ಲೇಖಕ: bhadravathi
* ಗುಬ್ಬಚ್ಚಿಯ ವಯೋವೃದ್ಧ ಅಭಿಮಾನಿ
ನಮ್ಮ ಭಾವನೆಗಳನ್ನು, ಅನುಭವಗಳನ್ನು, ಸಿಹಿ – ಕಹಿಯನ್ನು ಕೇವಲ ೧೪೦ ಅಕ್ಷರಗಳಲ್ಲಿ ಒದರಿ ಹಂಚಿಕೋ ಎನ್ನುವ ಪುಟ್ಟ ಗುಬ್ಬಿ twitter ನ ಮೋಡಿಗೆ ಬೀಳದವರು ವಿರಳ. ನಮ್ಮ ಯುವ ರಾಜಕಾರಣಿ ಶಶಿ ತರೂರ್ ಆಗಾಗ ಏನನ್ನಾದರೂ ವಟಗುಟ್ಟಿ ಎಲ್ಲರನ್ನೂ ತಬ್ಬಿಬ್ಬು ಮಾಡುವುದಲ್ಲದೆ ಸ್ವತಹ ತಾವೇ ಕಷ್ಟಕ್ಕೆ ಸಿಕ್ಕಿಕೊಳ್ಳುತ್ತಾರೆ. twitter ಬಳಗಕ್ಕೆ ಈಗ ಕಿಂಗ್ ಖಾನ್ ಶಾರುಕ್ ಸಹ ಸೇರಿಕೊಂಡಿದ್ದಾನಂತೆ. ಹದಿಹೆರೆಯದವರಿಂದ ಆರಂಭಗೊಂಡು ಮುಪ್ಪಿನವರೆಗಿನ ಪ್ರಭಾವ twitter ನದು. twitter ನ ಅತಿ ವಯಸ್ಸಾದ ಅಭಿಮಾನಿ ಇಂಗ್ಲೆಂಡಿನ “ಐಯ್ವಿ ಬೀನ್” ಎನ್ನುವ ಮಹಿಳೆ. ಈ ವಯೋವೃದ್ಧ ಮಹಿಳೆಗೆ ೧೦೪ ವರ್ಷ ಮತ್ತು ೫೫,೦೦೦ ಅಭಿಮಾನಿಗಳಂತೆ twitter ನಲ್ಲಿ.
* ಆಸ್ಟ್ರೇಲಿಯಾ
ಆಸ್ಟ್ರೇಲಿಯಾ ಎಂದ ಕೂಡಲೇ ಒಂದೊಮ್ಮೆ ನೆನಪಿಗೆ ಬರುತ್ತಿದ್ದುದು ಕುರಿಗಳು, ಜಾನುವಾರುಗಳು, ಮತ್ತು ಕ್ರಿಕೆಟ್. ಇತ್ತೀಚೆಗೆ ಭಾರತೀಯ ವಿದ್ಯಾರ್ಥಿಗಳ ಮೇಲೆ ನಡೆಯುತ್ತಿರುವ ಅವ್ಯಾಹತ ಹಲ್ಲೆ ಮತ್ತು ಕೊಲೆ ಆಸ್ಟ್ರೇಲಿಯನ್ನರ ಮತ್ತೊಂದು ರೂಪದ ಪರಿಚಯ ಮಾಡಿಕೊಡುತ್ತಿದೆ. ಭಾರತೀಯರ ವಿರುದ್ಧದ ಪ್ರತಿ ಆಕ್ರಮಣಕ್ಕೂ “ಜನಾಂಗ ಬೇಧ “ನೀತಿಯ ಅರ್ಥ ಕಲ್ಪಿಸಬೇಡಿ ಎಂದು ಅಲ್ಲಿನ ಮಂತ್ರಿ ಮಹೋದಯರ ಹೇಳಿಕೆ ಓದುತ್ತಿದ್ದಾಗಲೇ ಆಸ್ಟ್ರೇಲಿಯಾ ದೇಶದ ಮನಮೋಹಕ, ರಮಣೀಯ ಚಿತ್ರಗಳ ಬ್ಲಾಗ್ ಒಂದು ಕಣ್ಣಿಗೆ ಬಿತ್ತು. ತನ್ನದೇ ಸೃಷ್ಟಿಗಳಾದ ಮನುಷ್ಯನಲ್ಲಿ ಅಸಹನೆಯನ್ನೂ, ಕ್ರೌರ್ಯವನ್ನೂ, ಮತ್ತು ನಿಸರ್ಗದಲ್ಲಿ ಬೆರಗನ್ನೂ, ಬೆಡಗನ್ನೂ ಇಟ್ಟ ಆ ಭಗವಂತನ ಮರ್ಮವಾದರೂ ಏನಿರಬಹುದು?
* intellectual terrorists
—Franz Kafka
“ನಮ್ಮ ಅಂತರಾಳದಲ್ಲಿ ಹೆಪ್ಪುಗಟ್ಟಿದ ಸಮುದ್ರವನ್ನು ಒಡೆಯಲು ಕೊಡಲಿಯಾಗಬೇಕು ಗ್ರಂಥಗಳು”.
ಎಷ್ಟು ಅರ್ಥಗರ್ಭಿತ ಈ ಮಾತುಗಳು. ಆದರೆ ನಾವು ಇಂದು ಕಾಣುತ್ತಿರುವ ಸಾಹಿತ್ಯ ನೋಡಿದರೆ ಅಂತರಾಳವನ್ನು ನರಕವಾಗಿಸುವುದರಲ್ಲಿ ಪುಸ್ತಕಗಳು ನಾಮುಂದು ತಾಮುಂದು ಎಂದು ಬರುತ್ತಿವೆ. ಧ್ವೇಷ ಕಾರುವ, ಜನರಲ್ಲಿ ವೈಮನಸ್ಸನ್ನು ಹುಟ್ಟಿಸುವ ಕೃತಿಗಳನ್ನು ರಚಿಸಿ ಭೇಷ್ ಎಂದು ಪ್ರಶಂಸೆ ಗಳಿಸುತ್ತಿರುವ, ನಾಡಿನ ಶ್ರೇಷ್ಠ ಬರಹಗಾರರೆಂದು ಬೀಗಿ ನಡೆಯುತ್ತಿರುವ ಸಾಹಿತಿಗಳು ತಾವು ರಚಿಸುತ್ತಿರುವ ಕೃತಿಗಳು, ಬರಹಗಳು ಭಯೋತ್ಪಾದಕನ ಗುಂಡುಗಳಿಗಿಂತ ಅಪಾಯಕಾರಿ ಎಂದು ಕಾಣಲು ವಿಫಲರಾಗುತ್ತಿರುವುದು ನಮ್ಮ ದೌರ್ಭಾಗ್ಯ ಎಂದೇ ಹೇಳಬೇಕು. ಈ ರೀತಿ ಮನುಷ್ಯರ ಮಧ್ಯೆ, ಸಮುದಾಯಗಳ ನಡುವೆ ಒಡಕನ್ನು ತಂದು ನಿಲ್ಲಿಸುವವರು “ಬೌದ್ಧಿಕ ಭಯೋತ್ಪಾದಕರು” (intellectual terrorists) ಮತ್ತು ಈ ಸಾಹಿತಿಗಳ ಭಯೋತ್ಪಾದನೆ ದೇಶಕ್ಕೆ ಗಂಡಾಂತರಕಾರಿ ಎಂದು ನಾವು ಅರಿತುಕೊಳ್ಳುವುದು ಸಮಯ ಮೀರಿದಾಗಲೋ? ಏಕೆಂದರೆ ಓರ್ವ ಭಯೋತ್ಪಾದಕ ತನ್ನ ಕೋವಿಯಿಂದ ಒಂದಿಷ್ಟು ಗುಂಡುಗಳನ್ನು ಹರಿ ಬಿಟ್ಟು ಒಬ್ಬಿಬ್ಬರದೋ, ನಾಲ್ಕಾರು ಜನರದೋ ಜೀವಗಳನ್ನು ಆಹುತಿ ತೆಗೆದುಕೊಳ್ಳಬಹುದು, ಆದರೆ ಬುದ್ಧಿಜೀವಿಯೆಂದು ಸಮಾಜದ ಮುಂದೆ ನಿಂತು ತಮ್ಮ ಕೊಳಕು, ಅಸಹ್ಯ ಹುಟ್ಟಿಸುವ ವಿಚಾರಗಳನ್ನು ಪ್ರಸ್ತುತಪಡಿಸಿ ಅವನ್ನು ಪುಸ್ತಕ ರೂಪಕ್ಕೂ ಇಳಿಸುವ ಗೋಮುಖ ವ್ಯಾಘ್ರರು ಸಮಾಜವನ್ನು ಒಡೆಯುವಲ್ಲಿ ಯಶಸ್ಸನ್ನು ಕಾಣುತ್ತಿದ್ದಾರೆ.
