ಕ್ರಿಕೆಟ್ ಮೈದಾನದ ಡೀಪ್ ಮಿಡ್-ವಿಕೆಟ್ ಮತ್ತು ವೈಡ್ ಲಾಂಗ್ ಆನ್ ಮಧ್ಯೆ ಬರುವ ಅಂಗಳಕ್ಕೆ “ಕೌ ಕಾರ್ನರ್” ಅಂತ ಕರೀತಾರೆ. ಅಂದರೆ “ದನದ ಮೂಲೆ” ಅಂತ. ಈ ಅಂಗಳದ ಕಡೆ ದಾಂಡಿಗ ಶಾಟ್ ಹೊಡೆಯೋದು ಅಪರೂಪವಂತೆ, ಹಾಗಾಗಿ ಈ ಪ್ರದೇಶದಲ್ಲಿ ದನಗಳು ಮೇಯುತ್ತಿದ್ದರೆ ಅವುಗಳಿಗೆ ಚೆಂಡು ಬಡಿಯುವ ಅಪಾಯವಿರುವುದಿಲ್ಲವಂತೆ. ನಿರಾತಂಕವಾಗಿ ಅವು ಆಟ ಸವಿಯುತ್ತಾ ಹುಲ್ಲು ಮೇಯಬಹುದು. ಕ್ರಿಕೆಟ್ ಆಟಕ್ಕೂ ‘ರಾಸು’ ಗಳಿಗೂ ಇರುವ ಸಂಬಂಧ ಏನು ? ಕ್ರಿಕೆಟ್ ಕುರಿ ಕಾಯುವವರ ಆಟ ತಾನೇ? ಕುರಿಯೋ, ರಾಸೋ, ಇವೆರಡೂ ಮೇಯುವುದು ಹುಲ್ಲನ್ನೇ, ಅಲ್ಲವೇ?
Month: ಮಾರ್ಚ್ 2011
ಬೆಟ್ಟಿಂಗ್ ಭಯ
ಭಾರತ ಪಾಕ್ ನಡುವೆ ೨೦೧೧ ರ ವಿಶ್ವ ಕ್ರಿಕೆಟ್ ಕಪ್ ಸೆಮಿಫೈನಲ್ ಮೊಹಾಲಿಯಲ್ಲಿ. ಎಲ್ಲರ ದೃಷ್ಟಿಗಳೂ ಮೊಹಾಲಿ ಕಡೆಗೂ ಮತ್ತು ಕ್ರಿಕೆಟಿಗರ ಕಡೆಗೂ ನೆಟ್ಟಿರುವುದರಲ್ಲಿ ಸಂಶಯವಿಲ್ಲ. ವಿಶ್ವದ ಅತಿ ಸ್ಪರ್ದಾತ್ಮಕ ಕ್ರೀಡೆ ಎಂದರೆ ಭಾರತ ಪಾಕ್ ನಡುವಿನ ಜಿದ್ದಾ ಜಿದ್ದಿನ ಕ್ರಿಕೆಟ್. ಸಹಜವಾಗಿಯೇ ಭಾರತೀಯರಿಗೂ ಪಾಕಿಗಳಿಗೂ ತಮ್ಮ ತಂಡವೇ ಗೆಲ್ಲಬೇಕು ಎನ್ನುವ ಅದಮ್ಯ ಆಸೆ ಮನದಲ್ಲಿದ್ದರೂ ಕ್ರಿಕೆಟ್ ಮೋಹಕವಾಗಿ ರಂಜಿಸಬಲ್ಲುದೆ ಎನ್ನುವುದನ್ನು ಕಾದು ನೋಡಬೇಕು. ಬ್ಯಾಟಿಂಗ್ ನಲ್ಲಿ ಈಗಿನ ಭಾರತವನ್ನ ಮೀರಿಸುವ ತಂಡ ಮತ್ತೊಂದಿಲ್ಲ, ಆದರೆ ಬೌಲಿಂಗ್ ನಲ್ಲಿ ನಮ್ಮ ಸಾಧನೆ ಎಂದಿಗೂ ಉತ್ಕೃಷ್ಟ ಮಟ್ಟದ್ದಾಗಿರಲಿಲ್ಲ. ಆದರೂ ವೇಗದ ಬೌಲಿಂಗ್ ನಲ್ಲಿ ಜಹೀರ್ ಖಾನ್ ಪ್ರದರ್ಶಿಸುತ್ತಿರುವ ಸಾಹಸ ಪ್ರಶಂಸಾರ್ಹವೆ. ಜಹೀರ್ ರನ್ನು ನಾಯಕ ಯಾವ ರೀತಿಯಲ್ಲಿ ಬಳಸಿಕೊಳ್ಳುವರು ಎನ್ನುವುದರ ಮೇಲೆ ಅವಲಂಬಿತ ಈ ಪಂದ್ಯದ ಫಲಿತಾಂಶ. ಯಾರು ಯಾರನ್ನು ಹೇಗೆ ಬೇಕಾದರೂ ಬಳಸಿಕೊಳ್ಳಲಿ, ಕೋಟ್ಯಂತರ ಭಾರತೀಯರ ಆಸೆ ಮಾತ್ರ ಈಡೇರಲಿ.
ಈ ನಡುವೆ ಪಾಕ್ ದೇಶದ ಆಂತರಿಕ ವ್ಯವಹಾರಗಳ ಸಚಿವ ಪಾಕ್ ಕ್ರೀಡಾಗಾರರಿಗೆ ಬೆಟ್ಟಿಂಗ್ ಬಲೆಗೆ ಬೀಳದಂತೆ ಕಟು ಎಚ್ಚರಿಕೆ ನೀಡಿದ್ದಾರೆ. ಪಾಕಿಗಳ ಹಿಂದಿನ ಪುರಾಣ ಓದಿದವರಿಗೆ ಈ ಎಚ್ಚರಿಕೆ ಸಮಂಜಸವಾಗಿ ಕಂಡರೂ ತಾನು ಈ ಪಂದ್ಯದಲ್ಲಿ ಸೋತರೆ ಮಗುಮ್ಮಾಗಿ ಬೆಟ್ಟಿಂಗ್ ಗುಮ್ಮವನ್ನು ತನ್ನ ತಂಡದ ಮೇಲೆ ಹೊರೆಸಿ ಮಾನ ಕಾಯ್ದು ಕೊಳ್ಳುವ ಹುನ್ನಾರವೇನಾದರೂ ಇರಬಹುದೇ ಈ ಎಚ್ಚರಿಕೆ ಘಂಟೆಯ ಹಿಂದೆ? ಒಂದು ರೀತಿಯ pre-emptive ತಂತ್ರ. ಎಷ್ಟಿದ್ದರೂ ರೆಹಮಾನ್ ಮಲಿಕ್ ರಾಜಕಾರಣಿ, ತನ್ನ ಕುಬುದ್ಧಿಯನ್ನು ಎಂದಿಗಾದರೂ ಬಿಟ್ಟಾನೆಯೇ? ಮಂತ್ರಿಯ ಎಚ್ಚರಿಕೆಯ ಬಗ್ಗೆ ಒಬ್ಬ ಓದುಗ ಪ್ರತಿಕ್ರಯಿಸಿದ್ದು ಹೀಗೆ:
ಮಂತ್ರಿಯ ಎಚ್ಚರಿಕೆಯು ತನ್ನದೇ ಮನೆಯ ಮುಂದೆ “ವೇಶ್ಯಾವಾಟಿಕೆ ಕಡ್ಡಾಯವಾಗಿ ನಿಷೇಧಿಸಲಾಗಿದೆ” ಎನ್ನುವ ಸೂಚನಾ ಫಲಕ ನೇತು ಹಾಕಿದಂತೆ. ಹೇಗಿದೆ ಡೈಲಾಗು?
ಚಂದ್ರ ಮತ್ತಷ್ಟು ಹತ್ತಿರ, ಆಪ್ತ
ಚಂದ್ರ ಮತ್ತಷ್ಟು ಹತ್ತಿರ, ಆಪ್ತ. ೧೯ ವರ್ಷಗಳ ನಂತರ ಇಂದು ಚಂದ್ರ ನಮಗೆ ಹತ್ತಿರ ಬಂದಿದ್ದಾನಂತೆ. ಭೂವಾಸಿಗಳಲ್ಲಿ ಅದ್ಯಾವ ಹೆಗ್ಗಳಿಕೆ ನೋಡಿ ಬಂದನೋ ಇನ್ನಷ್ಟು ಸಮೀಪ ನನಗೆ ತಿಳೀದು, ಆದರೆ ಸೂಪರ್ ಮೂನ್, ಮೆಗಾ ಮೂನ್, ಡಬ್ಬಲ್ ಮೂನ್ ಹಾಗೆ ಹೀಗೆ ಎಂದು ಕೆಲದಿನಗಳಿಂದ ಕೇಳುತ್ತಾ ಇದ್ದುದರಿಂದ ಸಂಜೆಯ ದೂರದ ನೆಂಟನಿಗಾಗಿ ಕಾದು ಕೂತೆ. ಮಧ್ಯಾಹ್ನದ ಉರಿ ಸೂರ್ಯ, ಸಂಜೆಯಾಗುತ್ತಾ ಬೆಳ್ಳಿ ಬಣ್ಣ ಪಡೆದುಕೊಂಡು, ಸ್ವಲ್ಪ ನಂತರ ತನ್ನ ಮೈಯ್ಯನ್ನು ಕಿತ್ತಳೆ ಬಣ್ಣಕ್ಕೆ ಬದಲಿಸಿಕೊಂಡು ತನ್ನ ವಧು ಕೆಂಪು ಸಮುದ್ರದ ತೆಕ್ಕೆಗೆ ಜಾರಿದ ಕೆಲ ಹೊತ್ತಿನಲ್ಲೇ ಕಳ್ಳ ನಗೆ ಬೀರುತ್ತಾ ಬಂದ ನಮ್ಮ ಮಾಮ. ಚಂದಾಮಾಮ. ಅರೆ, ಇದೇನಿದು, ೧೯ ವರ್ಷಗಳ ನಂತರ ಹತ್ತಿರ ಬಂದ ಈ ಮಾಮ ಥೇಟ್ ಹಿಂದಿನ ಮಾಮನ ಥರವೇ ಇದ್ದ. ಮುಖದಲ್ಲಿ ಸ್ವಲ್ಪ ಹೆಚ್ಚು ಮಾಂಸ ತುಂಬಿಕೊಂಡು ನಳನಳಿಸುತ್ತಾ ಬರಬಹುದು ಎಂದೆಣಿಸಿದ್ದ ನನಗೆ ಕಾಣಲು ಸಿಕ್ಕಿದ್ದು ಅದೇ age old ಮಾಮ. (ಅಂಕಲ್ ಅಂತ ಅವನನ್ನು ಕರೆಯಲು ನನಗೆ ಇಷ್ಟವಿಲ್ಲ. ಬಸ್ ಸ್ಟಾಂಡ್ ನಲ್ಲಿ ಕೈ ಚಾಚಿ ಬೇಡುವವನೂ, ಬಸ್ಸಿನ ಸೀಟಿಗಾಗಿ ಜಗಳ ಕಾಯುವವರೆಲ್ಲಾ ಅಂಕಲ್ ಗಳೇ ಆದ್ದರಿಂದ ನಮ್ಮ ಚಂದಾ ಮಾಮನಿಗೆ ಆಂಗ್ಲ ಪ್ರಯೋಗ ಬೇಡ.). ನನ್ನ ಬರಿಗಣ್ಣಿಗೆ ಇವನು ಅದೇ ಗಾತ್ರದ ಮಾಮ. ಮುಖದ ತುಂಬಾ freckles ಇದ್ದರೂ ತನ್ನ ಕಾಂತಿಯನ್ನು ತನ್ನನ್ನು ಸುತ್ತುವರೆದ ಮೋಡಗಳಿಗೂ ನೀಡುತ್ತಾ aloof ಆಗಿ ಆಗಸಕ್ಕೆ ಅಂಟಿ ಕೊಂಡ ಮಾಮ. ಬಹುಶಃ ಇವನ ನಿಖರವಾದ ಅಳತೆಗೆ ಸ್ಟೆತಾಸ್ಕೋಪು, ಪೆರಿಸ್ಕೋಪು, ಟೆಲಿಸ್ಕೋಪು ಇವ್ಯಾವುದೂ ನನ್ನಲ್ಲಿಲ್ಲದೆ ಇರೋದ್ರಿಂದ ನನಗೆ ಹಳೇ ಮಾಮನ ದರ್ಶನದ ಭಾಗ್ಯ ಮಾತ್ರಾ. ಸೂಪರ್ ಮೂನ್ ವಿದ್ಯಮಾನದಲ್ಲಿ ಸೂರ್ಯ , ಭೂಮಿ ಮತ್ತು ಚಂದಿರರು ಒಂದೇ ರೇಖೆಯಲ್ಲಿ ಇದ್ದು ಚಂದ್ರ ಮತ್ತು ಭೂಮಿಗಳು ಸ್ವಲ್ಪ ಸಮೀಪಕ್ಕೆ ಬರುತ್ತವಂತೆ. ಸೂಪರ್ ಮೂನ್ ಕಾರಣ, ಪ್ರವಾಹ, ಭೂಕಂಪ, ಜ್ವಾಲಾ ಮುಖಿ, ಬಿರುಗಾಳಿಗಳೂ ಸಂಭವಿಸಬಹುದಂತೆ. ಬ್ರೇಕಿಂಗ್ ನ್ಯೂಸ್ ನಲ್ಲಿ ಇದುವರೆಗೂ ಯಾವುದೇ ಅಹಿತಕರ ನೈಸರ್ಗಿಕ ಅವಘಡ ಸಂಭವಿಸಿಲ್ಲ.
