ಪ್ರಳಯವಂತೆ, ಇದೇ ತಿಂಗಳಂತೆ, ಸತ್ಯವಾಗ್ಲೂ ಅಂತೆ

ಪ್ರಳಯದ ಬಗ್ಗೆ ಆಗಾಗ ನಾವು ಓದುತ್ತಲೇ ಇರುತ್ತೇವೆ, ಓದಿ ಗಾಭರಿಯಾಗಿ ಸಿಕ್ಕ ಸಿಕ್ಕವರನ್ನು ವಿಚಾರಿಸುತ್ತೇವೆ. ವರ್ಷಗಳ ಹಿಂದೆ ದಕ್ಷಿಣ ಕನ್ನಡ ಮೂಲದ ಖ್ಯಾತ ವಾರಪತ್ರಿಕೆ ಪ್ರಳಯದ ಬಗ್ಗೆ ಒಂದು ಲೇಖನ ಹಾಕಿ ಅದು ಎಷ್ಟು ಜನಪ್ರಿಯ ಆಯಿತು ಎಂದರೆ ಆ ಲೇಖನದ ಪುಸ್ತಿಕೆ ಸಹ ಮಾರಾಟಕ್ಕೆ ಬಂದು ಲಕ್ಷ ಗಟ್ಟಲೆ ಜನ ಕೊಂಡು ಓದಿದರು. ಇಂಥ ಜನರಲ್ಲಿ, ಗಾಭರಿ, ಭಯ, ಹುಟ್ಟಿಸಿ ಹಣ ಮಾಡಿಕೊಳ್ಳುವ ದಂಧೆ ಬಹಳ ಹಳತು. ಈಗ ಅಮೆರಿಕೆಯ ಕ್ಯಾಲಿಫೋರ್ನಿಯಾದ ಧರ್ಮ ಬೋಧಕ ಹೆರಾಲ್ಡ್ ಕ್ಯಾಂಪಿಂಗ್  ಗುಲ್ಲೆಬ್ಬಿಸಿದ್ದಾನೆ ಇದೇ ತಿಂಗಳು ೨೧ ಕ್ಕೆ ಅದೂ ಆರು ಘಂಟೆಗೆ ಸರಿಯಾಗಿ ಪ್ರಳಯವಾಗಲಿದೆ ಅಂತ. ಪವಿತ್ರ ಬೈಬಲ್ ಗ್ರಂಥವನ್ನು ಅವನೂ ಅವನ ಮಿತ್ರರೂ decipher ಮಾಡಿದ್ದಾರಂತೆ. 89 ವರ್ಷ ಪ್ರಾಯದ ಈ ವ್ಯಕ್ತಿ ೭೦ ವರ್ಷಗಳ ಅವಿರತ ಬೈಬಲ್ ಅಧ್ಯಯನದಿಂದ ಪ್ರಳಯದ ಬಗ್ಗೆ ಪವಿತ್ರ ಗ್ರಂಥದಲ್ಲಿರುವುದನ್ನು ಜಗತ್ತಿಗೆ ಸಾರುತ್ತಿದ್ದಾನೆ. ಅದರಲ್ಲಿ ಪ್ರಳಯದ ವಿಷಯ ಸಿಕ್ಕಿತಂತೆ. ದೇವ ವಾಣಿ ಇರುವುದು ಮನುಷ್ಯರಿಗೆ ದಾರಿ ದೀಪವಾಗಿ. ಅದರ ಸಂದೇಶ ನೇರವಾದ ಭಾಷೆಯಲ್ಲಿ ಇರಬೇಕು.  ಯಾವುದೇ ಒಂದು ಉಪಕರಣ ಕೊಂಡಾಗ ಅದರೊಂದಿಗೆ ಬರುವ catalogue  ರೀತಿ. ಅದನ್ನು decipher ಮಾಡೋ ಅವಶ್ಯಕತೆ ಬರಕೂಡದು. ಏಕೆಂದರೆ decipher ಮನುಷ್ಯನಿಂದ ಮನುಷ್ಯನಿಗೆ ಬದಲಾಗುತ್ತಾ ಹೋಗುತ್ತದೆ. ಅದರೊಂದಿಗೆ decipher ಮಾಡಲ್ಪಟ್ಟ ಸಂದೇಶವೂ ಕೂಡಾ. ಅವರವರ ಬುದ್ಧಿ ಮತ್ತೆಗೆ ಅನುಸಾರ decipher ಕೆಲಸ ನಡೆಯುತ್ತದೆ.

ಹಿಂದೂ ಶಾಸ್ತ್ರಗಳಲ್ಲಿ ಪ್ರಳಯದ ಬಗ್ಗೆ ಉಲ್ಲೇಖ ಇರುವುದನ್ನು ಕಾಣಬಹುದು. ಕಲಿಯುಗದ ಅವಸಾನದಲ್ಲಿ ಪ್ರಳಯ ಆಗುವ ಸಾಧ್ಯತೆ ಇದೆ ಎನ್ನುತ್ತಾರೆ. ಅದೇ ರೀತಿ “ಏಕದೇವೋಪಾಸನೆ” ಗೆ ಒತ್ತು ನೀಡುವ ಅಬ್ರಾಹಾಮಿಕ್ ಧರ್ಮಗಳಾದ ಯಹೂದ್ಯ, ಕ್ರೈಸ್ತ ಮತ್ತು ಇಸ್ಲಾಂ ಧರ್ಮಗಳಲ್ಲೂ ಇದರ ಪ್ರಸ್ತಾಪ ಇದೆ. ಇಸ್ಲಾಂ ಧರ್ಮದಲ್ಲಿ ಪ್ರಳಯವನ್ನು “ಯೌಮ್ ಅಲ್ ಕಿಯಾಮ” (ಅಂತ್ಯ ದಿನ) ಎಂದು ಕರೆಯುತ್ತಾರೆ.

ಇಸ್ಲಾಮಿನಲ್ಲಿ ಪ್ರಳಯದ ದಿನದ ಬಗ್ಗೆ ಉಲ್ಲೇಖ ಕೆಲವೊಂದು ದೃಷ್ಟಾಂತ ಗಳೊಂದಿಗೆ ಕೊಡಲಾಗಿದೆ. ಏಕಾ ಏಕಿ ಪ್ರಳಯ ಆರಂಭ ಆಗೋಲ್ಲ. ತಂದೆ ಮಗನನ್ನು ಕೊಲ್ಲುವುದು, ತಾಯಿ ಮಗನ, ತಂದೆ ಮಗಳ ನಡುವಿನ ಲೈಂಗಿಕ ಸಂಬಂಧ, ಅನ್ಯಾಯಗಳು, ಬಡ್ಡಿ, ಮೋಸ, ವಂಚನೆ, ಕೊಲೆ ಸುಲಿಗೆ, ಕುಡಿತ,  ದಿನನಿತ್ಯದ ಪ್ರತಿಯೊಬ್ಬರ ಧಂಧೆಯಾಗಿ, ಜೀವನ ರೀತಿಯಾಗಿ ಮಾರ್ಪಟ್ಟು ಇಂಥ ಕೃತ್ಯಗಳಲ್ಲಿ ತೊಡಗಿಸಿ ಕೊಂಡವರು ಇದನ್ನು ಸ್ವಾಭಾವಿಕ ಎಂದು ಪರಿಗಣಿಸಿ ಉಡಾಫೆಯಿಂದ ಬದುಕುವುದು. ಆಳುವವರು ಅತಿ ಕ್ರೂರಿಗಳಾಗಿ ಮಾರ್ಪಡುವುದು. ಬಡವರಿಗೆ ಸಲ್ಲಬೇಕಾದ ಪಾಲನ್ನು ಕೊಡದೆ ಸ್ವತಃ ಸ್ವಾಹಾ ಮಾಡುವುದು. ಹೀಗೆ ಅನ್ಯಾಯ, ಅಕ್ರಮ, ಕ್ರೌರ್ಯಗಳು ಮುಗಿಲು ಮುಟ್ಟಿದಾಗ ಇನ್ನೂ ಗಂಭೀರವಾದ ಕೆಲವು ಘಟನೆಗಳು ಜರುಗುವುದು ಪ್ರಳಯಕ್ಕೆ ಮುನ್ನ.

ಪ್ರಥಮವಾಗಿ ಪವಿತ್ರ ಮಕ್ಕಾ ನಗರದಲ್ಲಿರುವ ಕಪ್ಪು ಚೌಕಾಕಾರದ “ಕಾಬಾ” ಭವನ ವನ್ನು ನಾಶ ಮಾಡ ಲಾಗುವುದು.

ಒಂದು ವಿಚಿತ್ರ, ಭೀಕರ ಜಂತುವಿನ ದರ್ಶನ ವಿಶ್ವಕ್ಕೆ ಆಗುವುದು.

ಭಯಂಕರ ಚಂಡಮಾರುತ ಬೀಸಿ ಬೆಟ್ಟ ಗುಡ್ಡಗಳು, ಪರ್ವತಗಳು ಹತ್ತಿಯ ಉಂಡೆಗಳಾಗಿ ಹಾರುವುವು.

ಅಂತಿಮವಾಗಿ, ಪೂರ್ವ ದಿಕ್ಕಿನಲ್ಲಿ ಹುಟ್ಟುವ ಸೂರ್ಯ ಪಶ್ಚಿಮ ದಿಕ್ಕಿನಲ್ಲಿ ಹುಟ್ಟುವನು. ಈ ಬೆಳವಣಿಗೆಯೊಂದಿಗೆ ಮನುಷ್ಯನ ಎಲ್ಲಾ ಲೆಕ್ಕಾಚಾರಗಳ ಕಡತವನ್ನು ಮುಚ್ಚಲಾಗುವುದು.( end of year accounting ಥರ).

