ಎರಡು ಘಟನೆಗಳು, ಎರಡು ಸಾವು

ಒಬ್ಬಾತ  ತನ್ನ ದಿನದ ಕೆಲಸ ಮುಗಿದ ನಂತರ ತನ್ನ ಮಕ್ಕಳಿಗೆಂದು ಗೋಬಿ ಮಂಚೂರಿ ಕಟ್ಟಿಸಿಕೊಂಡು ಮನೆಗೆ ಹೋಗುತ್ತಾನೆ. ಅದನ್ನು ತಿಂದ ಮಕ್ಕಳು ತುಂಬಾ ಖಾರ ಆಯಿತು ಎಂದು ಅಪ್ಪನಲ್ಲಿ ದೂರುತ್ತಾರೆ. ಕೋಪಗೊಂಡ ಅಪ್ಪ ಗೋಬಿ ಮಾರಿದ ಹೋಟೆಲ್ ಗೆ ಬಂದು ಇದರ ಬಗ್ಗೆ ದೂರುತ್ತಾನೆ. ರಾತ್ರಿಯಾದ್ದರಿಂದ ಹೋಟೆಲ್ ಮುಚ್ಚುತ್ತಿದ ಯಜಮಾನ ದೂರಿದ ಗಿರಾಕಿಯ ಮೇಲೆ ಕೈ ಮಾಡುತ್ತಾನೆ, ಇನ್ನಷ್ಟು ತದುಕಲು ಕೆಲಸಗಾರರನ್ನೂ ಕರೆಸುತ್ತಾನೆ. ಎಲ್ಲರ ಬಡಿತ ತಿಂದ ಗಿರಾಕಿ ಕೊನೆಯುಸಿರೆಳೆಯುತ್ತಾನೆ. ಎಂಥ ದುರಂತ ನೋಡಿ. ಮಕ್ಕಳು ಆಸೆ ಪಡುತ್ತಾರೆ ಎಂದೋ ಅಥವಾ ಬೆಳಿಗ್ಗೆ ಮನೆಯಿಂದ ಹೊರಡುವಾಗ ಅಪ್ಪಾ, ಬರುವಾಗ ಗೋಬಿ ತಗೊಂಡು ಬಾ ಎಂದು ಹೇಳಿದ ಪುಟಾಣಿಗಳ ಆಸೆ ಪೂರೈಸಲು ಕಟ್ಟಿಸಿಕೊಂಡು ತಂದ ತಿಂಡಿ ಅವನ ಅವಸಾನಕ್ಕೆ ಕಾರಣ ವಾಗಬಹುದು ಎಂದು ಅವನಿಗೆ ಖಂಡಿತ ಹೊಳೆದಿರಲಿಕ್ಕಿಲ್ಲ. ಬೆಂಗಳೂರಿನಲ್ಲಿ ನಡೆದ ಈ ಘಟನೆ ನಿಜಕ್ಕೂ ಗಾಭರಿ ಹುಟ್ಟಿಸುತ್ತದೆ. ಇಷ್ಟು ಕ್ಷುಲ್ಲಕ, ಸಾಧಾರಣ ಸಮಸ್ಯೆಯೊಂದು ಒಬ್ಬನ ಸಾವಿನಲ್ಲಿ ಸಮಾಪ್ತಿಯಾದರೆ ನಮ್ಮ ಸಮಾಜ ಯಾವ ದಿಕ್ಕಿನಲ್ಲಿ ಸಾಗುತ್ತಿದೆ? ನಮ್ಮ ಸಹನೆಯ ಮಿತಿ ಈ ರೀತಿ ತಳ ಮುಟ್ಟಲು ಕಾರಣವೇನು? ದಿನ ಬೆಳಗಾದರೆ ಈ ತೆರನಾದ ಮನಕಲಕುವ, ನಾಗರೀಕ ಸಮಾಜ ತಲೆ ತಗ್ಗಿಸುವ ಕೆಲಸಗಳು ದೇಶದ ಎಲ್ಲೆಡೆ ವರದಿ ಆಗುತ್ತಿದ್ದರೂ ನಮಗೆ ಅದು ಒಂದು ಪುಟ್ಟ distraction ಮಾತ್ರವಾಗಿ ಗೋಚರಿಸುವುದು ಖೇದಕರ.   

