ಈ ಜಾತಿ ನನಗೆ ತುಂಬಾ ಇಷ್ಟ

ಯೆಡಿಯೂರಪ್ಪ ನವರು ಹೊರಹೋಗಬೇಕು ಎಂದು ಕೊನೆಗೂ ‘ಭಾಜಪ’ದ ಹೈ ಕಮಾಂಡ್ ಜಪಿಸಿತು. ಈ ಜಪಕ್ಕಾಗಿ ಕುಮಾರಪ್ಪ ಅಂಡ್ ಕಂಪೆನಿ ಚಾತಕ ಪಕ್ಷಿಯಂತೆ ಕಾದು ಕುಳಿತಿತ್ತು. ಹೊರನಡಿಯಿರಿ ಎನ್ನುವ ಆಜ್ಞೆ ಹೊರಬಿದ್ದಾಗ ಕಾಂಗ್ರೆಸ್ ನದು ಅಪಸ್ವರ, ಈ ಆಜ್ಞೆ ತುಂಬಾ ತಡವಾಗಿ ಬಂತು ಅಂತ. ಏನೇ ಇರಲಿ, ರಾಜಕಾರಣದಲ್ಲಿ ಇವೆಲ್ಲಾ ಇದ್ದಿದ್ದೆ, ಯಾರು ಅಧಿಕಾರದ ಸ್ಥಾನದಲ್ಲಿ ಕೂತಿರ್ತಾರೋ ಅವರ ಕಾಲನ್ನು ಎಳೆದು ಹಾಕಲು ಮತ್ತೊಂದು ಮಾಜಿ ಅಧಿಕಾರಸ್ಥರ ಗುಂಪು ಕಾಯುತ್ತಾ ಇರುತ್ತದೆ. ಸರಿ, ಈಗ ನಮ್ಮ ರಾಜ್ಯದ ಮುಂದಿನ ಮುಖ್ಯ ಮಂತ್ರಿಗಳು ಯಾರು ಅಂತ ಕವಡೆ ಹಾಕಿ ನೋಡಲು ಕವಡೆ ಹುಡುಕುವಾಗ ಮತ್ತೊಂದು ಶಾಕ್ ತಗುಲಿತು. ಯಾವ ಜಾತಿಯ ಮುಖ್ಯಮಂತ್ರಿ ಬೇಕು ಅಂತ. ಈ ಪ್ರಶ್ನೆ ಒಂದು ಬ್ಲಾಗ್ ಕೇಳ್ತು. ಥತ್ತೇರಿ, ಮತ್ತೊಂದು ಸಮಸ್ಯೆ ಈಗ. ಈ ಸಮಸ್ಯೆ ನಮ್ಮ ಮಧ್ಯೆ ಇಲ್ಲ ಅಂತ ಭಾವಿಸಿಕೊಂಡಿರುವಾಗಲೇ ಪಾಟೀ ಸವಾಲಿನಂತೆ ಬಂದು ಎರಗಿತು, ಯಾವ ಜಾತಿಯ ಮುಖ್ಯ ಮಂತ್ರಿ ಬೇಕು ಅಂತ. ಅಷ್ಟೆಲ್ಲಾ ರಾಜಕಾರಣ ನನಗೆ ತಿಳೀ ಒಲ್ದು, ಇಷ್ಟು ಮಾತ್ರ ಗೊತ್ತು, ನಮ್ಮ ಅಲ್ಫೋನ್ಸೋ ಜಾತಿಯ ಮಾವಿನ ಹಣ್ಣಿನಂಥ ಹಣ್ಣು ಎಲ್ಲೂ ಹುಟ್ಟಿಲ್ಲ. ಹುಟ್ಟೋದೂ ಇಲ್ಲ.

ಯಾವ ಜಾತಿಯ ವ್ಯಕ್ತಿಯ ಕೈಗೇ ಹೋಗಲಿ ಅಧಿಕಾರ ಜಾತಿ, ಮತ, ಧರ್ಮ, ಪಂಥ ಭೇಧ ಮರೆತು ನಮ್ಮ ರಾಜ್ಯದ ಅಭ್ಯುದಯವನ್ನು ಮಾತ್ರ ಗಮನದಲ್ಲಿಟ್ಟು ಕೊಂಡು ಸರಕಾರ ನಡೆಸಲಿ ಎನ್ನುವ ಸಣ್ಣ ಆಸೆ ದೂರದ ಮರಳುಗಾಡಿನಿಂದ.

ಇವನ ಚೆಂದ ಸ್ವಲ್ಪ ನೋಡಿ…

ಜೀರುಂಡೆ ಯನ್ನು ಹಿಡಿದು ಕೊಂಡು ಗೂಡು ಸೇರಿದ ಈ ಬೆಟ್ಟದ ನೀಲಿ ಹಕ್ಕಿ (mountain bluebird), ಮನಸ್ಸು ಬದಲಾಯಿಸಿ ಜೀರುಂಡೆ ಯನ್ನು ಹೆಕ್ಕಿ ಹೊರ ಹಾರಲು ತಯಾರಾಗಿ ನಿಂತಿದ್ದಾನಂತೆ. ಎಷ್ಟು ಛಾನ್ದ್ ಅದಾನ್ ನೋಡಿ ಇವ. ಅಲ್ವರ?  ಇವ ‘ಇವನೋ’ ‘ಇವಳೋ’ ಅಂತ ನಿಂಗೆನ್ಗೊತ್ತು ಅಂತಾ ಮಾತ್ರ ಕೇಳ್ಬ್ಯಾಡಿ, ಹೀಗೇ ಜೇಡನ ಗುಡಿಸಲು ಗುಡಿಸುವಾಗ ಎಡವಿದ ತಾಣದಲ್ಲಿ ಇದರ ಉಲ್ಲೇಖ ಇತ್ತು, ವಿಧೇಯತೆಯಿಂದ ಭಟ್ಟಿ ಇಳಿಸಿದ್ದೇನೆ. Lee Rentz ರವರ “ನಿಸ (ಸ್ವ)ರ್ಗ’ ಸೀಮಿತ ಬ್ಲಾಗಿನಲ್ಲಿ  ಕಂಡದ್ದನ್ನು ದಾಖಲಿಸಿದ್ದೇನೆ. ಈ ಬ್ಲಾಗ್ ನಲ್ಲಿ ಅದ್ಭುತವಾದ ಚಿತ್ರಗಳಿವೆ, ನಿಸರ್ಗದ ಬಗೆಗಿನ ಪ್ರೀತಿ, ಆದರ ಉಕ್ಕಿ ಹರಿಯುತ್ತಿದೆ. ನಾವು ದೂರ ಹೋಗೋ ಮಾತಿರಲಿ, ಹಿತ್ತಲಿನ ಸೌಂದರ್ಯವನ್ನು ಆಸ್ಥೆಯಿಂದ ಗಮನಿಸಿದ್ದೇವೆಯೇ? ದಾಖಲಿಸಿದ್ದೇವೆಯೇ?

pic courtesy: http://leerentz.wordpress.com/2011/06/09/wenas-audubon-campout-chasing-birds-and-grasshoppers/

ಸುಂದರ ಟಾಸ್ಮೆನಿಯಾ

ಸ್ಫೂರ್ತಿದಾಯಕ ದ್ವೀಪ ಎಂದು ಕರೆಯುತ್ತಾರೆ ಆಸ್ಟ್ರೇಲಿಯಾದ ಟಾಸ್ಮೆನಿಯಾವನ್ನು. ವಿಸ್ತೀರ್ಣದಲ್ಲಿ ಪ್ರಪಂಚದ ಆರನೇ ಅತಿ ದೊಡ್ಡ ರಾಷ್ಟ್ರವಾದ ಆಸ್ಟ್ರೇಲಿಯಾದ ಒಂದು ರಾಜ್ಯವೂ ಹೌದು ಟಾಸ್ಮೆನಿಯಾ. ನಾನು ಸೌದಿ ಅರೇಬಿಯಾದ ಅಲ್-ಖೋಬರ್ ನಗರದಲ್ಲಿದ್ದಾಗ ಬಹಳಷ್ಟು ಬಿಳಿಯರು ನನ್ನ ಗೆಳೆಯರಾಗಿದ್ದರು. ಆಸ್ಟ್ರೇಲಿಯಾ, ಅಮೇರಿಕಾ, ಕೆನಡಾ, ಬ್ರಿಟನ್, ಐರ್ಲೆಂಡ್ ಮೂಲದವರಾದ ಇವರೊಂದಿಗೆ ಹರಟುವುದೇ ಒಂದು ಅನುಭವ. ಆಸ್ಟ್ರೇಲಿಯಾದ ಪ್ರಮುಖ ಭೂ ಭಾಗ (mainland) ದವರು ಟಾಸ್ಮೆನಿಯಾದವರನ್ನು ಅವರ ಭೂಪಟದ ಆಕಾರದ ಬಗ್ಗೆ ಅಶ್ಲೀಲ ವಾಗಿ ಜೋಕ್ ಮಾಡಿ ನಗುತ್ತಾರೆ. ಟಾಸ್ಮೆನಿಯಾದ ಭೂಪಟ ಯೋನಿಯಾಕೃತಿ ಯಾಗಿದ್ದು ನಾವು ಅವರನ್ನು tassie ಗಳು ಎಂದು ತಮಾಷೆ ಮಾಡುತ್ತೇವೆ ಎಂದು ಒಬ್ಬ ಹೇಳಿ ನಕ್ಕಿದ್ದ.

