ನೀವು, ಗಂಡೋ, ಹೆಣ್ಣೋ, ತುಂಬಾ ಮುತುವರ್ಜಿಯಿಂದ ಸುಂದರ ಸೊಗಸಾದ ಉಡುಗೆ, ಒಪ್ಪುವ ಮೇಕಪ್ ತೊಟ್ಟುಕೊಂಡುದುದನ್ನು ನೋಡಿ ಯಾರಾದರೂ ಆಹ್, ತುಂಬಾ ವಾಕರಿಕೆ (sick) ಬರುವಂತೆ ಕಾಣುತ್ತಿದ್ದೀರಿ ಎಂದರೆ ಏನು ಮಾಡುತ್ತೀರಿ? ಎಲ್ಲೋ ಹುಚ್ಚಾಸ್ಪತ್ರೆ ಕಡೆ ತಿಳಿಯದೆ ಬಂದು ಬಿಟ್ಟೆ ಎಂದು ಕಾಲು ಕೀಳುತ್ತೀರೋ ಅಥವಾ ಅವನ/ಳ ನ್ನು ಕೊಲ್ಲುವಂತೆ ನೋಡುತ್ತೀರೋ? ನಿಮ್ಮ ನಿಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಏನು ಬೇಕಾದರೂ ಮಾಡಿಕೊಳ್ಳಿ ಆದರೆ ಆತ ಅಥವಾ ಆಕೆ you look sick ಅಂತ ಹೇಳಿದ್ದು ಮಾತ್ರ ಕಟು ಮಾತಲ್ಲ. ಹೀಗಂತ ನಾನಲ್ಲ ಆಂಗ್ಲ ಭಾಷೆ ಹೇಳುತ್ತದೆ.
sick ಅನ್ನೋ ಪದವನ್ನು ಗುಣವಾಚಕ ಅಥವಾ ವಿಶೇಷಣವಾಗಿ cool ಎನ್ನೋ ಪದಕ್ಕೆ ಸರಿ ಸಮಾನವಾಗಿ ಉಪಯೋಗಿಸುತ್ತಾರೆ. you look cool, or ‘cool’ ಎಂದು ಉಲಿಯುವುದನ್ನು ಕೇಳಿಯೇ ಇರುತ್ತೀರಿ ಅಲ್ಲವೇ? ಹದಿನೆಂಟನೆ ಶತಮಾನದಲ್ಲೇ ಅಮೆರಿಕೆಯಲ್ಲಿ ಬಳಕೆ ಯಲ್ಲಿದ್ದ ಈ ಉಪಯೋಗ ಬ್ರಿಟಿಶ್ ತೀರಕ್ಕೆ ಅಪ್ಪಳಿಸಿದ್ದು ತೀರಾ ಇತ್ತೀಚೆಗೆ.
ಈಗ ಇದನ್ನು ಓದಿ ಜ್ಞಾನ ಪ್ರದರ್ಶನಕ್ಕೆಂದು ಮದುವೆ ಮನೆಯಲ್ಲಿ ಭಾರೀ ಜರತಾರಿ ಸೀರೆ, ಅದಕ್ಕಿಂತ ಭಾರೀ ಮೇಕಪ್ ಮಾಡಿಕೊಂಡು ಬಂದ ಸುರಾಂಗನೆಯ ಮೇಲೆ ಈ ಪದ ಪ್ರಯೋಗ ಮಾಡಿ ರಾದ್ಧಾಂತ ಕ್ಕೆ ಎಡೆ ಮಾಡಿಕೊಡಬೇಡಿ. ಏಕೆಂದರೆ ನಮ್ಮ ಸಮಾಜ ಇನ್ನೂ “ಶೈ “ಶವಾ” ವಸ್ಥೆಯಲ್ಲೇ ಇದೆ ತುಂಬಾ ವಿಷಯಗಳಲ್ಲಿ. ಮೇಲಿನ ರೀತಿಯ ಮತ್ತು ಇನ್ನೂ ತರಾವರಿ ರೀತಿಯ ವಿಷಯ ಮತ್ತು ಕೀಟಲೆಗಳಿಗೆ ನನ್ನ ‘ಗುಬ್ಬಚ್ಚಿ’ ಗೂಡಿಗೆ ಭೇಟಿ ಕೊಡಿ.