ಮೇಲೆ ಹೇಳಿದ ವರ್ಣನೆ ಇಸ್ಲಾಂ ಗ್ರಂಥ ಗಳಲ್ಲಿರುವ ನೂರಾರು ದೃಷ್ಟಾಂತ ಗಳಿಂದ ಆರಿಸಿದ್ದು.         

ಪ್ರಳಯದ ಬಗ್ಗೆ ಕನ್ನಡದ ನ್ಯೂಸ್ ಚಾನಲ್ ನವರು ದುಗುಡ, ಭಯ ಮಿಶ್ರಿತ ಧ್ವನಿಯಲ್ಲಿ ವಿವರಣೆ, ವರ್ಣನೆ ನೀಡುವುದನ್ನು ಕೇಳಿದವರು ಕಂಪಿಸುವುದರಲ್ಲಿ ಅನುಮಾನವಿಲ್ಲ. ಒಂದು ಆಂಗ್ಲ ಚಿತ್ರದ ತುಣುಕೊಂದನ್ನು ತೋರಿಸುತ್ತಾ ಪ್ರಳಯವಂತೆ, ಹಾಗಾಗುತಂತೆ, ಹೀಗಾಗುತ್ತಂತೆ ಎಂದು ಅಂತೆ ಕಂತೆಗಳನ್ನು ಪುಂಖಾನು ಪುಂಖವಾಗಿ ಬಿಡುತ್ತಾ ಜನರಲ್ಲಿ ಗಾಭರಿ ಹುಟ್ಟಿಸುವ ಇವರ ನಡವಳಿಕೆಗೆ ಏನನ್ನಬೇಕೋ? ಈ ವರದಿಗಳನ್ನು ನೋಡಿದ ಜನ ಗಾಭರಿಯಾಗೋ ಬದಲು ಆ ಚಾನಲ್ ಗಳಿಗೆ ಇ –ಮೇಲ್ ಮೂಲಕ ಛೀಮಾರಿ ಹಾಕಿ ಇಂಥ ಬೊಗಳೆ ಗಳನ್ನು ಜನ ಸಹಿಸರು ಎನ್ನುವ ಸಂದೇಶವನ್ನು ಕೊಡಬೇಕು.

ಕಣ್ಣಿಗೆ ಕಣ್ಣು, ಹಲ್ಲಿಗೆ ಹಲ್ಲು

ಕಣ್ಣಿಗೆ ಕಣ್ಣು, ಹಲ್ಲಿಗೆ, ಹಲ್ಲು – ಕ್ರೈಸ್ತ ಧರ್ಮದ “ಹಳೇ ಒಡಂಬಡಿಕೆ” ಯ ಈ ಮಾತುಗಳು ಇಸ್ಲಾಮಿನ ಶರಿಯಾ ಕಾನೂನಿನಲ್ಲೂ ಶಿಫಾರಸು ಮಾಡಲಾಗಿದೆ. ಒಂದು ರೀತಿಯ ಸೇಡಿಗೆ ಸೇಡು. ಆದರೆ ಇದನ್ನು ತಪ್ಪು ಎನ್ನುವವರೂ ಕೆಲವೊಮ್ಮೆ ಘಟನೆಗಳ, ಅಪರಾಧಗಳ ಕ್ರೌರ್ಯದ ಗಂಭೀರತೆಯನ್ನು ಗಮನದಲ್ಲಿಟ್ಟು ಕೊಂಡು ಈ ರೀತಿಯ retributory justice ವಿಧಾನ ಸರಿ ಎಂದು ವಾದಿಸುವರು.   

ಕಣ್ಣಿಗೆ ಕಣ್ಣು ಬೇಕು ಎನ್ನುವವರು ಒಂದು ಕಡೆಯಾದರೆ ಮಾನವೀಯ ದೃಷ್ಟಿಯಿಂದ ದೃಷ್ಟಿಯನ್ನು ಬೇರೆಡೆ ಹೊರಳಿಸಬೇಕು ಎನ್ನುವವರು ಮತ್ತೊಂದು ಕಡೆ. ಪ್ರತೀಕಾರ ಮಾನವ ಸಹಜ ಗುಣ. ಪುಟ್ಟ ಮಕ್ಕಳ ಪ್ರತಿಕ್ರಿಯೆಗಳೂ ಈ  ಮಾನವ ಸಹಜ ಗುಣಕ್ಕೆ ಅನುಗುಣವಾಗಿಯೇ ಇರುವುದನ್ನು ಗಮನಿಸಿದ್ದೇವೆ. ಕ್ಷಮಿಸುವವನು ಉದಾರಿ, ಆ ಗುಣ ಎಲ್ಲರಿಗೂ ಬರಬೇಕೆಂದಿಲ್ಲ. ಸಮಾಜ ಶಿಕ್ಷೆಯನ್ನು ಪ್ರತೀಕಾರ ಎನ್ನುವ ದೃಷ್ಟಿಯಿಂದ ನೋಡಬಾರದು, ಹಾಗೆ ನೋಡಿದಾಗ ಒಸಮಾ ಬಿನ್ ಲಾದೆನ್ ನ ವಧೆಯೂ ಸಮ್ಮತವೆನ್ನಿಸದು. ಒಸಾಮಾ ನ ವಧೆ ಸರಿ ಎಂದು ನಾಗರೀಕ ಸಮಾಜ ಖಂಡಿತವಾಗಿ ಒಪ್ಪುತ್ತದೆ. ಕೆಲವರು ಅವನನ್ನು ವಿಚಾರಣೆಗೆ ಒಳಪಡಿಸಿ ಶಿಕ್ಷಿಸಬೇಕಿತ್ತು ಎನ್ನುವವರೂ ಇದ್ದಾರೆ. ಆದರೆ ಆತನನ್ನು ಹಿಡಿದು ವಿಚಾರಣೆಗೆ ಒಳಪಡಿಸಲು ಮಾಡಿ ಕೊಳ್ಳ ಬೇಕಾದ ಸಿದ್ಧತೆಗಳನ್ನು ನೋಡಿದಾಗ, ಅದರ ಎಡರು ತೊಡರು ಗಳನ್ನು, ಗಮನಕ್ಕೆ ತೆಗೆದು ಕೊಂಡಾಗ targeted elemination ಹೆಚ್ಚು ಪ್ರಾಯೋಗಿಕ ಎಂದು ತೋರುತ್ತದೆ.  

ಪ್ರತಿಭಾವಂತಳಾದ ಇಂಜಿನಿಯರಿಂಗ್ ಪದವೀಧರೆಯಾದ ಇರಾನಿನ ಯುವತಿ ಅಮೀನ ಬೆಹ್ರಾಮಿಯ ಜೀವನ ಸಂಪೂರ್ಣವಾಗಿ ನಾಶವಾಗಿ ಹೋಯಿತು, ತನ್ನನ್ನು ಬಯಸಿದ ಮಾಜಿದ್ ಮೋವಾಹೆದಿ ಎನ್ನುವ ನರ ರಾಕ್ಷಸನಿಂದ. ಆಮಿನಾಳನ್ನು ವಿವಾಹವಾಗಲು ಬಯಸಿದ್ದ ಮಾಜಿದ್ ಈಕೆಯ ಅಸಮ್ಮತಿಯಿಂದ ಕ್ರುದ್ಧನಾದ. ನನ್ನನ್ನು ಮದುವೆಯಾಗದಿದ್ದರೆ ಕೊಲ್ಲುತ್ತೇನೆ ಎಂದು ಮೊದಲಿಗೆ ಬೆದರಿಸಿದ್ದ ಇವನು ಮನಸ್ಸು ಬದಲಿಸಿ ನನಗೆ ಸಿಗದ ಇವಳು ಬೇರಾರಿಗೂ ಸಿಗಕೂಡದು ಎಂದು ತೀರ್ಮಾನಿಸಿದ . ಒಂದು ಬಕೆಟ್ ತುಂಬಾ ಆಸಿಡ್ ಅನ್ನು ಅಮೀನಾಳ ಮುಖದ ಮೇಲೆ ಎರಚಿದ. ತನ್ನ ಎರಡೂ ಕಣ್ಣುಗಳನ್ನು ಕಳೆದುಕೊಂಡ ಈಕೆ ಭಯ ಹುಟ್ಟಿಸುವಂಥ ಕುರೂಪಿಯಾದಳು.  ಇರಾನಿನ ನ್ಯಾಯಾಲಯ ದಂಡವನ್ನೂ ಸೆರೆವಾಸದ ಶಿಕ್ಷೆಯನ್ನೂ ವಿಧಿಸಿತು ಮಾಜಿದ್ ನಿಗೆ. ಈ ತೀರ್ಪಿಗೆ ಅಮೀನ ಸಮ್ಮತಿಸಲಿಲ್ಲ. ನನ್ನ ನೋವನ್ನು  ಸ್ವತಃ ತನ್ನ ಕಣ್ಣು ಗಳನ್ನು ಕಳೆದು ಕೊಳ್ಳುವ ಮೂಲಕ ಮಾತ್ರ ಮಾಜಿದ್ ಅರಿಯಬಲ್ಲ ಎಂದು ವಾದಿಸಿದಳು. ಇದೇ ೧೪ ಮೇ, ೨೦೧೧ ರಂದು ಆಕೆಗೆ ಸಿಕ್ಕಿತು ಬಯಸಿದ ನ್ಯಾಯ. ಹತ್ತಿರದ ಆಸ್ಪತ್ರೆಗೆ ಮಾಜಿದ್ ನನ್ನು ದಾಖಲಿಸಿ ಅವನಿಗೆ ಅರಿವಳಿಕೆ ಕೊಟ್ಟು ಅವನ ಕಣ್ಣುಗಳಲ್ಲಿ ಆಸಿಡ್ ಪ್ರೋಕ್ಷಣೆ ಮಾಡಲು ತೀರ್ಮಾನ ವಾಯಿತು. ಈಗ ಆಗಮನವಾಯಿತು “ಕರುಣಾನಿಧಿ” ಜನರ ದಂಡು. amnesty international ನೇತೃತ್ವದ ಈ ದಂಡು ಹೇಳಿದ್ದು ಈ ರೀತಿ ನ್ಯಾಯ “ ಕಿರುಕುಳಕ್ಕೆ ಸಮಾನ” ಎಂದು. ಕ್ರೂರ ಮಾಜಿದ್ ಎಸಗಿದ ಕೃತ್ಯಕ್ಕೆ ಯಾವ ರೀತಿಯ ವಿಶ್ಲೇಷಣೆ ಕೊಡುತ್ತದೋ ಅಮ್ನೆಸ್ಟಿ. ಪಾಶ್ಚಾತ್ಯರ ಯಾವುದೇ ಮಾತಿಗೂ ಒಲ್ಲೆ ಎಂದು ಹೇಳಿ ಸುಖ ಅನುಭವಿಸುವ ಇರಾನ್ amnesty ಯ ಮಾತಿಗೆ ತಲೆ ಬಾಗಿತು. ಆದರೆ ಅಮೀನಾ ಮಾತ್ರ ತನ್ನ ಹೊರಾಟವನ್ನು ಖಂಡಿತಾ ಮುಂದುವರೆಸುವಳು. ಕಣ್ಣಿಗೆ ಕಣ್ಣು, ಈ ನ್ಯಾಯದಿಂದ ಮಾತ್ರ ಈಕೆ ತೃಪ್ತಳಾಗುವಳು. ಈ ತೆರನಾದ ನ್ಯಾಯದಿಂದ ಭಾವೀ ರಾಕ್ಷಸರು ಪಾಠ ಕಲಿಯಬೇಕು.          