ನನ್ನ ಹಳೇ ಸೇತುವೆ ಬ್ಲಾಗ್ ನ ಬ್ಯಾನರ್ ಚಿತ್ರವನ್ನು ಬದಲಿಸಲು ಎಂದು ನನ್ನ picture folder ತೆರೆದಾಗ ಟಾಸ್ಮೆ ನಿಯಾದ ಸುಂದರವಾದ ಸಮುದ್ರ ತೀರದ ಚಿತ್ರವನ್ನು ಸೇವ್ ಮಾಡಿ ಇಟ್ಟುಕೊಂಡಿದ್ದೆ. ಈ ತೀರವನ್ನು wineglass bay ಎಂದು ಕರೆಯುತ್ತಾರೆ. ಈ ಚಿತ್ರವನ್ನೂ ಹಾಕಿದ್ದೇನೆ ನೋಡಿ.

ನಮ್ಮ ರಾಷ್ಟ್ರಗೀತೆ ಚಿಕ್ಕದಾಯಿತು

ನಮ್ಮ ರಾಷ್ಟ್ರ ಗೀತೆ ಚಿಕ್ಕದಾಯಿತು, ಸ್ವಲ್ಪ ದೊಡ್ಡದು ಮಾಡಬಾರದೇ? ಡಿಮಾಂಡಪ್ಪೋ ಡಿಮಾಂಡು, ತರಾವರಿ ಡಿಮಾಂಡುಗಳು ಜನರದು. ತಿನ್ನೋಕ್ಕೆ ಒಪ್ಪೊತ್ತಿನ ಅನ್ನ ಇಲ್ಲ, ಅನ್ನ ಹಾಕಿ ಎಂದು ಎಂದು ಕೆಲವರ ಡಿಮಾಂಡ್ ಆದರೆ ಇನ್ನೂ ಕೆಲವರದು ತಮ್ಮ ತಲೆ ಮೇಲೆ ಸೂರಿಲ್ಲ, ಸಹಾಯ ಮಾಡಿ ಎನ್ನುವ ಡಿಮಾಂಡು. ಬದುಕಿನ ಅತ್ಯವಶ್ಯಕತೆ ಗಳ ಡಿಮಾಂಡು ಗಳನ್ನು ಈಡೇರಿಸಲು ಪ್ರಪಂಚ ಹೆಣಗಾಡುತ್ತಿದ್ದರೆ ನಮ್ಮ ರಾಷ್ಟ್ರ ಗೀತೆ ಯಾಕೋ ತುಂಬಾ ಚಿಕ್ಕದಾಯಿತು, ಅದನ್ನು ಸ್ವಲ್ಪ ಸ್ಟ್ರೆಚ್ ಮಾಡಿ ದೊಡ್ಡದು ಮಾಡಬಾರದೇ ಎನ್ನುವ ತುಂಟನದ ಡಿಮಾಂಡು. ಬೇಸ್ತು ಬೀಳಬೇಡಿ, ಈ ಡಿಮಾಂಡನ್ನು ನಮ್ಮ ದೇಶ ವಾಸಿಗಳಲ್ಲಿ ಯಾರೂ ಮಾಡಲಿಲ್ಲ, ಈ ಸವಿನಯ, ದೇಶಭಕ್ತಿ ತುಂಬಿ ತುಳುಕುವ ಮನವಿ ಬಂದಿದ್ದು ಫಾರ್ಮುಲಾ ಒನ್ ಕಾರ್ ರೇಸಿನ ಇಂಗ್ಲೆಂಡ್ ಮೂಲದ ಡ್ರೈವರ್ ಒಬ್ಬನಿಂದ. ಚಾಲಕ ಲೀವೈಸ್ ಹ್ಯಾಮಿಲ್ಟನ್ ನ ಅಳಲಿನ ಮರ್ಮ ಸ್ವಲ್ಪ ನೋಡೋಣ.

ಯಾವುದೇ ಕ್ರೀಡಾಪಟುವೂ ಸ್ಪರ್ದೆಯಲ್ಲಿ ವಿಜೇತನಾದಾಗ podium ಮೇಲೆ ನಿಂತು ತನ್ನ ರಾಷ್ಟ್ರ ಗೀತೆಯನ್ನು ನುಡಿಸುವುದನ್ನು ಹೆಮ್ಮೆಯಿಂದ ಕೇಳುವುದು ರೋಮಾಂಚನವೇ ಸರಿ. ಆದರೆ ನಾನು ಈ ಕಾರ್ ರೇಸಿನ ಈ ಪಂದ್ಯದಲ್ಲಿ ಗೆದ್ದು podium ಮೇಲೆ ನಿಂತ ಅರ್ಧ ನಿಮಿಷದಲ್ಲೇ ಮುಗಿದು ಹೋಯಿತು ನನ್ನ ರಾಷ್ಟ್ರ ಗೀತೆ. ಕೆಲವರು ೧೦ ನಿಮಿಷಗಳಿಗೂ ಹೆಚ್ಚು ಹೊತ್ತು ನಿಂತು ತಮ್ಮ ಗೀತೆಯನ್ನು ಆಲಿಸುತ್ತಾರೆ. ಇದು ಅವನ ಅಳಲು. ಅವನಿಗೆ podium ಮೇಲೆ ಹೆಚ್ಚು ಹೊತ್ತು ನಿಂತು ಸಂಭ್ರಮಿಸುವ ಆಸೆ, ಈ ಆಸೆ ಪೂರಸಲು ಅವನ ದೇಶದ god save the queen ಎನ್ನುವ ರಾಷ್ಟ್ರಗೀತೆಯನ್ನು ಇನ್ನಷ್ಟು ಉದ್ದ ಮಾಡಬೇಕು. ಹೇಗಿದೆ ಬೇಡಿಕೆ?

ನಮ್ಮ ರಾಷ್ಟ್ರಗೀತೆಯಲ್ಲಿ ಸ್ವಲ್ಪ alteration ಮಾಡಿ ಎಂದು ನಮ್ಮ ದೇಶದಲ್ಲಿ ಒಬ್ಬರು ಕೋರ್ಟು ಹತ್ತಿದರಂತೆ. “ಪಂಜಾಬ್, ಸಿಂಧು, ಗುಜರಾತ, ಮರಾಠ…” ಗೀತೆಯ ಈ ಸಾಲಿನಲ್ಲಿನ ಸಿಂಧ್ ಈಗ ನಮ್ಮ ದೇಶದಲ್ಲಿಲ್ಲದ್ದರಿಂದಲೂ, ಕಾಶ್ಮೀರ ನಮ್ಮ ದೇಶದಲ್ಲಿದ್ದರೂ ಅದರ ಪ್ರಸ್ತಾಪ ಗೀತೆಯಲ್ಲಿಲ್ಲದ್ದರಿಂದಲೂ ಸ್ವಲ್ಪ ಬದಲಾವಣೆ ಮಾಡಬಾರದೇ ಎನ್ನುವ ಮನವಿ. ಸಿಂಧ್ ಎಂದರೆ ಬರೀ ಪ್ರಾಂತ್ಯ ಮಾತ್ರವಲ್ಲ ಅದೊಂದು ನಾಗರೀಕತೆ, ನದಿಯ ಹೆಸರೂ ಹೌದು, ಹಾಗಾಗಿ ಯಾವ ಬದಲಾವಣೆ ಕೂಡದು ಎಂದು ವಿರೋಧಿಸಿದವರ ಪಾಟೀ ಸವಾಲು. ನ್ಯಾಯಾಲಯ alteration ಮನವಿಯನ್ನು ತಿಪ್ಪೆಗೆ ಬಿಸುಟಿತು.

ಆಫ್ಘಾನಿಸ್ತಾನದಲ್ಲಿ ೧೯೯೯- ೨೦೦೨ ರವರೆಗೆ ರಾಷ್ಟ್ರ ಗೀತೆಯೇ ಇರಲಿಲ್ಲ. ಬದಲಿಗೆ ಇದ್ದಿದ್ದು “ಕಲಾಶ್ನಿಕೋವ್” ಕೋವಿಗಳ ಸಂಗೀತ ಮಾತ್ರ.

ರಾಷ್ಟ್ರ ಗೀತೆಗಳ ಅಧ್ಯಯನಕ್ಕೆ anthematology ಎಂದು ಹೆಸರು. ಅಧ್ಯಯನ ಮಾಡುವ ವ್ಯಕ್ತಿ anthematologist.

