ದಕ್ಷಿಣೆಗೆ ತಕ್ಕ ಪ್ರದಕ್ಷಿಣೆ, ಕಂತೆಗೆ ತಕ್ಕ ಬೊಂತೆ. ಈ ಗಾದೆಗಳನ್ನು ಕೇಳಿಯೇ ಇರುತ್ತೀರಿ. ನೀವೆಷ್ಟು ಪೀಕಲು ತಯಾರೋ ಅಷ್ಟು ಮಜಬೂತಾದ ಫಲ ನಿಮಗೆ ಸಿಗುತ್ತದೆ.
ನನ್ನೂರು ಭದ್ರಾವತಿಗೆ ಹೋಗಿದ್ದಾಗ ನಡೆದ ಘಟನೆ. ಹರಟುತ್ತಾ ಇರುವಾಗ ಮನೆಯ ಹತ್ತಿರ ಇರುವ ಮಸ್ಜಿದ್ ನ ಬಗ್ಗೆ ಮಾತು ಬಂತು. ನಮಾಜ್ ನ ಸಮಯ ಕೊಡುವ ‘ಅದಾನ್’ (ಪ್ರಾರ್ಥನಾ ಕರೆ) ಅಲ್ಲಿದ್ದ ನಮ್ಮ ಪರಿಚಯದ ವ್ಯಕ್ತಿಯೊಬ್ಬರು ಕೊಡುತ್ತಿದ್ದರು. ಒಂದು ದಿನ “ಕರೆ” ಮುಗಿದ ಕೂಡಲೇ ಮಸ್ಜಿದ್ ನ ಪದಾಧಿಕಾರಿಯೊಬ್ಬರು ಕೇಳಿದರು, “ನೀವು ಕೊಡುವ ಅದಾನ್ ಸ್ವಲ್ಪ ಬೇಗನೆ ಮುಗಿದು ಬಿಡುತ್ತದೆ, ಇನ್ನಷ್ಟು ರಾಗವಾಗಿ ಕೊಡಬಾರದೇ” ಎಂದು ನಯವಾಗಿ ಆಕ್ಷೇಪಿಸಿದರು. ತನ್ನ ಮೇಲೆ ಎರಗಿ ಬಂದ ಆಕ್ಷೇಪದಷ್ಟೇ ನಯವಾಗಿ ಅದಾನ್ ಕೊಡುವ ವ್ಯಕ್ತಿ ‘ನೀವು ಕೊಡುವ ಸಂಬಳಕ್ಕೆನಾನು ಕೊಡುತ್ತಿರುವ “ಆದಾನ್” ನ್ಯಾಯವಾಗೇ ಇದೆ, ಹೆಚ್ಚು ಕೊಟ್ಟರೆ ಇನ್ನಷ್ಟು ದೀರ್ಘವಾಗಿ, ರಾಗವಾಗಿ ಕೊಡುವೆ’ ಎಂದು ಉತ್ತರಿಸಿದರು. ಇದನ್ನು ಕೇಳಿ ನನಗೆ ತಬ್ಬಿಬ್ಬು, ದೇವರ ಕಾರ್ಯಕ್ಕೂ ಕಾಂಚಾಣದ ನಂಟು ಬೇಕೇ ಎಂದು.
ಮಸ್ಜಿದ್ ನ ಸಧ್ಯದ ಹಣಕಾಸು ಪರಿಸ್ಥಿತಿ ನೋಡಿದಾಗ ಸುದೀರ್ಘ, ಸುಶ್ರಾವ್ಯ ಅದಾನ್ ಕೇಳುವ ಭಾಗ್ಯ ಆಕ್ಷೇಪಿಸಿದ ವ್ಯಕ್ತಿಗೆ ಲಭಿಸುವ ಯೋಗ ಇಲ್ಲ.