* ಜಂಭದ ಬ್ಯಾಗ್

ವ್ಯಾನಿಟಿ ಬ್ಯಾಗ್ ಬಗ್ಗೆ ಒಂದು ಸ್ವಾರಸ್ಯಕರವಾದ ಲೇಖನ ಸಂಪದದಲ್ಲಿ ಪ್ರಕಟವಾಯಿತು. ವ್ಯಾನಿಟಿ ಬ್ಯಾಗ್ ಒಳಗೆ ಏನಿದೆ ಎಂದು ಕೇಳುವುದೂ, ಚೋಲಿ ಕೆ ಪೀಛೆ ಕ್ಯಾ ಹೈ ಎಂದು ಕೇಳುವುದೂ ಒಂದೇ ಎಂದು ನನ್ನ ಅಭಿಪ್ರಾಯ. ಹೆಂಗಳೆಯರು ತಮ್ಮ ಬ್ಯಾಗ್ ಬಗ್ಗೆ ತುಂಬಾ protective. ಅದರಲ್ಲೇನು ಬದನೆ ಕಾಯಿ ಇದ್ದರೂ ಗುಟ್ಟನ್ನು ಮಾತ್ರ ಬಿಟ್ಟು ಕೊಡುವುದಿಲ್ಲ. ಹೆಣ್ಣೇ ರಹಸ್ಯ ಅಲ್ಲವೇ? ಇನ್ನು ಬ್ಯಾಗ್ ತಾನೇ ಹೇಗೆ ಭಿನ್ನವಾದೀತು? ನಾನು ಪ್ರೌಢ ಶಾಲೆಯಲ್ಲಿದ್ದಾಗ ಕನ್ನಡ ಪಂಡಿತರೊಬ್ಬರು ಹೇಳಿದ್ದು ನೆನಪಿಗೆ ಬಂತು; ವ್ಯಾನಿಟಿ ಬ್ಯಾಗ್ ಅಂದ್ರೆ ಏನು ಗೊತ್ತೇನ್ರೋ, “ಜಂಭದ ಬ್ಯಾಗ್” ಅಂತ. ಅದನ್ನು ಹಿಡ್ಕೊಂಡು ಕಾಡು ಕುದ್ರೆ ಥರ ಹೋಗೋ ಹೆಂಗಸರನ್ನು ನೋಡಿದ್ದೀರಾ ಎಂದು ತಮಾಷೆಯಾಗಿ ಹೇಳಿದ್ದರು. ಅದೇನೇ ಇರಲಿ ನನಗಂತೂ ವ್ಯಾನಿಟಿ ಬ್ಯಾಗು ಮಹಿಳೆಯರಷ್ಟೇ ಸಂಕೀರ್ಣ. ಅದರೊಳಗೆ ಏನಿದೆ ಎಂದು ಕೇಳಿದರೆ ನಿಮ್ಮ ವಯಸ್ಸೆಷ್ಟು ಎಂದು ಕೇಳಿದರೆ ಎಷ್ಟು ಕೋಪ ಬರುತ್ತೋ ಅದಕ್ಕಿಂತ ಹೆಚ್ಚು ಕೋಪ ಬರುತ್ತದೆ. ಪಾಶ್ಚಾತ್ಯ ಮಹಿಳೆಯರ ಬ್ಯಾಗಿನಲ್ಲಿ ಟೂತ್ ಬ್ರಶ್ ಮತ್ತು ಕಾಂಡೋಮ್, ಪಿಲ್ಸ್ ಇರುತ್ತದೆ ಎಂದು ಎಲ್ಲೋ ಓದಿದ ನೆನಪು. ನಮ್ಮ ಮಹಿಳೆಯರ ಬ್ಯಾಗ್ನಲ್ಲಿ ನನಗೆ ತಿಳಿದಂತೆ ಬಾಯಿ ವಾಸನೆ ಹೋಗಲಾಡಿಸುವ “ಮಿಂಟ್” ಗಳು, ಕುಂಕುಮದ ಡಬ್ಬಿ, ಒಂದಿಷ್ಟು ಪೌಡರ್ರು, ಪುಟಾಣಿ ಮಗು ಇದ್ದರೆ diapers ಇತ್ಯಾದಿ. ಊಪ್ಸ್, ಮರೆತೆ. ತಮ್ಮ ಗಂಡಂದಿರ ಜೇಬಿನಿಂದ ಕದ್ದ ಹಣ? ಓಹ್, ಅದು ಬ್ಯಾಗ್ನಲ್ಲಿರೋಲ್ಲ, ಬದಲಿಗೆ ಕುಪ್ಪುಸದ ಒಳಗೆ ಇರುತ್ತೆ.
ನನಗಂತೂ ನಮ್ಮ ಹಳೆ ಕಾಲದ ಸಾಮಾನ್ಯವಾಗಿ ಅಜ್ಜಿಯರು ತಮ್ಮ ಸೊಂಟಕ್ಕೆ ಸಿಕ್ಕಿಸಿಕೊಳ್ಳುವ ಪುಟಾಣಿ, embroidery ಮಾಡಿದ ಬಟ್ಟೆಯ ಚೀಲ (pouch) ಇದೆಯಲ್ಲ, ಅದೇ ಇಷ್ಟ. ಅದರಲ್ಲಿ ಒಂದೆರಡು ಅಡಿಕೆಯ ತುಂಡುಗಳು, ಒಣಗಿದ ವೀಳ್ಯ, ಒಂದಿಷ್ಟು ಪುಡಿಗಾಸು… pouch ನಷ್ಟೇ ನೇರ, ಸರಳ.   

