂದ…

View original post 367 more words

ಪ್ರೇಮದ ಕಾದಂಬರಿ, ಬರೆದೇ ನಾ….

waveloveimage

ಈ ಬರಹದ ಶೀರ್ಷಿಕೆಯ ಸಾಲನ್ನು ಓದಿದ ಕೂಡಲೇ ನೆನಪು ದಶಕಗಳ ಹಿಂದೆ ಓಡುತ್ತದೆ ಅಲ್ಲವೇ?

ಪ್ರೇಮದಾ ಕಾದಂಬರಿ, ಬರೆದೆ ನಾ ಕಣ್ಣೀರಲಿ,
ಕಥೆಯು ಮುಗಿದೇ ಹೋದರೂ
ಮುಗಿಯದಿರಲೀ ಬಂಧನಾ…

ಬರಹದೊಂದಿಗೆ ಸೇರಿಸಿದ ಚಿತ್ರ ನೋಡುತ್ತಲೇ ಈ ಹಾಡು ನೆನಪಾಯಿತು. ಚಿತ್ರದಲ್ಲಿ ಕಡಲ ತೆರೆಯು ಸೃಷ್ಟಿಸಿದ ಈ ಪ್ರೇಮದ ಸಂಕೇತ ಎಷ್ಟು ಚೆನ್ನಾಗಿ ಮೂಡಿ ಬಂದಿದೆ ನೋಡಿ..

ಮೈಸೂರಿನ ಹುಲಿಸಂಪಾದಕರು

ಸೊಗಸಾದ ಲೇಖನ. ಇಂಥ ಹುಲಿಗಳು ಈಗ ಕಡಿಮೆ, ಅಥವಾ extinct.

ಅಬ್ದುಲ್ ರಶೀದ್'s avatarThe Mysore Post

b ಮೈಸೂರಿನಲ್ಲಿ ನಾವು ಕಾಲೇಜು ಕಲಿಯುತ್ತಿದ್ದಾಗ ಒಂದು ಹುಲಿ ಒಂದೇ ಹಾಳೆಯ ಪತ್ರಿಕೆಯೊಂದನ್ನು ನಡೆಸುತ್ತಿತ್ತು.ಪತ್ರಿಕೆಯ ಹೆಸರು ‘ಹುಲಿ ಪತ್ರಿಕೆ’. ಸಂಪಾದಕರು ತಮ್ಮ ನಿಜದ ಹೆಸರನ್ನು ಎಲ್ಲೂ ಹಾಕುತ್ತಿರಲಿಲ್ಲ.ಬದಲಾಗಿ ತಮ್ಮನ್ನು ‘ಹುಲಿ’ ಎಂದೇ ಎಲ್ಲ ಕಡೆಯೂ ಕರೆದುಕೊಳ್ಳುತ್ತಿತ್ತು.ಆಗ ಮೈಸೂರಿನಲ್ಲಿ ಸಣ್ಣ ಪತ್ರಿಕೆಗಳದೇ ಕಾಲ.ಸಿಟ್ಟು ಬಂದರೆ ಒಂದು ಪತ್ರಿಕೆ. ಪ್ರೀತಿ ಹುಟ್ಟಿದರೆ ಇನ್ನೊಂದು ಪತ್ರಿಕೆ, ವಿರಹ ಉಂಟಾದರೆ ಒಂದು ಸಣ್ಣ ಪ್ರಿಂಟಿಂಗ್ ಪ್ರೆಸ್ಸು. ಹೀಗೆ ತರಹಾವರಿ ಪತ್ರಿಕೋಧ್ಯಮ ಸಾಹಸಗಳಿಗೆ ಹೆಸರು ವಾಸಿಯಾಗಿದ್ದ ಆ ಕಾಲದಲ್ಲಿ ಹುಲಿಯೂ ಕೂಡಾ ಪತ್ರಿಕೆಯೊಂದನ್ನು ನಡೆಸುತ್ತಿದೆ ಎಂಬುದು ನಮಗೆ ಅಂತಹ ದೊಡ್ಡ ಅಚ್ಚರಿಯನ್ನೇನೂ ಉಂಟು ಮಾಡುತ್ತಿರಲಿಲ್ಲ.ಕೈಯಲ್ಲಿ ಸ್ವಲ್ಪ ಕಾಸಿದ್ದರೆ ನಾವೂ ಕೂಡಾ ಅಂತಹದೊಂದು ಸಾಹಸವನ್ನು ನಡೆಸುತ್ತಿದ್ದೇವೋ ಏನೋ ಆದರೆ ಅಪ್ಪ ಕಳಿಸುತ್ತಿದ್ದ ಹಣ ಹಾಸ್ಟೆಲಿನ ಮೆಸ್ಸು ಬಿಲ್ಲಿಗೆ ಮಾತ್ರ ಆಗುತ್ತಿದ್ದುದರಿಂದ ಅಳಿದುಳಿದ ಮೊತ್ತದಲ್ಲಿ ಬೈಟೂಟೀ ಕುಡಿಯುತ್ತಾ ಹುಲಿ ಪತ್ರಿಕೆಯನ್ನು ಓದುತ್ತಾ ಕಾಲ ಕಳೆಯುತ್ತಿದ್ದೆವು.

ಆ ಪತ್ರಿಕೆಯ ಹೆಡ್ಡಿಂಗುಗಳೂ ರೋಚಕವಾಗಿರುತ್ತಿದ್ದವು.‘ಹುಲಿ ಸಂಚಾರ’ ‘ಹುಲಿಯ ಸಿಟ್ಟು’ ‘ಹುಲಿ ಗರ್ಜನೆ’ ಇತ್ಯಾದಿಗಳ ನಡುವೆ ‘ಹುಲಿ ವಿಷಾದಿಸುತ್ತದೆ’ ‘ಹುಲಿಗೆ ಬೇಕಾಗಿದ್ದಾರೆ’ ಮೊದಲಾದ ಪ್ರಕಟಣೆಗಳೂ ಇರುತ್ತಿದ್ದವು.ಆ ಎರಡು ಪುಟಗಳ ಪತ್ರಿಕೆಯ ಎಲ್ಲ ವರದಿಗಳೂ, ಸಂಪಾದಕೀಯವೂ, ಪ್ರಕಟಣೆಯೂ ಜಾಹೀರಾತೂ ಹೀಗೆ ಎಲ್ಲವೂ ಸಾಕ್ಷಾತ್ ಹುಲಿಯೇ ಯಾರೋ ನರಮನುಷ್ಯನಾದ ಉಪ ಸಂಪಾದಕನೊಬ್ಬನ ಕೈಲಿ ಹೇಳಿ ಬರೆಸಿದಂತೆ ಓದಿಸಿಕೊಂಡು ಸಖತ್ ಮಜಾ ನೀಡುತ್ತಿತ್ತು.

‘ಈ ದಿನ ಹುಲಿಯು ಮೈಸೂರಿನ ಅಠಾರಾ ಕಚೇರಿಯನ್ನು ಒಂದು ಸುತ್ತು ಹಾಕಿ ಬಂದಿತು.ಅಲ್ಲಿ ಕಂಡ ದೃಶ್ಯಗಳಿಂದಾಗಿ ಹುಲಿಗೆ ತುಂಬಾ ಸಿಟ್ಟು ಬಂದಿತ್ತು.ಇದು ಹೀಗೇ ಮುಂದುವರಿದರೆ ಹುಲಿಯು ಇನ್ನು ಸುಮ್ಮನಿರಲು ಸಾಧ್ಯವಿಲ್ಲ…

View original post 453 more words

ಹೊಟ್ಟೆ ಪಕ್ಷದ ರಂಗ ಸ್ವಾಮೀ ಮತ್ತು ಮೋದಿ

ಚುನಾವಣೆಯ ಬಿಸಿ ತಾರಕಕ್ಕೇರುತ್ತಿದ್ದಂತೆ ದಿಗ್ಗಜರು ಮತ್ತು ನಾಟ್ ಸೋ ದಿಗ್ಗಜರು ಎಲ್ಲಿಂದ ಸ್ಪರ್ದಿಸುತ್ತಾರೆ ಎನ್ನುವ ಕಡೆ ಎಲ್ಲರ ಕುತೂಹಲ. ಎಲ್ರಿಗೂ ಬೇಕು ಸೇಫ್ ಸೀಟು. ಕೆಲಸ ಮಾಡಬೇಕಾದ ಸಮಯದಲ್ಲಿ, ಮತದಾರನಿಗೆ ನೀಡಿದ ಆಶ್ವಾಸನೆ ನೆರವೇರಿಸುವ ನಿಟ್ಟಿನಲ್ಲಿ ಸೋತಾಗ ಈ ಅಲೆದಾಟ ಸೇಫ್ ಸೀಟ್ ಗಾಗಿ. ರಾಜಕಾರಣಿ ದಿಕ್ಕೆಟ್ಟು ಅಲೆಯುವ ಹಲವು ಸನ್ನಿವೇಶಗಳಲ್ಲಿ ಇದೂ ಒಂದು. 