ಗಾಂಧೀಜಿ ಪ್ರಕಾರ ಕಣ್ಣಿಗೆ ಕಣ್ಣು ಎನ್ನುವ ಪ್ರತೀಕಾರದ ಶಿಕ್ಷೆಯಿಂದ ಪ್ರಪಂಚವೇ ಕುರುಡಾಗಬಹುದು. ಇಡೀ ಪ್ರಪಂಚವೇ ಅನೈತಿಕತೆ, ಅನ್ಯಾಯ, ಹಿಂಸೆ ಎಸಗುವ ಕಣ್ಣಾಗುವುದಾದರೆ ಅದು ಕುರುಡಾಗಿರುವುದೇ ಹೆಚ್ಚು ಲೇಸು. ಇಲ್ಲದಿದ್ದರೆ ಪ್ರಪಂಚವೇ ಕುರೂಪಗೊಳ್ಳುವ ಸಾಧ್ಯತೆ ಹೆಚ್ಚು. ಗಾಂಧೀಜಿಯ ಈ ಮಾತಿಗೆ ನಾವು ಸಮ್ಮತಿಸಿದರೆ ಅವರನ್ನು ವಧಿಸಿದ ದ್ರೋಹಿಯನ್ನು ದೇಶ ಸುಮ್ಮನೆ ಬಿಡಬೇಕಿತ್ತು. ಯೋಚಿಸಿ ನೋಡಿ, ಮೈ ಝುಮ್ಮೆನ್ನುವುದಿಲ್ಲವೇ?  ಕೆಲವೊಂದು ಮಾತುಗಳು ಎಲ್ಲಾ ಕಾಲಕ್ಕೂ ಉದ್ಧರಿಸಲು ಉಪಯೋಗಕ್ಕೆ ಬರಬಹುದು, ದಯೆಯ ಆ ಮಾತುಗಳನ್ನು ಭಾಷಣಗಳಲ್ಲೂ, ಬರಹಗಳಲ್ಲೂ ಉಪಯೋಗಿಸಲು ಸುಂದರವಾಗಬಹುದು. quote ರೂಪದಲ್ಲಿ ಆಕರ್ಷಕ ಈ ಹೇಳಿಕೆಗಳು. ಆದರೆ ಸಮಾಜದ ಸ್ವಾಸ್ಥ್ಯವನ್ನೂ, ಹಿತವನ್ನೂ ದೃಷ್ಟಿಯಲ್ಲಿ ಇಟ್ಟುಕೊಂಡಾಗ ಮಾಜಿದ್ ನಂಥ ದುರುಳರ ಕಣ್ಣುಗಳನ್ನು ಕೀಳಲೇಬೇಕು. ಮುಗ್ಧ, ಅಮಾಯಕ ಹೆಣ್ಣಿನ ಕಣ್ಣುಗಳನ್ನು ಕಿತ್ತ ಅವನ ಕಣ್ಣುಗಳು ತನ್ನ ಕ್ರೌರ್ಯವನ್ನು ಕಂಡು ಹಿಗ್ಗಬಾರದು. ಅಂತಾರಾಷ್ಟ್ರೀಯ ಒತ್ತಡಕ್ಕೆ ಇರಾನ್ ತಲೆಬಾಗದೆ ಆಕೆ ಬಯಸಿದ ನ್ಯಾಯವವನ್ನು ಅವಳಿಗೆ ದಯಪಾಲಿಸಲೇಬೇಕು.  

ಹಿಂಸೆಗೆ ಪ್ರತಿ ಹಿಂಸೆಯಾಗಿ ಅಸ್ತ್ರ ದ ಪ್ರಯೋಗ ನಡೆಯದಿದ್ದರೆ ಪ್ರಪಂಚ ಸುರಕ್ಷಿತ ಸ್ಥಳವಲ್ಲ. ಸ್ಪೇನ್ ದೇಶದ ದ್ವೀಪವೊಂದರ ಪ್ರವಾಸದಲ್ಲಿದ್ದ ಇಂಗ್ಲೆಂಡಿನ ಮಧ್ಯ ವಯಸ್ಕ ಮಹಿಳೆಯೊಬ್ಬರನ್ನು ಯಾವುದೇ ಕಾರಣವಿಲ್ಲದೆ ಓರ್ವ ಯುವಕ ೧೫ ಬಾರಿ ಚಾಕುವಿನಿಂದ ಇರಿದದ್ದು ಸಾಲದು ಎಂದು ಆಕೆಯ ರುಂಡಚ್ಛೇದ ಮಾಡಿ ರಸ್ತೆ ಬದಿಗೆ ಎಸೆದ. ಈ ಮಹಿಳೆ ಪ್ರವಾಸದ ವೇಳೆ ಅಲ್ಲಿನ ಶಾಲೆಯ ಮಕ್ಕಳಿಗೆ ರಸ್ತೆ ಸುರಕ್ಷತೆ ಬಗ್ಗೆ ಪಾಠ ಹೇಳಿ ಕೊಡುತ್ತಿದ್ದಳಂತೆ. ಇಂಥ ಹಿಂಸ್ರ ಪಶುಗಳನ್ನು ಸಮಾಜ ಸಹಿಸಿದಾಗ, ಅವರಿಗೆ ತಕ್ಕ ಶಿಕ್ಷೆ ಕೊಡುವಲ್ಲಿ ವಿಫಲವಾದಾಗ ಇಂಥ ಕರುಳು ಹಿಂಡುವ ಘಟನೆಗಳು ಎಲ್ಲೆಲ್ಲೂ ಕಾಣಲು ಸಿಗುತ್ತವೆ. ಕೊಲೆಗಾರ ಒಂದೆರಡು ವರ್ಷ ಜೇಲಿನಲ್ಲಿ ಕಳೆದು ಸಮಾಜಕ್ಕೆ ಮರಳಿ ಬರುತ್ತಾನೆ ತನ್ನ ಮಿಕವನ್ನು ಅರಸುತ್ತಾ.

ಅವರು ಹಾಗೆ, ನಾವ್ಯಾಕೆ ಹೀಗೆ?