ಒಂದೇ ಒಂದು ಅವಘಡ ಏನೆಂದರೆ ಕಳೆದ ಹಲವು “ವಿಶ್ವಕಪ್ ಪಂದ್ಯಾವಳಿ” ಯ ೩೫ ಪಂದ್ಯಗಳಲ್ಲಿ ಮೊಟ್ಟ ಮೊದಲ ಬಾರಿಗೆ ಆಸ್ಟ್ರೇಲಿಯಾ ಸೋಲನ್ನು ಕಂಡಿದ್ದು ಅದೂ ದುರ್ಬಲ, ಪಾಕ್ ತಂಡದ ಕೈಯ್ಯಲ್ಲಿ.
ಹೀಗೇ ಸುಮ್ಮನೆ: ಸೂಪರ್ ಮೂನ್ ಎನ್ನುವ ಪದವನ್ನು ಶುರು ಮಾಡಿದ್ದು HOROSCOPE ಪತ್ರಿಕೆಯ ಜ್ಯೋತಿಷ್ಯಕಾರ Richard Nolle.
೯೯೯೯
ಒಂಭತ್ತು ಸಾವಿರದ ಒಂಭೈನೂರ ತೊಂಭತ್ತೊಂಭತ್ತು, (೯೯೯ ); ಈ ಫಿಗರ್ ನೋಡಿ “ಬಾಟಾ” ದವರ ಎಕ್ಕಡ ಅಥವಾ ಬೂಟ್ ಗಳು ನೆನಪಿಗೆ ಬಂತೇ? ಹೌದು ಅವರೇ ತಾನೇ ಈ ರೀತಿಯ ಫುಲ್ ನಂಬರ್ ಗಳ ದಡದ ತುದಿಗೆ ಬಂದು ನಿಲ್ಲೋದು? ಸಾವಿರ ಎಂದು ಬಿಟ್ಟರೆ ಜನ ಹೌಹಾರುವರು ಎಂದು ೯೯.೯೯ ಅಂತ ಬೆಲೆ ಇಟ್ಟು ನೂರು ರೂಪಾಯಿ ಪೂರ್ತಿಯಾಗಿ ಪೀಕಿಸಿ ಕೊಂಡು ಒಂದು ಪೈಸೆಯ ಚೇಂಜ್ ಸಹ ಕೊಡದೆ ನೂರು ರೂಪಾಯಿ ಕೊಟ್ಟೆ ಈ ಚಪ್ಪಲಿಗೆ ಎಂದು ಹೇಳಲೂ ಭಯ ಆಗುವಂತೆ ಮಾಡಿದ್ದು ? ನೂರು ರೂಪಾಯಿಗೆ ಒಂದು ಪೈಸೆ ಕಡಿಮೆ ಕೊಟ್ಟು ನೂರು ಕೊಟ್ಟೆ ಎಂದು ಹೇಳೋದು ನಾಗರೀಕರ ಲಕ್ಷಣ ಅಲ್ಲ, ಅಲ್ಲವೇ? ಹಾಳು ಪುರಾಣ ಬಿಡಿ, ಈ ೯೯೯೯ ಬಾಟಾ ದ ಎಕ್ಕಡ ಬೆಲೆಯೂ ಅಲ್ಲ, ಯಾವುದೋ ಎಮೆರ್ಜೆನ್ಸಿ ನಂಬರ್ ಸಹ ಅಲ್ಲ. ಇದು ನನ್ನ ಪ್ರೀತಿಯ ಊರಿನ, ಪ್ರೀತಿಯ ಹಳೇ ಸೇತುವೆ ಮೇಲೆ ದೌಡಾಯಿಸಿದ ಜನರ ಸಂಖ್ಯೆ. ಅಂದರೆ ಹಳೇ ಸೇತುವೆ ಬ್ಲಾಗ್ ಅನ್ನು ಇದುವರೆಗೆ ೯೯೯೯ ಜನ ನೋಡಿದ್ದಾರೆ. ಒಂದು ರೀತಿಯ ಶುಭ ಸಂಖ್ಯೆ, ಈ ಶುಭ ಕಾಮನ ಹುಣ್ಣಿಮೆಯಂದು. ಸೂಪರ್ ಮೂನ್ ಹೇಳಿ ಕೊಳ್ಳುವಂಥ ಸೂಪರ್ ಆಗಿ ಕಂಗೊಳಿಸದಿದ್ದರೂ ಈ ಸಂಖ್ಯೆ ಮಾತ್ರ ನನ್ನಲ್ಲಿ ಒಂದು ತೆರನಾದ ಸಂಚಲನ ತಂದಿದ್ದಂತೂ ನಿಜವೇ.
ನನ್ನ ಬರಹ ನೋಡಿದ ಜನರಿಗೆ ನಾನು ಬರಹಗಾರ ಅಲ್ಲ ಎಂದು ಅನ್ನಿಸಿದರೆ ನನ್ನ ಮೇಲೆ ಸೂಪರ್ ಮೂನ್ ಆಗಲಿ, ವಿಶಾಲವಾದ ಆಗಸವಾಗಲಿ ಕಳಚಿ ಬೀಳೋಲ್ಲ. ನನ್ನಲ್ಲಿ ಕೀಳರಿಮೆ ಸಹ ಮನೆ ಮಾಡೋಲ್ಲ. ಯಾರೋ ಒಬ್ಬರು ಹೇಳಿದಂತೆ ನಾನು ಗಟ್ಟಿ ಮನುಷ್ಯ. ಎಷ್ಟಿದ್ದರೂ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಇರುವ ನಗರಿಯವನಲ್ಲವೇ ನಾನು?
