ಹೊಸ ಜಾತಿಯ ಕಪಿಯ ಪತ್ತೆ

ಹೊಸ ಜಾತಿಯ ಕಪಿಯ ಪತ್ತೆ ಹಚ್ಚಲಾಗಿದೆ ಆಫ್ರಿಕಾದ ಕಾಂಗೋ ದೇಶದಲ್ಲಿ. ೨೮ ವರ್ಷಗಳಲ್ಲಿ ಈ ಪತ್ತೆ ಎರಡನೆಯದಂತೆ. “ಲೆಸುಲ” ಇದರ ಹೆಸರು ಮತ್ತು (Cercopithecus lomamiensis) ಜಾತಿಗೆ ಸೇರಿದ್ದು. ಸಂಖ್ಯೆಯಲ್ಲಿ ವಿರಳವಾಗಿರುವ ಈ ವಾನರ ಜಾತಿ ಬಗ್ಗೆ ಪ್ರಾಣಿ ತಜ್ಞರಿಗೆ ಆತಂಕವಿದ್ದು ಇದನ್ನು ಉಳಿಸುವ ಕಡೆ ಗಮನ ಹರಿಸಿದ್ದಾರೆ.

ಚಿತ್ರ ಕೃಪೆ:  www.guardian.co.uk

 

“ಕಿಸ್ ಅಂಡ್ ಟೆಲ್”

kiss and tell. ಕಿಸ್ ಅಂಡ್ ಟೆಲ್ ಎಂದರೆ ಯಾವುದಾದರೂ ಹುಡುಗಿಯನ್ನು ಪಟಾಯಿಸಿ ತನ್ನ ಮಿತ್ರ ವೃಂದಕ್ಕೆ ಟಾಮ್ ಟಾಮ್ ಮಾಡೋದು. ಇದಕ್ಕೆ ಕಿಸ್ ಅಂಡ್ ಟೆಲ್ ಎನ್ನುತ್ತಾರೆ. ಇದು ಸರಿಯಾದ ವರ್ತನೆಯಲ್ಲ ಆದರೂ ಈ ವರ್ತನೆ ಹುಡುಗರಿಗೆ ಕಿಕ್ ಕೊಡುತ್ತದೆ, ಅವನ ಪ್ರತಿಷ್ಠೆ ಮಿತ್ರ ರ ಸರ್ಕಲ್ ನಲ್ಲಿ ಹೆಚ್ಚುತ್ತದೆ. ಕಿಕ್ ಮತ್ತು ಪ್ರತಿಷ್ಠೆ ಬಂದಾಗ ಹೆಣ್ಣಿನ ಭಾವನೆಗೆ, ಮಾನಕ್ಕೆ ಕಿಮ್ಮತ್ತಿಲ್ಲ. ಇರಲಿ, ಇಷ್ಟು ಸಾಕು ಕಿಸ್ ಅಂಡ್ ಟೆಲ್ ನ ಪುರಾಣ. ಈಗ ‘ಕಿಲ್ ಅಂಡ್ ಟೆಲ್’ ಗೆ ಬರೋಣ. ಏನಪ್ಪಾ ಇದು ಕಿಲ್ ಅಂಡ್ ಟೆಲ್? ಹೊಸ ವಿದ್ಯಮಾನ?

ಕಳೆದ ಮೇ ತಿಂಗಳಲ್ಲಿ ಅಮೇರಿಕಾ ಬಿನ್ ಲಾಡೆನ್ ನ ಬೇಟೆ ಆಡಿತು. ಅಮೆರಿಕೆಯ ನಾವಿಕ ಸೇನೆಯ ಸೀಲ್ ಕಮಾಂಡೋಗಳು ಅಚ್ಚರಿದಾಯಕ ಕಾರ್ಯಾಚರಣೆ ನಡೆಸಿ ಪಾಕಿಸ್ತಾನದ ಸೇನೆಯ ಕೇಂದ್ರದ ಬಳಿಯೇ ಅವಿತಿದ್ದ ಲಾಡೆನ್ ನನ್ನು ಮುಗಿಸಿ ಅಮೆರಿಕನ್ನರು ನಿರಾಳ ಭಾವ ಅನುಭವಿಸುವಂತೆ ಮಾಡಿದರು. ಬಿನ್ ಲಾಡೆನ್ ಅಡಗುತಾಣದ ಬಗ್ಗೆ ವಿವರ ಕೊಟ್ಟಿದ್ದು ಪಾಕಿಸ್ತಾನದ ವೈದ್ಯನೊಬ್ಬ. ಈಗ ಸೀಲ್ ಕಮಾಂಡೋಗೆ ಸೇರಿದ ಒಬ್ಬ ಈ ಕಾರ್ಯಾಚರಣೆಯ ಬಗ್ಗೆ ಪುಸ್ತಕ ಬರೆದ. ಅಮೆರಿಕೆಗೆ ಈ ಕ್ರಮದಿಂದ ಅಸಮಾಧಾನ. ಅತ್ಯಂತ ರಹಸ್ಯ ಕಾರ್ಚಾರಣೆ ಯನ್ನ ಈ ರೀತಿ ಬಹಿರಂಗ ಗೊಳಿಸಿದರೆ ಆಗುವ ಪರಿಣಾಮದ ಬಗ್ಗೆ ಆತಂಕ. ಈ ಪುಸ್ತಕ ಬರೆದ ಸೀಲ್ ಕಮಾಂಡೋ ಮಾಡಿದ್ದು kill and tell “ಕಿಲ್ ಅಂಡ್ ಟೆಲ್” ಆಲ್ವಾ?