ಜಾರ್ಜ್ ಬುಶ್ ತನ್ನ ಎಂಟು ವರ್ಷಗಳ ಅಧಿಕಾರಾವಧಿಯಲ್ಲಿ ಅತ್ಯಾಧುನಿಕ ದುರ್ಬೀನು ಹಿಡಿದು ಗುಡ್ಡ ಕಣಿವೆ, ಹಳ್ಳ ಕೊಳ್ಳ ಬಿಡದೆ ಹುಡುಕಾಡಿದರೂ ಸಿಗದ ಒಸಾಮಾ ಬಿನ್ ಲಾದೆನ್ ನನ್ನು ತನ್ನ ಅಧಿಕಾರಾವಧಿಯ ಉತ್ತರಾರ್ಧದಲ್ಲೇ ಕೆಡವಿ ಬೀಳಿಸಿದ ಕೀರ್ತಿ ಒಬಾಮಾರದು. “ನನ್ನ” ನಿರ್ದೇಶನದ ಮೇರೆಗೆ “ನಾವಿಕ ಸೀಲ್ – ೬” ರ ವಿಶೇಷ ಪಡೆಗಳು ಒಸಾಮಾನನ್ನು ಬಲಿ ಹಾಕಿ ಜಲಸಮಾಧಿ ಮಾಡಿದರು ಎನ್ನುವ ಮಾತಿನಲ್ಲಿ “ನನ್ನ” ಎನ್ನುವ narcissistic ಮಾತೊಂದು ಬಿಟ್ಟರೆ ಒಬಾಮಾ ಬೇರಾವುದೇ ಶೌರ್ಯ ಪ್ರದರ್ಶನ ಮಾಡಲಿಲ್ಲ. ಒಸಾಮಾನನ್ನು ಬಲಿ ಹಾಕಿದ ಕೂಡಲೇ ಜಾರ್ಜ್ ಬುಶ್ ರಿಗೆ ಫೋನಾಯಿಸಿ ಇನ್ನು ಈ ಭೂಮಿಯ ಮೇಲೆ ಒಸಾಮಾ ನಡೆಯುವುದನ್ನು ನೋಡಲಾರಿರಿ ಎನ್ನುವ  ಸಂದೇಶ ನೀಡಿದರು ಅಧ್ಯಕ್ಷ ಒಬಾಮ. ದೇಶಕ್ಕೆ, ವಿಶ್ವಕ್ಕೆ ಈ ವಿಷಯವನ್ನ ಹೊರಗೆಡಹುವ ಮೊದಲೇ ತನ್ನ ಪಕ್ಷದವನಲ್ಲದ ರಿಪಬ್ಲಿಕನ್ ಪಕ್ಷದ ಹಿಂದಿನ ಅಧ್ಯಕ್ಷ ಬುಶ್ ನಿಗೆ ಈ ಸಂದೇಶ ರವಾನೆ ಮಾಡಿದ್ದು ಏಕೆ? ಈ ರಾಜಕಾರಣಕ್ಕೆ ನಿಷ್ಕೃಷ್ಟವಾಗಿ  bipartisan politics ಎಂದು ಕರೆಯುತ್ತಾರೆ ಅಮೆರಿಕೆಯಲ್ಲಿ. ದೇಶದ ಭದ್ರತೆ, ಸಮಗ್ರತೆ, ಮುಂತಾದ ಗಂಭೀರ ವಿಚಾರಗಳು ಬಂದಾಗ ಅಮೆರಿಕೆಯಲ್ಲಿ ಎಲ್ಲಾ ಪಕ್ಷಗಳೂ ಒಂದು. ಅವರೆಲ್ಲರ ಪಕ್ಷ ಒಂದೇ. ಅದುವೇ ಅಮೇರಿಕನ್. put america first, ಅಮೆರಿಕೆಯ ರಾಜಕಾರಣಿಗಳ ಧ್ಯೇಯ ವಾಕ್ಯ. ಅವರುಗಳ ಏಕೋದ್ದೇಶ. ದೇಶ ಉರಿಯುವಾಗ ಬಾಣಲೆ ಎತ್ತಿ ಕೊಂಡು ಬಂದು ಕಜ್ಜಾಯ ಹುರಿಯಲು ಮುಂದಾಗೋಲ್ಲ ಅಲ್ಲಿನ ರಾಜಕಾರಣಿಗಳು. ಹಾಗೇನಾದರೂ ಮಾಡಿದರೆ ಇ- ಮೇಲ್ ಮೂಲಕ ಬರುತ್ತವೆ ಎಕ್ಕಡಗಳು. ಮುಂದಿನ ಬಾರಿ ಆರಿಸಿ ಬರುವ ಆಸೆ ಕನಸಾಗುತ್ತದೆ.       

ಈಗ ಬನ್ನಿ ಭಾರತಕ್ಕೆ. “ನಿನ್ನ ತಲೆ ಹೋದರೂ ಪರವಾಗಿಲ್ಲ ನನ್ನ ತಲೆಯ ಮೇಲಿನ ಪೇಟ intact ಆಗಿದ್ದರೆ ಸಾಕು” ಎನ್ನುವ ರಾಜಕಾರಣಕ್ಕೆ ಸುಸ್ವಾಗತ. ೨೦೦೮ ನವೆಂಬರ್ ೨೬ ಕ್ಕೆ ವಿಶ್ವವನ್ನೇ ನಡುಗಿಸಿದ, ಪಾಕಿಸ್ತಾನದ ಭಯೋತ್ಪಾದಕರು ಮುಂಬೈಯಲ್ಲಿ ನಡೆಸಿದ ಮಾರಣ ಹೋಮ ಎರಡೂ ದೇಶಗಳು ಯುದ್ಧ ತಯಾರಿ ನಡೆಸುವಷ್ಟು ತೀವ್ರ ಪರಿಣಾಮ ಬೀರಿತು. ಮೂರು ದಿನಗಳ ಕಾಲ ಮುಂಬೈ ನಗರವನ್ನು ಒತ್ತೆಯಾಗಿರಿಸಿಕೊಂಡಿದ್ದ ಕೊಲೆಗಡುಕರು ನಮ್ಮ ಯೋಧರ ಗುಂಡುಗಳಿಗೆ ಒಬ್ಬೊಬ್ಬರಾಗಿ ಉರುಳಿದರು. ಎಲ್ಲಾ ಭಯೋತ್ಪಾದಕರೂ ಹತರಾಗಿ ಮುಂಬೈ ಮತ್ತೊಮೆ ಸುರಕ್ಷಿತ ಸ್ಥಿತಿಗೆ ಮರಳಿದಾಗ ನಮ್ಮ ಪ್ರಧಾನಿಗಳೂ, ವಿರೋಧ ಪಕ್ಷದ ನಾಯಕರೂ ಮುಂಬೈಗೆ ಧಾವಿಸಿ ಬಂದರು. ಬಂದಿದ್ದು ದೊಡ್ಡ ವಿಷಯವಲ್ಲ. ಅವರು ಬಂದ ರೀತಿ ಮಾತ್ರ ವಿಶೇಷವಾದದ್ದು. ಇಡೀ ವಿಶ್ವಕ್ಕೆ ನಾವು ಯಾವ ಪಕ್ಷಗಳಿಗೆ ಸೇರಿದ್ದರೂ ನಾವು ಭಾರತೀಯರು ಒಂದು ಎಂದು ತೋರಿಸಲು ಈ ಮಹನೀಯರುಗಳು ಒಟ್ಟಿಗೆ ಬರಲಿಲ್ಲ. ಬೇರೆ ಬೇರೆ ವಿಮಾನಗಳಲ್ಲಿ ಆಗಮಿಸಿದರು. ಈ ಇಬ್ಬರೂ ನಾಯಕರು ತಮ್ಮ ಹೇಳಿಕೆಗಳಲ್ಲಿ ದೇಶ ಒಗ್ಗಟ್ಟಾಗಿದೆ ಎಂದು ಸಾರಿದರೂ ಕೆಲವೊಂದು ಸಂದರ್ಭಗಳಲ್ಲಿ ಚಿಕ್ಕ ಪುಟ್ಟ ಸಂಗತಿಗಳು ಬೃಹದಾಕಾರವಾಗಿ ಗೋಚರಿಸುತ್ತವೆ. ಮುಂಬೈ ಮಾರಣ ಹೋಮಕ್ಕೆ ಮೊದಲು ಕಂದಹಾರಕ್ಕೆ ಅಪಹರಿಸಿಕೊಂಡು ಹೋದ ನಮ್ಮ ವಿಮಾನ, ಸಂಸತ್ ಭವನದ ಮೇಲೆ ನಡೆದ ಧಾಳಿ ಹೀಗೆ ಹಲವು ಯಾತನಾಮಯ ಸಂದರ್ಭಗಳಲ್ಲಿ ನಮ್ಮ ಒಗ್ಗಟು ಸಾಕಾಗಲಿಲ್ಲವೇನೋ ಎನ್ನುವಷ್ಟು ಐಕ್ಯತೆಯಿಂದ ಕೂಡಿರಲಿಲ್ಲ.

ಅಮೇರಿಕೆಯಿಂದ ನಾವು ಕಲಿಯುವುದು ಬಹಳಷ್ಟಿದೆ. ದೇಶ ಒಗ್ಗಟ್ಟಾಗಿದ್ದರೆ ನಾವು ಯಾರಿಗೂ ಭಯ ಪಡುವ ಅವಶ್ಯಕತೆ ಇಲ್ಲ, ಯಾರ ಬೆಂಬಲವನ್ನೂ ನಿರೀಕ್ಷಿಸುವ ಗತಿಗೇಡು ಸಹ ಬರುವುದಿಲ್ಲ. ನಮಗೆ ಸರಿ ಎನಿಸಿದ್ದನ್ನು ನಿರ್ಭಯವಾಗಿ, ನಿರ್ಭಿಡೆಯಿಂದ ಮಾಡಬಹದು ದೇಶದ ರಕ್ಷಣೆಯನ್ನು.           

 

 

ಜನರಿಗೆ ಭಯಪಡುವ ಮುಖ್ಯ ಮಂತ್ರಿ

ಇಂದು ಬೆಳಿಗ್ಗೆ ಮಲಯಾಳಿ ಒಬ್ಬಾತ ನಡೆಸುವ ಬುಫಿಯಾ ಎಂದು ಕರೆಯಲ್ಪಡುವ ಚಾದಂಗಡಿಯ ಟೀವಿಯಲ್ಲಿ ಕೇರಳದ ನೂತನ ಮಖ್ಯ ಮಂತ್ರಿಗಳ ಸಂದರ್ಶನವನ್ನು ಕೈರಳಿ ಚಾನಲ್ ನ ಬಾತ್ಮೀದಾರ ನಡೆಸುತ್ತಿದ್ದನ್ನು ವೀಕ್ಷಿಸಿದೆ. ಎರಡನೇ ಬಾರಿಗೆ ಮು. ಮಂತ್ರಿಯಾದ ಊಮ್ಮನ್ ಚಾಂಡಿ ಅನುಭವೀ ರಾಜಕಾರಣಿ.