ಈ ವಿಷ ಜಂತುಗಳ ಬಗ್ಗೆ ಜನಸಾಮಾನ್ಯರು ಮತ್ತು ಸುಶಿಕ್ಷಿತ ವ್ಯಕ್ತಿಗಳು ಜಾಗೃತರಾಗಿ ಅವರನ್ನು ಮೂಲೆಗುಂಪು ಮಾಡಬೇಕಾದ ಅವಶ್ಯಕತೆ ದೇಶದ ಹಿತದೃಷ್ಟಿಯಿಂದ ತುಂಬಾ ಒಳ್ಳೆಯದು.
ಮೇಲಿನ Franz Kafka ಆಂಗ್ಲ ನುಡಿಗಳ ಕನ್ನಡ ಭಾಷಾಂತರ ಎಷ್ಟು ಹತ್ತಿರ ಎಂದು ನನಗೆ ಖಾತರಿಯಿಲ್ಲ ಆದರೂ ಪ್ರಯತ್ನವನ್ನಂತೂ ಮಾಡಿದ್ದೇನೆ.
ಮುಟ್ಟಿದ್ದೆಲ್ಲಾ ಚೈನಾ…
ಮುಟ್ಟಿದ್ದೆಲ್ಲಾ ಚಿನ್ನ ನಮಗೆ ತಿಳಿದ ಗಾದೆ. ಆದ್ರೆ ಇದು ಚಿನ್ನದ ಕತೆಯಲ್ಲ, ಚೀನಾ ದೇಶದ್ದು.
ಮಾರುಕಟ್ಟೆಯಲ್ಲಿ ಕೇಳಿಬರುವ ಒಂದು ಉದ್ಗಾರ ಇದೂ ಚೈನಾನಾ? ಏನೇನನ್ನೆಲ್ಲಾ ತಯಾರು ಮಾಡ್ತಾರಪ್ಪಾ ಈ ಚೈನಾದವರು ಎಂದು ಅರ್ಧ ಮೆಚ್ಚುಗೆಯಿಂದಲೂ ಇನ್ನರ್ಧ ಮತ್ಸರದಿಂದಲೂ ಕೇಳಿಬರುವ ಉದ್ಗಾರ. ಅಷ್ಟೊಂದು ಪ್ರಬಲವಾದ ubiquitous ಹಿಡಿತ ಚೀನೀಯರದು. ಒಂದು ಕಾಲವಿತ್ತು. ಚೈನಾ ಎಂದರೆ ಬರೀ ಕಳಪೆ ಮತ್ತು ಅಗ್ಗದ ವಸ್ತು ತಯಾರಿಸುವ ದೇಶ ಎಂದು. ಆದರೆ ಪರಿಸ್ಥಿತಿ ಬದಲಾಗಿ ಇಂದು ವಿಶ್ವದ ಬಹುತೇಕ ಕಂಪೆನಿಗಳು ಚೈನಾವನ್ನು ತಮ್ಮ ಸರಕುಗಳನ್ನು ಉತ್ಪಾದಿಸುವ ಕೇಂದ್ರವಾಗಿ ಪರಿವರ್ತಿಸಿದ್ದಾರೆ. ೧೮ ವರ್ಷಗಳ ಹಿಂದೆ ನಾನು ಸೌದಿಗೆ ಬಂದ ಹೊಸತು. ಮಾರುಕಟ್ಟೆಯಲ್ಲಿ ಚೈನಾದ ಸ್ವರ ಕ್ಷೀಣ. ಎಲೆಕ್ಟ್ರೋನಿಕ್ ವಸ್ತುಗಳು ನೇರವಾಗಿ ಜಪಾನ್, ಜರ್ಮನಿ ಮುಂತಾದ ರಾಷ್ಟ್ರಗಳಿಂದಲೇ ಬರುತ್ತಿದ್ದವು. ನನ್ನ ಮೊಟ್ಟ ಮೊದಲ ಸಂಬಳದಿಂದ ಕೊಂಡ ಅಲಾರ್ಮ್ ಗಡಿಯಾರ ಜರ್ಮನಿಯದು. ಆಗ ಬಟ್ಟೆ ಬರೆಗಳಲ್ಲಿ ಥೈಲ್ಯಾಂಡ್ ಮುಂದು. ಅಪ್ಪಿ ತಪ್ಪಿ ಯಾವುದಾದರೂ ಚೈನಾ ನಿರ್ಮಿತ ವಸ್ತು ಕಂಡರೂ ಕೊಳ್ಳುವವರು ತುಂಬಾ ಕಡಿಮೆ. ಅಂದಿನ ಪರಿಸ್ಥಿತಿಗೂ ಇಂದಿನ ಬೆಳವಣಿಗೆಗೂ ಎಷ್ಟೊಂದು ವ್ಯತ್ಯಾಸ? ಸೌದಿ – ಥಾಯಿಲೆಂಡ್ ಸಂಬಂಧ ಒಂದು ದರೋಡೆಗೆ ಸಂಬಂಧಿಸಿದ ಘಟನೆಯೊಂದಿಗೆ ಹಳಸಾಗಿ ಅಲ್ಲಿಂದ ಬರುವ ಸಾಮಗ್ರಿಗಳು ಸೌದಿಗೆ ಬರುವುದು ನಿಂತಿತು. ಈ ಸಂದರ್ಭದಲ್ಲಿ ಚೀನಾ ದೇಶದ ಆಗಮನ.
ಈಗ ತಾನೇ ಮುಗಿದ ೨೦೦೯ ರಲ್ಲಿ ರಫ್ತು ಮಾಡುವ ರಾಷ್ಟ್ರಗಳ ಪೈಕಿ ಅಗ್ರಗಣ್ಯ ರಾಷ್ಟ್ರ ಜರ್ಮನಿಯನ್ನು ಚೀನಾ ಹಿಂದಿಕ್ಕಿತು. ಚೀನಾ ರಫ್ತು ಮಾಡಿದ ಮೌಲ್ಯ ಒಂದು ಟ್ರಿಲ್ಲಿಯನ್ ಡಾಲರ್. ಒಂದು (೧) ಬರೆದ ನಂತರ ಹನ್ನೆರಡು ಸೊನ್ನೆ ಹಾಕಿದರೆ ಟ್ರಿಲ್ಲಿಯನ್. ಒಂದು ಡಾಲರ್ಗೆ ೪೫ ರುಪಾಯಿಯಂತೆ ಲೆಕ್ಕ ಹಾಕಿದರೆ ನಾಲ್ಕು ಲಕ್ಷದ ಐವತ್ತು ಸಾವಿರ ಕೋಟಿ ರೂಪಾಯಿ, ಒಂದು ಟ್ರಿಲ್ಲಿಯನ್ ಗೆ.
