ವಿದ್ಯೆ ಯಾವ ಕಡೆಯಿಂದ ಬರುತ್ತದೆ ಎಂದು ಹೇಳಲು ಬರುವುದಿಲ್ಲ. ವಿದ್ಯಾರ್ಥಿಗಳಾಗಿದ್ದಾಗ ಶಿಕ್ಷಕ, ಲೆಕ್ಚರರ್ ಪ್ರೊಫೆಸರ್ ಗಳಿಂದ ನಮಗೆ ಶಿಕ್ಷಣ ದೊರೆತರೆ ಬದುಕಿನ ಉದ್ದಕ್ಕೂ ಓರ್ವ ಯಾಚಕ ನಿಂದ ಹಿಡಿದು ಯಾರಿಂದಲೂ ನಮಗೆ ಕಲಿಯಲು ಸಿಗುತ್ತದೆ. ಜೆಡ್ಡಾ ದಲ್ಲಿ ಸಮುದ್ರ ತೀರದಲ್ಲಿ ಮಕ್ಕಳಿಗೆ ಬೈಕ್ ಗಳ ಸೌಕರ್ಯವಿದೆ. ನಾಲ್ಕು ಗಾಲಿಗಳೂ ಚಲಾಯಿಸಲ್ಪಡುವ ಬೈಕ್ ಇದು. ಮರಳಿನಲ್ಲಿ ಹೂತು ಕೊಳ್ಳುವುದಿಲ್ಲ. ಆ ಬೈಕ್ ನೋಡಿದಾಗಲೆಲ್ಲಾ ನನ್ನ ೯ ವರ್ಷದ ಮಗನಿಗೆ ಅದನ್ನು ಸವಾರಿ ಮಾಡಲೇಬೇಕು. ಕ್ವಾಡ್ ಬೈಕ್ ಕ್ವಾಡ್ ಬೈಕ್ ಎಂದು ಓಡುತ್ತಾನೆ. ನನಗೆ ಈ ಪದದ ಬಗ್ಗೆ ಸರಿಯಾಗಿ ಗೊತ್ತಿರಲಿಲ್ಲ. ಬೈಕ್ ಏನೋ ಸರಿ, ಈ ‘ಕ್ವಾಡ್’ ಏನಪ್ಪಾ ಎಂದು. ಆದರೆ ಇದರ ಕುರಿತು ನನ್ನ ಮಗನಲ್ಲಿ ಎಂದೂ ಕೇಳಿರಲಿಲ್ಲ. ಎಲ್ಲೋ ಯಾರೋ ಹೇಳಿದ್ದನ್ನು ಕೇಳಿದ್ದಾನೆ, ಸರಿಯಾಗಿ ಉಚ್ಚರಿಸಲು ಬಾರದೆ ಕ್ವಾಡ್ ಎನ್ನುತ್ತ್ದ್ದಾನೋ, ಅದರ ಬಗ್ಗೆ ಅವನಿಗೆ ಗೊತ್ತಿದೆಯೋ ಇಲ್ಲವೋ ಎಂದು ನಾನು ಸುಮ್ಮನಿದ್ದೆ. ಮೊನ್ನೆಯ ಬಕ್ರೀದ್ ರಜೆಗೆ ಜೆಡ್ಡಾ ದಿಂದ ೧೨೦೦ ಕಿ, ಮೀ ದೂರವಿರುವ ರಿಯಾದ್ಹ್ ನಗರಕ್ಕೆ ಬಂದೆವು. ನಗರದಿಂದ ಸುಮಾರು ೮೦ ಕಿ ಮೀ ದೂರ ಇರುವ ತುಮಾಮಾ ಹೆಸರಿನ ಮರುಭೂಮಿ ಇದೆ. ಕೆಂಪಾದ, ನುಣ್ಣಗಿನ ಅಗಾಧ ಮರಳ ರಾಶಿ. ಕಣ್ಣು ಹಾಯಿಸಿದಷ್ಟೂ ಮರಳೋ ಮರಳು. ಇಲ್ಲಿ four wheel drive ನ ಕಾರುಗಳು, ಬೈಕುಗಳು ಮಾತ್ರ ಚಲಿಸುತ್ತವೆ. ಅಲ್ಲೂ ಬಾಡಿಗೆಗೆ ಈ ಬೈಕ್ ಗಳು ಇದ್ದವು, ಸರಿ ಮಗ ನ ಒತ್ತಡಕ್ಕೆ ಮಣಿದು ಒಂದನ್ನು ಬಾಡಿಗೆಗೆ ಪಡೆದು ಕೆಮ್ಮರಳಿನಲ್ಲಿ ಚಲಾಯಿಸಿದ ದೆವು. ಮರಳಿನ ಗುಡ್ಡಗಳ ಮೇಲೆ ಸರಾಗವಾಗಿ ಓಡುವ ಬೈಕ್ ಚಲಾಯಿಸಲು ಖುಷಿಯಾಗುತ್ತದೆ. ಮನೆಗೆ ಮರಳಿ ಬಂದು ಯಾವುದೋ ವೆಬ್ ತಾಣ ತೆರೆದಾಗ ಕ್ವಾಡ್ ಬೈಕ್ ಪ್ರಸ್ತಾಪ ಎದುರಾಯಿತು. quad bike ನೋಡಿದ ಕೂಡಲೇ ಮಗನನ್ನು ಕರೆದು ‘ಕ್ವಾಡ್’ ನ ಸ್ಪೆಲ್ಲಿಂಗ್ ಏನು ಎಂದಾಗ q-u-a-d ಸರಿಯಾಗೇ ಉಚ್ಚರಿಸಿದ ಮಗರಾಯ. ಈಗ ನನಗೂ ಅರ್ಥವಾಯಿತು ಈ ಕ್ವಾಡ್ ಬಾಯಿ ಎಂದರೇನು ಎಂದು.