ಪಾಕಿಸ್ತಾನದ yorker

ಪಾಕಿಸ್ತಾನದ ವಿದೇಶಾಂಗ ಸಚಿವೆ ಮಾತುಕತೆಗೆಂದು  ಭಾರತಕ್ಕೆ ಬರುತ್ತಿರುವ ಹಿನ್ನೆಲೆಯಲ್ಲಿ ಪಾಕಿಸ್ತಾನದ ಕಡೆಯಿಂದ ಒಂದು ‘ಯಾರ್ಕರ್’ ನಮ್ಮ ಕಾಲ ಬುಡಕ್ಕೆ ಬಂದು ಬಿದ್ದಿದೆ. ಭಾರತದ ವಿದೇಶಾಂಗ ಸಚಿವ ಸೋಮನಹಳ್ಳಿ ಮಲ್ಲಯ್ಯ ಕೃಷ್ಣ ಮುತ್ಸದ್ದಿಯಾಗಿದ್ದು ಪಾಕ್ ನ ಹೊಸ ವಿದೇಶಾಂಗ ಸಚಿವೆ ಅವರ ಮುಂದೆ ಏನೂ ಅಲ್ಲ ಅನುಭವದಲ್ಲಿ. ಹೀಗೆಂದು ಹೇಳಿದ್ದು ಕಾಂಗ್ರೆಸ್ ಹೈ ಕಮಾಂಡ್ ಅಲ್ಲ. ಈ ಅಪರೂಪದ ಹೊಗಳಿಕೆಯ ಮಾತುಗಳು ಪಾಕಿಸ್ತಾನದ ಜಮೀಯತ್ ಉಲೇಮಾ ಪಕ್ಷದ ಫಜ್ಲುರ್ ರಹಮಾನ್ ಬಾಯಿಂದ ಬಿದ್ದಿದ್ದು. ಭಾರತದ ಕೃಷ್ಣ, ಪಾಕ್ ನ ನೂತನ ವಿದೇಶಾಂಗ ಸಚಿವೆ ‘ಹೀನಾ ಖಾರ್’ ರನ್ನು outsmart ಮಾಡುವರು ಎನ್ನುವ ಮಾತಿನ ಹಿಂದೆ ಮಾತುಕತೆಗಳ ಮುನ್ನವೇ ನಮ್ಮನ್ನು outsmart ಮಾಡೋ ಹುನ್ನಾರವೇ ಪಾಕಿಗಳದು? ಪಾಕಿಸ್ತಾನವನ್ನು ನಂಬಿ ಕೆಟ್ಟವರ “ಕ್ಯೂ” ನಮ್ಮ ಪಡಿತರ ಅಂಗಡಿಯ ಮುಂದೆ ಸಕ್ಕರೆಗಾಗಿ ಕಾದು ನಿಲ್ಲುವವರಿಗಿಂತಲೂ ದೊಡ್ಡದು. ಹಾಗಾಗಿ ಪ್ರಶಂಸೆಯ ಮಾತುಗಳೂ ಸಹ ‘ಸ್ಕ್ಯಾನರ್’  ದಾಟಿಯೇ ಹೋಗಬೇಕು. ಇಲ್ಲದಿದ್ದರೆ ಚಳ್ಳೆ ಹಣ್ಣಿನ ಆತಿಥ್ಯ ನಮ್ಮದಾಗುತ್ತದೆ.   

 ಹೀನಾ ರಬ್ಬಾನಿ ಖಾರ್. ಆಧುನಿಕ ಶಿಕ್ಷಣ ಪಡೆದ, ಈ ಮಹಿಳೆ ಪಾಕ್ ರಾಜಕೀಯ ಕ್ಷೇತ್ರ ಪ್ರವೇಶ ಪಡೆದಿದ್ದು ತನ್ನ ತಂದೆಯ ಹೆಸರಿನ ಕಾರಣ. ಸಾಮಾನ್ಯವಾಗಿ ಮಹಿಳೆಯರು ರಾಜಕೀಯಕ್ಕೆ ಪುರುಷರ ನೆರಳಿನಿಂದಲೇ ಬರುವರು ಎನ್ನುವ ಮಾತು ಕೇಳಿ ಬಂದರೂ ಸಾಕಷ್ಟು ಮಹಿಳೆಯರು ಸ್ವ ಸಾಮರ್ಥ್ಯದಿಂದ ಅಧಿಕಾರದ ಚುಕ್ಕಾಣಿ ಹಿಡಿದ್ದಾರೆ. ಬ್ರಿಟನ್ ದೇಶದ ಮಾರ್ಗರೆಟ್ ಥ್ಯಾಚರ್, ತುರ್ಕಿ ದೇಶದ ಮಾಜಿ ಪ್ರಧಾನಿ ತಾಂಸು ಚಿಲ್ಲರ್, ನಮ್ಮ ಮಮತಾ ಬ್ಯಾನರ್ಜೀ ಮುಂತಾದವರು ಸ್ವ ಸಾಮರ್ಥ್ಯದಿಂದ ಜನಬೆಂಬಲ ಪಡೆದು ಕೊಂಡವರು. ಪಾಕಿಸ್ತಾನದ  ಸಂಸತ್ ಸದಸ್ಯರಾಗ ಬೇಕೆಂದರೆ ಪದವೀಧರರಾಗಿರಬೇಕು ಎನ್ನುವ ನಿಯಮವಿದೆ. ಈ ನಿಯಮದ ಕಾರಣ ಪದವೀಧರರಲ್ಲದ ರಾಜಕಾರಣಿಗಳು ತಮ್ಮ ಮಕ್ಕಳನ್ನು ಚುನಾವಣೆಯಲ್ಲಿ ಸ್ಪರ್ದಿಸಲು ಉತ್ತೇಜಿಸುತ್ತಾರೆ. ಹೀಗೆ ಮತ್ತೆ ಇನ್ನಿತರ ರೀತಿಯಲ್ಲಿ ತಮ್ಮ ತಂದೆಯರ ಪ್ರಭಾವ ಬಳಸಿ ರಾಜಕಾರಣ ಪ್ರವೇಶಿಸುವವರು ಹೆಚ್ಚು. ಈ ವ್ಯವಸ್ಥೆಯ ಮುಖಾಂತರ ಹೀನಾ ರಾಜಕಾರಣ ಪ್ರವೇಶಿಸಿದ್ದು.

 ವಿದೇಶಾಂಗ ಖಾತೆಯ ವಿಷಯದಲ್ಲಿ ಪಾಕ್ ಬಹಳ ನಾಜೂಕು, choosy. ಕಳ್ಳರು ತಮ್ಮ ಕಿತಾಪತಿಯಿಂದ ಬೇಸತ್ತ ವಿಶ್ವಕ್ಕೆ ಅವಶ್ಯವಾಗಿ ಬೇಕಾದ ಆರೈಕೆಯನ್ನು ಆಕರ್ಷಕ ವ್ಯಕ್ತಿತ್ವಗಳ ಕೈಯ್ಯಲ್ಲಿ ಮಾಡಿಸುತ್ತಾರೆ. ಪಾಕಿಸ್ತಾನದ ಅಮೆರಿಕೆಯ ರಾಯಭಾರಿ ಯಾಗಿದ್ದ ಮಲೀಹಾ ಲೋಧಿ ಶ್ವೇತ ಭವನದ ಮೇಲೆ ದೊಡ್ಡ ಪ್ರಭಾವ ಬೀರಿದ್ದರು. ಪಾಕಿಸ್ತಾನ ಕಿತಾಪತಿ ಮಾಡಿದಾಗಲೆಲ್ಲಾ ಇನ್ನೇನು ಅಮೇರಿಕಾ ಆ ದೇಶವನ್ನು ಭಯೋತ್ಪಾದಕ ದೇಶ ಎಂದು ಘೋಷಿಸುತ್ತದೆ ಎನ್ನುತ್ತಿದ್ದಂತೆಯೇ ಈಕೆ ತನ್ನ ಮಾತಿನ, ನಗುವಿನ ಪ್ರಭಾವದಿಂದ ತನ್ನ ದೇಶವನ್ನು ಸಂಕಷ್ಟದಿಂದ ಪಾರು ಮಾಡುತ್ತಿದ್ದಳು.  ಜುಲ್ಫಿಕಾರ್ ಅಲಿ ಭುಟ್ಟೋ ಸಹ ಪಾಕ್ ದೇಶದ ಪ್ರತಿಭಾವಂತ ವಿದೇಶಾಂಗ ಸಚಿವರಾಗಿದ್ದರು. ದೇಶದ ವರ್ಚಸ್ಸು, ಹೆಚ್ಚೆಬೇಕೆಂದರೆ ಸಾಮಾನ್ಯವಾಗಿ ವಿದೇಶಾಂಗ ಸಚಿವರುಗಳು ಮತ್ತು ದೊಡ್ಡ ದೊಡ್ಡ ಪ್ರಭಾವಶಾಲೀ ದೇಶಗಳ ರಾಯಭಾರಿಗಳು ಆಕರ್ಷಕ ವ್ಯಕ್ತಿತ್ವವುಳ್ಳವರಾಗಿರುತ್ತಾರೆ. ಇಂಥ ಹುದ್ದೆಗಳ ಆಯ್ಕೆಯಲ್ಲಿ ಸರಕಾರಗಳು ಜಾಗರೂಕವಾಗಿರುತ್ತವೆ.  