ಈತನ ಹೆಣ್ಣಿನ ಚಪಲವೇ…

ನಮ್ಮ ಕಡೆಯ ಗುಬ್ಬಿಯನ್ನು ಹೋಲುವ “ಮಾರ್ಶ್ ರೆನ್” marsh wren ಉತ್ತರ ಅಮೇರಿಕಾ ಪ್ರದೇಶದಲ್ಲಿ ಕಾಣ ಸಿಗುವ ಒಂದು ವಿಶಿಷ್ಟ ಗುಣಗಳನ್ನ ಪ್ರದರ್ಶಿಸುವ ಪಕ್ಷಿ. ಇವು polygynous, ಅಂದರೆ ಎಷ್ಟು ಸಾಧ್ಯವೋ ಅಷ್ಟು ಹೆಣ್ಣು ಗಳೊಂದಿಗೆ ಕೂದಲು ಬಯಸುವ ಪೋಲಿ ಹಕ್ಕಿ. ಈ ಹಕ್ಕಿ ಹಗಲೂ ರಾತ್ರಿಯೆನ್ನದೆ ಹಾಡುತ್ತದಂತೆ. ಸುಮ್ಮಾರು ಇನ್ನೂರು ತೆರನಾದ ಗೀತೆಗಳನ್ನು ಹಾಡಲು ಇವಕ್ಕೆ ಸಾಧ್ಯವಂತೆ. ಬಹುಶಃ ಈ ಕಾರಣ ಕ್ಕಾಗೇ ಇರಬೇಕು ಇವುಗಳ ಬಲೆಯಲ್ಲಿ ಬೀಳಲು ಹೆಣ್ಣುಗಳು ತವಕಿಸೋದು. ಇವುಗಳ ಹೆಣ್ಣಿನ ಚಪಲ ಎಷ್ಟಪ್ಪಾ ಎಂದರೆ ಒಂದು ಹಕ್ಕಿ ತನ್ನ ಕೊಕ್ಕಿನಲ್ಲಿ ಜೇಡನ ನನ್ನು ಹಿಡಿದು ಕೊಂಡು, ಬ್ಯಾಲನ್ಸ್ ಮಾಡುತ್ತಾ  ಹೆಣ್ಣನ್ನು ಆಕರ್ಷಿಸಲು ಹಾಡಲು ಪ್ರಯತ್ನಿಸಿದ್ದು ಒಬ್ಬ ಪಕ್ಷಿ ಪರಿಣಿತ ನೋಡಿದ್ದಾನಂತೆ.  ಇವುಗಳ ಸಾಮರ್ಥ್ಯ ಇಷ್ಟಕ್ಕೆ ಮಾತ್ರ ಸೀಮಿತ ಅಲ್ಲ, ಕನಿಷ್ಠ ಪಕ್ಷ ೧೪ ರಿಂದ ೨೨ ಗೂಡು ಗಳನ್ನು ಸಹ ಕಟ್ಟುತ್ತವಂತೆ.  

ಇವು ಡಮ್ಮಿ ಗೂಡುಗಳು. ತನ್ನನ್ನು ತಿನ್ನಲು ಬರುವ ಶತ್ರುಗಳಿಗೆ ಚಳ್ಳೆ ಹಣ್ಣು ತಿನ್ನಿಸಲು. ಸದ್ದಾಮ್ ಹುಸೇನ್ ತನ್ನನ್ನು ಹತ್ಯೆ ಗೈಯಲು ಬರುವವರಿಗೆ ಫೂಲ್ ಮಾಡಲು ತನ್ನಂತೆಯೇ ಇರುವ ಸುಮಾರು ೧೨ ಜನರನ್ನು ನೇಮಕ ಮಾಡಿದ್ದನಂತೆ. ಈ ಹಕ್ಕಿ ಸದ್ದಾಮ್ ಗಿಂತಲೂ ಜಾಣ.

