ಮೂರನೆಯ ಶಕ್ತಿ

ಪ್ರಪಂಚದಲ್ಲಿ ಎರಡು ರೀತಿಯ ಶಕ್ತಿಗಳಿವೆ. ಒಂದು, ‘ಖಡ್ಗ’ ದ ಶಕ್ತಿ ಮತ್ತೊಂದು ‘ಲೇಖನಿ’ ಯ ಶಕ್ತಿ. ಆದರೆ ಇವೆರಡನ್ನೂ ಮೀರಿಸುವ ಶಕ್ತಿ ಶಾಲಿಯಾದ ಮೂರನೆಯ ಶಕ್ತಿಯೊಂದಿದೆ. ಅದೇ ಸ್ತ್ರೀ ಶಕ್ತಿ. ವಾಹ್, ಯಾರಪ್ಪ ಹೇಳಿದ್ದು ಇದು? ನಾರಿ ಮುನಿದರೆ ಮಾರಿ ಅಂತ ನಮ್ಮ ಪೂರ್ವಜರು ಹೆಣ್ಣಿನ ಸಹವಾಸ ಮಾಡಿ ಸೋತು ಸುಣ್ಣವಾದಾಗ ಕಂಡುಕೊಂಡಾಗಿದೆ ಈ ಹಸಿ ಸತ್ಯವನ್ನು. ದೇವರು ಸೃಷ್ಟಿಸುವಾಗ ಒಂದೇ ಸಮಯದಲ್ಲಿ, ಸರಿಸಮನಾಗಿ ಪುರುಷನೊಂದಿಗೆ ಸ್ತ್ರೀಯನ್ನೂ ಸೃಷ್ಟಿಸಿದ. ಇಬ್ಬರಿಗೂ ಅವವರದೇ ಆದ ಜವಾಬ್ದಾರಿ ಗಳನ್ನೂ ಕೊಟ್ಟು ಒಬ್ಬರನ್ನೊಬ್ಬರು ಆಸರೆಯಾಗಿ, ಒತ್ತಾಸೆಯಾಗಿ ಬದುಕುವ ಕಿವಿಮಾತನ್ನು ಹೇಳಿ ಭೂಲೋಕಕ್ಕೆ ಕಳಿಸಿದ. ಹೆಣ್ಣು ಗಂಡು ಜಾತಿಗಳಲಿ ಹೆಚ್ಚು ಕುಯುಕ್ತಿ ಪ್ರದರ್ಶಿಸುವ ಗಂಡು ಆಗಾಗ ಹೆಣ್ಣಿನ ಅಧಿಕಾರ ವ್ಯಾಪ್ತಿಯನ್ನು ಎನ್ಕ್ರೋಚ್ (encroach) ಮಾಡಿ ತನ್ನ ವರ್ಚಸ್ಸನ್ನು ಹೆಚ್ಚು ಮಾಡಿ ಕೊಂಡಾಗೆಲ್ಲಾ ಹೆಣ್ಣು ಮುನಿದು ತಿರುಗೇಟು ಕೊಡುತ್ತಾಳೆ. ಹಾಗೆ ತಿರುಗೇಟು ತಿಂದಾಗ ಕಂಡು ಕೊಂಡ ಸತ್ಯ ಈ “ಹೆಣ್ಣು ಒಲಿದರೆ ವಯ್ಯಾರಿ, ಮುನಿದರೆ ಮಾರಿ” ಎನ್ನುವ ಕಟು ಸತ್ಯ.

ಹೆಣ್ಣು ಗಂಡಿನ ಪುರಾತನ ಜಂಜಾಟದ ಪುರಾಣ ಬಿಟ್ಟು ಮೂರನೇ ಶಕ್ತಿ ಸ್ತ್ರೀ ಶಕ್ತಿ ಎಂದವರಾರು ಎನ್ನುವ ನಿಮ್ಮ ಪ್ರಶ್ನೆಗೆ ಅಡಗಿದೆ ಉತ್ತರ ನೀವು ಕನಸಿನಲ್ಲಿಯೂ ನೆನೆಸಿರದ, ಊಹಿಸಿರದ ಸ್ಥಳದಲ್ಲಿ.

ಮೂರನೇ ಶಕ್ತಿ ಸ್ತ್ರೀ ಶಕ್ತಿ ಎಂದವರು ಬೇರಾರೂ ಅಲ್ಲ, ಪಾಕಿಸ್ತಾನದ ಹುಟ್ಟಿಗೆ “ಕಾರಣೀ ‘ಭೂತ’ ” ನಾದ ಮುಹಮ್ಮದ್ ಅಲಿ ಜಿನ್ನಾ. ಇದೇ ಮೂರನೇ ಶಕ್ತಿ ತನ್ನ ದೇಶದ ಪ್ರಧಾನಿಯಾಗಿ ಮತಾಂಧರ ಆಕ್ರಮಣಕ್ಕೆ ಸಿಕ್ಕು ಸತ್ತಾಗ ಈ ಮಾತನ್ನು ಹೇಳಿದ ಜಿನ್ನಾ ತನ್ನ ಸಮಾಧಿಯಲ್ಲಿ ನೋವಿನಿಂದ ಖಂಡಿತ ಹೊರಳಾಡಿರಬಹುದು.

ಒಂದ್ನಿಮ್ಷ, ಹೋಗ್ಬೇಡಿ. ಮತ್ತೊಂದು ಶಕ್ತಿ ಇದೇರೀ. ಈ ಹೆಣ್ಣನ್ನು ಒಲಿಸಿಕೊಳ್ಳೋ ಗಲಾಟೆಯಲ್ಲಿ ಮರೆತೇ ಬಿಟ್ಟೆ. ಅದೇ ರೀ ಇಚ್ಛಾ ಶಕ್ತಿ. ಇದೊಂದಿದ್ದರೆ ಮೇಲೆ ಹೇಳಿದ ಮೂರೂ ಶಕ್ತಿಗಳೂ ನಮಗೆ ಶರಣು ಶರಣು ಎನ್ನುತ್ತವೆ.