ನರೇಂದ್ರ ಮೋದಿ ವಾರಾಣಸಿ ಯಿಂದ ಸ್ಪರ್ದಿಸುವ ಕುರಿತು ಅವರ ಭಕ್ತರಲ್ಲಿ ಒಂದು ತೆರನಾದ ರೋಮಾಂಚನ. ಪವಿತ್ರ ಕ್ಷೇತ್ರದಿಂದ ಸ್ಪರ್ದಿಸೋದು ಯಾರಿಗೂ ಮುದ ಕೊಡುವ ವಿಷಯವೇ. ಖ್ಯಾತ ಶಹನಾಯ್ ವಾದಕ ಭಾರತ ರತ್ನ ಉಸ್ತಾದ್ ಬಿಸ್ಮಿಲ್ಲಾ ಖಾನರೂ ಈ ನಗರದಲ್ಲಿ ತಮ್ಮ ಪ್ರತಿಭೆ ಮೆರೆದಿದ್ದರಂತೆ. ಉಸ್ತಾದ್ ರ ಹೃದಯವೈಶಾಲ್ಯತೆ, ಮತೀಯ ಸಾಮರಸ್ಯ ವಾರಣಾಸಿಯಿಂದ ಸ್ಪರ್ದಿಸುವ ಎಲ್ಲರಿಗೂ ಮಾದರಿಯಾಗಲೀ ಎನ್ನುವುದು ಮತದಾರರ ಆಶಯ. ಮತ್ತೊಂದು ಸುದ್ದಿ ಏನೆಂದರೆ ಭಾಜಪ ದ ಪ್ರಧಾನಿ ಅಭ್ಯರ್ಥಿ ವಾರಣಾಸಿ ಜೊತೆಗೆ ತನ್ನ ರಾಜ್ಯ ಗುಜರಾತ್ ನ ವಡೋದರ ದಿಂದಲೂ ಸ್ಪರ್ದಿಸುವ ತೀರ್ಮಾನ ಮಾಡಿದ್ದು. ಅರರೆ ಏನಿದು. ಮೋದಿ ಅಲೆ, ಮೋದಿ ಸೆಲೆ ಎಂದೆಲ್ಲಾ ಎದೆ ಉಬ್ಬಿಸಿಕೊಂಡು ನಡೆಯುತ್ತಿದ್ದ ಜನರಿ ಮೇಲೆ ಈ ಸುದ್ದಿ ಯಾವ ಪ್ರಭಾವ ಬೀರಬಹುದು, ಎಂದು ಕೊಳ್ಳಬೇಡಿ. ಕಳ್ಳನಿಗೊಂದು ಪಿಳ್ಳೆ ನೆವ ಎಂದು ಕೇಳಿದ್ದೀರಾ ತಾನೇ, ಸಾಕಷ್ಟು ಅಬ್ಯೂಸ್ ಮಾಡಿಸಿ ಕೊಂಡ ಮಾತಿದು. ಎಲ್ಲಾ ನಾಣ್ಣುಡಿಗಳೂ ಹೀಗೆಯೇ. ಸುದ್ದಿ ಸೃಷ್ಟಿ ಮಾಡಿದ ಹಾಗೆ ಪ್ರಾವರ್ಬ್ಸ್ ಗಳನ್ನ ಸೃಷ್ಟಿ ಮಾಡೋಕೆ ಆಗುತ್ಯೇ? ಅದಕ್ಕೇ ಅಬ್ಯೂಸು. take it or leave it. ಅಲೆಯ ಮೇಲೆ ಸವಾರಿ ಮಾಡುತ್ತಿದ್ದ ನಾಯಕನಿಗೆ ಇದು ತರವೇ ಎಂದು ಪ್ರಶ್ನಿಸಿದ ಕೂಡಲೇ ಧುಮ್ಮಿಕ್ಕಿತು ಉತ್ತರ. ಯಾಕೆ, ತಪ್ಪೇನು? ಹೊಟ್ಟೆ ಪಕ್ಷದ ರಂಗ ಸ್ವಾಮೀ ಗಳು ಐದು ಕಡೆಗಳಿಂದ ನಿಂತಿಲ್ಲವೇ, ಇನ್ನೂ ಮೂರು ಬಾಕಿ ಇದೆಯಲ್ಲಾ ಎಂದು ಮೀಸೆಯ ಮರೆಯಲ್ಲಿ ನಗು. ವಾಹ್, ಕಂಪ್ಯಾರಿಸನ್ ಎಂದರೆ ಹೀಗಿರಬೇಕು. ಎತ್ತರದಿಂದ ಬೀಳುವ ಬೆಕ್ಕು ಲ್ಯಾಂಡ್ ಆಗೋದು ಹೇಗೆ ಅಂತ ಗೊತ್ತು ತಾನೇ?

ಪ್ರಶ್ನೆ ಏನೆಂದರೆ, ವಾರಣಾಸಿಯಿಂದ ಸ್ಪರ್ದಿಸಲಿರುವ ಅರವಿಂದ ಕೇಜರಿವಾಲ ಗೆಲ್ಲುವ ಸಾಧ್ಯತೆ ಕಾರಣ ನಯವಾಗಿ ವಡೋದರ ದ ಕಡೆ ಹೆಜ್ಜೆ ಹಾಕಿರಬಹುದೇ, ಮೋದಿ? ಈ ಅರವಿಂದ್ ಕೇಜರಿ ವಾಲ್ ಬಹುತ್ ಚಾಲಾಕ್ ಆದ್ಮಿ. ಬಯೋ ಡೇಟಾ ದಲ್ಲಿ ಒಬ್ಬರು ಸಿಕ್ಕಾಪಟ್ಟೆ ಬರೆದು ಬಿಟ್ಟರು, ಇದು ನಿಜವೇ ಎಂದು ನೋಡಲು ಗುಜರಾತ್ ಗೆ ಧಾವಿಸಿ ಬಿಟ್ಟರು. ೧೬ ಪ್ರಶ್ನೆಗಳ ಶಾಪಿಂಗ್ ಲಿಸ್ಟ್ ಹಿಡಿದು ಕೊಂಡು. ಪಾಪ, ಈತನ ಪ್ರಶ್ನೆಗಳಿಗೆ ಉತ್ತರ ಸಿಗಲಿಲ್ಲ. ಆದರೆ ಶತ್ರು ಪಾಳಯದಲ್ಲಿ ನಡುಕವಂತೂ ತರಿಸಿಬಿಟ್ಟಿತು ಈತನ gate crash ಯಾತ್ರೆ. ಹಾಗಾಗಿ ಈ ಎರಡನೇ ಕ್ಷೇತ್ರದಿಂದ ಸ್ಪರ್ದಿಸುವ ತೀರ್ಮಾನ.

ಅರವಿಂದ ಕೇಜರಿವಾಲ್ ಧಿಡೀರನೆ ಹೆಸರು ಮಾಡಿಬಿಟ್ಟರು. ನಮ್ಮ ಪ್ರಜಾಪ್ರಭುತ್ವ ವಿಶ್ವ ಅಂದು ಕೊಂಡಂತಹ ಅಂಗವಿಕಲ ಪ್ರಜಾಪ್ರಭುತ್ವ ಅಲ್ಲ ಎಂದು ಸೊಗಸಾಗಿ ತೋರಿಸಿ ಕೊಟ್ಟರು. ಈತನ ಪಕ್ಷದ ಹೆಸರು ಆಮ್ ಆದ್ಮಿ ಪಾರ್ಟಿ. ಗುರುತು, ಪರ್ಕೆ, ಪರಕೆ..ಪೊರಕೆ. ಕಾಕ್ಟೇಲ್ ಪಾರ್ಟಿಯಲ್ಲಿ ಸಿಗುವ ಎಲ್ಲಾ ಮನರಂಜನೆಯೂ ಈ ಪಕ್ಷ ಕೊಡುತ್ತಿದೆ ಹಲವು ರಾಜಕಾರಣಿಗಳಿಗೆ.

ಮೋದಿ ವಾರಣಾಸಿ ಜೊತೆಗೆ ವಡೋದರ ಕೂಡಾ ಇರಲಿ ಎಂದು ತೀರ್ಮಾನಿಸಿದ ಕಾರಣದ ಬಗೆಗಿನ ನನ್ನ take ಇದು.        

