why do they hate us?

ಆಫ್ಘಾನಿಸ್ತಾನದಲ್ಲಿ ಅಮೆರಿಕೆಯ ಸೈನ್ಯ ದಿಂದ ಮತ್ತೊಂದು ಅತಿರೇಕ. ಕೆಲ ದಿನಗಳ ಹಿಂದೆ ಪವಿತ್ರ ಕುರ್’ಆನ್ ಗ್ರಂಥಗಳನ್ನು ಸುಟ್ಟು ಸುದ್ದಿ ಮಾಡಿದ ಅಮೆರಿಕನ್ನರು ಈಗ ಸಾಮೂಹಿಕ ಕಗ್ಗೊಲೆ ಮೂಲಕ ಮತ್ತೊಮ್ಮೆ ವಿವಾದದ ಸುಳಿಗೆ ಸಿಕ್ಕಿ ಬಿದ್ದಿದ್ದಾರೆ. ಅಮೆರಿಕೆಯ ಸೈನಿಕನೊಬ್ಬ ತನ್ನ ಬ್ಯಾರಕ್ ನಿಂದ ಮಧ್ಯರಾತ್ರಿ ಎದ್ದು ಸಮೀಪದ ಗ್ರಾಮಕ್ಕೆ ನುಗ್ಗಿ ಮನೆಗಳಲ್ಲಿ ಮಲಗಿದ್ದ ಜನರ ಮೇಲೆ ಎರ್ರಾ ಬಿರ್ರಿ ಗುಂಡಿನ ಧಾಳಿ ನಡೆಸಿ ೧೬ ಜನರನ್ನು ಕೊಂದ. ಸತ್ತವರಲ್ಲಿ ೯ ಮಕ್ಕಳು ಸೇರಿದ್ದರು. ಈ ತೆರನಾದ senseless ಕೃತ್ಯಗಳು ಒಂದಲ್ಲ, ಎರಡಲ್ಲ, ನಮ್ಮ ಅರಿವಿಗೆ ಬಂದಿರುವುದು. ೨೦೦೬ ರಲ್ಲಿ ಇರಾಕಿನಲ್ಲಿ ೧೪ ವರ್ಷ ಪ್ರಾಯದ ಹುಡಗಿಯ ಮೇಲೆ ಅತ್ಯಾಚಾರ ಎಸಗಿ ಆಕೆಯನ್ನೂ  ಆಕೆಯ ಇಡೀ ಕುಟುಂಬವನ್ನೂ ಅಮೆರಿಕೆಯ ಸೈನಿಕರು ಕೊಂದು ಹಾಕಿದ್ದರು.

ಈತ ಮಾನಸಿಕವಾಗಿ ಅಸ್ವಸ್ಥ ಎಂದು ಹೇಳಿ ಕೈ ತೊಳೆದು ಕೊಳ್ಳಲು ಅಮೇರಿಕಾ ನೋಡುತ್ತಿದೆ. ದೀರ್ಘಕಾಲದ ಮಿಲಿಟರಿ ಸೇವೆಯ ಕಾರಣ ಸೈನಿಕರು ಒತ್ತಡಕ್ಕೆ ಸಿಲುಕಿ ಕೊಳ್ಳುತ್ತಾರಂತೆ. ಇದನ್ನು ಆಂಗ್ಲ ಭಾಷೆಯಲ್ಲಿ PTSD ( post traumatic stress disorder ) ಎಂದು ಕರೆಯುತ್ತಾರೆ. ಆದರೆ ಈ ಸೈನಿಕ ptsd ಯಿಂದ ಬಳಲುತ್ತಿದ್ದನೆ ಎನ್ನುವುದು ಗೊತ್ತಿಲ್ಲ.  

ಅವಕಾಶ ಸಿಕ್ಕಾಗ ಯಾವುದಾದರೂ ದೇಶದೊಳಕ್ಕೆ ನುಗ್ಗುವುದು ಹೇಗೆ ಎಂದು ವಿಶ್ವದ ಸೂಪರ್ ಪವರ್ ಅಮೆರಿಕೆಗೆ ಯಾರೂ ಹೇಳಿ ಕೊಡಬೇಕಿಲ್ಲ. ಆದರೆ ನುಗ್ಗಿದ ನಂತರ ಅಲ್ಲಿನ ಜನರ ರೀತಿ ರಿವಾಜು, ಸಂಸ್ಕೃತಿ ಮುಂತಾದುವುಗಳ ಬಗ್ಗೆ ಸರಿಯಾಗಿ ಟ್ರೇನ್ ಮಾಡಲು ಜನರ ಅವಶ್ಯಕತೆ ಇದೆ ಎಂದು ಅಮೆರಿಕೆಯ ಸೈನ್ಯ ಎಸಗಿದ ಕೃತ್ಯಗಳು ಹೇಳುತ್ತವೆ.

ನನ್ನ ಅಮೆರಿಕೆಯ ಭೇಟಿ ವೇಳೆ ಕೆಲವು ಅಮೆರಿಕನ್ನರ ಭೇಟಿಯಾಯಿತು ರೆಸ್ಟುರಾಂಟ್ ಒಂದರಲ್ಲಿ. ಹೀಗೇ ಮಾತನಾಡುತ್ತಿದ್ದಾಗ ಅವರುಗಳು ಹೇಳಿದ್ದು,  we do so much to poor and needy countries in the world and why do they still hate us? ಇದಕ್ಕೆ ಉತ್ತರ ನನ್ನ ಬಳಿ ಇದ್ದರೂ ಹೇಳಲು ಸಾಧ್ಯವಾಗಲಿಲ್ಲ.  ಕಾರಣ ನಾನು ಅವರ ಅತಿಥಿ. ಅತಿಥಿ ನಲ್ನುಡಿಗಳನ್ನೇ ಆಡಬೇಕು, ಎಷ್ಟೇ ಕಷ್ಟವಾದರೂ.

ನಿಮ್ಮ ಟಿಪ್ಪಣಿ ಬರೆಯಿರಿ