ಪುಕ್ಕಟೆ ಸಿಗುವ ಆಸೆಗೆ ಬಲಿ ಬಿದ್ದು ಶುರು ಮಾಡಿದ್ದು ಈ ಧಂಧೆ. ಬರೆಯುವ ಧಂಧೆ. ಅದೇನು ಪುಕ್ಕಟೆ ಅಂತ ಜೊಳ್ಳು ಸುರಿಸಿದಿರಾ? ನಾಚಿ ಕೊಳ್ಳಬೇಡಿ, ಮನುಷ್ಯನ ಜಾಯಮಾನವೇ ಅದು. ಪುಕ್ಕಟೆ ಸಿಕ್ಕಿದ್ದು ಬ್ಲಾಗ್ ಆರಂಭಿಸುವ ಸೌಲಭ್ಯ. ಕರ್ನಾಟಕ ರಾಜ್ಯದ ೧೦ ಲಕ್ಷದ, ೧೦ ಲಕ್ಷ ಪೂರ್ತಿ ಕೈಗೆ ಬರದ ಲಾಟರಿಯಂತೂ ಅಲ್ಲ. ವರ್ಡ್ಪ್ರೆಸ್, ಬ್ಲಾಗ್ಸ್ಪಾಟ್, “tumblr” ಮುಂತಾದವರು ಜನರಿಗೆ ತಮ್ಮ ಬರವಣಿಗೆಯ ತೀಟೆ ತೀರಿಸಿಕೊಳ್ಳುವುದಕ್ಕಾಗಿ ಬ್ಲಾಗ್ ಸೈಟ್ ಆರಂಭಿಸಿಕೊಳ್ಳುವ ಸವಲತ್ತು ನೀಡಿದಾಗ ಮುಗಿಬಿದ್ದು ಕೈ ಚಾಚಿದವರಲ್ಲಿ ನಾನೂ ಒಬ್ಬ. ಬ್ಲಾಗಿಗೊಂದು ಹೆಸರು ಕೊಡಬೇಕು. ಚಿತ್ರ ವಿಚಿತ್ರ ಹೆಸರುಗಳು ಮನಃ ಪಟಲದ ಮೇಲೆ ಹಾದು ಹೋದರೂ ಸೊರಗಿದ ಭದ್ರಾ ನದಿಯ ಸಂಗಾತಿ ಹಳೇ ಸೇತುವೆ ಹೆಸರನ್ನು ಇಟ್ಟೆ. ಶಾಲೆಗೆ ಚಕ್ಕರ್ ಹೊಡೆದು ಇದೇ ಹಳೇ ಸೇತುವೆ ದಾಟಿ ಕನಕ ಮಂಟಪಕ್ಕೆ ಬಂದು ಪುಢಾರಿಗಳ ಭಾಷಣ ಕೇಳುತ್ತಿದ್ದೆ. ಎಲ್ರೂ ಚಕ್ಕರ್ ಹೊಡೆದು ಸಿನೆಮಾಕ್ಕೂ, ಕ್ರಿಕೆಟ್ ಆಡೋಕ್ಕೂ ಹೋದ್ರೆ ಈ ಅಬ್ಬೇಪಾರಿ ಏನು ಪುಡ್ಹಾರಿ, ಗಿಡ್ಹಾರಿ ಅಂತಿದ್ದಾನೆ ಎಂದು ಮೂಗಿನ ಮೇಲೆ ಬೆರಳಿಡ ಬೇಡಿ. ರಾಜಕಾರಣ ಎಂದರೆ ೧೯೭೭ ರಿಂದ ನನಗೆ ತುಂಬಾ ಇಷ್ಟ. ನನ್ನ ಪಕ್ಷ ಜನತಾ ಪಕ್ಷ. ಮೊರಾರ್ಜಿ ಭಕ್ತ. ಚರಣ್ ಸಿಂಗ್ ಮೊರಾರ್ಜಿಗೆ ಕೈ ಕೊಟ್ಟಾಗ ತಲೆ ಮೇಲೆ ಕೈಹೊತ್ತು ಕೂತ ಮಿಡ್ಲ್ ಸ್ಕೂಲ್ ಬಾಲಕ ನಾನು. ಮಾರ್ವಾಡಿ ಸ್ನೇಹಿತನೊಬ್ಬ ಇಂದಿರಾ ನಮ್ ತಾಯಿ ಎಂದಾಗ, ನಾನೇಕೆ ಇವನನ್ನು ಮೀರಿಸಬಾರದು ಎಂದು ಮೊರಾರ್ಜಿ ನಮ್ಮಪ್ಪ ಎಂದು ಹೇಳಿ embarrass ಆದವನು. ನನ್ನ ಬ್ಲಾಗ್ ನ “ಹಳೇ ಸೇತುವೆ” ಹೆಸರು ಕೆಲವರಿಗೆ ಹಿಡಿಸಿತೂ ಕೂಡಾ, ಅದರೊಂದಿಗೆ ಸವಾರಿಯಾಗಿ ಬಂದ ಬ್ಲಾಗ್ ಪೋಸ್ಟ್ ಗಳೂ ಕೆಲವರಿಗೆ ಇಷ್ಟವಾದವು. ಇನ್ನೂ ಕೆಲವರಿಗೆ “ತುಂಬಾ” ಇಷ್ಟವಾಗಿ ಅಜೀರ್ಣಕ್ಕೂ ದಾರಿ ಮಾಡಿ ಕೊಟ್ಟಿತು. ಒಂದಂತೂ ಸತ್ಯ, ಮೆಚ್ಚಿದವರು, ಮೆಚ್ಚದವರು ನನ್ನಲ್ಲಿ ಹುರುಪನ್ನಂತೂ ತುಂಬಿದರು ನನ್ನ ಬರಹ ಮುಂದುವರೆಯಲಿ ಎಂದು. ಕನ್ನಡಿಗ ಉದಾರಿ, ಸಹೃದಯಿ ಎನ್ನುವ ಮಾತಿಗೆ ನನ್ನ ಬಡ, ಸುಣ್ಣದ ಕಲ್ಲಿನ ಸೇತುವೆಗೆ ಬಂದ ಪ್ರತಿಕ್ರಿಯೆಗಳೇ ಸಾಕ್ಷಿ.
ಮೆಚ್ಚಿದವರಿಗೂ, ಮೆಚ್ಚದವರಿಗೂ ನನ್ನ ಸವಿನಯ, ಗೌರವಪೂರ್ವಕ ಪ್ರಣಾಮಗಳು.
ಕುರಿಗಳು ಸಾರ್, ಕುರಿಗಳಲ್ಲಾ ಸಾರ್
ಪ್ರಾಣಿಗಳಿಗೆ ಹಿಂಸೆ ಆದಾಗ ಪ್ರಾಣಿ ದಯಾ ಸಂಘಕ್ಕೆ ಕರೆ ಕೊಡೋದು ವಾಡಿಕೆ. ಬಂದ್ ಗಾಗಿ ಕರೆ ಅಲ್ಲ, ಬಂದು ಪ್ರಾಣಿಯನ್ನು ಉಳಿಸಿ ಅಂತ ಹೇಳೋಕೆ ಕರೆ. ಜಟಕಾ ಗಾಡಿಯ ಮಾಲೀಕ ಬಳಲಿದ, ಹಸಿದ, ನಿತ್ರಾಣವಿಲ್ಲದೆ ಒಲ್ಲೆ ಎಂದರೂ ಬಿಡದೆ ಬಾರು ಕೋಲಿನಿಂದ ಬಾರಿಸಿ ತನ್ನ ಗಾಡಿಯಲ್ಲಿರುವ ಪೋಸ್ಟ್ ಮಾರ್ಟಂ ದಾರಿ ಹಿಡಿದ ಹೆಣ ವನ್ನು ಅದು ಸೇರಬೇಕಾದ ಸ್ಥಳ ತಲುಪಿಸಲು ಕುದುರೆಗೆ ಕೊಡುವ ಹಿಂಸೆ ನೋಡಿ, ನೋಡಲಾರದೆ ಪ್ರಾಣಿ ದಯಾ ಸಂಘಕ್ಕೆ ಬುಲಾವ್ ಕೊಡೋದು. ಹೌದು ಪ್ರಾಣಿಗಳಿಗೆ ದಯೆ ತೋರಿಸಬೇಕಾದ್ದೆ. ಆದರೆ ಈ ಬುಲಾವ್ ಬರೀ ಕುದುರೆ ಕತ್ತೆ ನಾಯಿಗಳಿಗೆ ಮಾತ್ರ ಏಕೆ, ಕೋಳಿ ಕುರಿಗಳಿಗೂ ಏಕಿಲ್ಲ ಅವೂ ಪ್ರಾಣಿಗಳೇ ಅಲ್ಲವೇ ಎಂದು ಕೆಲವರ ಸಂಶಯ. ಒಬ್ಬರ ಸಂಶಯಕ್ಕೆ ಪಾರ್ಶ್ವ ಉತ್ತರವಾಗಿ ಮತೊಬ್ಬರು ಹೇಳಿದರು, ಕುರಿ ಏನೋ ಪ್ರಾಣಿಯೇ, ಆದರೆ ಕೋಳಿ ಪ್ರಾಣಿಯಲ್ಲ, ಅದು ಪಕ್ಷಿ ಎಂದು. ಪ್ರಾಣಿಯೋ , ಪಕ್ಷಿಯೋ ಪ್ರಾಣವಂತೂ ಇದೆಯಲ್ರೀ ಅಂತೀರಾ? ಸೊಳ್ಳೆಗೂ ಇದೆ ಪ್ರಾಣ, ಹಾಗೆಯೇ ತಿಗಣೆಗೂ ಸಹ, ಅಲ್ವರ? ಸೊಳ್ಳೆಯನ್ನು ಕೊಲ್ಲಲು ಈಗ ಚೀನೀ ತಂತ್ರಜ್ಞಾನ ಉಪಯೋಗಿಸುತ್ತಿಲ್ಲವೇ ನಾವು. ಟೆನ್ನಿಸ್ ಬೆಡಗಿ ಸಾನಿಯಾ ಥರ ಎಲೆಕ್ಟ್ರೋನಿಕ್ ಬ್ಯಾಟ್ ಹಿಡಿದು ಚಟ ಚಟ, ಚಟ, ಚಟಾ ಅಂತ ಅಟ್ಟಾಡಿಸಿಕೊಂಡು ಸುಡುತ್ತಿಲ್ಲವೇ ಸೊಳ್ಳೆ ಗಳನ್ನು? ನಮ್ಮ ಕಿವಿಗಳ ಸುತ್ತಾ ಹಾರುತ್ತಾ, ತಪ್ಪಿಸಿಕೊಳ್ಳುತ್ತಾ, ಒಂದು ರೀತಿಯ ಅಣಕದ ಶಬ್ದ ಮಾಡಿ ನಂತರ ನಮ್ಮ ರಕ್ತ ಹೀರುವ ಸೊಳ್ಳೆಗಳನ್ನು ಹಾಗೆ ಬಿಡಿ ಅಂತೀರಾ ಎಂದು ಕೇಳಬೇಡಿ. back hand, fore hand, ಹೀಗೆ ನಾನಾ ರೀತಿ ರಾಕೆಟ್ ತಿರುಗಿಸಿ ಫ್ರೈ ಮಾಡಿ ಸೊಳ್ಳೆಗಳನ್ನು. ಹಾಗಾದರೆ ಈ ಮೇಲಿನ ಪುರಾಣ ಯಾಕೆ? ಕುರಿ, ಕೋಳಿ, ಪ್ರಾಣಿ ದಯೆ, ಬ್ಲಾ, ಬ್ಲಾ, ಬ್ಲಾ ಎಂದಿರಾ?
