ಹಗಲಿನಲ್ಲಿ ದೀಪ

ಇರುಳು ಕವಿಯುತ್ತಿದ್ದಂತೆ ವಾಹನ ಚಾಲಕರು (ಕೆಲವರು ಭಕ್ತಿಯಿಂದ ಕಸಿ ಮುಗಿದು ) ತಮ್ಮ ವಾಹನಗಳ ದೀಪಗಳನ್ನು ಉರಿಸುತ್ತಾರೆ. ಇದರಲ್ಲೇನೂ ಆಶ್ಚರ್ಯವಿಲ್ಲ ಬಿಡಿ. ಆದರೆ ಹಗಲಿನಲ್ಲಿ? ಹಗಲಿನಲ್ಲಿ ದೀಪದ ವಾಹನಗಳಿಗೆ? ಇದೆ ಎನ್ನುತ್ತಾರೆ ಕೆಲವರು, ಅಲ್ಲಲ್ಲ ಹಲವರು. ವಿಶೇಷವಾಗಿ ಮುಂದುವರಿದ ದೇಶಗಲವರು. ಲಿಬ್ಯಾ ದೇಶದಿಂದ ಮುಸ್ಲಿಂ ಮಹಿಳೆಯೊಬ್ಬರು ಬ್ಲಾಗ್ ಪ್ರಕಟಿಸುತ್ತಾರೆ. ಸೊಗಸಾಗಿ ಆಂಗ್ಲ ಭಾಷೆಯಲ್ಲಿ ಬರೆಯುವ ಈ ಮಹಿಳೆ ಜೀವನದ ಹಲವು ಘಟನೆಗಳನ್ನು ಅತ್ಯಂತ ಸ್ವಾರಸ್ಯಕರವಾಗಿ ವಿವರಿಸುತ್ತಾರೆ. ಈ ಮಹಿಳೆ ಕಾರನ್ನು ಹಗಲಿನಲ್ಲಿ ಓಡಿಸುವುದು ದೀಪಗಳನ್ನು ಉರಿಸಿಕೊಂಡು. ಹೀಗೆ ಪ್ರತಿ ಸಲವೂ ರಸ್ತೆಯಲ್ಲಿ ಹೋಗುವಾಗ ಜನ ಲೈಟ್ ಆಫ ಮಾಡುವಂತೆ ಈಕೆಗೆ ಸನ್ನೆ ಮಾಡುತ್ತಾರಂತೆ. ಕೆಲವರು ಕರ್ಕಶವಾಗಿ ಹಾರ್ನ್ ಮಾಡಿ ಎಚ್ಚರಿಸಿದರೆ ಇನ್ನೂ ಕೆಲವರು ಹಿಂದುಗಡೆಯಿಂದ ಲೈಟ್ ಬಿಟ್ಟು ಎಚ್ಚರಿಸುತ್ತಾರೆ. ತನಗಿಲ್ಲದ ಕಾಳಜಿ ಇವರಿಗೆಕೋ ಎಂದು ಸಿಡುಕುವ ಈ ಮಹಿಳೆ ಜನ ತಮ್ಮ ತಮ್ಮ ಕಾರುಗಳಲ್ಲಿ ತಮ್ಮ ಮಕ್ಕಳು ಕಿಟಕಿಯ ಹೊರಗೆ ನೇತಾಡುತ್ತಿದ್ದರೂ ಯಾವ ಪರಿವೆಯೂ ಇಲ್ಲದೆ ಓಡಿಸುವುದು ದೊಡ್ಡ ಒಗಟು ಎನ್ನುತ್ತಾರೆ. ಈ ಪರಿಪಾಠವನ್ನು ನಾನೂ ನೋಡುತ್ತಿರುತ್ತೇನೆ ಸೌದಿ ಅರೇಬಿಯಾದಲ್ಲಿ. ಮಕ್ಕಳು ಕಿಟಿಕಿಯಿಂದ ತಲೆ ಹೊರಕ್ಕೆ ಹಾಕಿದರೂ ಪಾಲಕರಿಗೆ ಏನೂ ಅನ್ನಿಸುವುದೇ ಇಲ್ಲ. ಕೆಲವರು ತಮ್ಮ ತೊಡೆಗಳ ಮೇಲೆ ಮಕ್ಕಳನ್ನು ಕೂರಿಸಿಕೊಂಡು ಡ್ರೈವ್ ಮಾಡುವುದೂ ಇದೆ. ಕೆಲವೊಮ್ಮೆ ಪೊಲೀಸರು ಇಂಥ ವನ್ನು ನೋಡಿದಾಗ ವಿಒಳಶನ್  ಟಿಕೆಟ್ ಇಶ್ಯೂ ಮಾಡುತ್ತಾರೆ         