* ಸೂರ್ಯ ಚಂದಿರರಿರೋ ತನಕ..

ದೀರ್ಘಾಯುಷಿಗಳಾಗಬೇಕೇ? ಇಲ್ಲಿದೆ ನೋಡಿ ರೆಸಿಪಿ. ದೀರ್ಘಾಯುಷಿಗಳನ್ನು, ಅವರು ವಾಸಿಸುವ ಸ್ಥಳಗಳು, ಅವರ ಜೀವನ ರೀತಿಯನ್ನು ನೋಡಿ ಕಲಿತರೆ ಸೂರ್ಯ ಚಂದಿರರಿರೋ ತನಕ ಬದುಕಬಹುದಂತೆ. ಇದೆಂಥ ರೆಸಿಪಿ, ಎಲ್ಲರಿಗೂ ಗೊತ್ತಿರೋ ವಿಷಯವೇ ಎಂದು ಮೂಗೆಳೆಯಬೇಡಿ. ಈ ಕುರಿತ ಲೇಖನ ಅಮೆರಿಕೆಯ ಹಫ್ಫಿಂಗ್ಟನ್ ಪೋಸ್ಟ್ ನಲ್ಲಿ ಪ್ರಕಟವಾಗಿ ಸ್ವಾರಸ್ಯಕರ ಉತ್ತರಗಳು ಬಂದವು ವಾಚಕ ಪ್ರಭುಗಳಿಂದ. ಒಬ್ಬ ಹೇಳಿದ ನನ್ನ ಸೋದರನಿಗೆ ಈಗ  ೬೦ ನೋಡಲಿಕ್ಕೆ ಇನಷ್ಟು ವಯಸ್ಸಾದವರ ಹಾಗೆ ಕಾಣುತ್ತಾನೆ, ವ್ಯಾಯಾಮ ಮಾಡುವುದಿಲ್ಲ, ಕಣ್ಣಿಗೆ ಬಿದ್ದಿದ್ದನ್ನೆಲ್ಲಾ ತಿನ್ನುತ್ತಾನೆ, ಕೇಳಿದಾಗ ಅವನು ಹೇಳೋದು, ನನಗೇನೂ ನೂರು ವರ್ಷ ಬದುಕಬೇಕಾಗಿಲ್ಲ, ಯಾವಾಗ ಬೇಕಾದರೂ ಜಾಗ ಖಾಲಿ ಮಾಡಲು ತಯಾರು ಎಂದು. ಹೋಗುವ ದಿನ ಬುಕ್ ಮಾಡೋ ಸೌಲಭ್ಯವೂ ಇದ್ದಿದ್ದರೆ ಅದನ್ನೂ ಸಹ ಮಾಡುತ್ತಿದ್ದನೇನೋ ಎಂದು ತಮಾಷೆಯಾಗಿ ಹೇಳಿದ. 