ಅಮೇರಿಕಾ ವಿಶ್ವದ ಅತಿ ದೊಡ್ಡ ವಾಣಿಜ್ಯೋದ್ಯಮ ರಾಷ್ಟ್ರ. ನಂತರದ ಸ್ಥಾನ ಜಪಾನಿಗೆ. ಆದರೆ ಪಂಡಿತರ ಪ್ರಕಾರ ಶೀಘ್ರದಲ್ಲೇ ಜಪಾನಿನ ಸ್ಥಾನವನ್ನು ಚೀನಾ ಆಕ್ರಮಿಸಲಿದೆ. ಯಾವ ಕಾರಣಕ್ಕೂ ಅಮೇರಿಕ ತನ್ನ ಪಾರುಪತ್ಯ ಬಿಟ್ಟು ಕೊಡುವುದಿಲ್ಲ, ಹಾಗೇನಾದರೂ ಯಾರಾದರೂ ಹತ್ತಿರ ಬರುವ ಸೂಚನೆ ತೋರಿದರೂ ಯಾವುದಾರೂ ರಾಜಕೀಯ ಸಮಸ್ಯೆ ಹುಟ್ಟು ಹಾಕಿ ಆ ದೇಶವನ್ನು ಕಡಿಮೆ ಎಂದರೂ ಹತ್ತು ವರ್ಷ ಹಿಂದಿಕ್ಕಲೂ ತಯಾರು ನಮ್ಮ ಅಂಕಲ್.
ಮೊನ್ನೆ ನಮ್ಮಲ್ಲಿನ ಪಂಡಿತ ರೊಬ್ಬರು ಭಾರತ ಚೀನಾ ಹಿಂದಿಕ್ಕಿ ಬೆಳೆಯುತ್ತದೆ ಎಂದು ಭವಿಷ್ಯ ನುಡಿದಿದ್ದರು. ಈ ಭವಿಷ್ಯ ವಾಣಿಯನ್ನು ಸುಮಾರು ಏಳೆಂಟು ವರ್ಷಗಳಿಂದ ಕೇಳುತ್ತಿದ್ದೆ. ಮನಸ್ಸಿನಲ್ಲೇ ಮಂಡಿಗೆ ತಿನ್ನುವ ಜಾಯಮಾನದ ಫಲವೋ ಏನೋ ಈ ಭವಿಷ್ಯವಾಣಿಗಳು. ಆದರೂ ಕಳೆದ ದಶಕಗಳಿಗೆ ಹೋಲಿಸಿದರೆ we have come a long way ಎಂದೇ ಹೇಳಬಹುದು. ಊಹಿಸಿ, ಒಂದೊಮ್ಮೆ ಲಾಲ್ ಬಹದ್ದೂರ್ ಶಾಸ್ತ್ರಿಗಳು ಪ್ರಧಾನಿಗಳಾಗಿದ್ದಾಗ ದೇಶದಲ್ಲಿ ತಿನ್ನಲು ಧವಸ ಧಾನ್ಯಗಲಿಲ್ಲದೆ miss-a-day meal (ಒಂದು ದಿನದ ಉಪವಾಸ) ಅನುಸರಿಸಲು ಸರಕಾರ ಜನರನ್ನು ಕೋರಿತ್ತು.ಇಂದಿರಾ ಗಾಂಧಿ ಯವರು ಪ್ರಧಾನಿ ಆದ ನಂತರ ಕೃಷಿ ಕ್ಷೇತ್ರದಲ್ಲಿ ಕ್ರಾಂತಿಯುಂಟಾಗಿ ಹೆಚ್ಚುವರಿ ಆಹಾರ ಉತ್ಪಾದಿಸಲು ಸಾಧ್ಯವಾಯಿತು. ಈ ಹೆಚ್ಚುವರಿ ಆಹಾರ ಬಡಬಗ್ಗರಿಗೆ ತಲುಪದಿದ್ದರೇನಂತೆ FCI Godown ಗಳಲ್ಲಿ ಶೇಖರಿಸಲ್ಪಟ್ಟ ಧಾನ್ಯಗಳನ್ನು “ಮೂಷಕ”ಪಡೆ ಗಳು ತಿಂದು ಕೊಬ್ಬಿದ್ದಂತೂ ಸತ್ಯ.
made in japan ಸರಕುಗಳದು ರಾಜ್ಯಭಾರ ಅಂದಿನ ದಿನಗಳಲ್ಲಿ. ಎಲ್ಲಾದರೂ ಅಪ್ಪಿತಪ್ಪಿ ತಾವು ಕೊಳ್ಳುವ ವಸ್ತುಗಳ ಮೇಲೆ made in japan ಶಬ್ದಗಳು ಕಾಣದಿದ್ದರೆ ಜನ ಕಂಗಾಲು. ಕೆಲವು ಜಪಾನಿ ಕಂಪೆನಿಗಳು ತಮ್ಮ ಕಾರ್ಖಾನೆಗಳನ್ನು ಸಿಂಗಪುರದಲ್ಲೂ, ಮಲೆಶ್ಯಾದಲ್ಲೂ ತೆರೆದು ಆಲಿಂದ ರಫ್ತು ಮಾಡುತ್ತಿದ್ದರು. ಅಂತ ಉತ್ಪನ್ನಗಳ ಮೇಲೆ made in japan ಮುದ್ರೆ ಇರುತ್ತಿರಲಿಲ್ಲ. matsushita electric co, japan ಅಂತ ಬರೆದು ಬೇರೆಲ್ಲಾದರೂ ಮೂಲೆಯಲ್ಲಿ made in malaysia ಎಂದು ಇರುತ್ತಿತ್ತು. ಇದನ್ನು ನೋಡಿದ ಜನ ಜಪಾನೀ ವಸ್ತುಗಳನ್ನು ಕೊಳ್ಳಲು ತಕರಾರು ಮಾಡಿದಾಗ ಜಪಾನೀ ಕಂಪೆನಿಗಳು ದಿನಪತ್ರಿಕೆಗಳಲ್ಲಿ ಜಾಹೀರಾತು ನೀಡಿ ಜಪಾನೀ ಕಾರ್ಖಾನೆಯ ವಸ್ತುಗಳು ಎಲ್ಲೇ ನಿರ್ಮಿತವಾದರೂ ಅವು ಉತ್ಕೃಷ್ಟ ಮಟ್ಟದಿಂದ ಕೂಡಿದ್ದು ಎಂದವು. ಹಾಗಾದರೆ ಜಪಾನೀ ವಸ್ತುಗಳಿಗಿಂತ ಇವೇಕೆ ಅಗ್ಗ ಎಂದಾಗ ಜಪಾನಿನಲ್ಲಿ ಕೂಲಿ ವೇತನ ಜಾಸ್ತಿ, ಮತ್ತು ಕಚ್ಚಾ ಪದಾರ್ಥಗಳೂ ದುಬಾರಿ, ಹಾಗಾಗಿ ಇವು ಕೈಗೆಟಕುವ ದರದಲ್ಲಿ ಲಭ್ಯ ಎಂದು ಸಮಜಾಯಿಷಿ ನೀಡಬೇಕಾಯಿತು. ಜಪಾನ್ ನಂತರ ದಕ್ಷಿಣ ಕೊರಿಯಾ ಮಾರುಕಟ್ಟೆಗೆ ಆಗಮಿಸಿ ಜಪಾನಿನ ಮೇಲಿನ ವ್ಯಾಮೋಹ ಕ್ರಮೇಣ ಜನರಲ್ಲಿ ಕಡಿಮೆಯಾಗುವಂತೆ ಮಾಡಿತು. ಕೊರಿಯಾದ ಕೈಗಾರಿಕಾ ಕ್ರಾಂತಿಯೂ ಸಹ ಭಾರತದಂಥ ರಾಷ್ಟ್ರಗಳಿಗೆ ಅನುಕರಣೀಯ. ೧೯೪೫ ರಲ್ಲಿ ವಿಶ್ವದ ಬಡ ರಾಷ್ಟ್ರಗಲ್ಲೊಂದಾಗಿದ್ದ ಕೊರಿಯಾ ತನ್ನ ಪರಿಶ್ರಮದ, ಛಲದ ಪರಿಣಾಮ ಇಂದು ಸಿರಿವಂತ ರಾಷ್ಟ್ರಗಳಲ್ಲಿ ಒಂದಾಗಿ ಹೊರಹೊಮ್ಮಿದೆ.