ತರಕಾರೀ ಅಂಗಡಿಯಲ್ಲಿ ವಯಾಗ್ರಾ

ಔಷಧ ತಯಾರಿಕಾ ಕಂಪೆನಿಗಳು ಕೋಟಿಗಟ್ಟಲೆ ಡಾಲರ್ ಖರ್ಚಿನಲ್ಲಿ ಹೊಸ ಹೊಸ ಮದ್ದುಗಳ ಅವಿಷ್ಕಾರಕ್ಕೆ ಅವಿರತ ಶ್ರಮ ವಹಿಸುತ್ತಾರೆ. ಮಾಡರ್ನ್ ಲೈಫ್ ಗೆಂದೇ ಹೇಳಿಮಾಡಿಸಿದ ಮಾಡರ್ನ್ ಖಾಯಿಲೆ, ಬ್ಯಾನೆಗಳು ಈ ಕಂಪೆನಿಗಳಿಗೆ ಒಂದು ರೀತಿಯ ಸುಗ್ಗಿಯನ್ನೇ ದಯಪಾಲಿಸುತ್ತವೆ. ಆದರೂ ಯಾರೂ ಹೊಸತಾಗಿ ಮಾರುಕಟ್ಟೆಗೆ ಬಂದ ಔಷಧಿಗಳ ಕಡೆ ಗಮನ ಕೊಡೋಲ್ಲ, ಮಾತ್ರವಲ್ಲ ಈ ಔಷಧಿಗಳಿಗೆ ಪತ್ರಿಕೆಯಲ್ಲಿ ಪ್ರಚಾರ ಕೂಡಾ ಕಡಿಮೆಯೇ. ಆದರೆ ಒಂದು ಔಷಧವಂತೂ ಇಡೀ ಪ್ರಪಂಚದ ಗಮನವನ್ನು ತನ್ನ ಕಡೆ ನಿರಾಯಾಸವಾಗಿ ಎಳೆದುಕೊಂಡಿತು. Pfizer ಎನ್ನುವ ಕಂಪೆನಿ ದಶಕಗಳ ತನ್ನ ಸಂಶೋಧನೆಗೆ ಒಂದು ತಕ್ಕುದಾದ, ಖಜಾನೆ ತುಂಬಿ ತುಳುಕುವ ಮದ್ದನ್ನು ವಿಶ್ವಕ್ಕೆ ನೀಡಿತು. ವಿಶ್ವ ಅಂದ್ರೆ ಗಂಡಿನ ವಿಶ್ವಕ್ಕೆ ಅನ್ನಿ. ಏಕೆಂದರೆ ಈ ಮದ್ದು ಗಂಡಿಗಾಗಿ.. ಅವನ ರಾಸಲೀಲೆ, ಮತ್ತು ನೀರವ ರಾತ್ರಿಯ ಪಫಾರ್ಮನ್ಸ್ ವೃದ್ಧಿಸಲು, ತಾತ್ಕಾಲಿಕ ನಪುಂಸಕತೆ ಯನ್ನು ಹೋಗಲಾಡಿಸಲು ಇಳಿವಯಸ್ಸಿನವರಿಗೂ ಉಪಯೋಗವಾಗುವ ಮದ್ದನ್ನು ಮಾರುಕಟ್ಟೆಗೆ ಭಾರೀ ಸುದ್ದಿಯೊಂದಿಗೆ ತಂದಿತು. ಫೈಜರ್ ಕಂಪೆನಿ ಎಂದ ಕೂಡಲೇ ನೀವು ಊಹಿಸಿ ಬಿಟ್ಟಿರಿ. ಅದು…..ಅದು….ವಯಾಗ್ರ ಎಂದು, ಅಲ್ಲವೇ? ಫೈಜರ್ ಮತ್ತು ವಯಾಗ್ರ, ಕೋಲ್ಗೆಟ್ ಮತ್ತು ಹಲ್ಲುಜ್ಜುವ ಪೇಸ್ಟ್ ಗೆ ಇರೋ ಸಂಬಂಧ. ಯಾವುದೇ ಪೇಸ್ಟ್ ಖರೀದಿಸಿದರೂ ಅದು ಕೋಲ್ಗೆಟ್ ಎನ್ನುವಷ್ಟು ಆ ಕಂಪೆನಿಯ ಖ್ಯಾತಿ.

ವಯಾಗ್ರಾ. ಈ ವಜ್ರಕಾರದ, ನೀಲಿ ಬಣ್ಣದ ಮಾತ್ರೆ ಒಂದು ದೊಡ್ಡ ಕ್ರಾಂತಿಯನ್ನೇ ಮಾಡುತ್ತಿರಬೇಕು ಶಯನ ಗೃಹದಲ್ಲಿ. ಅನುಮಾನ ಏಕೆಂದರೆ ನಾನು ಅದನ್ನು ಉಪಯೋಗಿಸಿಲ್ಲ. ಅದರ ಅವಶ್ಯಕತೆ ಇನ್ನೂ ಬಂದಿಲ್ಲ ಎನ್ನಿ, ಹಿ..ಹೀ. ಜನ ಮುಗಿ ಬಿದ್ದು ಕೊಳ್ಳ ತೊಡಗಿದರು. ಉತ್ತರ ಧ್ರುವದಿಂ..ದಕ್ಷಿಣ ಧ್ರುವಕೂ…ಮಿಲನದ ಗಾಳಿ ಬೀಸ ತೊಡಗಿತು. ಬೆಲೆ ದುಬಾರಿಯಾದರೂ, ಅಯ್ಯೋ ಸತ್ಮೇಲ್ ಏನು ಗಂಟು ತಗೊಂಡ್ ಹೋಗ್ತೀವಾ ಎಂದು ಜನ ಗಂಟನ್ನು ಬಿಚ್ಚಿದರು. ವಯಾಗ್ರ ಔಷಧ ತಯಾರಿಕಾ ವಲಯದಲ್ಲಿ ಒಂದು ಬಿರುಗಾಳಿಯನ್ನೇ ಎಬ್ಬಿಸಿತು.

ದೇವರು ಈ ಪ್ರಪಂಚವನ್ನು ಸೃಷ್ಟಿಸುವಾಗ ಸಾಕಷ್ಟು ತಯಾರಿ ಮಾಡಿ ಕೊಂಡೆ ಸೃಷ್ಟಿಸಿರುತ್ತಾನೆ. ಮನುಷ್ಯನಿಗೆ ಬೇಕಾದ ಎಲ್ಲಾ ಸವಲತ್ತುಗಳೂ ಈ ಸೃಷ್ಟಿಯಲ್ಲಿವೆ. ನೋಡುವ, ಕಂಡು ಕೊಳ್ಳುವ ಕಣ್ಣು ಬುದ್ಧಿ ಶಕ್ತಿ ಬೇಕಷ್ಟೇ. ಆಹಾರದಲ್ಲೇ ವಿವಿಧ ಪೋಷಕಾಂಶಗಳ ಜೊತೆ ಲೈಂಗಿಕ ಚಟುವಟಿಕೆಗೆ ಬೇಕಾದ ಪೋಷಕಾಂಶಗಳೂ ಇವೆ. ಕೆಲವು ಅಗ್ಗದ ಬೆಲೆಯಲ್ಲಿ ಸಿಕ್ಕರೆ, ಕೆಲವು ದುಬಾರಿ. ತರಕಾರಿ ಅಂಗಡಿಯಲ್ಲೇ ಮಗುಮ್ಮಾಗಿ ಕೂರುವ ತರಕಾರಿಯೊಂದು ರಾತ್ರಿಯ ಬದುಕಿಗೆ ಬಣ್ಣ ತರುತ್ತದಂತೆ. ಅದೇ ನಮ್ಮ ಕೆಂಬಣ್ಣದ ಬೀಟ್ರೂಟು.

ಬೀಟ್ರೂಟಾ??????????????????????

ಹೌದು ಬೀಟ್ರೂಟ್. ಈ ತರಕಾರಿಯಲ್ಲಿ ಬೋರಾನ್ (boron), ಎನ್ನುವ ಪೋಷಕಾಂಶ ಸಂತಾನ ವೃದ್ಧಿಗೆ ಬೇಕಾದ ಲೈಂಗಿಕ ಹಾರ್ಮೋನ್ ಗಳ ಉತ್ಪಾದನೆಗೆ ಉತ್ತೇಜನ ಕೊಡುತ್ತದಂತೆ. ವಯಾಗ್ರ ಮಾಡುವ ಕೆಲಸವನ್ನೇ ಈ ಪಾಪದ ಬೀಟ್ರೂಟ್ ಮಾಡೋದು. ನಮಗೆ ಅದು ಹೊಳಯಲೇ ಇಲ್ವಲ್ಲಾ? ನಿಲ್ಲಿ, ನಿಲ್ಲಿ…

….ಚೆನ್ನಾಗೇ ತಿನ್ನಿ ಬೀಟ್ರೂಟ್ ನ.ಆದರೆ ಮೂತ್ರ ವಿಸರ್ಜನೆಗೆ ಹೋದಾಗ ಮೂತ್ರ ತಿಳಿ ರಕ್ತ ವರ್ಣದ್ದು ಎಂದು ಕಂಡ ಕೂಡಲೇ ಅಯ್ಯಪ್ಪೋ, ತಗುಲಿತಾ ನನಗೂ ಕಿಡ್ನಿ ಕಾಯಿಲೆ ಎಂದು ಡಾಕ್ಟರ್ ಕಡೆ ಧಾವಿಸಬೇಡಿ. ಬೀಟ್ರೂಟ್ ತಿಂದ ನಂತರ ಮೂತ್ರ ವಿಸರ್ಜನೆ ಬೀಟ್ರೂಟ್ ಬಣ್ಣ ಪಡೆದು ಕೊಳ್ಳೋದು ಪ್ರಕೃತಿ ನಿಯಮ.

ಸೋ, ಗುಡ್ ಲಕ್ ವಿದ್ ಬೀಟ್ರೂಟ್.