ಮೇಲಿನ ದುರಂತ ದಕ್ಷಿಣ ಭಾರತದ್ದಾದರೆ ಈಗ ಬನ್ನಿ ಉತ್ತರ ಭಾರತಕ್ಕೆ.

ತಾನು ಪ್ರೀತಿಸಿದವನನ್ನು ತನ್ನ ತಂದೆ ಇಷ್ಟ ಪಡಲಿಲ್ಲ ಎಂದು ಪ್ರಿಯಕರ ಮತ್ತು ಅವನ ಮಿತ್ರನನ್ನು ತನ್ನ ತಂದೆಯನ್ನು ಕೊಲ್ಲಲು ಮಗಳು ನಿಯಮಿಸುತ್ತಾಳೆ. ಅವರಿಬ್ಬರೂ ಸೇರಿ ಹುಡುಗಿಯ ತಂದೆಗೆ ಗತಿ ಕಾಣಿಸುತ್ತಾರೆ. ನಂಬಲು ಸಾಧ್ಯವೇ ಈ ಘಟನೆಯನ್ನು? ಇಂಥ ಪೈಶಾಚಿಕ ಪ್ರವೃತ್ತಿಗೆ ಕಾರಣವಾದರೂ ಏನಿರಬಹುದು? ಅಸಹನೆಯ ಕಿಡಿ, ಧ್ವೇಷದ ಮನೋಭಾವ ಇವಕ್ಕೆ ಕಾರಣ ಎಂದು ದೂರುವಂತಿಲ್ಲ. ಏಕೆಂದರೆ ಇವು ಆ ಕ್ಷಣದಲ್ಲಿ ಹುಟ್ಟಿಕೊಂಡ ವಿಕೃತ ಕೃತ್ಯ. ವ್ಯವಸ್ಥಿತವಾಗಿ ನಡೆಯುವ ಹಲ್ಲೆಗಳಿಗೆ ಪರಿಹಾರ ಹಾಗೂ ಹೀಗೂ ಕಂಡು ಕೊಳ್ಳಬಹುದು. ಜನರನ್ನು ಜಾಗೃತಿ ಗೊಳಿಸಬಹುದು. ಧ್ವೇಷ ದಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ ಎಂದು ಮನವರಿಕೆ ಮಾಡಿ ಕೊಡಬಹುದು. ಅಂಥ ಘಟನೆಗಳು ಮತ್ತೊಮ್ಮೆ ಮರುಕಳಿಸದಂತೆ ಕ್ರಮಗಳನ್ನು ಕೈಗೊಳ್ಳ ಬಹುದು. ಆದರೆ ಈ ರೀತಿ ಥಟ್ಟನೆ ಉದ್ಭವವಾಗುವ ಹಿಂಸೆಗೆ ಏನು ಪರಿಹಾರ?

ಮೇಲಿನ ಎರಡು ಪೈಶಾಚಿಕ ಘಟನೆಗಳು ಎಲ್ಲೋ ಒಂದೋ ಎರಡೋ ಆಗಿದ್ದಿದ್ದರೆ ನಿಟ್ಟುಸಿರು ಬಿಟ್ಟು ಮುಂದೆ ಸಾಗಬಹುದಿತ್ತು. ದಿನ ಬೆಳಗಾದರೆ ನಮಗೆ ಎದುರಾಗುವುದು ಇಂಥ ಅವಿವೇಕತನದಿಂದ ಕೂಡಿದ ಹಿಂಸೆಗಳೇ. ಚಿಲ್ಲರೆಗಾಗಿ ಕೊಲೆ, ಚೌಕಾಶಿ ಮಾಡಿದ್ದಕ್ಕೆ ಕೊಲೆ, ಇಟ್ಟುಕೊಂಡವಳಿಗಾಗಿ ಕೊಲೆ, ತನ್ನ ಸೋದರಿಯನ್ನು ಪ್ರೀತಿಸಿದ್ದಕ್ಕಾಗಿ ಕೊಲೆ…………ಅಸಹನೆಯ ಕೂಪಕ್ಕೆ ದಬ್ಬಲ್ಪಡುತ್ತಿರುವ ನಮ್ಮ ಸಮಾಜವನ್ನು, ಸಂಸ್ಕಾರವನ್ನು ಪಾರು ಮಾಡಲು ನಾವೇನು ಮಾಡಬಹುದು? ನಾಗರೀಕ, ಪ್ರಜ್ಞಾವಂತ ಸಮಾಜ ಕೇಳಿಕೊಳ್ಳಬೇಕಾದ ಪ್ರಶ್ನೆ.

