ಗರ್ಭ ಧರಿಸಬೇಕೇ? ಚೆನ್ನಾಗಿ ಹಲ್ಲುಜ್ಜಿ ಪಾಶ್ಚಾತ್ಯರಲ್ಲದ ಸಂಸ್ಕೃತಿಯ ವಿವಾಹಿತ ಮಹಿಳೆಯರೆಲ್ಲರ ಬಯಕೆ ಏನೆಂದರೆ ಒಂದು ಸುಂದರ ತಮ್ಮಂತೆ ಅಥವಾ ತಮ್ಮ ಗಂಡಂದಿರನ್ನು ಹೋಲುವ ಒಂದು ಮಗುವಿಗೆ ಜನ್ಮ ಕೊಡುವುದು. ಮದುವೆಯಾಗಿ ಒಂದು ವರ್ಷದ ಒಳಗೆ ಮಗು ಆಗದಿದ್ದರೆ ಗಾಭರಿ ಆತಂಕ ಶುರುವಾಗುತ್ತೆ. ಎರಡು ವರ್ಷಗಳ ಮೇಲೂ ಮಗುವಾಗದಿದ್ದರೆ ಗುಸು ಗುಸು ಶುರು. ಗಂಡ ಹೆಂಡಿರಿಗಿಂತಲೂ, ಅವರಿಬ್ಬರ ಮನೆಯವರಿಗಿಂತಲೂ ಹೆಚ್ಚಿನ ಚಿಂತೆ ನೆರೆಹೊರೆಯವರಿಗೆ, ಹೊಟ್ಟೆ ಉಬ್ಬದಾದಾಗ. ವ್ರತ, ಹರಕೆ, ಸ್ವಾಮಿಗಳ ಭಸ್ಮ ಅದೂ ಇದೂ ಎಂದು ಓಡಾಟ. ಪರಿಚಯದ ದಂಪತಿಗಳು ‘ಆಸನ’ ಬದಲಿಸಲೂ ಸಲಹೆ ನೀಡುತ್ತಾರೆ. ಒಟ್ಟಿನಲ್ಲಿ ಒಂದು ರೀತಿಯ emergency situation ನಿರ್ಮಾಣ ಆಗುತ್ತೆ. ಆದರೆ ಇಷ್ಟೆಲ್ಲಾ ಸರ್ಕಸ್ ಏಕೆ? ಇರುವ, time tested ಆಸನವೇ ಫೈನ್, ಜಸ್ಟ್ ಬ್ರಶ್ ಎವ್ವೆರಿ ಡೇ.. ಹಾಂ? ಬ್ರಶ್? ಚೆನ್ನಾಗಿ ಹಲ್ಲುಜ್ಜಿದರೆ ಮಗು ಆಗುತ್ತಾ?
ಹೌದು ಎನ್ನುತ್ತಾರೆ ಆಸ್ಟ್ರೇಲಿಯಾದ ಸಂಶೋಧಕರು. ಹಾಗೇ ಸುಮ್ಮನೆ ಈ ನಿರ್ಣಯಕ್ಕೆ ಬರಲಿಲ್ಲ ಈ ಮಹಾಶಯರುಗಳು. ೩೭೩೭ ಗರ್ಭಿಣಿ ಮಹಿಳೆಯರ ಮೇಲೆ ಅಧ್ಯಯನ ನಡೆಸಿ ಕಂಡು ಕೊಂಡ ಸತ್ಯ. ಬಾಯೋ ಶುಚಿತ್ವ ಇಲ್ಲದ, ಒಸಡಿನ ರೋಗ ಇರುವ, ಸರಿಯಾಗಿ ಹಲ್ಲುಜ್ಜದ ಮಹಿಳೆಯರು ಗರ್ಭ ಧರಿಸುವುದು ಕಷ್ಟ ಅಥವಾ ನಿಧಾನ ಎನ್ನುತ್ತಾರೆ ಈ ಸಂಶೋಧಕರು.
ಈಗ ಪಕ್ಕದ ಮನೆಯ ಪ್ರೀತಿ ಅಥವಾ ಪಿಂಕಿ ಒಂದೆರಡು ವರ್ಷಗಳಾದರೂ ನನಗೆ ಮಗು ಆಯಿತು ಎಂದು ಸಿಹಿ ತೆಗೆದು ಕೊಂಡು ಬರದೆ ಹೋದಾಗ ‘ಆಸನ’ ಬದಲಿಸು ಎಂದು ಕಸಿವಿಸಿ ಮಾಡೋ ಬದಲು, ಹೋಗಮ್ಮಾ ಸರಿಯಾಗಿ ಹಲ್ಲುಜ್ಜ ಬಾರದಾ ಎಂದು ಗದರಿಸಿ ಬಾತ್ ರೂಂ ಗೆ ಅಟ್ಟಿ.