ಹಿಂದೂಸ್ಥಾನದ ವ್ಯಾಘ್ರ ‘ಟಿಪ್ಪು ಸುಲ್ತಾನ್’, ಒಂದು ಐತಿಹಾಸಿಕ ನೋಟ

Image

ಭಾರತ ಕಂಡ ಅತ್ಯಪೂರ್ವ ಮಾತ್ರವಲ್ಲ, ಏಕೈಕ ಸ್ವಾತಂತ್ರ್ಯ ವೀರ ಟಿಪ್ಪು ಸುಲ್ತಾನ್. ರಣರಂಗದಲ್ಲಿ ಬೆರಳೆಣಿಕೆಯಷ್ಟಿನ ಸೈನಿಕರನ್ನು ಕಟ್ಟಿಕೊಂಡು ಬ್ರಿಟಿಷರಿಗೆ ಶರಣಾಗದೆ ಹುತಾತ್ಮರಾದ ಅದ್ಭುತ ಚೇತನ ಟಿಪ್ಪು. ಈ ವೀರ, ರಾಜನಾದ ಮಾತ್ರಕ್ಕೆ ಇವರ ಆಡಳಿತದಲ್ಲಿ ಕೆಲವರು ಎಸಗಿರಬಹುದಾದ ಪ್ರಮಾದಗಳ ಕಾರಣ, ಭಾರತ ಮಾತೆಯನ್ನು ಬ್ರಿಟಿಷರ ಕಪಿ ಮುಷ್ಟಿಯಿಂದ ಬಿಡುಗಡೆ ಮಾಡಿಸಲು ಹೋರಾಡಿದ ಆ ಗುಣ ಇಂದಿನ ಜನರಿಗೆ ಬೇಡ. ಯಾವನೋ ಪರಂಗಿ ಇತಿಹಾಸಕಾರ ಟಿಪ್ಪು ಬಗ್ಗೆ ಬರೆದಿದ್ದನ್ನು ವೇದವಾಕ್ಯ ಎಂದು ನಂಬುತ್ತಾ, ಟಿಪ್ಪು ಸುಲ್ತಾನರ ಬಗ್ಗೆ ಇಲ್ಲ ಸಲ್ಲದ ಅಪವಾದ, ಅವಹೇಳನ ಮಾಡುತ್ತಾ, ಕಥೆ ಕಾದಂಬರಿ ಬರೆಯುತ್ತಾ ಜನರ ಮನಸಿನಲ್ಲಿ ಟಿಪ್ಪು ಒಬ್ಬ ಕ್ರೂರ ಎಂದು ಬಿಂಬಿಸಲು ಯತ್ನಿಸುತ್ತಿರುವುದು ಖೇದಕರ. ಸ್ವಾತಂತ್ರ್ಯ ಕಲಿಗಳ ಬಗ್ಗೆ,, ಅವರ ತ್ಯಾಗದ ಬಗ್ಗೆ ಆದರ ಇಲ್ಲದಿದ್ದರೂ ಪರವಾಗಿಲ್ಲ, ಅನಾದಾರ ಬೇಡ. ಸ್ವಾತಂತ್ರ್ಯ ಕಲಿಗಳ ಸಾಹಸವನ್ನು ಅವಗಣನೆ ಮಾಡುವುದು ಸಲ್ಲದು. ಆದರೆ ಇದನ್ನು ಹೇಳುವುದಾದರೂ ಯಾರಿಗೆ? ಹೋಬಳಿ ಗಳನ್ನು ಆಳಿದ ಪಾಳೆಗಾರರ ಬಗ್ಗೆ ನಮಗೆ ಅತೀವ ಭಕ್ತಿ, ಅಭಿಮಾನ ಇದೆ. ಆದರೆ ಟಿಪ್ಪುವಿಗೆ ಮಾತ್ರ ಈ ಉಪಚಾರ ಅಲಭ್ಯ. ಟಿಪ್ಪು, ಕರುನಾಡಿನಲ್ಲಿ ಹುಟ್ಟಿದ ಕೆಚ್ಚೆದೆಯ ಕನ್ನಡಿಗ. ನಮ್ಮ, ನೆಲ, ಸಂಸ್ಕಾರ, ಜೀವನ ರೀತಿ, ಭಾಷೆ ಎಲ್ಲವನ್ನೂ ಕಲುಷಿತಗೊಳಿಸಲು ಬಂದ ಶತ್ರುವನ್ನು ಸದೆ ಬಡಿಯಲು ಟಿಪ್ಪೂ ನಡೆಸಿದ ಹರಸಾಹಸ ನಮಗೆ ಸ್ಮರಣೀಯವಾಗಬೇಕು. ಹಾಗೆ ಮಾಡದೆ ಕೃತಘ್ನ ಗುಣವನ್ನ ಮೆರೆಯೋ ನಾವು ದೇಶಪ್ರೇಮಿಗಳು.    

ಟಿಪ್ಪು ಮನಸ್ಸು ಮಾಡಿದ್ದರೆ, ಸ್ವಾರ್ಥಿಯಾಗಿದ್ದರೆ, ಬ್ರಿಟಿಷರೊಂದಿಗೆ ರಾಜಿ ಮಾಡಿಕೊಂಡು, ಸಂಧಿ ಮಾಡಿಕೊಂಡು, ಜನ್ಮವೆತ್ತಿದ ನಾಡಿನಲ್ಲಿ ಎರಡನೇ ದರ್ಜೆಯ ಪ್ರಜೆಯಾಗಿ ಬದುಕುತ್ತೇನೆ ಎಂದು ಬ್ರಿಟಿಷರಿಗೆ ಆಶ್ವಾಸನೆ ನೀಡಿದ್ದರೆ ಸುಲಭವಾಗಿ ಕಿರೀಟ ಉಳಿಸಿ ಕೊಳ್ಳಬಹುದಿತ್ತು . ಹಾಗೆ ಮಾಡದೆ ಸಾಧಾರಣ ಸೈನಿಕನಂತೆ ಹೋರಾಡಿ ವೀರ ಮರಣನ್ನಪ್ಪಿದ ಟಿಪ್ಪುವಿಗೆ ಅಪಮಾನ. ಬ್ರಿಟಿಷರೊಂದಿಗೆ ಸಂಬಂಧ ಬೆಳೆಸಿ ಕೊಂಡು, ಕಿರೀಟ ಸಿಕ್ಕಿಸಿಕೊಂಡು ಮೆರೆದವರಿಗೆ ಸಮ್ಮಾನ. ಅವರ ಬಗ್ಗೆ ನಮ್ಮ ನಾಡಿಗೆ ಅಭಿಮಾನ. ಟಿಪ್ಪುವಿನಂಥ ಕೆಚ್ಚೆದೆಯ ಕಲಿ ಬೇರೆ ದೇಶದಲ್ಲಿ ಬಾಳಿ ಬದುಕಿದ್ದರೆ ಆ ವ್ಯಕ್ತಿಯ ಬಗ್ಗೆ ಬರೆಯಲು, ಆ ಶೂರನನ್ನು ದಂತ ಕಥೆಯಾಗಿಸಲು ಪೈಪೋಟಿಯೇ ಏರ್ಪಡುತ್ತಿತ್ತು. ನಮ್ಮ ದೇಶದಲ್ಲೂ ನಡೆಯುತ್ತಿದೆ ಪೈಪೋಟಿ, ಟಿಪ್ಪು ಹೆಸರಿಗೆ, ಕೀರ್ತಿಗೆ ಹೇಗೆ ಕೆಸರೆರಚಿ ಹೆಸರು ಮಾಡಿಕೊಳ್ಳುವ ಪೈಪೋಟಿ.  

೧೭೫೦ ರಲ್ಲಿ ಹೈದರಲಿ – ಫಖ್ರುನ್ನಿಸ ದಂಪತಿಗಳಿಗೆ ಜನಿಸಿದ ಟಿಪ್ಪೂ ಬ್ರಿಟಿಷರ ವಿರುದ್ಧ ಹೋರಾಡಿದ ಅಮೋಘ ವೀರ, ಅಪ್ರತಿಮ ಶೂರ. ಸ್ವಾತಂತ್ರ್ಯದ ಪ್ರಪ್ರಥಮ ಕಹಳೆ ಝಳಪಿಸುವ ಟಿಪ್ಪೂ ಖಡ್ಗದ ಮೂಲಕ.  ಆರ್ಕಾಟ್ ಪ್ರದೇಶದ ಸೂಫಿ ಸಂತರ ಹೆಸರನ್ನು ತನ್ನ ಮಗನಿಗೆ ನಾಮಕರಣ ಮಾಡಿದ ಟಿಪ್ಪೂ ತಾಯಿ ತನ್ನ ಮಗನಲ್ಲಿ ಉದಾತ್ತ ಗುಣಗಳು ಮನೆಮಾಡುವಂತೆ ನೋಡಿಕೊಂಡರು. ಈ ಗುಣಗಳೇ ಟಿಪ್ಪು ತನ್ನ ಪ್ರಜೆಗಳ ಮನ್ನಣೆ, ಆದರ ಗೌರವ, ನಿಷ್ಠೆ ಗಳಿಸಿ ಕೊಳ್ಳಲು ನೆರವಾದವು.  

