word press ನಲ್ಲಿ ಹೊಸತು

be the first to like this post – ಈ ಪೋಸ್ಟನ್ನು ಇಷ್ಟಪಟ್ಟವರಲ್ಲಿ ಮೊದಲಿಗರಾಗಿರಿ – ಈ ಸಂದೇಶ ಈಗ wordpress ನ ಪ್ರತೀ ಬ್ಲಾಗ್ ಪೋಸ್ಟ್ ಅಡಿಯಲ್ಲಿ ಕಾಣ ಸಿಗುತ್ತದೆ. ಆದರೆ ಈ ವ್ಯವಸ್ಥೆಯನ್ನು ಕನ್ನಡ ಬ್ಲಾಗಿಗರು ದೊಡ್ಡ ರೀತಿಯಲ್ಲಿ ಬಳಸಿಕೊಳ್ಳುವುದು ಅನುಮಾನವೇ.       

ಪ್ರತಿಕ್ರಿಯೆ ಬರೆಯಲು ಸೋಮಾರಿತನ ತೋರಿಸುವವರಿಗೆ ಒಂದು ರೀತಿಯ ಸುಲಭ ವಿಧಾನ ಈ “ನನಗಿಷ್ಟವಾಯಿತು” ಎಂದು ಹೇಳುವ ಸೌಲಭ್ಯ. ಆಧುನಿಕ ಬದುಕಿನಲ್ಲಿ ಎಲ್ಲವೂ ಸಲೀಸಾಗಿರಬೇಕೆನ್ನುವ ಅಲಿಖಿತ ನಿಯಮ ಇದ್ದೇ ಇದೆಯಲ್ಲ. ಬನ್ನಿ, ಉಪಯೋಗಿಸೋಣ.

ಕವನ ವಾಚನ

ಬದುಕೇ, ನೀನಾರೆಂದು ನನಗೆ ತಿಳಿದಿಲ್ಲ

ಇಷ್ಟು ಮಾತ್ರ ಗೊತ್ತು ನಾವು ಅಗಲಲೇಬೇಕು

ಹೇಗೆ, ಯಾವಾಗ, ಎಲ್ಲಿ ನಾವು ಭೆಟ್ಟಿಯಾದೆವು

ನನಗದು ರಹಸ್ಯವೆ ಈಗಲೂ.

ಏಳು ಬೀಳುಗಳನ್ನು ಒಟ್ಟಿಗೆ ಕಂಡೆವು ನಾವು

ನಿಜಕ್ಕೂ ಕಷ್ಟಕರ ಮಿತ್ರರು ಅಗಲುವುದು

ಅಗಲಿಕೆ ಸಮಯ ನೀನೇ ನಿಶ್ಚಯಿಸಿಕೋ

ಹೇಳಬೇಡ ವಿದಾಯವ ಎಂದಿಗೂ

ಬದಲಿಗೆ ಹಾರೈಸುವೆಯಾ 

ಶುಭ ಮುಂಜಾನೆಯ..

