ಕರ್ನಾಟಕದಲ್ಲಿ ಚುನಾವಣೆಯ ಜ್ವರ ಇಳಿದು, ಮತಗಣನೆಯ ಚಳಿ ಶುರುವಾಗಲಿದೆ. ಆಪ್ತ ಮಿತ್ರನೊಬ್ಬನಿಗೆ ಕುಶಲ ವಿಚಾರಿಸಲು ಫೋನಾಯಿಸಿದಾಗ ಊಟ ಈಗತಾನೆ ಆಯ್ತಪಾ, ವೋಟ್ ಹಾಕೋಕೆ ಹೋಗ್ಬೇಕು ಎಂದು ಚುನಾವಣೆಯ ಮೂಡ್ ಗೆ ತಂದ ಸಂಭಾಷಣೆಯನ್ನು. ಚಿಕ್ಕಂದಿನಿಂದಲೂ ನನಗೆ ರಾಜಕೀಯದ ಹುಚ್ಚು. ಅಪ್ಪ ಪಕ್ಕಾ ಕಾಂಗ್ರೆಸ್ಸಿಗರಾದರೆ ನಾನು ಜನತಾ ಪಕ್ಷ. ಆಗ ಇದ್ದಿದ್ದು ಒಂದೇ ಜನತಾ ಪಕ್ಷ. ಈಗ ಭಾರತೀಯ ಜನತಾ ಪಕ್ಷ, ಕರ್ನಾಟಕ ಜನತಾ ಪಕ್ಷ, ‘ಸೆಕ್ಯೂಲರ್’ ಜನತಾ ಪಕ್ಷ, ಬೈನಾಕ್ಯುಲರ್ ಜನತಾ ಪಕ್ಷ…ಹೀಗೆ ತರಾವರಿ ಪಕ್ಷಗಳು. ಜನರ ಸೇವೆ ಗಾಗಿಯೇ ತಮ್ಮ ಬಾಳನ್ನು ಮುಡಿಪಾಗಿಸಿಕೊಂಡ ಪಕ್ಷಗಳು.
ಚುನಾವಣೆಯ ಬಗ್ಗೆ ಮಾತನ್ನು ಮುಂದುವರೆಸಿದಾಗ ತಿಳಿಯಿತು ಇದು ನನ್ನ ಕಾಲದ ಚುನಾವಣೆಯಲ್ಲ, ಈಗಿನ ಚುನಾವಣೆ ಹೈ ಟೆಕ್ ಚುನಾವಣೆ, ಧ್ವನಿ ವರ್ಧಕ ಉಪಯೋಗಿಸುವಂತಿಲ್ಲವಂತೆ, ಭಿತ್ತಿ ಪತ್ರ ಅಂಟಿಸ ಬಾರದಂತೆ, ಮನಸ್ಸಿಗೆ ತೋಚಿದಂತೆ ಪಾಂಪ್ಲೆಟ್ ಮುದ್ರಿಸಬಾರದಂತೆ, ಮೆರವಣಿಗೆ ಕೂಡದಂತೆ, ಘೋಷಣೆ ಬೇಡವಂತೆ……ಥತ್ತೇರಿ, ಇದೆಂಥಾ ಚುನಾವಣೆ ಎಂದು ಅನ್ನಿಸಿತು. ನನ್ನ ಜಮಾನದ ಚುನಾವಣೆಯೇ ಚೆಂದ. ರಂಗು ರಂಗಿನ ಬ್ಯಾಡ್ಜು, ಅಭ್ಯರ್ಥಿಗಳಿಂದ ಊಟ, ತಿಂಡಿ ವ್ಯವಸ್ಥೆ, ಬೀರು ಬ್ರಾಂದಿ, ಪ್ರಾಸಬದ್ದ ಘೋಷಣೆಗಳು, ಜನತಾ ಪಕ್ಷ ಎತ್ತು ಭಿಕ್ಷ, ಕಾಂಗ್ರೆಸ್ ಪಕ್ಷ ಎತ್ತು ಭಿಕ್ಷ, ಭಾರತ್ ಮಾತಾ ಕೀ ಜೈ, ಎಂದು ಗಂಟಲು ಹರಿದು ಕೊಳ್ಳುವಂತೆ ಕೂಗುತ್ತಿದ್ದದ್ದು, ಅಯ್ಯೋ ಇದೆಲ್ಲಾ ಇಲ್ವೆ ಇಲ್ವಲ್ಲೋ ಎಂದಾಗ ಅವನು, ಅದೇನೂ ಇಲ್ಲ ಕಣೋ ಈಗ, ಹೆಣ ನೋಡಲು ಹೋಗೋ ಥರಾ ಮೌನವಾಗಿ ವೋಟಿಂಗ್ ಮೆಶೀನ್ ಹತ್ರ ನಿಂತು, ಯಾವುದಾದರೂ ಒಂದು ಬಟನ್ ಚುಚ್ಚಿ ಹೊರಬರೋದು ಅಷ್ಟೇ ಎಂದ. ಮೊದಲು ಮತಗಟ್ಟೆ ಬಳಿಯೂ ಕಾರ್ಯಕರ್ತರು. ದೂರದಿಂದ ಹಲ್ಲು ಗಿಂಜುತ್ತಾ, ಕೈಸನ್ನೆಯಿಂದ ತಮ್ಮ ಪಕ್ಷದ ಗುರುತನ್ನು ಜನರಿಗೆ ತೋರಿಸಿ ಎದುರು ಪಕ್ಷದವರ ಕೈಯಲ್ಲಿ ಉಗಿಸಿ ಕೊಂಡು ಹೆ ಹೇ ಎಂದು ಪೆಚ್ಚು ನಗು ನಗೋದು…
ಹೋಯ್ತಾ ಆ ಕಾಲ? ಮಾತಿನ ಮಧ್ಯೆ, ರಾಮನಗರದ ಹತ್ತಿರ ಮಚ್ಚು ತೋರಿಸಿ ವೋಟ್ ಮಾಡಲು ಒಂದು ಪಕ್ಷದವರು ಬೆದರಿಕೆ ಹಾಕುತ್ತಿರುವುದನ್ನು ಟೀವೀ ಲಿ ತೋರಿಸ್ತಾ ಇದ್ದಾರೆ ನೋಡು ಎಂದಾಗ, ಒಹ್, ಸಧ್ಯ ಈ ಸಂಸ್ಕಾರವನ್ನು ನಮ್ಮ ಜನ ಇನ್ನೂ ಜೋಪಾನವಾಗಿ ಇಟ್ಟುಕೊಂಡಿದ್ದಾರೆ ಎಂದು ಸಮಾಧಾನ ಪಡುತ್ತಾ ಮಿತ್ರನಿಗೆ ವಿದಾಯ ಹೇಳಿದೆ.
ನಾನೂ ಮೊನ್ನೆ ಚುನಾವಣೆಗೆ ಮತ ಹಾಕಲಿಕ್ಕೆ ಹೋದಾಗ, ಹಿಂದಿನ ಚುನಾವಣೆಗಳ ಮೆಲುಕು ಹಾಕುತ್ತಿದ್ದೆ.
ಮನೆಮನೆಗೆ ತೆರಳಿ ಪಾಂಪ್ಲೆಟ್ ಕೊಡುವುದು, ಹೆಸರು+ಮತೆಗಟ್ಟೆ ವಿವರ ಬರೆದು ಮನೆಮನೆಗೆ ಹೋಗಿ ಕೊಟ್ಟು ಬರುವುದು, ಪೋಸ್ಟರ್ ಹಚ್ಚುವುದು, ಲೈಟುಕಂಬವೇರಿ ಬ್ಯಾನರ್ ಏರಿಸುವುದು, ನಾಯಕರ ಭಾಷಣ ಆಸಕ್ತಿಯಿಂದ ಕೇಳುವುದು, ಚುನಾವಣೆಯ ದಿನ ಬೆಳಗಿನಿಂದ ಸಂಜೆಯ ತನಕ ಮತೆಗಟ್ಟೆಯ ಒಳಗೋ ಇಲ್ಲವೇ ಹೊರಗೋ ಏನಾದರೂ ಕೆಲಸ ಮಾಡುತ್ತಿರುವುದು – ಮನೆಯಲ್ಲೇ ತಿಂಡಿ-ಊಟ ಮಾಡಿಕೊಂಡು, ಸ್ವಂತದ ಹಣ ಖರ್ಚು ಮಾಡಿಕೊಂಡು, ಅದ್ಯಾವುದೋ ಕಾಣದ ಧ್ಯೇಯಕ್ಕಾಗಿ ಬೆವರು ಸುರಿಸಿ, ಅದರಲ್ಲೇ ಸಾರ್ಥಕತೆ ಕಾಣುವುದು; ಕಡೆಗೆ ಫಲಿತಾಂಶ ಬಂದಾಗ ನಮ್ಮವರಿಗೆ ಡಿಪಾಸಿಟ್ ಕೂಡಾ ಉಳಿಯದ್ದು ನೋಡಿ ದುಃಖ ಪಟ್ಟು ಮತ್ತೆ ನಮ್ಮ ದಿನನಿತ್ಯದ ಕೆಲಸಗಳಿಗೆ ವಾಪಸ್ಸಾಗುವುದು……..ಹೀಗಿತ್ತು ನಮ್ಮ ಚುನಾವಣೆಯ ಕೆಲಸ. ಆದರೆ, ಮುಂದೆ ನಾವು ಯಾರನ್ನು ಗೆಲ್ಲಿಸಬೇಕೆಂದು ಕಷ್ಟಪಟ್ಟಿದ್ದೆವೋ ಅವರು ಗೆದ್ದು ಅಧಿಕಾರ ಹಿಡಿದಾಗ, ಅವರಿಗಿಂತ ಹೆಚ್ಚು ನಾವು ಸಂಭ್ರಮಿಸಿದೆವು, ನಮ್ಮ ಗುರಿ ಸಾಧಿಸಿ ಬಿಟ್ಟೆವೆಂದು; ಆದರೆ, ನಾವು ಕನಸು ಕಂಡ ಆದರ್ಶಗಳನ್ನೆಲ್ಲಾ ಆ ನಾಯಕರು ಮಣ್ಣುಪಾಲು ಮಾಡಿದ್ದು ಕಂಡು, ನಮ್ಮ ಕನಸಿನ ಗೋಪುರವೆಲ್ಲಾ ಮರಳಿನ ಅರಮನೆಯಂತೆ ಕುಸಿಯಿತು! ಇಷ್ಟೆಲ್ಲಾ ಆದಮೇಲೆ ಚುನಾವಣೆಯಲ್ಲಿ ಕೆಲಸ ಮಾಡುವುದು ಸಾಧ್ಯವಿಲ್ಲದ ಮಾತು. ಹೋಗಲಿ ಮತ ನೀಡೋಣವೆಂದರೆ, ನಾನ್ಯಾರಿಗೆ ಮತ ನೀಡಲಿ!? ಬಹಳ ಕಠಿಣವಾದ ಪ್ರಶ್ನೆ, ಆಯ್ಕೆಗಳು ಹೆಚ್ಚೇನಿಲ್ಲ……ಯಾರು ಗೆದ್ದರೂ ಕಡೆಗೆ ಅಧಿಕಾರ ಅವರನ್ನು ಅಲ್ಲಾಡಿಸಿ ಬಿಡುತ್ತದಲ್ಲಾ……ಕರ್ನಾಟಕಕ್ಕೂ ಒಬ್ಬ ನರೇಂದ್ರ ಮೋದಿ, ಒಬ್ಬ ನಿತೀಶ್ ಕುಮಾರ್ ಇದ್ದಿದ್ದರೆ……ಕರ್ನಾಟಕದಲ್ಲೂ ಒಬ್ಬ ಗುಜರಿಲಾಲ್ ನಂದಾ, ಲಾಲ್ ಬಹಾದೂರ್ ಶಾಸ್ತ್ರಿ, ಮೊರಾರ್ಜಿ ದೇಸಾಯಿ, ವಾಜಪೇಯಿ ನಾಯಕರಾಗಿ ಇದ್ದಿದ್ದರೆ…..’ರೆ’ಗಳನ್ನು ಬಿಟ್ಟು ಬೇರೇನು ನಮಗಿಂದು ಉಳಿದಿಲ್ಲ!!
