* ಫೇಸ್ ಬುಕ್ ಮುಸ್ಲಿಂ ವಿರೋಧಿ ?

ನಾಡಿನ ಪ್ರಸಿದ್ಧ ಪತ್ರಿಕೆಯೊಂದರಲ್ಲಿ ಬಂದ ಸುದ್ದಿ ಇದು. ಈಜಿಪ್ಟ್ ದೇಶದ ಮುಸ್ಲಿಂ ಧರ್ಮ ಗುರು ನೀಡಿದ “ಫತ್ವ” ವನ್ನು ತಪ್ಪಾಗಿ  (ಉದ್ದೇಶಪೂರ್ವಕ?) ಅರ್ಥೈಸಿ ಬರೆದಾಗ ಮೇಲೆ ತೋರಿಸಿದ ತಲೆ ಬರಹ ಎಲ್ಲರ ಗಮನ ಸೆಳೆಯುತ್ತದೆ. ಮೈಸೂರು ಪ್ರಕಾಶನದ ಈ ಪತ್ರಿಕೆ ಸಾಧಾರಣವಾಗಿ ಯಾರಿಗೂ ನೋವಾಗದಂಥ, ಅನಾವಶ್ಯಕ ಕುತೂಹಲ ಕೆರಳಿಸದಂಥ ಸುದ್ದಿಗಳನ್ನು ಪ್ರಕಟಿಸುತ್ತದೆ. ಆದರೆ ಕೆಲವೊಮ್ಮೆ “ಫ್ಯಾಷೆನ್ ಟ್ರೆಂಡ್” ಅನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ ನೋಡಿ. ಆದರೆ ಇಂಥ ವರದಿಗಳನ್ನು ಮುದ್ರಿಸಿ ಪತ್ರಿಕೆ ತನ್ನ ಆತ್ಮವನ್ನು ಕಳೆದುಕೊಳ್ಳಬಹುದು ಎನ್ನುವ ಸಾಮಾನ್ಯ ಜ್ಞಾನ ಸಂಪಾದಕನಿಗೆ ಇದ್ದರೆ ಆತ ಜಾಗರೂಕತೆ ತೋರಿಸುತ್ತಾನೆ. 

ಈಜಿಪ್ಟ್ ದೇಶದ ಈ ಧರ್ಮ ಗುರು ಫೇಸ್ ಬುಕ್ ಮುಸ್ಲಿಂ ವಿರೋಧಿ ಅಂದ ಕೂಡಲೇ ನಾನಾಗಲಿ, ಲಕ್ಷಾಂತರ ಮುಸ್ಲಿಮರಾಗಲಿ ಫೇಸ್ ಬುಕ್ ನಿಂದ ಹೊರನಡೆಯುವಷ್ಟು ಬಾಲಿಶರಲ್ಲ. ಅಷ್ಟಕ್ಕೂ ಆ ಧರ್ಮ ಗುರು ನೀಡಿದ ವಿವರಣೆ ಸ್ವಲ್ಪ ನೋಡೋಣ. ಫೇಸ್ ಬುಕ್ ಮೂಲಕ ಅನೈತಿಕ ಸಂಬಂಧ ಅರಸಿ ವೈವಾಹಿಕ ಸಂಬಂಧವನ್ನು ಹಾಳುಗೆಡವುವರ ಬಗ್ಗೆ ಮಾತ್ರ ಈ ಎಚ್ಚರಿಕೆ. ಧರ್ಮ ಸಂದೇಶಗಳನ್ನೂ ಸಾರಲೂ, ವ್ಯಾವಹಾರಿಕವಾಗಿಯೋ, ಬರೀ ಸ್ನೇಹಕ್ಕಾಗಿಯೋ ಉಪಯೋಗಿಸುವವರ ವಿರುದ್ಧ ಅಲ್ಲ ಈ  “ಫತ್ವ”. 

