ಕೇರಳದ ಹೆಸರನ್ನು ಈಗ “ಕೇರಳಮ್” ಎಂದು ಮಾಡಲು ಸರಕಾರ ಯೋಚಿಸುತ್ತಿದೆ ಎಂದು ವರದಿ. ದಕ್ಷಿಣ ಭಾರತದ ಸಂಪೂರ್ಣಸಾಕ್ಷರ ರಾಜ್ಯ ಹೆಸರು ಬದಲಿಸುವುದರಲ್ಲಿ ಹಿಂದೆ ಇಲ್ಲ ಎಂದು ಈಗಾಗಲೇ ತೋರಿಸಿ ಕೊಟ್ಟಿದೆ. ತ್ರಿಚೂರ್, ಕ್ಯಾಲಿಕಟ್, ಟ್ರೀವೆನ್ಡ್ರಂ ಗಳನ್ನು ಬದಲಿಸಿ ತ್ರಿಶೂರ್, ಕೊಜಿಕೋಡ್, ತಿರುವನಂತಪುರಂ ಎಂದು ಬದಲಿಸಲಾಗಿದ್ದು ಹೆಸರುಗಳನ್ನ ಬದಲಿಸಿ ಅದೇನನ್ನು ಸಾಧಿಸಲು ಹೊರಟಿದ್ದೇವೆಯೋ ಎಂದು ಖಾದಿ ಧರಿಸುವ ರಾಜಕಾರಣಿಗಳೇ ಹೇಳಬೇಕು. ಭಾರತದ ಬಡತನದ ಬಗೆಗಿನ ವರದಿಯೊಂದು ನಮ್ಮ ವ್ಯವಸ್ಥೆಯ ವೈಫಲ್ಯದ ಮೇಲೆ ಕನ್ನಡಿ ಹಿಡಿದಿರುವಾಗ ರಾಜಕಾರಣಿಗಳು ಹೆಸರು ಬದಲಿಸುವ ಸರ್ಕಸ್ ಗಳಲ್ಲಿ ನಿರತರಾಗಿ ಜನರ ಲಕ್ಷ್ಯ ಬೇರೆಡೆ ತಿರುಗಿಸುವ ಆಟದಲ್ಲಿ ನಿರತರಾಗಿದ್ದಾರೆ. ಆಫ್ರಿಕಾದ ೨೬ ಅತಿ ಬಡ ರಾಷ್ಟ್ರಗಳಲ್ಲಿರುವ ಬಡವರಿಗಿಂತಲೂ ಹೆಚ್ಚು ಬಡವರು ನಮ್ಮ ದೇಶದ ಎಂಟು ರಾಜ್ಯಗಳಲ್ಲಿ ಇದ್ದಾರಂತೆ. ಆ ಎಂಟು ರಾಜ್ಯಗಳು ಯಾವುವೆಂದರೆ ಬಿಹಾರ್, ಛತ್ತೀಸ್ ಘಡ, ಒರಿಸ್ಸಾ, ಝಾರ್ಖಂಡ್, ಮಧ್ಯ ಪ್ರದೇಶ, ರಾಜಸ್ಥಾನ, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ.
ಆದರೆ ರೊಟ್ಟಿ ಯಿಲ್ಲದೆ ಹಸಿದವರ ಸಂಖ್ಯೆ ದಿನೇ ದಿನೇ ಏರುತ್ತಿದ್ದಂತೆಯೇ ಕೋಟ್ಯಾಧಿ ಪತಿಗಳ ಸಂಖ್ಯೆಯೂ ಅಷ್ಟೇ ವೇಗದಲ್ಲಿ ಬೆಳೆಯುತ್ತಿರುವುದು ವಿಸ್ಮಯಕಾರಿ ಬೆಳವಣಿಗೆ ಎನ್ನಬಹುದು.
>>ಕೇರಳದ ಹೆಸರನ್ನು ಈಗ “ಕೇರಳಮ್” ಎಂದು ಮಾಡಲು ಸರಕಾರ ಯೋಚಿಸುತ್ತಿದೆ
ಒಂದು ವೇಳೆ, ಮಲಯಾಳದಲ್ಲಿ ಅವರ ನಾಡಿಗೆ ಕೇರಳಮ್ ಅಂತ ಕರೆಯುತ್ತಿದ್ದರೆ, ಈ ಯೋಚನೆಯಲ್ಲಿ ತಪ್ಪೇನೂ ಇಲ್ಲ ಅಂತ ನನ್ನೆಣಿಕೆ.
>>ತ್ರಿಚೂರ್, ಕ್ಯಾಲಿಕಟ್, ಟ್ರೀವೆನ್ಡ್ರಂ ಗಳನ್ನು ಬದಲಿಸಿ ತ್ರಿಶೂರ್, ಕೊಜಿಕೋಡ್,
>>ತಿರುವನಂತಪುರಂ ಎಂದು ಬದಲಿಸಲಾಗಿದ್ದು
ಇವೂ ಅಷ್ಟೆ – ಆ ಊರುಗಳು ಯಾವಾಗಲೂ ತ್ರಿಶೂರ್, ಕೋೞಿಕ್ಕೋಡ್, ತಿರುವನಂತಪುರಂ, ಆಲಪ್ಪುೞ, ಪಾಲಕ್ಕಾಡ್ – ಹೀಗೇ ಕರೆಯಲ್ಪಡುತ್ತಿದ್ದವು. ಇಂಗ್ಲಿಷ್ ನಲ್ಲಿ ತಪ್ಪಾಗಿ ಟ್ರಿವೇಂಡ್ರಂ, ಅಲೆಪ್ಪಿ ಇತ್ಯಾದಿ ಬರೆಯಲಾಗುತ್ತಿದ್ದನ್ನು ಅವರು ತಿದ್ದಿದರೇ ಹೊರತು ಹೆಸರು ಬದಲಿಸಲಿಲ್ಲ.
ಇದು ಮರ್ಕೇರಾ -> ಮಡಿಕೇರಿ ಶಿಮೊಗಾ -> ಶಿವಮೊಗ್ಗ ರೀತಿಯ ಸಮಾಚಾರವೇ. ತಮ್ಮ ತಮ್ಮ ಊರುಗಳ ಹೆಸರು ಅವರು ಕರೆಯುವಂತೆಯೇ ಬೇರೆಯವರೂ ಕರೆಯಬೇಕೆಂದು ಬಯಸುವುದು ತಪ್ಪೇನಲ್ಲವಲ್ಲ?