ಆಧುನಿಕ ಬದುಕಿನ ಹುಚ್ಚು ಓಟ ಕೆಲವೊಮ್ಮೆ ನಿಜವಾದ ಅರ್ಥವನ್ನು ಕಂಡುಕೊಳ್ಳುವುದಕ್ಕೆ ಆಸ್ಪದ ನೀಡುವುದಿಲ್ಲ. ಹೇಗೆ ಸಾಧ್ಯ ಹೇಳಿ, ಸಮಯವೇ ಸಿಗುವುದಿಲ್ಲವಲ್ಲ. ಎಷ್ಟೋ ಸಲ ಸಮಯ ಬರೀ ಮನೆಯಿಂದ ಕೆಲಸಕ್ಕೆ, ಕೆಲಸದಿಂದ ಮನೆಗೆ ಮರುಳುವುದರಲ್ಲೇ ಕಳೆದುಹೋಗುತ್ತದೆ. ಈ ಜಂಜಾಟದಲ್ಲಿ ನಮ್ಮ ಗುರಿಗಳು ನಮ್ಮ ಕಣ್ಣಿಂದ ಮರೆಯಾಗಿ ಗೋಲ್ ಪೋಸ್ಟ್ ಇಲ್ಲದ ಮೈದನಾದಲ್ಲಿ ದಿಕ್ಕೆಟ್ಟ ಚೆಂಡು ಅಲೆಯುವಂತೆ ನಮ್ಮ ಗುರಿಗಳು ಸಾಕಾರ ಕಾಣದೆ ಹೋಗುತ್ತವೆ. ಹಾಗಾದರೆ ಇದಕ್ಕೆ ಪರಿಹಾರ ಇಲ್ಲವೇ? ಇದೆ, ಖಂಡಿತ ಇದೆ ಪರಿಹಾರ. ನನ್ನದಲ್ ಎಂದು ಸ್ವಲ್ಪ ಸಮಯ ಬದಿಗಿಟ್ಟು ನಮ್ಮ ದಿನಚರಿಯ “stock taking” ತೆಗೆದುಕೊಳ್ಳುವುದು. marcandangel ವೆಬ್ ತಾಣದಲ್ಲಿ ೨೦ ಪ್ರಶ್ನೆಗಳಿವೆ ಪ್ರತಿ ಭಾನುವಾರ ಉತ್ತರಿಸಲು. ನಮಗೆ ತೋಚಿದ್ದನ್ನು ಆರಿಸಿಕೊಂಡು, ಬೇಕಿದ್ದರೆ ಮತ್ತಷ್ಟನ್ನು ಸೇರಿಸಿಕೊಂಡು ಉತ್ತರಿಸುವ, ಮತ್ತು ಪ್ರಶ್ನೆಗಳನ್ನು ಕಾರ್ಯರೂಪಕ್ಕೆ ತರುವ ಪ್ರಯತ್ನ ಮಾಡಿದರೆ ಖಾಸಗಿ ಮತ್ತು ವ್ರುತ್ತಿಮಯ ಜೀವನದಲ್ಲಿ ಯಶಸ್ಸನ್ನು ಕಾಣಬಹುದು. ೧. ಕಳೆದ ವಾರದಲ್ಲಿ ನಾನು ಕಲಿತದ್ದೇನು? ಕ್ಲಿಷ್ಟಕರವಾದರೂ ಇದು ನಿಮ್ಮ ಪ್ರಶ್ನೆಯೇ ಆದ್ದರಿಂದ ಮುಜುಗುರ ಬೇಡ. ೨. ಕಳೆದ ವಾರದ ನನ್ನ ಸಾಧನೆ. ಹಿಮಾಲಯ ಹತ್ತಿರಬೇಕೆನ್ದೇನೂ ಇಲ್ಲ. ಎಂಥ ಚಿಕ್ಕ ಸಾಧನೆಯೂ ಸಾಧನೆಯೇ. ೩. ನಿಮ್ಮ ಅವಿಸ್ಮರಣೀಯ ದಿನ. ಏನಿರಬಹುದು, ಯೋಚಿಸಿ. ಒಂದಲ್ಲ ಒಂದು ಖಂಡಿತ ಇದ್ದೆ ಇರುತ್ತದೆ. ೪. ಯಾರಿಗಾದರೂ ಸಹಾಯ ಮಾಡಿದ್ದೆನೆಯೇ? ೫. ಮುಂದಿನ ಮೂರು ವರ್ಷಗಳಿಗೆ ನನ್ನ ಗುರಿಗಳೇನು? ಹೊಸ ಪದವಿ, MBA? ೬. ನನ್ನ ಭಯ, ಅಡಚಣೆಗಳೇನು? ೭. ನನ್ನ ಬದುಕು ಇನ್ನು ಒಂದೇ ವಾರದಲ್ಲಿ ಮುಗಿಯುವುದಿದ್ದರೆ ನಾನೇನು ಮಾಡಬಲ್ಲೆ? ಹೀಗೆ ಹತ್ತು ಹಲವು ಪ್ರಶ್ನೆಗಳನ್ನು ಕೇಳಿ, ಪ್ರಾಮಾಣಿಕವಾಗಿ ಉತ್ತರಿಸಿ. ಈ ಉತ್ತರ ಅಥವಾ ಪ್ರಶ್ನೆಗಳನ್ನು ನಿಮ್ಮ ಅತ್ತೆ ಅಥವಾ ಮಡದಿ (ಕುಹಕದ ಭಯವಿದ್ದರೆ ) ಕಾಣುವಂತೆ ಇಡುವ ಅಗತ್ಯವಿಲ್ಲ. ನೆನಪಿಡಿ, ಸಾಧಿಸಲು MBA ಆಗಿರಬಹುದು, ಕಂಪ್ಯೂಟರ್ ಕಲಿಯುವುದೇ ಆಗಿರಬಹುದು ಮನಸ್ಸಿದ್ದರೆ ಖಂಡಿತ ಇದೆ ಮಾರ್ಗ.