 ಕೇವಲ ೩೪ ವರುಷ ಪ್ರಾಯದ ಪಾಕಿಸ್ತಾನದ ನವ ನಿಯುಕ್ತ ವಿದೇಶಾಂಗ ಸಚಿವೆ ಕಂಡಿದ್ದು ಕಾರ್ಗಿಲ್ ಯುದ್ಧ ಮಾತ್ರ. ೨೦೦೫ ರ ಭೂಕಂಪದ ವೇಳೆ ಅಂತಾರಾಷ್ಟ್ರೀಯ ಸಮುದಾಯದೊಂದಿಗೆ ನಿಕಟ ಸಂಪರ್ಕ ಇಟ್ಟುಕೊಂಡಿದ್ದು ಬಿಟ್ಟರೆ ಬೇರೆ ಯಾವುದೇ ದೊಡ್ಡ ವಿದೇಶೀ ಅನುಭವ ಈಕೆಯಲ್ಲಿ ಕಾಣುತ್ತಿಲ್ಲ. ೨೦೦೯ ರಲ್ಲಿ ಪಾಕಿಸ್ತಾನದ ಆಯವ್ಯಯ ಪತ್ರವನ್ನೂ ಈಕೆ ಮಂಡಿಸಿದ್ದರು. ವಯಸ್ಸು ೩೨ ಆದರೂ ಈಗಾಗಲೇ ಎರಡು ಬಾರಿ ಸಂಸತ್ತಿಗೆ ಆಯ್ಕೆಯಾಗಿದ್ದಾರೆ.  

ಹಾಗಾಗಿ ಸಾಕಷ್ಟು ಅನುಭವ ಇಲ್ಲದ ಈ ಮಹಿಳೆ ಭಾರತದಲ್ಲಿ ಬಂದು ಯಾವ ರೀತಿಯ ಪ್ರದರ್ಶನ ನೀಡುವರೋ ಎನ್ನುವುದು ಕುತೂಹಲಕರ ಸಂಗತಿ. ಆಕೆಯ ರಾಜಕೀಯ, ಕೌಟುಂಬಿಕ, ಅನುಭವದ ಹಿನ್ನೆಲೆ ಬಗ್ಗೆ ಹೆಚ್ಚು ತಲೆ ಕೆಡಿಸಿ ಕೊಳ್ಳದೆ ನಾವು ಹೇಳಬೇಕಾದ್ದನ್ನು ಸ್ಪಷ್ಟ ಮಾತುಗಳಲ್ಲಿ ಹೇಳಬೇಕು. ಅತಿಥಿ ಎಳೆ ಪ್ರಾಯದವಳು, ಅನುಭವ ಇಲ್ಲದಾಕೆ, ಅತಿಥಿ ಸತ್ಕಾರ, ಹಾಗೆ ಹೀಗೆ ಎಂದು ಸಲೀಸಾಗಿ ನಡೆಸಿಕೊಳ್ಳದೆ ನಮ್ಮ ಹಿತಾಸಕ್ತಿಯನ್ನು ಎಂದಿಗಿಂತ ಸ್ವಲ್ಪ ಜೋರಾಗಿಯೇ ಕಾಯ್ದು ಕೊಂಡರೆ ನಮಗೇ ಹಿತ. ಅಷ್ಟು ಮಾತ್ರ ಅಲ್ಲ, ಇಲ್ಲೊಂದು ‘caveat emptor’ ಸಹ ಇದೆ. ಪಾಕ್ ನ ಈ ವಿದೇಶಾಂಗ ಸಚಿವೆ ಪದವಿ ಪಡೆದಿದ್ದು ಹೋಟೆಲ್ ಮ್ಯಾನೇಜ್ಮೆಂಟ್ನಲ್ಲಿ, ಅದೂ ಅಮೆರಿಕೆಯ ವಿಶ್ವ ವಿದ್ಯಾಲಯದಿಂದ. deadly double. ಈ ಪದವಿ ಪಡೆದವರು ಯಾವಾಗಲೂ ಮುಗುಳ್ನಗುವನ್ನೇ ಧರಿಸಿರುತ್ತಾರೆ, ಒಳ್ಳೆಯ, ಸಿಹಿಯಾದ, ಸತ್ಕಾರದ ಮಾತುಗಳನ್ನೇ ಆಡುತ್ತಾರೆ ಎಂಥ ಸಂದರ್ಭಗಳಲ್ಲೂ. ಹಳಸಿದ ಪುಳಿಯೋಗರೆ ಯನ್ನು ಇದು ತುಂಬಾ delicious ಎಂದು ನಮ್ಮ ಒಲ್ಲದ ಬಾಯಿಗೆ ತುರುಕುವ ಜನ ಈ hospitality management ಗಳಿಸಿದವರು.

ಒಂದು ಕಡೆ ಹಿಲರಿ ಕ್ಲಿಂಟನ್, ಮತ್ತೊಂದು ಕಡೆ ಹೀನಾ ರಬ್ಬಾನಿ, ಇವರಿಬ್ಬರ ನಡುವೆ ನಮ್ಮ ಮುದ್ದು ಕೃಷ್ಣಾ, ಊಹಿಸಿ ನೋಡಿ. ಅಂತಾರಾಷ್ಟ್ರೀಯ ರಾಜಕಾರಣ ಮುಗುಳ್ನಗುವಿನ, ಫೋಟೋ ಶಾಟ್ ಗಳಿಂದ ತುಂಬಿದ ಪಿಕ್ನಿಕ್ ಅಲ್ಲ. ನಲ್ನುಡಿಗಳ land mine ಗಳು ತುಂಬಿರುತ್ತವೆ ಹಾದಿ ಯುದ್ದಕ್ಕೂ. ಇವನ್ನು  ಗುರುತಿಸಿ ನಮ್ಮ ಹಿತಾಸಕ್ತಿ ಕಾಯ್ದು ಕೊಳ್ಳುವುದು ಒಂದು ದೊಡ್ಡ ಸಾಹಸವೇ ಸರಿ. ಈ ಸಾಹಸದಲ್ಲಿ ನಮ್ಮ ಕೃಷ್ಣ ವಿಜಯಿಯಾಗಲಿ.  

 ಚಿತ್ರ ಕೃಪೆ: ibtimes.com

ಅತ್ತೆ ಜೋಕು

ಅತ್ತೆ ಯರ ಬಗೆಗೆ ಇರುವ quote ಗಳ ಬಗ್ಗೆ ಗೂಗ್ಲ್ ಮಾಡ್ತಾ ಇದ್ದೆ. ಪಾಶ್ಚಾತ್ಯ ಗಂಡಸರಿಗೆ ತಮ್ಮ ಅತ್ತೆಯಂದಿರ ಬಗ್ಗೆ ಅಂಥ ಒಳ್ಳೆ ಅಭಿಪ್ರಾಯ ಇಲ್ಲ ಅಂತ ಕಾಣುತ್ತೆ. ಆದರೆ ಭಾರತೀಯ ಗಂಡು ಈ ವಿಷಯದಲ್ಲಿ ಅದೃಷ್ಟಶಾಲಿ. ಮಗಳು ಭದ್ರವಾಗಿರಲೆಂದು ಅತ್ತೆ ತಮ್ಮ ಅಳಿಯಂದಿರನ್ನು ತುಂಬಾ ಜೋಪಾನವಾಗಿ ನೋಡಿ ಕೊಳ್ಳುತ್ತಾರೆ. ಗಂಡನನ್ನು ಹೇಗೆ ನೋಡಿ ಕೊಳ್ಳಬೇಕೆಂದು ತನ್ನ ಮಗಳಿಗೂ ಬುದ್ಧಿ ಹೇಳುತ್ತಾಳೆ. ಆದರೆ ಈ ಅದೃಷ್ಟ ಮಹಿಳಾ ಮಣಿಗಳಿಗೆ ಮಾತ್ರ ಇಲ್ಲ. ಒಂದು ಕಡೆ ಅತ್ತೆ – ಅಳಿಯಂದಿರ ಸಂಬಂಧ ಸುಮಧುರವಾಗಿದ್ದರೆ ಮತ್ತೊಂದು ಕಡೆ ಅತ್ತೆ- ಸೊಸೆಯರ ಜಟಾಪಟಿ ಸೂರ್ಯನಷ್ಟೇ ಸತ್ಯ, ಪ್ರಖರ.

ಈಗ ಪಾಶ್ಯಾತ್ಯ ಗಂಡಿನ ಕಡೆ ಬರೋಣ. ಮೇಲೆ ಹೇಳಿದ ಹಾಗೆ ಅಲ್ಲಿನ ಅತ್ತೆ – ಅಳಿಯದಿರ ಸಂಬಂಧ ನಮ್ಮ ದೇಶದ DMK-CONGRESS ಪಕ್ಷದ ರೀತಿ. ಅಂಥಾ understanding. ಪಾಶ್ಚಾತ್ಯ ಗಂಡು ಹಾಡೋದು, ಅತ್ತೆ, ನೀನು ಸತ್ತರೆ, ನನ್ನ ಬಾಳು ಸಕ್ಕರೆ… ಅಂತ.

