ಮುತ್ತು ಕೊಡುವವಳು ಬಂದಾಗ…

ಮುತ್ತು ಕೊಡುವವಳು ಬಂದಾಗ ತುತ್ತು ಕೊಟ್ಟವಳನ್ನು ಮರೆಯಬೇಡ, ಹೀಗಂತ ಲಾರಿ ಮೇಲೋ ಆಟೋ ರಿಕ್ಷಾ ಮೇಲೋ ಬರೆದಿದ್ದನ್ನು ಓದಿದ ನೆನಪು. ತಾಯಿ, ಅಮ್ಮ, ಮಾತೆ, ಮಾತೋಶ್ರೀ, ಅಬ್ಬೆ, ಹೆಸರುಗಳೆಷ್ಟೇ ಇರಲಿ ಅವರ ಪಾತ್ರ ಮಾತ್ರ ಯಾರಿಂದಲೂ ಅನುಕರಿಸಲು ಆಗದ ಮಾತು. ಎಲ್ಲಾ ಸಂಸ್ಕೃತಿಗಳೂ ಮಾತೆಯ ಹಿರಿಮೆಯನ್ನು ಕೊಂಡಾಡಿವೆ. ತಾಯಿಯನ್ನು ಪೂಜಿಸಿಯೂ ಇವೆ. ಆದರೂ ಆಗಾಗ ನಾವು ನೋಡುವುದು, ಕೇಳುವುದು ವ್ಯತಿರಿಕ್ತವಾದುದನ್ನೇ. ತಾಯಿಯನ್ನು ತೆಗಳುವುದು, ಹಲ್ಲೆ ಮಾಡುವುದು, ಮುಪ್ಪಿನಲ್ಲಿ ಆಕೆಯನ್ನು ನೋಡಿ ಕೊಳ್ಳದೆ ವೃದ್ಧಾಶ್ರಮಕ್ಕೆ ಅಟ್ಟಿ ಮಗುಮ್ಮಾಗಿ ಇದ್ದು ಬಿಡುವುದು, ಹೀಗೆ ಆಕೆಯ ಅವಗಣನೆ ಸಾಮಾನ್ಯ ದೃಶ್ಯವಾಗುತ್ತಿದೆ. ಇಸ್ಲಾಮಿನಲ್ಲಿ ತಾಯಿಗೆ ಅತ್ಯುನ್ನತ ಸ್ಥಾನ ನೀಡಿ ಆಕೆಯನ್ನು ಚೆನ್ನಾಗಿ ನೋಡಿ ಕೊಳ್ಳುವುದು ಧರ್ಮದ ಒಂದು ಅಂಗವಾಗಿ ಪರಿಗಣಿಸಲಾಗಿದೆ. ಮಕ್ಕಳ ಸ್ವರ್ಗ ತಾಯಿಯ ಕಾಲಡಿ ಎಂದು ಪ್ರವಾದಿಗಳು ಹೇಳಿ ತಾಯಿಯ ಮಹತ್ವಕ್ಕೆ ಒಂದು ಮೆರುಗನ್ನೇ ನೀಡಿದರು.

ನಾಲ್ಕು ಮಕ್ಕಳನ್ನು ಹೆತ್ತ ತಾಯಿ ತನ್ನ ನಾಲ್ಕೂ ಮಕ್ಕಳನ್ನು ಕಷ್ಟಪಟ್ಟು ಬೆಳೆಸುತ್ತಾಳೆ, ಆರೈಕೆ ಮಾಡುತ್ತಾಳೆ, ಅವರು ತಮ್ಮ ಕಾಲ ಮೇಲೆ ನಿಲ್ಲುವ ತನಕ ತಾನು ವಿಶ್ರಾಂತಿ ತೆಗೆದುಕೊಳ್ಳದೆ ದುಡಿಯುತ್ತಾಳೆ ಅವರ ಏಳಿಗೆಗಾಗಿ. ಆದರೆ ದೊಡ್ಡವರಾದ ಮೇಲೆ ಈ ನಾಲ್ಕೂ ಮಕ್ಕಳು ಸೇರಿ ಒಬ್ಬ ತಾಯಿಯನ್ನು ನೋಡಿ ಕೊಳ್ಳಲಾಗದೆ ಆಕೆಯನ್ನು ತ್ಯಜಿಸುತ್ತಾರೆ.

ನಮ್ಮನ್ನು ಹೆತ್ತು ಬೆಳೆಸಿ, ಪ್ರೀತಿಸಿ, ಪೋಷಿಸಿ, ನಮ್ಮನ್ನು ಯಾರ ಹಂಗಿಗೂ ಬಿಡದೆ ಸ್ವಾಭಿಮಾನಿಗಳಾಗಿ ಬದುಕಲು ಬೇಕಾದ ಬದುಕಿನ ಹೆದ್ದಾರಿ ಸೃಷ್ಟಿಸುವ ತಾಯಿಗೆ ಈ ಮಾತೆಯರ ದಿನದಂದು ಒಂದು ಆದರಪೂರ್ವಕ ನಮನ.

ನಿಮ್ಮ ಟಿಪ್ಪಣಿ ಬರೆಯಿರಿ