R . Barbauld ರವರ ಕವಿತೆಯ ಅನುವಾದ   

ಹೀಗೊಂದು ಸಂಭಾಷಣೆ

ಫೋನಿನಲ್ಲಿ ಸಂಭಾಷಣಾ ನಿರತ ಜನ ತಮ್ಮ ಸುತ್ತ ಮುತ್ತ ಇತರೆ ಜನರಿರುತ್ತಾರೆ, ತಮ್ಮನ್ನು ಗಮನಿಸುತ್ತಿರುತ್ತಾರೆ, ನಮ್ಮ ಮಾತುಗಳನ್ನು ಕೇಳುತ್ತಿರುತ್ತಾರೆ ಎನ್ನುವ ಯಾವುದೇ ಪರಿವೆಯಿಲ್ಲದೆ ಸ್ವರ ಏರಿಸಿ ಬಡ ಬಡಿಸುತ್ತಾರೆ. ಸಾರ್ವಜನಿಕ ಸ್ಥಳಗಳಲ್ಲಿ ಪಾಲಿಸಬೇಕಾದ ಸೌಜನ್ಯಗಳ ಬಗ್ಗೆ ಜನರಿಗೆ ಅರಿವನ್ನು ಹೇಗೆ ಮೂಡಿಸ ಬಹುದೋ ಗೊತ್ತಿಲ್ಲ. ಮೊನ್ನೆ ಒಂದು ಚೆಕ್ಕಿನ ಬಗ್ಗೆ ವಿಚಾರಿಸಲು ಸೌದಿ ಅಮೇರಿಕನ್ ಬ್ಯಾಂಕ್ ಗೆ ಹೋದೆ. ಚೆಕ್ vip ವಿಭಾಗಕ್ಕೆ ಸೇರಿದ್ದರಿಂದ ವಿಶಾಲವಾದ, ಸುಸಜ್ಜಿತ vip lounge ನಲ್ಲಿ ಆಸೀನನಾದೆ. ನನ್ನ ಪಕ್ಕದಲ್ಲಿ ಸುಮಾರು ನಲವತ್ತು ನಲವತ್ತೈದರ ಸೌದಿ ಯೊಬ್ಬ ಬರ್ಮುಡಾ ಚಡ್ಡಿ, ಬೇಸ್ ಬಾಲ್ ಟೋಪಿ ಧರಿಸಿ ಫೋನಿನಲ್ಲಿ ಹರಟುತ್ತಿದ್ದ. ಆತನ ಮಾತಿನಿಂದ ತಿಳಿಯಿತು ಅವನೊಬ್ಬ ಅತ್ಯಾಧುನಿಕ, ಸ್ಪೋರ್ಟ್ಸ್ ಮಾಡೆಲ್ ಕಾರುಗಳ ಡೀಲರ್, ಮತ್ತು ಆತನೊಂದಿಗೆ ಫೋನಿನಲ್ಲಿ ಮಾತನಾಡುತ್ತಿದ್ದವನು ಅಮೆರಿಕೆಯವನು ಎಂದು. ಸೌದಿ ಅವನಿಗೆ ಹೇಳಿದ ಹೌದು ನೀನು ಕೇಳುತ್ತಿರುವ ಕಾರು ನನ್ನ ಹತ್ತಿರ ಇದೆ, ನಾನು ನಾಳೆ ರಿಯಾಧ್ ಗೆ ಬರುತ್ತಿದ್ದೇನೆ, ಬರುವುದು ವಿಮಾನದಲ್ಲಲ್ಲ ನನ್ನ porsche ಕಾರಿನಲ್ಲಿ, ನನಗೆ ಸುಮಾರು ೧೦ ಘಂಟೆಗಳ ಸಮಯ ಹಿಡಿಯಬಹುದು ಎಂದು ಹೇಳುತ್ತಿದ್ದ. ಜೆಡ್ಡಾ ದಿಂದ ರಿಯಾಧ್ ಸುಮಾರು ೧೪೦೦ ಕಿ.