ಇಸ್ಲಾಂ ಧರ್ಮದಲ್ಲಿ ಶೋಷಣೆಗೆ ಎಡೆ ಮಾಡುವ ಪುರೋಹಿತಶಾಹಿ ಇಲ್ಲ. ಹಾಗೂ  ಫತ್ವ ಹೊರಡಿಸುವ ಅಧಿಕಾರ ಪ್ರತಿ ಮುಲ್ಲಾಗೂ ಇಲ್ಲ. ಪ್ರಪಂಚದ ಯಾವುದಾದರೂ ಮೂಲೆಯಲ್ಲಿ ಕೂತು ಯಾರಾದರೂ ತಮಗಿಷ್ಟ ಬಂದಂತೆ ಧರ್ಮದ ಬಗ್ಗೆ ಹೇಳಿಕೆ ನೀಡಿದ ಕೂಡಲೇ ಅದನ್ನು ವಿಶೇಷ ವರದಿಯನ್ನಾಗಿ ಪ್ರಕಟಿಸಿ ಬೊಬ್ಬೆ ಹೊಡೆಯುವ ಪತ್ರಿಕೆಗಳಿಗೆ ಮಾಡಲು ಬೇಕಷ್ಟು ಕೆಲಸಗಳಿವೆ. ಸಾಮಾಜಿಕ ಸಂಪರ್ಕ ಮಾಧ್ಯಮಗಳ ಸಂಕೀರ್ಣ ವ್ಯವಸ್ಥೆಗೆ ಬಳಿ ಬಿದ್ದು ತಮ್ಮ ವೈಯಕ್ತಿಕ ಜೀವನವನ್ನು ಹಾಳು  ಮಾಡಿಕೊಂಡವರು ಹಲವರು. ವಿವಾಹಿತರಾಗಿಯೂ ಸಂಬಂಧಗಳನ್ನು ಹುಡುಕಿಕೊಂಡು ನಡೆಯುವ, ಸುಳ್ಳು ಪ್ರೊಫೈಲ್ ಗಳನ್ನು ನಂಬಿ ತಮ್ಮ ಬದುಕನ್ನು ಕೆಡಿಸಿ ಕೊಂಡವರೂ ಇದ್ದಾರೆ. ಟೀವೀ ಬಂದ ಹೊಸತರಲ್ಲೂ ಕೆಲವು ಧರ್ಮ ಗುರುಗಳು ಈ “ಶನಿ ಪೆಟ್ಟಿಗೆ” ಸಮಾಜವನ್ನು ಕಲುಷಿತಗೊಳಿಸಬಹುದು ಎಂದು ಎಚ್ಚರಿಸಿದ್ದರು. ಹಾಗೆ ಸಂಭವಿಸಿತೂ ಕೂಡಾ. ೮ – ೧೦ ವರ್ಷದ ಮಕ್ಕಳು ಅಶ್ಲೀಲ ಸೀರ್ಯಲ್ಲುಗಳನ್ನು, ಮೂವಿಗಳನ್ನು ನೋಡಿ ಪ್ರೇಮ ಪತ್ರ ಬರೆಯಲು ತೊಡಗಿದರು.  ಹದಿಹರೆಯದ ಹೊತ್ತಿಗೆ ಎಲ್ಲ ರೀತಿಯ ಅನುಭವಗಳನ್ನು ಪಡೆಯಲು ತೊಡಗಿದರು. ಹಿಂಸಾಪ್ರಿಯರೂ ಆದರು. 

ಹಾಗೆಂದು ತಂತ್ರ ಜ್ಞಾನಕ್ಕೆ ಬೆನ್ನು ತಿರುಗಿಸಿ ಬದುಕಬೇಕೆಂದಲ್ಲ. ಮಿತಿಯನ್ನು ಅರಿತು ಪ್ರಜ್ಞಾ ಶೀಲತೆ ಮೆರೆದರೆ ಅದೇ ಚೆಂದ.          

 

 

ನಿಮ್ಮ ಟಿಪ್ಪಣಿ ಬರೆಯಿರಿ