ಈಗ ಆದುವಲ್ಲ ಎಲ್ಲಾ ಶಕ್ತಿಗಳೂ ಸೇರಿ ಚತುರ್ಶಕ್ತಿ ಗಳು? ಈಗ ಬೇರಿನ್ನೇನು ಬೇಕು ಹೇಳಿ ಈ ಜಗತ್ತನ್ನು ಜಯಿಸಲು?

ಈ “ಕೋಟ್” ನಿಮ್ಮ ಕೋಟಿನ ಕಿಸೆಗೆ ಬಿಟ್ಕಳಿ

ಮೇಲಿನ quote ಅನ್ನು ತಮ್ಮ ಅವಗಾಹನೆಗೆ ತರುತ್ತಿದ್ದೇನೆ.

ಹಿಂದೆಂದಿಗಿಂತ ಈಗ ಮಾಧ್ಯಮಗಳ ಹಾವಳಿ ಹೆಚ್ಚಿರೋದ್ರಿಂದ ‘caveat emptor’ ಎನ್ನುವ ಎಚ್ಚರಿಕೆಯೊಂದಿಗೆ ಸೇತ್ಮೆ ಮೇಲೆ ತಗುಲಿ ಹಾಕಿದ್ದೇನೆ. use it or lose it.

ಈ ಅಕ್ಷರ ಚಿತ್ರ ನೋಡಿ

ಜೇಡ ಜಾಲದಲ್ಲಿ ಸಿಕ್ಕು ಹೊರಬರಲು ಹವಣಿಸುವಾಗ ಎಡವಿದ ಚಿತ್ರವಿದು. ಮುಸ್ಲಿಂ ಮಹಿಳೆಯೊಬ್ಬರ ಬ್ಲಾಗ್ನಲ್ಲಿದ್ದ  ಮನಸ್ಸಿಗೆ ಮುದ ನೀಡುವ, ಪುಟ್ಟ ಪುಟ್ಟ ನಲ್ನುಡಿಗಳಿಂದ ತುಂಬಿದ ಚಿತ್ರವನ್ನ ತಮ್ಮೊಂದಿಗೆ ಹಂಚಿಕೊಳ್ಳುವ ಬಯಕೆಯಿಂದ ನನ್ನ ಹಳೇ ಸೇತುವೆ ಮೇಲೆ ತೂಗು ಹಾಕಿದ್ದೇನೆ. ಎಂಜಾಯ್, ವಿಲ್ ಯೂ?  

ಚಿತ್ರ ಕೃಪೆ: http://journeyofamuslimah.tumblr.com/post/7083966046/imgfave-discovered-on-imgfave-com-social

ವಾಕರಿಕೆ ತರಿಸುವಂತೆ ಕಾಣುತ್ತೀರಿ…

ನೀವು, ಗಂಡೋ, ಹೆಣ್ಣೋ, ತುಂಬಾ ಮುತುವರ್ಜಿಯಿಂದ ಸುಂದರ ಸೊಗಸಾದ ಉಡುಗೆ, ಒಪ್ಪುವ ಮೇಕಪ್ ತೊಟ್ಟುಕೊಂಡುದುದನ್ನು ನೋಡಿ ಯಾರಾದರೂ ಆಹ್, ತುಂಬಾ ವಾಕರಿಕೆ (sick) ಬರುವಂತೆ ಕಾಣುತ್ತಿದ್ದೀರಿ ಎಂದರೆ ಏನು ಮಾಡುತ್ತೀರಿ? ಎಲ್ಲೋ ಹುಚ್ಚಾಸ್ಪತ್ರೆ ಕಡೆ ತಿಳಿಯದೆ ಬಂದು ಬಿಟ್ಟೆ ಎಂದು ಕಾಲು ಕೀಳುತ್ತೀರೋ ಅಥವಾ ಅವನ/ಳ ನ್ನು ಕೊಲ್ಲುವಂತೆ ನೋಡುತ್ತೀರೋ? ನಿಮ್ಮ ನಿಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಏನು ಬೇಕಾದರೂ ಮಾಡಿಕೊಳ್ಳಿ ಆದರೆ ಆತ ಅಥವಾ ಆಕೆ you look sick ಅಂತ ಹೇಳಿದ್ದು ಮಾತ್ರ ಕಟು ಮಾತಲ್ಲ. ಹೀಗಂತ ನಾನಲ್ಲ ಆಂಗ್ಲ ಭಾಷೆ ಹೇಳುತ್ತದೆ.

sick ಅನ್ನೋ ಪದವನ್ನು ಗುಣವಾಚಕ ಅಥವಾ ವಿಶೇಷಣವಾಗಿ cool ಎನ್ನೋ ಪದಕ್ಕೆ ಸರಿ ಸಮಾನವಾಗಿ ಉಪಯೋಗಿಸುತ್ತಾರೆ. you look cool, or ‘cool’ ಎಂದು ಉಲಿಯುವುದನ್ನು ಕೇಳಿಯೇ ಇರುತ್ತೀರಿ ಅಲ್ಲವೇ? ಹದಿನೆಂಟನೆ ಶತಮಾನದಲ್ಲೇ ಅಮೆರಿಕೆಯಲ್ಲಿ ಬಳಕೆ ಯಲ್ಲಿದ್ದ ಈ ಉಪಯೋಗ ಬ್ರಿಟಿಶ್ ತೀರಕ್ಕೆ ಅಪ್ಪಳಿಸಿದ್ದು ತೀರಾ ಇತ್ತೀಚೆಗೆ.