ಪುಟಾಣಿ ಪಾಠ

ಪುಟ್ಟ ಮಕ್ಕಳು ನಮ್ಮ ಶಿಕ್ಷಕರೂ ಆಗುತ್ತಾರೆ. ಮಕ್ಕಳಿಂದ ಕಲಿಯುವುದು ಬೇಕಷ್ಟು ಇದೆ ಎಂದು ನಮಗೆ ತಿಳಿದಿದ್ದರೂ ಅದರ ಕಡೆ ಗಮನ ಕೊಡದೆ, ಅವರನ್ನು ನಿಗ್ರಹಿಸುವುದರಲ್ಲಿ, ಯಜಮಾನಿಕೆ ಮಾಡುವುದರಲ್ಲಿ ನಿರತರಾಗಿ ಬಿಡುತ್ತೇವೆ. ಪುಟಾಣಿಗಳು ನಮಗೆ ಈ ಮೂರು ಗುಣಗಳನ್ನು ಹೇಳಿಕೊಡುತ್ತವಂತೆ;

೧. ಯಾವುದೇ ವಿಶೇಷ ಕಾರಣವಿಲ್ಲದೆ ಸಂತೋಷದಿಂದಿರುವುದು.

೨. ಯಾವಾಗಲೂ ಏನನ್ನಾದರೂ ಮಾಡುತ್ತಾ ಬ್ಯುಸಿ ಆಗಿರುವುದು, ಮತ್ತು

೩. ತಮಗೆ ಬೇಕಾದ್ದನ್ನು, ಇಷ್ಟವಾದ್ದನ್ನು ಹೇಗೆ ಪಡೆಯಬೇಕು ಎನ್ನುವುದರ ಸ್ಪಷ್ಟ ಕಲ್ಪನೆ ಇಟ್ಟು ಕೊಂಡಿರುವುದು.

ಮೇಲಿನ ಮಾತುಗಳು ವಿಶ್ವ ಪ್ರಸಿದ್ಧ, ಬ್ರೆಜಿಲ್ ಮೂಲದ ಬರಹಗಾರ “ಪವ್ಲು ಕುವೆಲ್ಯು” (paulo coelho) ಅವರದು.

ಈ ಬರಹಗಾರನ ಹೆಸರನ್ನು ಹೇಗೆ ಉಚ್ಛರಿಸುವುದು ಎಂದು ಹಲವು ವೆಬ್ ತಾಣಗಳನ್ನು ನೋಡಿದ ನಂತರ ಬರೆದಿದ್ದೇನೆ.

ಕೋಶ ಓದು, ಇಲ್ಲಾ ದೇಶ ಸುತ್ತು

 ಕೋಶ ಓದು ಇಲ್ಲಾ ದೇಶ ಬಿಡು….ಹಾಂ, ಇದೇನಿದು, ನನ್ನ ಕಣ್ಣುಗಳು ನನ್ನನ್ನು ಮೋಸ ಮಾಡುತ್ತಿಲ್ಲವಷ್ಟೇ? ಶೀರ್ಷಿಕೆ ಯಲ್ಲಿ “ಕೋಶ ಓದು, ದೇಶ ಸುತ್ತು” ಎಂದಿರುವಾಗ ಲೇಖನದ ಆರಂಭದಲ್ಲೇ ಅದ್ಹೇಗೆ ಬದಲಾಗಿ ಬಿಟ್ಟಿತು ಶೀಷಿಕೆ? ರಾಜಕಾರಣಿ ತನ್ನ ಮಾತುಗಳನ್ನು ಪಲ್ಟಾಯಿಸುವ ರೀತಿ ಎಂದು ಯೋಚಿಸಿದಿರಾ?