ಈಗ ಪ್ರಾಣಿ ಹಿಂಸೆ ವಿಷಯ ಬಂದಾಗ ಕೆಲವರು by choice ಅಥವಾ by taste ಕಾರಣ ಆರಿಸಿಕೊಂಡ ಆಹಾರ ಪದ್ಧತಿಗೆ ಕೊನೆ ಹಾಡಿ ಕುರಿ ಕೋಳಿ ಭಕ್ಷ್ಯ ಮಾಡುವ ಪರಿಪಾಠಕ್ಕೆ ನಾಂದಿ ಹಾಡಬೇಕು. ನಮ್ಮ ದೇಶದಲ್ಲಿ ಕುರಿ ಕೋಳಿ ಹಂದಿ ಮುಂತಾದುವುಗಳ ಹಿಂಸೆಗೆ ನಾಂದಿ ಹಾಡಿದರೆ ವಿಎಟ್ನಾಮ್, ಚೈನಾ, ಮುಂತಾದ ದೇಶಗಳಲ್ಲಿ ನಾಯಿ, ಜಿರಲೆ ಇವುಗಳ ಹತ್ಯೆಗೂ ಹಾಡಬೇಕು ಇತಿಶ್ರೀ. ಅಯ್ಯೋ ನಾಯ್ ತಿಂತಾರಾ ಚೈನಾದಲ್ಲಿ ಎಂದು ಮೂಗೆಳೆಯಬೇಡಿ. ಆರ್ಥಿಕ ಸಂಕಷ್ಟ ಜನರನ್ನು ಬಡಿದು ಕುರಿ ಕೋಳಿ, ಹಂದಿ ದುಬಾರಿ ಯಾದಾಗ ನಾಯಿಗಳು “ಮೆನ್ಯು ಪಟ್ಟಿ”- menu- ಗೆ ಬಡ್ತಿ ಪಡೆದು ಕೊಳ್ಳುತ್ತವೆ ಕೆಲವು ದೇಶಗಳಲ್ಲಿ. ಕುರಿ ಕೋಳಿ ಹತ್ಯೆ ಕುರಿತ ಚರ್ಚೆಯಲ್ಲಿ ಓದುಗರೊಬ್ಬರು ಕೇಳಿದರು, “ಪ್ರಾಣ ಇರುವುದೆಲ್ಲ ಪ್ರಾಣಿಗಳೇ ….. ಜಗದೀಶ್ ಚಂದ್ರಬೋಸರು ತೋರಿಸಿದ್ದಾರೆ ಸಸ್ಯಗಳೀಗೂ ಪ್ರಾಣವಿದೆ ಹಾಗೂ ಅವೂ ಉಸಿರಾಡುತ್ತವೆ ಎಂದು. ಹಾಗಾಗಿ ಪ್ರಾಣಿ ದಯಾಸಂಘದವರು ಪ್ರಾಣವಿರುವ ಎಲ್ಲವನ್ನೂ ರಕ್ಷಿಸಲು ಮುಂದಾಗಬೇಕು ಎನ್ನುವುದು ನನ್ನ ಕೋರಿಕೆ!!!!!” ಓಹ್, ಇದೆಂಥಾ ಬಾಂಬ್ ಅಪ್ಪಾ! ಹಾಗಾದರೆ ನಾವು ತಿನ್ನೋದೇನನ್ನು? ನನಗೆ ಗೊತ್ತಿಲ್ಲ. ಆದರೆ ಅದುನ್ ತಿನ್ನೋದ್ ಬ್ಯಾನ್ ಮಾಡಿ, ಇದುನ್ ತಿನ್ನೋದನ್ ಬ್ಯಾನ್ ಮಾಡಿ ಎನ್ನುವವರಿಗೆ ಮತ್ತೊಂದು ಉತ್ತರ ಹೀಗೆ..
“ಅನುಕೂಲ ಶಾಸ್ತ್ರ” ದ proponent ಗಳಿಗೆ ತಮ್ಮದೇ ಆದ ತರ್ಕಗಳಿರುತ್ತವೆ, ಆ ತರ್ಕಗಳಿಗೆ ವಿವೇಚನೆ ಅಥವಾ reasoning ಕೆಲಸಕ್ಕೆ ಬಾರದ ಸಂಗತಿಗಳು, ಹಾಗೆಯೇ “ಅನುಕೂಲ ಶಾಸ್ತ್ರ” thrive ಆಗೋದು ನಂಬರ್ ಗೇಂ ನಲ್ಲಿ. ಸಂಖ್ಯೆ ಹೆಚ್ಚಿದ್ದರೆ ಅವರು ಹೇಳಿದ್ದೇ ಸರಿ, ಈ ವಿಷಯದಲ್ಲಿ ಮಾತ್ರ ಇವರುಗಳು truly democratic.
ತುರೇ ಮಣೆ ಕಯ್ಯಿಂದ ನಿರ್ದಯವಾಗಿ ತುರಿಸಿಕೊಳ್ಳುವ ತೆಂಗಿನಕಾಯಿ ಮತ್ತು ಹರಿಯುವ ಚಾಕುವಿನ ಅಡಿ ದಯನೀಯವಾಗಿ ನಲುಗುವ ಈರುಳ್ಳಿ ಬಗ್ಗೆ ಇವರುಗಳಿಗೆ ಕನಿಕರ ಭಾವ ತೋರಿದಾಗ ಅವುಗಳನ್ನು ಒಳಗೊಂಡ ತಿನಿಸಿಗೂ ಬರುತ್ತದೆ ಸಂಚಕಾರ.
ಈಗ ಚರ್ಚೆ ಪರಿಸಮಾಪ್ತಿ. ನಡೀರಿ ಮಿಲ್ಟ್ರಿ ಹೋಟೆಲ್ ಕಡೆ. ಚೀನಿಯರು ನಮ್ಮ menu ಮೇಲೆ ಇನ್ನೂ ಧಾಳಿ ಮಾಡಿಲ್ಲ ತಾನೇ? ಇಲ್ದಿದ್ರೆ, ನಾಯ್, ಜಿರಲೆ….ಅಯ್ಯೋ….
ಜಪಾನ್ ದುರಂತ ಮತ್ತು ಹಾಸ್ಯ
ಜಪಾನ್ ದುರಂತದಿಂದ ದಿಗ್ಭ್ರಾಂತವಾದ ವಿಶ್ವ ಜಪಾನೀಯರಿಗೆ ತಮ್ಮ ಅನುಭೂತಿ, ಸಂತಾಪ, ಪ್ರಾರ್ಥನೆಗಳನ್ನು ಒಂದು ಕಡೆ ಅರ್ಪಿಸುತ್ತಿದ್ದರೆ ಮತ್ತೊಂದು ಕಡೆ ಅಲ್ಲಿನ ಸಾವು ನೋವಿನ ಬಗ್ಗೆ ಯಾವ ನೋವೂ ಇಲ್ಲದೆ ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಕೀಳು ಅಭಿರುಚಿಯ ಜೋಕುಗಳನ್ನು ಸಿಡಿಸುತ್ತಿದ್ದಾರೆ ಕೆಲವರು.
ಅಮೆರಿಕೆಯ ಚಿತ್ರ ಸಾಹಿತ್ಯ ಲೇಖಕನೊಬ್ಬ ಜಪಾನ್ ದುರಂತದ ಬಗ್ಗೆ ಟ್ವೀಟಿಸಿದ್ದು ಹೀಗೆ; “ಜಪಾನಿನ ಭೂಕಂಪನದ ಬಗ್ಗೆ ಒಳ್ಳೆಯ ಭಾವನೆ ಬರಬೇಕಾದರೆ ಪರ್ಲ್ ಹಾರ್ಬರ್ ಸಾವಿನ ಸಂಖ್ಯೆ ಬಗ್ಗೆ ಗೂಗ್ಲಿಸಿ ನೋಡಿ”
೧೯೪೧ ರಲ್ಲಿ ಜಪಾನೀ ನಾವಿಕ ಪಡೆ ಅಮೆರಿಕೆಯ ಹವಾಯಿ ದ್ವೀಪದ ಪರ್ಲ್ ಹಾರ್ಬರ್ ಮೇಲೆ ನಡೆಸಿದ ಅಚ್ಚರಿದಾಯಕ ಆಕ್ರಮಣದಲ್ಲಿ ೨೦೦೦ ಸಾವಿರಕ್ಕೂ ಹೆಚ್ಚು ಜನ ಸತಿದ್ದರು. ಅದಕ್ಕೂ ಹೆಚ್ಚಾಗಿ ಈ ಆಕ್ರಮಣ ಅಮೆರಿಕೆಯ ಸೇನಾ ಪ್ರತಿಷ್ಠೆಗೆ ಭಾರೀ ಪೆಟ್ಟನ್ನೂ ನೀಡಿತ್ತು. ಈ ಆಕ್ರಮಣವನ್ನು ಗಮನದಲ್ಲಿಟ್ಟು ಕೊಂಡು ಪ್ರಸಕ್ತ ನೈಸರ್ಗಿಕ ವಿಕೋಪ ಕಾರಣ ಜಪಾನಿನಲ್ಲಿ ಸಂಭವಿಸಿದ ಅಗಾಧ ಸಾವು ನೋವಿಗೆ ಈತನ ಮನಸ್ಸು ಪ್ರತಿಸ್ಪಂದಿಸಲು ವಿಫಲವಾಯಿತು. ರಾಜಕೀಯ ಕಾರಣಗಳಿಗಾಗಿ ನಡೆದ ಆಕ್ರಮಣಕ್ಕೆ ಸೇಡು ಎನ್ನುವಂತೆ ಟ್ವೀಟಿಸುವ ಈತನಿಗೆ ಸಂದು ಹೋದ ಚರಿತ್ರೆ ಬಗ್ಗೆ ಮರುಗುವುದು ಹುಂಬತನ ಎನ್ನುವುದು ತಿಳಿಯದೆ ಹೋಯಿತು. ಇಂದು ಜಪಾನಿನ ಮೇಲೆ ಎರಗಿದ ನಿಸರ್ಗ ನಾಳೆ ತನ್ನ ದೇಶದ ಮೇಲೂ ಎರಗಬಾರದು ಎನ್ನುವ ಖಾತರಿ ಇಲ್ಲ ಎನ್ನ್ವುಉದು ಈ ಸಾಹಿತಿಗೆ ಅರಿಯದೆ ಹೋಯಿತು.
ಮೇಲೆ ಹೇಳಿದ ಚಿತ್ರಸಾಹಿತಿಯ ಟ್ವೀಟ್ ಬಗ್ಗೆ ಗುಲ್ಲೆದ್ದು, ಪ್ರತಿಭಟನೆ ಬಂದಾಗ ಅವನು ಹೇಳಿದ್ದು, ನಾನು ಟ್ವೀಟಿ ಸುವಾಗ ೨೦೦ ಜನ ಮಾತ್ರ ಸತ್ತಿದ್ದರು, ಈಗ ೧೦ ಸಾವಿರಕ್ಕೆ ಮುಟ್ಟಿದೆ ಸಾವಿನ ಸಂಖ್ಯೆ, ನನ್ನ ಸಂವೇದನಾ ರಹಿತ ಕಾಮೆಂಟ್ ಗಳಿಗೆ ಕ್ಷಮೆಯಿರಲಿ”. ೨೦೦ ಜನ ಸತ್ತರೆ ಈತನಿಗೆ ದೊಡ್ಡ ವಿಷಯವಲ್ಲ. ಅದು ಗಂಭೀರವೂ ಅಲ್ಲ. ಅಮೆರಿಕೆಯ ದಿವಂಗತ ಸೆನಟರ್ ಟೆಡ್ ಕೆನಡಿಯ ಸಾಕು ನಾಯಿ “ಸ್ಪ್ಲಾಶ್” ಇತ್ತೀಚೆಗೆ ಸತ್ತಾಗ ಅದು ದೊಡ್ಡ ಸುದ್ದಿ. ಭೂಕಂಪದಲ್ಲಿ ಸತ್ತ ಜನರಿಗೆ ತಮಾಷೆಯ ಟ್ವೀಟ್. ಇದು ಸಂಸ್ಕಾರ.
ಈಗ ಮತ್ತೊಬ್ಬ ಹಾಸ್ಯನಟನ ಹಾಸ್ಯದ ಟ್ವೀಟ್ ನೋಡಿ; “ಜಪಾನೀಯರು ತುಂಬಾ ಮುಂದುವರಿದವರು, ಅವರು ಸಮುದ್ರ ತೀರಕ್ಕೆ ಹೋಗುವುದಿಲ್ಲ, ಬದಲಿಗೆ ತೀರವೇ ಅವರಿದ್ದಲ್ಲಿಗೆ ಬರುತ್ತದೆ”. ದೈತ್ಯಾಕಾರದ ಸುನಾಮಿ ಅಲೆಗಳು ೨೦೦ ರಿಂದ ೫೦೦ ಕಿಲೋ ಮೀಟರ್ ವೇಗದಲ್ಲಿ ಸೆನ್ಡಾಯ್ ನಗರದ ಮೇಲೆ ಅಪ್ಪಳಿಸಿ ಹತ್ತಾರು ಸಾವಿರ ಜನ ಸತ್ತಾಗ ಬಂದ ಶೋಕತಪ್ತ ಟ್ವೀಟ್ ಇದು. ಇದು ಬಿಳಿಯರಿಗೆ ಹಾಸ್ಯ. ಅಭಿವ್ಯಕ್ತಿ ಸ್ವಾಂತ್ರ್ಯ. ಬಿಳಿಯರಲ್ಲದ ಜನರ ಮೇಲೆ ಅವರಿಗಿರುವ ಅನುತಾಪ ಅಷ್ಟಕ್ಕಷ್ಟೇ. ಜಪಾನೀಯರನ್ನೂ, ಚೀನೀಯರನ್ನೂ ಹಳದಿ ಚರ್ಮದವರು ಎಂದು ತಮಾಷೆ ಮಾಡುತ್ತಾರಂತೆ ಪಾಶ್ಚಾತ್ಯರು.
ಆಧುನಿಕ ಬದುಕಿನ blackberry ಸಂಸ್ಕೃತಿ ಕಾರಣ ಮನುಷ್ಯ ಮತ್ತೊಬ್ಬರ ಕಷ್ಟಗಳಿಗೆ ಸ್ಪಂದಿಸಲು, ಅನುಕಂಪ ತೋರಲು ಸೋಲುತ್ತಿದ್ದಾನೆ ಎಂದರೆ ಉತ್ಪ್ರೇಕ್ಷೆ ಆಗಬಹುದೇ?
ಭೂತ ಕಾಲದ ಬಗ್ಗೆ ತಲೆ ಕೆಡಿಸಿಕೊಳ್ಳುವವರಿಗೆ ಒಬ್ಬ ಮಹನೀಯ ಹೇಳಿದ್ದು;
the past is a foreign country; they do things differently there
ನೀವು ಪುಸ್ತಕದ ನರಿಗಳೋ?
ಪುಸ್ತಕದ ಹುಳುವಿನ ಬಗ್ಗೆ ಕೇಳಿರಲೇಬೇಕಲ್ಲವೇ ನೀವು? ಏನೇ ಅನ್ನಿ ಅತಿಯಾಗಿ ಓದುವವರನ್ನು, ಪುಸ್ತಕಗಳನ್ನು ಪ್ರೀತಿಸುವವರನ್ನು ಹುಳು ಎಂದು ಮಾತ್ರ ಜರೆಯಬಾರದಿತ್ತು ನಮ್ಮ ಹಿರಿಯರು. ‘ದೇಶ ಸುತ್ತು ಇಲ್ಲಾ ಕೋಶ ಓದು’ ಎಂದ ಸಮಾಜವೇ ಈ ಹುಳು ಎನ್ನುವ ಪದವನ್ನು ಓದುಗನಿಗೆ ದಯಪಾಲಿಸಿದ್ದು ಅಚ್ಚರಿಯೇ ಸರಿ. ಜ್ಞಾನಾರ್ಜನೆಯ ಮೊದಲ ಮೆಟ್ಟಿಲೇ ಓದು. ಪವಿತ್ರ ಕುರಾನ್ ಅವತೀರ್ಣವಾಗಿದ್ದು ಈ ಆರಂಭದ ಸಾಲಿನಿಂದ. “ಓದು, ನಿನ್ನನ್ನು ಸೃಷ್ಟಿಸಿದ ಭಗವಂತನ ನಾಮದಿಂದ”. ಓದಿನ ಬಗೆಗಿನ ವರ್ಣನೆ, ಕಲ್ಪನೆಗಳು ಹೀಗಿರುವಾಗ ಹುಳು ನುಸುಳಿದ್ದಾದರೂ ಎಲ್ಲಿಂದ? ಅಥವಾ ಪುಸ್ತಕದ ಹುಳು ಎಂದು ಕರೆಯುವಾಗ ಅದರಲ್ಲಿ ಗೂಢಾರ್ಥವೇನಾದರೂ ಅವಿತಿರಬಹುದೇ? ಏಕೆಂದರೆ ಹಳೇ ತಲೆಮಾರಿನ ತಲೆ ಯೋಚಿಸುವ ರೀತಿಯೇ ಬೇರೆ ನೋಡಿ.
ಎಲ್ಲರಿಗೂ ತಿಳಿದಂತೆ ಕಾಗದದ ಉತ್ಪಾದನೆ ಮರಗಳಿಂದ ತಾನೇ ? ಗೆದ್ದಲಿನಂಥ ಹುಳುವಿನ ಕೆಲಸವೂ ಅದೇ ಅಲ್ಲವೇ? ಒಂದು ಆರೋಗ್ಯವಂತ, ದಷ್ಟ ಪುಷ್ಟ ಮರವನ್ನ ನಿಧಾನವಾಗಿ, ಶ್ರದ್ಧೆಯಿಂದ ಕೊರೆಯುತ್ತಾ ದುರ್ಬಲಗೊಳಿಸಿ ಕೊನೆಗೆ ಅದರ ಅವಸಾನಕ್ಕೆ ಕಾರಣವಾಗುವುದು? ಒಂದು ಮರವನ್ನು ಬಲಿ ಹಾಕಿ ತಾನೇ ನಮ್ಮ ಮಹೋನ್ನತ ನಾಯಕರ ಬಲಿದಾನದ ಬಗ್ಗೆ ನಾವು ಓದೋದು? ಈ ಕಾರಣಕ್ಕಾಗಿರಬಹುದೇ ಪುಸ್ತಕ ಪ್ರೇಮಿಗಳನ್ನು ಪುಸ್ತಕದ ಹುಳು ಎಂದು ನಿಕೃಷ್ಟವಾಗಿ ಕರೆಯುವುದು?
ಪುಸ್ತಕದ ನರಿ. ಪುಸ್ತಕಗಳನ್ನು ನುಂಗುವ, ಅತಿಯಾದ ಕಲ್ಪನಾಮಯಿಯಾಗಿದ್ದು ಮತ್ತು ಅತಿ ಹೆಚ್ಚು ಪುಸ್ತಕದಂಗಡಿಯ ಖರ್ಚುಳ್ಳ ಒಂದು ಪುಟ್ಟ ಸಸ್ತನಿ. ಪುಸ್ತಕದ ನರಿಗಳು ನಾನಾ ತೆರನಾದ ವಾಸಸ್ಥಳಗಳಲ್ಲಿ ಬದುಕುತ್ತವೆ ಮತ್ತು ಓದಲೆಂದು ಅಸಹಜವಾದ ಸ್ಥಳವನ್ನ ಆಯ್ಕೆ ಮಾಡಿಕೊಳ್ಳುತ್ತವೆ. ಅವು ಒಂಟಿಯಾಗಿ ಬೇಟೆ ಯಾಡಲು ಇಷ್ಟಪಡುತ್ತವೆ ಮತ್ತು ತಮ್ಮ ಹಿಂಡಿನೊಂದಿಗೆ ತಮ್ಮ ಬೇಟೆಯ ಬಗ್ಗೆ ಚರ್ಚಿಸುತ್ತವೆ.
ಈ ಮೇಲಿನ ಮಾತುಗಳು ಪುಸ್ತಕಗಳನ್ನು ಪ್ರೀತಿಸುವ ವ್ಯಕ್ತಿಯೊಬ್ಬರ ಬ್ಲಾಗ್ನಿಂದ ಸಿಕ್ಕಿದ್ದು. ಓದುಗನನ್ನು ಹುಳು ವಿನೊಂದಿಗೆ ಹೋಲಿಸದೆ ನರಿಯೊಂದಿಗೆ ಹೋಲಿಸಿಕೊಂಡು ಬರೆದ ಸಾಲುಗಳು. ಪುಸ್ತಕದ ನರಿಗೂ, ನರನಿಗೂ ಎಷ್ಟೊಂದು ಸಾಮ್ಯ ನೋಡಿ.
ಈಗ ಹೇಳಿ ನೀವು ಪುಸ್ತಕದ ಹುಳುವೋ ಅಥವಾ ಪುಸ್ತಕದ ಗುಳ್ಳೆ ನರಿಯೋ ಎಂದು.
ನನ್ನ ಬಗ್ಗೆ ಕೇಳಿದಿರಾದರೆ ನನ್ನ ಪುಸ್ತಕ ಪ್ರೀತಿ ಹೀಗೆ. an ardent book enthusiast. ಪುಸ್ತಕದ ಮೇಲ್ಮೆಯನ್ನು ಅಪ್ಯಾಯಮಾನದಿಂದ ಓರ್ವ ಮಮತಾಮಯಿ ತಂದೆ ತನ್ನ ಮಗನ ತಲೆ ಸವರುವಂತೆ ಸವರಿ, ಪುಸ್ತಕದ ಪುಟಗಳನ್ನು ತಿರುವುತ್ತಾ ಅದರೊಳಗಿನಿಂದ ಬರುವ ನತದೃಷ್ಟ ಮರದ ತೊಗಟೆಯ ಘಮ ಘಮ ವಾಸನೆಯನ್ನು ಆಸ್ವಾದಿಸುತ್ತಾ, ಅಕ್ಷರಗಳ ಜೋಡಣೆ, ಅಲಂಕಾರದ ಚೆಂದಕ್ಕೆ ತಲೆದೂಗುತ್ತಾ, ಮುನ್ನುಡಿ, ಹಿನ್ನುಡಿ ಬರೆದವರ ಬಗ್ಗೆ ಕಲ್ಪಿಸಿಕೊಳ್ಳುತ್ತಾ, ಬರೆದವ ಎಷ್ಟು ಸಂಪಾದಿಸಿರಬಹುದೆಂದು ಲೆಕ್ಕ ಹಾಕುತ್ತಾ, ಕೊನೆಗೆ, ಓರೆಗಣ್ಣಿನಿಂದ ಈ ಪುಸ್ತಕಕ್ಕೆ ಎಷ್ಟಿರಬಹುದು ಎಂದು ಭಯ, ಆಸೆ ಮಿಶ್ರಿತ ಭಾವನೆಗಳಿಂದ ನೋಡುವುದೇ ನನ್ನ ಮಟ್ಟಿಗಿನ ಹುಮ್ಮಸ್ಸು, enthusiasm. ಹಾಗಾಗಿ ನಾನು ಅತ್ತ ಯಕಃಶ್ಚಿತ್ ಹುಳುವೂ ಅಲ್ಲ, ಇತ್ತ scheming ಗುಳ್ಳೆ ನರಿಯೂ ಅಲ್ಲ.