ಈಗ ಇದನ್ನು ಓದಿ ಜ್ಞಾನ ಪ್ರದರ್ಶನಕ್ಕೆಂದು ಮದುವೆ ಮನೆಯಲ್ಲಿ ಭಾರೀ ಜರತಾರಿ ಸೀರೆ, ಅದಕ್ಕಿಂತ ಭಾರೀ ಮೇಕಪ್ ಮಾಡಿಕೊಂಡು ಬಂದ ಸುರಾಂಗನೆಯ ಮೇಲೆ ಈ ಪದ ಪ್ರಯೋಗ ಮಾಡಿ ರಾದ್ಧಾಂತ ಕ್ಕೆ ಎಡೆ ಮಾಡಿಕೊಡಬೇಡಿ. ಏಕೆಂದರೆ ನಮ್ಮ ಸಮಾಜ ಇನ್ನೂ “ಶೈ “ಶವಾ” ವಸ್ಥೆಯಲ್ಲೇ ಇದೆ ತುಂಬಾ ವಿಷಯಗಳಲ್ಲಿ. ಮೇಲಿನ ರೀತಿಯ ಮತ್ತು ಇನ್ನೂ ತರಾವರಿ ರೀತಿಯ ವಿಷಯ ಮತ್ತು ಕೀಟಲೆಗಳಿಗೆ ನನ್ನ ‘ಗುಬ್ಬಚ್ಚಿ’ ಗೂಡಿಗೆ ಭೇಟಿ ಕೊಡಿ.

http://www.twitter.com/bhadravathi

ಎಲ್ಲರನ್ನೂ ಆದರಿಸೋಣ, ಎಲ್ಲವನ್ನೂ ಗೌರವಿಸೋಣ

ಹಿಂದೂ ದೇವರುಗಳ ಬಗ್ಗೆ ಅಸಹ್ಯವಾಗಿ, ಚಿತ್ರಿಸುವ ಚಾಳಿ ಕುರಿತು ಕನ್ನಡದ ಖ್ಯಾತ ಆನ್ ಲೈನ್ ತಾಣದಲ್ಲಿ ಒಬ್ಬರು ಖೇದ, ಆಕ್ರೋಶ ವ್ಯಕ್ತಪಡಿಸಿದ್ದರು. ಕಲೆಯ ಹೆಸರಿನಲ್ಲಿ, ಸೃಜನಶೀಲತೆಯ ಹೆಸರಿನಲ್ಲಿ, ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಧಾರ್ಮಿಕ ಭಾವನೆಗಳನ್ನ ಕೆರಳಿಸುವುದು, ನಮ್ಬಿಕೆಗಳನ್ನು ಘಾಸಿಗೊಳಿಸುವುದು ತರವಲ್ಲ. ಸೃಜನಶೀಲತೆ ಅಥವಾ ಬೇರಾವುದಾದರೂ ಪ್ರತಿಭೆಯನ್ನು ಸಾಕಾರಗೊಳಿಸಲು ಹತ್ತು ಹಲವು ಮಾರ್ಗಗಳಿವೆ. ಧಾರ್ಮಿಕ ಭಾವನೆಗಳನ್ನು ಕೆರಳಿಸುವ, ಕಲೆ ಕುಚೋದ್ಯದಿಂದ ಕೂಡಿದ್ದು. ಈ ಕುಚೋದ್ಯ ಇಸ್ಲಾಮ್ ಧರ್ಮದ ಮೇಲೆ ಪ್ರಯೋಗವಾದಷ್ಟು ಬೇರಾವ ಧರ್ಮದ ಮೇಲೂ ಆಗಿರಲಾರದು. ಅಂಥ ಕಲೆಯನ್ನು ಮುಸ್ಲಿಮರು ಖಂಡಿಸಿದಾಗ ಅವರನ್ನು ಬೆಂಬಲಿಸಲು ಯಾರೂ ಇರಲಿಲ್ಲ. ಬದಲಿಗೆ ಮುಸ್ಲಿಮರಿಗೆ ಸಿಕ್ಕಿದ್ದು ಕಲೆಯ ಬಗ್ಗೆ, ಸೃಜನಶೀಲತೆಯ ಬಗ್ಗೆ, ಆಧುನಿಕ ಬದುಕಿನ ಬಗ್ಗೆ ಪಾಠ. ಚಿಕ್ಕತನವನ್ನು ಬಿಟ್ಟು ನೀವು ಬೆಳೆಯಬೇಕು ಎನ್ನುವ ಕಿವಿಮಾತು. ಈಗ ಅದೇ ಪಿಶಾಚಿ ತಮ್ಮ ಹೊಸ್ತಿಲಿಗೆ ಬಂದು ನಿಂತಾಗ ಜನ ಹೌಹಾರುತ್ತಿದ್ದಾರೆ. reactions strangely different.

೨೦೦೩ ರಲ್ಲಿ ಡ್ಯಾನಿಶ್ ವ್ಯಂಗ್ಯಚಿತ್ರಕಾರ “ಕ್ರಿಸ್ಟಫರ್ ಜೈಲರ್” ಯೇಸು ಕ್ರಿಸ್ತರ ಬಗೆಗಿನ ಕೆಲವು ಚಿತ್ರಗಳನ್ನ ಅಲ್ಲಿನ ಖ್ಯಾತ ಪತ್ರಿಕೆ Jyllands-Posten ಗೆ ಕಳಿಸಿದ. ಸಂಪಾದಕ ಈತನಿಗೆ ‘ಈ ಮೇಲ್’ ಕಳಿಸಿ ಈ ಚಿತ್ರಗಳನ್ನು ಕ್ರೈಸ್ತರು ನೋಡಿ ಆನಂದಿಸಲಿಕ್ಕಿಲ್ಲ ಮತ್ತು ಕ್ರೈಸ್ತರ ಭಾವನೆಗಳಿಗೆ ನೋವುಂಟು ಮಾಡುವುದರಿಂದ ಅದನ್ನು ಪ್ರಕಟಿಸಲು ಸಾಧ್ಯವಿಲ್ಲ ಎಂದು ವಿವರಿಸಿದ. ಇದೇ ಪತ್ರಿಕೆ ೨೦೦೫ ರಲ್ಲಿ ಪ್ರವಾದಿ ಮುಹಮ್ಮದರ ಕಾರ್ಟೂನ್ ಗಳನ್ನು ಪ್ರದರ್ಶಿಸಿ ತನ್ನ ಕೊಳಕು ‘ಡಬಲ್ ಸ್ಟ್ಯಾಂಡರ್ಡ್’ ಅನ್ನು ಸೊಗಸಾಗಿ ಪ್ರದರ್ಶಿಸಿತು.