ಬೇರೆಯವರ ಜೀವನ ರೀತಿ ನೋಡಿ ಕಲಿಯಲು ಅಮೆರಿಕನ್ನರಿಗೆ ತಮ್ಮ ದೇಶದ ಹೊರಗೂ ಜನ ಬದುಕುತ್ತಿದ್ದಾರೆ ಎನ್ನುವ ಅರಿವಾದರೂ ಬೇಕಲ್ಲ ಎಂದು ಮತ್ತೊಬ್ಬನ ಅಮೆರಿಕೆಯವನೆ ಆದವನ ಕುಹಕ. ಒಟ್ಟಿನಲ್ಲಿ ಅಮೆರಿಕೆಯಲ್ಲಿ ಈಗ ಒಬಾಮ ಹೊಸ ಆರೋಗ್ಯ ನೀತಿಒಂದನ್ನು ತಂದಿದ್ದಾನೆ. ಅದರ ಬಗೆಗಿನ ಚರ್ಚೆಯಲ್ಲಿ ದೀರ್ಘಾಯುಷಿಗಳಾಗಿ, ಆರೋಗ್ಯವಂತರಾಗಿ  ಇರುವುದರ ಬಗ್ಗೆಯೂ ಚರ್ಚೆ. ಮಾಂಸ, ಕುಡಿತ ಬೇಡ ಎಂದರೆ ಅಮೇರಿಕನ್ನರಾದರೂ ಹೇಗೆ ಕೇಳಿಯಾರು? ಇವೆರಡೂ ತಮ್ಮ ಎರಡು ಕಣ್ಣುಗಳಿದ್ದಂತೆ ಅವರಿಗೆ. ಅಷ್ಟೊಂದು ಜೋಪಾನ. ಸೊಪ್ಪು ತಿನ್ನು ಎಂದರೆ ಹೇಗೆ ಹೇಳಿ ನೋಡೋಣ.
ಒಬ್ಬ ಜೀವನ ಪೂರ್ತಿ ಬಂದರಿನಲ್ಲಿ ದುಡಿದು, ಸಾಕಷ್ಟು ಕುಡಿದು, ಜೂಜಾಡಿ, ಹ್ಯಾಮ್ಬರ್ಗರ್ ತಿಂದು, ವೇಶ್ಯಾ ಸಹವಾಸ ಮಾಡಿ, ಸಿಗಾರ್ ಸೇದಿ, ಇಷೆಲ್ಲಾ ಅವಾಂತರ ಮಾಡಿಯೂ ದೀರ್ಘಾಯುಷಿಯಾಗಿದ್ದಾನೆ ಎಂದು ತಾವೂ ಅದೇ ರೀತಿ ಬದುಕುತ್ತೇವೆ ಎಂದು ಮೊಂಡು ಹಿಡಿದು ಕೂರುವ ಮಂದಿಯೂ ಇದ್ದಾರೆ.         