ಈಗ ಹೇಳಿ, ಈ ಮಾರ್ಶ್ ರೆನ್ ಪಕ್ಷಿ ಹೈ ಸ್ಕೂಲಿನಲ್ಲಿದ್ದಾಗ ಆಂಗ್ಲ ವ್ಯಾಕರಣದಲ್ಲಿ ತಲೆ ತಿಂದ ‘ರೆನ್ ಅಂಡ್ ಮಾರ್ಟಿನ್’ ಗಿಂತ ಎಷ್ಟೋ ವಾಸಿ, ಆಲ್ವಾ?

೨೦೦೧, ಸೆಪ್ಟೆಂಬರ್ ೧೧

ಇಂದು ಅಮೆರಿಕೆಯ ವಿರುದ್ಧ ನಡೆದ ಭೀಕರ ವೈಮಾನಿಕ kamikaze ಧಾಳಿಗಳ ವಾರ್ಷಿಕ ದಿನಾಚರಣೆ. ೨೦೦೧, ಸೆಪ್ಟೆಂಬರ್ ೧೧ ಅಮೆರಿಕೆಯ ಪಾಲಿಗೆ ಒಂದು ದುರ್ದಿನ ಮಾತ್ರವಲ್ಲ, ವಿಶ್ವದಾದ್ಯಂತ ಎಲ್ಲ ಜನರನ್ನು ಒಂದಲ್ಲ ಒಂದು ರೀತಿಯಲ್ಲಿ ಬಾಧಿಸಿದ ದುರ್ಘಟನೆ. ಚರಿತ್ರೆ ಬದಲಾಯಿತು ಈ ಧಾಳಿಯಿಂದ. ಅಮೆರಿಕೆಗೆ  ಇಡೀ ವಿಶ್ವವೇ ಸಹಾನುಭೂತಿ ವ್ಯಕ್ತ ಪಡಿಸಿತು. ಅಮೇರಿಕ ದೇಶದ ವಿದೇಶಾಂಗ ನೀತಿಯ ವಿರುದ್ಧ ಅಸಮಾಧಾನ ವ್ಯಕ್ತ ಪಡಿಸುತ್ತಿದ್ದವರೂ ಅಮೆರಿಕೆಯ ಬೆಂಬಲಕ್ಕೆ ನಿಂತರು. ಫ್ರಾನ್ಸ್ ದೇಶದ ಪತ್ರಿಕೆಯೊಂದು “ನಾವೆಲ್ಲರೂ ಅಮೆರಿಕನ್ನರು” ಎಂದು ಘೋಷಿಸಿ ಅನುಕಂಪ ವ್ಯಕ್ತ ಪಡಿಸಿತು. ೯/೧೧ ಈಗ ಚರಿತ್ರೆ. ಚರಿತ್ರೆ ಮರುಕಳಿ ಸುವುದು ಬೇಡ. ಅದೂ ರಕ್ತ ಸಿಕ್ತ ಚರಿತ್ರೆಯಂತೂ ಎಂದಿಗೂ ಮತ್ತೊಮ್ಮೆ ಕಾಣಲು, ಅನುಭವಿಸಲು ಸಿಗಕೂಡದು. ಕ್ರೈಸ್ತ, ಮುಸ್ಲಿಂ, ಹಿಂದೂ, ಬಿಳಿಯ ಕರಿಯ, ಬಡವ ಬಲ್ಲಿದ ಎಲ್ಲರೂ ಯಾವುದೇ ತಾರತಮ್ಯ ಎಸಗದೆ ಆ ಮಹಾಪ್ರಭು   ಸೃಷ್ಟಿಸಿದ ಭೂಮಿಯ ಮೇಲೆ ನಿರಾತಂಕವಾಗಿ ಬದುಕಬೇಕು. ತಾನು ನಂಬಿದ ಆದರ್ಶಗಳ, ಧಾರ್ಮಿಕ ಮೌಯಗಳು ನಮಗೆ ಉರುಳಾಗಬಾರದು.

“ಲಿವ್ ಅಂಡ್ ಲೆಟ್ ಲಿವ್” ಎಲ್ಲರ ಮಂತ್ರವಾಗಬೇಕು.        