ಬ್ಲಾಗ್ ಒಂದರಲ್ಲಿ ಬಂದ ಲೇಖನದಲ್ಲಿ ಈ ಕುರಿತು ಓದಿದೆ. ಕೋಲಾರದಲ್ಲಿ, ಸಮಾರಂಭ ವೊಂದರಲ್ಲಿ ಮಾನ್ಯ ಸಚಿವರು “ಭಗವದ್ಗೀತೆ ಬೇಡವಾದವರು ಭಾರತ ಬಿಟ್ಟು ತೊಲಗಿ” ಎಂದು ಗುಡುಗಿದರು ಎಂದು ಬರೆದಿದ್ದರು. ಸನ್ಮಾನ್ಯ ಶಿಕ್ಷಣ ಮಂತ್ರಿಗಳೇ ಹೀಗೆ ಹೇಳಿದಾಗ ಸಮಾಜ ಯಾವ ರೀತಿ ಪ್ರತಿಸ್ಪಂದಿಸಬಹುದು. ಸಮಾಜದಲ್ಲಿ ವಿಷಬೀಜ ಬಿತ್ತಲೆಂದೇ ಹುಟ್ಟಿ ಕೊಂಡ ಮಾಧ್ಯಮಗಳು ಸಚಿವರ ಈ rhetoric ನ ಎಳೆ ಹಿಡಿದು ಕೊಂಡು ಸಮಾಜದಲ್ಲಿ ಮತ್ತಷ್ಟು ಗದ್ದಲ ಗೊಂದಲಕ್ಕೆ ಕಾರಣರಾಗಲಾರರೆ? ಅತ್ಯಂತ ಜವಾಬ್ದಾರೀ ಹುದ್ದೆಯಲ್ಲಿರುವವರು, ಅದರಲ್ಲೂ ಜನರಿಂದ ನೇರವಾಗಿ ಆರಿಸಲ್ಪಟ್ಟವರ ಬಾಯಲ್ಲೇ ಇಂಥ ಮಾತುಗಳು ಉದುರಿದರೆ ಜನಸಾಮಾನ್ಯರ ಪಾಡೇನು?

ಕೋಶ ಓದು, ದೇಶ ಸುತ್ತು ಹಳೇ ಕಾಲದ ಮುತ್ಸದ್ದಿಗಳು, ಹಿರಿಯರು ಹೇಳಿದ್ದು. ಈ ಮಾತುಗಳಲ್ಲಿ ಅನುಭವ ತುಂಬಿ ತುಳುಕುತ್ತದೆ. ಕೋಶ ಓದು ಇಲ್ಲಾ ದೇಶ ಬಿಡು ಎನ್ನುವುದು ಆಧುನಿಕ ಮನೋಭಾವದ ಹಿರಿಯರು. ಇಂಟರ್ನೆಟ್ ಯುಗದ ಪ್ರಾಡಕ್ಟ್ ಗಳು. ಒಂದರಲ್ಲಿ ಅನುಭವ ತುಂಬಿ ತುಳುಕುತ್ತಿದ್ದರೆ, ಮತ್ತೊಂದರಲ್ಲಿ ಅಸಹನೆಯ ಕೊಡ ತುಂಬಿ ತುಳುಕುತ್ತಿರುತ್ತದೆ. ನಮ್ಮ ಪ್ರಯಾಣ ಯಾವ ಕಡೆ ಎಂದು ಅರಿಯದೆ ಜನ ಸಾಮಾನ್ಯ ಕಕ್ಕಾಬಿಕ್ಕಿಯಾಗುತ್ತಾನೆ ಈ ಮಾತುಗಳನ್ನು ಕೇಳಿ. ಇನ್ನು ಶಾಲೆಗೆ ಹೋಗುವ ಮಕ್ಕಳ ಸ್ಥಿತಿ? ವಿದ್ಯಾರ್ಥಿಯೊಬ್ಬ ಶಿಕ್ಷಕನಲ್ಲಿ ತನ್ನ ಅಳಲನ್ನು ತೋಡಿ ಕೊಳ್ಳುತ್ತಾನೆ. ತನಗೆ ಆಂಗ್ಲ ಬಾಷೆ ತುಂಬಾ ಕಷ್ಟ ಆಗ್ತಾಯಿದೆ, ತಲೆಗೆ ಏನೂ ಹೋಗೋದಿಲ್ಲ ಎಂದು. ಅದಕ್ಕೆ ಶಿಕ್ಷಕ ತಲೆಗೆ ಹೋಗದಿದ್ದರೆ ಶಾಲೆ ಬಿಡು ಅಥವಾ ಊರು ಬಿಡು ಎಂದು terrorize ಮಾಡಬಾರದು. ಅಸಹಾಯಕನಾಗಿ ಬಂದ ಶಿಷ್ಯನ ತಲೆ ನೇವರಿಸಿ ಇನ್ನಷ್ಟು ಶ್ರಮ ಪಡಲು ಹೇಳಬೇಕು ಅಥವಾ ಬೇರಾವುದಾದರೂ ಪರಿಹಾರ ಸೂಚಿಸಿ ಅವನಲ್ಲಿ ವಿದ್ಯೆ ಬಗ್ಗೆ ಆಸಕ್ತಿ ಮೂಡಿಸಬೇಕು. ಅದು ಬಿಟ್ಟು ಅವನನ್ನು ಗದರಿಸಿ ಬೆದರಿಸಿ ದಾರಿಗೆ ತರಲು ನೋಡಿದರೆ ಆಗದ ಮಾತು. ಶಿಕ್ಷಕ ರಿಯಾಕ್ಟಿವ್ ಆಗಬಾರದು. compassionate ಆಗಬೇಕು.

