ಏಪ್ರಿಲ್ ಫೂಲ್ – ಮೂರ್ಖರ ದಿನ. ಮೋಜಿಗೆಂದೇ ಹೇಳಿದ ಹಸೀ ಸುಳ್ಳನ್ನು ನಂಬಿ ಮೋಸ ಹೋದರೆ ಮೋಸ ಹೋದವನು ಹೇಗೆ ಮೂರ್ಖನಾಗುತ್ತಾನೋ, ದೇವರೇ ಬಲ್ಲ. ನಾನು ಯಾರಿಗೂ ಫೂಲ್ ಮಾಡೋಲ್ಲ, ನನ್ನ ಮೇಲೆ ಅದನ್ನು ಪ್ರಯೋಗಿಸುವುದೂ ನನಗಿಷ್ಟವಲ್ಲ.
ಇಂದು ಬೆಳಿಗ್ಗೆ ನನ್ನ ತಮ್ಮನಿಗೆ ನನ್ನ ತಂಗಿ ಫೋನ್ ಮಾಡಿ ಅಣ್ಣ ಅತ್ತಿಗೆ ನಡುವೆ ದೊಡ್ಡ ಜಗಳ ನಡೀತಿದೆ, ನಾನು ಹೋಗಿ ಸಮಾಧಾನ ಮಾಡಿದರೂ ಕೇಳ್ತಾ ಇಲ್ಲ ಎಂದು ಫೋನ್ ಮಾಡಿದಳು. ತನ್ನ ಪಾಡಿಗೆ ತಾನು ಹೊಂಡಾ ಬೈಕ್ ಶೋ ರೂಮಿನಲ್ಲಿ ಸ್ಟಾಕ್ ತೆಗೆದು ಕೊಳ್ಳುತ್ತಿದ್ದ ನನ್ನ ತಮ್ಮ ಗಾಭರಿಯಾಗಿ ನನಗೆ ಕಾಲ್ ಮಾಡಿದ. ಪರಸ್ಪರ ಸೌಖ್ಯ ವಿಚಾರಿಸಿ ಕೊಂಡ ನಂತರ ಕೇಳಿದ “ಏನಣ್ಣಾ, ಪ್ರಾಬ್ಲಮ್ಮು?” ಪ್ರಾಬ್ಲಾಮ್ಮಾ, ಏನೂ ಇಲ್ವಲ್ಲಾ ಎಂದಾಗ ಅವನು ಅಲ್ಲಾ, ನೀನು ಅತ್ತಿಗೆ ಜಗಳ ಮಾಡಿ ಕೊಂಡಿದ್ದೀರಂತೆ ಎಂದು ಆತಂಕದಿಂದ ಕೇಳಿದ. ನನಗೆ ತಿಳಿಯಿತು ಓಹೋ ಇದು ಎಪ್ರಿಲ್ ಮೊದಲ ದಿನದ ಹುಚ್ಚು ಎಂದು. ಏನಿಲ್ಲ ಕಣೋ ಇವತ್ತು ಏಪ್ರಿಲ್ ಒಂದಲ್ವಾ ಎಂದು ಹೇಳುತ್ತಿದ್ದಂತೆ ಅವನಿಗೆ ಅರ್ಥವಾಗಿ ನಕ್ಕು ಫೋನ್ ಇಟ್ಟ.
ಈ ತಮಾಷೆಯಲ್ಲಿ ಸಿಕ್ಕಿದ್ದಾದರೂ ಏನು? ಒಂದು ದೊಡ್ಡ ಮೂರ್ಖ ನಗುವೋ?