ಲೇಖಕ: bhadravathi
MARSHAL LAW IN KANPUR
ರಾಜನ್ ಬಾಲ ಅವರ ಅಕಾಲಿಕ ಮರಣ ಕ್ರಿಕೆಟ್ ಪ್ರೇಮಿಗಳಿಗೆ ದುಃಖಕರ ಸುದ್ದಿ. ಕ್ರಿಕೆಟ್ನಷ್ಟೇ ಮನೋಹರ ಅವರ ವರ್ಣನಾ ಶೈಲಿ. ಡೆಕ್ಕನ್ ಹೆರಾಲ್ಡ್ ಪತ್ರಿಕೆಗೆ ಬರೆಯುತ್ತಿದ್ದ ಅವರು ಕ್ರಿಕೆಟ್ ಆಟವನ್ನು ಮನೋಜ್ಞವಾಗಿ ವರ್ಣಿಸಿ ನಮ್ಮನ್ನು ರಂಜಿಸುತ್ತಿದ್ದರು. ಭಾರತ ೧೯೮೩ ರ prudential world cup ಗೆದ್ದ ಹೊಸತು. ಕ್ರಿಕೆಟ್ ವಿಶ್ವವೇ ದಿಗ್ಭ್ರಾಂತವಾಗಿಸಿದ ಗೆಲುವು ಭಾರತದ್ದು. ಫೈನಲ್ ಪಂದ್ಯದಲ್ಲಿ ಬಲಿಷ್ಟ ವೆಸ್ಟ್ ಇಂಡೀಸ್ ತಂಡವನ್ನು ೪೩ ರನ್ನುಗಳಿಂದ ಸೋಲಿಸಿದ ಭಾರತ ಹೊಸ world champion. ಈ ಸೋಲಿನಿಂದ ಕಂಗೆಟ್ಟ ವೆಸ್ಟ್ ಇಂಡೀಸ್ ಭಾರತಕ್ಕೆ ತಕ್ಕ ಪಾಠ ಕಲಿಸಲು ಭಾರತ ಪ್ರಯಾಣ ಮಾಡಿ ೬ ಟೆಸ್ಟ್ ಮತ್ತು ೬ ಏಕ ದಿನ ಪಂದ್ಯಗಳಲ್ಲಿ ಭಾರತವನ್ನು ಹಿಗ್ಗಾ ಮುಗ್ಗಾ ಬಡಿದು ತೃಪ್ತಿ ಪಟ್ಟುಕೊಂಡಿತು. ಈ ಸರಣಿಯ ಪ್ರಥಮ ಟೆಸ್ಟ್ ಪಂದ್ಯ ಕಾನ್ಪುರದಲ್ಲಿ. ವೆಸ್ಟ್ ಇಂಡೀಸ್ ನ ಮಾರಕ ವೇಗಿ ಮಾಲ್ಕಂ ಮಾರ್ಷಲ್ ಚೊಚ್ಚಲ ಓವರಿನ ೨ ಚೆಂಡುಗಳಲ್ಲಿ ಭಾರತದ ದಾಂಡಿಗರನ್ನು ಉರುಳಿಸಿ ಭಾರತ ಚೇತರಿಸಿಕೊಳ್ಳದಂತೆ ಮಾಡಿದರು. ದಿನದ ಆಟ ಮುಗಿದಾಗ ಭಾರತದ ಸ್ಥಿತಿ ಶೋಚನೀಯ. ಮಾರನೆ ದಿನ ಡೆಕ್ಕನ್ ಹೆರಾಲ್ಡ್ ಪತ್ರಿಕೆಯಲ್ಲಿ ರಾಜನ್ ಬಾಲ ಮಾರ್ಷಲ್ ಅವರ ಬೌಲಿಂಗ್ ಬಣ್ಣಿಸಿದ್ದು ಹೀಗೆ:
MARSHAL LAW IN KANPUR
ಈ ವರದಿ ಬರೆದು ೨೬ ವರ್ಷಗಳು ಸಂದರೂ ರಾಜನ್ ಬಾಲ ಎಂದ ಕೂಡಲೇ MARSHAL LAW ನೆನಪಾಗುತ್ತದೆ.
ಗೋರಿಬರಹ
ಜೇಡ ಹೇಳಿಕೊಳ್ಳುವಂಥ ರೂಪವಂತನಲ್ಲದಿದ್ದರೂ ಅವನ (ಅವಳ?) ತಾಣಗಳು (website) “amazing” ಎಂದು ಕರೆಸಿಕೊಳ್ಳುವಷ್ಟು ವಿಸ್ಮಯಕಾರಕ. ಕನ್ನಡ ಭಾಷೆ ಸಂಸ್ಕೃತಿಯ ಸೇವೆಯಲ್ಲಿ ಒಂದೆರಡು ವೆಬ್ತಾಣಗಳು ಮನ ಸೆಳೆದಿದ್ದವು. ಅವುಗಳಲ್ಲಿ ಒಂದು (ಕೆಂಡಸಂಪಿಗೆ) ಮುದುಡಿಕೊಂಡಿತು ಮತ್ತೊಂದು (ಸಂಪದ) ತನ್ನ ಮನೆ ರಿಪೇರಿಗೆ ಎಂದು ಚಾಲ್ತಿಯಲ್ಲಿ ಇಲ್ಲ. ನಮ್ಮ ಭಾಷೆಯ ಬಗ್ಗೆ ನಮಗಿರುವ ಕಾಳಜಿ ಅಭಿಮಾನ ಇವುಗಳ ಕೊರತೆ ಕಾರಣವಿರಬಹುದೆ ಈ ತಾಣಗಳು ಎಡರು ತೊಡರುಗಳನ್ನು ಅನುಭವಿಸಲು ತೊಡಗಿದ್ದು? ಕೆಂಡಸಂಪಿಗೆ ಲಭ್ಯವಿಲ್ಲದ್ದಕ್ಕೆ ಯಾವುದೇ ಕಾರಣಗಳನ್ನು ಕೊಡಲಾಗಿಲ್ಲ. ಶುರುವಾದ ಒಂದೆರಡು ವರ್ಷಗಳಲ್ಲೇ ಈ ಉತ್ಸಾಹಿ ಸಾಹಿತ್ಯ ಪ್ರೇಮಿಗಳ ಯತ್ನದಿಂದ ಆರಂಭವಾದ ತಾಣಗಳು ಮುಚ್ಚಿ ಹೋದರೆ ಅತ್ಯಂತ ಖೇದಕರ ವಿದ್ಯಮಾನ ಎನ್ನಬಹುದು. ಇಷ್ಟೊಂದು ಸಮೃದ್ಧ ಭಾಷೆ ಕನ್ನಡ ಮತ್ತಷ್ಟು ಶ್ರೀಮಂತಗೊಂಡು ರಾರಾಜಿಸಲು ಮತ್ತು ಹೊಸ ತಲೆಮಾರಿನ net savvy ಸಮೂಹ ಸಾಹಿತ್ಯಾಭಿರುಚಿ ಬೆಳೆಸಿಕೊಂಡು ತಾವೂ ಬೆಳೆಯುವ ಹಾಗೆ ಮಾಡುವತ್ತ ಸಹಕರಿಸುತ್ತಿದ್ದ ವೆಬ್ತಾಣಗಳು epitaph (ಗೋರಿಬರಹ) ಬರಹ ಹೊತ್ತು ನಮ್ಮೆಡೆಯಿಂದ ಕಣ್ಮರೆಯಾಗಬಾರದು.