ಒಬ್ಬ ತನ್ನ ಅತ್ತೆಯನ್ನು ಮೃಗಾಲಯಕ್ಕೆ ಕರೆದೊಯ್ಯುತ್ತಾನೆ. ಮೊಸಳೆಗಳಿರುವ ಕೊಳದ ಹತ್ತಿರ ಬಂದಾಗ ತನ್ನ ಅತ್ತೆಯನ್ನು ನೂಕಿ ಬಿಡುತ್ತಾನೆ. ಅತ್ತೆಯನ್ನು ಕೊಂದ ಅಪವಾದ ಸಾಲದೆಂಬಂತೆ ಈಗ ಅವನ ಮೇಲೆ ಪ್ರಾಣಿ ದಯಾ ಸಂಘದವರು ಕೇಸು ಹಾಕಿದ್ದಾರೆ, ಮೊಸಳೆಗಳೊಂದಿಗೆ ಈತ ಕ್ರೂರವಾಗಿ ವರ್ತಿಸಿದ ಎಂದು. ಆತ್ತೆಯ ಬಗ್ಗೆ ಇದಕ್ಕಿಂತ ಕ್ರೂರವಾದ ಹೇಳಿಕೆ ಬೇರೇನಿದೆ?      

 

ಮೂರು ವರ್ಷಕ್ಕೇ ಮುಪ್ಪಾದ ‘ಬ್ಲ್ಯಾಕ್ ಬ್ಯೂಟಿ’

ನನ್ನ LG ಲ್ಯಾಪ್ ಟಾಪ್, a thing of beauty is a joy forever ಆಗಬಹುದು ಎನ್ನುವ ನಿರೀಕ್ಷೆಯೊಂದಿಗೆ ಸುಮಾರು ೪೨ ಸಾವಿರ ರೂಪಾಯಿ ಪೀಕಿ ಮೂರು ವರ್ಷಗಳ ಹಿಂದೆ ಕೊಂಡು ಕೊಂಡೆ. 13.3 ಇಂಚು ಪರದೆಯ (ನನಗೆ ಚಿಕ್ಕ ಸೈಜ್ ಇಷ್ಟ, ಕಡಿಮೆ ತೂಕ ವಾದ್ದರಿಂದ) ಕೋರ್ 2 DUO, ೨ GB RAM ೧೬೦ GB ಹಾರ್ಡ್ ಡಿಸ್ಕ್, ಅದೂ – ಇದೂ, ಹಾಳೂ – ಮೂಳೂ, ಇರೋ ಚೆಂದದ ಯಂತ್ರ. ಹಾಂ, ಇದಕ್ಕೆ ನೀಲಿ ಹಲ್ಲೂ (BLUE TOOTH) ಸಹ ಇತ್ತು. ಒಟ್ಟಿನಲ್ಲಿ OWNER’S PRIDE ಎಂದು ಸಲೀಸಾಗಿ ಹೇಳಬಹುದು. ಹೊಸತರಲ್ಲಿ ಅಗಸ ಎತ್ತೆತ್ತಿ ಒಗೆದ ಎನ್ನುವ ರೀತಿಯಲ್ಲಿ ತಂದ ಹೊಸತರಲ್ಲಿ ಜೋಪಾನವಾಗಿ ಇಟ್ಟುಕೊಂಡೆ. ಈ ಪಾಪಿ ಮೆಶೀನ್ ತರುವ ಬದಲಾವಣೆಯ ಅರಿವಿಲ್ಲದೆ ನನ್ನ ಮಡದಿಯೂ ಹುರುಪಿನಿಂದ ಸ್ವಾಗತಿಸಿದಳು. ಮೊಬೈಲ್ ನ ಹುಚ್ಚು ಅಂಟಿಸಿಕೊಂಡು ನನ್ನ ಬೆಲೆಬಾಳುವ N8 ಮೊಬೈಲ್ ನಲ್ಲಿ ಸಂಗೀತ ಕೇಳುತ್ತಾ ಫೋನನ್ನು TOILET ಗುಂಡಿಯಲ್ಲಿ ಸಮಾಧಿ ಮಾಡಿದ್ದ ನನ್ನ (ಆಗ ೪ ವರ್ಷ ಪ್ರಾಯದ) ಮಗನ ಕಣ್ಣಿನಿಂದ ದೂರ ಇಟ್ಟುಕೊಂಡು ಸಾಕುತ್ತಿದ್ದೆ. ಅವನ ಕಣ್ಣು ತಪ್ಪಿಸಿದರೂ ನನ್ನ ಪುಟ್ಟ ೯ ತಿಂಗಳ ಪೋ(ಕ)ರಿಯ ಕಿತಾಪತಿಯಿಂದ ನನ್ನ ಲ್ಯಾಪ್ ಟಾಪ್ ಅನ್ನು ಉಳಿಸಲು ಆಗಲಿಲ್ಲ ನನಗೆ. ಸೋಫಾದ ಮೇಲೆ ಇಟ್ಟು ಊಟಕ್ಕೆಂದು ಕೂತಾಗ ಯಾವಾಗ ಪ್ರತ್ಯಕ್ಷ ಳಾದಳೋ ಸೋಫಾದ ಹತ್ತಿರ, ಎಳೆದು ನೆಲದ ಮೇಲೆ ಕೆಡವಿದಳು. ಅಯ್ಯೋ ನನ್ನ ನಲವತ್ತೆರಡು ಸಾವಿರ ಭಸ್ಮ ಮಾಡಿದಳಲ್ಲಾ ಎಂದು ಹೋಗಿ ನೋಡಿದರೆ ಮೇಲಿನ ಎರಡು, ಕೆಳಗಿನ ಎರಡು ಹಲ್ಲುಗಳನ್ನು ಬಿಟ್ಟು ಸವಾಲೆಸೆಯುವಂತೆ ನನ್ನತ್ತ ನೋಡಿದಳು. ಲ್ಯಾಪ್ ಟಾಪ್ ನ ಸ್ಕ್ರೀನ್ ಸುತ್ತ ಇರುವ ಪ್ಲಾಸ್ಟಿಕ್ ಫ್ರೇಂ ಕ್ರ್ಯಾಕ್. ಇಷ್ಟು ಚಿಕ್ಕ ಪ್ರಾಣಿಯನ್ನು ಬಡಿಯುವುದಾದರೂ ಹೇಗೆ ಎಂದು ಬರೀ ಕೆಂಗಣ್ಣಿನಿಂದ ಅವಳತ್ತ ನೋಡಿ ಲ್ಯಾಪ್ಟಾಪ್ ಅವಳ ಕೈಗೆ ಸಿಗದ ರೀತಿಯಲ್ಲಿ ಇಟ್ಟು ಮರಳಿ ಡಿನ್ನರ್ ಟೇಬಲ್ ಗೆ ಬಂದಾಗ ಅರ್ಧಾಂಗಿನಿ ಗೆ ಸಂತೋಷವಾದ ಸುಳಿವು ಸಿಕ್ಕಿತು. ನಾನು ಲ್ಯಾಪ್ ಟಾಪ್ ಮೇಲೆ ಕುಳಿತು ಆನ್ ಮಾಡುವುದರ ಒಳಗೆ ಅವಳಲ್ಲಿ ಭೂತ ಆವರಿಸಿ ಬಿಡುತ್ತೆ. ಹಗಲಿಡೀ ಆಫೀಸು, ಸಂಜೆಯಾದರೆ ಲ್ಯಾಪ್ ಟಾಪ್ ಎಂದು ಗೊಣಗುತ್ತಿದ್ದಳು. ಈಗ ಲ್ಯಾಪ್ ಟಾಪ್ ಬಿದ್ದ ಸದ್ದು ಕೇಳಿದಾಗ ಅವಳಿಗೆ ಸಂತಸ, ಹಾಳಾಗಿ ಹೋಯಿತು ಎಂದು. ನನ್ನ ಲ್ಯಾಪ್ ಟಾಪ್ ಅವಳಿಗೆ ಸವತಿಯಂತೆ ಕಾಣಲು ಶುರು ಮಾಡಿತು.

