ಮನಮೋಹನ ಸಿಂಗರು ಸೋನಿಯಾ ಗಾಂಧಿಯವರ “ಪೂಡ್ಲ್” ಆದರಾ? poodle ಎಂದರೆ ಮೈ ತುಂಬಾ ರೋಮ ಇರೋ ಬೇಟೆ ನಾಯಿ. ಮತ್ತೊಂದು ಅರ್ಥ ಎಂದರೆ ಹೇಳಿದಂತೆ ಕೇಳುತ್ತಾ, ಹೌದಪ್ಪಾ ಹೌದು ಎಂದು ಗೋಣು ಹಾಕುವವ. ಮನಮೋಹನ್ ಸಿಂಗ್ ಸೋನಿಯಾರ spineless ಪೂಡ್ಲೋ, ಹರಿತವಾದ ಕುಡ್ಲೋ ಎಂದು ಸಮಯವೆ ಹೇಳಲಿದೆ. ಅಷ್ಟಕ್ಕೂ ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವದ ನಾಯಕರೊಬ್ಬರನ್ನು ಸಾಕು ನಾಯಿ ಎಂದು ಕರೆದು ಹೀಯಾಳಿಸುವ ಅವಶ್ಯಕತೆ ಅಥವಾ ಯೋಗ್ಯತೆ ಬ್ರಿಟನ್ ನಂಥ ದೇಶಕ್ಕಂತೂ ಇಲ್ಲ. ಗ್ರೇಟ್ ಬ್ರಿಟನ್ ಯಾವ ತೆರನಾದ ಪೂಡ್ಲ್ ಎಂದು ವಿಶ್ವಕ್ಕೆ ತಿಳಿದಿದೆ. ಅಮೇರಿಕಾ ಹೇಳಿದ್ದಕ್ಕೆಲ್ಲಾ ಹೂಂ ಎಂದು ಹೇಳುತ್ತಾ ವಿಶ್ವ ವನ್ನು ಒಂದು ಅಭದ್ರ ತಾಣ ವಾಗಿಸಿದ ಕೀರ್ತಿ ಇಂಗ್ಲೆಂಡ್ ದೇಶಕ್ಕಲ್ಲದೆ ಬೇರಾರಿಗೂ ಸಲ್ಲುವುದಿಲ್ಲ. ಅಮೆರಿಕೆಯ ಕುಂಡೆಗೆ ಭದ್ರವಾಗಿ weld ಮಾಡಿ ಕೊಂಡು ತನ್ನ ತನವನ್ನು ಕಳೆದುಕೊಂಡ ಬ್ರಿಟನ್ ತನ್ನ ತಟ್ಟೆಯಲ್ಲಿರುವುದತ್ತ ಕಣ್ಣು ಹಾಯಿಸುವುದು ಒಳ್ಳೆಯದು.
ನಾಯಕರನ್ನು ನಾಯಿಗೆ ಸಮಾನವಾಗಿ ತೋರಿಸುವುದು, ನಾಯಕರ ನ್ನು ಸ್ವಾಗತಿಸುವ ಚಿತ್ರ ಬಿಟ್ಟು ನಾಯಿಯ ಚಿತ್ರ ಹಾಕುವುದು ಬ್ರಿಟಿಷರ ಹಳೆಯ ಜಾಯಮಾನ. ಪ್ರಧಾನಿ ರಾಜೀವ ಗಾಂಧಿಯವರ ಚೊಚ್ಚಲ ಬ್ರಿಟಿಶ್ ಪ್ರವಾಸದ ಸಮಯ ಅವರನ್ನು ಸ್ವಾಗತಿಸಲು ಅಂದಿನ ಬ್ರಿಟಿಶ್ ಪ್ರಧಾನಿ ಮಾರ್ಗರೆಟ್ ಥ್ಯಾಚರ್ ವಿಮಾನ ನಿಲ್ದಾಣಕ್ಕೆ ಬಂದಿದ್ದರು. ಮಾರನೆ ದಿನದ ಪತ್ರಿಕೆಯಲ್ಲಿ ಥ್ಯಾಚರ್ ರಾಜೀವ್ ಹಸ್ತ ಲಾಘವ ಮಾಡುತ್ತಿದ್ದ ಚಿತ್ರದ ಬದಲು ಬಂದಿದ್ದು ವಿಮಾನ ನಿಲ್ದಾಣದಲ್ಲಿ ಕಾಯುತ್ತಾ ಇರುವಾಗ ಅಲ್ಲೇ ಇದ್ದ ಪೋಲೀಸ್ ನಾಯಿಯ ತಲೆ ಸವರುವ ಥ್ಯಾಚರ್ ರ ಚಿತ್ರ. ಇದು ಈ ಮಾಜೀ ಯಜಮಾನರು ನಮಗೆ ತೋರಿಸೋ ಮರ್ಯಾದೆ.