ತಾಳ್ಮೆ ತಂದು ಕೊಳ್ಳಿ…ಇದು ಮುಲಾಯಂ ಸಿಂಗರ ಸಮಾಜವಾದೀ ಪಕ್ಷ ಪ್ರಮುಖ ವಿರೋಧ ಪಕ್ಷ ಭಾ.ಜ.ಪ ಕ್ಕೆ ಹೇಳಿಕೊಟ್ಟ ಮಂತ್ರ. ಉತ್ತರ ಪ್ರದೇಶದ ಚುನಾವಣೆಯಲ್ಲಿ ಅಭೂತಪೂರ್ವ ಯಶಸ್ಸನ್ನು ಸಾಧಿಸಿದ ಸಮಾಜವಾದೀ ಪಕ್ಷ ದೊಡ್ಡ ದೊಡ್ಡ ಪಕ್ಷಗಳಿಗೆ ದೊಡ್ಡ ಆಘಾತವನ್ನೇ ನೀಡಿತು. ಉತ್ತರ ಪ್ರದೇಶ, ಉತ್ತರ್ ಖಾಂಡ್, ಪಂಜಾಬ್, ಗೋವಾ. ಸಿಕ್ಕಿಂ ರಾಜ್ಯಗಳಲ್ಲಿ ನಡೆದ ಚುನಾವಣೆಗಳು ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಭರವಸೆಯನ್ನೇನೂ ನೀಡಿಲ್ಲ. ಯುವರಾಜ ಎಂದೇ ಬಿರುದಾಂಕಿತರಾದ ರಾಹುಲ್ ಗಾಂಧಿಯವರ ವರ್ಚಸ್ಸು ಅಷ್ಟಾಗಿ ಕೆಲಸ ಮಾಡಿಲ್ಲ. ಇದೇ ಹಣೆ ಬರಹವೇ ಭಾಜಪ ದ್ದೂ ಸಹ. ಹಾಗಾಗಿ ಕಾಂಗ್ರೆಸ್ ಆಗಲೀ, ಭಾಜಪ ವಾಗಲೀ ಈಗಲೇ ಕೇಂದ್ರದ ಕುರ್ಚಿಯ ವಾಸನೆ ತಮ್ಮ ಮೂಗಿಗೆ ತಾಗಿಸಿ ಕೊಳ್ಳುವ ಆತುರ ತೋರಬೇಕಿಲ್ಲ. ಹಾಗೆಯೇ ಭಾಜಪ ತನ್ನ ಪಕ್ಷದ outlook ಅನ್ನು drastic ಆಗಿ ಬದಲಿಸಿ ಕೊಳ್ಳುವ ಅಗತ್ಯವೂ ಸಹ ಇದೆ.
ನಮ್ಮ ದೇಶ ವಿಭಿನ್ನ ಸಂಸ್ಕೃತಿಗಳ ಬೀಡು. ಭಾರತೀಯ ಸಂಸ್ಕೃತಿ ಶ್ರೀಮಂತಗೊಂಡಿರುವುದು ಹಲವು ಸಂಸ್ಕಾರಗಳನ್ನು, ನಂಬಿಕೆಗಳನ್ನು ತನ್ನದು ಎಂದು ಒಪ್ಪಿಕೊಳ್ಳುವ ಔದಾರ್ಯದ ಕಾರಣ. ಇದನ್ನು ಗಮನದಲ್ಲಿಟ್ಟು ಕೊಂಡು ಎಲ್ಲರನ್ನೂ ಸೇರಿಸಿಕೊಂಡು ದೇಶ ಕಟ್ಟುವ ಸಂಕಲ್ಪ ಈ ಪಕ್ಷ ಮಾಡಿದರೆ ದಿಲ್ಲಿ ಗದ್ದುಗೆ ಸನಿಹ.