 ಲ್ಯಾಪ್ ಟಾಪ್ ಕೊಂಡ ಈ ಮೂರು ವರ್ಷಗಳ ಅವಧಿಯಲ್ಲಿ ನನ್ನ ಮಗ ಅದರ ಮೇಲೆ ಪೂರ್ಣ ಅಧಿಕಾರ ಸ್ಥಾಪಿಸಿದ, ಮಗಳು ಅದರ ನಾಲ್ಕಾರು ಕೀಲಿಗಳನ್ನು ಕಿತ್ತು ಕೈಗೆ ಕೊಟ್ಟಳು,  ನಾನು ಸಾಕಷ್ಟು ಹುರುಪಿನಿಂದ ನನ್ನ  ಹಳೇ ಸೇತುವೆ ಬ್ಲಾಗಿನಲ್ಲಿ ಬ್ಲಾಗಿಸಿದೆ, ನನ್ನ literary sojourn ಗೆ ಸಂಗಾತಿಯಾಗಿ, ಪ್ರೋತ್ಸಾಹಿಸಿದ ನನ್ನ ಪ್ರೀತಿಯ ಆನ್ ಲೈನ್ ಸಾಹಿತಿಗಳ ತಾಣ ಸಂಪದ ದೊಂದಿಗಿನ ನಂಟು ಇನ್ನಷ್ಟು ಗಾಢವಾಯಿತು, ನನ್ನ ನಿರಂತರ ಟ್ವೀಟ್ಗಳಿಂದ twitter ಶ್ರೀಮಂತ ವಾಯಿತು, ನನ್ನ ಮಡದಿಯ ಕೆಂಗಣ್ಣಿಗೆ ತುತ್ತಾಗಿ ಮಿರ ಮಿರ ಮಿಂಚುತ್ತಿದ್ದ ಅದರ ಕಪ್ಪು ಬಣ್ಣದ ಹೊಳಪು ಕಾಂತಿ ಹೀನವಾಯಿತು…… ಇಷ್ಟೆಲ್ಲಾ ಆದ ನಂತರ ಸಿಸ್ಟಮ್ ಸಹ ೬೦ ರ ದಶಕದ ಅಂಬಾಸಿಡರ್ ಕಾರಿನ ರೀತಿ ವರ್ತಿಸಲು ಶುರು ಮಾಡಿತು. laptop ನ ಆಯುಷ್ಯ ಬರೀ ಮೂರು ಅಥವಾ ನಾಲ್ಕು ವರ್ಷ ಗಳೋ? ನಿಮಗೂ ಇದರ ಅನುಭವ ಆಗಿದೆಯೇ? ಪ್ರತೀ ಮೂರು ನಾಲ್ಕು ಅಥವಾ ಹೆಚ್ಚೆಂದರೆ ಐದು ವರ್ಷಗಳಿಗೊಮ್ಮೆ ಹತ್ತಾರು ಸಾವಿರ ರೂಪಾಯಿ ಹಾಕಿ ಲ್ಯಾಪ್ ಟಾಪ್ ಕೊಳ್ಳಲು ಸಾಧ್ಯವೋ?

ಮೂರು ವರ್ಷಗಳಲ್ಲೇ ಮುಪ್ಪಾದ ಯಂತ್ರವನ್ನು ನನ್ನ ಏಳು ವರ್ಷದ ಮಗನಿಗೆ ಕೊಟ್ಟು ಮ್ಯಾಕ್ ಅಥವಾ vaio ಕೊಳ್ಳುವ ಆಸೆ ಈಗ. ಮಡದಿ ಸಹ ಈಗ ಮತ್ತಷ್ಟು matured ಆಗಿರೋದ್ರಿಂದ ಹಳೇ ಲ್ಯಾಪ್ ಟಾಪ್ ಗೆ ಬಂದ ದುಃಸ್ಥಿತಿ ಹೊಸ ಮೆಶೀನಿಗೆ ಬರಲಾರದು ಎನ್ನೋ ಭರವಸೆ ಇದೆ. ರಾಜಕಾರಣಿಯ ಆಶ್ವಾಸನೆಯ ರೀತಿ ಹುಸಿಯಾಗದಿದ್ದರೆ ಸಾಕು ನನ್ನ ಭರವಸೆ.      

 

ಸೊಕ್ಕಿದ ಪ್ರವಾಸಿ

ಭಾರತ ಇಂಗ್ಲೆಂಡ್ ಪ್ರವಾಸದಲ್ಲಿದೆ. ನಾಲ್ಕು ಟೆಸ್ಟ್ ಮತ್ತು ಇತರೆ ಪಂದ್ಯಗಳಲ್ಲಿ ಭಾಗವಹಿಸಲು ಬಂದ ಭಾರತ ಬರುತ್ತಲೇ ವಿವಾದದ ಕಂಬಳಿಯ ಮೇಲೆ ಕಾಲಿಟ್ಟಿತು. ಹೊಸ ತಂತ್ರಜ್ಞಾನವನ್ನು ಅಳವಡಿಸಿ ಕೊಳ್ಳಲು ಒಲ್ಲದ ಸೊಕ್ಕಿದ ಪ್ರವಾಸಿಗರು ಎಂದು ಇಂಗ್ಲೆಂಡ್ ನ ಪತ್ರಿಕೆಯೊಂದು ನಮ್ಮನ್ನು ಜರೆಯಿತು. ಅತಿಥಿಗಳನ್ನು ಆದರಿಸುವ ಪರಿ ಇದು. ಹೊಸ ತಂತ್ರ ಜ್ಞಾನ ( lbw verdicts under the Decision Review System ) ವನ್ನು ನಾವು ತಿರಸ್ಕರಿಸಿದ್ದಿದ್ದರೆ ಅದಕ್ಕೆ ಉತ್ತರಿಸ ಬೇಕಾದ ರೀತಿ ಇದಲ್ಲ.

ಹೌದು ಕ್ರಿಕೆಟ್ ಇಂಗ್ಲೆಂಡಿನ ಹುಲ್ಲುಗಾವಲಿನಲ್ಲಿ ಕುರಿ ಮೇಯಿಸುತ್ತಿದ್ದ ಕುರುಬರಿಂದ ಬಂದಿರಬಹುದು. ಆದರೆ ಆ ಕ್ರೀಡೆಗೆ ಮಾನ್ಯತೆ, ಜನಪ್ರಿಯತೆ, ರಂಗು, ಸ್ಪರ್ದೆ ಎಲ್ಲವನ್ನೂ ಒದಗಿಸಿದ್ದು ಏಷ್ಯಾದ ತಂಡಗಳು. ಕ್ರಿಕೆಟ್ ಇಂದು ವಿಶ್ವ ಮಾನ್ಯ ಕ್ರೀಡೆಯಾಗಿ ಕಂಗೊಳಿಸಿದರೆ ಅದರ ಕೀರ್ತಿಗೆ ಭಾರತ, ಶ್ರೀಲಂಕಾ, ಪಾಕಿಸ್ತಾನ ಭಾಜನರು. ಅದರಲ್ಲೂ ಭಾರತೀಯರ ಅಭೂತಪೂರ್ವ ಬೆಂಬಲ ಇಂದು ಕ್ರಿಕೆಟ್ ಶ್ರೀಮಂತ ಕ್ರೀಡೆಯಾಗಿ ಹೊರ ಹೊಮ್ಮಲು ಕಾರಣ. ಭಾರತ ವಿಶ್ವದ ನಂಬರ್ ವನ್ ಕ್ರಿಕೆಟ್ ರಾಷ್ಟ್ರವಾಗದೆ ಬರೀ ಒಂದು “ಆಮ್ಲೆಟ್” ಆಗಿದ್ದಿದ್ದರೆ ಸರಿಯಾಗಿ ಬೆಂದಿಲ್ಲ ಎಂದು ಅಡುಗೆ ಕೋಣೆಗೆ ಕಳಿಸಬಹುದಿತ್ತು. ಈ ಮಾತಿನ ಧಾಟಿ ನೋಡಿ. ನಮ್ಮ ನಡತೆ ಸರಿಯಿಲ್ಲ ಎಂದು ಅವರ ಭಾವನೆ. ಭಾರತದ ನಿರ್ಧಾರದ ವಿರುದ್ಧ ICC ಮೊರೆ ಹೋಗೋ ಬದಲು ಮಾಧ್ಯಮದ ಮೊರೆ ಏಕೆ ಹೋದರೋ ಅವರಿಗೇ ಗೊತ್ತು. ಈ ಸರಣಿಯಲ್ಲಿ ಯಾರ ಕಾನೂನಿಗೆ ಮಾನ್ಯತೆ ಎಂದು ಎಂಬುದನ್ನು ಭಾರತ ತೋರಿಸಿ ಕೊಟ್ಟಿತು ತನ್ನ ರೂಪಾಯಿಯ ಶಕ್ತಿ (“rupee-pile of influence” ) ಮೂಲಕ ಎಂದು ದೂರಿತು ಪತ್ರಿಕೆ.

ವೆಸ್ಟ್ ಇಂಡೀಸ್ ನಲ್ಲಿ ಭಾರತದ ನಾಯಕ ಹೇಳಿದ ಮಾತನ್ನೂ ಈ ಲೇಖನದಲ್ಲಿ ಉದ್ಧರಿಸಲಾಯಿತು; ಆತ್ಮ ಸಾಕ್ಷಿಯಿಲ್ಲದೆ ಬಿಳಿ ಕೋಟ್ (ಅಂಪೈರ್) ಧರಿಸಿದವರ ಮೇಲೆ ಒತ್ತಡ ಹೇರಲಾಯಿತಂತೆ.