ಬಾತ್ಮೀದಾರ ಕೇಳಿದ ಪ್ರಶ್ನೆಗಳಿಗೆ ವಿಚಲಿತನಾಗದೆ ನೇರವಾಗಿ ಉತ್ತರ ನೀಡುತ್ತಿದ್ದ ಮು. ಮಂತ್ರಿಗಳು ಕೆಲವೊಂದು ಕ್ಲಿಷ್ಟಕರ ಪ್ರಶ್ನೆಗಳನ್ನು ಎದುರಿಸಿದರು. ಕೇವಲ ಎರಡು ಶಾಸಕರ ಹೆಚ್ಚಳದ ಬಹುಮತ ಹೊಂದಿರುವ ಕಾಂಗ್ರೆಸ್ ಸಮ್ಮಿಶ್ರ ಸರಕಾರ ಎಡರು ತೊಡರು ಗಳನ್ನು ಕಾಣದು ಎನ್ನುವುದು ಇವರ ವಿಶ್ವಾಸ. ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಯಾರಿಗೂ ಭಯ ಪಡುವ ಅವಶ್ಯಕತೆ ಎನಗಿಲ್ಲ ಎಂದಾಗ ಮು. ಮಂತ್ರಿಗಳನ್ನು ಬಾತ್ಮೀದಾರ ಕೇಳಿದ, ಭಯವಿಲ್ಲ ಎಂದಿರಲ್ಲ ಯಾರ ಭಯವೂ ಇಲ್ಲವೇ? ಆಗ ಮು. ಮಂತ್ರಿಗಳು ಹೇಳಿದ್ದು “ನನಗೆ ದೇವರ ಮೇಲೆ ಭಯ ಮತ್ತು ಜನರ ಭಯ ಇದೆ, ಅಷ್ಟೇ”.  

ಮಂತ್ರಿಗಳಿಗೆ ಇರಬೇಕಾದ ಅರ್ಹತೆಗಳ ಕುರಿತು ಕೇಳಲಾಗಿ integrity, common sense ಇದ್ದರೆ ಕೆಲಸ ಸುಗಮ ಎಂದರು. ಒಳ್ಳೆಯ ಮಾತುಗಳೇ. ಆದರೆ ಅವರು ಹೇಳಿದ ಈ ಎರಡು ಗುಣದ್ವಯಗಳು ರಾಜಕಾರಣಿ ಅಥವಾ ಮಂತ್ರಿ ಮಹೊದಯರುಗಳಲ್ಲಿ ಇದ್ದಿದ್ದರೆ ನಮ್ಮ ದೇಶ ಹೀಗೆ ಇರುತ್ತಿತ್ತೇ?    

ಕೊನೆಗೆ ಮುಖ್ಯಮಂತ್ರಿಗಳು ಸಂದರ್ಶನದ ಅವಧಿಯಲ್ಲಿ ದೇವರ ಪ್ರಸ್ತಾವನೆ ಮಾಡಿದ್ದನ್ನು ಮತ್ತೊಮ್ಮೆ ಕೆದಕುತ್ತಾ ಆತ ಕೇಳಿದ ಇಂದು ಬೆಳಿಗ್ಗೆ ದೇವರಲ್ಲಿ ಏನನ್ನು ಬೇಡಿ ಕೊಂಡಿರಿ ಎಂದು. ಅದಕ್ಕೆ ಊಮ್ಮನ್ ಚಾಂಡಿ ನೀಡಿದ ಉತ್ತರ “ಯಾವುದೇ ನಿರ್ದಿಷ್ಟ ಬೇಡಿಕೆ ಇಟ್ಟುಕೊಂಡು ನಾನು ದೇವರಲ್ಲಿ ಕೇಳೋಲ್ಲ, ನಾನು ಮಾಡುವ ಕೆಲಸಗಳು ಸರಿಯಾದ ಮಾರ್ಗದಲ್ಲಿ ಇರಲು ಸಹಕರಿಸು ಎಂದು ಮಾತ್ರ ಕೇಳಿ ಕೊಳ್ಳುತ್ತೇನೆ”.  

ಅತ್ಯಂತ ಸರಳವಾಗಿ ಬದುಕುವ, ತಲೆ ಸಹ ಬಾಚದ, ಇಸ್ತ್ರಿ ಹಾಕಿದ ಬಟ್ಟೆ ಧರಿಸದ, ದೇವರನ್ನು ಭಯಪಡುವ ದೈವ ಭಕ್ತ, ಜನರಿಗೆ ಹೆದರುವ ಪ್ರಜಾಪತಿ ಕೇರಳ ರಾಜ್ಯವನ್ನ ಅಭಿವೃದ್ಧಿ ಪಥದತ್ತ ಮುನ್ನಡೆಸಲಿ ಎಂದು ಹಾರೈಸೋಣ.

ನಮ್ಮ ರಾಜ್ಯದ ರಾಜಕಾರಣ

ಕರ್ನಾಟಕದ ಕಿಣ್ಣರು ಗಣಿತ ಮತ್ತು ಜಾಗ್ರಫಿ ವಿಷಯಗಳಲ್ಲಿ ಬೇರೆಲ್ಲಾ ರಾಜ್ಯಗಳ ಕಿಣ್ಣ ರಿಗಿಂತ ಮುಂದೆ ಅಂತೆ – “ಅಧ್ಯಯನ” (ದಿನವೂ ನಾವು ಓದಿದ ದಿನಪತ್ರಿಕೆಯ ಅಧ್ಯಯನ).

ಗಡಗಡ ನಡುಗಿಸುವ ಗಣಿತ, ಜೋಂಪು ಹತ್ತಿಸುವ ಜಾಗ್ರಫಿ ವಿಷಯಗಳಲ್ಲಿ ನಮ್ಮ ಮಕ್ಕಳು ಮುಂದು ಎಂದರೆ ನಮ್ಮ “ಗುರು ದೇವೋಭವಃ” ಸಮುದಾಯ ಹಗಲು ರಾತ್ರಿ ಸಂಶೋಧನೆ ಮಾಡಿ ಹೊಸತನ್ನೇನಾದರೂ ಕಂಡು ಹಿಡಿದಿರಬೇಕು ಗಣಿತ ವನ್ನು amusing ಮಾಡಲು ಮತ್ತು ಜಾಗ್ರಫಿ ಯನ್ನು interesting ಆಗಿಸಲು. ಬಿಡ್ತು ಅನ್ನಿ, ಹಾಗೇನಿಲ್ಲ. ಸರಕಾರ ವಿದ್ಯೆ ಕೊಡುವ ಸಮುದಾಯಕ್ಕೆ ಕೊಡುವ ಸಂಬಳದ ಚೆಂದ ನೋಡಿದರೆ ಅಂಥ ಕಾಲ ಇನ್ನೂ ಬಹು ದೂರ. ಕಲಿಕೆಯಲ್ಲಿ innovation ತರುವ ಮಾತಿರಲಿ, ಬಾರುಕೋಲಿನ ಪ್ರಯೋಗ ಇಲ್ಲದೆ ಪಾಠ ಹೇಳಿದ್ದರೆ ಸಾಕಿತ್ತು ಶಿಕ್ಷಕರು. ಗಣಿತದಲ್ಲೂ, ಭೂಗೋಳದಲ್ಲೂ ನಮ್ಮ ಮಕ್ಕಳು ಮುಂದೆ ಎಂದ ಮಾತಿನಲ್ಲಿ ರಾಜಕಾರಣ ಅಡಗಿದೆ. ಪ್ರತಿಯೊಂದರಲ್ಲೂ ರಾಜಕಾರಣ ಕಾಣುವ ಸಮಾಜ ತಾನೆ ನಮ್ಮದು?

ಕರ್ನಾಟಕದ ರಾಜಕೀಯ ದಿನದಿಂದ ದಿನಕ್ಕೆ ಬಗೆಯ ಬಗೆಯ ಮನೋರಂಜನೆಯನ್ನು ಒದಗಿಸುತ್ತಿದ್ದು ಬಿಡುವಿನ ಸಮಯವನ್ನು ವ್ಯರ್ಥ ಮಾಡಲು ಟೀವೀಯ ಮೊರೆಯೋ, ಅಂತರ್ಜಾಲದ ಜಾಲದಲ್ಲೋ ಬೀಳಬೇಕಿಲ್ಲ ಕನ್ನಡಿಗ. ನಮ್ಮ ರಾಜಕಾರಣ ಎನ್ನುವುದು ನಂಬರ್ ಗೇಂ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಭಾಜಪ ನಿಚ್ಚಳ ಬಹುಮತ ಸಾಧಿಸಿದರೂ ಅದನ್ನು ನೆಮ್ಮದಿಯಾಗಿ ಆಳಲು ಬಿಡಲು ಒಲ್ಲೆ ಎನ್ನುವ ಗುಂಪು ಆಗಾಗ ದೊಡ್ಡ ದೊಡ್ಡ ಸದ್ದನ್ನು ಮಾತ್ರವಲ್ಲ, ಎಲ್ಲಾ ಬಗೆಯ ಟ್ರಿಕ್ಕುಗಳನ್ನು ತನ್ನ ಬಗಲಿನಿಂದ ಎಸೆಯುತ್ತಲೇ ಇರುತ್ತದೆ. ಒಂದೆಂಟು ಅತೃಪ್ತ ಶಾಸಕರನ್ನು ನಂದಿ ಬೆಟ್ಟಕ್ಕೋ, ಅದರಲ್ಲೂ ಅತೃಪ್ತರಾದರೆ ಇನ್ನೂ ಹೆಚ್ಚಿನ excitement ಗಾಗಿ ಗೋವಾ ಪರ್ಯಟನೆ ಗೋ ಕಳಿಸಿ ನಮ್ಮ ಸನ್ಮಾನ್ಯ ಮು. ಮಂತ್ರಿಗಳು ಕಣ್ಣೇರು ಹಾಕುವಂತೆ ಮಾಡಿ sadist ಮಜಾ ತೆಗೆದು ಕೊಳ್ಳೋದು. ದಿನ ಬೆಳಗಾದರೆ ಸಾಕು ಅಂಕಿ ಸಂಖ್ಯೆಗಳು ಏರು ಪೇರಾಗುತ್ತವೆ, ಥೇಟ್ ನಮ್ಮ BSE Index ಥರ. ಸ್ಟಾಕ್ ಎಕ್ಸ್ಚೇಂಜ್ ರೀತಿ. ಬೆಳಿಗ್ಗೆ ಸಂಖ್ಯೆಯಲ್ಲಿ ವೃದ್ಧಿ ಕಂಡರೆ ಸಂಜೆಯಾಗುತ್ತಲೇ ಇಳಿತ. ಅಥವಾ “ವೈಸೀ ವರ್ಸಾ”. ಹೀಗೆ ದಿನವೂ ಕೂಡುತ್ತಾ, ಕಳೆಯುತ್ತಾ ಏರುಪೇರಾಗುವ, ಸಂಖ್ಯೆಗಳನ್ನು ನೆನಪಿನಲ್ಲಿ ಇಡಬೇಕು, ಇಲ್ಲದಿದ್ದರೆ ಎರಡು ತಿಂಗಳಿಗೊಮ್ಮೆ ಬರುವ ಟೆಸ್ಟು ಗಳಲ್ಲಿ ನಮ್ಮ ಮು. ಮಂತ್ರಿ ಯಾರು ಎಂದರೆ ತಿಳಿದಿರಲೇಬೇಕಲ್ಲ. ಇಲ್ಲದಿದ್ದರೆ ಸಿಗುವ ಒಂದೇ ಒಂದು ಅಂಕಕ್ಕೂ ಚ್ಯುತಿ. ಹೀಗೆ ಸಂಖ್ಯೆಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳಲು ಹೆಣಗಾಡುತ್ತಾ ಗಣಿತವನ್ನು ಕರಗತವಾಗಿಸಿ ಕೊಂಡರು ನಮ್ಮ ಮಕ್ಕಳು. ಅದರೊಂದಿಗೆ ಸಂಭವನೀಯತೆ ಎನ್ನುವ ವಿಷ್ಯ ಕೂಡಾ.

ಒಂದು ಡೇರೆಯಿಂದ ಮತ್ತೊಂದು ಡೇರೆ ಗೆ ಕೆಲವು ಶಾಸಕರು ಜಿಗಿದರೆ ಯಾರು ಮು. ಮಂತ್ರಿ ಆಗಬಹುದು ಎನ್ನುವ ಸಂಭವನೀಯತೆ. ಸಂಭವನೀಯತೆಯಲ್ಲಿ ನಾಣ್ಯ ಚಿಮ್ಮುವ ಉದಾಹರಣೆ ಕೊಟ್ಟರೆ ರಾಜಕಾರಣದ ಸಂಭವನೀಯತೆಯಲ್ಲಿ ಡೇರೆ ಜಿಗಿಯುವ ಉದಾಹರಣೆ. ಅತೃಪ್ತ ಸದಸ್ಯರನ್ನು round the world, ಕ್ಷಮಿಸಿ, round the state ಟೂರಿಗೋ, ಅಥವಾ across the sate sojourn ಗೋ ಕಳಿಸಿದಾಗ ಜಾಗ್ರಫಿ ಸಹ ಮೂಡಿ ಬಂತು ತೆರೆಯ ಮೇಲೆ. ಯಾವ ಯಾವ ರೆಸಾರ್ಟ್ ಎಲ್ಲಿದೆ, ಅಡಗುತಾಣಗಳ ವಿಳಾಸ ಇವೆಲ್ಲವನ್ನೂ ತಿಳಿದಾಗ ಜಾಗ್ರಫಿ ಸಹ ಕರಗತವಾಗದೆ ಇದ್ದೀತೆ? ಅಷ್ಟೇ ಅಲ್ಲ, ಟೂರ್ ಹೊಡೆಸಿ, ಆಳಲು ಬೇಕಾದ ಮಾಂತ್ರಿಕ ಸಂಖ್ಯೆಯನ್ನು ಹೊಂದಿಸಿ, ನಂತರ ನಮ್ಮ ದೇಶದ ಅಧ್ಯಕ್ಷೆ ಯವರ ಹತ್ತಿರ ಪರೇಡ್ ಸಹ ಮಾಡಿಸಬೇಕು. ಅದಕ್ಕೆ ದಿಲ್ಲಿಗೆ ಹೋಗಬೇಕು. ಜಾಗ್ರಫಿ ಜ್ಞಾನ ವಿಸ್ತಾರ ಆಯಿತು ನೋಡಿ. ಆ ಪರೇಡ್ ಸಮಯ ಬರೀ ಮು. ಮಂತ್ರಿಗಳೂ, ಶಾಸಕ ಮಹೋದಯರೂ ಇದ್ದರೆ ಸಾಲದು, ಅವರನ್ನು ಕಾಯಲು ಪಕ್ಷದ ವತಿಯಿಂದ ವರಿಷ್ಠ ರೂ ಬರಬೇಕು, ವಿರೋಧೀ ಪಾಳಯ ದೂರದಲ್ಲಿ ನಿಂತು ಗೋವಾದ ಗೋಲ್ದನ್ ಬೀಚ್ ನ ಚಿತ್ರವನ್ನೋ, ನಾನ್ ಸ್ಟಾಪ್ ಅಂಕೆಗಳಿರುವ ಚೆಕ್ ನ ಫೋಟೋ ಕಾಪಿಯನ್ನೋ ತೋರಿಸಿ ಈಚೆ ಕಡೆ ಎಳೆದುಕೊಂಡು ಬಿಟ್ಟರೆ? ಪರೇಡ್ ಒಂದು ರೀತಿಯ ಮುಜುಗರ ತರುವ ಕಪ್ಪೆ ತೂಕವಾಗಿ ಪರಿವರ್ತನೆ ಆಗಬಾರದು ನೋಡಿ.

ನಮ್ಮ ಈ ರಾಜಕೀಯ ಅವ್ಯವಸ್ಥೆಗೆ ಪ್ರಜಾಪ್ರಭುತ್ವ ಎನ್ನುವ ಹೆಸರೇ ಒಂದು ‘misnomer’. ಅಪಪ್ರಯೋಗ. ಈ ವ್ಯವಸ್ಥೆಯಲ್ಲಿ ಪ್ರಜೆ ಪ್ರಭುವಾಗೋದು ಮತದಾನ ಕೇಂದ್ರದ ಕಡೆಗಿನ ನಡಿಗೆ ವೇಳೆ ಮಾತ್ರ. ಅವನನ್ನು ಕಳ್ಳ ನಗೆಯಿಂದ, ಓಲೈಸಲು ಡಜನ್ ಗಟ್ಟಲೆ ಜನ. ಮತದಾನವಾಯಿತೋ, ಆ ಕೂಡಲೇ ಅವನು ಹತಾಶ ಏಕಾಂಗಿ, ಮುಂದೆ ಅನಾವರಣಗೊಳ್ಳಲಿರುವ ನಾಟಕದ ಪರದೆ ಮುಂದೆ.

“ನೀವು ಕರೆಮಾಡಿದ ಚಂದಾದಾರರು…”

“ನೀವು ಕರೆಮಾಡಿದ ಚಂದಾದಾರರು ನಿಮ್ಮ ಯಾವುದೇ ಕರೆಗಳಿಗೂ ಪ್ರತಿಕ್ರಯಿಸುತ್ತಿಲ್ಲ. ದಯವಿಟ್ಟು ಸ್ವಲ್ಪ ಸಮಯದ ನಂತರ ಪ್ರಯತ್ನಿಸಿ”. – ಮೊಬೈಲ್ ಇಟ್ಟುಕೊಂಡ ಯಾವನಿಗೂ ಈ ಸಂದೇಶ ಬಾಯಿ ಪಾಠವೇ. ಚುನಾವಣೆ ಫಲಿತಾಂಶ ಹೊರಬಿದ್ದಿದೆ. ಹೆಚ್ಚೂ ಕಡಿಮೆ ಎಲ್ಲಾ ಸ್ಥಾನಗಳಿಗೂ ಸ್ಪರ್ದಿಸಿ ಒಂದರಲ್ಲಾದರೂ ಗೆದ್ದು ಖಾತೆ ತೆರೆಯುವ ಭಾರತದ ಪ್ರತಿಪಕ್ಷದ ಆಸೆಗೆ ಕೇರಳದ ಜನ ಓಗೊಡದೆ ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರದ ಚುಕ್ಕಾಣಿ ನೀಡಿದ್ದಾರೆ.   ಹೀಗೆ, ಕೇರಳದಲ್ಲಿ ಈ ಸಲವೂ ಭಾಜಪಕ್ಕೆ ಸಿಕ್ಕ ಸಂದೇಶ ನಾವು ಕೇಳುವ ಮೊಬೈಲ್ ಸಂದೇಶದ ರೀತಿಯೇ ಆಯಿತು. ಈ unmistakable ಸಂದೇಶ ಕೊಟ್ಟವ ಮತದಾರ ಮಹೋದಯ. ನಿರಾಶೆಯ ಸಂಗತಿ ಏನೆಂದರೆ ಈ “ಸ್ವಲ್ಪ ಸಮಯ” ಕಾಯುವಿಕೆ ಐದು ವರ್ಷಗಳಷ್ಟು ಸುದೀರ್ಘ.

