ಹೇಗೆ ನಡೀತಿದೆ ಹೊಸ ವರ್ಷ?
ನನ್ನ ಈ ವರ್ಷದ ರೆಸಲ್ಯೂಶನ್ ‘ಶಾರ್ಟ್ ಹ್ಯಾಂಡ್’ ಕಲೀಬೇಕೆಂತಲೋ, ಪರ್ವತಾರೋಹಣ ಮಾಡಬೇಕೆಂದೋ ಅಲ್ಲ. ನನ್ನ ಹಣಕಾಸಿನ ಹದಗೆಟ್ಟ ಪರಿಸ್ಥಿತಿಯ ಕಡೆ ಗಮನ ಇಡೋದು. ಅದು ಬಿಟ್ಟರೆ ನನ್ನ ನೈಕೀ ಶೂ ನಿಂದ ಧೂಳು ಕೆಡವಿ, ಶೂ ಒಳಗೆ ಜಿರಳೆ, ಚೇಳು ಏನಾದರೂ ಸೇರಿಕೊಂಡಿಲ್ಲ ಎಂದು ಖಾತ್ರಿ ಪಡಿಸಿಕೊಂಡು ರಸ್ತೆ ಹಿಟ್ ಮಾಡೋದು. ಒಂದು ಕಾಲದಲ್ಲಿ ಬೊಜ್ಜು ಧನಿಕರ ಲಕ್ಷಣ. ಈಗ ಅದು ಸೋಂಬೇರಿ ತನದ ದ್ಯೋತಕ. ಬದುಕಿನ ಬಗ್ಗೆ careless attititude ಎಂದು ಪರಿಗಣಿತ ಬೊಜ್ಜುಳ್ಳವ. ಆದರೆ ಈ ವ್ಯಾಯಾಮ ಎನ್ನುವುದಿದೆಯಲ್ಲ ಅದು ಮಾಮೂಲಿ ಕೆಲಸ ಅಲ್ಲ. ಜಾಗ್ ಮಾಡಲು ರಿಮೈಂಡ ಮಾಡೇ ಎಂದರೆ ಮನದನ್ನೆ ಹೇಳುತ್ತಾಳೆ, ಮಗನಿಗೆ ಹೋಂ ವರ್ಕ್ ಮಾಡು, ಮಗಳಿಗೆ ಸೋಫಾದ ಮೇಲೆ ಕೂತು ತಿನ್ನಬೇಡ ಎಂದು ರಿಮೈಂಡ ಮಾಡಿ ಆಯುಷ್ಯ ಸವೆಸುತ್ತಿರುವುದು ಸಾಲದು ಈಗ ನಿಮಗೂ ರಿಮೈಂದ್ ಮಾಡ ಬೇಕಾ ಓಡಲು ಎಂದು ಮೂಗು ಮುರಿಯುತ್ತಾಳೆ. ಹೋಗಲಿ ಜೊತೆಗೆ ಬಾ ಎಂದರೆ ಬರಲು ತಯಾರಿಲ್ಲ. ಅವಳ ಪ್ರಕಾರ ಖಾಲೆಸ್ಟ್ರಾಲು, ಬೀಪೀ, ಟ್ರೈ ಗ್ಲಿಸರೈಡ್, ಹಾಳೂ ಮೂಳೂ ಎಲ್ಲಾ ಗಂಡಸರಿಗೆ ಮಾತ್ರ, ಮಹಿಳೆಯರ ಹತ್ತಿರ ಸುಳಿಯೋದಿಲ್ಲ ಅಂತ. ಹೌದು, ನಾನೂ ಇಲ್ಲಿಯವರೆಗೂ ಹೆಚ್ಚಾಗಿ ಕೇಳಿರೋದು ಗಂಡಸರಿಗೇ ಈ ಅಟ್ಯಾಕು, ಸ್ಟ್ರೋಕು. ನೀವು ಕೇಳಿದ್ದೀರಾ, ಮಹಿಳೆಯರಿಗೆ ಇದು ತಗುಲಿರೋದು? ತೀರಾ ಇಲ್ಲ ಎಂದಲ್ಲ, ಆದರೆ ಅಪರೂಪ. ಹಾಗಾದರೆ ಅವರಿಗೆ ತಗಲೋ ರೋಗ ಯಾವುದು? ಛೀ, ನನ್ನ ಪ್ರಾಬ್ಲಂ ಅದಲ್ಲ. ನನ್ನ ಬೊಜ್ಜು