ಧಾರ್ಮಿಕ ಕುರುಹುಗಳನ್ನು ನಮಗೆ ಬೇಕಾದ ಸ್ಥಳಗಳಲ್ಲಿ, ಬೇಕಾದ ರೀತಿಯಲ್ಲಿ ಬಳಸಿ ಕೊಂಡಾಗ ಅದರ ಬಗ್ಗೆ ಗೌರವ, ಭಕ್ತಿ ತಂತಾನೇ ಕಡಿಮೆಯಾಗುತ್ತದೆ. ಧರ್ಮ ವೈಯಕ್ತಿಕವಾಗಿರಬೇಕು. ಧಾರ್ಮಿಕ ಭಾವನೆ ಮನಸ್ಸಿನಲ್ಲಿ ನೆಲೆಯೂರಿರಬೇಕು. we should not wear our faiths on our sleeves. ಗಣೇಶನ ಮೂರ್ತಿಗಳನ್ನು ತೋಚಿದ ರೀತಿಯಲ್ಲಿ, ಬ್ಯಾಟ್ ಹಿಡಿದು ಕೊಂಡೂ ಮತ್ಯಾವುದಾದರೂ ರೀತಿಯಲ್ಲಿ ರೂಪಿಸಿದಾಗ ನಾವು ನೀಡುತ್ತಿರುವ ಸಂದೇಶವಾದರೂ ಏನು? ಈ ರೀತಿ ದೇವರ ಚಿತ್ರಗಳನ್ನು, ಇನ್ನಿತರ ಧಾರ್ಮಿಕ ಸಂಕೇತಗಳನ್ನು ಸಾರಾಸಗಟಾಗಿ ಕಲೆಯ ಹೆಸರಿನಲ್ಲಿ ದುರುಪಯೋಗ ಮಾಡಿಕೊಂಡಾಗ ಯಾವುದು ಸರಿ ಯಾವುದು ತಪ್ಪು ಎನ್ನುವ ವಿಂಗಡಿಸುವ ರೇಖೆ ಮಸುಕಾಗಿ ಬಿಡುತ್ತದೆ. ಆಗ ಸಮಸ್ಯೆಗಳು ಎದುರಾಗಲು ತೊಡಗುತ್ತವೆ.

ಮುಸ್ಲಿಮರಲ್ಲಿ ಯಾವುದೇ ಕೆಲಸ ಆರಂಭಿಸುವಾಗಲೂ ಕರುಣಾಮಯನೂ, ದಯಾಮಯನೂ ಆದ ಅಲ್ಲಾಹನ ನಾಮದಿಂದ (ಬಿಸ್ಮಿಲ್ಲಾ ಅರ್ರಹ್ಮಾನ್, ಅರ್ರಹೀಂ) ಎನ್ನುವ ಕುರಾನ್ ಸೂಕ್ತ ಉಪಯೋಗಿಸುತ್ತಾರೆ. ಈ ಸೂಕ್ತವನ್ನು ಕೆಲವರು ಪತ್ರ ಬರೆಯುವಾಗಲೂ ಇನ್ನಿತರ ಸ್ಥಳಗಳಲ್ಲೂ ಬಳಸುವುದನ್ನು ನೋಡಿದ ಧರ್ಮ ಗುರುಗಳು ಆಕ್ಷೇಪ ಮಾಡಿ ನಾವು ಬರೆದ ಕಾಗದ ಅದರ ಉಪಯೋಗ ಮುಗಿದ ನಂತರ ತಿಪ್ಪೆ ಸೇರುವುದರಿಂದ ಅಂಥ ಸ್ಥಳಗಳಲ್ಲಿ ಈ ಸೂಕ್ತ ಉಪಯೋಗಿಸಕೂಡದು ಎಂದು ನಿರ್ದೇಶಿಸಿದ್ದರು. ಹಾಗೆಯೇ ಕೊರಳಿಗೆ ಹಾಕಿ ಕೊಳ್ಳುವ ಸರದ ಲಾಕೆಟ್ ಗಳ ಮೇಲೆ ‘ಅಲ್ಲಾಹ್’ ಎಂದು ಬರೆಯುವುದನ್ನು ಬಹಳ ಜನ ಒಪ್ಪುವುದಿಲ್ಲ. ಏಕೆಂದರೆ ನಮ್ಮೊಂದಿಗೆ ಸರವೂ ಶೌಚ ಗೃಹ ಪ್ರವೇಶ ಮಾಡುವುದರಿಂದ ಅಲ್ಲಾಹನ ಹೆಸರಿನ ಪಾವಿತ್ರ್ಯಕ್ಕೆ ಧಕ್ಕೆ ಆಗಬಹುದು ಎಂದು ಬಗೆದು. ಇದು ಧಾರ್ಮಿಕ ಕುರುಹುಗಳನ್ನು ಕಾಪಾಡುವ ರೀತಿ.

ನಮ್ಮ ಧರ್ಮ ವೈಯಕ್ತಿಕ. ನಮ್ಮ ವೈಯಕ್ತಿಕ ವಿಷಯಗಳಲ್ಲಿ ಕೈ ಹಾಕಲು ಯಾರಿಗೂ ನಾವು ಅನುಮತಿಸುವುದಿಲ್ಲ. ಧರ್ಮಕ್ಕೂ ಅದೇ ನಿಲುವು ಅನ್ವಯವಾಗಲಿ. ಯಾರೂ ಯಾರ ಭಾವನೆಗಳನ್ನೂ ಘಾಸಿಗೊಳಿಸಲು ಹೋಗಬಾರದು. ಎಲ್ಲ ಧರ್ಮಗಳನ್ನೂ ಗೌರವಿಸುತ್ತಾ, ಆದರಿಸುತ್ತಾ ನಡೆದರೆ ಯಾವ ರೀತಿಯ ಸಮಸ್ಯೆಗಳೂ ಎದುರಾಗವು.