ವೈ ಎಸ್ಸ್ ಆರ್ – ಒಂದು ಬ್ಲಾಗಾಂಜಲಿ
ನಿಸರ್ಗದ ವೈಪರೀತ್ಯಕ್ಕೋ ಅಥವಾ ಬೇರಾವುದಾದರೂ ನಿಗೂಢ ಕಾರಣಗಳಿಗೋ ಹೆಲಿಕಾಪ್ಟರ್ ಅಪಘಾತದಲ್ಲಿ ಮೃತಪಟ್ಟ ಆಂಧ್ರದ ಜನನಾಯಕ, ಜನಪ್ರಿಯ ಮುಖ್ಯಮಂತ್ರಿ Y.S. ರಾಜಶೇಖರ ರೆಡ್ಡಿಯವರ ಅಕಾಲಿಕ ಮರಣ ಆಂಧ್ರಕ್ಕೆ ಮಾತ್ರವಲ್ಲ ದೇಶಕ್ಕೆ ಒಂದು ದೊಡ್ಡ ಆಘಾತ ಮತ್ತು ನಷ್ಟ. ಯಾರೇ ಸಾವನ್ನಪ್ಪಿದರೂ ತುಂಬಲಾರದ ನಷ್ಟ ಎಂದು ಅನುಕಂಪದ ಮಾತು ಹೇಳುವುದಿದೆ . ಆದರೆ ಈ ಮಾತು ವೈ ಎಸ್ಸ್ ಆರ್ ಅವರಿಗೆ ಅನ್ವಯಿಸುವುದಿಲ್ಲ. ಕಳೆದ ಆರು ವರ್ಷಗಳಲ್ಲಿ ಅವರು ರಾಜ್ಯಕ್ಕೆ ನೀಡಿದ ಕೊಡುಗೆ ಅಪಾರ. ಬಡತನವನ್ನು, ನಿಸ್ಸಹಾಯಕತೆಯನ್ನು ಇವೆಲ್ಲಕ್ಕೂ ಕಾರಣವಾಗುವ ಅಧಿಕಾರಶಾಹಿಯ ಮೊಂಡುತನವನ್ನು ಕಣ್ಣಾರೆ ಕಂಡು ಪರಿಹಾರ ಕಂಡುಕೊಳ್ಳಲು ಸ್ವತಃ ಪ್ರಯಾಣಿಸಿ ಪ್ರಯತ್ನಿಸುವ ರಾಜಕಾರಣಿಗಳು ವಿರಳ. ಕೇವಲ ಇವರ ವರ್ಚಸ್ಸಿನ್ನಿದಲೇ ಆಂಧ್ರ ರಾಜ್ಯವನ್ನು ಕಾಂಗ್ರೆಸ್ ತೆಕ್ಕೆಗೆ ಬೀಳಿಸಿಕೊಂಡ ಈ ಜನನಾಯಕ ಕೇಂದ್ರದ ಕಾಂಗ್ರೆಸ್ ನಾಯಕರುಗಳ ಮದ್ಧ್ಯೆ ಕಂಗೊಳಿಸುತ್ತಿದ್ದರು. ಹಿಂದಿನ ಮುಖ್ಯಮಂತ್ರಿ ಚಂದ್ರಬಾಬು ನಾಯುಡು ಬಿಲ್ ಗೇಟ್ಸ್ ಮುಂತಾದ ಸೊಫ್ಟ್ವೇರ್ ಜನರ ಹಿಂದೆ ಅಲೆದು ಕೇವಲ ಹೈದರಾಬಾದ್ ನಗರವನ್ನು ( ನಮ್ಮ S.M. Krishna ಬೆಂಗಳೂರಿಗೆ ಇದ್ದ ಹಾಗೆ ) ಉದ್ಧಾರ ಮಾಡಿ ರೈತರ ಬಡ ಬಗ್ಗರ ಕಷ್ಟದ ಕಡೆ ಕಿವುಡುತನ ಪ್ರದರ್ಶಿಸಿದರೆ YSR ಹಳ್ಳಿ ಗ್ರಾಮಗಳ ಕಡೆ ದೃಷ್ಟಿ ಹರಿಸಿ ಜನ ಮೆಚ್ಚ್ಚುಗೆ ಸಾಧಿಸಿದರು. ಹೈದರಾಬಾದ್ನ ನೀರಿನ ಕಾರಂಜಿ ಚಿಲುಮೆಗಳನ್ನು, ರೈತರು ಹನಿ ಹನಿ ನೀರಿಗಾಗಿ ಪರಿತಪಿಸುವುದನ್ನು ಹೋಲಿಸಿ ಚುನಾವಣೆ ಗೆದ್ದು ತಾನು ಜನನಾಡಿ ಬಲ್ಲ ರಾಜಕಾರಣಿ ಎಂದು ದೇಶಕ್ಕೆ ತೋರಿಸಿದರು.
ಆದರೆ ವಿಧಿಯ ಆಟವೇ ಹೀಗೆ. ಜನಸೇವೆ ಮಾಡಿ ಲಕ್ಷಗಟ್ಟಲೆ ಜನರ ಮುಖದ ಮೇಲೆ ಮಂದಹಾಸ ತರಿಸುವ ರಾಜಕಾರಣಿಗಳು ಇಂಥ ಅವಘಡದಲ್ಲಿ ಸಾವನ್ನಪ್ಪಿದರೆ ಹೊಡಿ ಬಡಿ ಕಡಿ ಎಂದು ರಕ್ತಪಾತವೇ ನಮ್ಮ ಧರ್ಮ ಎಂದು ಸಮಾಜವನ್ನು ಒಡೆದು ಆಳುವ ರಾಜಕಾರಣಿಗಳು ದೀರ್ಘಾಯುಷಿಗಳಾಗಿ ಭೂಮಿಗೆ ಭಾರವಾಗಿ ಮೆರೆಯುತ್ತಾರೆ.