”SAY TWO WAY -ಸೇತುವೆ” ಆಡಿದ ಮಾತು

ಭದ್ರಾವತಿಯ ನನ್ನ ಮಿತ್ರ ಸುರೇಶ್ ಬಾಬು ನನ್ನ ತಂಗಿಯ ಮಗಳ ಮದುವೆಗೆಂದು ಮಿತ್ರರೊಂದಿಗೆ ಬಂದಿದ್ದರು. ನನ್ನ ತಂಗಿಯ ಮದುವೆಗೂ ಪತ್ನೀ ಸಮೇತರಾಗಿ ಬಂದಿದ್ದ ಅವರು ಅವಳ ಮಗಳ ಮದುವೆಗೂ ಬಂದಿದ್ದು ನಮ್ಮ ಸಂತೋಷವನ್ನು ಇಮ್ಮಡಿಗೊಳಿಸಿತ್ತು. ಸಮಯ ಹೇಗೆ ಹಾರುತ್ತದೆ ನೋಡಿ, ರೆಕ್ಕೆಗಳಿಲ್ಲದೆ. ತಂಗಿ ಮದುವೆ…ಈಗ ಅವಳ ಮಗಳ ಮದುವೆ, ನಡುವೆ ಸುಮಾರು ೨೪ ವರ್ಷಗಳ ನೆನಪುಗಳಿಂದ ತುಂಬಿದ ಕಂದರ. ಅಲ್ಲ ಅಲ್ಲ, ಹಂದರ. ನಮ್ಮ ಮಮೆಯಿಂದ ಮೂರ್ನಾಲ್ಕು ಕಿಲೋ ಮೀಟರ್ ದೂರದಲ್ಲಿ ಒಂದು ಸೊಗಸಾದ ಸೇತುವೆ ಇದೆ. ತೂಗು ಸೇತುವೆ. ಚಂದ್ರಗಿರಿ ನದಿಗೆ ಅಡ್ಡವಾಗಿ ಒಂದು ನೆಕ್ಲೇಸ್ ಥರ. ಸುತ್ತಲೂ ತೆಂಗು, ಕಂಗು, ಹಸಿರಿನ ಸುಗ್ಗಿ. ಮದುವೆ ಮುಗಿದ ಕೂಡಲೇ ಸೇತುವೆ ನೋಡಲು ಹೋದ ಸುರೇಶ ಮಂತ್ರಮುಗ್ಧ, ಪ್ರಕೃತಿಯ ಸೊಬಗಿಗೆ ದಿಗ್ಮೂಢ.  ನದಿಯ ಹರಿವು ತಿರುವ ಮಾಟಕ್ಕೆ, ಬಳುಕುವ ತೆಂಗು ಕಂಗುಗಳ ಚೆಂದಕ್ಕೆ ಬೆರಗಾಗಿ ನೇತಾಡುವ ತೂಗು ಸೇತುವೆ ಸುರೇಶ್ ಅವರ ಕೆಳಗಿನ ಕವನಕ್ಕೆ ಪ್ರೇರೇಪಣೆ.

”SAY TWO WAY – ಸೇತುವೆಆಡಿದ ಮಾತು

ಕಾಣದ ಅಲೆ ಅಲೆಯಾಗಿ , ಮನಕೆ ಬಂತು ,ಮನೆಗೆ ಬಂತು. ಬಂದ ಮಾತ ಮಾತನಾಡಿಸಿಧಾಗ

MAHATHMA GANDHI ಮಾತು ನಿಂತು .’ BE THE CHANGE YOU WISH TO SEE IN THEWORLD’. ಅಂತು.

ಮನಕೆ ಬಂದ ಮಾತು ಮನನವಾಗಿ, ಮನದಅಂಕದಲ್ಲಿಮಂಕನಾಗಿ ಇಟ್ಟ ಒಂದೆಜ್ಜೆ,

ಕಾನನವನ್ನು ಛೇಧಿಸುತ್ತ ,ಬೆಟ್ಟವನ್ನು ಸುತ್ತಿ , ಸಾಗರದತೀರದ ಮನೆಗೆ ಬಂದೆ.

ಮದುವೆಗೂ ಬಂದೆ. ಬಂದುಗಳಲಿ , ಭಾವನೆಗಳಲಿ ಒಂದಾಗಿ,

ಇಳಿಜಾರು ತೆಂಗು, ಗುಡ್ಡಗಳ ಸುತ್ತಿ, ಗಿರಿಗಳಿಂದ ಸುತ್ತುವರೆದು,

ಹಿನ್ನೀರಿನ ನದಿಯಿಂದ ಮುತ್ತು ಹರಿದು

ಆ ತೂಗುಯ್ಯಾಲೆ ಇಂದ ನೋಡಿದ ನೋಟ

ಮಂಕನನ್ನು ವೆಂಕನನ್ನಾಗಿಸಿತು.