ಜಗವ ನಿಯಂತ್ರಿಸುವ ಕೋಣೆ

ಮೇ ತಿಂಗಳ ಮೊದಲ ವಾರದಲ್ಲಿ ವಿಶ್ವದ ಕುಖ್ಯಾತ ಭಯೋತ್ಪಾದಕ ಎಂದು ಕರೆಯಲ್ಪಡುವ ಬಿನ್ ಲಾದೆನ್ ನನ್ನು ಅಮೇರಿಕಾ ಪಾಕಿಸ್ತಾನದ ಸೇನಾ ನಗರ ( garrison town ) ಅಬೊಟ್ಟಬಾದ್ ನಲ್ಲಿ ವಧಿಸಿ ಆತನ ಶವವನ್ನು ಅರಬ್ಬೀ ಸಮುದ್ರಕ್ಕೆ ಎಸೆದು ತನ್ನ ತಂಟೆಗೆ ಬಂದವರು ಪ್ರಪಂಚದ ಯಾವುದೇ ಮೂಲೆಯಲ್ಲಿ ಅಡಗಿದ್ದರೂ ಬಲಿ ಹಾಕುವೆವು ಎನ್ನುವ ಸ್ಪಷ್ಟ ಸಂದೇಶವನ್ನು ವಿಶ್ವಕ್ಕೆ ರವಾನಿಸಿತು. ಈ ವಧೆಯೊಂದಿಗೆ ಅಮೆರಿಕನ್ನರು ನಿರಾಳ ಭಾವ (sense of closure) ಅನುಭವಿಸಿ ಖುಷಿ ಪಟ್ಟರು. ಬಿನ್ ಲಾದೆನ್ ನನ್ನು ಬಲಿ ಹಾಕುವ ಕಾರ್ಯಾಚರಣೆಯ ಉಸ್ತುವಾರಿಯನ್ನು ಅಲ್ಲಿನ ಅಧ್ಯಕ್ಷ ಬ್ಯಾರಕ್ ಒಬಾಮಾ ಖುದ್ದು ವಹಿಸಿದ್ದರು ಅವರೇ ಖುದ್ದಾಗಿ ಹೇಳಿದ್ದರು. ಅವರ ವೈಯಕ್ತಿಕ ನಿರ್ದೇಶನದ ಮೇಲೆ ನಾವಿಕ ಸೇನೆಯ ವಿಶೇಷ ಪಡೆಯ ‘ಸೀಲ್-೬’ ಕಮಾಂಡೋಗಳು ಈ ಸಾಹಸೀ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಪೂರ್ತಿ ಗೊಳಿಸಿದರು. ನೀರವ ರಾತ್ರಿಯಲ್ಲಿ ಸುಮಾರು ನಾಲ್ಕು ಘಂಟೆಗಳ ಕಾಲ ನಡೆದ ಕಾರ್ಯಾಚರಣೆ ಯನ್ನು ಅಮೆರಿಕೆಯ ಅಧ್ಯಕ್ಷ, ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಮತ್ತು ಮೂರ್ನಾಲ್ಕು ಇತರೆ ಹಿರಿಯ ಅಧಿಕಾರಿಗಳು ಶ್ವೇತ ಭವನದ situation room ( ಪರಿಸ್ಥಿತಿ ಕೋಣೆ? ) ನಿಂದ ವೀಕ್ಷಿಸಿದರು. ಈ ಕೋಣೆಯನ್ನು ಅತ್ಯಂತ ಗಂಭೀರ, ದೇಶದ ಭದ್ರತಾ ಸಂದರ್ಭಗಳಲ್ಲಿ ಉಪಯೋಗಿಸುತ್ತಾರೆ. ೧೯೬೧ ರಲ್ಲಿ ಜಾನ್ ಎಫ್ ಕೆನಡಿ ಕಾಲದಲ್ಲಿ ಈ ಕೋಣೆಯನ್ನು ನಿರ್ಮಿಸಲಾಯಿತು.        

ಈ ಲೇಖನದ ಉದ್ದೇಶ ಏನೆಂದರೆ, ಮೇಲಿನ ಚಿತ್ರದಲ್ಲಿ ಮಹನೀಯರುಗಳು ಗುಂಪುಗೂಡಿ ಅತಿ ಆಸಕ್ತಿ, ಗಾಭರಿ ಕಾತುರತೆಯಿಂದ ವೀಕ್ಷಿಸುತ್ತಿದ್ದಾರೆ ಬಿನ್ ಲಾದೆನ್ ವಧಾ ಪ್ರಹಸನವನ್ನು. ನಮಗೆ ಅಮೆರಿಕೆಯ ಅಧ್ಯಕ್ಷರ ಮುಖ ಪರಿಚಯ ಇಲ್ಲ ಎಂದು ಊಹಿಸಿಕೊಳ್ಳಿ. ನಾವು ಈ ಚಿತ್ರದಲ್ಲಿ ಇರುವ ವ್ಯಕ್ತಿಗಳಲ್ಲಿ ಯಾರಿರಬಹುದು ಅಮೆರಿಕೆಯ ಅಧ್ಯಕ್ಷ ಎಂದು ಊಹಿಸಲು ಸಾಧ್ಯವೇ? ನಾನು ಅಮೆರಿಕೆಯ ಅಧ್ಯಕ್ಷ, ಅಮೆರಿಕೆಯ ಸುಪ್ರೀಂ ಕಮಾಂಡರ್ ಎಂದು ಈ ಕುಳಿತವರಲ್ಲಿ, ನಿಂತವರಲ್ಲಿ ಯಾರಾದರೂ ಫೋಸು ಕೊಡುತ್ತಿರುವವರೇ, ಹಮ್ಮುಬಿಮ್ಮು ಪ್ರದರ್ಶಿಸುತ್ತಿರುವವರೇ? ಊಹಿಸಲು ಸಾಧ್ಯವಿಲ್ಲ, ಅಲ್ಲವೇ? ಮೂಲೆಯಲ್ಲಿ ಕಪ್ಪು ಜಾಕೆಟ್ ತೊಟ್ಟು, ಮುದುಡಿ ಕೂತು,  ಕಾತುರ, ಗಾಭರಿಯಿಂದ ವೀಕ್ಷಿಸುತ್ತಿರುವ ವ್ಯಕ್ತಿಯೇ ಒಬಾಮಾ.