ಮಣ್ಣಿನ ಮಗ ರಾಜಶೇಖರ ರೆಡ್ಡಿಯವರಿಗೆ ಅಂತಿಮ ವಿದಾಯ ಹೇಳುತ್ತಾ…
ಶುದ್ಧತೆಗೇಕೆ ಅಸಡ್ಡೆ?
ಶುಚಿತ್ವಕ್ಕೂ ಭಾರತೀಯರಿಗೂ ಇರುವ ಸಂಬಂಧ ಅಷ್ಟಕ್ಕಷ್ಟೇ. ಒಂದು ದೇಶ ಎಷ್ಟು ಶುಚಿ ಎಂದು ನೋಡಬೇಕಾದರೆ ದೊಡ್ಡ ಸಂಶೋಧನೆಯನ್ನು ಕೈಗೊಳ್ಳುವ ಅಗತ್ಯವಿಲ್ಲ; ಆ ದೇಶದ ಹಣ, (ನಮ್ಮ ನೋಟುಗಳನ್ನು ನೋಡಿದ್ದೀರ? ಎಹ್ಸ್ತು ಕೊಳಕಾಗಿವೆ ಎಂದರೆ ಅವನ್ನು ಮುಟ್ಟಿದ ನಂತರ ಸಾಧಾರಣ ಸಾಬೂನಿನಿಂದಲೂ ಶುಚಿತ್ವ ಸಾಧಿಸಲು ಸಾಧ್ಯವಿಲ್ಲ. ಪ್ರಪಂಚದಲ್ಲಿರುವ ಎಲ್ಲ ರೀತಿಯ ರೋಗಾಣುಗಳು ನಮ್ಮ ನೋಟುಗಳ ಮೇಲಿರುತ್ತವೆ.) ಮತ್ತು ಅಲ್ಲಿನ ರಸ್ತೆ ಬೀದಿಗಳು ಸಾಕು ಎಷ್ಟು ಶುಚಿ ಆ ದೇಶ ಎಂದು ಸಾರಲು. ಶ್ರದ್ಧೆಯಿಂದ ಜನರನ್ನು ಸಾರ್ವಜನಿಕ ಸ್ಥಳಗಳಲ್ಲಿ ಗಮನಿಸಿ. ಒಬ್ಬ ಮೂಗು ತುರಿಸುವುದೋ ಅಥವಾ ಮೂಗಿನೊಳಕ್ಕೆ ಸಾಕಷ್ಟು ಆಳವಾಗಿ ಬೆರಳನ್ನು ತೂರಿಸಿ theory of relativity ಬಗ್ಗೆ ಚಿಂತಿಸುತ್ತಿದ್ದರೆ ಮತ್ತೊಬ್ಬ ತನ್ನ ಕುಂಡೆ ತುರಿಸಿಕೊಳ್ಳುತ್ತಿರುತ್ತಾನೆ.
ಐಶ್ವರ್ಯ ರೈ ಮದುವೆಗೆಂದು ಉತ್ತರಪ್ರದೇಶದ ಊರೊಂದರಲ್ಲಿ ಭಾರೀ ಪ್ರಮಾಣದಲ್ಲಿ ಲಡ್ಡು ತಯಾರಿ ಮಾಡುತ್ತಿದ್ದರು. ಅದರಲ್ಲಿ ಲಾಡೂ ಅಥವಾ ಲಡ್ಡು ಮಾಡುತ್ತಿದ್ದವ ತನ್ನ ‘ ಎಡಗೈಯ್ಯಿಂದ ‘ ಅತ್ಯಂತ ಉತ್ಸಾಹದಿಂದ ಕ್ಯಾಮೆರಾದ ಕಣ್ಣಿಗೆ ಚೆನ್ನಾಗಿ ಕಾಣುವಂತೆ ಉಂಡೆ ಮಾಡುತ್ತಿದ್ದದ್ದು ನೋಡಿ ಎರಡು ದಿನ ಊಟ ಮಾಡಲಾಗಲಿಲ್ಲ ಮಾತ್ರವಲ್ಲ ಎಂದಾದರೂ ಒಂದು ದಿನ ನಾಲಗೆ ಚಪಲಕ್ಕೆ ಬಿದ್ದು ಲಡ್ಡು ತಿನ್ನುವ ಆಸೆಯೂ ಅಂದೇ ಹಾರಿ ಹೋಯಿತು.
ಶುಚಿತ್ವ ಕಾಪಾಡಲು ಹಣ ಸಂಪತ್ತೇನೂ ಖರ್ಚಾಗುವುದಿಲ್ಲ. ಅದೊಂದು simple, natural trait. ಮನೆಗಳಲ್ಲೇ ಅದರ ತರಬೇತಿ ಸಿಗದೇ ಇದ್ದಾರೆ ಬೀದಿಯಲ್ಲಿ sikkeete? ಸುಮ್ಮ ಸುಮ್ಮನೆ ಹೋಗುವಾಗ ರಸ್ತೆ ಮೇಲೆ ಉಗುಳುವುದು, ಮಾತನಾಡುವಾಗ ಕೆರೆದುಕೂಳುವುದು ರಕ್ತಗತವಾಗಿಬಿಟ್ಟಿದೆ ಜನರಲ್ಲಿ. ನಮ್ಮ ಶುಚಿತ್ವದ ಪರಿ ನೋಡಿ ಪಾಶ್ಚಾತ್ಯರು ಅತಿ ಕಟ್ಟೆಚ್ಚರದಿಂದ ನಮ್ಮ ದೇಶದ ಪ್ರವಾಸ ಕೈಗೊಳ್ಳುತ್ತಾರೆ. ಸ್ವಲ್ಪ ಆಹಾರದಲ್ಲಿ ಎಡವಟ್ಟಾಗಿ ಒಂದು ಸಲಕ್ಕಿಂತ ಹೆಚ್ಚು ಶೌಚಾಲಯದ ಭೇಟಿ ಆದರಂತೂ ಅದಕ್ಕೆ delhi belly ಎಂದು ಹೇಳಿ ಲೇವಡಿ ಮಾಡುತ್ತಾರೆ. ಇದ್ದಕ್ಕಿದ್ದಂತೆ ಈ ಅಸಹ್ಯ ಹುಟ್ಟಿಸುವ ಚಟ ಅಥವಾ ನಡವಳಿಕೆ ಬಗ್ಗೆ ಬರೆದದ್ದೇಕೆಂದರೆ ಇಂದಿನ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯಲ್ಲಿ ಒಂದು ವರದಿ ಪ್ರಕಟವಾಯಿತು. Only 44% Indians have clean hands ಶೀರ್ಷಿಕೆಯಡಿ ಯಾವಯಾವ ದೇಶದ ಜನ ಎಷ್ಟು ಶುಚಿತ್ವ ಉಳ್ಳವರು ಎಂದು ಪ್ರಕಟವಾಗಿತ್ತು. ಡೆಟ್ಟಾಲ್ ಸಂಸ್ಥೆ ಈ ಸಮೀಕ್ಷೆ ನಡೆಸಿ ನಮ್ಮ ಮಾನ ಮಾರುಕಟ್ಟೆಯಲ್ಲಿ ಹರಾಜಿಗೆ ಹಾಕಿತು. ಶೌಚಾಲಯಕ್ಕೆ ಹೋದ ನಂತರ ಕೇವಲ ೨೭ % ಭಾರತೀಯರು ಕೈ ತೊಳೆಯುತ್ತಾರಂತೆ. ಕೈ ಶುದ್ಧವಾಗಿಟ್ಟುಕೊಳ್ಳುವುದು ಆರೋಗ್ಯಕರ ಎಂದು ಶೇಕಡಾ ೯೦ ಕೆನಡಾ ದೇಶದವರು ನಂಬಿದರೆ ಶೇಕಡಾ ೪೪ ಭಾರತೀಯರು ಇದಕ್ಕೆ ಹೂಂಗುಟ್ಟಿದರು.