ತನ್ನಲ್ಲಿ ದೈವದತ್ತವಾಗಿ ಬಂದ ಸ್ಫೋಟಕ ಸ್ಥೈರ್ಯ, ಶೌರ್ಯದ ಕಾರಣ ಬ್ರಿಟಿಷರಿಗೆ ಸಿಂಹಸ್ವಪ್ನರಾಗಿದ್ದ ಟಿಪ್ಪೂ, ಶತ್ರುವನ್ನು ಲೀಲಾಜಾಲವಾಗಿ ಮಣಿಸಿದ್ದರು. ಟಿಪ್ಪು ಕೇವಲ ೧೩ ನೆ ವಯಸ್ಸಿನಿಂದಲೇ ತಂದೆಯ ಗರಡಿಯಲ್ಲಿ ಪಳಗಿ ಅಪ್ರತಿಮೆ ಯೋಧ ಎನಿಸಿಕೊಂಡಿದ್ದರು. ಬೆನ್ನು ತಿರುಗಿಸಿ ಓಡಿ ಸಮಯ ಸಿಕ್ಕಾಗ ಬೇಟೆಯಾಡೋ ಕಲಿಗಳ ಪೈಕಿಯವರಾಗಿರಲಿಲ್ಲ ಟಿಪ್ಪು. ರಣರಂಗದಲ್ಲಿ ಟಿಪ್ಪು ಹೋರಾಡುವ ಪರಿ, ಅವರ ಪಾದರಸದಂಥ, ಮಿಂಚಿನ ಚಲವಲನ ಕಂಡ ಶತ್ರು ಹೇಳುತ್ತಿದ್ದು ಯಾವ ದಿಕ್ಕಿನಲ್ಲ್ಲಿ ತಿರುಗಿದರೂ ನಮಗೆ ಟಿಪ್ಪುವೇ ಕಾಣುತ್ತಿದ್ದುದು ಎಂದು. ಟಿಪ್ಪುವಿನ ಶೌರ್ಯ ಸಾಹಸ, ರಣನೀತಿಗಳಿಂದ ನಾಡಿನೊಳಗಿನ ಶತ್ರುಗಳೂ, ಲಂಡನ್ನಿನಲ್ಲಿ ಕೂತ ಪರಂಗಿಗಳೂ ಭಯದಿಂದ ಹೆಪ್ಪುಗಟ್ಟುತ್ತಿದ್ದರು.  

ಟಿಪ್ಪು ಹುತಾತ್ಮರಾಗಿ ಬಿದ್ದಿದ್ದರೂ ಅವರು ಸತ್ತಿರಲಿಕ್ಕಿಲ್ಲ ಎಂದು ಅತೀ ಸಮೀಪದಿಂದ ಮತ್ತಷ್ಟು ಗುಂಡುಹಾರಿಸಿ ಟಿಪ್ಪು ಹತರಾದರು ಎಂದು ಖಾತರಿ ಪಡಿಸಿ ಕೊಂಡ ನಂತರವೇ ಬ್ರಿಟಿಶ್ ಸೇನೆ ಅವರ ಪಾರ್ಥಿವ ಶರೀರದ ಹತ್ತಿರ ಬರಲು ಧೈರ್ಯ ತೋರಿಸಿದ್ದು. ಖಡ್ಗದ ಹಿಡಿತ ಬಿಡದೆ, ರಕ್ತದ ಮಡುವಿನಲ್ಲಿ ಟಿಪ್ಪು ಹತರಾಗಿ ಬಿದ್ದ ಆ ಸ್ಥಳಕ್ಕೆ ಧಾವಿಸಿ ಬಂದ ಬ್ರಿಟಿಶ್ ಸೈನಿಕನೊಬ್ಬ ಟಿಪ್ಪೂರವರ ಕೈಯ್ಯಲ್ಲಿದ್ದ ಭಾರೀ ಖಡ್ಗ ವನ್ನು ತನ್ನ ಕೈಯ್ಯಲ್ಲಿ ತೆಗೆದು ಕೊಂಡು ಹೇಳಿದ್ದು, ಈ ಅಪ್ರತಿಮ ವೀರನ ಖಡ್ಗ ನನ್ನ ಕೈಯಲ್ಲಿ ಸೇರಿದ್ದು ನನಗೆ ಅತೀವ ಹೆಮ್ಮೆ ತೋರುತ್ತಿದೆ, ಎಂದು ಕಣ್ಣೀರು ಹಾಕುತ್ತಾನೆ. ಟಿಪ್ಪುವಿಗೆ ಸಲ್ಲಬೇಕಾದ ಗೌರವಾರ್ಹ, ಮಿಲಿಟರಿ ಶವಸಂಸ್ಕಾರ ಬ್ರಿಟಿಶ್ ಸೇನೆ ಮಾಡುತ್ತದೆ. ಕರ್ನಲ್ ವೆಲ್ಲೆಸ್ಲಿ ಟಿಪ್ಪೂ ಸುಲ್ತಾನರ ಶೌರ್ಯಕ್ಕೆ ಮೆಚ್ಚಿ ಅವರ ಸ್ಮರಣಾಥ ಮಡಿದ ಸ್ಥಳದಲ್ಲಿ ಒಂದು ಸ್ಮಾರಕ ನಿರ್ಮಿಸುತ್ತಾನೆ. ಶತ್ರುವಿಗೆ ಇರುವ ಅಂತಃಕರಣ ದೇಶವಾಸಿಗೆ ಇಲ್ಲದೆ ಹೋಯಿತು.                

ಈ ಮಹಾನ್ ಚೇತನದ ಬಗ್ಗೆ ಬರೆಯುವ ಸುದೈವ ನನಗೆ ಒದಗಿ ಬಂದಿದ್ದನ್ನು ನೋಡಿ ಸಂತಸವಾಗುತ್ತಿದ್ದರೂ, ಬರಹದ ಉದ್ದೇಶ ಟಿಪ್ಪೂ ಬಗೆಗಿನ ಅಪವಾದ ನೀಗಿಸುವ ಅವಶ್ಯಕತ ಎನ್ನುವ ಅರಿವು ನನ್ನಲ್ಲಿ ಖೇದವನ್ನೂ ಉಂಟು ಮಾಡುತ್ತಿದ್ದೆ. ಟಿಪ್ಪು ಈ ನಾಡಿಗೆ ಸಂದ ಸೌಭಾಗ್ಯ. ಯಾವುದೇ ದೇಶವೂ ಹೆಮ್ಮೆ ಪಡಬಹುದಾದ ಒಬ್ಬ ಸ್ವಾತಂತ್ರ್ಯ ಯೋಧ. ಅಮೆರಿಕೆಯ ಜಾರ್ಜ್ ವಾಷಿಂಗ್ಟನ್, ಫ್ರಾನ್ಸ್ ನ ನೆಪೋಲಿಯನ್ ರಂಥ ಮಹನೀಯರ ಸಮಕಾಲೀನರಾಗಿದ್ದ ಟಿಪ್ಪುವಿಗೆ ಈ ಮಹನೀಯರುಗಳಿಗೆ ಅವರ ದೇಶಗಳು ತೋರಿದ ಕೃತಜ್ಞತಾ ಭಾವ ದಕ್ಕದೆ ಹೋದುದು ನಮಗೆ ನಾವೇ ಮಾಡಿ ಕೊಂಡ ಅವಮಾನ.  

ಟಿಪ್ಪು ಸುಲ್ತಾನ್ ರನ್ನು ಹಿಂದೂ ವಿರೋಧೀ ಎಂದು ಅಪಪ್ರಚಾರ ಮಾಡುವ ಜನರಿಗೆ ಶೃಂಗೇರಿ ಆಚಾರ್ಯ ರೊಂದಿಗೆ ಟಿಪ್ಪು ನಡೆಸಿದ ೩೦ ಪತ್ರಗಳ ಸಂವಾದ, ವಿವರಣೆ ಯನ್ನು ಸರಕಾರ, ಮತ್ತು ಶೃಂಗೇರಿ ಮಠ ಕೊಟ್ಟು ಟಿಪ್ಪೂ ರವರ ಬಗ್ಗೆ ಇಲ್ಲಸಲ್ಲದ ನ್ನು ಬರೆದು ದಿಢೀರ್ ಹೆಸರುವಾಸಿಯಾಗಲು ಪ್ರಯತ್ನಿಸುತ್ತಿರುವ ಇತಿಹಾಸ್ಯಕಾರರು, ಮತ್ತು ‘ಪತ್ರಕರ್ತ’ ಇತಿಹಾಸ್ಯಕಾರರ ಪ್ರಯತ್ನಗಳನ್ನು ಕೊನೆಗಾಣಿಸಬೇಕು.