ಈಗ ಜಪಾನ್, ಕೊರಿಯಾ, ಇಂಡೋನೇಷ್ಯ , ಮಲೇಷ್ಯಾ ಹೋಗಿ ಚೀನಾ ಗೋಡೆ ಮಾರುಕಟ್ಟೆಯಲ್ಲಿ ಬೃಹದಾಕಾರವಾಗಿ ಬೆಳೆದು ನಿಂತಿದೆ.
ಪಕ್ಕದ ದೇಶದ ಸಂಪತ್ತನ್ನು ನೋಡಿ ಸಂತಸ ಪಡೋಣ ಎಂದರೆ ಆ ದೇಶಕ್ಕೆ ನಮ್ಮ ಮೇಲೆ ಅದೆಂಥದ್ದೋ ಹಗೆ, ಸಂಶಯ. ಧನದೊಂದಿಗೆ ದುರಹಂಕಾರವೂ ಬರಲೇ ಬೇಕೇನೋ. ಪ್ರಕೃತಿ ನಿಯಮದಂತೆ. ನಮ್ಮ ಪ್ರಧಾನಿ ಅರುಣಾಚಲಕ್ಕೆ ಹೋಗಬಾರದು, ನಾವು ಕಾಶ್ಮೀರದ ಪ್ರದೇಶದಲ್ಲಿ ರಸ್ತೆ ಕಾಮಗಾರಿ ಕೈಗೊಳ್ಳಬಾರದು…. ಹೀಗೆ ಅವರ ಆಜ್ಞೆಗಳ ಪಟ್ಟಿ. ಅದಕ್ಕೆ ಕೋಲೆ ಬಸವನಂತೆ ಗೋಣು ಹಾಕಲು ಚಾಣಕ್ಯಪುರಿಯ ಸಾಹೇಬರುಗಳು. ಈ ರೀತಿ ಎಡ ಬಲ (ಪಾಕ್) ದಲ್ಲಿ ಶನಿಗಳು ವಕ್ಕರಿಸಿಕೊಂಡಿರುವಾಗ ಅಭಿವೃದ್ಧಿಯ ಮಾತು ದೂರವೇ ಉಳಿಯುವುದೋ ಏನೋ?
ಒಂದು ಎರಡು ಬಾಳೆಲೆ ಹರಡು..
ನನ್ನ ಮಗಳು “ಇಸ್ರಾ” ಈಗ ಎರಡು ವರ್ಷದ ಪುಟಾಣಿ. ಪುಟು ಪುಟು ಮನೆತುಂಬಾ ಓಡಾಡುತ್ತಾ ತನ್ನ ಅಣ್ಣನನ್ನು ಕೆಣಕಿ ಸತಾಯಿಸುತ್ತಾ ಕಾಲ ಕಳೆಯುವುದನ್ನು ನೋಡುವುದೇ ಕಣ್ಣಿಗೆ ಹಬ್ಬ. ಮನೆಯ ಹೊರಗೆ ಕಾರಿನ ಶಬ್ದ ಕೇಳುತ್ತಲೇ ತಾನೇ ಬಾಗಿಲು ತೆರೆದು ಜಿಗಿದುಬಂದು ಗೇಟಿನ ಹತ್ತಿರ ನಿಂತು ನನ್ನನ್ನು ಬರಮಾಡಿಕೊಂಡಾಗ ಎಲ್ಲಾ ಆಯಾಸವೂ ಮಾಯ. ಮಕ್ಕಳು ಮನೆಯಲ್ಲಿ ಸಡಗರವನ್ನೂ, ನಮ್ಮ ಮನದಲ್ಲಿ ಸಂತಸವನ್ನೂ ತುಂಬಿ ನಮ್ಮನ್ನು ನಮ್ಮ ಕೆಳೆದುಹೋದ ಬಾಲ್ಯದ ಕಡೆ ನೆನಪುಗಳು ಹರಿಯುವಂತೆ ಮಾಡುತ್ತಾರೆ. ಮಕ್ಕಳೊಂದಿಗೆ ಮಗುವಾಗಿ ಆಡದವರು ಯಾರು? ಒಮ್ಮೆ ಪ್ರವಾದಿಗಳು ಮಕ್ಕಳೊಂದಿಗೆ ನಗುತ್ತಾ ಮಾತನಾಡುತ್ತಾ ಅವರೊಂದಿಗೆ ಮಕ್ಕಳಂತೆ ಬೆರೆತಿದ್ದನ್ನು ನೋಡಿ ಒಬ್ಬರು ಹೇಳಿದರು, ಪ್ರವಾದಿಗಳೇ ನನಗಂತೂ ಮಕ್ಕಳೊಂದಿಗೆ ಹೀಗೆ ಇರುವುದು ಬಿಡಿ ಅವರೊಂದಿಗೆ ತಾಳ್ಮೆಯೊಂದಿಗೆ ಇರಲೂ ಸಾಧ್ಯವಿಲ್ಲ ಎಂದು. ಅದಕ್ಕೆ ಪ್ರವಾದಿಗಳು ಆ ಕರುಣಾಮಯನಾದ ಅಲ್ಲಾಹನೇ ನಿಮ್ಮ ಮನಸ್ಸಿನಲ್ಲಿ ಕರುಣೆಯನ್ನು ಹಾಕದಿದ್ದರೆ ನನ್ನಿಂದೇನು ಮಾಡಲು ಸಾಧ್ಯ ಎಂದುತ್ತರಿಸಿದರು. ನನ್ನ ಮಗಳು ಮಾತಿನಲ್ಲಿ ಸ್ವಲ್ಪ ಹಿಂದೆಯೇ ಎನ್ನಬಹುದು. ಅವಳಿಗಿಂತ ಕೇವಲ ಎರಡು ವಾರಗಳ ಹಿರಿಯನಾದ ನನ್ನ ತಂಗಿಯ ಮಗ “ಅಹ್ಮದ್” ಮಾತಿನ ಗಣಿ. ಮನೆಯಲ್ಲಿ ಕೆಲಸಕ್ಕಿರುವ ಇಂಡೊನೆಷ್ಯಾ ದೇಶದ ಮೇಡ್ ಒಂದಿಗೆ ಸೇರಿ ಅರಬ್ಬೀ ಭಾಷೆಯನ್ನೂ ಉಲಿಯುತ್ತಾನೆ. ನನ್ನ ತಂಗಿಗೆ ತನ್ನ ಮಕ್ಕಳಿಗೆ ಕನ್ನಡದ ಚಿಕ್ಕ ಪುಟ್ಟ ಕವನ ಹೇಳಿಕೊಡುವ ಚಪಲ. ತನ್ನ ಮೊದಲ ಮಗ ” ಅಯ್ಮನ್” ಒಂದು ಎರಡು ಬಾಳೆಲೆ ಹರಡು ಎಂದು ಹಾಡುವುದನ್ನು ನಮಗೆಲ್ಲಾ ಕೇಳಿಸಿ ಸಂತಸ ಪಡುತ್ತಿದ್ದಳು. ಹಾಗೆಯೇ ಅಹ್ಮದ್ ನಿಗೂ ಒಂದು ಪದ್ಯ ಹೇಳಿಕೊಟ್ಟಾಗ ಅದನ್ನು ಬಹಳ ಬೇಗ ತನ್ನ ಅಣ್ಣನಂತೆಯೇ ಕರಗತ ಮಾಡಿಕೊಂಡ. ಮೊನ್ನೆ ಅವನ ಮನೆಗೆ ಹೋದಾಗ ಅವನ ಕವನ ಗೋಷ್ಠಿ ಜೋರಾಗಿ ನಡೆಯುತ್ತಿತ್ತು… ಡಮ್ಮರೆ ಡಮ್ಮಮ್ಮ,