ಈಗ ದೀಪದ ಸಮಸ್ಯೆಗೆ ಬರೋಣ. ಕೆಲವೊಂದು ಕಾರುಗಳು ಸ್ಟಾರ್ಟ್ ಮಾಡಿದ ಕೂಡಲೇ ಲೈಟ್ಗಳನ್ನೂ ಉರಿಸುತ್ತವೆ. ನನ್ನ ಕಾರಿನಲ್ಲಿ ಆ ಸೌಲಭ್ಯ ಇಲ್ಲ. ನನ್ನ ಭಾವನ GMC YUKON ಕಾರಿಗೆ ಈ ಸೌಲಭ್ಯ ಇದೆ. ನಾನು ಅದನ್ನು ಓಡಿಸುವಾಗ ಹಗಲಿನಲ್ಲಿ ಉರಿದ ದೀಪಗಳನ್ನು ಆರಿಸಿಬಿಡುತ್ತೇನೆ. ಮೇಲೆ ಹೇಳಿದ ಬ್ಲಾಗ್ ಓದಿದ ನಂತರ ನನಗೂ ಕುತೂಹಲ ಉಂಟಾಗಿ “ಯಾಹೂ” ಮೊರೆ ಹೋದೆ; ನನ್ನದೇ ಆದ, (ನನಗೆ ಗೊತ್ತಿಲ್ಲದ) ಕಾರಣಕ್ಕೆ ನಾನು ಗೂಗ್ಲಿಸುವುದಿಲ್ಲ.     

ಮೊದಲಿಗೆ ಸಿಕ್ಕಿದ್ದು ಆಸ್ಟ್ರಿಯಾ ದೇಶದ ವೆಬ್ ತಾಣ. ಹಗಲಿನಲ್ಲಿ ದೀಪ ಉರಿಸಿ ವಾಹನ ಚಲಾಯಿಸುದರಿಂದ ಅಪಘಾತಗಳು ಕಡಿಮೆ ಆಗುತ್ತವೆ ಎಂದು ಅಭಿಪ್ರಾಯ. ಹಗಲಿನಲ್ಲಿ ದೀಪದ ಬಗ್ಗೆ ಆಸ್ಟ್ರಿಯಾ ಕಾನೂನನ್ನು ಸಹ ಮಾಡಿತ್ತು. ಅ೯೭೦ ರ ದಶಕದಿಂದಲೂ ಯೂರೋಪಿನ ಹಲವು ದೇಶಗಳಲ್ಲಿ ಇದು ಕಡ್ಡಾಯವಾಗಿತ್ತು ಕೂಡಾ. ಹೀಗೆ ದೀಪ ಉರಿಸಿ ಚಲಾಯಿಸಿದರೆ ಎಂದುರಿನಿಂದ ಬರುವ ವಾಹನಗಳಿಗೂ ಅನುಕೂಲ, ಪಾದಚಾರಿಗಳಿಗೂ, ಸೈಕಲ್ ಸವಾರರಿಗೂ, ರಸ್ತೆ ದಾಟುವ  ಮಕ್ಕಳಿಗೂ ವಾಹನ ಗೋಚರಿಸಿ ಅಪಘಾತಗಳು ಸಂಭವಿಸುವುದಿಲ್ಲವಂತೆ. ಹಗಲಿನಲ್ಲಿ ದೀಪ ಉರಿಸಿ ಚಾಲಾಯಿಸಿ ತಿಂಗಳಿಗೆ ಕನಿಷ್ಠ ೩೦ ಜೀವಗಳನ್ನು ಉಳಿಸಿ ಎಂದು ಆಸ್ಟ್ರಿಯಾ ವಾಹನ ಚಾಲಕರಿಗೆ ನಿರ್ದೇಶಿಸಿದೆ.ಮತ್ತೊಂದು ವೆಬ್ ತಾಣ ಆಟೋ ಮೋಟೋ ಪೋರ್ಟಲ್ ಡಾಟ್ ಕಾಂ ಸಹ ಇದೇ ರೀತಿಯ ಅಭಿಪ್ರಾಯ ವ್ಯಕ್ತ ಪಡಿಸಿದೆ.