ಶೃಂಗೇರಿಯ ಶಾರದ ಮಾತೆಯ ಪೀಠದ ಮೇಲೆ ಉಗ್ರ ಧಾಳಿ ನಡೆಸಿದ ಮರಾಠ ಸೇನೆ ಮತ್ತು ಅದರ ಸೇನಾ ನಾಯಕ ತೋರಿದ ಕ್ರೌರ್ಯಕ್ಕೆ ಟಿಪ್ಪು ಬೆಚ್ಚಿ ಬಿದ್ದಿದ್ದರು. ಶಾರದಾ ಮಾತೆಯ ವಿಗ್ರಹಗಳನ್ನು ಬೀದಿಗೆಸೆದು, ಅಲ್ಲಿನ ಅರ್ಚಕರನ್ನು ಕೊಂದು, ಅಟ್ಟಹಾಸಗೈದ ಮರಾಠರ ಕ್ರೌರ್ಯ ಕಂಡು ಶೃಂಗೇರಿ ನಲುಗಿತು. ಒಂದು ಪವಿತ್ರ ಕ್ಷೇತ್ರದ ಮೇಲೆ ಧಾಳಿ ಮಾಡಿದ್ದ ಮರಾಠರ ವಿರುದ್ಧ ಅಲ್ಲಿನ ಆಚಾರ್ಯು ಮೊರೆ ಹೋಗಿದ್ದು ಟಿಪ್ಪುವಿನಲ್ಲಿಗೆ. ಆಚಾರ್ಯರು ಟಿಪ್ಪುವಿನ ಸಹಾಯ ಯಾಚಿಸಿದ ಸುದ್ದಿ ತಿಳಿದ ಮರಾಠರು ಟಿಪ್ಪು ರವರ ಶಕ್ತಿ ಸಾಮರ್ಥ್ಯಕ್ಕೆ ಹೆದರಿ ಶೃಂಗೇರಿಯಿಂದ ಕಾಲು ಕೀಳುತ್ತಾರೆ. ಮರಾಠರಿಂದ ದಾಳಿಗೀಡಾದ ಮಠದ ದುರಸ್ತಿಗೆ ಟಿಪ್ಪು ಸುಲ್ತಾನ್ ಉದಾರವಾಗಿ ಧನಸಹಾಯ ಮಾಡುತ್ತಾರೆ. ಕೆಲ ಸಮಯದ ನಂತರ ಮರಾಠ ದಾಳಿಯ ನೇತೃತ್ವ ವಹಿಸಿದ್ದ ರಘುನಾಥ ರಾವ್ ಮಠದೊಂದಿಗೆ ಸಂಬಂಧ ಬೆಳೆಸಲು ತಾನಿರುವಲ್ಲಿಗೆ ಆಚಾರ್ಯರನ್ನು ಕರೆಸುತ್ತಾನೆ. ತನ್ನ ಕಡು ಶತ್ರು ಮರಾಠ ರೊಂದಿಗೆ ಸಂಬಂಧ ಬೆಳೆಸಲು ಹೋಗುವ ಆಚಾರ್ಯರಿಗೆ ಅವರು ಹೋಗುವ ಹಾದಿಯಲ್ಲಿ ಯಾವ ತೊಂದರೆಯೂ ಆಗಂತೆ ಎಲ್ಲಾ ಸಜ್ಜೀಕರಣದ ವ್ಯವಸ್ಥೆ ಮಾಡುವುದು ಮಾತ್ರವಲ್ಲದೆ ಆಚಾರ್ಯ ಹಿಂತಿರುಗಿ ಬರುವುದು ತಡವಾದಾಗ ಅದರ ಕುರಿತು ಆತಂಕಿತರಾಗಿ ವಿಚಾರಿಸುತ್ತಾರೆ ಟಿಪ್ಪು.

ಟಿಪ್ಪು ಹೇಳುತ್ತಿದ್ದುದು, ನನಗಿರುವುದು ದೇವರ ದಯೆ, ಆಚಾರ್ಯರ ಆಶೀರ್ವಾದ, ಮತ್ತು ನನ್ನ ಶಸ್ತ್ರ ಭಂಡಾರ. ಟಿಪ್ಪು ಮತ್ತು ಶಾರದಾ ಪೀಠದ ಆಚಾರ್ಯರ  ನಡುವೆ ೩೦ ಪತ್ರಗಳ ಸಂವಾದ ಸಹ ನಡೆಯುತ್ತದೆ.  

ಟಿಪ್ಪು ಸೈನ್ಯದಲ್ಲಿ ಅಧಿಕ ಸಂಖ್ಯೆಯಲ್ಲಿ ಇದ್ದುದು ಹಿಂದೂಗಳು. ಟಿಪ್ಪೂ ಸುಲ್ತಾನರ ಪ್ರಧಾನಿ ಪೂರ್ಣಯ್ಯ, ಓರ್ವ ಬ್ರಾಹ್ಮಣ. ಕಂದಾಯ ಮಂತ್ರಿ ಕೃಷ್ಣ ರಾವ್, ಮತ್ತೊಬ್ಬ ಬ್ರಾಹ್ಮಣ. ಸೇನಾ ದಂಡನಾಯಕ ಶ್ರೀನಿವಾಸ ರಾವ್.  ಶ್ರೀರಂಗ ಪಟ್ಟಣದ ಶ್ರೀ ರಂಗನಾಥನ ದೇಗುಲ, ಕಲ್ಲಾಳದ ಲಕ್ಷ್ಮಿಕಾಂತ ದೇವಾಲಯ, ಮೇಲುಕೋಟೆಯ ನಾರಾಯಣ ಸ್ವಾಮೀ ಮಂದಿರಗಳನ್ನೂ  ಸೇರಿಸಿ ೧೫೦ ಕ್ಕೂ ಹೆಚ್ಚು ಹಿಂದೂ ದೇವಾಯಗಳಿಗೆ ಉದಾರ ಧನಸಹಾಯ. ನಂಜನಗೂಡಿನ ನಂಜುಂಡೇಶ್ವರ ದೇವಸ್ಥಾನದಲ್ಲಿ ‘ಹಕೀಂ ನಂಜುಂಡ’ ಎನ್ನುವ ಲಿಂಗವನ್ನು ಟಿಪ್ಪು ಕೊಟ್ಟಿದ್ದಂತೆ.

ಶ್ರೀರಂಗ ಪಟ್ಟಣದಿಂದ ಸ್ವಲ್ಪ ದೂರದಲ್ಲಿರುವ ಕೆರೆ ತೊನ್ನೂರುಎನ್ನುವ ಗ್ರಾಮದಲ್ಲಿ ೧೨ ನೆ ಶತಮಾನದ ಕೆಲವು ದೇವಾಲಯಗಳಿವೆ. ಈ ದೇವಾಲಯಗಳಿಗೆ ಟಿಪ್ಪು ಭೇಟಿ ನೀಡಿದ್ದರಂತೆ.  

ಟಿಪ್ಪು ಸುಲ್ತಾನರ ಬದುಕಿನ ಧ್ಯೇಯ ತನ್ನ ನಾಡಿನ ಜನ ಸುಭಿಕ್ಷರನ್ನಾಗಿಸೋದು ಮಾತ್ರವಲ್ಲ ಅವರನ್ನು ಗುಲಾಮಗಿರಿಯ ಸಂಕೋಲೆಗಳಿಂದ ದೂರ ಇಡುವುದೇ ಆಗಿತ್ತು. ಪಟ್ಟ ಭದ್ರ ಮತ್ತು ಪುರೋಹಿತಶಾಹಿ ಶಕ್ತಿಗಳ ಕೈಗಳಿಂದ ಜಮೀನನ್ನು ನಿರ್ಗತಿಕರಿಗೆ, ಬಡವರಿಗೆ ನೀಡಿ ಸಮಾಜಿಕ ಸುಧಾರಣೆಯ ಅಡಿಗಲ್ಲನ್ನು ಹಾಕಿದರು ಟಿಪ್ಪು. ಇದನ್ನೇ ಇಂದಿರಾ ಗಾಂಧೀ ಅನುಕರಿಸಿದ್ದು ಉಳುವವನೇ ಹೊಲದೊಡೆಯ ನೀತಿಯ ಮೂಲಕ. ಬಹುಶಃ ಜಮೀನನ್ನು ಕಸಿದುಕೊಂಡು ಬಡವರಿಗೆ, ನಿರ್ಗತಿಕರಿಗೆ ಟಿಪ್ಪು ಹಂಚಿದ್ದು ನುಂಗಲಾರದ ತುತ್ತಾಗಿರಬಹುದೇ? ಫ್ರಾನ್ಸ್ ದೇಶದಿಂದ ಬಂದ ಯಾತ್ರಿಕರು ಮೈಸೂರು ಸಂಸ್ಥಾನದ ಪ್ರಗತಿ, ಬೆಳವಣಿಗೆ ಕಂಡು ವಿಸ್ಮಿತರಾಗಿದ್ದರು.  

