ಎಲ್ಲದಕ್ಕೂ ಧೋನಿಯೇ ಕಾರಣ

ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟಿನಲ್ಲಿ ಭಾರತ ಮತ್ತೊಮ್ಮೆ ಸೋತಿತು. ಮೊದಲ ಟೆಸ್ಟಿನ ಪಂಗ ನಾಮದ ನಂತರ ಒಂದು ಒಳ್ಳೆಯ ಪ್ರದರ್ಶನ ನೀಡಿ ತಿರುಗೇಟು ನೀಡಬಹುದು ಎಂದು ಕಾತುರದಿಂದ ನಿರೀಕ್ಷಿಸಿದ್ದ ನಮಗೆ ದಕ್ಕಿದ್ದು ಮತ್ತೊಂದು ಲಾತಾ. ಮೊದಲ ಇನ್ನಿಂಗ್ಸ್ ನಲ್ಲಿ ಮುನ್ನಡೆ ಸಾಧಿಸಿದ್ದು ಬಿಟ್ಟರೆ ಪಂದ್ಯದ ಉಳಿದೆಲ್ಲಾ ಸೆಷನ್ಸ್ ಗಳಲ್ಲೂ ಮಿಂಚಿದ್ದು ಬಿಳಿಯರೇ. ಇಂಗ್ಲೆಂಡ್ ತಂಡ ಒಂದು ಪರಿಪೂರ್ಣ ತಂಡವಾಗಿ, ಪರಿಪಕ್ವತೆ ಯಿಂದ ಕ್ರಿಕೆಟ್ ಆಡುತ್ತಿದೆ ಎಂದರೆ ಯಾರೂ ಅಲ್ಲಗಳೆಯಲಾರರು. ಸರಿ ಸೋತಿದ್ದು ಒಂದು ಒಳ್ಳೆಯ ತಂಡದೆದುರು. ಅದರಲ್ಲೇನು ಅವಮಾನ? ಮುಜುಗುರ? ಹಾಗಂತ ನಾನೂ, ನೀವೂ ಹೇಳಬಹುದು,TRP ಸಲುವಾಗೇ ಬದುಕುವ, TRP ಏರಲು ಯಾವ ಪಾತಾಳಕ್ಕೂ ಇಳಿಯಲು ಹೇಸದ ಮಾಧ್ಯಮಕ್ಕೆ ಆಟದ ಗಮ್ಮತ್ತು, ಅದರ ಕೌಶಲ್ಯ, ವೃತ್ತಿ ಪರಿಣತೆ ಎಲ್ಲಾ ಅರ್ಥವಾಗಲು ಸಾಧ್ಯವೇ? ಸೋತು ತಂಡ ಪೆವಿಲಿಯನ್ ಸೇರಿಕೊಳ್ಳುವ ಮುನ್ನವೇ ಶುರುವಾಯಿತು ಧೋನಿಯ ಮತ್ತು ತಂಡದ ಅಂತ್ಯ ಸಂಸ್ಕಾರ. ಸತ್ತ ಹೆಣದ ಮುಂದೆ ಲಬೋ ಲಬೋ ಎಂದು ಎದೆ ಬಡಿದು ಕೊಳ್ಳುವ ರೀತಿಯಲ್ಲಿ ಆಡಿದವು ಮಾಧ್ಯಮಗಳು. ಸ್ಟಾರ್ ಟೀವಿ ಕತೆ ಹೇಳಬೇಕಿಲ್ಲ. ‘ಧೋನಿ ಕಾರಣ ಈ ಸೋಲಿಗೆ’, ‘ಧೋನಿ ನಾಯಕತ್ವದಲ್ಲಿ ಸೋಲು’, ‘ಧೋನಿ ನಾಯಕತ್ವದಲ್ಲಿ ಮೊಟ್ಟ ಮೊದಲ, ಅತಿದೊಡ್ಡ ಸೋಲು’, ಧೋನಿ… ಧೋನಿ… ಧೋನಿ… ಎಂದು ಅರಚಲು ಶುರು ಮಾಡಿತು. ಯಾಕೆ ತಂಡದಲ್ಲಿ ಒಂದೇ ಧೋನಿಯೇ ಇರೋದು? ಇನ್ನೂ ದೊಡ್ಡ ದೊಡ್ಡ ‘ದೋಣಿ’ ಗಳಿದ್ದವಲ್ಲ? ಅವಕ್ಕೆಲ್ಲಾ ಏನಾಗಿ ಬಿಟ್ಟಿತು? ಹನ್ನೊಂದು ದೋಣಿ ಗಳಲ್ಲಿ ಒಂದು ಕೆಟ್ಟಿತು, ಬಾಕಿ ಹತ್ತು?