ನೋಡಿದಿರಾ ಶಿಕ್ಷಣ ಸಿಕ್ಕಿತಲ್ಲಾ ೯ ರ ಹರೆಯದ ಪೋರನಿಂದ.
“ತುಮಾಮಾ” ಬಗ್ಗೆ ಒಂದು ಮಾತು.
ಸಂಜೆ ನಾಲ್ಕೂವರೆ ಗೆ ತುಮಾಮಾ ತಲುಪಿದ್ದ ನಾವು ತಂದಿದ್ದ ಬುತ್ತಿಯನ್ನು ಮರಳು ಗಾಡಿನಲ್ಲಿ ಸುಮಾರು ೨೦೦ ಮೀಟರು ದೂರ ಹೋಗಿ ಎತ್ತರದ ಸ್ಯಾಂಡ್ ಡ್ಯೂನ್ಸ್ (ಮರಳ ರಾಶಿ) ನ ಮೇಲೆ ಕೂತು ಸುತ್ತಲಿನ ಪ್ರಕೃತಿ ವೀಕ್ಷಿಸುತ್ತಿದ್ದ್ದೆವು. ನಮ್ಮ ದೇಶದ ಥರ ಸುಂದರ ಗುಡ್ಡ ಗಾಡುಗಳೋ, ಗಿಡ ಮರಗಳೋ, ನದೀ ಹಳ್ಳ ಕೊಳ್ಳ ಗಳೋ ಕಾಣಲು ಸಿಗುವುದಿಲ್ಲ ಇಲ್ಲಿ. ಕಣ್ಣು ಹಾಯ್ಸಿದಷ್ಟೂ ಮರಳು. ಸುಮಾರು ನೂರು ಕಿ. ಮೀ. ವರೆಗೆ ದೃಷ್ಟಿ ನೆಡಬಹುದು. ಬಟಾಬಯಲು, ಮರಳು ತುಂಬಿದ ಬಯಲು. ಊಟ ಆದ ಕೂಡಲೇ ಸ್ವಲ್ಪ ಹೊತ್ತು ಹರಟುತ್ತಾ ಕೂರುತ್ತಿದ್ದಂತೆ ಆಗಸದಲ್ಲಿ ಮಿಂಚು ಕಾಣಿಸಿ ಕೊಳ್ಳಲು ತೊಡಗಿತು. ಸ್ವಲ್ಪ ಗಾಭರಿಯಾದ ನಾನು ಮಳೆ ಗಿಳೆ ಬಂದೀತೆಂದು ಕೂಡಲೇ ಗಂಟು ಮೂಟೆ ಕಟ್ಟಿ ಎಲ್ಲರನ್ನೂ ಹೊರಡಿಸಿದೆ. ಮರಳಿನ ದಿನ್ನೆಯ ಮೇಲೆ ಇನ್ನೂ ಇಳಿದಿಲ್ಲ ದೂರದಲ್ಲಿ ಮರಳ ಬಿರುಗಾಳಿ ಆಗಮಿಸುವುದನ್ನು ಕಂಡ ಕೂಡಲೇ ನನ್ನ ಹೃದಯ ಬಾಯಿಗೆ ಬಂತು. ಪುಟಾಣಿ ಮಕ್ಕಳು, ನಾವು, ಮರಳು ಗಾಡಿನಲ್ಲಿ ಓಡಲು ಸಾಧ್ಯವೂ ಅಲ್ಲ. ನನ್ನ ಮಗಳನ್ನ ಎತ್ತಿಕೊಂಡು ಹೇಗಾದರೂ ಕಾರ್ ಪಾರ್ಕ್ ಕಡೆ ಹೋಗಿ ಮುಟ್ಟುವಾ ಎನ್ನುವಷ್ಟರಲ್ಲಿ ನಮ್ಮ ಕಡೆ ತಲುಪಿಯೇ ಬಿಟ್ಟಿತು ಬಿರುಗಾಳಿ. ಎಲ್ಲ ಕಡೆ ಕತ್ತಲು ಆವರಿಸಿಕೊಂಡಿತು. ಜನ ಚೆಲ್ಲಾ ಪಿಲ್ಲಿಯಾಗಿ ಓಡತೊಡಗಿದರು. ಮರಳಿನ ಆರ್ಭಟ ಜೋರಾಗುತ್ತಿತ್ತು. ಇಂಥ ಸ್ಯಾಂಡ್ storm ನಲ್ಲಿ ಸಿಕ್ಕು ಜನ ಸತ್ತ ಬಗ್ಗೆಯೂ ಸಾಕಷ್ಟು ಓದಿದ್ದೆ. ಈಗ ನನ್ನ ಸರತಿ ಬಂದು ಬಿಟ್ಟಿತೋ ಎನ್ನುವ ಅನುಮಾನ, ಭಯದಿಂದ, ನಾನು ಕಂಪಿಸುತ್ತಿದ್ದೆ. ಇಂಥ ಸನ್ನಿವೇಶದಲ್ಲಿ ಫೋರ್ ವೀಲ್ ಡ್ರೈವ್ ಮಾಡುತ್ತಿದ್ದವರಿಗೆ ತೊಂದರೆಯಿಲ್ಲ. ಮರಳಿನಲ್ಲಿ ಗಾಡಿ ಸಿಲುಕಿ ಕೊಳ್ಳುವುದಿಲ್ಲ. ಅಲ್ಲೇ ಹತ್ತಿರವಿದ್ದ ಬೆಂಗಳೂರಿನ ಶಿವಾಜಿ ನಗರದ ಕಡೆಯವರ ಫೋರ್ ವೀಲ್ ಗಾಡಿಯಲ್ಲಿ ರಸ್ತೆ ಬದಿಗೆ ಬಂದು ನನ್ನ ಕಾರನ್ನು ತಲುಪಿದಾಗ ಜೀವ ಮರಳಿ ಬಂತು. ಗಾಡಿಯಲ್ಲಿ ಎಲ್ಲರನ್ನೂ ತುಂಬಿಸಿ ಕೊಂಡು ಮುಂದೆ ಹೋಗುತ್ತಿದ್ದಂತೆ ನೂರಾರು ಕಾರುಗಳು ಬಂದ ದಾರಿಗೆ ಸುಂಕವಿಲ್ಲ ಎಂದು ರಸ್ತೆ ಆಕ್ರಮಿಸಿಕೊಂಡವು.
ಮರುಭೂಮಿಯ ಬಿರುಗಾಳಿ ಭಯಾನಕ ಎಂದು ಓದಿದ್ದೆ, ಕೇಳಿದ್ದೆ ಆದರೆ ಅನುಭವಿಸಿದ್ದು ಇದೇ ಮೊದಲು. ಕಾರು ಹೈ ವೇ ಗೆ ಬರುತ್ತಿದ್ದಂತೆ ಮಳೆ ಆರಂಭವಾಯಿತು. ಈ ಸ್ಯಾಂಡ್ ಸ್ಟಾರ್ಮ್ ಮತ್ತು ಬಿರುಗಾಳಿಯನ್ನು ಶಮನಗೊಳಿಸುವ ಮಳೆ ಎರಡೂ ಒಟ್ಟಿಗೆ ಬಂದಾಗ ವಾತಾವರಣ ಬದಲಾಗುತ್ತದೆ. ಸುಡುಬಿಸಿಲ ರಿಯಾದ್ಹ್ ಗೆ ಚಳಿಗಾಲದ ಪ್ರವೇಶ. ಈ ನಗರದ ಚಳಿ ಕೂಡಾ ಕುಖ್ಯಾತ. ಊಟಿ, ಕೆಮ್ಮಣ್ಣು ಗುಂಡಿಗಳು ಹಿಂದೆ ನಿಲ್ಲಬೇಕು, ಅಂಥಾ ಚಳಿ. ಒಟ್ಟಿನಲ್ಲಿ ಜೀವ ಅಡವಿಗೆ ಇಡಬೇಕಾಗಿ ಬಂದಿದ್ದ ಒಂದು ಡೆಸರ್ಟ್ ಔಟಿಂಗ್ ಈ ರೀತಿ ಸುಖಾಂತವಾಗಿ ಮುಕ್ತಾಯವಾಯಿತು.


