ಇಂದು ಸಂಜೆ ೫.೪೧ ಕ್ಕೆ ರಿಯಾದ್ ನಗರದ ಮೇಲೆ ಕ್ಷಿಪಣಿ ಆಕ್ರಮಣ. ಕಚೇರಿ ಹೊರಗೆ ಫೋನಿನಲ್ಲಿ ಮಾತನಾಡ್ತಾ ಇದ್ದಾಗ ಢಮ್ ಢಮ್ ಎಂದು ಎರಡು ಸದ್ದುಗಳು. ಸದ್ದೇನೆಂದು ಒಬ್ಬರು ಕೇಳಿದಾಗ ಗುಡುಗು ಎಂದೆ. ಯಾಕೆಂದರೆ ಮೂರ್ನಾಲ್ಕು ದಿನಗಳಿಂದ ಸಂಜೆ ಮೋಡ ಕವಿದ ವಾತಾವರಣ, ಮಿಂಚು ಗುಡುಗು ಒಂದಿಷ್ಟು ಮಳೆ ಆಗ್ತಾ ಇತ್ತು ರಿಯಾದ್ನಲ್ಲಿ. ಹಾಗಾಗಿ ನಾನು ಈ ಎರಡು ಶಬ್ದಗಳನ್ನು ಗುಡುಗು ಎಂದೇ ಭಾವಿಸಿದ್ದೆ. ಕೆಲವೇ ಸೆಕೆಂಡುಗಳಲ್ಲಿ ಮತ್ತೊಂದು ಭಾರೀ ಶಬ್ದ. ಈ ಶಬ್ದ ಗುಡುಗಲ್ಲ ಎಂದು ಕೂಡಲೇ ಟ್ವಿಟರ್ ಮೊರೆ ಹೋದೆ. ಬಂದವು ಟ್ವೀಟ್ ಗಳು. ನನ್ನ ಬಿಲ್ಡಿಂಗ್ ಅಲುಗಾಡುವಂತೆ ಮಾಡಿದ ಶಬ್ದವೇನು ಅಂತ ಒಬ್ಬ ಟ್ವೀಟ್ಸಿದ್ರೆ, ಮತ್ತೊಬ್ಬ, wtf, ವಾಟ್ಸ್ ಹ್ಯಾಪನಿಂಗ್ ಎಂದು ಉಲಿಯುತ್ತಿದ್ದ. ಇಷ್ಟು ಹೊತ್ತಿಗೆ ಆಕಾಶದಲ್ಲಿ ಸುರುಳಿ ಸುರುಳಿಯಾಗಿ ಹೊಗೆ ಕಾಣಿಸಿ ಕೊಂಡಿತು. ರಿಯಾದ್ ನಗರದ ಮೇಲಿನ ಕ್ಷಿಪಣಿ ದಾಳಿಯನ್ನ ಯಶಸ್ವಿಯಾಗಿ ತಡೆದು, ಕ್ಷಿಪಣಿಗಳನ್ನು ಹೊಡೆದುರುಳಿಸಲಾಯಿತೆಂದು ಸುದ್ದಿ ಹೊರಗೆ ಬಂತು.
ತೀರಾ ಇತ್ತೀಚಿನವರೆಗೂ ಸೌದಿ ಸುರಕ್ಷಿತ ದೇಶ. ಯೆಮನ್ ದೇಶದ ಮೇಲೆ ಸೌದಿ ಅರೇಬಿಯಾ ಯುದ್ಧ ಸಾರಿದಂದಿನಿಂದ ಆಗಾಗ ಆತಂಕದ ಕ್ಷಣಗಳು. ಕ್ಷಿಪಣಿ ಉಡುಗೊರೆಗಳು. ಮುಯ್ಯಿಗೆ ಮುಯ್ಯಿ ಪ್ರತಿ ಆಕ್ರಮಣಗಳು.