 ಅತ್ತ ತಮಿಳು ನಾಡಿನಲ್ಲೂ incumbent ಪಕ್ಷ ಸೋತು ಸುಣ್ಣವಾಯಿತು. 3G ಉಷ್ಣತೆ ಸ್ವಲ್ಪ ಜೋರಾಗಿಯೇ ತಗುಲಿಸಿಕೊಂಡ ದ್ರಾವಿಡ ಮುನ್ನೇಟ್ರಂ ಕಳಗಂ ತರಗೆಲೆಯಂತೆ ಉದುರಿತು ಜಯಲಲಿತಾ ಬಿರುಗಾಳಿಗೆ.  ಇಲ್ಲೂ ಭಾರತದ ಅತಿ ದೊಡ್ಡ ಪ್ರತಿಪಕ್ಷಕ್ಕೆ ಅತಿ ದೊಡ್ಡ ನಿರಾಶೆಯೇ ಕಾದಿತ್ತು. ಹೀಗೆ ಕರ್ನಾಟಕವನ್ನು ಬಿಟ್ಟರೆ ದಕ್ಷಿಣದ ಯಾವುದೇ ರಾಜ್ಯದ ಮತದಾರ ಈ ಪಕ್ಷಕ್ಕೆ ಮಣೆ ಹಾಕದಿರಲು ಕಾರಣವೇನು? ಹಾಗೆಯೆ ಕರ್ನಾಟಕದಲ್ಲಿ ಒಂದು ಕಾಲದಲ್ಲಿ ಶಿಕಾರಿಪುರದ ಕೇವಲ ಒಂದು ಸ್ಥಾನದಿಂದ ಹಿಡಿದು ಈಗಿನ ಅಧಿಕಾರದ ಗದ್ದುಗೆ ಏರುವ ಭಾಜಪದ ಪಯಣದ ಯಶಸ್ಸಿಗೆ ಕಾರಣವೇನು? ಇತರೆ ಪಕ್ಷಗಳ ಅಸಡ್ಡೆ, ಅಧಿಕಾರ ದಾಹದ ಕಾರಣ ಬೇಸತ್ತ ಕರುನಾಡಿನ ಮತದಾರ last straw ಆಗಿ ಭಾಜಪವನ್ನು ಅಧಿಕಾರಕ್ಕೆ ಏರಿಸಿರಬಹುದೇ?

ನಾರೀಮಣಿಗಳ ವಿಜೃಂಭಣೆ

ಮಿನಿ ಮಹಾ ಚುನಾವಣೆ ಎನ್ನಬಹುದಾದ ನಾಲ್ಕು ರಾಜ್ಯಗಳ ಚುನಾವಣೆಗಳಲ್ಲಿ ಮಹಿಳೆ ಅಭೂತ ಪೂರ್ವ ಯಶಸ್ಸನ್ನು ಸಾಧಿಸಿದ್ದಾಳೆ. ದಿಲ್ಲಿಯಿಂದ ಹಿಡಿದು ದಕ್ಷಿಣದ ತಮಿಳು ನಾಡಿನವರೆಗೆ ನಾರೀ ಮಣಿಗಳ ವಿಜೃಂಭಣೆ ಅಧಿಕಾರದ ಪಡಸಾಲೆಗಳಲ್ಲಿ.  ಸ್ವ ಸಾಮರ್ಥ್ಯದಿಂದ ಮಮತಾ ಬ್ಯಾನರ್ಜಿ, ಶೀಲಾ ದೀಕ್ಷಿತ್ ರಾಜಕಾರಣದಲ್ಲಿ ಮಿಂಚಿದರೆ ಸೋನಿಯಾ, ಜಯಲಲಿತಾ ಮತ್ತು ಮಾಯಾವತಿ ಪುರುಷರ ನೆರಳಿನ ಸಹಾಯದಿಂದ ಮಿಂಚಿದವರು. ಹೆಣ್ಣಿನ ಹುಟ್ಟು ಹೇಸಿಗೆ ಮತ್ತು ತಾತ್ಸಾರ ಹುಟ್ಟಿಸುವ, ಗರ್ಭದಲ್ಲೇ ಅವಳನ್ನು ಹೊಸಕಿ ಹಾಕುವ ಅತ್ಯಂತ ತ ಕಳವಳಕಾರೀ ವಿದ್ಯಮಾನಗಳನ್ನು ನಾವು ದಿನವೂ ಕಾಣುತ್ತಿರುವಾಗ ರಾಜಕೀಯದಲ್ಲಿ ಸ್ತ್ರೀಯರ ಯಶಸ್ಸು ನಿಜಕ್ಕೂ ಸಂತಸವನ್ನು ಮೂಡಿಸುತ್ತದೆ. ಈ ಮಹಿಳಾ ಮಣಿಗಳು ಮಾಡಬೇಕಾದ ಮೊದಲ ಕೆಲಸವೆಂದರೆ ಮೇಲೆ ಹೇಳಿದ ಹೆಣ್ಣಿನ ಭ್ರೂಣ ಹತ್ಯೆ ಮತ್ತು ಹೆಣ್ಣಿನ ಮೇಲೆ ನಡೆಯುವ ಅವ್ಯಾಹತ ಶೋಷಣೆಯ ವಿರುದ್ಧ ಸಮರವನ್ನೇ ಸಾರಿ ಜನರಲ್ಲಿ ಹೆಣ್ಣು ನಿಕೃಷ್ಟಳಲ್ಲ, ಪುರುಷನಷ್ಟೇ ಬಲಿಷ್ಠಳು ಎನ್ನುವ ಸತ್ಯವನ್ನು ಮನಗಾಣಿಸುವುದು.

ಒಸಾಮಾ ವಧೆ ನಂತರ ಒಬಾಮಾ ಮಾಡಿದ್ದೇನು?

ಒಬಾಮಾ ಒಸಾಮಾನನ್ನು ಬಲಿ ಹಾಕಿದ ಕೀರ್ತಿಗೆ ಪಾತ್ರರಾದರು. ಪಾಪ ಯುದ್ಧ ಕೋರ ಜಾರ್ಜ್ ಬುಶ್ ಒಸಾಮಾ ನನ್ನು ಹಿಡ್ಯಲು ಹಾಕಿದ ತಳಪಾಯ, ವ್ಯಯಿಸಿದ ಸಮಯ, ಎಲ್ಲಾ ಕೊನೆಗೆ ಕೆಲಸಕ್ಕೆ ಬಂದು ಒಸಾಮಾನ ಅವಸಾನದಲ್ಲಿ ಮುಕ್ತಾಯವಾಯಿತು, ಒಬಾಮಾಗೆ ಕಿರೀಟ ಪ್ರದಾನ ಮಾಡಲಾಯಿತು. ಕಷ್ಟಪಟ್ಟಿದ್ದು ಬುಶ್, ಹೆಸರು ಒಬಾಮಾಗೆ. “ನನ್ನ ನಿರ್ದೇಶನ” ದ ಮೇರೆಗೆ ನಾವಿಕ “ಸೀಲ್ 6” ವಿಶೇಷ ಪಡೆ ಒಸಾಮಾನನ್ನು ಬಲಿ ಹಾಕಿತು ಎಂದು ಕೊಚ್ಚಿ ಕೊಂಡರು ಅಧ್ಯಕ್ಷ ಮಹೋದಯರು. ಕೆಲವರಿಗೆ ಮುನಿಸು. ಜಾರ್ಜ್ ಬುಶ್ ನನ್ನು ವಂದಿಸೋ ಬದಲು narcissistic ಆಗಿ ಗೋಚರಿಸಿದರು ಒಬಾಮಾ ಎಂದು. ಅದೇನೇ ಇರಲಿ, ಯಾವ ಶುಭ ಕಾರ್ಯಕ್ಕೂ ಏನಾದರೂ ಅಡೆ ತಡೆ, ಟೀಕೆಗಳು ಇದ್ದಿದ್ದೆ. ಇಂದಿನ ಅಮೆರಿಕೆಯ NPR ರೇಡಿಯೋ ಕಾರ್ಯಕ್ರಮದಲ್ಲಿ ಬಿತ್ತರಗೊಂಡ ಒಂದು ಹಾಸ್ಯ ಪ್ರಸಂಗ ಸ್ವಲ್ಪ ಕೇಳಿ.

ಒಸಾಮಾನನ್ನು ಕೊಂದ ನಂತರ ಅಧ್ಯಕ್ಷ ಒಬಾಮಾ ತಮ್ಮ ಪತ್ನಿ ಮಿಷೆಲ್ (ಒಬಾಮಾ ಪತ್ನಿ) ಜೊತೆ ಲೈಂಗಿಕ ಚಕ್ಕಂದ ಆಡಿರಬಹುದೇ ಎಂದು? ಏಕೆಂದರೆ ತನ್ನ ಗಂಡು ಪ್ರಪಂಚವನ್ನೇ ಬೆಚ್ಚಿ ಬೀಳಿಸುತ್ತಿದ್ದ ದುರುಳನೊಬ್ಬನನ್ನು ಹೊಡೆದು ಉರುಳಿಸಿದ ಎಂದರೆ ಹೆಣ್ಣಿಗೆ ಅಥವಾ ಹೆಂಡತಿಗೆ ಒಂದು ರೀತಿಯ “turn on” ಆಗುತ್ತಂತೆ. ಒಂದು ತೆರನಾದ ಉನ್ಮಾದ. ಹಾಗಾಗಿ ಸಹಜವಾಗಿಯೇ ಆಕೆ ತನ್ನಿನಿಯನನ್ನು ಚಂದ್ರಮಂಚಕ್ಕೆ ಎಳೆದು ತಂದು, ಬಾ, ವಿಶ್ವವನ್ನೇ ನಲುಗಿಸಿದವನನ್ನು ಬಲಿ ಹಾಕಿ ಪ್ರಪಂಚವನ್ನು peaceful place ಆಗಿ ಮಾಡಿದ್ದೀಯಾ, ಈಗ ನನ್ನ ಮಂಚವನ್ನು ಪ್ರಪಂಚದಲ್ಲೇ dangerous place ಆಗಿ ಪರಿವರ್ತಿಸು ಎಂದು ಹೇಳಿರಬಹುದಂತೆ. ಹೇಗಿದೆ ಊಹೆ? ಸುತ್ತಿ ಬಳಸಿ ಯಾವುದೇ ವಿಷಯದ ಬಗ್ಗೆ ಚರ್ಚೆ ನಡೆದರೂ ಅದಕ್ಕೆ ಕಾಮನ ಬಣ್ಣ ಲೇಪಿಸಲೇಬೇಕು, ಇದು ಜಗದ (ಹಿರಿಯಣ್ಣನ) ನಿಯಮ.