“ಆಧುನಿಕ ತಂತ್ರಜ್ಞಾನ ಉಪಯೋಗಿಸಲು ಒಪ್ಪದಿರುವುದು ಪ್ರವಾಸಿಗಳು ಮಾಡಿದ ವಿಧ್ವಂಸಕ ಕೃತ್ಯ” ಎನ್ನುವ ಶೀರ್ಷಿಕೆಯಡಿ ಬಂದ ಉದ್ದನಾದ ಲೇಖನ ಟೀಕೆ ಮಾಡಬೇಕೆಂದೇ ಬರೆದಿದ್ದು. ಕ್ರೀಡೆಯಲ್ಲೇ ಆಗಲೀ, ಸಂಸ್ಕಾರದಲ್ಲೇ ಆಗಲೀ, ವಾಣಿಜ್ಯವಹಿವಾಹಿಟಿನಲ್ಲೇ ಆಗಲೀ ಭಾರತದ ಉನ್ನತಿ ವಿದೇಶೀಯರಿಗೆ ಜೀರ್ಣಿಸಿಕೊಳ್ಳಲಾಗದ ಬೆಳವಣಿಗೆ. ಹೀಗೆ ಅಜೀರ್ಣದಿಂದ ನರಳುವಾಗ ದೇಶವೊಂದು “ಮೊಟ್ಟೆ ದೋಸೆ” ( ಆಮ್ಲೆಟ್ ) ಆಗಿ ಕಾಣುತ್ತದೆ. ಪ್ರವಾಸಿಗಳು ಸೊಕ್ಕಿದವರಂತೆ ಕಾಣುತ್ತಾರೆ.

http://www.independent.co.uk/sport/cricket/james-lawton-arrogant-tourists-refusal-to-embrace-technology-was-nothing-short-of-sabotage-2318950.html

ಉಂಡು ಮಲಗೋ ತನಕ

ಗಂಡ ಹೆಂಡಿರು ಕಾದಾಡುವುದು ಸ್ವಾಭಾವಿಕವೇ. ಈ ಕಿತ್ತಾಟ ನೋಡಿದ ನಮ್ಮ ಹಿರಿಯರೂ ಅದನ್ನು ದೊಡ್ಡ ವಿಷಯವಾಗಿ ಪರಿಗಣಿಸದೆ “ಗಂಡ ಹೆಂಡಿರ ಜಗಳ ಉಂಡು ಮಲಗೋ ತನಕ” ಎಂದು ಜಗಳಕ್ಕೆ ಒಂದು culinary ಮತ್ತು romantic angle ಕೊಟ್ಟು ಮಗ್ಗುಲಾದರು. ಆದರೆ ಎಲ್ಲಾ ಜಗಳಗಳೂ ‘ಮಂಚೂರಿ’ ತಿಂದು ಮಂಚ ಏರಿದ ಕೂಡಲೇ ಕದನ ವಿರಾಮದಲ್ಲಿ ಸಮಾಪ್ತಿ ಆಗೋಲ್ಲ ಎಂದು ಗುಜರಾತಿನ ಘಟನೆಯೊಂದು ಹೇಳುತ್ತದೆ.

ಸುಮಾರು ಹದಿನೈದು ವರ್ಷಗಳಿಂದ ವೈವಾಹಿಕ ಬದುಕಿನ ಕೃಷಿಯಲ್ಲಿ ನೊಗಕ್ಕೆ ನೊಗ ಕೊಟ್ಟು ದುಡಿದು ಮೂರು ಹೆಣ್ಣು, ಒಂದು ಗಂಡು ಮಕ್ಕಳ ಸೃಷ್ಟಿಗೂ ಕಾರಣವಾದ ಗಂಡ ಹೆಂಡಿರ ಟೀಂ ಜಗಳ ಮಾಡುವುದನ್ನು ಬಿಟ್ಟಿರಲಿಲ್ಲ. ಅವಳಿಗೆ ಅವನ ಮೇಲೆ ಸಂಶಯ. ಗಂಡನಿಗೆ ಯಾವುದೋ ಹೆಣ್ಣೊಬ್ಬಳಿದ್ದಾಳೆ ಎಂದು. ಒಂದು ದಿನ ಇದೇ ವಿಷಯದಲ್ಲಿ ಜಗಳವಾಗಿ ಆಕೆ ಗಂಡನ ಮನೆ ಬಿಟ್ಟು ತವರಿಗೆ ಹೋಗುತ್ತಾಳೆ. ಸ್ವಲ್ಪ ದಿನಗಳ ನಂತರ ರಾಜಿ ಮಾಡಿಕೊಂಡ ಪತಿರಾಯ ತನ್ನ ಪತ್ನಿಯನ್ನು ವಾಕ್ ಗೆಂದು ಕರೆಯುತ್ತಾನೆ. ಗಂಡ ಸರಿಯಾದ ಎಂದು ಆಕೆ ಪುಳಕದಿಂದ ಅವನೊಂದಿಗೆ ಹೋಗುತ್ತಾಳೆ. ಹತ್ತಿರದ ಸೇತುವೆ ಮೇಲಿನಿಂದ ನದಿಗೆ ಅವಳನ್ನು ನೂಕಿ, ಮಗುಮ್ಮಾಗಿ ಮನೆಗೆ ಮರಳುತ್ತಾನೆ ತೊಲಗಿತು ಪೀಡೆ ಎಂದು. ಹೋದೆಯಾ ಪಿಚಾಚಿ ಎಂದರೆ ಬಂದೆ ನಾ ಗವಾಕ್ಷೀಲಿ ಎನ್ನುವಂತೆ ಆಕೆ ಮಾರನೆ ದಿನ ಮನೆಗೆ ಮರಳುತ್ತಾಳೆ. ಈತ ಪಿಶಾಚಿ ಬಂತೇನೋ ಎಂದು ಹೌಹಾರಿ ಓಟ ಕೀಳುವಾಗ ಅವನನ್ನು ಹಿಡಿದು ಪೊಲೀಸರಿಗೆ ಒಪ್ಪಿಸುತ್ತಾಳೆ. ನದಿಗೆ ಬಿದ್ದ ಈಕೆಯನ್ನು ಅಲ್ಲಿಯೇ ದಡದಲ್ಲಿದ್ದ ಜನ ರಕ್ಷಿಸಿರುತ್ತಾರೆ. ಅಬ್ಬಾ, ದುರಂತದಿಂದ ಮಹಿಳೆ ಪಾರಾದಳು ಎಂದು ಸಂಸದಲ್ಲಿದ್ದಂತೆಯೇ ೧೯೮೮ ರಲ್ಲಿ ಬಂದ ಹಿಂದಿ ಸಿನಿಮಾ ನೆನಪಿಗೆ ಬಂತು.

ಖೂನ್ ಭರೀ ಮಾಂಗ್ (ರಕ್ತ ತುಂಬಿದ ಬೈತಲೆ) ಎನ್ನುವ ಚಿತ್ರದಲ್ಲಿ ವಿಧವೆಯಾದ ರೇಖಾಳನ್ನು ಆಕೆಯ ಪ್ರೇಮಿ ಕಬೀರ್ ಬೇಡಿ ದೋಣಿಯಿಂದ ನದಿಗೆ ತಳ್ಳಿ ಬಿಡುತ್ತಾನೆ. ಮೊಸಳೆಯ ಆಕ್ರಮಣಕ್ಕೆ ತುತ್ತಾದರೂ ಪವಾಡ ಸದೃಶವಾಗಿ ಗಾಯಗಳೊಂದಿಗೆ ರೇಖಾ ಪಾರಾಗಿ ಪ್ರತ್ಯಕ್ಷಗೊಳ್ಳುತ್ತಾಳೆ ಸೇಡು ತೀರಿಸಿ ಕೊಳ್ಳಲು. ಈ ಚಿತ್ರ ಆಸ್ಟ್ರೇಲಿಯಾದ return to eden ಧಾರಾವಾಹಿಯ ಡಬ್ಬಿಂಗ್ ಅಂತೆ. ಗುಜರಾತಿ ದಂಪತಿಗಳ ಈ ಗುದ್ದಾಟ, ದುರಂತದಲ್ಲಿ ಅವಸಾನ ಕಾಣಬಹುದಾಗಿದ್ದ ಘಟನೆ, ಗಂಡನ ಲಾಕ್ ಅಪ್ ನಲ್ಲಿ ಸಮಾಪ್ತಿಯಾದರೂ ಇದನ್ನು ಓದಿದ ಜನ ಮಾತ್ರ ತಮ್ಮ ನಾಲಗೆ ಹರಿ ಬಿಡಲು ಒಳ್ಳೆಯ ಅವಕಾಶ ಎಂದು ಸಿದ್ಧರಾದರು. “ಹೆಂಡತಿಗೆ ಈಜು ಬರೋಲ್ಲ ಎಂದು ಅರಿತು ಪಾಪ ಗಂಡ ನೀರಿಗೆ ತಳ್ಳಿದ್ದು. ಇದು ಮೋಸ. ತನಗೆ ಈಜು ಬರುತ್ತೆ ಎಂದು ಹೆಂಡತಿ ಗಂಡನಿಗೆ ಹೇಳದೆ ಮೋಸ ಮಾಡಿದಳು” ಎಂದು ಒಬ್ಬ ಕೊರಗಿದಾಗ ಕೆರಳಿದ ಮಹಿಳೆಯೊಬ್ಬಳು ಹೇಳಿದ್ದು, “ನಿನ್ನ ತಾಯಿಗೆ ಈ ಗತಿ ಬಂದು ಬದುಕುಳಿಯದೆ ಸತ್ತಿದ್ದರೆ ನಿನ್ನಂಥವನಿಗೆ ಜನ್ಮ ಕೊಡುವುದು ತಪ್ಪುತ್ತಿತ್ತು” ಎಂದು ಕಿಡಿ ಕಾರಿದಳು.

ನನ್ನ ಪ್ರಕಾರ ಮದುವೆಯಾಗೋ ಹೆಣ್ಣು ಮಕ್ಕಳು ಕರಾಟೆ ಕಲಿತರೆ ಸಾಲದು, ಈಜೂ ಕಲಿಯಬೇಕು, ಸೇತುವೆ ಮೇಲಿನ “ಖೊಕ್” ಆಡುವ ಸಂದರ್ಭ ಬಂದರೆ ಸಹಾಯವಾಗಬಹುದು.