ಮೂತ್ರ ವಿಸರ್ಜನೆ ಮಾಡಿ ಎಷ್ಟು ಜನ ಜನನಾಂಗವನ್ನು ಶುದ್ಧಿ ಮಾಡಿಕೊಳ್ಳುತ್ತಾರೆ ಎಂದು dettol ಸಂಸ್ಥೆ ನಮ್ಮನ್ನು ಕೇಳಿದ್ದಿದ್ದರೆ ದೊಡ್ಡ ಅನಾಹುತವೇ ಆಗುತ್ತಿತ್ತೇನೋ?
get a haircut and get a real job
get a haircut and get a real job ಎನ್ನೋ ಒಂದು ಆಂಗ್ಲ ಹಾಡನ್ನು ಕೇಳಿರಬಹುದು. ಹರಿಯಾಣದ ಹಳ್ಳಿಯೊಂದರಲ್ಲಿ ಒಬ್ಬ ವ್ಯಕ್ತಿಯನ್ನು ಹಿಡಿದು ತಲೆಬೋಳಿಸಿದರು. ಕೆಲಸಕಾಗಿ ಅಲ್ಲ, ಮಾಡಬೇಕಾದ ಕೆಲಸವನ್ನು ಸರಿಯಾಗಿ ಮಾಡಲಿಲ್ಲ ಎಂದು. ಒಬ್ಬನಿಗೆ ಅಂದರೆ ಉಚ್ಚ ಜಾತಿಗೆ ಸೇರಿದ ವ್ಯಕ್ತಿಗೆ ನಂಬರ್ ತಪ್ಪಿ ಒಬ್ಬ ದಲಿತ ಫೋನ್ ಮಾಡಿದ್ದಕ್ಕೆ ಅವನನ್ನು ಮಾರನೆ ದಿನ ಹಿಡಿದು ತಲೆಬೋಳಿಸಿ ಒದ್ದು ಬುದ್ಧಿ ಕಲಿಸಲಾಯಿತು. ತಪ್ಪು ಅರಿತ ನಂತರ ಈ ದಲಿತ ಎಷ್ಟೇ ಕ್ಷಮೆ ಕೇಳಿದರೂ ಕೇಳಲೊಲ್ಲದ ಸವರ್ಣೀಯರು ಅವನ ತಲೆ ಬೋಳಿಸಿ, ಚೆನ್ನಾಗಿ ಥಳಿಸಿ ಮೋಟರ್ ಸೈಕಲಿಗೆ ಅವನನ್ನು ಕಟ್ಟಿ ಮೆರವಣಿಗೆ ಮಾಡಿ ಪೊಲೀಸರಿಗೆ ಸುದ್ದಿ ಮುಟ್ಟಿಸದಂತೆ ತಾಕೀತು ಮಾಡಿ ಕಳಿಸಿದರು.
ಇತ್ತೀಚಿಗೆ ತಮಿಳು ನಾಡಿನಲ್ಲಿ ದಲಿತನೊಬ್ಬ ತನ್ನದೇ ಸೈಕಲನ್ನು ಓಡಿಸಿದ್ದಕ್ಕೆ ಚೆನ್ನಾಗಿ ಗೂಸಾ ತಿಂದ ಸವರ್ಣೀಯರಿಂದ.
ದಲಿತ ಗರ್ಭಿಣಿ ಮಹಿಳೆ ಆಸ್ಪತ್ರೆಯಲ್ಲಿ ವೈದ್ಯರ ನಿರಾಕರಣೆಯಿಂದ ರಸ್ತೆಯಲ್ಲಿ ಮಗುವಿಗೆ ಜನ್ಮ ನೀಡಿದಳು. ಈಗ ಯಾವ ಮುಖ ಇಟ್ಟುಕೊಂಡು ನಮ್ಮ ಸಂಸ್ಕೃತಿಯ ಬಗ್ಗೆ ಪಾಶ್ಚಾತ್ಯರಿಗೆ ಪಾಠ ಹೇಳುವುದೋ ಏನೋ?