ಮನೆ ಸುಟ್ಟೋಯ್ತು
ಯಾರ ಮಾನೆ
ಪೂಜಾರಿ ಮಾನೆ
ಯಾವ ಪೂಜಾರಿ
ಜುಟ್ಟು ಪೂಜಾರಿ
ಯಾವ ಜುಟ್ಟು
ಕೋಳಿ ಜುಟ್ಟು
ಯಾವ ಕೋಳಿ
ಬಾತು ಕೋಳಿ
ಯಾವ ಬಾತು
ಕೇಸರಿ ಬಾತು
ಯಾವ ಕೇಸರಿ
ತಿನ್ನೋ ಕೇಸರಿ
ಯಾವ ತಿನ್ನೋದು
ಹೊಡ್ತ ತಿನ್ನೋದು…. ಹಹಹಾ ಎಂದು ಚಪ್ಪಾಳೆ ತಟ್ಟಿಕೊಂಡು ತನಗೆ ತಾನೇ ಅಭಿನಂದಿಸಿಕೊಂಡ. ನನ್ನ ಮಗಳೋ, ಇನ್ನೂ johnny johnny yes pappa ಹೇಳಲು ಒದ್ದಾಡುತ್ತಿದ್ದಾಳೆ.
ಇತ್ತೀಚೆಗೆ ಭಾರತಕ್ಕೆ ಬಂದಿದ್ದಾಗ ಒಂದು ಲಾರಿಯ ಮೇಲೆ ತೆಲುಗುವಿನಲ್ಲಿ ಇದನ್ನು ಬರೆದಿದ್ದನ್ನು ಕಂಡೆ, ” ನಿಧಾನಮು ಪ್ರಧಾನಮು” ಎಂದು. ಅವಳ ವೇಗದ ಮಿತಿಯಲ್ಲೇ ಹೋಗಲಿ ಅಲ್ಲವೇ? ತಾಳಿದವನು ಬಾಳಿಯಾನು. ನನಗಂತೂ ತಾಳ್ಮೆ ಮಂಕರಿ ತುಂಬಾ ಇದೆ… ಕೃಪೆ ನನ್ನ ಮುದ್ದಿನ ಮಗಳು.
ಆ ಉದ್ಯಾವನದಲ್ಲಿ ಈಗಲೇ ಹೂಗಳನ್ನು ನೆಡು…
ಚಾಟ್ ಫ್ರೆಂಡ್ ಶೀಲಾ ಇಂದು ಸಿಕ್ಕು ಒಂದಿಷ್ಟು ಹರಟಿಸಿದೆವು. ಏನ್ ಸಮಾಚಾರ ಎಂದಾಗ ಎಂದಿನ ಲವಲವಿಕೆ ಇಲ್ಲದೆ ” ಬದುಕಿನಲ್ಲಿ ಮಜಾ ಇಲ್ಲ” ಎಂದಳು. no spice in life. ಕಾರಣ ಕೇಳಿದಾಗ ನಿಖರವಾದ ಉತ್ತರ ಕೊಡದೆ ಹೀಗೇ ಸುಮ್ಮನೆ ಎಂದು matter of fact ಶೈಲಿಯಲ್ಲಿ ಕೈ ಚೆಲ್ಲಿದಳು. ಆಕೆಗೆ ಅದೇ ಉದ್ಯೋಗ, ಸಂಸಾರ, ತಾಪತ್ರಯ ಇವು ಏಕತಾನತೆಯಿಂದ ಕೂಡಿದ್ದು ಯಾವ ಗಮನಾರ್ಹ ಬದಲಾವಣೆಗಳೂ ಜೀವನದಲ್ಲಿ ಕಾಣುತ್ತಿರಲಿಲ್ಲ. ನಾನಂದೆ ಅಲ್ಲಾ ಶೀಲಾ, ನಿನಗಿನ್ನೂ ವಯಸ್ಸು ನಲವತ್ತು, you are still young ಬದುಕಿನಲ್ಲಿ ಸಾಧಿಸಲಿಕ್ಕೆ ಬೇಕಷ್ಟು ಇದೆ ಎಂದು ಅವಳಲ್ಲಿ ಹುರುಪು ತುಂಬಲು ಪ್ರಯತ್ನಿಸಿದೆ.
ಆಕೆಗೆ ಇರುವುದು ಒಬ್ಬಳೇ ಮಗಳು. ಗಂಡ ಗಂಡ ಹೆಂಡಿರಿಬ್ಬರೂ ದುಡಿಯುತ್ತಾರೆ. ಮನೆಯಿದೆ. ಕಾರಿದೆ. ಇಷ್ಟೆಲ್ಲಾ ಇದ್ದೂ ಏನೂ ಇಲ್ಲ, ಖಾಲಿ ಖಾಲಿ ಭಾವನೆ ಆಕೆಗೆ. ಚಾಟ್ ಮಾಡುತ್ತಾ ನಾನು ಕೆಲವೂಂದು ಬ್ಲಾಗ್ ಗಳನ್ನೂ ನೋಡುತ್ತಿದ್ದಾಗ ಮಧ್ಯ ವಯಸ್ಸಿನ ಪಾಶ್ಚಾತ್ಯ ಪತಿ ಪತ್ನಿಯರ ಬ್ಲಾಗ್ ಕಣ್ಣಿಗೆ ಬಿತ್ತು. ಅವರಿಬ್ಬರೂ ಪ್ರವಾಸ ಮತ್ತು ವಿಶ್ವ ನೋಡುವ ಹವ್ಯಾಸದವರು ಎಂದು ಕಾಣುತ್ತಿತ್ತು. ಸೈಟ್ ನಲ್ಲಿ ಬಹಳಷ್ಟು ಚಿತ್ರಗಳನ್ನೂ ಹಾಕಿದ್ದರು. ಇಬ್ಬರೂ ಚೆನ್ನಾಗಿ ಸುಂದರವಾಗಿ ಸಂತೋಷದಿಂದ ಬದುಕುತ್ತಿದ್ದಾರೆ ಎಂದು ನನಗನ್ನಿಸಿತು. ಚಾಟ್ ಮಾಡುತ್ತಲೇ ಶೀಲಳಿಗೆ ಅವರ ಸೈಟ್ ನ URL ಕೊಟ್ಟು ಹೇಗನ್ನಿಸಿತು ಹೇಳು ಎಂದೆ. ಸ್ವಲ್ಪ ಸಮಯ ದ ನಂತರ ಆಕೆ ಹೇಳಿದಳು, ತುಂಬಾ ಚೆನ್ನಾಗಿದೆ ಅಬ್ದುಲ್. ತಸ್ವೀರ್ ದೇಖ್ ಕರ್ ದಿಲ್ ಗಾರ್ಡನ್, ಗಾರ್ಡನ್ ಬನ್ ಗಯಿ (ಚಿತ್ರಗಳನ್ನು ನೋಡಿ ಮನಸ್ಸು ಉದ್ಯಾವನವಾಯಿತು) ಎಂದು ವರ್ಣಿಸಿದಳು. ಹಾಗಾದರೆ ಆ ಉದ್ಯಾವನದಲ್ಲಿ ಈಗಲೇ ಹೂಗಳನ್ನು ನೆಡು ಎಂದು ಉಪದೇಶಿಸಿದಾಗ ನಕ್ಕಳು.