ಟಿಪ್ಪು ಸುಲ್ತಾನರ ವಿರುದ್ಧ ಹೋರಾಡಿದ್ದ ಬ್ರಿಟಿಶ್ ಸೈನಿಕರಾದ ಕಿರ್ಕ್ ಪಾಟ್ರಿಕ್, ವಿಲ್ಕ್ಸ್ ಮುಂತಾದವರು ಯುದ್ಧ ಮುಗಿದ ಕೂಡಲೇ ಇತಿಹಾಸಕಾರರಾಗಿ ತಮಗೆ, ತಮ್ಮ ಸೂರ್ಯ ಮುಳುಗದ ಸಾಮ್ರಾಜ್ಯಕ್ಕೆ ಸಿಂಹ ಸ್ವಪ್ನನಾಗಿದ್ದ ವ್ಯಕ್ತಿಯನ್ನು ತಮಗೆ ತೋಚಿದ ರೀತಿಯಲ್ಲಿ ಬಿಂಬಿಸಿ ಬರೆದರು. ಟಿಪ್ಪುವನ್ನು ಮತಾಂಧ, ಕ್ರೂರ ಎಂದು ಚಿತ್ರೀಕರಿಸಿದರು. ನಮ್ಮ ನೆಲ, ಜಲವನ್ನು, ಖನಿಜ ಸಂಪತ್ತನ್ನು ಡೊಗ್ಗು ಸಲಾಮು ಹಾಕಿ ಬ್ರಿಟಿಷರಿಗೆ ಅರ್ಪಿಸದೆ ಸವಾಲೆಸೆದು, ಅವರನ್ನು ದೇಶದಿಂದ ಹೊರಗಟ್ಟಲು ತೋರಿಸಿದ ಕೆಚ್ಚು ಇವರ ಲೆಕ್ಕಾಚಾರದಲ್ಲಿ ಟಿಪ್ಪು ತೋರಿಸಿದ ಕ್ರೌರ್ಯ.

ನರಬಲಿ, ಮದ್ಯಸೇವನೆ ನಿಷೇಧ, ಗಾಂಜಾ ಕೃಷಿಯ ಮೇಲಿನ ನಿರ್ಬಂಧ, ವೇಶ್ಯಾವಾಟಿಕೆಯ ನಿರ್ಮೂಲನ…..ಮುಂತಾದ ಹಲವಾರು ಸಮಾಜ ಕಲ್ಯಾಣ ಕಾರ್ಯಕ್ರಮಗಳನ್ನು ಹಾಕಿ ಅದನ್ನು ಯಶಸ್ವಿಯಾಗಿ ಕಾರ್ಯರೂಪಕ್ಕೆ ತಂದಿದ್ದರು ಟಿಪ್ಪು. ಊಹಿಸಿ ನೋಡಿ,, ಇಷ್ಟಲ್ಲಾ ಕಾರ್ಯಗಳನ್ನು ಮರಾಠ, ನಿಜಾಮರ ಜೊತೆಗೂಡಿ ನಮ್ಮ ನಾಡನ್ನು ಕಬಳಿಸಲು ಹೊಂಚು ಹಾಕುತ್ತಿದ್ದ ಬ್ರಿಟಿಷರ ಉಪಟಳದ ನಡುವೆ ಟಿಪ್ಪು ಹೇಗೆ ಮಾಡಿರಬಹುದು ಎಂದು. 

ಬ್ರಿಟಿಷರೊಂದಿಗೆ ಕೈ ಜೋಡಿಸಲು ಉತ್ಸುಕರಾಗಿದ್ದ ಜನರ ವಿರುದ್ಧ ಹೋರಾಡಲು ಟಿಪ್ಪು ಹಿಂದೆ ಮುಂದೆ ನೋಡಲಿಲ್ಲ. ಜಾತಿ ಧರ್ಮ ನೋಡಲಿಲ್ಲ. ತನ್ನದೇ ಧರ್ಮೀಯರಾದ ಕೇರಳದ ಮಾಪಿಳ್ಳೆ, ಮತ್ತು ನಿಜಾಮರ ವಿರುದ್ಧವೂ ಟಿಪ್ಪು ಸೆಣಸಿದ್ದರು. ಕರ್ನೂಲಿನ ನಾವಾಬರನ್ನೂ ಬಿಡಲಿಲ್ಲ ಟಿಪ್ಪು. ತಮ್ಮ ಕುತಂತ್ರಗಳಿಂದ ಮರಾಠರು ಮತ್ತು ನಿಜಾಮರ ಸಹಾಯ ಟಿಪ್ಪುವಿಗೆ ಸಿಗದಂತೆ ಮಾಡಿದ ಬ್ರಿಟಿಷರು ದೇಶ ಕಬಳಿಸುವ ತಮ್ಮ ಕೆಲಸ ಸುಗಮವಾಗುವಂತೆ ನೋಡಿಕೊಂಡರು.

ಆತ್ಮಾಭಿಮಾನಿ ಟಿಪ್ಪು ನಾಡಿನೊಳಗಿನ ಜನರ ಸಹಕಾರದ ಕಾರಣ ಬ್ರಿಟಿಶ್ ಶತ್ರು ತನ್ನ ನಾಡನ್ನು ಆಕ್ರಮಿಸುವುದನ್ನ ಕಾಣಲಾರದೆ ದೂರದ ದೇಶಗಳ ಮೊರೆ, ಸಹಕಾರ ಯಾಚಿಸಬೇಕಾಯಿತು. ತುರ್ಕಿ, ಇರಾನ, ಇರಾಕ್, ಇಟಲಿ, ಫ್ರಾನ್ಸ್ ದೇಶಗಳ ಸಹಕಾರ ಬೇಡಿದ ಟಿಪ್ಪುವಿಗೆ ಈ ಸಹಾಯ ಸಿಕ್ಕಿದ್ದರೆ ಭಾರತದ ಚರಿತ್ರೆಯೇ ಬೇರೆಯಾಗುತ್ತಿತ್ತು. ಕೇವಲ ನಾಲ್ಕೈದು ಸಾವಿರ ಫ್ರೆಂಚ್ ಸೈನಿಕರ ಸಹಾಯ ಸಿಕ್ಕಿದ್ದರೂ ಬ್ರಿಟಿಶ್ ಸೂರ್ಯ ನಿರಾಯಾಸವಾಗಿ ಅಸ್ತಂಗತವಾಗಿ ಬಿಡುತ್ತಿತ್ತು. ನಾಲ್ಕನೇ ಮೈಸೂರು ಯುದ್ಧದ ಗತಿಯೇ ಬದಲಾಗುತ್ತಿತ್ತು. ಮಹಾತ್ಮಾ ಗಾಂಧಿ, ಗಡಿನಾಡ ಗಾಂಧಿ ಖಾನ್ ಅಬ್ದುಲ್ ಗಫ್ಫಾರ್ ಖಾನ್ ರಂಥ ಸ್ವಾತಂತ್ರ್ಯ ಹೋರಾಟಗಾರರ ಅವಶ್ಯಕತೆ ಬರುತ್ತಿರಲಿಲ್ಲ ಈ ನಾಡನ್ನು ಗುಲಾಮ ಗಿರಿಯಿಂದ ಮುಕ್ತಗೊಳಿಸಲು.           

ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಟಿಪ್ಪೂ ರೀತಿಯ ಮುಸ್ಲಿಂ ಬಾಂಧವರ ಪಾಲು ಹಿರಿದು. ಬ್ರಿಟಿಷರನ್ನು ನಾಡಿನಿಂದ ಓಡಿಸಲು ರಹಸ್ಯ ರೇಷ್ಮೆ ಪತ್ರ ಗಳ ಮೂಲಕ ಕಾರ್ಯಾಚರಣೆ ಮಾಡಿದ ದೇವೊಬಂದ್ ಮೌಲ್ವಿಗಳ ಬಗ್ಗೆ ನಮ್ಮ ದೇಶದ ಜನರಿಗೆ ಅರಿವಿಲ್ಲ. ಬ್ರಿಟಿಷರನ್ನು ನಾಡಿನಿಂದ ಓಡಿಸಲು ಟಿಪ್ಪೂ ರಂತೆಯೇ ಈ ಮೌಲ್ವಿಗಳೂ ಸಹ ಪರದೇಶಗಳ ಸಹಾಯ ಯಾಚಿಸಿದ್ದರು. ಹಾಗೆಯೇ ಭಾರತದ ತ್ರಿವರ್ಣ ಧ್ವಜವನ್ನು ರಚಿಸಿದ ಮುಸ್ಲಿಂ ಮಹಿಳೆಯ ಪರಿಚಯ ಉಂಟೆ ನಮಗೆ? ಈ ದೇಶದ ಸ್ವಾತಂತ್ರ್ಯಕ್ಕಾಗಿ ಮುಸ್ಲಿಂ ಬಹಳಷ್ಟು ಹೊರಾಡಿದ್ದಾನೆ. ಅವನಿಗೆ ಕೀರುತಿಯ, ಮೂರುತಿಯ ಅವಶ್ಯಕತೆಯೂ ಇಲ್ಲ. ಎಲ್ಲಾದರೂ ಕೇಳಿದ್ದೀರಾ, ಮುಸ್ಲಿಮರು ತಮ್ಮ ಧರ್ಮಕ್ಕೆ ಸೇರಿದ ವೀರರ ಪ್ರತಿಮೆ ಸ್ಥಾಪಿಸಲು ಮಾಡಿದ ಮನವಿ ಬಗ್ಗೆ? ರಸ್ತೆ ಬೀದಿ ಗಳಿಗೆ ನಮ್ಮ ಮಹನೀಯರ ನಾಮಕರಣ ಮಾಡಿ ಎಂದು ಬೇಡಿಕೆ ಇಟ್ಟ ಬಗ್ಗೆ?