“ಈ ಲೋಕದಲ್ಲಾಗಲೀ, ಬೇರೆಲ್ಲೇ ಆಗಲಿ ಸಂಶಯ ಪಡುವವನಿಗೆ ಸಂತೋಷ ಸಿಗದು”

“ಕೋಪದ ಕಾರಣ ಭ್ರಮೆ ಹುಟ್ಟುತ್ತದೆ. ಭ್ರಮೆಯ ಕಾರಣ ಮನಸ್ಸು ಗೊಂದಲಗೊಳ್ಳುತ್ತದೆ. ಮನಸ್ಸು ಗೊಂದಲ ಗೊಂಡಾಗ ತರ್ಕ ನಾಶವಾಗುತ್ತದೆ. ತರ್ಕ ನಾಶವಾದಾಗ ಮನುಷ್ಯ ಬೀಳುತ್ತಾನೆ”

ಇಂಥ ನುಡಿ ಮುತ್ತುಗಳನ್ನು ನೀಡಿದ ಭಗವದ್ಗೀತೆಯ ಅಧ್ಯಯನಕ್ಕೆ ಈ ರೀತಿಯ ಧಮಕಿ ಕೂಡಿದ “ಉತ್ತೇಜನ” ವೇ ಹಿರಿಯರಿಂದ? – ಗೀತೆ ಗೀತೆಯಲ್ಲಿರುವ ಇಂಥ ಸಂದೇಶಗಳನ್ನು ಜನರಿಗೆ ತಿಳಿ ಹೇಳುವುದು ತರವೋ ಅಥವಾ ಇದನ್ನು ಬೇಡ ಎನ್ನುವವರು ದೇಶ ಬಿಟ್ಟು ತೊಲಗಲಿ ಎಂದು ಗೀತೆಯಿಂದ ಜನರನ್ನು ದೂರ ಓಡಿಸುವುದು ತರವೋ? ಸಚಿವರ ಈ ಹೇಳಿಕೆಯ ಔಚಿತ್ಯವನ್ನು ಜನರು ಪ್ರಶ್ನಿಸಬೇಕು. ಶಾಲೆಗಳಲ್ಲಿ ಗೀತೆ, ಕುರಾನ್, ಬೈಬಲ್, ಗುರುಗ್ರಂಥ್ ಸಾಹಿಬ್, ಬುದ್ಧರ ತ್ರಿಪಿಟಕ, ಪಾರ್ಸಿಗಳ ‘ಜೆಂದ್ ಅವೆಸ್ತಾ’, ಯಹೂದ್ಯರ ‘ತೋರಾ’ ಹೀಗೆ ಹೇಳಿಕೊಡುತ್ತಾ ಕೂತರೆ ಗಣಿತ, ವಿಜ್ಞಾನ, ಸಮಾಜ ಶಾಸ್ತ್ರಗಳನ್ನು ಹೇಳಿಕೊಡಲು ಸಮಯ ಇರುವುದೇ ಎಂದು ಪ್ರಶ್ನಿಸುವವರಿದ್ದಾರೆ. ಪರಿಹಾರವಾಗಿ ಎಲ್ಲಾ ಧರ್ಮಗಳ ಸಾರವನ್ನು ಹೇಳಿಕೊಡುವ ಒಂದು ಪುಸ್ತಕದ ರಚನೆಯಾಗಲಿ. ಗೀತೆ, ಕುರಾನ್, ಬೈಬಲ್ ಮುಂತಾದವುಗಳ ಸುವರ್ಣ ವಾಕ್ಯಗಳು ಅದರಲ್ಲಿ ಸೇರಿರಲಿ. ವಿದ್ಯಾರ್ಥಿಗಳು ನಾವೆಂಥ ಸೊಗಸಾದ ಬಹು ಸಂಸ್ಕೃತಿ ಸಮಾಜದಲ್ಲಿ ಬದುಕುತ್ತಿದ್ದೇವೆ ಎನ್ನೋ ಭಾವನೆ ಬೆಳೆಸಿಕೊಳ್ಳಲಿ.