ಮಿ. porsche (ಪೋರ್ಷೆ) ಅತಿ ವೇಗವಾಗಿ ಸರಾಗವಾಗಿ ಚಲಿಸಬಲ್ಲ ಕಾರು. ಈ ಸೌದಿ ೧೦ ಘಂಟೆಗಳು ಸಾಕು ರಿಯಾದ್ ತಲುಪಲು ಸಾಕು ಎಂದಾಗ ಅಮೆರಿಕೆಯವ ಹೇಳಿದ ನಿಧಾನವಾಗಿ ಓಡಿಸು ಕಾರನ್ನು, express way ರಸ್ತೆಯಲ್ಲಿ ಅಪಘಾತ ಹೆಚ್ಚು ಎಂದು ಎಚ್ಚರಿಸಿದ. ಅದಕ್ಕೆ ಸೌದಿ ಹೇಳಿದ, ಹೇಯ್ ನೀನೇನು ಭಯ ಪಡಬೇಡ. ನಾನು ಸಣಕಲು ವ್ಯಕ್ತಿ, ಅಪಘಾತವಾದರೂ ಎಲ್ಲಾದರೂ ಮರುಭೂಮಿಯಲ್ಲಿ ಹಾರಿ ಬಿದ್ದಿರುತ್ತೇನೆ, ಆದರೆ ದೊಡ್ಡ ಹೊಟ್ಟೆಯ ಸ್ಥೂಲಕಾಯದವರಾದರೆ ಚಿಂದಿ ಚಿಂದಿ ಆಗುತ್ತಾರೆ (they will go smithereens) ಅಪಘಾತವಾದಾಗ ಎಂದು ಹೇಳುತ್ತಿದ್ದ. ನಮ್ಮ ಮುಂದಿನ ಸೋಫಾದಲ್ಲಿ ಸೂಟು ಬೂಟು ತೊಟ್ಟ ಲೆಬನಾನ್ ದೇಶದವನ ಥರ ಕಾಣುತ್ತಿದ್ದ ಸ್ಥೂಲ ಕಾಯದ ವ್ಯಕ್ತಿಯೊಬ್ಬ ಕುಳಿತಿದ್ದ. ಈಗಾಗಲೇ ಈ ಜೋರಾದ ಸಂಭಾಷಣೆಯಿಂದ ಬೇಸತ್ತಿದ್ದ ಆ ವ್ಯಕ್ತಿ ಈ ಸ್ಥೂಲ ಕಾಯದವರ ಬಗ್ಗೆ ಸೌದಿ ಆಡಿದ ಮಾತಿನಿಂದ ಕುಳಿತಲ್ಲಿಂದಲೇ ಮಿಸುಕಾಡುತ್ತಿದ್ದ. ಹೀಗೆ ಹೇಳಿದ ವ್ಯಕ್ತಿ ಸೌದಿ ಅಲ್ಲದಿದ್ದರೆ ಸರಿಯಾದ ಉತ್ತರ ಕೊಡುತ್ತಿದ್ದನೇನೋ ಪಾಪ ಆ ಡುಮ್ಮ, ಆದರೆ ಈ ಮಾತುಗಳನ್ನ ಕೇಳಿ ಅವನಿಗೆ ಅಲ್ಲಿ ಕೂತಿರಲು ಆಗದೆ ನಿಧಾನವಾಗಿ ತನ್ನ ಶರೀರವನ್ನು ಸೋಫಾದಿಂದ ಆರೋಹಣ ಮಾಡಿ ಕಾಲ್ತೆಗೆದ. ಈ ಸನ್ನಿವೇಶ ನೋಡಿ ನನಗೆ ನಗು ತಡೆಯಲಾಗಲಿಲ್ಲ. ಇಲ್ಲಿಗೆ ನಿಲ್ಲಲಿಲ್ಲ ಪುಕ್ಕಟೆ ಮನರಂಜನೆ, ಸೌದಿಯ ಮಾತು ಇನ್ನೂ ಮುಂದುವರೆದಿತ್ತು. ಅಮೆರಿಕೆಯವ ಹೇಳಿದ ನಾನು feeling lonely in riyadh ಎಂದು, ಅದಕ್ಕೆ ಥಟ್ಟನೆ ಈ ಸೌದಿ ಅವನಿಗೆ ಹೇಳಿದ your lonliness and my kindness might prompt you to do something (ನಿನ್ನ ಒಂಟಿತನ ಮತ್ತು ನನ್ನ ಒಳ್ಳೆಯತನ “ಬೇಡದ್ದನ್ನು” ಮಾಡಲು ನಿನ್ನನ್ನು ಪ್ರೇರೇಪಿಸಬಹುದು) ಹ ಹ ಹಾ ಎಂದು ನಕ್ಕ.