ಎರ್ರಾಬಿರ್ರಿ GDP ಗ್ರೋತು, ಸಾಫ್ಟ್ ವೇರ್ ಲೀಡರ್ರು, ಒಂದಿಷ್ಟು ಫ್ಲೈ ಓವರ್ರು ಸಾಕೆ ನಾವು ಮುಂದುವರಿದು ಅಮೇರಿಕೆಗೆ ಭುಜಕ್ಕೆ ಭುಜ ಕೊಟ್ಟು ನಿಲ್ಲುವಂತಾಗಿದ್ದೇವೆ ಎಂದು ಕೊಚ್ಚಿಕೊಳ್ಳಲು? ಎಲ್ಲಿಯವರೆಗೆ ಜಾತಿ ಪಾತಿ, ಹಣ ಅಂತಸ್ತನ್ನು ಮೀರಿ ಮಾನವೀಯತೆ ಮೆರೆಯುವುದಿಲ್ಲವೋ ಅಲ್ಲಿಯವರೆಗೆ ಒಂದು ರಾಷ್ಟ್ರ ತಾನು ಪ್ರಗತಿ ಕಡೆ ದಾಪುಗಾಲು ಹಾಕುತ್ತಿದ್ದೇನೆ ಎಂದು ಹೇಳಿಕೊಳ್ಳುವ ಅರ್ಹತೆ ಕಳೆದುಕೊಳ್ಳುತ್ತದೆ.
ಇನ್ನಾದರೂ ಜೀವನದಲ್ಲಿ ಹಿಂದೆ ಬನ್ನಿ..
ಇನ್ನಾದರೂ ಜೀವನದಲ್ಲಿ ಹಿಂದೆ ಬನ್ನಿ ಹಾಡಿನಲ್ಲಿ ಮುಂದೆ ಬರುವ ಹುರುಪು ಇರಬಹುದು ಆದರೆ ನಿಜ ಜೀವನದಲ್ಲಿ ಕೆಲವೊಮ್ಮೆ ಹಿಂದೆ ಹೋಗುವ ಅವಶ್ಯಕತೆ ಬರುತ್ತದೆ. ಆಂಗ್ಲ ಭಾಷೆಯಲ್ಲಿ back to basics ಎನ್ನುತ್ತಾರೆ. ನೈತಿಕವಾಗಿ ಅಧಃಪತನದ ಹಾದಿ ಹಿಡಿದಾಗ ಹೇಳುವುದಿದೆ ಕಾಲ ಕೆಟ್ಟು ಹೋಯಿತು, now is time to look back ಅಂತ. ಕಾಲ ಎಂದಿಗೂ ಕೆಡುವುದಿಲ್ಲ, ಕಾಲವನ್ನು ಕೆಡಿಸುವವರು ನಾವು. ಇಷ್ಟೆಲ್ಲಾ ಹೇಳಲು ಕಾರಣ ಆಧುನಿಕ ಬದುಕಿನ ನೂರಾರು ಆವಿಷ್ಕಾರಗಳಲ್ಲಿ ಒಂದಾದ ಪ್ಲಾಸ್ಟಿಕ್ ಹೇಗೆ ನಮ್ಮ ಭೂಮಿಯ ಮೇಲಿನ ಬದುಕನ್ನು ದುಸ್ತರಗೊಳಿಸುತ್ತದೆ ಮತ್ತು ಅದನ್ನು ನಿಗ್ರಹಿಸಲು ನಾವೆಷ್ಟು ಶ್ರಮ ಪಡುತ್ತಿದ್ದೇವೆ ಎನ್ನುವುದರತ್ತ ಒಂದು ನೋಟ ಹರಿಸೋಣ. ಮಾರುಕಟ್ಟೆಗೆ ಕರಿಬೇವು ತರಲು ಹೋದರೆ ಕೂಡಲೇ ಅದನ್ನು ಪ್ಲಾಸ್ಟಿಕ್ ಚೀಲದಲ್ಲಿ ಹಾಕಿ ಕೊಡುತ್ತಾನೆ ಅಂಗಡಿಯವ. ಕಾಲವೊಂದಿತ್ತು ಬಟ್ಟೆ ಚೀಲವನ್ನು ಶಾಪಿಂಗ್ ವೇಳೆ ಕೊಂಡುಹೋಗುವುದು. ಈಗ ಅದು outdated ಮತ್ತು out of sync. ಕಾಲದೊಂದಿಗೆ ಹೆಜ್ಜೆ ಹಾಕಲು ಬರದವ ಎಂದು ಕನಿಕರದ ನೋಟ ಎದುರಾಗುತ್ತದೆ. ಪ್ಲಾಸ್ಟಿಕ್ ಅಥವಾ ಪಾಲಿಥಿನ್ ಚೀಲದ ಉಪಯೋಗದಿಂದ ಆಗುವ ಅನಾಹುತ ಕೇಳಿಯೇ ಇದ್ದೇವೆ. ಕೆಲ ವರ್ಷಗಳ ಹಿಂದೆ ಮುಂಬೈ ಮಹಾ ನಗರದ ಚರಂಡಿಗಳು ಪಾಲಿಥಿನ್ ಚೀಲಗಳಿಂದ ತುಂಬಿ ಮಳೆ ನೀರು ಹರಿದು ಹೋಗಲು ಸ್ಥಳ ಇಲ್ಲದೆ ಪ್ರವಾಹದ ಪರಿಸ್ಥಿತಿ ನಿರ್ಮಿತವಾಗಿತ್ತು. ಇಂಥ ಘಟನೆಗಳಿಂದ ಬುದ್ಧಿ ಕಲಿಯುವ ಇರಾದೆ ಮತ್ತು ಸಮಯ ನಮಗಿಲ್ಲದಿದ್ದರೂ ಪಕ್ಕದ ಚೀನಾ ದೇಶ ಮಾತ್ರ ದೊಡ್ಡ ಅನಾಹುತ ಎರಗುವ ಮೊದಲೇ ಎಚ್ಚತ್ತುಕೊಳ್ಳುವ ಸಿದ್ಧತೆ ಮಾಡಿದೆ. ಆರ್ಥಿಕವಾಗಿ ಅತಿ ವೇಗವಾಗಿ ಬೆಳೆಯುತ್ತಿರುವ ಚೀನಾ ನಿಸರ್ಗಕ್ಕೆ ಮಾಡಿದ ಅನ್ಯಾಯದ ಅರಿವು ತಡವಾಗಿಯಾದರೂ ಬಂದಿತು. ಪ್ರತಿ ದಿನ ೩ ಕೋಟಿ ಚೀಲಗಳನ್ನು ಬಳಸುವ ಚೀನಾ ಇಂಥ ಚೀಲಗಳ ಉತ್ಪಾದನೆಗೆ ಬಹಳಷ್ಟು ಸಂಪನ್ಮೂಲಗಳನ್ನು ಉಪಯೋಗಿಸಬೇಕಿತ್ತು. ಅಮೇರಿಕಾ ಈ ಪ್ರಮಾಣದ ( ೩ ಕೋಟಿ ) ಚೀಲ ಬಳಸಲು ಒಂದು ವರ್ಷ ತೆಗೆದುಕೊಳ್ಳುತ್ತದೆ. ಚೀನಾ ಈಗ ಪಾಲಿಥಿನ್ ಚೀಲದ ಮೇಲೆ ನಿರ್ಬಂಧ ಹೇರಿದ್ದು ಸಾರ್ವಜನಿಕ ಅಭಿಯಾನದ ಮೂಲಕ ಜನರಲ್ಲಿ ಅರಿವು ಮೂಡಿಸುತ್ತಿದೆ. ಈ ವಿಷಯದಲ್ಲಿ ನಾವೇಕೆ ಹಿಂದೆ ಬೀಳಬೇಕು? ಇನ್ನು ಮುಂದೆ ಸಾಮಾನು ಕೊಳ್ಳಲು ಹೋಗುವಾಗ ಬಟ್ಟೆ ಚೀಲವನ್ನು ಏಕೆ ಉಪಯೋಗಿಸಬಾರದು. ನಾವು ಮಾತ್ರವಲ್ಲ, ಮನೆಯವರಿಗೂ, ನೆಂಟರಿಷ್ಟರಿಗೂ ಸ್ನೇಹಿತರಿಗೂ ಇದರ ಬಗ್ಗೆ ತಿಳಿ ಹೇಳಿ ಒಂದು ಪುಟ್ಟ ಅಭಿಯಾನ ಆರಂಬಿಸಿದರೆ ಹೇಗೆ? every great journey starts with one small step, ಅಲ್ಲವೇ?