ನರಹಂತಕನ ಕಥೆ

ಅಂತರ್ಜಾಲ ತಾಣವೊಂದರಲ್ಲಿ ಇದಿ ಅಮೀನ್ ಬಗೆಗಿನ ವಿಸ್ತೃತ ಲೇಖನ ಓದಿದೆ. ಲೇಖಕರು ಚೆನ್ನಾಗಿ ವಿವರಿಸಿ ಬರೆದಿದ್ದಾರೆ ಆಫ್ರಿಕಾದ ಸರ್ವಾಧಿಕಾರಿ ಬಗ್ಗೆ. ಇದಿ ಅಮೀನ್ ಬಗ್ಗೆ ಬಹಳ ಹಿಂದಿನಿಂದಲೂ ಕೇಳಿದ್ದೆ, ಆತ ಕ್ರೂರ, ನಿರ್ದಯೀ, ನರಹಂತಕ ಕೊನೆಗೆ ನರಭಕ್ಷಕ ಕೂಡಾ ಎಂದು. ನರಭಕ್ಷಕ ಎಂದರೆ ಎಂಥವರ ಮೈ ನಡುಗುವುದು. ಮನುಷ್ಯನಾಗಿ ಹುಟ್ಟಿದವನು ಮನುಷ್ಯನ ಮಾಂಸ ತಿನ್ನಬೇಕಾದರೆ ಅದೆಂಥ ಕ್ರೌರ್ಯವನ್ನು ದೇವರು ಅವನಿಗೆ ಬಳುವಳಿಯಾಗಿ ನೀಡಿರಬಹುದು. ಮಾಧ್ಯಮಗಳು ಬರೆಯವುದನ್ನು, ಸರಕಾರಗಳು ಹೇಳುವುದನ್ನು ಎಷ್ಟರ ಮಟ್ಟಿಗೆ ನಂಬುವುದು?