ಮತ್ತು ನನ್ನ ಬೊಕ್ಕಸ. ಇವು ನನ್ನ ಪ್ರಾಬ್ಲಂಗಳು. ಇವೆರಡನ್ನ ಸರಿಯಾಗಿ ನೋಡಿಕೊಂಡರೆ ಬಾಳು ಸುಂದರ, trouble free, stroke free. ಸರಿ ಜನವರಿ ಒಂದರಂದು ಶೂ ಕೊಡವಿ, ಒಳಗೇನೂ ಚೇಳು, ಹುಳು ಇಲ್ಲ ಎಂದು ಖಾತ್ರಿಪಡಿಸಿಕೊಂಡು ರಸ್ತೆ ಹಿಟ್ ಮಾಡಿದೆ. ಇಲ್ಲಿ ಸಾಮಾನ್ಯವಾಗಿ ಜಾಗ್, ವಾಕ್ ಮಾಡೋದು ರಾತ್ರಿ ಸಮಯ. ಮರುಭೂಮಿಯ ಹಗಲಿನ ಉಷ್ಣ ನಿಮಗೆ ಗೊತ್ತೇ ಇದೆಯಲ್ಲ. ಆ ಉಷ್ಣದಲ್ಲಿ ಜಾಗಿಂಗ್ ಮಾಡಿದರೆ ಜಾಗ್ ಮುಗಿಯುವ ಮೊದಲೇ ಮನುಷ್ಯ ಕರಗಿ ನೀರಾಗಿ ಚರಂಡಿ ಸೇರಿರುತ್ತಾನೆ. ಸಂಜೆಯಾದರೆ ವಾತಾವರಣ ಸ್ವಲ್ಪ ಮಾನವೀಯತೆ ತೋರಿಸಲು ಆರಂಭಿಸುತ್ತೆ. ಹಾಗಾಗಿ ಸಂಜೆ ಅಥವಾ ರಾತ್ರಿ ಪ್ರಶಸ್ತ. ಮನೆಯ ಹತ್ತಿರವೇ ಇರುವ ೮ ಲೇನುಗಳ ರಸ್ತೆಯ ಮಧ್ಯೆ ಖರ್ಜೂರದ ಸಾಲು ಮರಗಳ ನಡುವಿನ paved sidewalk ಮೇಲೆ ನನ್ನ ಹೊಸವರ್ಷದ ರೆಸಲ್ಯುಶನ್ ಸಾಕಾರಗೊಳಿಸಿದೆ. ಮನೆಯಿಂದ ಹೊರಡುವಾಗ ಎಷ್ಟು ದಿನ ಈ ಡ್ರಾಮ ಎಂದು ಕಣ್ಣಲ್ಲೇ ಕೇಳಿದ ಮಡದಿಗೆ smiley face ಕೊಟ್ಟು, ಬಾಬಾ, ಬರುವಾಗ strawberry juice ತಗೊಂಡ್ ಬಾ ಎಂದು ಅರಚಿದ ಮಗಳಿಗೆ ತರುತ್ತೇನೆ ಬಾಯ್ ಎಂದು ಹೇಳಿ ಮನೆಯಿಂದ ಹೊರಟೆ. ಆಹ್ಲಾದಕರ ಸಂಜೆ, ತುಂಬಾ ದಿನಗಳ ನಂತರ ನೋಡಿದ ನನ್ನನ್ನು ಖರ್ಜೂರದ ಮರಗಳು ದಿವ್ಯ ಅಸಡ್ಡೆ ತೋರಿಸಿದವು. ರಾತ್ರಿಯಾದ್ದರಿಂದ ಟ್ರಾಫಿಕ್ ಕಡಿಮೆ, ಹಾಗಾಗಿ ಪಡ್ಡೆ ಹುಡುಗರ ಭರ್ರೋ ಭರ್ರೋ ಎಂದು ೧೫೦ ಕಿ ಮೀ ವೇಗದ ಕಾರಿನ ರೇಸು. ಜನವರಿ ಒಂದಕ್ಕೆ ಆರಂಭವಾದ ನನ್ನ ಈ ವಾಕ್ ಈಗಲೂ ಮುಂದುವರೆದಿದೆ. ಶುಭ ಲಕ್ಷಣ.