ದೇಶದ ಭದ್ರತೆಯ ವಿಷಯ ಬಂದಾಗ ತಿರುಕನಿಂದ ಹಿಡಿದು ಆಳುವವನ ವರೆಗೂ ಎಲ್ಲರದೂ ಒಂದೇ ಧೋರಣೆ, ಒಂದೇ ಗುರಿ. ಇಲ್ಲಿ ಅಂತಸ್ತಿನ, ವರ್ಚಸ್ಸಿನ, ಬೇರಾವುದೇ ಕೃತಕ ಪ್ರದರ್ಶನವಾಗಲೀ ಇರುವುದಿಲ್ಲ. ಇಡೀ ದೇಶ ಒಂದಾಗಿ ಬಿಡುತ್ತದೆ. ಓರ್ವ ವ್ಯಕ್ತಿಯಾಗಿ, ಹೋರಾಡುತ್ತದೆ. ಈ ಚಿತ್ರದಲ್ಲಿ ಭಾರತೀಯರಾದ ನಮಗೆ ಪಾಠ ವಿದೆಯೇ?

ಒಂದು ವಿಷ ವೃಕ್ಷ

ಒಂದು ವಿಷ ವೃಕ್ಷ

ನನ್ನ ಮಿತ್ರನೊಂದಿಗೆ ಮುನಿಸಿಕೊಂಡಿದ್ದೆ

ನನ್ನ ಮುನಿಸಿನ ಕಾರಣ ಅವನಿಗೆ ತಿಳಿಸಿದೆ

ನನ್ನ ಕೋಪ ತಣಿಯಿತು ಕೂಡಲೇ.

ನನ್ನ ಶತ್ರುವಿನೊಂದಿಗೆ ಕೋಪಗೊಂಡೆ

ಆದರೆ ಕೋಪದ ಕಾರಣ ನಾನವನಿಗೆ ಹೇಳಲಿಲ್ಲ,

ನನ್ನ ಕೋಪ ಹೆಚ್ಚುತ್ತಾ ಹೋಯಿತು.

ನಾನದನ್ನು ಭಯದೊಂದಿಗೆ ಪೋಷಿಸಿದೆ

ಹಗಲೂ ರಾತ್ರಿ

ನನ್ನ ಕಣ್ಣೀರೂಡಿಸಿ  

ಸೂರ್ಯನ ರಷ್ಮಿಯಂಥ ಮುಗುಳ್ನಗುವಿನೊಂದಿಗೆ  soft decetful vile

ಸೌಮ್ಯವಾದ ಕಪಟ ತಂತ್ರದೊಂದಿಗೆ.

ಅದು ದಿನ-ರಾತ್ರಿ ಬೆಳೆಯುತ್ತಾ ಹೋಯಿತು

ಬೆಳಗುವ ಸೇಬಿನ ಹಣ್ಣಾಗಿ ಫಲಿಸುವ ತನಕ  

ನನ್ನ ಶತ್ರು ಅದರ ಕಾಂತಿಗೆ ಮರುಳಾದ

ಹಣ್ಣು ನನ್ನದೆಂದು ಅವನಿಗೆ ತಿಳಿದಿತ್ತು.

ನನ್ನ ತೋಟದೊಳಕ್ಕೆ ಬಂದು

ಕದ್ದನು ಹಣ್ಣನ್ನು ಕಗ್ಗತ್ತಲ ಮರೆಯಲ್ಲಿ,  

ಉಲ್ಲಾಸದ ಮುಂಜಾನೆಯಲ್ಲಿ ನಾನು ನೋಡಿದಾಗ

ಅಂಗಾತ ಬಿದ್ದಿದ್ದ ಅವನು ಮರದ ಕೆಳಗೆ.

ಕವಿ ವಿಲ್ಲಿಯಂ ಬ್ಲೇಕ್ ಅವರ “a poison tree” ಕವನದ ಭಾವಾನುವಾದ

ಅತ್ತೆಗೊಂದು ಕಾಲ, ಸೊಸೆಗೊಂದು ಕಾಲ

ಭಾರತ ವಿಂಡೀಸ್ ನಡುವಿನ ಮೊದಲ ಟೆಸ್ಟ್ ಪಂದ್ಯ ಕೆಟ್ಟ ಅಂಪೈರಿಂಗ್ ಕಾರಣ ತಡವಾಗಿ ಮುಗಿಯಿತು. ಇಲ್ಲದಿದ್ದರೆ ಸ್ವಲ್ಪ ಬೇಗನೆ ಪಂದ್ಯ  ಗೆದ್ದು ವಿಶ್ರಾಂತಿ ಪಡೆಯ ಬಹುದಿತ್ತು ಎಂದು ವಿಜಯದ ನಂತರ  ನಮ್ಮ ತಂಡದ ನಾಯಕ ಧೋನಿ ದೂರಿದರು. ಕಾಲ ಹೇಗೆ ಬದಲಾಯಿತು ನೋಡಿ.  