ನಾಡಿನ ಇತಿಹಾಸಕಾರೊಂದಿಗೆ, ನಾನೂ ಇತಿಹಾಸ್ಯಕಾರ ಎನ್ನುವ ಭ್ರಮೆಯಲ್ಲಿರುವ ಪತ್ರಕರ್ತರಲ್ಲಿ ನನ್ನ ಮನವಿ. ನಮ್ಮ ಸಂಸ್ಕಾರ, ಹಿಂದೂ ಮತ್ತು ಮುಸ್ಲಿಂ, ಜ್ಞಾನ ಮತ್ತು ಜ್ಞಾನಾರ್ಜನೆಯನ್ನು ಒಂದು ಆರಾಧನೆಯನ್ನಾಗಿ ಪರಿಗಣಿಸುತ್ತವೆ. ಅದೇ ಕಾರಣಕ್ಕಾಗಿ ಸರಸ್ವತೀ ದೇವಿಯನ್ನು ವಿದ್ಯಾ ದೇವಿಯನ್ನಾಗಿ ಕಾಣಲಾಗುತ್ತದೆ.  ನಮ್ಮಲ್ಲಿ ಮನೆ ಮಾಡಿಕೊಂಡ ಪೂರ್ವಾಗ್ರಹ ಪೀಡಿತ ವಿಚಾರಗಳು, ಹಗೆ, ಪ್ರಶಸ್ತಿಗಾಗಿ ರಾಜಕೀಯ ಪಕ್ಷಗಳನ್ನ ಸಂಪ್ರೀತಗೊಳಿಸಲು ಮುಗ್ಧ ಜನರನ್ನು ದಾರಿ ತಪ್ಪಿಸುವ ಕಾರ್ಯ, ಇವು ‘ಸರಸ್ವತೀ ಸಮ್ಮಾನ’ವಲ್ಲ. ಇದು ಸರಸ್ವತೀ ವಂದನೆ ಯಂತೂ ಖಂಡಿತಾ ಅಲ್ಲ. ಸಾವಿರ ಸುಳ್ಳು ಹೇಳಿ ಒಂದು ಮದುವೆ ಮಾಡು ಎನ್ನುವ ನಾಣ್ಣುಡಿ ಯ ಹಿಂದಿನ ಉದ್ದೇಶ ಅರ್ಥ, ಸಂಬಂಧ, ಬಾಂಧವ್ಯ ನಿರ್ಮಿಸಲು ಸುಳ್ಳನ್ನು ಬೇಕಾದರೂ ಹೇಳಬೇಕು ಎಂದು. ಆದರೆ ಸಾವಿರ ಸುಳ್ಳನ್ನು ಹೆಣೆದು ಶಾಂತಿ ಸೌಹಾರ್ದ ಹದಗೆಡಿಸುವ, ದೊಂಬಿ ಎಬ್ಬಿಸುವ ಪರಿಪಾಠ ನಮ್ಮ ಸಂಸ್ಕಾರಕ್ಕೆ ಹೇಳಿಸಿದ್ದಲ್ಲ. ಟಿಪ್ಪುವಿನೊಂದಿಗೆ ಹೋರಾಡಿದ್ದು ಮುಸ್ಲಿಂ ಸೈನಿಕರು ಮಾತ್ರವಲ್ಲ ಅದರಲ್ಲಿ ಬಹುಪಾಲು ಹಿಂದೂಗಳೂ ಇದ್ದರು. ಧರ್ಮಾಂಧತೆಯ ಸೊಂಕಿಲ್ಲದ, ಟಿಪ್ಪುವಿಗೆ ಸ್ವಾಮೀ ನಿಷ್ಠೆ ಪ್ರದರ್ಶಿಸಿದ ಈ ಯೋಧರಿಗೆ ನಾವು ಮಾಡುವ ಅವಮಾನ ಟಿಪ್ಪು ದೇಶ ಭಕ್ತಿಯನ್ನು ಪ್ರಶ್ನಿಸುವುದು.   ದೇಶ ಭಕ್ತ ಯಾವುದೇ ಧರ್ಮೀಯನಾಗಿರಲಿ ಅವನು ಭಾರತೀಯ ಎನ್ನುವುದನ್ನು ಮರೆಯದಿರಿ. ಹಿಂದೂಸ್ಥಾನವು ಎಂದೂ ಕಾಣದ, ಭಾರತ ರತ್ನ ಟಿಪ್ಪು ಮತ್ತು ಅವರಂಥ ಕಲಿಗಳಿಗೆ ಅಪಮಾನ ಎಸಗಬೇಡಿ.

“ಇನ್ನೂರು ವರ್ಷ ಕುರಿಗಳ ಥರ ಬಾಳುವುದಕ್ಕಿಂತ, ಎರಡು ದಿನಗಳ ಹುಲಿಯ ಬದುಕೇ ಶ್ರೇಷ್ಠ”.

ಟಿಪ್ಪೂ ಸುಲ್ತಾನರ ಮೇಲಿನ ನುಡಿಗಳು ನಮ್ಮ ಮನಃಪಟಲದಲ್ಲಿ ಮಾಸದೆ ಇದ್ದಿದ್ದರೆ, ಟಿಪ್ಪುವಿನಂಥ ದೇಶಭಕ್ತರನ್ನು ಆದರಿಸಿದ್ದರೆ  ದೇಶ ಇಂದು ವಿದೇಶೀಗಳ ಹಂಗಿನಲ್ಲಿ ಇರುತ್ತಿರಲಿಲ್ಲ. ಕಾಶ್ಮೀರದ ಒಂದು ತುಣುಕನ್ನು ಕಳೆದು ಕೊಂಡಿದ್ದರಿಂದ ಹಿಡಿದು, ಚೀನಾಕ್ಕೆ ೩೮ ಸಾವಿರ ಚದರ ಕಿಲೋ ಮೀಟರುಗಳ ಪವಿತ್ರ ಸ್ಥಳವನ್ನೂ ಬಿಟ್ಟು ಕೊಟ್ಟು, ಕೊನೆಗೆ ಅಮೆರಿಕೆಯಲ್ಲಿನ ನಮ್ಮ ರಾಜತಂತ್ರಜ್ಞೆ ದೇವಯಾನಿಯ ಮುಖ ಭಂಗದವರೆಗೆ, ನಮಗೆ ಕಾಣಸಿಗುವ ಕಾರಣ ನಮ್ಮಲ್ಲಿನ ಕೆಚ್ಚಿನ ಕೊರತೆ. ಅಭಿಮಾನಶೂನ್ಯತೆ.  

ಸ್ಕಾಟ್ಲೆಂಡ್ ದೇಶದ ಸುಪ್ರಸಿದ್ಧ ಕವಿ ಸರ್. ವಾಲ್ಟರ್ ಸ್ಕಾಟ್, ನೆಪೋಲಿಯನ್ ಬೋನಪಾರ್ಟೆ ಬಗ್ಗೆ ಬರೆಯುತ್ತಾ, ಹೈದರಾಲಿಯಲ್ಲಿ ಕಾಣಲು ಸಿಕ್ಕಿದ್ದ ರಾಜಕೀಯ ದೂರದೃಷ್ಟಿ ಮತ್ತು ವಿಶಾಲ ಮನೋಭಾವ ನೆಪೋಲಿಯನ್ ನಲ್ಲಿ ಇಲ್ಲದಿದ್ದರೂ, ರಣರಂಗದಲ್ಲಿ ಟಿಪ್ಪು ತೋರಿದ್ದ ಛಲ, ಮತ್ತು ಪರಾಕ್ರಮ ಮತ್ತು ಅಂತಿಮ ಹೋರಾಟದಲ್ಲಿ ನಿಜವಾದ ಗಂಡಿನಂತೆ ಕೈಯಲ್ಲಿನ ಖಡ್ಗ ವನ್ನು ಮುಷ್ಟಿಯಲ್ಲೇ ಇರಿಸಿ ಟಿಪ್ಪು ಸಾವನ್ನಪ್ಪಿದ ರೀತಿ ನೆಪೋಲಿಯನ್ ಧೈರ್ಯ ತೋರಿಸಿದ್ದ ಎಂದು ಮುಕ್ತ ಕಂಠ ದಿಂದ ಟಿಪ್ಪುವನ್ನು ಹೊಗಳುತ್ತಾನೆ. ಕನ್ನಡ ನಾಡಿನ ಇತಿಹಾಸಕಾರ ಮಾಡಬೇಕಾದ ಕೆಲಸವನ್ನ ದೂರದ ಸ್ಕಾಟ್ಲೆಂಡಿನ ಮುತ್ಸದ್ದಿಯೊಬ್ಬ ಮಾಡುತ್ತಾನೆ.

ಚಿತ್ರ ಕೃಪೆ: http://www.sacredartindia.com