* ಸೂರ್ಯ ಚಂದಿರರಿರೋ ತನಕ..

ದೀರ್ಘಾಯುಷಿಗಳಾಗಬೇಕೇ? ಇಲ್ಲಿದೆ ನೋಡಿ ರೆಸಿಪಿ. ದೀರ್ಘಾಯುಷಿಗಳನ್ನು, ಅವರು ವಾಸಿಸುವ ಸ್ಥಳಗಳು, ಅವರ ಜೀವನ ರೀತಿಯನ್ನು ನೋಡಿ ಕಲಿತರೆ ಸೂರ್ಯ ಚಂದಿರರಿರೋ ತನಕ ಬದುಕಬಹುದಂತೆ. ಇದೆಂಥ ರೆಸಿಪಿ, ಎಲ್ಲರಿಗೂ ಗೊತ್ತಿರೋ ವಿಷಯವೇ ಎಂದು ಮೂಗೆಳೆಯಬೇಡಿ. ಈ ಕುರಿತ ಲೇಖನ ಅಮೆರಿಕೆಯ ಹಫ್ಫಿಂಗ್ಟನ್ ಪೋಸ್ಟ್ ನಲ್ಲಿ ಪ್ರಕಟವಾಗಿ ಸ್ವಾರಸ್ಯಕರ ಉತ್ತರಗಳು ಬಂದವು ವಾಚಕ ಪ್ರಭುಗಳಿಂದ. ಒಬ್ಬ ಹೇಳಿದ ನನ್ನ ಸೋದರನಿಗೆ ಈಗ  ೬೦ ನೋಡಲಿಕ್ಕೆ ಇನಷ್ಟು ವಯಸ್ಸಾದವರ ಹಾಗೆ ಕಾಣುತ್ತಾನೆ, ವ್ಯಾಯಾಮ ಮಾಡುವುದಿಲ್ಲ, ಕಣ್ಣಿಗೆ ಬಿದ್ದಿದ್ದನ್ನೆಲ್ಲಾ ತಿನ್ನುತ್ತಾನೆ, ಕೇಳಿದಾಗ ಅವನು ಹೇಳೋದು, ನನಗೇನೂ ನೂರು ವರ್ಷ ಬದುಕಬೇಕಾಗಿಲ್ಲ, ಯಾವಾಗ ಬೇಕಾದರೂ ಜಾಗ ಖಾಲಿ ಮಾಡಲು ತಯಾರು ಎಂದು. ಹೋಗುವ ದಿನ ಬುಕ್ ಮಾಡೋ ಸೌಲಭ್ಯವೂ ಇದ್ದಿದ್ದರೆ ಅದನ್ನೂ ಸಹ ಮಾಡುತ್ತಿದ್ದನೇನೋ ಎಂದು ತಮಾಷೆಯಾಗಿ ಹೇಳಿದ. 
ಬೇರೆಯವರ ಜೀವನ ರೀತಿ ನೋಡಿ ಕಲಿಯಲು ಅಮೆರಿಕನ್ನರಿಗೆ ತಮ್ಮ ದೇಶದ ಹೊರಗೂ ಜನ ಬದುಕುತ್ತಿದ್ದಾರೆ ಎನ್ನುವ ಅರಿವಾದರೂ ಬೇಕಲ್ಲ ಎಂದು ಮತ್ತೊಬ್ಬನ ಅಮೆರಿಕೆಯವನೆ ಆದವನ ಕುಹಕ. ಒಟ್ಟಿನಲ್ಲಿ ಅಮೆರಿಕೆಯಲ್ಲಿ ಈಗ ಒಬಾಮ ಹೊಸ ಆರೋಗ್ಯ ನೀತಿಒಂದನ್ನು ತಂದಿದ್ದಾನೆ. ಅದರ ಬಗೆಗಿನ ಚರ್ಚೆಯಲ್ಲಿ ದೀರ್ಘಾಯುಷಿಗಳಾಗಿ, ಆರೋಗ್ಯವಂತರಾಗಿ  ಇರುವುದರ ಬಗ್ಗೆಯೂ ಚರ್ಚೆ. ಮಾಂಸ, ಕುಡಿತ ಬೇಡ ಎಂದರೆ ಅಮೇರಿಕನ್ನರಾದರೂ ಹೇಗೆ ಕೇಳಿಯಾರು? ಇವೆರಡೂ ತಮ್ಮ ಎರಡು ಕಣ್ಣುಗಳಿದ್ದಂತೆ ಅವರಿಗೆ. ಅಷ್ಟೊಂದು ಜೋಪಾನ. ಸೊಪ್ಪು ತಿನ್ನು ಎಂದರೆ ಹೇಗೆ ಹೇಳಿ ನೋಡೋಣ.
ಒಬ್ಬ ಜೀವನ ಪೂರ್ತಿ ಬಂದರಿನಲ್ಲಿ ದುಡಿದು, ಸಾಕಷ್ಟು ಕುಡಿದು, ಜೂಜಾಡಿ, ಹ್ಯಾಮ್ಬರ್ಗರ್ ತಿಂದು, ವೇಶ್ಯಾ ಸಹವಾಸ ಮಾಡಿ, ಸಿಗಾರ್ ಸೇದಿ, ಇಷೆಲ್ಲಾ ಅವಾಂತರ ಮಾಡಿಯೂ ದೀರ್ಘಾಯುಷಿಯಾಗಿದ್ದಾನೆ ಎಂದು ತಾವೂ ಅದೇ ರೀತಿ ಬದುಕುತ್ತೇವೆ ಎಂದು ಮೊಂಡು ಹಿಡಿದು ಕೂರುವ ಮಂದಿಯೂ ಇದ್ದಾರೆ.         

ನಿಮ್ಮ ಟಿಪ್ಪಣಿ ಬರೆಯಿರಿ