ಬದುಕಿನಲ್ಲಿ boredom ಬರುವುದು ಸಹಜವೇ. ನಾವು ಬದುಕುವ ರೀತಿಯೇ ಹಾಗಲ್ಲವೇ? ನಾವು ನಮಗಾಗಿ ಬದುಕುವುದಿಲ್ಲ, ಬದಲಿಗೆ ನೆರೆಯವರನ್ನು ನೋಡಿ ಆ ರೀತಿ ಬದುಕಲು ನೋಡುತ್ತೇವೆ. ಅವರಲ್ಲಿ, ಇದಿದೆ, ಅದಿದೆ ಎಂದು ಇಲ್ಲದವರ ಕಡೆ ಕಣ್ಣು ಹೊರಳಿಸಿ ನೋಡಿ ಸಂತಸ ಪಡದೆ ಹಾಸಿಗೆಗಿಂತ ಉದ್ದ ಕಾಲು ಚಾಚಲು ನೋಡುತ್ತೇವೆ. ಈ ಪ್ರವೃತ್ತಿಯನ್ನು ಹೊರಗೆಸೆದು ನಮ್ಮಲ್ಲಿರುವುದನ್ನು ನೋಡಿ ತೃಪ್ತಿ ಪಟ್ಟುಕೊಂಡು, ಸಾಧ್ಯವಾದರೆ ಇತರರಿಗೂ ಸಹಾಯ ಮಾಡಿ ಅವರ ಮುಖದಲ್ಲಿ ಮೂಡುವ ಮಂದಹಾಸವನ್ನು ಕಂಡು ಆನಂದ ಪಡಬಾರದೆ?
http://touristblobs.wordpress.com/2009/12/09/way-out-west-in-oz/
ಕಪ್ಪು ಹುಲಿಯ ಮೇವು
ದೈವ ಭಕ್ತಿ
ಒಂದು ಬ್ಲಾಗ್ ಪೋಸ್ಟ್ ನಲ್ಲಿ ಎರಡು ರೀತಿಯ ಧಾರ್ಮಿಕ ಪ್ರವಚನ ಅಥವಾ ಉಪದೇಶಕರ ಬಗ್ಗೆ ಚರ್ಚೆ ಇತ್ತು. ಸಂಗೀತ ಕಾರ್ಯಕ್ರಮ ನಡೆಯುತ್ತಿದ್ದ ಸ್ಥಳದಲ್ಲಿ ಕ್ರೈಸ್ತ ಉಪದೇಶಕನೊಬ್ಬ ” turn or burn ” ಎಂದು ಬರೆದಿದ್ದ ಭಿತ್ತಿ ಪತ್ರ ಹಿಡಿದು ಜನರನ್ನು ಪಾಪದಿಂದ ವಿಮೋಚಿತರಾಗಲು ಉತ್ತೇಜಿಸುತ್ತಿದ್ದ. ಆತನ ಗೆಳೆಯ ಬೈಬಲ್ ಗ್ರಂಥವನ್ನು ಹಿಡಿದುಕೊಂಡು ಒಬ್ಬರೊಂದಿಗೆ ವಾದ ಮಾಡುತ್ತಿದ್ದ. ನೆರೆದಿದ್ದ ಹಲವು ಜನ ಇವರಿಗೆ ಬೆಂಬಲ ಕೊಡುತ್ತಿದ್ದರು. ಮತ್ತೊಂದು ಕಡೆ ಮತ್ತೊಂದು ಗುಂಪು ಧರ್ಮ ಪ್ರಚಾರ ಮಾಡುತ್ತಿತ್ತು; ಭಕ್ತಿ ಗೀತೆಗಳನ್ನು ಹಾಡುವ ಮೂಲಕ. ಇಲ್ಲಿ ಪ್ರಶ್ನೆ ಏನೆಂದರೆ ಒಂದು ಕಡೆ “turn or burn” ಎಂದರೆ “ಭಕ್ತಿ ಇಡು ಅಥವಾ ನರಕದಲ್ಲಿ ಬೇಯಿ” ಎಂದು; ಈ ರೀತಿ ಜನರಲ್ಲಿ ಭಯ ಹುಟ್ಟಿಸುವ ಪ್ರವಚನ ಫಲಿತಾಂಶವನ್ನು ಕೊಡಬಲ್ಲುದೆ ಎಂದು. ಕೆಲವರ ಪ್ರಕಾರ ಇದು ಸರಿ ಏಕೆಂದರೆ ಜನರ ಗಮನ ಶಿಕ್ಷೆ ಕಡೆ ಹರಿಸದಿದ್ದರೆ ಅವರಿಗೆ ಭಕ್ತಿ ಮೂಡುವುದಿಲ್ಲ ಮತ್ತು ಪಾಪಗಳನ್ನು ಮಾಡಲು ಹೇಸುವುದಿಲ್ಲ ಎಂದು. ನನ್ನ ಪ್ರಕಾರ ದೇವರ ಶಿಕ್ಷೆ ಜೊತೆಗೆ ಅವನ ಕಾರುಣ್ಯವನ್ನೂ ಕೊಂಡಾಡಿ ಜನರನ್ನು ಧಾರ್ಮಿಕತೆ ಕಡೆ ಎಳೆಯಬೇಕು. ಮತ್ತು ಇಂಥ ಸಂದೇಶಗಳನ್ನು ಬೀದಿಯಲ್ಲಿ ಮಾಡುವುದು ಅಷ್ಟೇನೂ ಸಮಂಜಸ ಎನ್ನಿಸುವುದಿಲ್ಲ ಮತ್ತು ಅಂಥ ಪ್ರಯತ್ನಗಳಿಗೆ ಜನರ ಪ್ರೋತ್ಸಾಹವೂ ಸಿಗಲಿಕ್ಕಿಲ್ಲ. ಮೇಲೆ ಹೇಳಿದ ಘಟನೆ ಅಮೆರಿಕೆಯಲ್ಲಿ ನಡೆದದ್ದು.