1989ರಲ್ಲಿ ಅಮಿನ್ ಪುನಹ ಗದ್ದುಗೆಯನ್ನೇರುವ ಕನಸಿನ ಬೆನ್ನೇರಿ ಉಗಾಂಡಾಕ್ಕೆ ಮರಳುವ ಪ್ರಯತ್ನ ಮಾಡಿದ. ಆದರೆ ಕಾಂಗೋದ ಜೈರೆಯಲ್ಲಿ ಅವನನ್ನು ಗುರುತು ಹಿಡಿಯಲಾಗಿ,ಅವನ ಕನಸಿನ ರೆಕ್ಕೆ ಕತ್ತರಿಸಿ ಬಿತ್ತು. ಸಾವಿರಾರು ಅಥವಾ ಲಕ್ಷಾಂತರ ಜನರ ಕಗ್ಗೊಲೆಗೆ ಇದಿ ಅಮೀನ್ ಕಾರಣ ನಾಗಿದ್ದಿದ್ದರೆ ತನ್ನ ದೇಶಕ್ಕೆ ಮರಳಿ ಹೋಗುವ ಸಾಹಸ ಮಾಡುತ್ತಿದ್ದನೆ? ಕಾಂಗೋ ಸರಕಾರ ಅವನನ್ನು ಬಂಧಿಸಿ ಅಂತಾರಾಷ್ಟ್ರೀಯ ನ್ಯಾಯಾಲಯದ ಸುಪರ್ದಿಗೆ ಅವನನ್ನು ಒಪ್ಪಿಸುತ್ತಿರಲಿಲ್ಲವೇ? ಇದಿ ಅಮೀನ್ ನರಭಕ್ಷಕ ಅಲ್ಲ ಎಂದು ಅವನ ಅರಮನೆಯಲ್ಲಿ ಕೆಲಸಕ್ಕಿದ್ದ ಅಡುಗೆಯಾಳು ಸಾಕ್ಷಿ ಇದ್ದಾನೆ. ಅಡುಗೆಮನೆಯ ಅಥವಾ ಅರಮನೆಯ ಬೇರಾವುದೇ ‘ಫ್ರಿಜ್’ ಗಳಲ್ಲಿ ಮನುಷ್ಯರ ತಲೆ ಬುರುಡೆ ಅಥವಾ ಇನ್ನಿತರ ಅಂಗಗಳನ್ನು ಕಂಡಿದ್ದಿಲ್ಲ ಎಂದು ಆತ ಹೇಳುತ್ತಾನೆ. ತಮ್ಮ ತಂದೆ ಹಾಗೇನಾದರೂ ಮನುಷ್ಯರನ್ನು ತಿನ್ನುತ್ತಿದ್ದರೆ ನಮಗೆ ನೋಡಿಕೊಂಡು ಇರಲು ಸಾಧ್ಯವಿತ್ತೆ, ಅಂಥ ತಂದೆಯ ಬಗ್ಗೆ ನಮಗೆ ಪ್ರೀತಿ ಇರುತ್ತಿತ್ತೇ ಎಂದು ಆತನ ಮಕ್ಕಳು ಕೇಳುತ್ತಾರೆ. ನರಭಕ್ಷಕ ನಾಗಿದ್ದಿದ್ದರೆ ಅವನಿಗೆ ಸೌದಿ ಯಲ್ಲಿ ಆಶ್ರಯ ಸಿಗುತ್ತಿರಲಿಲ್ಲ. ಇಲ್ಲಿನ ವಿಧ್ವಾಂಸರ ವಿರೋಧ ಇಟ್ಟುಕೊಂಡು ಸೌದಿ ಸರಕಾರ ಯಾರಿಗೂ ಆಶ್ರಯ ನೀಡುವುದಿಲ್ಲ. ಹಾಗೆಯೇ ಜೆಡ್ಡಾ ದ ಅಲ್-ಹಮ್ರಾ ವಲಯದಲ್ಲಿ ಬದುಕುತ್ತಿದ್ದ ಇದಿ ಅಮೀನ್ ತನ್ನ ಮನೆಯ ಪಕ್ಕದಲ್ಲಿದ್ದ ಅಂಗಡಿಯೊಂದಕ್ಕೆ ದಿನವೂ ಬರುತ್ತಿದ್ದ. ಕೇರಳ ಮೂಲದ ವ್ಯಾಪಾರೀ ಪ್ರಕಾರ ಇದಿ ಅಮೀನ್ ಸೌಮ್ಯ ಸ್ವಾಭಾದವನಾಗಿದ್ದು ಒಂದಿಷ್ಟು ಹೊತ್ತು ನಮ್ಮೊಂದಿಗೆ ಹರಟಿ ಹೋಗುತ್ತಿದ್ದ. ಈತ ನರಭಕ್ಷಕ ಎನ್ನುವುದನ್ನು ಓದಿ ದ್ದ ನಮಗೆ ಈ ವಿಷಯ ನಂಬಲಿಕ್ಕೆ ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದ.