ಪ್ರಕೃತಿಯ ಅಂತರಾಳದಲ್ಲಿ ಏನೆಲ್ಲಾ ಕೃತಿಗಳು…

ಧನ್ಯನಾದೆ.. ಧನವಂತನಾದೆ…ಮನ ತುಂಬಿದಂತೆ.

ಆಹಾ, ಆ ಸೇತುವೆ ಮೇಲೆ ನಿಂತು, ತೂಗಾಡುವ ಸೇತುವೆ…ಜೋತಾಡುವ ಸೇತುವೆ..

ಮನದ ಮಾತನಾಡುವ ಸೇತುವೆ, ಮನಸು ಮರುಳಾಗಿಸಿತು.

ನಾವು ಬದಲಾದರೆ ಬದುಕಲ್ಲಿ ಬೇಕಾದನ್ನು ಕಾಣಬಹುದು. ನಾವು ಬದ್ಧರಾದರೆ , ಬೇಕಾದ್ದನ್ನು ಪಡೆಯಬಹುಧು.

ಬದಲಾದ ಬದುಕಿನ ನೆನಪು ಮತ್ತೆ ಮತ್ತೆ ಬಾಳನ್ನು ಹದಗೊಳಿಸುತ್ತದೆ. ಅನುಭವ ಹೊಸತನವನ್ನು, ಉತ್ಸಾಹವನ್ನು, ತುಂಬುತ್ತದೆ .

ಮೇಲಿನಿಂದ ನೋಡಿದಾಗ, LATTITUDE ನಲ್ಲಿ ಕುಳಿತು ಬರೆಯುವಾಗ,

ನಮ್ಮ ATTITUDE ,

ಆಕಾಶದಂತೆ, ಭೂಮಿಯಂತೆ, ಗಾಳಿಯಂತೆ, ನೀರಿನಂತೆ ,ಸೂರ್ಯ ಕಿರಿಣದಂತೆ ಬೆತ್ತಲಾಗುತ್ತದೆ.

ಬರೆದಷ್ಟು  –ಬೆರೆತಷ್ಟು ಬಾಳಾಗುತ್ತದೆ. ಬೆಳಗುತ್ತದೆ.

ಆದರೆ , ಸುಂದರ ಬಾಳಲ್ಲಿ ,ಹಂದರಗಳೇ ಹೆಚ್ಚು, ನೋಡುವ ನೋಟದಲ್ಲಿ ಸೌಂದರ್ಯದ ಹುಚ್ಹು,

ಕಾಣುವ ಕಣ್ಣಲ್ಲಿ , ಕನವರಿಸುವ ಕಿಚ್ಚು ,

ಪ್ರಕೃತಿಯನ್ನು ಒಲಿಸಿಕೊಳ್ಳುವ, ಓಲೈಸಿಕೊಳ್ಳುವ ತವಕ. ಕವ, ಕವ, ಸಂಸಾರ ಸಾಗರಕೆ ಮರುಳಾದೆ,

ಮರುಥಕವೆಂದು ಮರಳು ಮುಟ್ಟಿದೆ ಮರುಳಾದೆ,

ಉಪ್ಪು ಮೆತ್ತಿತು, ಮೆಲ್ಲನೆ, ಮೆಲ್ಲಿದೆ, ಮುಖ ಕಪ್ಪಿಟ್ಟಿತು…

‘TIMELESS PHILOSOPHY, CHANGE YOURSELF.. THE WORLD WILL CHANGE’