ಚುನಾವಣೆಯಂದು ಮನೆ ಕೆಲಸದವಳು ಕೆಲಸಕ್ಕೆ ಬರಲಿಲ್ಲ. “ಚುನಾವಣೆಗೆ ಮತ ಹಾಕಲಿಕ್ಕೆ ಹೋಗಬೇಕು, ಕೆಲಸಕ್ಕೆ ಬರುವುದಿಲ್ಲ” ಎಂದು ಹಿಂದಿನ ದಿನವೇ ತಿಳಿಸಿದ್ದಳು. ನೆನ್ನೆ ಮತ್ತೆ ಅವಳು ಕೆಲಸಕ್ಕೆ ಬಂದಾಗ, ನನ್ನ ಮನೆಯಾಕೆಯ ಮೊದಲ ಪ್ರಶ್ನೆ “ಯಾರಿಗೆ ಓಟು ಹಾಕಿದ್ರಿ”? ಅದಕ್ಕವಳು, “ಕಾಂಗ್ರೆಸ್ಸು”. ನನ್ನ ಮನೆಯಾಕೆಯ ಪ್ರಶ್ನೆ, “ಯಾಕೆ ಕಾಂಗ್ರೆಸ್ಸು, ದಳ/ಬಿಜೆಪಿ ಏಕಿಲ್ಲ”? ಅವಳು ಉತ್ತರಿಸಲಿಲ್ಲ. ಸ್ವಲ್ಪ ಸಮಯದ ನಂತರ ನನ್ನ ಮನೆಯವಳು, “ಕಾಂಗ್ರೆಸ್ಸಿನವರೇನಾದರೂ ದುಡ್ಡು ಕೊಟ್ಟರಾ”? ಕೂಡಲೇ ಆಕೆ, “ಹೌದು ಅಮ್ಮ, ಒಂದು ಓಟಿಗೆ ನೂರು ರೂಪಾಯೊ ಕೊಟ್ಟರು” ಎಂದು ಸಂತೋಷದಿಂದ ಹೇಳಿದಳು. ಜೊತೆಗೆ, “ನಮ್ಮ ಎರಿಯಾದಲ್ಲಿ ಕಾಂಗ್ರೆಸ್ಸಿನವರು ಮಾತ್ರ ಕೊಟ್ಟರು. ಪಕ್ಕದ ಏರಿಯಾದಲ್ಲಿ, ಕಾಂಗ್ರೆಸ್ಸು, ಬಿಜೆಪಿ, ದಳ ಎಲ್ಲರೂ ಕೊಟ್ಟರಂತೆ! ಸೀರೆ, ವಾಚೂ ಕೊಟ್ಟಿದ್ದಾರೆ. ನಮಗೆ ಸಿಕ್ಕಿದ್ದು ಬರೇ ಐನೂರು”!!
ಒಟ್ಟಿನಲ್ಲಿ ಚುನಾವಣೆಯಲ್ಲಿ ಗೆಲ್ಲುವುದು ಹಣದ ಆಟವೇ. ಆ ಮನೆ ಕೆಲಸದವಳಿಗೆ, ಯಾರು ಮುಖ್ಯಮಂತ್ರಿಯಾದರೇನು, ಯಾರು ಸರಕಾರ ಮಾಡಿದರೇನು? ಅವಳಿಗೆ ಒಂದು ತಿಂಗಳು ಒಂದು ಮನೆಯಲ್ಲಿ ಕೆಲಸ ಮಾಡಿದಾಗ ಸಿಗುವ ಸಂಬಳ, ಒಂದು ದಿನದಲ್ಲೇ, ಅದೂ ಯಾವುದೇ ಕೆಲಸ ಮಾಡದೆ ಸಿಗುತ್ತದೆಂದರೆ, ಅದಕ್ಕಿಂತ ಲಾಭಕರವಾದದ್ದು ಏನಿದೆ? ವರ್ಷಕ್ಕೊಂದು ಚುನಾವಣೆ ಬರಲಿ ಎನ್ನುತ್ತಾಳಾಕೆ!!
ಏನೇ ಆಗಲಿ. ಒಟ್ಟಿನಲ್ಲಿ, ನಮ್ಮ ನಾಯಕ ಶಿಖಾಮಣಿಗಳ “ಕಳ್ಳ ಹಣ”ವೆಲ್ಲಾ ಚುನಾವಣೆಯ ಸಮಯದಲ್ಲಿ ಹೊರಬಂದು ಜನರಿಗೆ ಹಂಚಿಕೆಯಾಗುತ್ತದೆ. ಹೀಗಾದರೂ ಅವರು ಕೂಡಿಟ್ಟ ಹಣಕ್ಕೆ ಒಂದು ಅ(ನ)ರ್ಥ ಬರುತ್ತದೆ!