ಘಟನೆಗಳ ಸಾಮ್ಯತೆ

ಅಮೆರಿಕೆಯ ೯/೧೧ ಮತ್ತು ಭಾರತದ ೨೬/೧೧ ರ ಆಕ್ರಮಣಗಳ ನಡುವೆ ಸಾಮ್ಯತೆ ಇಲ್ಲ ಅಂತ ಅಮೆರಿಕೆಯ ಅಂಬೋಣ. ೯/೧೧/೨೦೦೧ ರಲ್ಲಿ ಅಮೆರಿಕೆಯ ವಿರುದ್ಧ ನಡೆದ ಆಕ್ರಮಣಕ್ಕೂ ನಮ್ಮ ದೇಶದಲ್ಲಿ ಪಾಕಿ ಕೊಲೆಗಡುಕರು ನಡೆಸಿದ ೨೬/೧೧/೨೦೦೮ ರ ಆಕ್ರಮಣಕ್ಕೂ ಸಾಮ್ಯತೆ ಇದೆಯೋ ಇಲ್ಲವೋ ಎಂದು ಸ್ವಲ್ಪ ನೋಡೋಣ.

ಅಮೆರಿಕನ್ನರು ಇಸವಿ ಬರೆಯುವಾಗ ಮೊದಲು ತಿಂಗಳ ನ್ನೂ ನಂತರ ದಿನವನ್ನೂ, ಕೊನೆಗೆ ವರ್ಷವನ್ನೂ ಬರೆಯುತ್ತಾರೆ. ನಾವು ಭಾರತೀಯರು ಮೊದಲು ದಿನವನ್ನೂ, ನಂತರ ತಿಂಗಳನ್ನೂ, ಕೊನೆಗೆ ವರ್ಷವನ್ನೂ ಬರೆಯುತ್ತೇವೆ. ರೂಢಿ ಹೀಗಿರುವಾಗ, ಬಹುಶಃ ಇದನ್ನು ಗಣನೆಗೆ ತೆಗೆದು ಕೊಂಡೋ ಏನೋ  ಅಮೆರಿಕನ್ನರು ಹೇಳಿದ್ದು ಇವೆರಡಕ್ಕೂ ಸಾಮ್ಯತೆ ಇಲ್ಲ ಎಂದು ಅಥವಾ ಸಾಮ್ಯತೆ ಇಲ್ಲ ಎನ್ನುವ ಹೇಳಿಕೆಗೆ economical angle ಕೊಟ್ಟು ನೋಡಿದಾಗ ಅಮೆರಿಕೆಯ ಧಾಳಿಯಲ್ಲಿ ಸತ್ತಿದ್ದು ಶ್ರೀಮಂತರೂ (ನಮ್ಮೊಂದಿಗೆ ಹೋಲಿಸಿಕೊಂಡಾಗ), ಬಹುತೇಕ ಅಮೆರಿಕನ್ನರೂ ಆಗಿದ್ದು ೨೬/೧೧ ರ ಧಾಳಿಯಲ್ಲಿ ಸತ್ತವರು ಬಹುತೇಕ ದರಿದ್ರರೂ, ಯಕಃಶ್ಚಿತ್ ಭಾರತೀಯರು ಎನ್ನುವ ತಾರತಮ್ಯವೂ ಅಡಗಿರಬಹುದೇ? ಗಾಯಕ್ಕೆ ಉಪ್ಪನ್ನು ಉಜ್ಜುವ ಅಮೆರಿಕೆಯ ಈ ಮಾತು ಸಾಲದು ಎನ್ನುವಂತೆ, ಅಮೆರಿಕೆಯ ಹಾಗೆ ನಾವೂ ಪಾಕ್ ಗಡಿ ಅತಿಕ್ರಮಿಸಿ ಕೊಲೆಗಡುಕರನ್ನು ಸದೆ ಬಡಿಯಬೇಕು ಎನ್ನುವ ಬೇಡಿಕೆಗೆ ನಮ್ಮ ಘನ ಸರಕಾರ ಉಲಿದಿದ್ದು “ಅಮೆರಿಕೆಯ ಗಡಿ ಅತಿಕ್ರಮಣದಿಂದ ಈಗಾಗಲೇ ಕಸಿವಿಸಿ ಅನುಭವಿಸುತ್ತಿರುವ ಪಾಕಿಗೆ ಮತ್ತಷ್ಟು ಕಸಿವಿಸಿ ಯುಂಟು ಮಾಡೋ ಯಾವ ಕೆಲಸವನ್ನೂ ನಾವು ಮಾಡೋಲ್ಲ” ಅಂತ. ಅಂದರೆ ನೀವು ನಮ್ಮ ಬೀದಿಗಳಲ್ಲಿ, ರೇಲ್ವೆ ನಿಲ್ದಾಣಗಳಲ್ಲಿ ನಿಮಗೆ ತೋಚಿದ ಹಾಗೆ ರಕ್ತ ಹರಿಸಿದರೂ ನಾವು ಸುಮ್ಮನೆ ಸಹಿಸುತ್ತೇವೆ, ನಮ್ಮ ಜನರ ಪ್ರಾಣ ಹಾನಿಗಿಂತ ನಿಮಗಾಗಬಾರದ ಕಸಿವಿಸಿ ನಮಗೆ ಮುಖ್ಯ, ಇದು ನಮ್ಮ ಸರಕಾರದ ಧೋರಣೆ.

ಚಿತ್ರ, ಘನ ಘೋರ

ಚಿತ್ರಗಳು ನೋಡುವವರ ಮೇಲೆ ಗಾಢ, ಗಂಭೀರ ಪರಿಣಾಮ ಬೀರುತ್ತವೆ. ಆಂಗ್ಲ ಭಾಷೆಯಲ್ಲಿ a picture speaks a thousand words ಮತ್ತು  a picture is worth of thousand words ಎಂತಲೂ ಹೇಳುತ್ತಾರೆ. ಚಿತ್ರಗಳು ಬರೀ ಭಾವನೆಗಳನ್ನ ರೂಪಿಸುವುದಕ್ಕೆ, ಕೆರಳಿಸುವುದಕ್ಕೆ ಮಾತ್ರವಲ್ಲ, ಹೇಳಿದ ವಿಷಯ ಸರಿಯಾಗಿ ಅರ್ಥವಾಗಿ ಮನಸ್ಸಿನಲ್ಲಿ ಶಾಶ್ವತವಾಗಿ ನೆಲೆಯೂರಲೂ ಸಹಕಾರಿಯಾಗುತ್ತವೆ.

ಒಸಾಮಾನನ್ನು ಬಲಿ ತೆಗೆದುಕೊಂಡ ವಿಷಯವನ್ನು ಒಬಾಮಾ ಅಮೆರಿಕೆಗೂ, ವಿಶ್ವಕ್ಕೂ ಹೇಳಿದ ಕೂಡಲೇ ಎಲ್ಲರೂ ಕೇಳಿದ್ದು ಓಕೆ, ಎಲ್ಲಿದೆ ಚಿತ್ರ? ಎಂದು. ಹತ್ತು ವರ್ಷಗಳಿಂದ ಪ್ರಪಂಚ ಪೂರ್ತಿ ಜಾಲಾಡಿಯೂ ಸಿಗದ, ಈ ಹುಡುಕಾಟಕ್ಕೆ ಸುಮಾರು ಒಂದು ಟ್ರಿಲ್ಲಿಯನ್ ಡಾಲರ್ (೧೦೦ ಶತ ಕೋಟಿ ಡಾಲರ್) ಖರ್ಚು ಮಾಡಿಯೂ ಕೈಗೆ ಸಿಗದ ಒಸಾಮಾ ಏಕಾಏಕಿ ಸಿಕ್ಕಿ ಬಿದ್ದಿದ್ದು ಮಾತ್ರವಲ್ಲ ಸತ್ತೂ ಬಿದ್ದ ಎಂದರೆ? picture please, ಎಂದಿತು ಅಮೇರಿಕಾ ಮತ್ತು ವಿಶ್ವ. ಚಿತ್ರ ಘೋರವಾದ ದೃಶ್ಯದಿಂದ ಕೂಡಿದ್ದರಿಂದ ನಾವು ಕೊಡೋಲ್ಲ ಅಂತ ಶ್ವೇತ ಭವನ. gruemsome picture ತೋರಿಸಿ ಒಸಾಮಾನ ಬೆಂಬಲಿಗರನ್ನು ಮತ್ತಷ್ಟು ಹಿಂಸೆಗೆ ಪ್ರಚೋದಿಸಲು ನಾವು ತಯಾರಿಲ್ಲ, ಮಾತ್ರವಲ್ಲ “You know, that’s not who we are.”, ಎಂದರು ಅಮೆರಿಕೆಯ ಅಧ್ಯಕ್ಷರು.

ತನ್ನ ಬದುಕಿನ ಒಂದು ಘಟ್ಟದ ನಂತರ ಘೋರವಾಗಿ ಪ್ರಪಂಚವನ್ನು ಕಾಡಿದ ಒಸಾಮಾ ತನ್ನ ಸಾವಿನಲ್ಲೂ ಘನ ಘೋರನಾದ. ಈ ಶುಕ್ರವಾರ ಹೇಳಿಕೆಯೊಂದರಲ್ಲಿ ತಮ್ಮ ನಾಯಕ ಸತ್ತಿರುವುದನ್ನು ಅಲ್ಕೈದಾ ಖಚಿತಪಡಿಸಿ ಚಿತ್ರಕ್ಕಾಗಿ ಗೋಗರೆಯುತ್ತ್ತಿದ್ದ ಜನರ ಬಾಯನ್ನು ಶಾಶ್ವತವಾಗಿ ಮುಚ್ಚಿಸಿತು.