ಪೌಷ್ಠಿಕಾಂಶ ಮತ್ತು ಸೌಂದರ್ಯ ಪ್ರಜ್ಞೆ

ಗುಜರಾತ್ ದೇಶದ ಅತ್ಯಂತ ಮುಂದುವರಿದ ರಾಜ್ಯ, ಇತರೆ ರಾಜ್ಯಗಳಿಗೆ ಮಾದರಿ ರಾಜ್ಯ, ಗುಜರಾತ್ ನ ಅಮೋಘ ಸಾಧನೆಗೆ ನರೇಂದ್ರ ಮೋದಿಯ ನಾಯಕತ್ವ ಕಾರಣ, ಹಾಗೆ, ಹೀಗೆ ಎಂದು ಪುಂಖಾನು ಪುಂಖವಾಗಿ ಪ್ರಶಂಸೆಗಳು ಮೊಳಗಿದವು. ಈ ಪ್ರಶಂಸೆಯ ಹಿಂದೆ ಯಾವುದೇ ನಿಷ್ಪಕ್ಷಪಾತೀ ಸಂಸ್ಥೆಗಳಿರಲಿಲ್ಲ, ಬದಲಿಗೆ ಮೋದಿಯ ಗುಣಗಾನ ಮಾಡಲು ಸನ್ನದ್ಧ ವಾದ ಸೇನೆ ಮೋದಿಯನ್ನು ಹೇಗಾದರೂ ಮಾಡಿ ಗುಜರಾತ್ ನ ಭೀಕರ, ಭೀಭತ್ಸ ಗುಜರಾತ್ ಹತ್ಯಾಕಾಂಡದ ಮಸಿಯನ್ನು ತೊಳೆದು ಆತನನ್ನು ಒಬ್ಬ ಒಳ್ಳೆಯ, ದಕ್ಷ, ಸಮರ್ಥ ರಾಜಕಾರಣಿ ಎಂದು ಪ್ರಪಂಚಕ್ಕೆ ಬಿಂಬಿಸುವುದೇ ಆಗಿತ್ತು. ಆದರೆ, ಗುಜರಾತ್ ಗಿಂತ ನೀತೀಶ್ ಕುಮಾರ್ ಮುನ್ನಡೆಸುವ ಬಿಹಾರ್ ಅಭಿವೃದ್ಧಿಯಲ್ಲಿ ಮುಂದೆ ಎಂದು ಎಲ್ಲರಿಗೂ ತಿಳಿಯಲು ಬಹಳ ಕಾಲ ಬೇಕಾಗಲಿಲ್ಲ. ಗುಜರಾತ್ ಹತ್ಯಾಕಾಂಡದ ಕಾರಣ ನರೇಂದ್ರ ಮೋದಿ ಬರೀ ದೇಶದಲ್ಲಿ  ಮಾತ್ರವಲ್ಲ ಅಂತಾರಾಷ್ಟ್ರೀಯವಾಗಿಯೂ ಚಿರಪರಿಚಿತ. ಬಹುಶಃ ಮಹಾತ್ಮ ಗಾಂಧಿಯ ನಂತರ ನರೇಂದ್ರ ಮೋದಿಯದು ಹೆಚ್ಚು ಪರಿಚಿತ ಹೆಸರು ಎಂದರೂ ಉತ್ಪ್ರೇಕ್ಷೆ ಯಾಗಲಾರದು. ಕಾಕತಾಳೀಯವೆಂಬಂತೆ ಈ ಈರ್ವರೂ ಗುಜರಾತ್ ಮೂಲದವರು. ಬೇರೆ, ಬೇರೆ ಕಾರಣಗಳಿಗಾಗಿ ಹೆಸರು ಮಾಡಿದವರು.