ಅತ್ಯಂತ ಸುಂದರ ಸೌದಿಗಳು
ಜೇಡನ ತಾಣವನ್ನು ತಡಕಾಡುತ್ತಿದ್ದಾಗ ಎಡವಿದ ತಾಣ ಸೌದಿ ಮಹಿಳೆಯ ಬ್ಲಾಗ್. ಇಲ್ಲಿ ಹತ್ತು ಅತ್ಯಂತ ಸುಂದರ ಪುರುಷ ಮತ್ತು ಮಹಿಳೆಯರ ಚಿತ್ರಗಳನ್ನೂ ಅವರ ಕಿರು ಪರಿಚಯ ಸಹ ಕೊಡಲಾಗಿದೆ. ಸುಂದರ ಎಂದರೆ earth shattering or heaven cleaving ಎಂದಾಗಿರಬೇಕಿಲ್ಲ. ತಮ್ಮ ಪ್ರತಿಭೆ ಮತ್ತು ಪ್ರಭಾವದಿಂದಲೂ ಜನ ಸುಂದರರಾಗಬಹುದು ಅಲ್ಲವೇ? ಆದರೆ ಇಲ್ಲಿ ಬಹಿರಂಗ ಸೌಡ್ನರ್ಯದ ಕೊರತೆ ಇದೇ ಎಂದಲ್ಲ, ಆದರೆ ಹಾಲಿವುಡ್ ನ ಬ್ರಾಡ್ ಪಿಟ್ ಅಥವಾ ನಮ್ಮ ದೇಸೀ ಸೆಕ್ಸೀ ಕರೀನಾಳಂತೆಯೋ ಅಲ್ಲ ಇಲ್ಲಿರುವವರು. ಸೌದಿ ಒಂದು ನಿಗೂಢ ದೇಶ, ಹಾಗಾಗಿ ತಮಗೂ ಆ ನಿಗೂಢತೆ ಯ ಪರಿಚಯವಾಗಲಿ ಎಂದು ಈ ಬ್ಲಾಗನ್ನು “ಪುನಃ ಬ್ಲಾಗಿ” ಸುತ್ತಿದ್ದೇನೆ. ಎಂಜಾಯ್!
ತೆರಿಗೆ ವಸೂಲಿ ಮಾಡುವವರು ಮತ್ತು ವೇಶ್ಯೆಯರು
ಪ್ರತೀ ವರ್ಷವೂ ನಡೆಯುವ ಆಸ್ಟ್ರಿಯಾದ ವಾರ್ಷಿಕ ಮೋಜಿನ ಕಾರ್ಯಕ್ರಮದಲ್ಲಿ (annual ball season) ಮೊರಾಕ್ಕೋ ದೇಶದ ಷೋ ಗರ್ಲ್ ಮತ್ತು ಇಟಲಿಯ ಪ್ರಧಾನಿ ಬೆರ್ಲಸ್ಕೊನಿಯವರ ಗರ್ಲ್ ಫ್ರೆಂಡ್ ಹದಿಹರೆಯದ “ರೂಬಿ” ಯ ಉಪಸ್ಥಿತಿಯನ್ನು ಅಲ್ಲಿಗೆ ಬಂದ ಅತಿಥಿಗಳು ವಿರೋಧಿಸಿದರು. ಇದೊಂದು ಗೌರವಾನ್ವಿತರ ಸಮಾರಂಭ ಮತ್ತು ಮೋಜಿನ ಕಾರ್ಯಕ್ರಮವಾಗಿದ್ದು ಇಲ್ಲಿಗೆ ಕರೆವೆಣ್ಣು ಗಳು ಬಂದು ಘನತೆಯನ್ನು ಕುಗ್ಗಿಸುತ್ತಿದ್ದಾರೆ ಎಂದು ದೂರಿದರು. ಈಕೆಯನ್ನು ಕರೆತಂದಿದ್ದ ಶ್ರೀಮಂತನೊಬ್ಬನಿಗೆ ಮುಂದಿನ ವರ್ಷ ಈ ಸಮಾರಂಭಕ್ಕೆ ಟಿಕೆಟ್ ನೀಡೋದಿಲ್ಲ ಎಂದು ಆಯೋಜಕರು ಹೇಳಿದರು. ಹೀಗೆ, ಪ್ರತಿಷ್ಠಿತ ವ್ಯಕ್ತಿಗಳ, ಶ್ರೀಮಂತರ, ಪ್ರಭಾವೀ ರಾಜಕಾರಣಿಗಳ ಮತ್ತ ಅವರ ಸಂಸಾರವಂದಿಗರ ಮೋಜಿನ ಮೇಳಕ್ಕೆ ಯಕಃಶ್ಚಿತ್ call girl ಬರುವುದು ಎಂದರೆ ಅಪರಾಧವೇ. ಮೋಜು ಮುಗಿದ ನಂತರ ಅಲ್ಲಿಗೆ ಬಂದ ಕೆಲವರು ಇದೇ call girl ಗಳು ಮಾಡೋ ಕೆಲಸವನ್ನೇ ಮಾಡಿದರೂ ಅದು ಪ್ರತಿಷ್ಠೆ, ಘನತೆ, ಶ್ರೀಮಂತಿಕೆಯ ಕಂಬಳಿಯಡಿ ನುಸುಳಿ ಹೋಗುತ್ತದೆ, we are having ball of a time, you see? ಅದಿರಲಿ, ಈ ಸಮಸ್ಯೆಗೆ ಧಾರ್ಮಿಕ ತಿರುವನ್ನು ನೀಡಿದರು ಕ್ರೈಸ್ತ ಪಾದ್ರಿಯೊಬ್ಬರು. ರೂಬಿಯ ಉಪಸ್ಥಿತಿಯನ್ನು ಸಮರ್ಥಿಸುತ್ತಾ ಪಾದ್ರಿಗಳು ಹೇಳಿದರು,
“ತೆರಿಗೆ ವಸೂಲಿ ಮಾಡುವವರು ಮತ್ತು ವೇಶ್ಯೆಯರು ಎಲ್ಲರಿಗಿಂತ ಮೊದಲು ದೇವನ ಸಾಮ್ರಾಜ್ಯವನ್ನು ಸೇರುವರು”. ಇದಕ್ಕೆ ಉತ್ತರ ಗಡಚ್ಚಿಕ್ಕುವ ಡ್ರಂ ಗಳ ಸದ್ದಿನಲ್ಲಿ, ಕುಣಿತದ ಗದ್ದಲದಲ್ಲಿ, ರೂಬಿಯ ಮೈಮಾಟದ ಪ್ರದರ್ಶನದಲ್ಲಿ ಕೇಳಿಸಲೇ ಇಲ್ಲ.
ಓರ್ವ ಧೀಮಂತ ಪತ್ರಕರ್ತ
ಇಂದು ಬೆಳಿಗ್ಗೆ ನನ್ನ ಮನಸ್ಸಿನ ಮೇಲೆ ವಿವಿಧ ಭಾವನೆಗಳು ಅಲೆಗಳಂತೆ ಅಪ್ಪಳಿಸುವಂತೆ ಮಾಡಿದ ವಿಚಿತ್ರ ವರದಿಯೊಂದು ಕಣ್ಣಿಗೆ ಬಿತ್ತು. ಆಘಾತ, ದಿಗ್ಭ್ರಮೆ, ಕನಿಕರ, ಹೇಸಿಗೆ ಹೀಗೆ ನಾನಾ ಭಾವನೆಗಳನ್ನು ಒಮ್ಮೆಗೇ ಹುಟ್ಟುಹಾಕಿದ ಒಂದು ವರದಿ; ಒಬ್ಬ ಪತ್ರಕರ್ತ ತನ್ನ ಮನಃಪರಿವರ್ತನೆಯಾದ ಕಾರಣ ಪತ್ರಕರ್ತನ ಕಸುಬಿಗೆ “ಬೈ ಬೈ” ಹೇಳಿದ್ದು. ಇಂಗ್ಲೆಂಡಿನ ಟ್ಯಾಬ್ಲಾಯ್ಡ್ daily star ಪತ್ರಿಕೆಯಲ್ಲಿ ಪತ್ರಕರ್ತನಾಗಿ ಕೆಲಸ ಮಾಡುತ್ತಿದ್ದ “ರಿಚರ್ಡ್ ಪೆಪ್ಪಿಯಾಟ್” ಪತ್ರಿಕೆಯ ಧಣಿಗೆ ಬರೆದ ಬಹಿರಂಗ ಪತ್ರ ಪತ್ರಿಕಾ ವಲಯದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದೆ, ಹಾಗೆಯೇ ತಮ್ಮ ರಹಸ್ಯ ಅಜೆಂಡಾ ಗಳನ್ನು ಕಾರ್ಯರೂಪಕ್ಕೆ ತರುವಲ್ಲಿ ಸುದ್ದಿ ಮಾಧ್ಯಮಗಳು ಎಂಥ ನೀಚ ಕೃತ್ಯಕ್ಕೂ ಇಳಿಯಲು ಸಿದ್ಧ ಎನ್ನುವುದನ್ನು ಸ್ಥಿರೀಕರಿಸಿದೆ.
ರಿಚರ್ಡ್ ಪೆಪ್ಪಿ ಯಾಟ್ ರಾಜೀನಾಮೆ ನೀಡಲು ಕಾರಣವಾದ ವರದಿಗಳನ್ನ ನೋಡಿ.