ತಿಂಗಳ ತುಣುಕು

ಇಂದು ಆಗಸ್ಟ್ ತಿಂಗಳ ಆರಂಭ. ನಮಗೆ ಸ್ವಾತಂತ್ರ್ಯ ಸಿಕ್ಕಿದ, ಬಿಳಿಯರಿಂದ ಮುಕ್ತಿ ಸಿಕ್ಕಿದ ಮಾಸ. ಅಷ್ಟೇ ಅಲ್ಲ ನಾನು ಹುಟ್ಟಿದ ತಿಂಗಳೂ ಹೌದು. ಹಾಗಾಗಿ ಈ ತಿಂಗಳಿಗೆ ವಿಶೇಷ ಪ್ರಾಶಸ್ತ್ಯ. ಆಗಸ್ಟ್ ತಿಂಗಳಲ್ಲೇ ಇಂಗ್ಲೆಂಡಿನ ಜನರ ಅಚ್ಚುಮೆಚ್ಚಿನ ರಾಜಕುಮಾರಿ, ರಾಜಕುಮಾರ ಚಾರ್ಲ್ಸ್ ರವರ ಪತ್ನಿ ಡಯಾನ ಅಪಘಾತವೊಂದರಲ್ಲಿ  ನಿಧನ (ಆಗಸ್ಟ್ ೩೧, ೧೯೯೭) ಹೊಂದಿದ ದಿನ.  

ರೋಮ್ ಚಕ್ರವರ್ತಿ “ಆಗಸ್ಟಸ್ ಕಸೆಸರ್” ಸ್ಮರಣಾರ್ಥ ಸೆಕ್ಸ್ಟಿಲಿಸ್ ಎಂದು ಇದ್ದ ಹೆಸರನ್ನು ಆಗಸ್ಟ್ ಎಂದು ನಾಮಕರಣ ಮಾಡಲಾಯಿತು. ಈ ಚಕ್ರವರ್ತಿ ಆಳುವಾಗ ಎಂಟನೆ ತಿಂಗಳಿನಲ್ಲಿ ಮಹತ್ವ ಪೂರ್ಣ ಘಟನೆಗಳು ಜರುಗಿದ್ದರಿಂದ ಆತನ ಗೌರವಾರ್ಥ ಆಗಸ್ಟ್ ಎಂದು ಹೆಸರು ಬಂದಿದ್ದು.

ಆಗಸ್ಟ್ ತಿಂಗಳಿನಲ್ಲೇ ಅಮೆರಿಕೆಯ ಕರಿಯರ ನಾಯಕ ಮಾರ್ಟಿನ್ ಲೂಥರ್ ಕಿಂಗ್ i have a dream ಎನ್ನುವ ಅದ್ಭುತ ಭಾಷಣ ಮಾಡಿ ಅಮೇರಿಕ ಕರಿಯರನ್ನು ನಡೆಸಿಕೊಂಡ ಬಗೆಯನ್ನು ಜನಸ್ತೋಮಕ್ಕೆ ವಿವರಿಸಿದರು.

ಆಗಸ್ಟ್ ತಿಂಗಳಿನಲ್ಲಿ ರೆಡ್ ಕ್ರಾಸ್ ಸಂಸ್ಥೆಯ ಸ್ಥಾಪನೆ ಮತ್ತು ಜಮೈಕಾ ದೇಶಕ್ಕೂ ಆಗಸ್ಟ್ ತಿಂಗಳಿನಲ್ಲೇ ಬ್ರಿಟಿಷರ ದಾಸ್ಯದಿಂದ ಮುಕ್ತಿ ಸಿಕ್ಕಿದ್ದು.

ಜೋಸೆಫ್ ಪ್ರೀಸ್ಟ್ಲಿ ಆಮ್ಲಜನಕ ವನ್ನ ಕಂಡು ಹಿಡಿದಿದ್ದು ೧೭೭೪, ಆಗಸ್ಟ್ ತಿಂಗಳಿನಲ್ಲಿ.