ಇತ್ತೀಚೆಗೆ ನರೇಂದ್ರ ಮೋದಿಯ ಸಂದರ್ಶನ ಅಮೆರಿಕೆಯ ಸುಪ್ರಸಿದ್ಧ ಪತ್ರಿಕೆಯಾದ “ವಾಲ್ ಸ್ಟ್ರೀಟ್ ಜರ್ನಲ್” ನಲ್ಲಿ ಪ್ರಕಟವಾಯಿತು. ಸಂದರ್ಶನದಲ್ಲಿ ಪೌಷ್ಠಿಕಾಂಶ ಕೊರತೆಯಿಂದ ಬಳಲುತ್ತಿರುವ ಗುಜರಾತೀ ಮಕ್ಕಳ ಬಗ್ಗೆ ಕೇಳಿದಾಗ ನರೇಂದ್ರ ಮೋದಿ ಕೊಟ್ಟ ಉತ್ತರ ವಾಲ್ ಸ್ಟ್ರೀಟ್ ಜರ್ನಲ್ ಮಾತ್ರವಲ್ಲ ವಿಶ್ವವನ್ನೇ ದಂಗು ಬಡಿಸಿತು. “ಗುಜರಾತ್ ಒಂದು ಮಧ್ಯಮ ದರ್ಜೆಯ ಜನ ಇರುವ ರಾಜ್ಯ. ಈ ಜನರಿಗೆ ತಮ್ಮ ಶರೀರ ಸೌಂದರ್ಯದ ಕಾಳಜಿ ಹೆಚ್ಚು ಇದ್ದು, ಆಧುನಿಕತೆ ಬಯಸುವಂತೆ ಅವರು ಯಾವಾಗಲೂ ಕೃಶರಾಗಿಯೇ ಇರಲು ಇಷ್ಟ ಪಡುತ್ತಾರೆ” ಎಂದು ಮೋದಿ ಉತ್ತರಿಸಿದಾಗ ಸಂದರ್ಶನ ನಡೆಸುತ್ತಿದ್ದ ವ್ಯಕ್ತಿಯ ಮುಖವನ್ನ ನಾವು ಊಹಿಸಿಕೊಳ್ಳಬಹುದು. ಬಿದ್ದರೂ ಮೀಸೆ ಮಣ್ಣಾಗಲಿಲ್ಲ. ಈ ಮಾತಿಗೆ ನಿಷ್ಠವಾಗಿ ನಡೆದುಕೊಂಡ ಗುಜರಾತಿನ ಮು. ಮಂತ್ರಿ ಇನ್ನೂ ಎಷ್ಟು ಕಾಲ ನಮ್ಮ ದೇಶವನ್ನು ಮತ್ತು ಪ್ರಪಂಚವನ್ನು ಬ್ಲಫ್ ಮಾಡುತ್ತಾ ಕಳೆಯಬಹುದು ಎಂದು ಯಾರಿಗೂ ತಿಳಿಯದು. ಪೌಷ್ಟಿಕಾಂಶದ ಕೊರತೆ ಮತ್ತು ಸೌಂದರ್ಯ ಪ್ರಜ್ಞೆಯ ವಿತಂಡವಾದದ ಸಹಾಯದಿಂದ, ‘ಮೋದಿ ಫಾರ್ಮುಲಾ’ ವನ್ನು ಬಳಸಿಕೊಂಡು ನಮ್ಮನ್ನು ಕಾಡುತ್ತಿರುವ ಇನ್ನಷ್ಟು ಸಾಮಾಜಿಕ ಸಮಸ್ಯೆಗಳಿಗೆ ಸುಂದರವಾದ ಸಮಜಾಯಿಷಿ ಕೊಟ್ಟು ಜನರಿಗೆ ಚಳ್ಳೆ ಹಣ್ಣು ತಿನ್ನಿಸಬಹುದು. ಭಾರತದ ಬಹುಪಾಲು ಜನ ಏಕೆ ಬಟಾ ಬಯಲಿನಲ್ಲಿ, ರೈಲು ಹಳಿಗಳ ಹತ್ತಿರ ಶೌಚಕ್ಕೆ ಹೋಗುತ್ತಾರೆ ಎಂದು ಯಾರಾದರೂ ಕೇಳಿದರೆ, ನಮ್ಮ ಉತ್ತರ, ಶೌಚದ ಕೊರತೆ ಕಾರಣ ಅಲ್ಲ, ನಮ್ಮ ಜನ ನಿಸರ್ಗದ ಮಧ್ಯೆ, ತಂಗಾಳಿಯೊಂದಿಗೆ ಆಡುತ್ತಾ, ಸೊಳ್ಳೆ ಗಳಿಂದ ಕಚ್ಚಿಸಿಕೊಳ್ಳುತ್ತಾ ಶೌಚ ಮಾಡಲು ಇಷ್ಟ ಪಡುತ್ತಾರೆ ಎಂದು ಹೇಳಿ ವಿಜಯದ ನಗೆ ಬೀರಬಹುದು. ವ್ಯಾಪಕವಾಗಿ ಹರಡುತ್ತಿರುವ ಲಂಚ-ರಿಷುವತ್ತಿನ ಬಗ್ಗೆ ಕೇಳಿದರೆ ಅದನ್ನು ಲಂಚ ಎಂದು ಕರೆಯಬಾರದು, ನಮ್ಮ ಸಮಾಜ ಉಡುಗೊರೆ ಕೊಡುವ ವಿಚಾರದಲ್ಲಿ ಬಹಳ ಉದಾರೀ, ಹಾಗಾಗೀ ಉಡುಗೊರೆಯನ್ನು ಸ್ವಲ್ಪ ಸಲುಗೆಯಿಂದ, ಸ್ವಲ್ಪ ಬಲವಂತವಾಗಿ ಜನರಿಂದ ವಸೂಲು ಮಾಡುತ್ತದೆ ಅಧಿಕಾರೀಶಾಹೀ ಅಷ್ಟೇಯ ಎಂದು ಕಳ್ಳ ನಗೆ ನಗಬಹುದು. ವಾಲ್ ಸ್ಟ್ರೀಟ್ ಜರ್ನಲ್ ವಿಶ್ವದ ಪ್ರಮುಖ ವ್ಯಕ್ತಿಗಳು, ಆಡಳಿತಗಾರರು, ಉದ್ಯಮಿಗಳು ಓದುವ ಪತ್ರಿಕೆ. ಈಗ ಊಹಿಸಿ, ಭಾರತದ ನೆತಾರನೊಬ್ಬ ಈ ತೆರನಾದ ಉತ್ತರ ಕೊಡುತ್ತಾ ಹೋದರೆ ಆಗುವ ಪರಿಣಾಮ.