ಮೊನ್ನೆ ಗುರುವಾರ ಕಮೆನಿಯಲ್ಲಿ get together. ಹಲವಾರು ಬಹುಮಾನಗಳನ್ನು ಇಟ್ಟಿರುತ್ತಾರೆ. ಗ್ಯಾಲಕ್ಸಿ ಟ್ಯಾಬ್ ಗಳು, ಮೊಬೈಲ್ ಫೋನ್ ಗಳು, ರಿಸ್ಟ್ ವಾಚ್ ಗಳು. ನಗದು ಬಹುಮಾನಗಳು… ಎಲ್ಲಾ ಉದ್ಯೋಗಿಗಳಿಗೂ ಸಿಗುವಂತೆ ಕಾಮನ್ ನಗದು ಬಹುಮಾನ ಸಹ ಇರುತ್ತದೆ. ತಲಾ ಒಬ್ಬೊಬ್ಬರಿಗೆ ೧೦ ಸಾವಿರ ಸಿಗುತ್ತದೆ ಕಾಮನ್ ಬಹುಮಾನ. ಆಟ ಓಟಗಳಲ್ಲಿ ಗೆದ್ದವರಿಗೆ ಬಹುಮಾನ. ಹೀಗೆ ಬಹುಮಾನಗಳ ಸುಗ್ಗಿ. ಸುಮಾರು get together ಗಳಲ್ಲಿ ಭಾಗವಹಿಸಿದ ನನಗೆ ದೊಡ್ಡ ರೀತಿಯ ಬಹುಮಾನ ಗಿಟ್ಟಿ ಲ್ಲ. ಗೆಲ್ಲುವ ಮುಸುಡಿ ನನ್ನದಲ್ಲ ಎಂದು ನನ್ನ ಒಳಮನ ಹೇಳುತ್ತದೆ. ಆದರೂ ಆಸೆ ಅನ್ನೋದು ಒಂದಿರುತ್ತಲ್ಲ. ಈ ಸಲದ ಬಂಪರ್ ನಗದು ಬಹುಮಾನ ಸುಮಾರು ಎಪ್ಪತ್ತು ಸಾವಿರ ಎಂದಾಗ ವಾವ್ ಎನ್ನುವ ಸ್ವರದೊಂದಿಗೆ ಜೊಳ್ಳೂ ಉದುರಿತು. ಊಟದ ನಂತರ ಮಧ್ಯಾಹ್ನ ೨ ಕ್ಕೆ ಆರಂಭವಾದ ಚಟುವಟಿಕೆಗಳು ಮಧ್ಯ ರಾತ್ರಿ ಮೀರಿ ನಡೆದವು. ರಾತ್ರಿ ಒಂದು ಘಂಟೆಗೆ ಶುರು ನಗದು ಬಹುಮಾನಗಳ raffle. ಮೊಟ್ಟ ಮೊದಲ raffle ನಲ್ಲಿ ಹೆಸರು ಬಂದರೆ ಮೂರನೇ ಬಹುಮಾನ, ೨೮,೦೦೦ ರೂಪಾಯಿ. ಅದರ ನಂತರ ಬರುವ ಹೆಸರುಗಳಿಗೆ common prize. ಪಟ್ಟಿಯ ಅರ್ಧ ಹೆಸರುಗಳು ಮುಗಿದ ನಂತರ ಬರುವ ಮತ್ತೊಂದು ಹೆಸರಿಗೆ ೩೬,೦೦೦. ಅದರ ನಂತರ ಮತ್ತಷ್ಟು ಹೆಸರುಗಳು. ಎಲ್ಲ ಕಾಮನ್ ಬಹುಮಾನಗಳಿಗಾಗಿ. ಕೊನೆಯ ಬಂಪರ್ ಬಹುಮಾನಕ್ಕೆ ಇನ್ನೂ ಐದು ಹೆಸರುಗಳು ಉಳಿದು ಕೊಂಡವು. ಅವುಗಳಲ್ಲಿ ನನ್ನದೂ ಒಂದು. ಈಗ ಗೆಳೆಯರ ಬಳಗದಲ್ಲಿ ಗುಸು ಗುಸು. ನನ್ನ ಪತ್ನಿಯಂತೂ ಯಾವುದೆ excitement ತೋರಿಸದೆ ಸುಮ್ಮನೆ ಕುಳಿತಿದ್ದಳು, ನನಗೆ ಬರುವ ಚಾನ್ಸ್ ಇಲ್ಲ ಎಂದು. ನನಗಂತೂ ಒಂದು ರೀತಿಯ ಆತ್ಮ ವಿಶ್ವಾಸ. ಆತ್ಮ ವಿಶ್ವಾಸ ಹೊಂದಲು ಚಿಕ್ಕಾಸಿನ ಖರ್ಚಿಲ್ಲವಲ್ಲ. ನನಗೇ ತಗಲೋದು ಎನ್ನುವ ಫೋಸು. ಕೊನೆಗೆ ಮೂರು ಹೆಸರುಗಳು ಉಳಿದು ಕೊಂಡವು, ನನ್ನ ಹೆಸರೂ ಸೇರಿ. ಮತ್ತೊಂದು ಹೆಸರಿನ ಕೂಗೂ ಮುಗಿಯಿತು, ನಾನು ಬಚಾವ್. ಕೊನೆಗೆ ಎರಡು ಹೆಸರುಗಳು. ಹೆಸರು ಕೂಗುವ ನಮ್ಮ operations director ಸ್ವಲ್ಪ ಲವಲವಿಕೆಯವರು. ಬೇಗನೆ ಹೆಸರನ್ನು ಕೂಗೋಲ್ಲ. ನನ್ನ ಆತ್ಮ ವಿಶ್ವಾಸ ನಿಧಾನವಾಗಿ ಆವಿಯಾಗಿ ಹೋಗತೊಡಗಿತು. ಇಷ್ಟು ದೂರ ಬಂದ ನಾನು ಬಂಪರ್ ಪಡೆಯದೇ ಹೋದರೆ?