ಇಂಗ್ಲಿಷ್ ಡಿಫೆನ್ಸ್ ಲೀಗ್ (EDL) ಎನ್ನುವ ಸಂಘಟನೆ ಇಂಗ್ಲೆಂಡಿಗೆ ವಲಸೆ ಬರುವವರ ವಿರುದ್ಧ ಹೋರಾಡುತ್ತದೆ. ಬಿಳಿಯರ ಹಕ್ಕುಗಳು ಮಾಯವಾಗುತ್ತಿವೆ ಎಂದು ಪುಕಾರು ಹಬ್ಬಿಸುತ್ತದೆ. ಇದೊಂದು ಮುಸ್ಲಿಂ ವಿರೋಧಿ, ಬಲಪಂಥೀಯ ಸಂಘಟನೆ. ಈ ಸಂಘಟನೆಗೆ ರಾಜಕೀಯ ಪಸ್ಖವಾಗುವ ಇರಾದೆ ಇಲ್ಲ. daily star ನ ಪತ್ರಕರ್ತ edl ನಾಯಕನೊಬ್ಬನ ಸಂದರ್ಶನ ದಲ್ಲಿ ರಾಜಕೀಯ ಸೇರುವ ಬಗ್ಗೆ ಕೇಳಿದಾಗ ನಾಯಕ ಅಂಥ ಉದ್ದೇಶ ಸದ್ಯಕ್ಕಿಲ್ಲ ಎನ್ನುತ್ತಾನೆ. ಆದರೆ ಪತ್ರಿಕೆ ವರದಿ ಮಾಡಿದ್ದು edl ರಾಜಕೀಯ ಸೇರಲಿದೆ ಎಂದು. ಈ ಸುದ್ದಿ ಮುಖಪುಟದಲ್ಲಿ ರಾರಾಜಿಸಿದಾಗ ಭಯಗ್ರಸ್ಥನಾದ ಪತ್ರಿಕೆ ಮಾರುವ ಮುಸ್ಲಿಂ ವ್ಯಕ್ತಿಯ ಮುಖದ ಮೇಲಿನ ದುಗುಡ ನೋಡಿ ರಿಚರ್ಡ್ ಕೆಲಸಕ್ಕೆ ರಾಜೀನಾಮೆ ನೀಡಲು ತೀರ್ಮಾನಿಸುತ್ತಾನೆ.
daily star ಪತ್ರಿಕೆ ತನ್ನ ವರದಿಗಾರಿಗೆ ಕೊಡುವ brief ಏನೆಂದರೆ ಮುಸ್ಲಿಮರ ಬಗ್ಗೆ ಭಯ ಹುಟ್ಟಿಸುವ (islamophobia) ಲೇಖನಗಳನ್ನು ಸೃಷ್ಟಿಸಿ ಕೊಡಬೇಕು. ಈ ಕೆಲಸಕ್ಕೆ ಪತ್ರಕರ್ತರ ಮನಃಸ್ಸಾಕ್ಷಿ ಒಪ್ಪದೇ ಇದ್ದ ಪಕ್ಷದಲ್ಲಿ ನೀನಲ್ಲದಿದ್ದರೆ ಮತ್ತೊಬ್ಬ ಎನ್ನುವ ಧೋರಣೆ ಆ ಪತ್ರಿಕೆಯದು. ಕೆಲಸದಿಂದ ವಜಾ ಆಗುವ ಭಯ ದಿಂದ ಪತ್ರಕರ್ತರು ಪತ್ರಿಕೆಯ ವಿರುದ್ಧ ಹೋಗಲು ತಯಾರಿಲ್ಲ.
ಮುಸ್ಲಿಮರಿಗಾಗಿ ಮಾತ್ರ ಇರುವ ಶೌಚಗಳನ್ನು ನಮ್ಮ ತೆರಿಗೆ ಹಣದ ಖರ್ಚಿನಲ್ಲಿ ಕಟ್ಟಲಾಗುತ್ತಿದೆ ಎನ್ನುವ ಸುಳ್ಳು ವರದಿಯನ್ನು ತಾನು ಸೃಷ್ಟಿಸಿದೆ ಎನ್ನುವ ಈತನ ಮಾತನ್ನು ಕೇಳುವಾಗ ನಮ್ಮ ವರದಿಗಾರರು ಗಿಳಿ ಪಾಠದಂತೆ ಯಾವಾಗಲೂ ಪುನರಾವರ್ತಿಸುವ ಮುಸ್ಲಿಮರಿಗೆ ಮೀಸಲಾತಿ ಎನ್ನುವ ವರದಿಗಳು ಕಣ್ಣ ಮುಂದೆ ಬರುತ್ತವೆ. ಮುಸ್ಲಿಮರಿಗೆ ಮಾತ್ರವಲ್ಲ ಮೀಸಲಾತಿ, ಪರಿಶಿಷ್ಟ ಪಂಗಡ, ಬುಡಕಟ್ಟು, ಹಿಂದುಳಿದ ಜಾತಿ ಮುಂತಾದ ಹಲವು ಸಾಮಾಜಿಕ ಗುಂಪುಗಳಿಗೂ ಇವೆ ರಿಯಾಯಿತಿ ಮತ್ತು ಮೀಸಲಾತಿ ಎನ್ನವುದು ಇವರಿಗೆ ತಿಳಿದಿದ್ದರೂ ತಿಳಿಯುವುದಿಲ್ಲ.
ಪ್ರತೀ ನಿತ್ಯವೂ ಇಸ್ಲಾಂ ಧರ್ಮೀಯರನ್ನು ಗುರಿಯಾಗಿಸಿ “ ಅವರು, ಮತ್ತ ನಾವು (us and them) “ ಎನ್ನುವ ಭಾವನೆ ಹುಟ್ಟಿಸುವ ಲೇಖನ ಬರೆಯಲೇಬೇಕು. ಒಪ್ಪದೇ ಇದ್ದರೆ ನನ್ನ ಕೆಲಸ ಹೋಗಬಹುದೋ ಎಂದು ಮಾಡುತ್ತಿದ್ದೆ. ನನ್ನ ಫೋನಿನ speed dial ನಲ್ಲಿ ಒಬ್ಬ ಮೌಲ್ವಿಯ ನಂಬರ್ ಇಟ್ಟುಕೊಂಡಿದ್ದೇನೆ. ಬೆಳಗಾದ ಕೂಡಲೇ ಈ ತಲೆ ಕೆಟ್ಟ ಮೌಲ್ವಿ ಗೆ ಫೋನಾಯಿಸಿ ಸಲಿಂಗ ಕಾಮಿಗಳಿಗೆ ಮತ್ತು ಕುಡುಕರಿಗೆ ಕಲ್ಲು ಹೊಡೆಯುವ ಶಿಕ್ಷೆ ಇದೆಯೇ ಎಂದು ಕೆಣಕಿದ ನಂತರ ಆ ಮೌಲ್ವಿ ಕೆರಳಿ ಫತ್ವ ನೀಡುವ ರೀತಿಯಲ್ಲಿ ಹೇಳುವುದನ್ನು ಭಕ್ತಿಯಿಂದ ವರದಿ ಮಾಡುತ್ತಿದ್ದೆ.
ಓರ್ವ ನಟಿ ತಾನು ಹೊರಹೋಗುವಾಗ ಮಾಡಿಕೊಳ್ಳುವ ಸಿದ್ಧತೆ ಗೆ ತೆಗೆದುಕೊಳ್ಳುವ ಸಮಯವನ್ನೂ ಕಡಿಮೆ ಮಾಡಲು “ಸಂಮೋಹನ” (hypno therapy) ಚಿಕಿತ್ಸೆ ಪಡೆಯುತ್ತಿದ್ದಾಳೆ ಎಂದು ಹುಟ್ಟಿಸಿ ಕೊಂಡು ಬರೆದಿದ್ದ ಈ ಪತ್ರಕರ್ತ ಹೇಳುತ್ತಾನೆ, “ಈ ಸಂಮೋಹನ ದ ಬಗ್ಗೆ ನನಗೆ ಹೇಗೆ ತಿಳಿಯಿತು? ಸಂಜೆ ಆರರ ಸಮಯ ಖಾಲಿ ಹಾಳೆ ನೋಡುತ್ತಾ ಮಗ್ನನಾಗಿದ್ದಾಗ ನನ್ನ ಕುಂಡೆ ಯೊಳಗಿಂದ ಎಳೆದು ತಂದೆ ಈ ಕಲ್ಪನೆಯನ್ನು ಎಂದು ಹೇಳುತ್ತಾನೆ. ಆದರೆ ಈ ಕಲ್ಪನಾ ಬರಹ ನನಗೆ ೧೫೦.೦೦ ಪೌಂಡ್ ಗಳ ಧನವನ್ನೂ ಒದಗಿಸಿತು ಎಂದು ಹೇಳುತ್ತಾನೆ.
ರಿಚರ್ಡ್ ಹೇಳುತ್ತಾನೆ, ನನಗೆ ಗೊತ್ತು ಡೈಲಿ ಮೇಲ್ ಪತ್ರಿಕೆ (ನೈತಿಕತೆ ಇಲ್ಲದ) ಕುರೂಪಿಗಳ ಹಿಂಡಿನಲ್ಲಿ ಎದ್ದು ಕಾಣುವ ಮತ್ತೊಂದು ಕುರೂಪಿ ಪತ್ರಿಕೆ ಎಂದು.
ಇಂಥ ಸುಳ್ಳು ವರದಿಗಳನ್ನು ಸೃಷ್ಟಿಸುವವನು ಬರೀ ಒಬ್ಬ ವ್ಯಕ್ತಿಯಾಗಿದ್ದರೆ ಅವನನ್ನು schizophrenic (ಭ್ರಮಾ ಲೋಕದಲ್ಲಿರುವವ) ಎಂದು ಆಸ್ಪತ್ರೆಗೆ ಅಟ್ಟಬಹುದಿತ್ತು, ಆದರೆ ಈ ಕೆಲಸವನ್ನ ಪತ್ರಿಕೆ ಮಾಡಿದಾಗ ಅದೆಲ್ಲ ಓಕೆ ಎನಿಸಿಕೊಳ್ಳುತ್ತದೆ ಎಂದು ರಿಚರ್ಡ್ ನ ಅಭಿಪ್ರಾಯ. ಪತ್ರಕರ್ತ ರಿಚರ್ಡ್ ನಿಗೆ ಅವನ ಜೀವನದ ಯಾವುದಾದರೂ ಒಂದು ಸನ್ನಿವೇಶದಲ್ಲಿ ಸಿಕ್ಕಿರಬಹುದಾದ ನೈತಿಕ ಶಿಕ್ಷಣ ತನ್ನ ಲೇಖನಿಯನ್ನು ಮಾರಿಕೊಳ್ಳುವ ಕಸುಬಿಗೆ ಎಡಗಾಲಿನಲ್ಲಿ ಒದ್ದು ಹೊರಬರಲು ಪ್ರೇರಣೆ ನೀಡಿತು. ತಡವಾಗಿಯಾದರೂ ಬಂದ ಈ ಉನ್ನತ ಮಟ್ಟದ ನೈತಿಕತೆ ಬೇರೆ ಪತ್ರಕರ್ತರುಗಳಲ್ಲೂ ಬರಬಹುದೇ? ಆ ಸುದಿನಕ್ಕಾಗಿ ನಾವು ಕಾಯಬಹುದೇ?