೧೯೮೩ ರಲ್ಲಿ ವೆಸ್ಟ್ ವಿಂಡೀಸ ನ್ನು ಸೋಲಿಸಿ ವಿಶ್ವ ಕಪ್ ಗೆದ್ದ ಭಾರತ ವಿಶ್ವವನ್ನೇ ಬೆರಗು ಗೊಳಿಸಿತ್ತು. ಆಗಿನ ಕಾಲದ ಪಂಡಿತರ ಪ್ರಕಾರ ಬಲಿಷ್ಠ ವಿಂಡೀಸ್ ವಿರುದ್ಧದ ಭಾರತದ ಗೆಲುವು ಒಂದು fluke ಆಗಿತ್ತು. ಆದರೆ ಭಾರತ ಬರೀ ಫೈನಲ್ ನಲ್ಲಿ ಅಲ್ಲ, prelim ರೌಂಡ್ಸ್ ನಲ್ಲೂ ವಿಂಡೀಸನ್ನು ಮಣಿಸಿತ್ತು. ಆದರೂ ಟೀಕಾಕಾರರಿಗೆ ಭಾರತದ ಶಕ್ತಿಯ ಬಗ್ಗೆ ಅನುಮಾನವೇ ಇತ್ತು. ಈ ಅನುಮಾನ ನಿಜವಾಗಿಸಲೆಂಬಂತೆ ವೆಸ್ಟ್ ಇಂಡೀಸ್ ಭಾರತ ಪ್ರವಾಸ ಆರಂಭಿಸಿತು. ಆರು ಟೆಸ್ಟು, ಐದು ಏಕ ದಿನ ಪಂದ್ಯಗಳ ಸರಣಿಯಲ್ಲಿ  ಭಾರತವನ್ನು ಮೂರು ಟೆಸ್ಟು ಗಳಲ್ಲೂ, ಎಲ್ಲಾ ಏಕ ದಿನ ಪಂದ್ಯಗಳಲ್ಲೂ ಸೋಲಿಸಿ ವಿಶ್ವ ಕಪ್ ಸೋತಿದ್ದು ನಮ್ಮ ತಿಮಿರಿನಿಂದ ಅಲ್ಲದೆ ಭಾರತದ ಕ್ರೀಡಾ ಕೌಶಲ್ಯದಿಂದ ಅಲ್ಲ ಎನ್ನುವುದನ್ನು ವಿಂಡೀಸ್ ವಿಶ್ವಕ್ಕೆ ತೋರಿಸಿ ಕೊಟ್ಟಿತು.  

ಆಗ ಪ್ರವಾಸಗೈದಿದ್ದ ವಿಂಡೀಸ್ ತಂಡದಲ್ಲಿ ಘಟಾನುಘಟಿ ಗಳೇ ತುಂಬಿದ್ದರು. ವಿವಿಯನ್ ರಿಚರ್ಡ್ಸ್, ಕ್ಲೈವ್ ಲಾಯ್ಡ್, ಮಾಲ್ಕಂ ಮಾರ್ಷಲ್ ಹೀಗೆ ಅತಿರಥ ಮಹಾರಥರ ಧಾಳಿಗೆ ನಮ್ಮ ತಂಡ mediocre ತಂಡದಂತೆ ತೋರಿತು. ಮಾಲ್ಕಂ ಮಾರ್ಷಲ್ ಅಂತೂ ತನ್ನ ಮಾರಕ ಅತಿ ವೇಗದ ಬೌಲಿಂಗ್ ಧಾಳಿಯಿಂದ ನಮ್ಮ ಬ್ಯಾಟ್ಸ್ಮನ್ ಗಳಿಗೆ ಸಿಂಹ ಸ್ವಪ್ನವಾಗಿದ್ದ. ಈಗ ನೋಡಿ ಅವರ ಪಾಡನ್ನು. ಯಾವುದೇ ಮೊತ್ತದ ರನ್ನು ಚೇಸ್ ಮಾಡಲೂ ಪಡುವ ಪಾಡನ್ನು.    

ಯಥೇಚ್ಛ ಹಣ, ಮತ್ತು ಹಣದ ಅಭಾವ ಯಾವ ರೀತಿ ಒಂದು ಕ್ರೀಡೆಯನ್ನು ರೂಪಿಸಬಲ್ಲುದು ಮತ್ತು ನಿಸ್ತೇಜವಾಗಿಸಬಹುದು ಎನ್ನುವುದಕ್ಕೆ ಭಾರತ ವಿಂಡೀಸ್ ಕ್ರಿಕೆಟ್ ಕ್ರೀಡೆಯೇ ಸಾಕ್ಷಿ. ಕ್ರಿಕೆಟ್ ನಲ್ಲಿ ಹಣವಿದೆ ಮತ್ತು ಶ್ರೀಮಂತ ಪ್ರಾಯೋಜಕರ ಬೆಂಬಲ ಅದಕ್ಕಿದೆ ಎಂದರಿತ ಪೋಷಕರು ತಮ್ಮ ಮಕ್ಕಳು ಈ ಕ್ರೀಡೆಯನ್ನು ಪ್ರವೇಶಿಸಲು ಉತ್ತೇಜಿಸಿದರು. ಪರಿಣಾಮ ಹೊಸ ಪ್ರತಿಭೆಗಳು ದಂಡು ದಂಡಾಗಿ ಆಗಮಿಸಿದವು. ಈಗ ಭಾರತ ಕ್ರಿಕೆಟ್ ಸುದೃಢ. ಬಲಿಷ್ಠ. ಆದರೆ ಈ ಭಾಗ್ಯದ ಲಕ್ಷ್ಮಿ ವಿಂಡೀಸರಿಗೆ ಒಲಿಯದೆ ಹೋದಳು. ಪ್ರಾಯೋಜಕರ ಕೊರತೆ ಮಾತ್ರವಲ್ಲ ಅಲ್ಲಿನ ಕ್ರಿಕೆಟ್ ಮಂಡಳಿ ಕೊಡುವ ಹಣವೂ ಏನೇನೂ ಸಾಲದಾದಾಗ ಒಂದು ಕಾಲದಲ್ಲಿ fearsome  ಆಗಿದ್ದ ವಿಂಡೀಸ್ ಕ್ರಿಕೆಟ್ ನೆಲ ಕಚ್ಚಿತು.

ವಿಂಡೀಸ್ ತನ್ನ ಗತ ವೈಭವವನ್ನು ಯಾವಾಗ ಮರಳಿ ಪಡೆದೀತೋ ಕಾದು ನೋಡಬೇಕು.    

ವೇದ ಸುಳ್ಳಾದರೂ…

ವೇದ ಸುಳ್ಳಾದರೂ, ಗಾದೆ ಸುಳ್ಳಾಗದು. ಈ ಕೆಳಗಿನ ಗಾದೆ ಸ್ವಲ್ಪ ವಿಚಿತ್ರವಾಗಿದೆ, tread carefully.