ತಲೆ ಕಡಿಯುವ ಶಿಕ್ಷೆ
ಒಂದು ಸುಂದರ ಚಳಿಗಾಲದ ಮುಂಜಾವನ್ನು ಆಸ್ವಾದಿಸುತ್ತಾ ಕಂಪೆನಿಯ ಕೆಲಸದ ಮೇರೆಗೆ ಬ್ಯಾಂಕ್ ಗೆ ಹೊರಟೆ. ಕಛೇರಿಯಿಂದ ಅರ್ಧ ಘಂಟೆಯ ಡ್ರೈವ್. ನಗರದ ಮಧ್ಯ ಭಾಗದಿಂದ ಜೆಡ್ಡಾ ನಗರವನ್ನು ಇಬ್ಭಾಗವಾಗಿ ಭೇಧಿಸುವ ಮದೀನ ರಸ್ತೆಗೆ ಸಿಗ್ನಲ್ ನ ಹಾವಳಿಯಿಲ್ಲ. ಸುಮಾರು ೨೫ ಕಿಲೋಮೀಟರು ವರೆಗೆ ಏಕ ರಸ್ತೆ. ರಸ್ತೆಯ ಮಧ್ಯ ಭಾಗದಲ್ಲಿ ಖರ್ಜೂರದ ಮರಗಳು, ಭರ್ರೋ ಎಂದು ಘಂಟೆಗೆ ೧೨೦ ಕ್ಕೂ ಹೆಚ್ಚು ಕಿಲೋಮೀಟರ್ ವೇಗದಲ್ಲಿ ಕ್ಷಿಪಣಿಗಳಂತೆ ತೂರಿಕೊಂಡು ಹೋಗುವ ಕಾರುಗಳು. ಬ್ಯಾಂಕ್ ಸಮೀಪಿಸುತ್ತಿದ್ದಂತೆ ಹತ್ತಿರದ ಜುಫ್ಫಾಲಿ ಮಸೀದಿಯ ವಿಶಾಲವಾದ ಆವರಣದ ಬಳಿ ಒಂದಿಷ್ಟು ಚಟುವಟಿಕೆಗಳು ಕಂಡುಬಂದವು. ಕೃತಕ ಸರೋವರದ ದಡದಲ್ಲಿ ಕಟ್ಟಿದ ಜುಫ್ಫಾಲಿ ಮಸೀದಿ ತುಂಬಾ ಸುಂದರ. ಪುಟ್ಟ, ಪುಟ್ಟ ಹತ್ತಾರು ಗುಮ್ಮಟಗಳ ನಡುವೆ ಆಗಸಕ್ಕೆ ಏಕದೇವೋಪಾಸನೆಯನ್ನು ಮುಗಿಲಿಗೆ ಮುಟ್ಟಿಸುವ ಕಾತುರದಲ್ಲಿ ತುದಿಗಾಲಿನಲ್ಲಿ ನಿಂತ ಮಿನಾರ್ (ಮಸೀದಿಯ ಸ್ತಂಭ ಗೋಪುರ). ಮಸೀದಿಯ ಆವರಣದಲ್ಲಿ ನೂರಾರು ಜನ ಜಮಾಯಿಸಿದ್ದರು, ಒಂದು ಕಂಬಕ್ಕೆ ಧ್ವನಿ ವರ್ಧಕಗಳನ್ನು ಕಟ್ಟಿದ್ದರು, ಶಸ್ತ್ರಧಾರಿ ಪೋಲೀಸರ ಗಸ್ತು, ನೀರಿನ ಟ್ಯಾಂಕರ್ ಹೀಗೆ ಒಂದು “eerie” ಚಟುವಟಿಕೆ, ಏರ್ಪಾಡು ಕಾಣಲು ಸಿಕ್ಕಿತು. ಕೌತುಕದಿಂದ ಕಾರನ್ನು ನಿಲ್ಲಿಸಿ ಏನೆಂದು ವಿಚಾರಿಸಿದಾಗ ತಲೆ ಕಡಿಯುವ ಪ್ರೋಗ್ರಾಮ್ ಇದೆ ಎಂದು ಒಬ್ಬ ಹೇಳಿದ. ಇದನ್ನು ಕೇಳಿ ನನ್ನ ಮೈ ನಡುಗಿತು. ಹೆಂಡತಿಗೆ ಫೋನ್ ಮಾಡಿ ಇದನ್ನು ಹೇಳಿದಾಗ ಅವಳು, ಮೊದಲು ಅಲ್ಲಿಂದ ಜಾಗ ಖಾಲಿ ಮಾಡಿ, ಮೊದಲೇ ಪುಕ್ಕರು ನೀವು, ಅದನ್ನು ನೋಡಿ ಹೆದರಿ ಬಂದರೆ ರಾತ್ರಿ ಪೂರ್ತಿ ನಿಮ್ಮನ್ನು ಕಾಯುತ್ತಾ ಕೂರಲು ನನ್ನಿಂದ ಸಾಧ್ಯ ಇಲ್ಲ ಎಂದು ಹೆದರಿಸಿದಾಗ ಈಕೆ ಹೇಳೋದೂ ಸರಿ ಅಮಾವಾಸ್ಯೆಗೋ ಹುಣ್ಣಿಮೆಗೋ ಒಮ್ಮೆ ಇಂಥ ಒಳ್ಳೆ ಮಾತನಾಡುತ್ತಾಳೆ ಎಂದು ಮನದಲ್ಲೇ ವಂದಿಸಿ ಇನ್ನು ಇಲ್ಲಿ ನಿಲ್ಲುವುದು ಬೇಡ ಎಂದು ಕೂಡಲೇ ಅಲ್ಲಿಂದ ಕಾಲನ್ನು ಕಿತ್ತೆ. ಇಷ್ಟು ವರ್ಷ ಸೌದಿ ಅರೇಬಿಯದಲ್ಲಿ ಇದ್ದರೂ ನಾನು ಎಂದೂ ಇಂಥ ಸನ್ನಿವೇಶವನ್ನು ಎದುರಿಸಿರಲಿಲ್ಲ. ಕೊಲೆಗಡುಕರಿಗೆ, ಅತ್ಯಾಚಾರಿಗಳಿಗೆ, ಮಾದಕ ವಸ್ತು ಮಾರುವವರಿಗೆ ತಲೆ ಕಡಿಯುವ ಶಿಕ್ಷೆ ಎಂದು ಗೊತ್ತಿತ್ತು. ಮತ್ತು ತಲೆಕಡಿಯುವುದನ್ನು ನೋಡಲು ಹೋಗಿ ಒಂದಿಷ್ಟು ದಿನ ನಿದ್ದೆ ಮಾಡಲಾಗದೆ ಒದ್ದಾಡಿದ ಜನರ ಕತೆ ಸಹ ಕೇಳಿದ್ದೆ. ಆದರೆ ಧುತ್ತನೆ ಇಂಥ ಸನ್ನಿವೇಶ ನನಗೆದುರಾಗುತ್ತದೆ ಎಂದು ನನಗೆ ತಿಳಿದಿರಲಿಲ್ಲ. ನನ್ನ ಕೆಲಸ ಮುಗಿಸಿ ಅದೇ ದಾರಿಯಲ್ಲಿ ಮರಳಿ ಮಸೀದಿ ದಾಟಿ ನೇರವಾಗಿ ನೋಡಲಾಗದೆ ಕದ್ದು ನೋಡಿದಾಗ ಇನ್ನೂ ಅಪರಾಧಿಯನ್ನು ತಂದಿರಲಿಲ್ಲ. ಒಂದಿಷ್ಟು ದೂರ ಸಾಗುತ್ತಿದ್ದಂತೆ ನಾಲ್ಕಾರು ಪೋಲಿಸ್ ಕಾರುಗಳು ಮತ್ತು ಅಪರಾಧಿಯನ್ನು ಹೊತ್ತ ಜೈಲಿನ ವ್ಯಾನ್ ಯಾತನಾಮಯವಾಗಿ ಸೈರನ್ ಬಾರಿಸುತ್ತಾ ವೇಗವಾಗಿ ಮಸೀದಿಯ ಕಡೆ ಹೋಗುತ್ತಿದ್ದವು.