ನನಗೂ ಆಗಾಗ ಅನ್ನಿಸಿದ್ದಿದೆ. ಈ ರೀತಿ ಒಂದು ಧರ್ಮೀಯರ ಮೇಲೆ ಕಪೋಲ ಕಲ್ಪಿತ ವರದಿಗಳನ್ನು, ಊಹಾಪೋಹಗಳನ್ನು ಸೃಷ್ಟಿಸುತ್ತಾ ಸಮಾಜದಲ್ಲಿ ಗಲಭೆ, ಕ್ಷೋಭೆಗೆ ಕಾರಣವಾಗುವ ಲೇಖನಿ ಹಿಡಿದ ಈ so called journalist ಗಳಿಗೆ ಭಗವಂತನು ಆತ್ಮವೊಂದನ್ನು ಫಿಟ್ ಮಾಡಿದ್ದಿದ್ದರೆ ಅವರು ತಮ್ಮ ಕಸುಬಿಗೆ ಎಂದೋ ವಿದಾಯ ಹೇಳುತ್ತಿದ್ದರು ಎಂದು. ತಮ್ಮ ವರದಿ ಕಾರಣ ಜನರ ಸಂಶಯ ಗುಮಾನಿಗೆ ಒಳಪಟ್ಟು, ದಬ್ಬಾಳಿಕೆಗೆ ಶೋಷಣೆಗೆ ಗುರಿಯಾಗುವ ಅಮಾಯಕನನ್ನು ನೋಡಿದಾಗ ಅವರಿಗೆ ಏನೂ ಅನ್ನಿಸುವುದಿಲ್ಲವೇ? ಜೇಬು ಭರ್ತಿಯಾಗುತ್ತಿದ್ದಂತೆ ಬುದ್ಧಿ ದಿವಾಳಿತನದ ದಾರಿ ಹಿಡಿದ್ದು ಬಹುಶಃ ಅವರುಗಳಿಗೆ ಕಾಣುವುದಿಲ್ಲವೇನೋ.
ಪತ್ರಿಕೆಗಳಲ್ಲ್ಲಿ ಯಾವುದಾದರೂ ಉತ್ಪನ್ನಗಳ ಬಗ್ಗೆ ಲೇಖನ ಬಂದರೂ ಆ ಲೇಖನದ ಹಿಂದೆ ಹಣದ ವಾಸನೆ ಬಡಿದೇ ತೀರುತ್ತದೆ. ವಿಮರ್ಶೆ ಮಾಡುವ ನೆಪದಲ್ಲಿ ಉತ್ಪಾದನೆಗಳ ಬಿಕರಿಗೆ ಕಂಪೆನಿಗಳಿಗೆ ಸಹಾಯ ಒದಗಿಸುವ ಪತ್ರಕರ್ತರಿದ್ದಾರೆಂದು ಕೇಳಿದ್ದೇನೆ. ವೈಯಕ್ತಿಕ ನಿಂದನೆ ಮತ್ತು ತೇಜೋವಧೆಯಂಥ ಕೆಲಸವಂತೂ ಎಷ್ಟು ಸೊಗಸಾಗಿ ಮಾಡುತ್ತವೆ ಪತ್ರಿಕೆಗಳು ಎಂದು ಬೇರೆ ಹೇಳಬೇಕಿಲ್ಲ.
ದಿನ ನಿತ್ಯದ ಆಗುಹೋಗುಗಳ ಬಗ್ಗೆ ನಿಗಾ ಇಟ್ಟುಕೊಂಡು ಕುತೂಹಲದಿಂದ ನಿರಂತರವಾಗಿ ಸುದ್ದಿಗಳೊಂದಿಗೆ ನಂಟು ಬಯಸುವ ಓದುಗ ಕೇವಲ ಸುದ್ದಿ ಮಾತ್ರವನ್ನಲ್ಲ ಅದರೊಂದಿಗೆ ಬರುವ ಹಲವು ವಿಚಾರಗಳನ್ನೂ ಅರಿಯುತ್ತಾ ಸಾಗುತ್ತಾನೆ. ಹಾಗಾಗಿ ಮಾಧ್ಯಮ ಎನ್ನವುದು ಒಂದು ರೀತಿಯ ಮುಕ್ತ ವಿಶ್ವ ವಿದ್ಯಾಲಯ. ಆದರೆ ಈ ಪವಿತ್ರ ಕಸುಬನ್ನು ಲಾಭ ಗಳಿಸುವ ಉದ್ದಿಮೆಯಾಗಿ ಮತ್ತು ತಮ್ಮ ರಾಜಕೀಯ ಚಿಂತನೆಗಳನ್ನು ಪ್ರಚುರಪಡಿಸಲು propaganda machinery ಆಗಿ ಉಪಯೋಗಿಸಿಕೊಂಡಾಗ ಆಗುವ ಅನಾಹುತವೇ ನಾವು ಇಂದು ಕಾಣುತ್ತಿರುವ ವೈಮನಸ್ಸು, ಸಂಶಯ ಮತ್ತು ಇವೆರೆಡರ ಕಾರಣ ನಡೆಯುವ ಗಲಭೆ, ಹಿಂಸೆ.
ನಾವು ಹಣ ಕೊಟ್ಟು ಕೊಳ್ಳುವ ವಸ್ತುಗಳ ಬಗ್ಗೆ ನಿಗಾ ಇಡುತ್ತೇವೆ. ವಸ್ತುವಿನ ಗುಣಮಟ್ಟ, ತಯಾರಾದ ತಾರೀಖು, ಕಂಪೆನಿ, ಅದರಲ್ಲಿರಬಹುದಾದ ingredients, ತಯಾರಿಸಿದ ಕಂಪೆನಿಯು ISO, HACCP ಮುಂತಾದ certification ಗಳನ್ನು ಹೊಂದಿದೆಯೇ ಇತ್ಯಾದಿ. ಆದರೆ ನಾವು ಕೊಳ್ಳುವ ಪತ್ರಿಕೆಗಳ ಗುಣಮಟ್ಟದ ಬಗ್ಗೆ ನಾವೆಂದಾದರೂ ಯೋಚಿಸಿದ್ದೇವೆಯೇ?ಅದರಲ್ಲಿ ಬರುವ ಕಂಟೆಂಟ್ ಗಳ ಬಗ್ಗೆಯಾಗಲೀ, ಅದರಲ್ಲಿ ಬರುವ ವಿಷಯಗಳು, ಮತ್ತು ಆ ವಿಷಯಗಳ ಹಿಂದಿನ ಕರ್ತೃಗಳ ನಾವೇಕೆ ಅಸಡ್ಡೆ ತೋರಿಸುತ್ತೇವೆ? ಬೇರೆಲ್ಲಾ PRODUCT ಗಳಿಗೆ ಇರುವಂತೆ ಪತ್ರಿಕೆಗಳಿಗೂ ಯಾಕೆ ಒಂದು CERTIFICATION ಇರಕೂಡದು? ಪ್ರಾಥಮಿಕ ಶಾಲೆಯ ಬಾಗಿಲನ್ನೂ ಕಾಣದವನೂ ಪತ್ರಕರ್ತನಾಗಿ ತನಗೆ ತೋಚಿದ ರೀತಿಯಲ್ಲಿ ವರದಿಗಳನ್ನು, ಜನರಿಗೆ ಬಡಿಸಿದರೆ ಅದರ ಪರಿಣಾಮ ಸಮಾಜದ ಮೇಲೆ ಹೇಗಾಗಬಹುದು? journalistic standard, ethics ಮತ್ತು ಪತ್ರಿಕೋದ್ಯಮದ ಗುಣಶ್ರೇಷ್ಠತೆ (merit) ಇವುಗಳ ಅವಶ್ಯಕತೆ ಇಲ್ಲವೇ ಪ್ರಜಾಪ್ರಭುತ್ವದ ನಾಲ್ಕನೇ ವ್ಯವಸ್ಥೆ (fourth estate) ಎಂದು ಕರೆಯಲ್ಪಡುವ ಪತ್ರಿಕೋದ್ಯಮಕ್ಕೆ? ಅಥವಾ ಹಣ ಮತ್ತು ಅಜೆಂಡಾದ ಹಿಂದೆ ಬಿದ್ದು “ಫಿಫ್ತ್ ಕಾಲಂ” ಆಗಿ ಕುಸಿದು ಬಿಟ್ಟಿತೆ ಪತ್ರಿಕೋದ್ಯಮ?
ಕೊನೆಯದಾಗಿ ತನ್ನ ಧಣಿಗೆ ರಿಚರ್ಡ್ ಹೀಗೆ ಹೇಳುತ್ತಾನೆ. “ನಿನ್ನ ಪತ್ರಿಕೆಯವರು ಹೆಣೆಯುವ ಪದಗಳು, ವಿಷಯಗಳು ಜನರ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತವೆ ಎನ್ನುವ ಜ್ಞಾನ ನಿನಗಿಲ್ಲದಿದ್ದರೆ ಒಂದು ಕಾಮ ಪ್ರಚೋದಕ (porn) ಪತ್ರಿಕೆಯನ್ನು ಶುರು ಮಾಡು. ಅಥವಾ ಅವರು ಬರೆದ ಲೇಖನಗಳು ಪರಿಣಾಮ ಬೀರುತ್ತವೆ ಎಂದು ನಿನಗನ್ನಿಸಿಯೂ ಸಹ ನಿನ್ನ ಸಂಪಾದಕರು ಅನುಮತಿಸುವ ಪ್ರಚೋದಕ ಲೇಖನಗಳನ್ನು ತಡೆಯುವ ಮನಸ್ಸು ನಿನಗೆ ಇಲ್ಲದಿದ್ದರೆ ಬ್ರಿಟನ್ ನಂಥ ಒಂದು ಮಹೋನ್ನತ ದೇಶಕ್ಕೆ ನೀನೊಬ್ಬ ಕಂಟಕಪ್ರಾಯ ಎಂದು ತಿಳಿದುಕೋ”.
ಹತಾಶೆಯ ಮತ್ತು ಕ್ರೋಧ ತುಂಬಿದ ಮೇಲಿನ ಮಾತುಗಳು daily star ನ ಧಣಿಗೆ ಮಾತ್ರ ಅನ್ವಯವಾಗದೇ ಲೇಖನಿಯ ಪಾವಿತ್ರ್ಯದ ಅರಿವಿಲ್ಲದ ಎಲ್ಲರಿಗೂ ಅನ್ವಯವಾಗುತ್ತದೆ.
fifth column: A fifth column is a group of people who clandestinely undermine a larger group such as a nation from within.
ಸಂಪೂರ್ಣ ಲೇಖನಕ್ಕೆ ಈ ಕೊಂಡಿ ಕ್ಲಿಕ್ಕಿಸಿ.
http://www.guardian.co.uk/media/2011/mar/04/daily-star-reporter-letter-full
