ದಿಢೀರ್ ಎಂದು ನೆನಪೊಂದು ನುಗ್ಗಿ ಬಂತು.ಹಳೇ ಕಾಲದ ಮೆಲುಕು. ನಾನು ಏಳನೇ ತರಗತಿಯಲ್ಲಿ ಇದ್ದಾಗಿನ ಕಥೆ. ಏಳನೇ ತರಗತಿಗೆ ಆಗ ಪಬ್ಲಿಕ್ ಪರೀಕ್ಷೆ. ಕಷ್ಟ ಪಟ್ಟು ಓದಬೇಕು, ಇಲ್ಲದಿದ್ದರೆ ಒಳ್ಳೆ ಹೈ ಸ್ಕೂಲ್ ನಲ್ಲಿ ಸೀಟ್ ಸಿಗೋಲ್ಲ. ಅಷ್ಟೇ ಅಲ್ಲ ಪರೀಕ್ಷೆಯ ಪೇಪರನ್ನು ಜಿಲ್ಲಾ ಕೇಂದ್ರದಲ್ಲಿಕರೆಕ್ಷನ್ ಮಾಡೋದು. ಅಲ್ಲಿ ವಶೀಲಿ ಬಾಜಿ ಏನೂ ನಡೆಯೋಲ್ಲ. ಹಾಗೆ ಹೀಗೆ ಅಂತ ಹತ್ತು ಹಲವು ಎಚ್ಚರಿಕೆಗಳು, ಗುಮಾನಿಗಳು.
ಓದಿನಲ್ಲಿ ನಾನು ಸಾಕಷ್ಟು ಮುಂದೆ ಇದ್ದರೂ ಒಳಗೊಳಗೇ ಪುಕ ಪುಕ. ಪರೀಕ್ಷೆ ಹೇಗೋ ಏನೋ ಅಂತ. ಅಂತೂ ಪರೀಕ್ಷೆ ಬಂತು, ಚೆನ್ನಾಗಿ ಬರೆದಿದ್ದಾಯಿತು. ಕಾತುರದ ದಿನವೂ ಬಂದೇ ಬಿಟ್ಟಿತು. ಬಂಡವಾಳ ಬಯಲಾಗೋ ದಿನ.
ನೋಟೀಸ್ ಬೋರ್ಡಿನಲ್ಲಿ ನಾನು ಪಾಸ್ ಎಂದು ಕಂಡಿದ್ದೇ ಕುಣಿಯುತ್ತಾ ಮನೆಗೆ ಓಡಿದ್ದೆ. ಸ್ವಲ್ಪ ದಿನಗಳ ನಂತರ ಮಾರ್ಕ್ಸ್ ಕಾರ್ಡ್ ಬಂತು.
ಕನ್ನಡ ೧೦೪ ೧೫೦ ಕ್ಕೆ
ಇಂಗ್ಲೀಶ್ ೭೮ ೧೦೦ ಕ್ಕೆ
ಬಾಕಿ ವಿಷಯಗಳಲ್ಲಿ ಎಷ್ಟು ಎಂದು ನೆನಪಿಲ್ಲ. ಆದರೂ ಸುಮಾರಾದ ಮಾರ್ಕ್ಸ್ಗಳು ಬಂದಿದ್ದವು. ಈಗ ಈ ಅಂಕ ಪಟ್ಟಿಯನ್ನು ನನ್ನ ತಂದೆ ತಾಯಿಗಿಂತಲೂ ಹೆಚ್ಚಾಗಿ ಮಂಗಳೂರಿನಲ್ಲಿದ್ದ ಚಿಕ್ಕಮ್ಮನಿಗೆ ತಿಳಿಸುವಾಸೆ. ನಾನು ನನ್ನ ಚಿಕ್ಕಮ್ಮ ತುಂಬಾ ಕ್ಲೋಸ್. ಇಬ್ಬರೂ ಜೊತೆಯಾಗಿ ಸುಧಾ, ಪ್ರಜಾಮತ ಓದುತ್ತಿದ್ದೆವು. ಕಾದಂಬರಿಯಲ್ಲಿ ಬರೋ ಸನ್ನಿವೇಶಗಳನ್ನ ಊಹಿಸಿ ನಗುತ್ತಿದ್ದೆವು. ಮುಂದಿನ ಧಾರಾವಾಹಿಯಲ್ಲಿ ಏನಿರಬಹುದು ಎಂದು ಒಟ್ಟಿಗೆ ಊಹಿಸುತ್ತಿದ್ದೆವು. ಸರಿ. ಚಿಕ್ಕಮ್ಮನಿಗೆ ಪತ್ರ ಬರೆದು ತಿಳಿಸಲು ಓಡಿ ಹೋಗಿ ಅಲ್ಲೇ ಇದ್ದ ಶೆಟ್ಟಿಯ ಗೂಡಂಗಡಿಯಿಂದ ಇನ್ಲ್ಯಾಂಡ್ ಕವರ್ ತಂದು ಗುಂಡು ಗುಂಡಾಗಿ ಕನ್ನಡದಲ್ಲಿ ಬರೆದೆ ಪತ್ರವನ್ನ, ನನಗೆ ಸಿಕ್ಕ ಎಲ್ಲಾ ಅಂಕಗಳನ್ನೂ ಸೇರಿಸಿ. ಪೋಸ್ಟ್ ಮಾಡಿದ್ದಾಯಿತು…. ಇನ್ನು ಉತ್ತರದ ನಿರೀಕ್ಷೆಯಲ್ಲಿ.
ನಾಲ್ಕೈದು ದಿನಗಳ ನಂತರ ಚಿಕ್ಕಮ್ಮನಿಂದ ಬರಬಹುದಾದ ಉತ್ತರದ ನಿರೀಕ್ಷೆಯಲ್ಲಿ, ಒಳಗೊಳಗೇ ಖುಷಿ ಪಡ್ತಾ ಮನೆಗೆ ಬಂದಾಗ ನನ್ನ ಮಾವ, ಅಜ್ಜಿ, ಅಮ್ಮ ಎಲ್ಲಾ ನಾನು ಪತ್ರದಲ್ಲಿ ಬರೆದಿದ್ದ ವಿಷಯಗಳನ್ನು ಗಟ್ಟಿಯಾಗಿ ನನಗೆ ಕೇಳುವಂತೆ ಹೇಳುತ್ತಿರುವುದನ್ನು ಕೇಳಿ ನನಗೆ ದಂಗು. ಅರೆ, ಪತ್ರ ಬರೆಯುವಾಗ ಯಾರೂ ಇರಲಿಲ್ಲವಲ್ಲ? ಮತ್ಹೇಗೆ ಇವರಿಗೆ ಗೊತ್ತಾಗಿದ್ದು ಇದೆಲ್ಲಾ, ಎಂದು ತಲೆ ಕೆರೆದು ಕೊಳ್ಳುತ್ತಿರುವಾಗ ನನ್ನ ಅಜ್ಜಿ ಹೇಳಿದರು, ಅಲ್ಲವೋ ಪೆದ್ದ, “ಟು” ಅಡ್ರೆಸ್ ಜಾಗದಲ್ಲಿ ಚಿಕ್ಕಮ್ಮನ ಅಡ್ರೆಸ್ ಬರೆಯೋದು ಬಿಟ್ಟು ನಮ್ಮ ಅಡ್ರೆಸ್ ಬರೆದರೆ ಮಂಗಳೂರಿಗೆ ಪತ್ರ ಹೇಗೆ ತಾನೇ ಹೋಗುತ್ತೆ, ನೋಡು, ನೀನು ಮಾಡಿರೋ ಕೆಲಸ ಎಂದು ನನ್ನ ಮುಖಕ್ಕೆ ಪತ್ರ ಹಿಡಿದು ಎಲ್ಲರೊಂದಿಗೆ ಸೇರಿ ಗಹಗಹಿಸಿ ನಕ್ಕಾಗ, ನನಗೆ ಅಳು.
ಒಂದು, ಚಿಕ್ಕಮ್ಮನಿಗೆ ಪತ್ರ ಸೇರಲಿಲ್ಲ.
ಎರಡು. ಕಷ್ಟ ಪಟ್ಟು ಕೂಡಿಟ್ಟ ೨೫ ಪೈಸೆಯೂ ಭಸ್ಮ ಎಂದು.
🙂 🙂 🙂