* ಗುಬ್ಬಚ್ಚಿಯ ವಯೋವೃದ್ಧ ಅಭಿಮಾನಿ

ನಮ್ಮ ಭಾವನೆಗಳನ್ನು, ಅನುಭವಗಳನ್ನು, ಸಿಹಿ – ಕಹಿಯನ್ನು ಕೇವಲ ೧೪೦ ಅಕ್ಷರಗಳಲ್ಲಿ ಒದರಿ ಹಂಚಿಕೋ ಎನ್ನುವ ಪುಟ್ಟ ಗುಬ್ಬಿ twitter ನ ಮೋಡಿಗೆ ಬೀಳದವರು ವಿರಳ. ನಮ್ಮ ಯುವ ರಾಜಕಾರಣಿ ಶಶಿ ತರೂರ್ ಆಗಾಗ ಏನನ್ನಾದರೂ ವಟಗುಟ್ಟಿ ಎಲ್ಲರನ್ನೂ ತಬ್ಬಿಬ್ಬು ಮಾಡುವುದಲ್ಲದೆ ಸ್ವತಹ ತಾವೇ ಕಷ್ಟಕ್ಕೆ ಸಿಕ್ಕಿಕೊಳ್ಳುತ್ತಾರೆ. twitter ಬಳಗಕ್ಕೆ ಈಗ ಕಿಂಗ್ ಖಾನ್ ಶಾರುಕ್ ಸಹ ಸೇರಿಕೊಂಡಿದ್ದಾನಂತೆ. ಹದಿಹೆರೆಯದವರಿಂದ ಆರಂಭಗೊಂಡು ಮುಪ್ಪಿನವರೆಗಿನ ಪ್ರಭಾವ twitter ನದು. twitter ನ ಅತಿ ವಯಸ್ಸಾದ ಅಭಿಮಾನಿ  ಇಂಗ್ಲೆಂಡಿನ “ಐಯ್ವಿ  ಬೀನ್” ಎನ್ನುವ ಮಹಿಳೆ. ಈ ವಯೋವೃದ್ಧ ಮಹಿಳೆಗೆ ೧೦೪ ವರ್ಷ ಮತ್ತು ೫೫,೦೦೦ ಅಭಿಮಾನಿಗಳಂತೆ twitter ನಲ್ಲಿ.
ನೀವೂ ಇದ್ದೀರಾ ತಾನೇ ವಿದ್ಯುತ್ ತಂತಿಯ ಅಥವಾ ಬೇಲಿಯ ಮೇಲೆ ಸಾಲಾಗಿ ಶಿಸ್ತಾಗಿ ಕೂತು ಹರಟೆ ಕೊಚ್ಚುವ ಗುಬ್ಬಚ್ಚಿಗಳೊಂದಿಗೆ?   
ಚಿತ್ರ ಕೃಪೆ: independent ಪತ್ರಿಕೆ

     

* ಆಸ್ಟ್ರೇಲಿಯಾ

ಆಸ್ಟ್ರೇಲಿಯಾ ಎಂದ ಕೂಡಲೇ ಒಂದೊಮ್ಮೆ ನೆನಪಿಗೆ ಬರುತ್ತಿದ್ದುದು ಕುರಿಗಳು, ಜಾನುವಾರುಗಳು, ಮತ್ತು ಕ್ರಿಕೆಟ್. ಇತ್ತೀಚೆಗೆ ಭಾರತೀಯ ವಿದ್ಯಾರ್ಥಿಗಳ ಮೇಲೆ ನಡೆಯುತ್ತಿರುವ ಅವ್ಯಾಹತ ಹಲ್ಲೆ ಮತ್ತು ಕೊಲೆ ಆಸ್ಟ್ರೇಲಿಯನ್ನರ ಮತ್ತೊಂದು ರೂಪದ ಪರಿಚಯ ಮಾಡಿಕೊಡುತ್ತಿದೆ. ಭಾರತೀಯರ ವಿರುದ್ಧದ ಪ್ರತಿ ಆಕ್ರಮಣಕ್ಕೂ “ಜನಾಂಗ ಬೇಧ “ನೀತಿಯ ಅರ್ಥ ಕಲ್ಪಿಸಬೇಡಿ ಎಂದು ಅಲ್ಲಿನ ಮಂತ್ರಿ ಮಹೋದಯರ ಹೇಳಿಕೆ ಓದುತ್ತಿದ್ದಾಗಲೇ ಆಸ್ಟ್ರೇಲಿಯಾ ದೇಶದ ಮನಮೋಹಕ, ರಮಣೀಯ ಚಿತ್ರಗಳ ಬ್ಲಾಗ್ ಒಂದು ಕಣ್ಣಿಗೆ ಬಿತ್ತು. ತನ್ನದೇ ಸೃಷ್ಟಿಗಳಾದ ಮನುಷ್ಯನಲ್ಲಿ ಅಸಹನೆಯನ್ನೂ, ಕ್ರೌರ್ಯವನ್ನೂ, ಮತ್ತು ನಿಸರ್ಗದಲ್ಲಿ ಬೆರಗನ್ನೂ, ಬೆಡಗನ್ನೂ ಇಟ್ಟ ಆ ಭಗವಂತನ ಮರ್ಮವಾದರೂ ಏನಿರಬಹುದು?      

ಕೆಳಗಿನ ಕೊಂಡಿ ಕ್ಲಿಕ್ಕಿಸಿ, ನೋಡಿ ಕಾಂಗರೂ ನಾಡಿನ ಬೆಡಗನ್ನು.