ಒಂದು ಬ್ಲಾಗ್ ಪೋಸ್ಟ್ ನಲ್ಲಿ ಎರಡು ರೀತಿಯ ಧಾರ್ಮಿಕ ಪ್ರವಚನ ಅಥವಾ ಉಪದೇಶಕರ ಬಗ್ಗೆ ಚರ್ಚೆ ಇತ್ತು. ಸಂಗೀತ ಕಾರ್ಯಕ್ರಮ ನಡೆಯುತ್ತಿದ್ದ ಸ್ಥಳದಲ್ಲಿ ಕ್ರೈಸ್ತ ಉಪದೇಶಕನೊಬ್ಬ ” turn or burn ” ಎಂದು ಬರೆದಿದ್ದ ಭಿತ್ತಿ ಪತ್ರ ಹಿಡಿದು ಜನರನ್ನು ಪಾಪದಿಂದ ವಿಮೋಚಿತರಾಗಲು ಉತ್ತೇಜಿಸುತ್ತಿದ್ದ. ಆತನ ಗೆಳೆಯ ಬೈಬಲ್ ಗ್ರಂಥವನ್ನು ಹಿಡಿದುಕೊಂಡು ಒಬ್ಬರೊಂದಿಗೆ ವಾದ ಮಾಡುತ್ತಿದ್ದ. ನೆರೆದಿದ್ದ ಹಲವು ಜನ ಇವರಿಗೆ ಬೆಂಬಲ ಕೊಡುತ್ತಿದ್ದರು. ಮತ್ತೊಂದು ಕಡೆ ಮತ್ತೊಂದು ಗುಂಪು ಧರ್ಮ ಪ್ರಚಾರ ಮಾಡುತ್ತಿತ್ತು; ಭಕ್ತಿ ಗೀತೆಗಳನ್ನು ಹಾಡುವ ಮೂಲಕ. ಇಲ್ಲಿ ಪ್ರಶ್ನೆ ಏನೆಂದರೆ ಒಂದು ಕಡೆ “turn or burn” ಎಂದರೆ “ಭಕ್ತಿ ಇಡು ಅಥವಾ ನರಕದಲ್ಲಿ ಬೇಯಿ” ಎಂದು; ಈ ರೀತಿ ಜನರಲ್ಲಿ ಭಯ ಹುಟ್ಟಿಸುವ ಪ್ರವಚನ ಫಲಿತಾಂಶವನ್ನು ಕೊಡಬಲ್ಲುದೆ ಎಂದು. ಕೆಲವರ ಪ್ರಕಾರ ಇದು ಸರಿ ಏಕೆಂದರೆ ಜನರ ಗಮನ ಶಿಕ್ಷೆ ಕಡೆ ಹರಿಸದಿದ್ದರೆ ಅವರಿಗೆ ಭಕ್ತಿ ಮೂಡುವುದಿಲ್ಲ ಮತ್ತು ಪಾಪಗಳನ್ನು ಮಾಡಲು ಹೇಸುವುದಿಲ್ಲ ಎಂದು. ನನ್ನ ಪ್ರಕಾರ ದೇವರ ಶಿಕ್ಷೆ ಜೊತೆಗೆ ಅವನ ಕಾರುಣ್ಯವನ್ನೂ ಕೊಂಡಾಡಿ ಜನರನ್ನು ಧಾರ್ಮಿಕತೆ ಕಡೆ ಎಳೆಯಬೇಕು. ಮತ್ತು ಇಂಥ ಸಂದೇಶಗಳನ್ನು ಬೀದಿಯಲ್ಲಿ ಮಾಡುವುದು ಅಷ್ಟೇನೂ ಸಮಂಜಸ ಎನ್ನಿಸುವುದಿಲ್ಲ ಮತ್ತು ಅಂಥ ಪ್ರಯತ್ನಗಳಿಗೆ ಜನರ ಪ್ರೋತ್ಸಾಹವೂ ಸಿಗಲಿಕ್ಕಿಲ್ಲ. ಮೇಲೆ ಹೇಳಿದ ಘಟನೆ ಅಮೆರಿಕೆಯಲ್ಲಿ ನಡೆದದ್ದು.