ಆಗದು ಎಂದು ಕೈ ಕಟ್ಟಿ ಕುಳಿತರೆ….
ಬದುಕಿನಲ್ಲಿ ಏನನ್ನಾದರೂ ಸಾಧಿಸಬೇಕು ಎನ್ನೋ ಹಂಬಲ ಹಲವರಲ್ಲಿ ಇರುತ್ತದೆ. ಆದರೆ ಪರಿಸ್ಥಿತಿಗಳ ಒತ್ತಡದಿಂದ ಕೆಲವರಿಗೆ ಅವು ಸಾಧ್ಯವಾಗದೇ ಆಸೆ ಸುಪ್ತ ಮನಸ್ಸಿನಲ್ಲಿ ಅದಮ್ಯವಾಗಿ ಕುಳಿತು ತಕ್ಕ ಸಮಯಕಾಗಿ ಕಾಯುತ್ತಿರುತ್ತದೆ. ಆದರೆ ಅಂಥ ಆಸೆ ಈಡೇರಿಸಿಕೊಳ್ಳುವ ಸಮಯ ಬಂದಾಗ ಕೆಲವೊಮ್ಮೆ ಮುಪ್ಪು ಆವರಿಸಿ ಮನಸ್ಸಿನಲ್ಲಿ ಗೊಂದಲ, ಶಂಕೆ ಮನೆ ಮಾಡಿ ಆಸೆಯನ್ನು ತಮ್ಮ ಗೋರಿಗಳಿಗೆ ಕೆಲವರು ಕೊಂಡೊಯ್ದರೆ ಇನ್ನೂ ಕೆಲವರು ಮುಪ್ಪಿಗೆ ತಮ್ಮ ಛಲ ಮತ್ತು ಬಯಕೆಯನ್ನು ಬಲಿಕೊಡದೆ ತ್ರಿವಿಕ್ರಮನಂತೆ ತಮ್ಮ ಗುರಿಯತ್ತ ಸಾಗುತ್ತಾರೆ. ಆಂಗ್ಲ ಭಾಷೆಯ ಮಾತಿನಂತೆ its never too late ಮತ್ತು never say never again ಮಾತಿಗೆ ಉದಾಹರಣೆಯಾಗಿ ಕಂಗೊಳಿಸುವ ಸಾಧಕರು ನಮಗೆ ಬಹಳಷ್ಟು ಮಂದಿ ಸಿಗುತ್ತಾರೆ. ಅಂಥ ಅಪರೂಪದ ಸಾಧಕರಲ್ಲಿ ವಿಶ್ವದ ಅತಿ ಹಿರಿಯ blogger ಎಂಬ ಹೆಗ್ಗಳಿಕೆಗೆ ಪಾತ್ರರು 96 ವರುಷದ ಭಾರತೀಯ ಮೂಲದ ಈಗ ಅಮೇರಿಕೆಯಲ್ಲಿ ನೆಲೆಸಿರುವ ರಂಡಲ್ ಬೂಟಿ ಸಿಂಗ್. browse ಮಾಡುತ್ತಿದ್ದಾಗ ಆಕಸ್ಮಿಕವಾಗಿ ಸಿಕ್ಕ ಈ ಬ್ಲಾಗ್ ನೋಡಿ ತುಂಬಾ ಖುಷಿಯ ಜೊತೆ ಸಾಕಷ್ಟು ಉತ್ತೇಜನವೂ ಸಿಕ್ಕಿತು. 80 ನೆ ವಯಸ್ಸಿನಲ್ಲಿ ಪವಿತ್ರ ಕುರಾನ್ ಕಲಿಯಲು ಅರೇಬಿಕ್ ಭಾಷೆ ಕಲಿತ ಇವರು ಮುಸ್ಲಿಮರಾಗಿರುವ ತಮ್ಮಮಗಳು ಮತ್ತು ಅಳಿಯನ್ದಿರೊಂದಿಗೆ ವಾಸವಾಗಿದ್ದಾರೆ. ಬದುಕು 80 ರಲ್ಲಿ ಆರಂಭವಾಗುತ್ತದೆ ಎನ್ನುವ website ಇವರಿಗೆ ಪ್ರಶಸ್ತಿ ನೀಡಿ ಗೌರವಿಸಿದೆ.