ಯಾವುದೇ ದೇಶದ ಸರ್ವಾಧಿಕಾರಿಗಳೂ ಬಲಪ್ರಯೋಗಿಸದೆ ಆಡಳಿತ ನಡೆಸಲಾರರು. ಪ್ರಜಾಪ್ರಭುತ್ವದಲ್ಲೇ ಕಾಣುವುದಿಲ್ಲವೇ ದಬ್ಬಾಳಿಕೆ, ದೌರ್ಜನ್ಯ. ಇದಿ ಅಮೀನ್ ಬಹಳಷ್ಟು ಹಿಂಸೆಗೆ ಕಾರಣನಾಗಿರಬಹುದು ಮತ್ತು ಬಿಳಿಯರನ್ನು ಆತ ನಡೆಸಿ ಕೊಳ್ಳುತ್ತಿದ್ದ ರೀತಿಗೆ ಪ್ರತೀಕಾರವಾಗಿ ಇಲ್ಲಸಲ್ಲದ ಆರೋಪ ಕಟ್ಟು ಕಥೆಗಳನ್ನ ವಿದೇಶೀ ಮಾಧ್ಯಮಗಳು ಸೃಷ್ಟಿಸಿರಬಹುದು. ಯಾವುದಕ್ಕೂ ನಿಷ್ಪಕ್ಷಪಾತವಾಗಿ, ಸಾವಧಾನದಿಂದ ವಿಷಯಗಳನ್ನ ಅವಲೋಕನ ಮಾಡಿ ನೋಡಿದಾಗ ಹೊಸ ವಿಚಾರಗಳು ತಿಳಿಯುವುವು, ಹೊಸ ದೃಷ್ಟಿ ಕೋನಕ್ಕೆ ದಾರಿ ಮಾಡಿ ಕೊಡುವುದು.

ಇದಿ ಅಮೀನ್, ಪಾಶ್ಚಾತ್ಯ ರಾಜಕಾರಣದ ಬಗ್ಗೆ ಹೆಚ್ಚು ತಿಳಿಯಬೇಕು ಎಂದೆನ್ನಿಸಿದರೆ ಇಲ್ಲಿದೆ ನೋಡಿ ಲಿಂಕು.

http://findarticles.com/p/articles/mi_qa5391/is_200310/ai_n21337458/

ರೆಸ್ಟುರಾಂಟ್, ಮಹಿಳೆಯರಿಗೆ ಮಾತ್ರ

“ಮಹಿಳೆಯರಿಗೆ ಮಾತ್ರ” ಕಾಲೇಜುಗಳು, ರೈಲಿನ ಬೋಗಿಗಳು, ಬ್ಯಾಂಕುಗಳು ಇರುವಾಗ ರೆಸ್ಟುರಾಂಟ್ ಗಳೂ ಏಕಿರಬಾರದು? ಗಂಡಸರ, ಬೀಡಿ, ಸಿಗರೇಟ್ ವಾಸನೆ ಇರದ, ಮನೆಯಂತೆಯೇ ಕಾಣುವ ‘ತಿನಿಸು ತಾಣ’ ಗಳು ಮಹಿಳೆಯರಿಗೆ ಖಂಡಿತ ಇಷ್ಟವಾಗುತ್ತವೆ. ಹೆಂಗಳೆಯರೊಂದಿಗೆ ಹರಟೆ, ಚಾಡಿ ಮನಸೋ ಇಚ್ಛೆ ಹೊಡೆಯಲು ಇದಕ್ಕಿಂತ ಪ್ರಶಸ್ತ ಸ್ಥಳ ಬೇರೆ ಇರಲಾರದು. ಇಂಥ ಒಂದು ರೆಸ್ಟುರಾಂಟ್ ನಲ್ಲಿ ಕೆಲಸ ಮಾಡುವ ಪುರುಷ waiter ಗಳ ಸಮವಸ್ತ್ರ ಒಂಚೂರು ನೋಡಿ. ಎಷ್ಟು ಚೆನ್ನಾಗಿದೆ.