ಕಾಂಡೋಮ್ ಚಿಂತೆ

ಒಂದೆರಡು ಬ್ಲಾಗ್ ಗಳಲ್ಲಿ ಕಾಂಡೋಮ್ ಬಗ್ಗೆ ಚರ್ಚೆ. ಇದೇನಪ್ಪ ಪ್ರಪಂಚದಲ್ಲಿ ಹೊಟ್ಟೆಗಿಲ್ಲ ಎಂದು ಮಂದಿ ಕೊರಗುವಾಗ ಇವರಿಗೆ ಕಾಂಡೋಮ್ ಬಗ್ಗೆ ಚಿಂತೆ ಎಂದು ಚಿಂತಿತರಾಗಿ ಕೊರಗಬೇಡಿ. ಕಾಂಡೋಮ್  ಹೇಗ್ ಉಪಯೋಗ್ಸೋದು, ಅದರ ಖರ್ಚೆಷ್ಟು ಇದರ ಬಗ್ಗೆ ಅಲ್ಲ ತಲೆ ಬಿಸಿ. ಬದಲಿಗೆ ಕಾಂಡೋಮ್ ತರಲು ತಪ್ಪಿತಸ್ಥ ಭಾವದಿಂದ ಹೋಗುವ ಪರಿಸ್ಥಿತಿ ಕುರಿತ ಚರ್ಚೆ ಇದು. ಸತ್ಯ ಹೇಳಬೇಕೆಂದರೆ ಕಾಂಡೋಮ್ ಕೊಡಿ ಎಂದು ಕೇಳಲು ನನಗೇನೂ ಮುಜುಗರ ಇಲ್ಲ. ಭಾರತದಲ್ಲಿ ಕಾಂಡೋಮ್ ಕೊಂಡಿಲ್ಲ ನಾನು. ನಾನಿರುವ ಸೌದಿ ಅರೇಬಿಯದಲ್ಲಿ ಇದರ ಬಗ್ಗೆ ಅಂತ ಮುಜುಗರವೋ ನಾಚಿಕೆಯೋ ಇಲ್ಲ. ಇನ್ನು ಕಾಂಡೋಮ್ ಕೇಳಲು ಭಯ, ಸಂಕೊಚವಾದರೆ ಕಾಂಡೋಮ್ಗಳಲ್ಲಿನ ವೈವಿಧ್ಯತೆ ಚರ್ಚಿಸಿ ನಮಗೆ ಬೇಕಾದ, ನಮ್ಮ ಅಭಿರುಚಿಗೆ ಹೊಂದುವ ಕಾಂಡೋಮ್ ಆರಿಸಿ ಕೊಳ್ಳುವ ಮಾತಂತೂ ದೂರವೇ ಉಳಿಯಿತು. ಕಾಂಡೋಮ್ ಕೊಡಿ ಎಂದು ಕೇಳಿದ ಕೂಡಲೇ ಅಂಗಡಿಯವ ಧೂಳು ತುಂಬಿದ ಡಬ್ಬವನ್ನು ಕನಿಕರದಿಂದ ನಮ್ಮೆಡೆ ನೋಡಿ ಬಿಸಾಕುತ್ತಾನೆ. ಅಷ್ಟೇ ಅಲ್ಲ, ಅಂಗಡಿಯಲ್ಲಿ ಕೆಲಸ ಮಾಡುವ ಹುಡಗರು ಕಿಸಕ್ ಎಂದು ನಕ್ಕು ಮತ್ತಷ್ಟು ಹಿಂಸೆ ಮಾಡುತ್ತಾರೆ.  ಪಾಪ ಈ ಮಿಕ ಉಗುಳು ನುಂಗುತ್ತಾ ಅಂಗಡಿಯವ ಕೇಳಿದ ಹಣ ಪೀಕಿ ಸದ್ದಿಲ್ಲದೆ ಬೆಕ್ಕಿನಂತೆ ಹೊರನಡೆಯುವ ಪರಿಸ್ಥಿತಿ ಚಿಂತಾಜನಕ. ಕಾಂಡೋಮ್ ಖರೀದಿಯ ಸಮಯದ ಮಾನಸಿಕ ಸ್ಥಿತಿ ಹೇಗೆ ಎಂದರೆ ಅದನ್ನು ಉಪಯೋಗಿಸಿ ಒಂದಿಷ್ಟು ಸುಖ ಅನುಭವಿಸುವ ಚಪಲವೂ ಮಾಯವಾಗಿಬಿಡುತ್ತದೆ.  

 ಕೆಲವು ಜಾಣರು ಕಾಂಡೋಮ್ ಕೊಡಿ ಎಂದು ಕೇಳುವುದಿಲ್ಲ, ಬದಲಿಗೆ “ಸಿಗರೇಟ್” ಕೊಡಪ್ಪ ಎಂದು ಕಣ್ಣು ಹೊಡೆದು ಕೇಳುತ್ತಾರೆ. ರೈನ್ ಕೋಟ್ ಎಂದು ಕರೆಯುವವರೂ ಇದ್ದಾರೆ.  

 ಗುಡಿ ಕೈಗಾರಿಕೆ ಥರ ( ಮೇಣದ ಬತ್ತಿ ಅಥವಾ ಶಾವಿಗೆ ತಯಾರಿಸುವ ರೀತಿ ) ಮನೆಯಲ್ಲೇ ಯಾರೂ ಕಾಣದಂತೆ “ಕವಚ” ತಯಾರಿಸುವ ತಂತ್ರಜ್ಞಾನ ಯಾವಾಗ ಬರುತ್ತದೋ? ಆ ತಂತ್ರಜ್ಞಾನ ಬರುವವರೆಗೂ ಕಿರಾಣಿ ಅಂಗಡಿಯ ಶೆಟ್ಟಿ ಅಥವಾ ಮೆಡಿಕಲ್ ಸ್ಟೋರ್ ನ ಮಾರವಾಡಿಯ ಕೃಪಾಕಟಾಕ್ಷಕ್ಕೆ ನಾವು ಒಳಗಾಗಲೇಬೇಕು.

ನಿಮ್ಮ ಟಿಪ್ಪಣಿ ಬರೆಯಿರಿ