ಮಾತನಾಡುವ ಅಪರೂಪದ ಗುಣವನ್ನ ದೇವರು ಮನುಷ್ಯನಿಗೆ ದಯಪಾಲಿಸಿದ್ದು ಬಹುಶಃ ಇದೇ ಕಾರಣಕ್ಕಾಗಿ ಇರಬಹುದು. ತಾನಾಡುವ ಮಾತಿನ ಮೂಲಕ ಮನುಷ್ಯ ತನ್ನ ಅಳತೆ, ಯೋಗ್ಯತೆ ಎಷ್ಟರ ಮಟ್ಟಿನದು ಎಂದು ವಿಶ್ವಕ್ಕೆ ಸಾರಲಿ ಎಂದಿರಬಹುದು ಅವನ ಉದ್ದೇಶ. ದೇವರ ಆಟ ನಿಗೂಢ, ಅಲ್ಲವೇ?

ಲೋಕಸಭೆಯ ಚುನಾವಣೆ ಹತ್ತಿರವಾಗುತ್ತಿದ್ದಂತೆ ನರೇಂದ್ರ ಮೋದಿಯನ್ನು ಭಾವೀ ಪ್ರಧಾನಿಯನ್ನಾಗಿ ಬಿಂಬಿಸಲಾಗುತ್ತಿದೆ. ಮಿತ್ರಪಕ್ಷಗಳ ವಿರೋಧದ ನಡುವೆಯೂ ಹಿಂದುತ್ವ ರಾಷ್ಟ್ರ ವಾದೀ ಭಾ.ಜ.ಪ. ಕ್ಕೆ ನರೇಂದ್ರ ಮೋದಿಯ ವ್ಯಕ್ತಿತ್ವ ಟ್ರಂಪ್ ಕಾರ್ಡ್ ಆಗಿ ಕಾಣುತ್ತಿದೆ. ಬಿಹಾರದ ಶ್ರೀಯುತ ನಿತೀಶ್ ಕುಮಾರ್ ಅವರಂತೂ ನಮ್ಮ ದೇಶಕ್ಕೆ ಪ್ರಧಾನಿಯಾಗುವ ವ್ಯಕ್ತಿ ‘ಮತಾಂಧ ಚಹರೆ’ (fanatic face) ಯುಳ್ಳವನಾಗಿರುವುದು ಬೇಡ ಎಂದು ಸಾರಿ NDA ವಲಯದಲ್ಲಿ ಒಂದು ಕಂಪನವನ್ನೇ ಎಬ್ಬಿಸಿದರು. ಮಹಾ ಚುನಾವಣೆ ಸನ್ನಿಹಿತವಾಗುತ್ತಿದೆ. ಪ್ರಧಾನಿ ಹುದ್ದೆಗೆ ಯಾವ ಅಭ್ಯರ್ಥಿ ಸೂಕ್ತ ಎನ್ನುವುದು ಭಾಜಪ ದ ಆಂತರಿಕ ವಿಷಯ. ಆದರೆ ದೇಶದ ಭಾವೀ ಪ್ರಧಾನಿ ವಿದೇಶೀ ಪತ್ರಿಕೆಯೊಂದರ ಸಂದರ್ಶನದ ವೇಳೆ ಲಘುವಾಗಿ, ಉಡಾಫೆಯಾಗಿ ಮಾತನಾಡಿದರೆ ವಿಶ್ವ ಮಟ್ಟದಲ್ಲಿ ನಮಗಾಗುವ ಅವಮಾನ, ಮುಜುಗುರ ಅಳೆಯಲು ರಾಜಕೀಯ ಪಂಡಿತರ ಅಗತ್ಯ ಬೀಳಲಿಕ್ಕಿಲ್ಲ. ಪ್ರಧಾನಿಯ ಆಯ್ಕೆಯಲ್ಲಿ ಅಲ್ಪಕಾಲೀನ ಲಾಭ, ಭಾವೋದ್ವೇಗ ನಿರ್ಣಾಯಕವಾಗುವುದು ಬೇಡ. ಪ್ರತಿಯೊಬ್ಬ ಭಾರತೀಯನೂ ಹೆಮ್ಮೆ ಪಡುವ ವ್ಯಕ್ತಿ ಅಲಂಕರಿಸಲಿ ಪ್ರಧಾನಿ ಗದ್ದುಗೆಯನ್ನು. ಅದರೊಂದಿಗೆ ನಮ್ಮ ಭವಿಷ್ಯದ ಪ್ರಧಾನಿ ವಿದೇಶಗಳಲ್ಲೂ ಸ್ವಾಗತಾರ್ಹ ವ್ಯಕ್ತಿಯಾಗುವುದು ಅತ್ಯವಶ್ಯ.