ತಿಳಿವಳಿಕೆಗೆ ಮತ್ತೊಂದಿಷ್ಟು ತಿಳಿಸಾರು

ಬದುಕಿನಲ್ಲಿ ಮನೆಯವರಿಂದ , ನೆಂಟರಿಂದ , ಮಿತ್ರರಿಂದ, ಸಹೋದ್ಯೋಗಿಗಳಿಂದ ಬಹಳಷ್ಟು ಕುಹಕಗಳನ್ನು, ಕಟು ಮಾತುಗಳನ್ನ ಕೇಳಿರುತ್ತೇವೆ. ನಿನ್ನ ಕೈಯ್ಯಿಂದ ಏನೇನೂ ಆಗದು, ನೀನು ದಡ್ಡ, ಮೂರ್ಖ, ಕೋಪಿಷ್ಠ, ನಿನ್ನನ್ನು ಕಂಡರೆ ಯಾರಿಗೂ ಆಗೋದಿಲ್ಲ್ಲ, ನಿನ್ನ ಮುಖ ನೋಡು, ಇನ್ನೂ ಸ್ವಲ್ಪ ಚೆನ್ನಾಗಿ, ನೋಡುವಂತಿದ್ದರೆ ಏನು ಮಾಡುತ್ತಿದ್ದೆಯೋ, ನೀನ್ಯಾಕೆ ಹೀಗೇ, ನೀನು “ಸ್ಟ್ರೇಂಜ್”,  “ವೀರ್ಡ್” ಹೀಗೇ ಸಾಗುತ್ತವೆ ಗುಣಗಾನಗಳು. ಇವನ್ನು ಒದರುವವರಿಗೆ ತಿಳಿದಿರುವುದಿಲ್ಲ ಈ ಮಾತುಗಳು ಮನಸ್ಸಿಗೆ ಮಾತ್ರವಲ್ಲ ನಮ್ಮ self worth ಮೇಲೂ ಯಾವ ಪರಿಣಾಮ ಬೀರುತ್ತವೆ ಎಂದು. ಕೆಲವರಿಗೆ ಟೀಕಿಸೋದರಲ್ಲೇ ಏನೋ ಒಂದು ಸುಖ, ನೆಮ್ಮದಿ. ಯಾರನ್ನಾದರೂ ಕಟು ಮಾತುಗಳಲ್ಲಿ ಹಳಿದ ಮೇಲೆ ಏನನ್ನೋ ಸಾಧಿಸಿದ ಹಾಗೆ. ಚೆನ್ನಾಗಿ ಉರ್ಕೊಂಡ ಎಂದು ಒಳಗೊಳಗೇ ಸಂತಸ. ಇನ್ನು ಕೆಲವರಿಗೆ ತಮ್ಮ ಕುಟುಕು ಮಾತು ಜನರಿಗೆ ನೋವುಂಟು ಮಾಡುತ್ತದೆ ಎನ್ನುವ ಪರಿವೆಯೂ ಇರುವುದಿಲ್ಲ. ಚೆನ್ನಾಗಿ ಬೊಗಳಿದ ನಂತರ ಬಾಲವನ್ನು ಕುಂಡೆ ಯಡಿಗೆ ಸೇರಿಸಿ ನಡೆಯುವ ನಾಯಿಯಂತೆ ಜಾಗ ಖಾಲಿ ಮಾಡುತ್ತಾರೆ.  