ಆಫೀಸ್ ತಲುಪಿ ಮಿತ್ರರಿಗೆ ಈ ವಿಷಯ ಹೇಳಿ ಅಲ್ಲಾ ನೀರಿನ ಟ್ಯಾಂಕರ್ಗೆ ಅಲ್ಲೇನು ಕೆಲಸ ಎಂದು ಕೇಳಿದಾಗ ಸಿಕ್ಕಿದ ಉತ್ತರ, ತಲೆಕಡಿದ ನಂತರ ಹರಿಯುವ ರಕ್ತ ತೊಳೆಯಳಂತೆ. ಅಯ್ಯೋ, ಇದನ್ನು ಕೇಳಿ ತಲೆ ಗಿರ್ರನೆ ಸುತ್ತಿ ಕೆಳಕ್ಕುರುಳುವುದೊಂದು ಬಾಕಿ. ಮಾನವ ಹಕ್ಕುಗಳ, ಇನ್ನಿತರ ಮುಂದುವರಿದ ರಾಷ್ಟ್ರಗಳ ಮನವಿಯನ್ನು ಕಿವಿಗೆ ಹಾಕಿ ಕೊಳ್ಳದೆ ಮೇಲೆ ಹೇಳಿದ ಅಪರಾಧ ಮಾಡಿದವರಿಗೆ ತಲೆ ಕಡಿದು ಶಿಕ್ಷೆ ನೀಡುವ ಸೌದಿ ಅರೇಬಿಯಾದ ವ್ಯವಸ್ಥೆ ಅಮಾನವೀಯವಾಗಿ ಕಂಡರೂ ತಮ್ಮ ನಿರ್ದಯೀ, ಅಮಾನುಷ ಕೆಲಸಗಳಿಂದ, ಕರುಣೆ ತೋರೆಂದು ಬೇಡುವ ಜನರ ರೋದನ ಲೆಕ್ಕಿಸದೆ ಕೊಲ್ಲುವ, ಅತ್ಯಾಚಾರ ಎಸಗುವ, ಯುವಕರನ್ನ ಮಧ್ಯ ವ್ಯಸನಿಗಳನ್ನಾಗಿ ಮಾಡುವ, ಸಮಾಜವನ್ನು ಕಂಗೆಡಿಸುವ ಕಿಡಿಗೇಡಿಗಳಿಗೆ ಈ ಶಿಕ್ಷೆ ಕೊಡಬೇಕಾದ್ದೆ. ಹಾಗೂ ಇತರರಿಗೂ ಪಾಠವಾಗಲಿ ಎಂದು ಇಂಥ ಶಿಕ್ಷೆಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಕೊಟ್ಟು ಭಾವಿ ಪುಂಡರಿಗೆ ಎಚ್ಚರಿಕೆಯನ್ನೂ ಸಹ ಕೊಟ್ಟು ಸಮಾಜದಲ್ಲಿ ಒಂದಿಷ್ಟು ನೆಮ್ಮದಿ ಇರುವಂತೆ ಮಾಡುತ್ತದೆ ಈ ಸಾರ್ವಜನಿಕ ಶಿಕ್ಷೆ. ಕಳೆದ ವರ್ಷ ಓರ್ವ ಅಪ್ರಾಪ್ತ ಬಾಲಕಿಯನ್ನು ನಾಲ್ವರು ಬಾಂಗ್ಲಾದೇಶದ ತರುಣರು ಅತ್ಯಾಚಾರ ಎಸಗಿ ಓಡಿದ್ದರು. ಅಷ್ಟು ಮಾತ್ರವಲ್ಲ ತಾವು ಮಾಡಿದ ಮಹತ್ಕಾರ್ಯವನ್ನು ಮೊಬೈಲ್ ಕಮೆರದಲ್ಲಿ ಸೆರೆ ಹಿಡಿದು ಸ್ನೇಹಿತರೊಂದಿಗೆ ಹಂಚಿಕೊಂಡು ಹಿಗ್ಗಿದರು. ಈ ಪಾತಕಿಗಳನ್ನು ಸೆರೆಹಿಡಿಯಲು ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಅವರನ್ನು ಬಂಧಿಸುವಲ್ಲಿ ಯಶಸ್ವಿ ಆದರು. ನ್ಯಾಯಾಲಯ ಅವರು ಮಾಡಿದ ಕೃತ್ಯವನ್ನು ಖಾತ್ರಿ ಪಡಿಸಿಕೊಂಡು ಅವರ ತಲೆ ಕಡಿಯದೇ ಅತ್ಯಧಿಕ ಜನಸಂದಣಿ ಇರುವ ರಾಜಧಾನಿ ರಿಯಾದ್ ನಗರದಲ್ಲಿ ಅವರನ್ನು ನೇಣು ಹಾಕಲು ನ್ಯಾಯಾಲಯ ತೀರ್ಪು ನೀಡಿತು. ನೇಣು ಹಾಕಿದ ನಂತರ ದಿನ ಪೂರ್ತಿ ಅವರ ಶರೀರಗಳನ್ನು ನೇತಾಡಲು ಪೊಲೀಸರು ಬಿಟ್ಟಿದ್ದರು. ಕೆಲ ವರ್ಷಗಳ ಹಿಂದೆ ಪೋಲೀಸರ ತಂಡವೊಂದು ಬ್ಯಾಂಕ್ ಲೂಟಿ ಮಾಡಿ ಸಿಕ್ಕಿಹಾಕಿ ಕೊಂಡಿತು. ದರೋಡೆ ಆದ್ದರಿಂದ ಕೈ ಕಡಿಯುವ ಶಿಕ್ಷೆ. ಅಪರಾಧಿಗಳು ಸರಕಾರೀ ಸೇವಕರೂ, ಪೊಲೀಸರೂ ಆಗಿದ್ದರಿಂದ ನ್ಯಾಯಾಲಯ ಸೌದಿ ದೊರೆಗೆ ತೀರ್ಮಾನ ಮಾಡಲು ಬಿಟ್ಟಿತು. ಸಮಾಜವನ್ನು, ಸಮಾಜದ ಆಸ್ತಿಪಾಸ್ತಿಗಳನ್ನು ಕಾಯಲು ನಿಯುಕ್ತ ಗೊಂಡವರೇ ಇಂಥ ಕೆಲಸಕ್ಕೆ ಇಳಿದರೆ ಜನರಿಗೆ ವ್ಯವಸ್ಥೆಯ ಮೇಲಿನ ನಂಬಿಕೆ ಹೋಗಿಬಿಡುತ್ತದೆ ಎಂದು ಹೇಳಿದ ದೊರೆ ಸೆರೆಬಿದ್ದವರ ತಲೆಗಳನ್ನು ಕಡಿಯಲು ತೀರ್ಪು ಕೊಟ್ಟರು. ಈ ರೀತಿಯ ಶಿಕ್ಷೆ ಇರುವುದರಿಂದ ಇಲ್ಲಿ ಅಪರಾಧಗಳು ಕಡಿಮೆ ಎಂದು ಹೇಳಬಹುದು.