ಆದರ್ಶ ತಂದೆ
ಕುಖ್ಯಾತ ಕಾಡುಗಳ್ಳ ಮತ್ತು ಆನೆ ಹಂತಕ ವೀರಪ್ಪನ ಹತ್ಯೆಯೊಂದಿಗೆ ಕಾನನದೊಳಗಿನ ಮಾನವನ ಆಕ್ರಂದನಕ್ಕೆ ತೆರೆ ಬಿತ್ತು. ಆನೆಗಳಿಗೂ, ವೃಕ್ಷಗಳಿಗೂ, ಪೊಲೀಸರಿಗೂ, ಜನಸಾಮಾನ್ಯರಿಗೂ ಸಿಂಹ ಸ್ವಪ್ನವಾಗಿದ್ದು ವ್ಯವಸ್ಥೆ ನಪುಂಸಕವೇನೋ ಎಂದು ಅನುಮಾನ ಹುಟ್ಟುವಷ್ಟು ಎತ್ತರ ಬೆಳೆದಿದ್ದ ಆಗಾಧ ಮೀಸೆಯ ಸಣ್ಣ ಮನುಷ್ಯ ಕೊನೆಗೂ ಬಲಿಯಾದ ಪೋಲೀಸರ ಗುಂಡಿಗೆ. ಅವನ ಪುತ್ರಿಗೆ IAS ಮಾಡುವ ಬಯಕೆಯಂತೆ. IAS, IPS ಅದ್ಧಿಕಾರಿಗಳ ನಿದ್ದೆಗೆಡಿಸಿದ್ದ ಈ ಅಪ್ಪನ ಮಗಳಿಗೆ ಅಧಿಕಾರಿಯಾಗುವ ಆಸೆ. ಅಷ್ಟು ಮಾತ್ರ ಅಲ್ಲ ತನ್ನ ತಂದೆ ಇವಳಿಗೆ ಆದರ್ಶ ವ್ಯಕ್ತಿಯಂತೆ. ಈ ಆದರ್ಶ ವ್ಯಕ್ತಿಯನ್ನು ಈಕೆ ತನ್ನ ಬದುಕಿನಲ್ಲಿ ಕಂಡಿದ್ದು ಎರಡೇ ಎರಡು ಸಲ. ಅದೆಂಥ ಪ್ರಭಾವ ಬೀರಿರಬೇಕು ಅವಳ ತಂದೆ?
ಇವಳ ಆದರ್ಶದ ವ್ಯಕ್ತಿಯ ಮಾತ ಕೇಳಿ ಅಳಿದುಳಿದ ಆನೆಗಳು ಈಗ ಕಾಡು ಬಿಟ್ಟು ಓಡಿದರೆ ಅಚ್ಚರಿಯಂತೂ ಇಲ್ಲ ಅನ್ನಿ.
Rain, rain, go away..
ಮುಂಗಾರು ಮಳೆಯ ಆರ್ಭಟ ಜನರನ್ನು ಕಂಗೆಡಿಸಿದೆ. ಬೆಂಬಿಡದ ಭೂತದಂತೆ ಬೆನ್ನು ಬಿದ್ದಿರುವ ಮಳೆಯಿಂದ ಸಾವು ನೋವು ಮಾತ್ರವಲ್ಲ ಕೋಟ್ಯಾಂತರ ರೂಪಾಯಿಗಳ ನಷ್ಟ ಬೇರೆ. ಮಳೆರಾಯನನ್ನು ಒಲಿಸಲು ಕಪ್ಪೆಗಳಿಗೂ ಕತ್ತೆಗಳಿಗೂ ಮದುವೆ ಸೀಮಂತ ಮಾಡಿದ ನಾವು ಈಗ ಮಳೆ ನಿಲ್ಲಿಸುವಂತೆ ವರುಣನ ಕಾಲಿಗೆ ಬೀಳಲು ತಯಾರಾಗಿದ್ದೇವೆ. ಬತ್ತಿದ ನದಿಗಳೆಲ್ಲ ಮೈ ತುಂಬಿಕೊಂಡಿದ್ದನ್ನು ನೋಡಿ ನಲಿದ ನಮಗೆ ಈಗ ಮಳೆರಾಯನ ಕೃಪೆ ಅವಶ್ಯಕತೆಗಿಂತ ಹೆಚ್ಚಾದಾಗ ಆಜೀರ್ಣವಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಕಳೆದ ೩೯ ವರ್ಷಗಳಲ್ಲಿ ಆಗದ ಮಳೆ ಈಗ ಆಗುತ್ತಿದ್ದು ರೈತರ ಪೈರು ನೀರು ಪಾಲಾಗಿ ಹಲುಬುವಂತೆ ಮಾಡಿದೆ. ಮಳೆಯಿಂದ ನಿಸರ್ಗ ಕಂಗೊಳಿಸುತ್ತಿದ್ದರೂ ಜನ ಕಂಗಾಲಾಗುವಂತೆ ಮಾಡಿದೆ ಈ ಮಳೆ. ಹೀಗೆ ಪ್ರಕೃತಿಯ ವಿಕೋಪ ನಮ್ಮ ಮೇಲೆ ಎರಗಲು ನಾವು ಮಾಡಿದ ಪಾಪಗಳೇ ಕಾರಣ. ಈ ಮಾತು ಅತಿಶಯೋಕ್ತಿಯಲ್ಲ. ಅತಿಯಾಸೆಯಿಂದ ಪ್ರಕೃತಿಯ ಮೇಲೆ ಧಾಳಿ ಮಾಡಿದ ನಮಗೆ ಪ್ರಕೃತಿಯ ಕೃಪೆ ಸಿಗುವುದಾದರೂ ಹೇಗೆ? ಕಾಡನ್ನು ಬೋಳಿಸುವುದು, ಗುಡ್ಡಗಳನ್ನು ನೆಲಸಮ ಮಾಡುವುದು, ಭೂ ಸವೆತ, ಎರ್ರಾಬಿರ್ರಿ ಕಾರ್ಖಾನೆಗಳ ಸ್ಥಾಪನೆಯಿಂದ ವಿಷಾನಿಲವನ್ನು ಆಗಸಕ್ಕೂ, ಕಲ್ಮಶಗಳನ್ನು ನದೀ ಸಮುದ್ರಗಳಿಗೆ ಬಿಡುವುದೂ ಮಾಡಿದ್ದರಿಂದ ನಿಸರ್ಗದ ಲೆಕ್ಕಾಚಾರದಲ್ಲಿ ಏರುಪೆರುಂಟಾಗಿ ಈ ರೀತಿಯ ಸಮಸ್ಯೆಗಳು ತಲೆದೋರುತ್ತಿವೆ. ನಿಸರ್ಗವನ್ನು ಗೌರವಿಸದ, ಆದರಿಸದ ನಮಗೆ ನಿಸರ್ಗ ನಮ್ಮ ಮೇಲೆ ಕರುಣೆಯನ್ನು ಹೇಗೆ ತೋರಬಹುದು?