“A man who likes a lot of salt in his food is very much in love with his wife.” – Albanian saying.  

ಮೇಲಿನದು ಅಲ್ಬೇನಿಯಾ ದೇಶದ ಗಾದೆ. ತನ್ನ ಆಹಾರದಲ್ಲಿ ಹೆಚ್ಚು ಉಪ್ಪನ್ನು ಬಯಸುವವನು ತನ್ನ ಹೆಂಡತಿಯಲ್ಲಿ ಹೆಚ್ಚು ಅನುರಕ್ತನಾಗಿರುವನು.

ತಾಯಿಗಿಂತ ಬಂಧುವಿಲ್ಲ ಉಪ್ಪಿಗಿಂತ ರುಚಿಯಿಲ್ಲ ಎನ್ನುವ ಗಾದೆ ನಮ್ಮಲ್ಲಿ ಪ್ರಚಲಿತವಿದ್ದರೆ ಅಲ್ಬೇನಿಯಾದ ಗಾದೆ ಅರ್ಧಾಂಗಿನಿಯ ಕಡೆ ವಾಲುವಂಥದ್ದು. ಅದರಲ್ಲೇನು ತಪ್ಪು ತಕ್ಕಳಿ, ನಮಗೆ ‘ಅಮ್ಮ’ ಪ್ರಯಾರಿಟಿ, ಅವರಿಗೆ ‘ಅಮ್ಮಾವ್ರು’ ಪ್ರಯಾರಿಟಿ ಅಷ್ಟೇ.

ವಿ. ಸೂ:  ಮಡದಿಯನ್ನು ಇಂಪ್ರೆಸ್ ಮಾಡಲೆಂದು ಉಪ್ಪು ಜಾಸ್ತಿ ಹಾಕಿಸಿಕೊಂಡು ಬಿ. ಪಿ. ಯನ್ನು ತಾರಕಕ್ಕೇರಿಸಿ ಕೊಂಡೆ ಎಂದು ಮಾತ್ರ ನನ್ನನ್ನು ಹಳಿಯಬೇಡಿ.

“ಪಂಚ ಕನ್ಯೆ” ಯರ ವಿದಾಯ

“ಪಂಚ ಕನ್ಯೆ” ಯರ ವಿದಾಯ ಪರಂಪರೆ ಮುಕ್ತಾಯ, ನೇಪಾಳದಲ್ಲಿ.  ಪಂಚ ಕನ್ಯೆಯರು ಎಂದ ಕೂಡಲೇ ಆರತಿ, ಭಾರತಿ, ಮಂಜುಳ, ಕಲ್ಪನ, ಚಂದ್ರಕಲಾ…. ಇವರೇ ನಮ್ಮ ಕನ್ನಡ ನಾಡಿನ ಪಂಚ ಕನ್ನೆಯರೂ……ಎನ್ನೋ ಹಾಡು ನೆನಪಿಗೆ ಬಂದಿರಬೇಕು ಆಲ್ವಾ? ಬಿಟ್ಹಾಕಿ, ಇದು ಆ ಗತಕಾಲದ ನಮ್ಮೆಲ್ಲರ ಮನ ರಂಜಿಸಿದ ಕನ್ನೆಯರ ಕಥೆಯಲ್ಲ, ನಮ್ಮ ದೇಶದ ಉತ್ತರದ ಗಡಿಯಾಚೆಗಿನ ನೇಪಾಳದ ಕನ್ನೆಯರ ವ್ಯಥೆಯ ಕಥೆಯಿದು.

ನೇಪಾಳದ ರಾಷ್ಟ್ರ ನಾಯಕ ಹೊರದೇಶದ ಪ್ರವಾಸ ಹೊರಟಾಗ ಅವರನ್ನು ಬೀಳ್ಕೊಡಲು ಐದು ಕನ್ಯೆಯರನ್ನು ಸಿದ್ಧ ಪಡಿಸಲಾಗುತ್ತಿತ್ತಂತೆ. ದುರ್ಗ, ಸರಸ್ವತಿ, ಲಕ್ಷ್ಮಿ, ರಾಧ, ಅನ್ನಪೂರ್ಣ ಎನ್ನುವ ಯಶಸ್ಸನ್ನು ತರುವ ಈ ದೇವತೆಗಳನ್ನು ಪ್ರತಿನಿಧಿಸುವ ಪಂಚ ಕನ್ಯೆಯರು ಪ್ರವಾಸ ಹೋಗುವ ನಾಯಕನಿಗೆ ಶುಭವಾಗಲು ಮತ್ತು ಸಂಪತ್ತು ಸಿಗಲೆಂದು ಹಾರೈಸಿ ಈ ವ್ಯವಸ್ಥೆ ಮಾಡುತ್ತಿದ್ದರಂತೆ. ಶಾಲೆಗೆ ಹೋಗುವ ಈ ಹೆಣ್ಣು ಮಕ್ಕಳು ಸುಡು ಬಿಸಿಲಿನಲ್ಲಿ ಬೆವರು ಸುರಿಸುತ್ತಾ ನಿಂತು ಅವರಿಗೆ ಶುಭ ಕೋರುವುದನ್ನು ಕಂಡು ಮರುಗಿದ ಅಧ್ಯಕ್ಷರು ಈ ಪರಂಪರೆಗೆ ಮಂಗಳ ಹಾಡಲು ತೀರ್ಮಾನಿಸಿದರಂತೆ.

ಶತಮಾನಗಳಿಂದ ನಡೆದು ಕೊಂಡು ಬರುತ್ತಿದ್ದ ಈ five virgin farewell ಸಮಾರೋಹದ ಪರಂಪರೆಗೆ ನೇಪಾಳದ ಅಧ್ಯಕ್ಷರು ಕೊನೆಗೂ good bye, good riddance ಹೇಳಿ ಸುಡು ಬಿಸಿಲಿನ ಬೇಗೆಯಿಂದ ಕನ್ನೆಯರ ಬಿಡುಗಡೆಗೆ ನಾಂದಿ ಹಾಡಿದರು.