ಈಗ ಇವನ್ನು ಓದಿ ನಾನೂ ನನ್ನ ಕಾರಿನ ಲೈಟು ಗಳನ್ನು ಹಗಲಿನಲ್ಲಿ ಆನ್ ಮಾಡಿ ಓಡಿಸಿದರೆ ಬೆಂಬಿಡದ ಭೂತದಂತೆ ಜನ ದೀಪ ಆರಿಸುವಂತೆ (ಲಿಬ್ಯಾದ ಮಹಿಳೆಗೆ ಅನುಭವ ಆದಂತೆ) ವಿವಿಧ ರೀತಿಗಳಲ್ಲಿ ನನ್ನನ್ನು ಪೀಡಿಸುವರೋ ಏನೋ? ಭಾರತದಲ್ಲಿ ಹೇಗೋ ಏನೋ ಗೊತ್ತಿಲ್ಲ, ಏಕೆಂದರೆ ಈ ಹೊಸ ವಿಚಾರ ನನಗೆ ಗೊತ್ತಾಗಿದ್ದೆ ಈಗ. ಅದೂ ಅಲ್ಲದೆ ನಮ್ಮಲ್ಲಿ ದಾರಿಹೋಕ  “ಸಮಾಜ ಸೇವಕರು” ಹೆಚ್ಚು. ಖಂಡಿತ ಜನ ಬೆನ್ನು ಬೀಳುತ್ತಾರೆ ಇಲ್ಲಾ ತಮಾಷೆ ಮಾಡಿ ನಗುತ್ತಾರೆ, ನೋಡ್ರಲಾ, ಹೈದ ಹೊಸದಾಗಿ ಕಾರ್ ತಗೊಂಡಿರ್ಬೇಕು, ಅದ್ಕೆ ಓಡುಸ್ತಾ ಇದ್ದಾನೆ ಲೈಟ್ ಹಾಕ್ಕೊಂಡು. ಬೇಡ ಬಿಡಿ, ಈ ಹೊಸ ಸಾಹಸ, ಜನ ತಾವಾಗೇ ತಿಳಿದುಕೊಳ್ಳುವವರೆಗೂ. ಏನಂತೀರಾ?

One thought on “ಹಗಲಿನಲ್ಲಿ ದೀಪ

  1. nilgiri's avatar nilgiri ಹೇಳುತ್ತಾರೆ:

    ಇಲ್ಲಿ (NZ) ದ್ವಿ ಚಕ್ರ ವಾಹನಗಳು ಹಗಲಿನಲ್ಲೂ ಲೈಟ್ ಹಾಕಿಕೊಂಡೇ ಓಡಿಸಬೇಕು. ಮುಂದೆ ಕಾರು, ಟ್ರಕ್ ಗಳಿಗೂ ಇದೇ ರೂಲ್ಸ್ ಮಾಡುತ್ತಾರೆಂಬ ಗಾಳಿಸುದ್ದಿ! ಇಲ್ಲಿಯ ಸ್ಟೇಟ್ ಹೈವೇಗಳಲ್ಲಿ ವೇಗದ ಮಿತಿ 100km ಇರುವುದರಿಂದ, ಹೆಡ್ ಲೈಟ್ ಹಾಕಿಕೊಂಡರೆ ಎದುರಿನಿಂದ ಬರುತ್ತಿರುವವರಿಗೆ ಗೊತ್ತಾಗುತ್ತದಂತೆ. ನೀವು ಗೂಗಲಿಸಿದಂತೆ ಆಕ್ಸಿಡೆಂಟ್ ಗಳು ಕಡಿಮೆಯಂತೆ. ಊರಿನಲ್ಲಿ ಲೈಟ್ ಹಾಕಿಕೊಂಡು ಓಡಿಸುವ ಪ್ರಮೇಯವೇ ಬರುವುದಿಲ್ಲ. ಹತ್ತು ಹೆಜ್ಜೆಗೊಂದು ನಾಯಿಯೋ, ದನವೋ ಅಡ್ಡ ಬರುವಾಗ, 100km ಮೇಲೆ ಗಾಡಿ ಚಲಾಯಿಸಲು ಸಿಕ್ಕಾಪಟ್ಟೆ ಧೈರ್ಯ ಬೇಕು. ಅಲ್ವರ?!

ನಿಮ್ಮ ಟಿಪ್ಪಣಿ ಬರೆಯಿರಿ