ಇಂಥ ತಿಳಿಗೇಡಿಗಳು, ಮತಿಹೀನರು, ಹೇಳಿದ್ದನ್ನು ಮನಸ್ಸಿಗೆ ತೆಗೆದುಕೊಳ್ಳದೆ ಇರುವುದೂ ಕೆಲವೊಮ್ಮೆ ಅಸಾಧ್ಯವೇ. ಹಾಗಾದ್ರೆ ಕೊರಗಿ ಕೊರಗಿ ಮನಸ್ಸು ಕೆಡಿಸಿಕೊಳ್ಳ ಬೇಕೋ? ಬೇಡ, ಅಂಥ ವ್ಯಕ್ತಿಗಳ ಸಹವಾಸವನ್ನು ನಿಲ್ಲಿಸುವುದು ಅಥವಾ ಕಡಿಮೆ ಮಾಡುವುದು ಮೊದಲನೆಯದಾಗಿ ಮಾಡಬೇಕಾದ ಕೆಲಸ. ಸ್ವತಃ ಮನೆಯವರೇ ಆದರೆ? ಅವರಿಗೆ ತಿಳಿ ಹೇಳೋದು ಕಷ್ಟವಾದರೂ ಜಾಣ್ಮೆಯಿಂದ, ನಾಜೂಕಿನಿಂದ ವಿವರಿಸಬೇಕು. ಆದರೆ ಆಗೊಮ್ಮೆ ಈಗೊಮ್ಮೆ ಸನ್ನಡತೆಯ, ಸ್ವೀಟ್ ನೇಚರ್ ನ ಜನರನ್ನೂ ನಾವು ಕಾಣುತ್ತೇವೆ. ಮುಕ್ತ ಕಂಠದಿಂದ ಹೊಗಳುವ, ಮೆಚ್ಚುಗೆ ವ್ಯಕ್ತಪಡಿಸುವ, ಒಳ್ಳೆಯ ಮಾತನ್ನಾಡುವ, ನಮ್ಮ ಮೇಲೆ ನಮಗೇ ಅಭಿಮಾನ ಮೂಡುವಂತೆ  ಮಾಡುವ ಜನರೂ ಇಲ್ಲದ್ದಿಲ್ಲ. ಅಂಥವರ ಸಹವಾಸ ಮನಸ್ಸಿಗೆ ಮುದ ನೀಡುತ್ತದೆ, ಅಂಥವರು ಆದರ್ಶ ಸಂಗಾತಿಗಳು. ಒಬ್ಬ ವ್ಯಕ್ತಿ ವ್ಯಾಯಾಮ ನಿರತನಾಗಿದ್ದಾಗ ಅವನ ಲಾಕರ್ ನಲ್ಲಿ ಅವನ ಸ್ನೇಹಿತ ಒಂದು ಚಿಕ್ಕ ಚೀಟಿಯನ್ನು ಇಟ್ಟು ಹೋಗಿರುತ್ತಾನೆ, ತೆರೆದು ನೋಡಿದಾಗ ಅದರಲ್ಲಿ ಹೀಗೇ ಬರೆದಿರುತ್ತದೆ;

“ಯಾವುದನ್ನೂ ಮನಸ್ಸಿಗೆ ಹಚ್ಚಿಕೊಂಡು ಕೊರಗಬೇಡ, ನೀನು ಜ್ಞಾನದಲ್ಲಾಗಲಿ, ಅನುಭವದಲ್ಲಾಗಲಿ ಕಡಿಮೆಯಲ್ಲ. ನೀನು ನಿಷ್ಠುರವಾಗಿ ಮಾತನಾಡಿದರೂ ಸತ್ಯವನ್ನೇ ನುಡಿಯುವೆ, ಕ್ರಿಯಾಶೀಲತೆ ಇದೆ ನಿನ್ನಲ್ಲಿ, ನೀನು ಮಾತಿಗೆ ತಪ್ಪುವವನಲ್ಲ, ನಿನ್ನಿಂದಾದ ಸಹಾಯ ಮಾಡಲು ನೀನು ಯಾವಾಗಲೂ ತಯಾರು. ನಿನ್ನದು ನಿನಗೇ ತಿಳಿಯದಷ್ಟು ಉನ್ನತ ಮೌಲ್ಯಗಳುಳ್ಳ ವ್ಯಕ್ತಿತ್ವ, ಇಂದಲ್ಲ ನಾಳೆ ಯಶಸ್ಸು ನಿನ್ನನ್ನು ಹುಡುಕಿಕೊಂಡು ಬಂದೆ ಬರುತ್ತದೆ”. ನಾವೆಂದಾದರೂ ನೊಂದ ಆತ್ಮಗಳಿಗೆ ಇಂಥ ಸಾಂತ್ವನದ ನುಡಿಗಳನ್ನು ಹೇಳಿದ್ದೇವೆಯೇ, ಬರೆದಿದ್ದೇವೆಯೇ?