ಮೆಲ್ಲಗೆ ನನ್ನ ಪತ್ನಿಯ ಕಡೆ ಕಣ್ಣು ಹೊರಳಿಸಿದೆ, ಮುದ್ದೆಯಾಗಿ ಕೂತವಳು ಸ್ವಲ್ಪ ಎಚ್ಚರವಾದಳು. ಗೆಲುವಿನ ವಾಸನೆ ಬಡಿದು ಶಾಪಿಂಗ್ ಲಿಸ್ಟ್ ಸುರು ಸುರುಳಿ ಯಾಗಿ ಅವಳ ಕಣ್ಣ ಮುಂದೆ ಹಾದು ಹೋಗಿರಬೇಕು. ನಾನು ನನ್ನ ಮೈ ಕೊಡವಿಕೊಂಡೆ, ಒಹ್, ಬಹುಮಾನ ಸಿಗದಿದ್ದರೇನಂತೆ, ನಾನೇನೂ ಅದಕ್ಕಾಗಿ ಹಣ ಹೂಡಿಲ್ಲವಲ್ಲ, ಎಂದು ಆವಿಯಾಗಿ ಮಾಯವಾಗುತ್ತಿದ್ದ ಆತ್ಮವಿಶಾಸವನ್ನು ಮತ್ತೊಮ್ಮೆ ಹಿಂದಕ್ಕೆ ಕರೆಸಿದೆ. ಒಂದಿಷ್ಟು ಕಾಲೆಳೆತ ಅದೂ ಇದೂ ಎಂದು ನಮ್ಮನ್ನು ಪರದಾಡಿಸಿ ಡಬ್ಬ ದೊಳಕ್ಕೆ ಕೈ ಬಿಟ್ಟರು ನತದೃಷ್ಟ ಹೆಸರನ್ನು ಕರೆಯಲು. ಸುರುಳಿ ಮಾಡಿ ಇಟ್ಟಿದ್ದ ಹೆಸರನ್ನು ಮೆಲ್ಲಗೆ ತೆರೆಯುತ್ತಾ ನನ್ನತ್ತ ನೋಟ ಹರಿಸಿದರು ಬಾಸ್. ನನ್ನ ಕತೆ ಮುಗಿಯಿತು ಎಂದು ನಾನಂದು ಕೊಳ್ಳುತ್ತಿದ್ದಂತೆ ಹೊರಬಂತು ಹೆಸರು ಅವರ ಬಾಯಿಂದ. ನತದೃಷ್ಟ ಹೆಸರು. ಪಾಪದ common ಬಹುಮಾನದ ವಾರೀಸುದಾರನ ಹೆಸರು. ಸಖೇದಾಶ್ಚರ್ಯ, ಆ ಹೆಸರು ನನ್ನದಾಗಿರಲಿಲ್ಲ. ನಾನು ಕೆಲಸ ಮಾಡುವ finance department ನಿಂದ ದೊಡ್ಡ ಕೂಗು, ನನಗೆ ಬಹುಮಾನ ಸಿಕ್ಕ ಖುಷಿಯಲ್ಲಿ. ನನ್ನ ಮಡದಿ ಅವಳ ಗೆಳತಿಗೆ ಇವತ್ತಿನ ಚಿನ್ನದ ರೇಟೇನೆಂದು ಕೇಳುತ್ತಿದ್ದ ಹಾಗೆ ಖುಷಿಯಿಂದ ಓಡಿದೆ ಬಹುಮಾನ ಪಡೆಯಲು. ಎಪ್ಪತ್ತು ಸಾವಿರ ಭರ್ತಿ.