ಭಾರತೀಯನಾದರೆ ಹಿಂದಿ ಗೊತ್ತಿರಲೇಬೇಕೆ?

ಕಳೆದ ವಾರ ಒಬ್ಬ ಚಾಟ್ ಫ್ರೆಂಡ್ ಪರಿಚಯವಾದ. ಚಿಕ್ಕ ಹುಡುಗ. ಇಂಜಿನಿಯರಿಂಗ್ ಮಾಡುತ್ತಿದ್ದಾನೆ. ಗುಜರಾತ್ ಮೂಲದವ. ಚಾಟ್ ಮಾಡಿದ ಮಾರನೆ ದಿನವೇ ನನ್ನನ್ನು ಇಷ್ಟ ಪಟ್ಟ ಎಂದು ಕಾಣುತ್ತದೆ, ಮೊಬೈಲ್ ನಂಬರ್ ಕೊಡು ಎಂದ. ನಾನು ಇಲ್ಲ, ನಾನು ಭಾರತದಲ್ಲಿ ಅಲ್ಲ ಇರೋದು, ನೀನು ನಾನಿರುವಲ್ಲಿಗೆ ಫೋನ್ ಮಾಡಿದರೆ ನಿನಗೆ ದುಬಾರಿ ಆಗುತ್ತೆ ಎಂದು ಹೇಳಿದೆ. ಯುವಜನರಲ್ಲಿ ಇದೊಂದು ರೀತಿಯ ದೌರ್ಬಲ್ಯ. ತಮಗೆ ಯಾರದೂ ಇಷ್ಟ ಎಂದು ತೋರಿ ಬಿಟ್ಟರೆ ತಮ್ಮ ಮನೆ ಅಡ್ರೆಸ್, ಫೋನ್ ನಂಬರ್, ತನ್ನ ಅಪ್ಪ ಮಾಡೋ ಧಂಧೆ ಕುರಿತು ಎಲ್ಲಾ ಮಾಹಿತಿಯನ್ನೂ ಒಪ್ಪಿಸಿ ಬಿಡುತ್ತಾರೆ. ಎಲ್ಲವನ್ನೂ ನಂಬುವ ಮುಗ್ಧ ಗುಣ. ಈ ಗುಣವೇ ಅವರಿಗೆ ವೈರಿಯಾಗಿ ತಿರುಗೇಟು ನೀಡುತ್ತದೆ ಎಂದು ಅವರಿಗೆ ಅರಿವಾಗೋದು ತಿರುಗೇಟು ಬಿದ್ದಾಗಲೇ. ಲಾರ್ಡ್ ಚೆಸ್ಟರ್ ಫೀಲ್ಡ್ ತನ್ನ ಮಗ ಫಿಲಿಪ್ ಸ್ಟಾನ್ ಹೋಪ್ ಗೆ  ಬರೆದ ಪತ್ರದಲ್ಲಿ ಹೀಗೆ ಹೇಳುತ್ತಾನೆ, People of your age have, commonly, an unguarded frankness about them; which makes them the easy prey and bubbles of the artful  and the inexperienced: they look upon  every knave, or fool, who tells them that he is their friend, to be really so; and pay that profession of simulated friendship, with an indiscreet and unbounded confidence, always to their loss, often to their ruin.

ಇರಲಿ, ಇಲ್ಲಿನ ವಿಷಯ ಸ್ವಲ್ಪ ಬೇರೆ. ಸ್ವಲ್ಪ ದಿನಗಳಿಂದ ಚಾಟ್ ಮಾಡುತ್ತಿದ್ದ ಈತ ಆಗಾಗ are you original Indian, are you basically Indian ಎಂದು ತಲೆ ತಿನ್ನುತ್ತಿದ್ದ. ಹೌದಪ್ಪ, ನಾನು ಭಾರತೀಯನೇ, ಕಾಸಿನ ಆಸೆಗೆ ಬಿದ್ದು ಮರಳು ಗಾಡಿನಲ್ಲಿ ಬಂದು ಬಿದ್ದಿದ್ದೇನೆ ಎಂದು ಎಷ್ಟು ಸಲ ಹೇಳಿದರೂ ಈ ಪ್ರಶ್ನೆಯನ್ನು ಪುನರಾವರ್ತಿಸುತ್ತಿರುತ್ತಾನೆ. ಮರೆವಿನ ಸ್ವಭಾವ ಇರಬೇಕು ಎಂದು ಅವನು ಕೇಳಿದಾಗಲೆಲ್ಲಾ ನಾನು ಉತ್ತರಿಸುತ್ತಿದ್ದೆ. ಅವನ ಪ್ರಶ್ನೆಯಲ್ಲಿ ಯಾವುದೇ ರಾಜಕೀಯ ವಾಸನೆ ಕಾಣದ ಕಾರಣ ನಾನು ಭಾರತೀಯ ಎಂದು comfirm ಮಾಡುತ್ತಿದ್ದೆ. ಈಗ ಸ್ವಲ್ಪ ಮೊದಲು ಚಾಟ್ ನಲ್ಲಿ ಕಾಣಿಸಿಕೊಂಡು ನಾನು ನಿನಗೆ ಗುಡ್ ಬೈ ಹೇಳುತ್ತೇನೆ, ನಾಲಇಂದ ಕಾಲೇಜಿದೆ,  ನಾನು ಕಲಿಯುವ ಕಾಲೇಜಿನ ಲ್ಲಿ ಚಾಟ್ ಸೌಕರ್ಯ ಇಲ್ಲ, ಎಂದಾದರೂ ಭೇಟಿ ಯಾಗೋಣ, ನಿನ್ನ ಪರಿವಾರಕ್ಕೆ ನನ್ನ ಶುಭಾಶಯಗಳು ಎಂದ. ಚೆನ್ನಾಗಿ  ಓದಿ, ಡಿಗ್ರೀ ಪಡೆದುಕೋ, ನಿನ್ನ ಅಪ್ಪ ಅಮ್ಮನಿಗೆ ನಿರಾಶೆ ಮಾಡೋ ಯಾವ ಕೆಲಸವನ್ನೂ ಮಾಡಬೇಡ ಎಂದು ಉಪದೇಶಿಸಿದಾಗ ಆತ ಧನ್ಯವಾದ ಅರ್ಪಿಸಿ ಕೊನೆಗೆ ಅದೇ ಹಳೇ ಬಾಂಬ್ ಸಿಡಿಸಿದ….

are you basically Indian? ಒಹ್, ಮತ್ತೊಮ್ಮೆ ಕೇಳಿದನಲ್ಲಾ, ಇವನಿಗೆನಾದರೂ alzheimer’s ಅಥವಾ dementia ದಂಥ ಕಾಯಿಲೆ ತಾಗಿರಬಹುದೇ ಎಂದು ಆ ಕ್ಷಣದಲ್ಲಿ ಅನ್ನಿಸಿದರೂ, ಛೆ, ಇನ್ನೂ ಚಿಕ್ಕ ವಯಸ್ಸು, ಬಿಡ್ತು ಅನ್ನು ಎಂದು ಕೋಪ ನೆತ್ತಿಗೇರುತ್ತಿದ್ದರೂ, ಸಾವರಿಸಿಕೊಂಡು ಹೌದಪ್ಪಾ ನಾನು ಇಂಡಿಯನ್, ಎಷ್ಟು ಸಲ ಹೇಳಬೇಕು ನಿನಗೆ ಅಮಿತ್ ಎಂದಾಗ ಅವನು ಹೇಳಿದ ಕ್ಷಮಿಸಿ, ನೀವು ಭಾರತೀಯರಾದರೆ ಹಿಂದಿ ಗೊತ್ತಿರಲೇಬೇಕು ಅಲ್ಲವೇ ಎಂದ. ಹಿಂದಿ ಬರುತ್ತೆ ನನಗೆ ಎಂದಾಗ ಅವನಿಗೆ ಸಮಾಧಾನ ಆದ ಹಾಗೆ ತೋರಿತು.

 

ಆತ ಗುಜರಾತಿ. ಅವರ ಹಿಂದಿಯ ಚೆಂದ ಎಲ್ಲರಿಗೂ ತಿಳಿದದ್ದೇ. ಆದರೂ ಅವನ ಭಾವನೆ ಭಾರತೀಯನಾದರೆ ಹಿಂದಿ ಗೊತ್ತಿರಲೇಬೇಕು ಎಂಬುದು. ಇದನ್ನು ಬರೆದಿದ್ದು ಭಾರತೀಯನಾಗಲು ಹಿಂದಿ ಬೇಕೋ, ಕನ್ನಡ ಸಾಕೋ ಎನ್ನುವ ಚರ್ಚೆ ಹುಟ್ಟುಹಾಕಲು ಅಲ್ಲ. ಹೀಗೇ ಸುಮ್ಮನೆ ಅಂತಾರಲ್ಲ, ಹಾಗೆ…

ಭಾರತೀಯನಾಗಲು ಹಿಂದಿ ಗೊತ್ತಿರುವುದು prerequisite ನಿಬಂಧನೆಯೋ?