ಇಂಗ್ಲೆಂಡ್ ನ ಬೌಲಿಂಗ್ ಪ್ರಾವೀಣ್ಯತೆ ನೋಡಿದವರಿಗೆ ಅರ್ಥವಾಗುತ್ತೆ. ಬಾಕಿ ಉಳಿದ ಎರಡು ಟೆಸ್ಟ್ ಗಳಲ್ಲಿ ಸೋಲದೆ ಡ್ರಾ ಮಾಡಿ ಕೊಂಡು ಬಂದರೂ ಅದು ದೊಡ್ಡ ಸಾಹಸವೇ ನಮ್ಮ ಪಾಲಿಗೆ. ಅಷ್ಟು ಚೊಕ್ಕ ಬೌಲಿಂಗ್ ಪ್ರದರ್ಶನ. ಇಂಗ್ಲೆಂಡ್ ಎಸೆದ ಶಾರ್ಟ್ ಪಿಚ್ ಬಾಲ್ ಗಳನ್ನು ನಾವು ಆಡಿದ ರೀತಿ ನೋಡಿದವರಿಗೆ ತಿಳಿಯುತ್ತೆ ನಮ್ಮ ತಯಾರಿ ಬಗ್ಗೆ, ನಮ್ಮ ಟೆಕ್ನಿಕ್ ಬಗ್ಗೆ. ಎರಡನೇ ಇನ್ನಿಂಗ್ಸ್ ನಲ್ಲಿ ಶಾರ್ಟ್ ಪಿಚ್ ಬಾಲ್ ಒಂದನ್ನು ಆಡಲು ಹೋಗಿ ಎಲ್ಲಿಗೋ ಬ್ಯಾಟ್ ಬೀಸಿದ ಯುವರಾಜ್ ಸಿಂಗ್, ತಾನು ಹೊಡೆದ ಬಾಲ್ ಎಲ್ಲಿಗೋ ಹೋಗಿ ಫೀಲ್ಡರ್ ಕೈ ಸೇರಿದ್ದು ಬೆಪ್ಪನಂತೆ ನೋಡಿದ ದೃಶ್ಯ ಅವಿಸ್ಮರಣೀಯ. ಔಟ್ ಆಗಿ ಆತ ಕ್ರೀಸ್ ಬಿಟ್ಟು ಹೋಗುವಾಗ ಮಾಡಿದ ಮುಸುಡಿಯ ದೃಶ್ಯ (ತರಡು ಬೀಜ ಕಳಕೊಂಡಾಗ ಆಗುವ ರೀತಿ) ಬಹಳ ಕಾಲ ನಮ್ಮ ಮನದಲ್ಲಿ ನಿಲ್ಲುತ್ತದೆ.           

ವೆಸ್ಟ್ ಇಂಡೀಸ್ ಪದ್ಯವೊಂದರಲ್ಲಿ ಗೆದ್ದ ನಂತರ ಅಂಪೈರಿಂಗ್ ಚೆನ್ನಾಗಿದ್ದಿದ್ದರೆ ಇನ್ನೂ ಬೇಗೆ ಗೆದ್ದು ಪೆವಿಲಿಯನ್ ಗೆ ತೆರಳಿ ವಿಶ್ರಮಿಸಬಹುದಿತ್ತು ಎಂದು ಕೊರಗಿದ್ದ ಧೋನಿಗೆ ಎರಡನೇ ಟೆಸ್ಟನ್ನು ಕೇವಲ ಮೂರೂವರೆ ದಿನಗಳಲ್ಲಿ ಮುಗಿಸಿ ಸುದೀರ್ಘ ವಿಶ್ರಮ ಇಂಗ್ಲೆಂಡ್ ಕೊಟ್ಟಿದ್ದು ಈ ಪಂದ್ಯದ ವೈಶಿಷ್ಟ್ಯ. ಈ ವಿಶ್ರಮ ಧೋನಿ ಪಾಲಿಗೆ ಸ್ವಯಂ ನಿವೃತ್ತಿ ತೆರನಾದ ವಿಶ್ರಾಮವಾಗದಿರಲಿ ಎಂದು ಹಾರೈಸುತ್ತಾ..

ನಿಮ್ಮ ಟಿಪ್ಪಣಿ ಬರೆಯಿರಿ